ವಿಶೇಷ ದಿನ

ಗುರು ಪೂರ್ಣಿಮಾ

Share Button

ಬರುವ ಗುರುವಾರ ಜುಲೈ 10ರಂದು ಗುರು ಪೂರ್ಣಿಮಾ. ಭಾರತೀಯ ಸಂಸ್ಕೃತಿಯಲ್ಲಿ ತಾಯಿ, ತಂದೆಯರೊಂದಿಗೆ ಆಚಾರ್ಯನನ್ನು ದೇವರೆಂದಿದ್ದಾರೆ. ಗುರು ಗೀತಾದಲ್ಲಿಯ ಶ್ಲೋಕದಂತೆ, ಧ್ಯಾನ ಮೂಲಂ ಗುರುರ್ ಮೂರ್ತಿಃ, ಪೂಜಾ ಮೂಲಂ ಗುರುರ್‌ಪಾದಂ, ಮಂತ್ರ ಮೂಲಂ ಗುರುರ್ ವಾಕ್ಯಂ, ಮೋಕ್ಷ ಮೂಲಂ ಗುರುರ್‌ಕೃಪ. ಸ್ವಾಮಿ ಶಿವಾನಂದ ಹೇಳುತ್ತಾರೆ. “ಮನುಷ್ಯನ ವಿಕಸನದಲ್ಲಿ ಗುರುವಿನ ಮಹತ್ವ ಬಲ್ಲಿರಾ? ವ್ಯಕ್ತಿಯನ್ನು ದುಃಖ ಹಾಗೂ ಸಾವುಗಳ ಬಂಧನದಿದ ಮೇಲೆತ್ತಲು, ಬೆಂಬಲ ಕೊಡುವವ, ಗುರು ಮಾತ್ರ”. ಯಜುರ್ವೇದದಲ್ಲಿಯ ಶ್ವೇತಾಶ್ವತಾರ ಉಪನಿಷತ್‌ನಲ್ಲಿ ಹೇಳಿರುವಂತೆ, ದೇವರು, ದೇವತೆಯ ಅರ್ಚನೆ ಮಾಡುವಂತೆಯೇ, ಗುರುವನ್ನು ಅರ್ಚಿಸಬೇಕು. ದೇವರ ಸಾಕ್ಷತ್ಕಾರದ ಮಾರ್ಗದಲ್ಲಿ, ಸಾಧನೆ ಮಾಡಲು, ಈ ದಿನದಿಂದ ಸಾಂಪ್ರದಾಯಿಕವಾಗಿ ಆಧ್ಯಾತ್ಮಿಕ ಅನ್ವೇಷಣೆಕಾರರು, ತಮ್ಮ ಆಧ್ಯಾತ್ಮ ಸಾಧನೆಯನ್ನು ತೀವ್ರಗೊಳಿಸುತ್ತಾರೆ. ಬಿಸಿ ಬೇಸಿಗೆಯಲ್ಲಿ, ಮೋಡಗಳ ಮಧ್ಯೆ ಸೆಳೆಯಲ್ಪಟ್ಟು, ಸಂಗ್ರಹಿಸಲ್ಪಟ್ಟ ನೀರು, ಈಗ ಸಮೃದ್ಧ ಮಳೆ ಹನಿಗಳಾಗಿ ಬಿದ್ದು, ಎಲ್ಲೆಡೆ ಹೊಸ ಜೀವಕಳೆ ತರುತ್ತದೆ. ಸೂರ್ಯನ ಬೆಳಕನ್ನು ಪ್ರತಿಫಲಿಸಿ ಚಂದ್ರ ಹೊಳೆಯುವಂತೆ, ಗುರುವಿನಿಂದ ಜ್ಞಾನ ಪಡೆದ ಶಿಷ್ಯರು ಹೊಳೆಯುತ್ತಾರೆ. ಗು ರು ಎಂಬ ಎರಡು ಅಕ್ಷರಗಳಿಂದ ಗುರುವಾಗಿದೆ. ಸಂಸ್ಕೃತದಲ್ಲಿ ‘ಗು’ ಎಂದರೆ ಕತ್ತಲು. ‘ರು’ ಅಂದರೆ ಆ ಕತ್ತಲನ್ನು ಓಡಿಸುವವ.

ಮಳೆಗಾಲದ ನಾಲ್ಕು ತಿಂಗಳಲ್ಲಿ ಚಾತುರ್ಮಾಸ ಆಚರಿಸುವ ಹಿಂದೂ ತಪಸ್ವಿಗಳು ಹಾಗೂ ಸಂಚಾರಿ ಸನ್ಯಾಸಿಗಳು, ಗುರುವಿಗೆ ಪೂಜೆ, ಸ್ಥಳೀಯರಿಗೆ ಪ್ರವಚನ ನೀಡುತ್ತಾರೆ. ಭಾರತೀಯ ಶಾಸ್ತ್ರೀಯ ಸಂಗೀತ ಹಾಗೂ ಶ ಸ್ತ್ರೀಯ  ನೃತ್ಯದ ವಿದ್ಯಾರ್ಥಿಗಳು, ಗುರುಶಿಷ್ಯ ಪರಂಪರೆ ಆಚರಿಸಿ ಪ್ರಪಂಚದಾದ್ಯಂತ ಈ ಉತ್ಸವ ಆಚರಿಸುತ್ತಾರೆ. ಸ್ವಾಮಿ ಶಿವಾನಂದ ಹೇಳುವಂತೆ ‘ಬ್ರಾಹ್ಮಿ ಮುಹೂರ್ತದಲ್ಲಿ ಧ್ಯಾನ ಮಾಡು. ಸ್ವ-ಅರಿವು ಪಡೆಯಲು ಮಾನಸಿಕವಾಗಿ ಪ್ರಾರ್ಥಿಸು. ಗುರುವಿನ ಬಗ್ಗೆ ಭಜನೆ ಮಾಡಿ’.

ಗುರು ಪೂರ್ಣಿಮೆಯ ಬಗೆಗಿನ ಕಥೆ:- ಬಹಳ ಹಿಂದೆ ನಾಲ್ಕು ಹಿರಿಯರು ತಮ್ಮಲ್ಲಿಯ ಪ್ರಶ್ನೆಗಳಿಗೆ ಉತ್ತರ ಬಯಸಿದ್ದರು. ಮೊದಲನೆಯವ ದುಃಖಿಯಾಗಿದ್ದು, ಅದರಿಂದ ಹೊರ ಬರುವುದು ಹೇಗೆ? ಎಂಬುದೇ ಆತನ ಪ್ರಶ್ನೆ. ಎರಡನೆಯವನು ಹೆಚ್ಚು ಪ್ರಗತಿ ಹಾಗೂ ಯಶಸ್ಸು ಹೊಂದುವುದರ ಬಗ್ಗೆ, ಮೂರನೆಯವನಿಗೆ ಜೀವನದ ಅರ್ಥದ ಬಗ್ಗೆ ಹಾಗೂ ನಾಲ್ಕನೆಯವನಿಗೆ ಎಲ್ಲ ಜ್ಞಾನವಿದ್ದರೂ, ಏನೇ ಕೊರತೆ ಇರುವ ಬಗ್ಗೆ, ಪ್ರಶ್ನೆ ಹೊಂದಿದ್ದರು. ಎಲ್ಲ ಹೊರಟು ಒಂದು ಆಲದ ಮರದ ಕೆಳಗೆ ಸೇರಿದರು. ಅಲ್ಲಿ ಒಬ್ಬ ಯುವಕ ಕುಳಿತಿದ್ದು, ಆತನ ಮುಖದಲ್ಲಿ ಮುಗುಳುನಗೆ ಇತ್ತು. ಎಲ್ಲರಿಗೂ ಆತ ಉತ್ತರಿಸದೆಯೇ ಅವರ ಪ್ರಶ್ನೆಗಳಿಗೆ ಉತ್ತರ ದೊರೆಯಿತು. ಅಲ್ಲಿಂದ ಗುರು ಪರಂಪರೆ ಆರಂಭವಾಯಿತು. ಕತ್ತಲೆ, ದುಃಖ, ಏಕಾಂಗಿತನ, ಕೊರತೆ ಎಲ್ಲ ದೂರ ಮಾಡುವ ಗುರು ಕೊರತೆ ನಿವಾರಿಸಿ ಸ್ವಾತಂತ್ರ್ಯ ತರಿಸುತ್ತಾನೆ.

ಅಜ್ಞಾನ ತಿಮಿರ ಅಂಧಸ್ಯ ಜ್ಞಾನಾಂಜನ ಶಾಲಾಕಾಯ |
ಚಕ್ಷರುನ್ಮಿಲಿತಂ ಯೇನ ತಸ್ಮೈ  ಶ್ರೀ ಗುರವೇ ನಮಃ |

ಭಾರತೀಯ ಸಂಸ್ಕೃತಿಯಲ್ಲಿ ಮಾನವ ಜನಾಂಗಕ್ಕೆ ಹೊಸ ಸಾಧ್ಯತೆಗಳು ತೆರೆದುಕೊಳ್ಳುವ ದಿನ ಗುರು ಪೂರ್ಣಿಮಾ. ಇದು ಗುರುವಿನ ದಿನವಾಗಿದ್ದರೂ, ನಿಜವಾದ ಅರ್ಥದಲ್ಲಿ ಭಕ್ತ ಅಥವಾ ಶಿಷ್ಯರ ದಿನ. ಆಧ್ಯಾತ್ಮಿಕ ಕ್ಷೇತ್ರದಲ್ಲಿ ಕಲಿಯುವವರು, ಕಳೆದ ವರ್ಷ ಕೈಗೊಂಡ ಜ್ಞಾನಯಾತ್ರೆಯನ್ನು ಸ್ಮರಿಸುತ್ತಾ, ಮತ್ತೊಂದು ಹೊಸ ವರ್ಷದ ದಿನ, ಜ್ಞಾನ ನೀಡಿದ ಗುರುವಿಗೆ ಕೃತಜ್ಞತೆ ಸಲ್ಲಿಸುವ ದಿನ. ನಮ್ಮ ಜೀವನ ಹಾಗೂ ನಮ್ಮೊಳಗಿನ ಪೂರ್ಣತೆಯನ್ನು ಆಚರಿಸುವ ದಿನ. ಜೀವನ ದ್ವಂದ್ವಗಳಿಂದ ವೈರುಧ್ಯಗಳಿಂದ ತುಂಬಿದೆ. ನಲಿವು-ನೋವು, ಸಂತಸ-ದುಃಖ, ಜಿಪುಣತನ-ಧಾರಾಳತನ, ಭಾವೋದ್ರೇಕ-ನಿರ್ಲಿಪ್ತತೆ, ಅವು ನಮ್ಮನ್ನು ವಿವಿಧ ದಿಕ್ಕುಗಳಿಗೆ ಎಳೆಯುತ್ತವೆ. ಆಗ ಬೇಕಾದ ಬೆಂಬಲ ನೀಡುವವರು ಗುರು ಮಾತ್ರ.

ಗುರು ಪೂರ್ಣಿಮಾದ ಪೌರಾಣಿಕ ಹಿನ್ನೆಲೆ:- ಬ್ರಹ್ಮ ನಿವೇದಿಸಿದ ನಾಲ್ಕು ವೇದಗಳನ್ನು ಬರೆದವರು ವೇದವ್ಯಾಸ, ಈ ದಿನವೇ ಹುಟ್ಟಿದ. ಕೃಷ್ಣ ದ್ವೈಪಾಯನ ವ್ಯಾಸ, ಪರಾಶರ ಋಷಿ ಹಾಗೂ ಮೀನುಗಾರನ ಮಗಳು ಸತ್ಯವತಿಯ ಮಗ. ತನ್ನ ಕಾಲದಲ್ಲಿದ್ದ ಎಲ್ಲ ವೇದಗಳ ಶ್ಲೋಕಗಳನ್ನು ಸಂಗ್ರಹಿಸಿ, ಅವುಗಳನ್ನು ನಾಲ್ಕು ಭಾಗಗಳಲ್ಲಿ ವಿಂಗಡಿಸಿದ. ಈ ನಾಲ್ಕು ವೇದಗಳು ಋಗ್ವೇದ, ಯಜುರ್ವೇದ, ಸಾಮವೇದ ಹಾಗೂ ಅಥರ್ವಣವೇದ. ವೇದಾಧ್ಯಯನ ಕ್ಷೇತ್ರಕ್ಕೆ ಈತನು ಅಮೂಲ್ಯ ಸೇವೆ ಮಾಡಿದ್ದಾನೆ. ತನ್ನ ನಾಲ್ಕು ಶಿಷ್ಯರಾದ ಪೈಲ, ವೈಶಂಪಾಯನ, ಜೈಮಿನಿ ಹಾಗೂ ಸುಮಂತು ಇವರುಗಳಿಗೆ ತನ್ನ ಜ್ಞಾನ ಹಾಗೂ ರಚನೆಗಳನ್ನು ಬೋಧಿಸಿದ. 48 ಪುರಾಣಗಳು ಹಾಗೂ ಇತಿಹಾಸಗಳಲ್ಲಿ ಸೇರಿ, ವಿಭಾಗಿಸಿ, ಸರಿಪಡಿಸುವ ಕೆಲಸ ಮಾಡಿದ ಆತನಿಗೆ ವ್ಯಾಸ ಎಂಬ ಗೌರವನಾಮ ಕೊಡಲಾಗಿದೆ. ಆಷಾಢ ಶುದ್ಧ ಪಾಡ್ಯಮಿಯೆಂದು ಬಹ್ಮ ಸೂತ್ರಗಳನ್ನು ಬರೆಯಲು ಆರಂಭಿಸಿ, ಆಷಾಢ ಮಾಸದ ಪೌರ್ಣಿಮೆಯಂದು ಇದನ್ನು ಮುಗಿಸಿದ. ಮಹಾಭಾರತ ರಚಿಸಿ ಗಣಪತಿಗೆ ನಿವೇದಿಸಿ, ಆತನಿಂದ ಬರೆಸಿದ, ಪ್ರಾಚೀನ ಹಿಂದೂ ಸಂಪ್ರದಾಯಗಳಲ್ಲಿ ಮಹಾನ್ ಗುರುವನ್ನಾಗಿ ಹಾಗೂ ಗುರು-ಶಿಷ್ಯ ಸಂಪ್ರದಾಯದ ಸಂಕೇತವಾಗಿ ವ್ಯಾಸನಿಗೆ ಗೌರವ ಸಲ್ಲಿಸುತ್ತಾರೆ. ವ್ಯಾಸ ಪೂರ್ಣಿಮೆಯೆಂದೂ ಕರೆಯುವ ಈ ದಿನ ಆತನ ರಚನೆಗಳನ್ನು ಪಠಿಸಿ ಆತನಿಗೆ ಗೌರವ ಸಲ್ಲಿಸುತ್ತಾರೆ. ಅವರ ಆಧ್ಯಾತ್ಮಿಕ ಸಾಧನಾ ಚಾತುರ್ಮಾಸ ಕಾಲದಲ್ಲಿ ಒಂದೆಡೆ ನಾಲ್ಕು ತಿಂಗಳು ನೆಲಸಿ, ವ್ಯಾಸರು ರಚಿಸಿದ ಬ್ರಹ್ಮ ಸೂತ್ರಗಳ ಅಧ್ಯಯನ ಮಾಡುತ್ತಾರೆ, ವೇದಾಂತದ ಬಗ್ಗೆ ಪರಸ್ಪರ ಚರ್ಚಿಸುತ್ತಾರೆ.

ಇತಿಹಾಸದ ಪುಟಗಳಲ್ಲಿ:-ಹಿಂದಿನ ಕಾಲದಲ್ಲಿ ರಾಜರು ಸಹ ಮಕ್ಕಳನ್ನು ಗುರುಕುಲಕ್ಕೆ ಕಳುಹಿಸುತ್ತಿದ್ದರು. ಅವರೆಲ್ಲಾ ಗುರುಗಳ ಆಶ್ರಮದಲ್ಲೇ ವಾಸಿಸುತ್ತ, ಕಲಿಕೆ ಮಾಡುತ್ತ, ಪರಿಶ್ರಮದಿಂದ ಗುರು ಸೇವೆ ಮಾಡುತ್ತ, ಸರಳ ಜೀವನ ನಡೆಸುತ್ತ, ಉಪವಾಸ, ವನವಾಸಗಳೊಂದಿಗೆ, ಗುರು ತೋರಿದ ದಾರಿಯಲ್ಲಿ, ತಮ್ಮ ಜೀವನ ರೂಪಿಸಿಕೊಳ್ಳುತ್ತಿದ್ದರು. ಸುಮಾರು 10 ರಿಂದ 15 ವರ್ಷ ಗುರುವಿಗೆ ತಮ್ಮ ಸೇವೆಯಿಂದ ತೃಪ್ತಿಪಡಿಸಿ, ನಂತರ ಮನೆಗೆ ವಾಪಸ್ಸಾಗಿ, ತಾವು ಕಲಿತದ್ದನ್ನು ದಿನ ನಿತ್ಯದ ಜೀವನಕ್ಕೆ ಅಳವಡಿಸುತ್ತಿದ್ದರು.

ಯೋಗ ಸಿದ್ಧಾಂತದಂತೆ ಗುರು ಪೂರ್ಣಿಮೆಯಂದು ಶಿವ ಆದಿಗುರು ಅಥವಾ ಮೊದಲ ಗುರುವಾದ ದಿನವಂತೆ. 15,000 ವರ್ಷಗಳ ಕೆಳಗೆ, ಹಿಮಾಲಯದ ಪ್ರದೇಶಗಳಲ್ಲಿ ಒಬ್ಬ ಯೋಗಿ ಪ್ರತ್ಯಕ್ಷನಾದ. ಅಪರೂಪಕ್ಕೆ ಆತನ ಮುಖದಿಂದ ಭಾವಪರವಶತೆಯ ಅಶ್ರುಗಳು ಉರುಳುತ್ತಿದ್ದವು. ಎಲ್ಲ ಜನ ದೂರ ಹೋದರೂ, ಏಳು ಜನ ಮಾತ್ರ ಅಲ್ಲೇ ಉಳಿದರಂತೆ. ಆತ ಕಣ್ಣು ತೆರೆದಾಗ, ಏನೂ ಹೇಳಲಿಲ್ಲ. ಇವರು ಅವನೊಂದಿಗೆ ವಾದಿಸಿ, ಬಲವಂತ ಮಾಡಿದಾಗ, ಒಂದು ಸರಳ ತಯಾರಿ ಹೆಜ್ಜೆ ಹೇಳಿ ಮತ್ತೆ ಕಣ್ಮುಚ್ಚಿಕೊಂಡ. 84 ವರ್ಷಗಳವರೆಗೆ ಏಳು ಜನರ ಸಾಧನೆ ಹೀಗೇ ಮುಂದುವರೆಯಿತು. ದಕ್ಷಿಣಾಯನ ಕಾಲದಲ್ಲಿ, ಯೋಗಿ ಶಿವ ಮತ್ತೆ ಕಣ್ತೆರೆದು, ಈ ಏಳು ಜನರಿಗೆ, ಗುರುವಾಗಿ ಕುಳಿತ. ಜೀವ, ಜೀವನದ ಬಗ್ಗೆ, ಆ ಸಪ್ತರ್ಷಿಗಳಿಗೆ ಅನೇಕ ವರ್ಷ ಬೋಧಿಸಿದ. ಆ ಸಪ್ತರ್ಷಿಗಳು ಮುಂದೆ ಈ ಜ್ಞಾನವನ್ನು ಪ್ರಪಂಚದಾದ್ಯಂತ ಒಯ್ದರು. ಯೋಗ ಸಂಪ್ರದಾಯದ ಪ್ರಕಾರ ಮಾನವರು ಪ್ರಜ್ಞಾಪೂರ್ವಕ ವಿಕಸನಗೊಳ್ಳಲು, ಈ ಆದಿಯೋಗಿ ಆರಂಭಿಸಿದ ಪವಿತ್ರ ಕಾರ್ಯಕ್ಕಾಗಿ, ಗುರು ಪೂರ್ಣಿಮಾ ಇವರಿಗೆ ಪವಿತ್ರ ದಿನ. ಯೋಗದ ಏಳು ಅಂಶಗಳ ಬಗ್ಗೆ ಸಾರಿದ ಈ ಸಪ್ತರ್ಷಿಗಳು ಯೋಗದ ಏಳು ಮೂಲ ರೂಪಗಳಿಗೆ ಆಧಾರವಾಗಿದ್ದಾರೆ.


ಭಾರತ ಹಾಗೂ ನೇಪಾಳಗಳಲ್ಲಿ ಸಾಂಪ್ರದಾಯಿಕವಾಗಿ ಹಿಂದೂಗಳು, ಜೈನರು ಹಾಗೂ ಬೌದ್ಧರು ಇದನ್ನು ಆಚರಿಸುತ್ತಾರೆ. ಭಾರತೀಯ ಗುರುಗಳು:- ಪೌರಾಣಿಕ ಕಾಲದಲ್ಲಿ ರಾಮ-ಕೃಷ್ಣರ ಗುರು:- ತ್ರೇತಾಯುಗದಲ್ಲಿ ಪುರುಷೋತ್ತಮ ರಾಮನಿಗೂ ಹಾಗೂ ದ್ವಾಪರ ಯುಗದಲ್ಲಿ ಶ್ರೀಕೃಷ್ಣನಿಗೂ ಮಾರ್ಗದರ್ಶನಕ್ಕೆ ಗುರುಗಳಿದ್ದರು. ಬ್ರಹ್ಮನ ಅವತಾರ ವಸಿಷ್ಠ ಋಷಿ ಶ್ರೀರಾಮನ ರಾಜಗುರುಗಳು. ರಾಮ-ಲಕ್ಷ್ಮಣರಿಗೆ ಶಸ್ತ್ರವಿದ್ಯೆ ಕಲಿಸಿದ ಗುರು ವಿಶ್ವಾಮಿತ್ರ. ಸಾಂದೀಪಿನಿ ಶ್ರೀಕೃಷ್ಣನ ಗುರು. ಏಕಲವ್ಯನ ಗುರು ದ್ರೋಣಾಚಾರ್ಯ, ಮಹಾಭಾರತದಲ್ಲಿ ಕ್ಷತ್ರಿಯ ರಾಜಕುಮಾರರಿಗೆ ಶಸ್ತಾಸ್ತ್ರ ವಿದ್ಯೆ ಕಲಿಸುತ್ತಿದ್ದ ದ್ರೋಣಾಚಾರ್ಯರು ಏಕಲವ್ಯನನ್ನು ಶಿಷ್ಯನನ್ನಾಗಿ ಸ್ವೀಕರಿಸಲಿಲ್ಲ. ಏಕಲವ್ಯ ಗುರುಭಕ್ತಿಯಿಂದ ಭಾವನಾತ್ಮಕವಾಗಿ ದ್ರೋಣರನ್ನೇ ಗುರುವೆಂದು ಒಪ್ಪಿ, ಆತನ ಮಣ್ಣಿನ ಮೂರ್ತಿ ಮಾಡಿ ಅದರಿಂದ ಸ್ಫೂರ್ತಿ ಪಡೆದು, ತನ್ನಷ್ಟಕ್ಕೆ ತಾನೇ ಬಿಲ್ಲು ವಿದ್ಯೆ ಅಭ್ಯಾಸ ಮಾಡಿ ಪಾರಂಗತನಾದ. ಮಹರ್ಷಿ ಪತಂಜಲಿ:- ಯೋಗದ ತಾಂತ್ರಿಕತೆಗಳ ಆಧಾರ ಯೋಗ ಸೂತ್ರಗಳು, 195 ಸೂತ್ರಗಳನ್ನು ಸಂಕಲಿಸಿದ ಯೋಗದ ತಂದೆ ಈತ. ದಿನನಿತ್ಯದ ಜೀವನದಲ್ಲಿ ಯೋಗವನ್ನು ಸೇರಿಸಿ, ನೈತಿಕ ಜೀವನ ನಡೆಸುವಲ್ಲಿ ಮಾರ್ಗದರ್ಶನ ನೀಡಿದ ಇವರು, ಕ್ರಿ.ಶ.ಪೂ. 200ರಲ್ಲಿ ಈ ಕಾರ್ಯ ಮಾಡಿದ್ದಾರೆ ಎಂದು ನಂಬಲಾಗಿದೆ. ವಿಷ್ಣು ಪವಡಿಸಿದ ಆದಿಶೇಷ, ಯೋಗಿ ಶಂಕರನ ನೃತ್ಯ ನೋಡಿ, ಕಂಪಿಸಿ, ಯೋಗದ ಮಹತ್ವ ತಿಳಿದು, ಭೂಮಿಗೆ ಪತಂಜಲಿ ಮಹರ್ಷಿಯಾಗಿ ಬಂದ ಎಂಬ ನಂಬಿಕೆಯೂ ಇದೆ.

ವಾಲ್ಮೀಕಿ ಕ್ರಿ.ಶ.ಪೂ.5 ರಿಂದ ಕ್ರಿ.ಶ.ಪೂ.1ನೇ ಶತಮಾನದಲ್ಲಿ, ರಾಮಾಯಣ ಮಹಾಕಾವ್ಯ ರಚಿಸಿದ ಆದಿಕವಿ. ರಾಮಾಯಣದಲ್ಲಿ 24000 ಶ್ಲೋಕಗಳಿವೆ. ಗಂಗಾ ನದಿಗೆ ಸ್ನಾನಕ್ಕೆ ಹೋಗುತ್ತಿದ್ದಾಗ ಕ್ರೌಂಚ ಪಕ್ಷಿಗಳ ಜೋಡಿಯನ್ನು ಈತ ಕಂಡ. ಆಗ ಬೇಟೆಗಾರನ ಬಾಣ, ಗಂಡು ಪಕ್ಷಿಯನ್ನು ಕೊಂದಿತು. ವಿರಹ, ದುಃಖ, ಸಂಕಟ ಹಾಗೂ ಅಘಾತದಿಂದ, ಜೊತೆಗಾತಿ ಹಕ್ಕಿ ಮರಣ ಹೊಂದಿತು. ಈ ದೃಶ್ಯ ಕಂಡು ವಾಲ್ಮೀಕಿಯ ಹೃದಯ ಮರುಗಿತು. ಮಾನಿಷಾದ ಪ್ರತಿಷ್ಠಾಂ ತ್ವಮಾಗಮ್ನಹಸ್ವತಿ ಯತ್ ಕ್ರೌಂಚ ಮಿಥುನಾದೇಕಂ ಅವಧಿ ಕಾಮಮೋಹಿತಂ” ಎಂಬ ಸಂಸ್ಕೃತ ಸಾಹಿತ್ಯದ ಮೊದಲ ಶ್ಲೋಕ ಈತನ ಬಾಯಿಯಿಂದ ಹೊರಟಿತು. ಮುಂದೆ ರಾಮಾಯಣ ಬರೆದ ವಾಲ್ಮೀಕಿ ರಾಮನ ಮಕ್ಕಳಾದ ಲವ-ಕುಶರಿಗೆ ಮೊದಲು ಇದನ್ನು ಕಲಿಸಿದ.

ಕ್ರಿ.ಶ.ಪೂ.563 ಅಥವಾ 480ರಲ್ಲಿ ಲುಂಬಿನಿಯಲ್ಲಿ ಹುಟ್ಟಿದ ಬುದ್ಧನಿಗೆ ಜ್ಞಾನೋದಯವಾದ ಐದು ವಾರಗಳ ನಂತರ, ಆತ ಬೋಧಗಯಾದಿಂದ ಸಾರನಾಥಕ್ಕೆ ಹೊರಟ. ಗೌತಮ ಜ್ಞಾನೋದಯಕ್ಕೆ ಮೊದಲು, ತನ್ನ ಕಠಿಣ ತಪಸ್ಸುಗಳನ್ನು, ತನ್ನ ಐದು ಮಿತ್ರರನ್ನು ಬಿಟ್ಟ. (ಪಾಲಿ ಬಾಷೆಯಲ್ಲಿ ಪಂಕವಗ್ಗೀಯ). ಇವರು ಅಣ್ಣ ಕೊಂಡಣ್ಣ, ಭದ್ದಿಯಾ, ವಪಪಿ, ಮಹಾನಾಯ, ಅಸ್ಸಾಜಿ. ಜ್ಞಾನೋದಯದ ನಂತರ ಬುದ್ಧ ಉರುವೇಲಾ ಬಿಟ್ಟು ವಾರಣಾಸಿಯ ಬಳಿಯ ಇಸಿಪಾಟನಾಗೆ (ಈಗಿನ ಸಾರನಾಥ) ಮಿತ್ರ ಶಿಷ್ಯರಿಗೆ ಬೋಧಿಸಲು ಹೊರಟ. ಈ ಐದು ತಪಸ್ವಿಗಳಿಗೆ ಬುದ್ಧ ಕೊಟ್ಟ ಮೊದಲ ಧರ್ಮೋಪದೇಶ ಧಮ್ಮಕ್ಕಪವಟ್ಟಣಸುತ್ತ. ಇದು ನಡೆದದ್ದು ಆಷಾಢ ಪೂರ್ಣಿಮೆಯಂದು. ಮುಂದೆ ಮೊದಲ ಮಳೆಗಾಲವನ್ನು ಸಾರನಾಥದ ಮುಳಗಂಧಕುಟಿಯಲ್ಲಿ ಕಳೆದ. ಸಂಘದ ಸದಸ್ಯರ ಸಂಖ್ಯೆ 60 ಆಯಿತು. ಎಲ್ಲ ದಿಕ್ಕುಗಳಿಗೂ ಹೋಗಿ ಧರ್ಮ ಬೋಧಿಸಲು ಈ 60 ಅರ್ಹಂತರನ್ನು ಕಳುಹಿಸಲಾಯಿತು. ಈ ದಿನ ಉಪೋಸಾಥಾ, ಅಂದರೆ 8 ಸೂತ್ರಗಳನ್ನು ಬೌದ್ಧರು ಪಾಲಿಸುತ್ತಾರೆ. ವಿಪಾಸನ ಧ್ಯಾನ ಮಾಡುವವರು ಈ ದಿನ ತಮ್ಮ ಗುರುಗಳ ಮಾರ್ಗದರ್ಶನದಲ್ಲಿ ಧ್ಯಾನ ಮಾಡುತ್ತಾರೆ. ಜುಲೈನಿಂದ ಅಕ್ಟೋಬರ್‌ವರೆಗೆ ಮಳೆಗಾಲದ ಮೂರು ಚಂದ್ರಮಾಸಗಳನ್ನು ತಮ್ಮ ದೇವಾಲಯಗಳಲ್ಲಿ ಆಯ್ದ, ಒಂದು ಸ್ಥಳದಲ್ಲಿ ವಾಸಿಸುತ್ತಾರೆ.

ಇತಿಹಾಸದಲ್ಲಿ, ಕ್ರಿ.ಶ.ಪೂ.371ರಲ್ಲಿ ಹುಟ್ಟಿದ ಚಾಣಕ್ಯ, ಕಾಲಿಗೆ ಚುಚ್ಚಿದ ಮುಳ್ಳನ್ನು ಕಿತ್ತು ಬಿಸಾಡಿದಂತೆ, ಪಾಟಲೀಪುತ್ರದ ನಂದರಾಜರನ್ನು ಅಮಾತ್ಯ ರಾಕ್ಷಸನನ್ನು, ಪರ್ವತರಾಜನನ್ನು ವ್ಯೂಹಗಳಿಂದ ಸೋಲಿಸಿ, ಶಿಷ್ಯ ಚಂದ್ರಗುಪ್ತನನ್ನು ಮೌರ್ಯ ವಂಶದ ಚಕ್ರವರ್ತಿ ಮಾಡಿದ. ಚಾಣಕ್ಯ ತಂತ್ರ ಎಂದೇ ಹೆಸರು ಮಾಡಿರುವ ಈ ಗುರು, ಕೌಟಿಲ್ಯನಾಗಿ ಅರ್ಥಶಾಸ್ತ್ರ ಬರೆದ.

ನಮ್ಮ ಭಾರತ ಆಧ್ಯಾತ್ಮಿಕ ಹಾಗೂ ಧಾರ್ಮಿಕ ಗುರುಗಳಿಂದ ತುಂಬಿದ ದೇಶ. ಇವರೆಲ್ಲ ಆಧ್ಯಾತ್ಮಿಕತೆ, ಧ್ಯಾನ, ಪ್ರೇಮ, ಶಾಂತಿ, ಸೋದರತ್ವ, ಸೇವೆ, ಮಾನವೀಯ ಮೌಲ್ಯಗಳನ್ನು ಇಡೀ ಜಗತ್ತಿಗೆ ಸಾರಿದವರು. ಆದಿ ಶಂಕರಾಚಾರ್ಯರು ಕ್ರಿ.ಶ.788ರಲ್ಲಿ ಕಾಲಡಿಯಲ್ಲಿ ಹುಟ್ಟಿ ಮೊದಲ ತತ್ವಜ್ಞಾನಿಯಾಗಿ ಅದ್ವೈತ ವೇದಾಂತವನ್ನು ಏಕೀಕರಿಸಿದರು. ನಾಲ್ಕು ವೇದಗಳ ಮಹಾನತೆಯಲ್ಲಿ ನಂಬಿಕೆಯಿಟ್ಟು ಅವುಗಳನ್ನು ಪ್ರತಿಪಾದಿಸಿದರು. ಹಿಂದುತ್ವದ ವಿಚಾರಗಳ ಮುಖ್ಯ ವಿದ್ಯುತ್ ಹರಿವುಗಳನ್ನು ಪ್ರತಿಷ್ಠಾಪಿಸಿದರು. ”ಅಹಂ ಬ್ರಹ್ಮಾಸ್ಮಿ, ನಾನೇ ಬ್ರಹ್ಮ”  ಎನ್ನುತ್ತ ಆತ್ಮ ಹಾಗೂ ನಿರ್ಗುಣ ಬ್ರಹ್ಮರ ಐಕ್ಯತೆ ಸಾರಿದರು. ಆತ್ಮ ಪರಮಾತ್ಮ ಒಂದೇ. ನನ್ನಲ್ಲೇ ಬಹ್ಮನಿದ್ದಾನೆ ಎಂದರು ಇವರು. ಇವರು ಬ್ರಹ್ಮ ಸೂತ್ರಗಳು, ಮುಖ್ಯ ಉಪನಿಷತ್‌ಗಳು ಹಾಗೂ ಭಗವದ್ಗೀತೆ ಬಗ್ಗೆ ಟೀಕೆಗಳನ್ನು ಬರೆದಿದ್ದಾರೆ. ಭಾರತದ ನಾಲ್ಕು ದಿಕ್ಕುಗಳಲ್ಲಿ, ಶೃಂಗೇರಿ, ಕಂಚಿ, ಬದರಿ ಹಾಗೂ ಪುರಿಗಳಲ್ಲಿ ನಾಲ್ಕು ಪೀಠಗಳನ್ನು ಸ್ಥಾಪಿಸಿದ್ದಾರೆ. ಸ್ಮಾರ್ಥ ಸಂಪ್ರದಾಯದ ಮಹಾನ್ ಶಿಕ್ಷಕರು ಹಾಗೂ ಸುಧಾರಕರು ಇವರು.

9ನೇ ಶತಮಾನದ ಕವಯತ್ರಿ ಅವ್ವೈಯ್ಯಾರ್  ತಮಿಳುನಾಡಿನಲ್ಲಿ ತನ್ನ ಭಕ್ತಿಗೀತೆಗಳಿಂದ ಷಣ್ಮುಖನ ಭಕ್ತಳಾಗಿ ದಂತ ಕಥೆಯಾಗಿದ್ದಾಳೆ. 10ನೇ ಶತಮಾನದ ತಮಿಳು ನಾಡಿನ ಕವಯತ್ರಿ ಆಂಡಾಳ್, ವೈಷ್ಣವ ಆರಾಧನೆಯ 12 ಆಳ್ವಾರ್ ಸಂತರಲ್ಲಿ ಏಕೈಕ ಮಹಿಳೆಯಾಗಿದ್ದಾಳೆ.

ರಾಮಾನುಜಾಚಾರ್ಯರು ಕ್ರಿ.ಶ.1017ರಲ್ಲಿ ತಮಿಳುನಾಡಿನ ಶ್ರೀ ಪೆರಂಬೂರಿನಲ್ಲಿ ಜನಿಸಿ, ಮುಂದೆ ದೇವತಾ ಶಾಸ್ತ್ರಜ್ಞರಾಗಿ, ಹಿಂದೂ ತತ್ವಶಾಸ್ತ್ರಜ್ಞರಾಗಿ, ಶ್ರೀವೈಷ್ಣವತೆ ಸಾರಿದರು. ಇವರು ವಿಶಿಷ್ಠಾದ್ವೈತ ಸಿದ್ಧಾಂತವನ್ನು, ಶ್ರೀಭಾಷ್ಯಂದಲ್ಲಿ ನಿರೂಪಿಸಿದ್ದಾರೆ. ವಿಷ್ಣು-ಲಕ್ಷ್ಮಿಯರ ಪೂಜೆಗಾಗಿ ದೇವಾಲಯಗಳ ಸಂಕೀರ್ಣ ಸ್ಥಾಪಿಸಿದರು. ಆಗಿನ ಕಾಲದಲ್ಲೇ ದಲಿತರಿಗೆ ದೇವಸ್ಥಾನ ಪ್ರವೇಶ ಕಲ್ಪಿಸಿದರು. ಭಕ್ತಿ ಆಂದೋಲನದಲ್ಲಿ ಭಾರತದಾದ್ಯಂತ ಸಂಚರಿಸಿ ಅನೇಕ ಕವಿಸಂತರ ಪರಂಪರೆಯ ಮೇಲೆ ಪ್ರಭಾವ ಬೀರಿದರು.

ಮಧ್ವಾಚಾರ್ಯರು ಕ್ರಿ.ಶ.1238ರಲ್ಲಿ ಉಡುಪಿ ಬಳಿ ಪಾಜಕದಲ್ಲಿ ಜನಿಸಿ, ದ್ವೈತ  ಸಿದ್ಧಾಂತದ ಪ್ರತಿಪಾದಕರಾಗಿ, ಆತ್ಮ-ಬ್ರಹ್ಮ (ಪರಮಾತ್ಮ) ಎರಡೂ ಬೇರೆ ಎಂದರು. ದೇವರ ಕರುಣೆಯಿಂದ ಮಾತ್ರ ಮುಕ್ತಿ ಎಂದರು ಇವರು. ಮಹಾರಾಷ್ಟ್ರದ  ಔರಂಗಬಾದ್‌ನ ಅಪೇಗಾಂವ್‌ದಲ್ಲಿ ಕ್ರಿ.ಶ.1275ರಲ್ಲಿ ಜನಿಸಿದ ಮರಾಠಿ ಸಂತಕವಿ, ತತ್ವಜ್ಞಾನಿ ಹಾಗೂ ಯೋಗಿ ಸಂತ ಜ್ಞಾನೇಶ್ವರ. ರಚಿಸಿದ. ಭಗವದ್ಗೀತೆಯ ಮೇಲಿನ ಟೀಕೆ, ಜ್ಞಾನೇಶ್ವರಿ ಹಾಗೂ ಅಮೃತಾನುಭವ ಮರಾಠಿ ಸಾಹಿತ್ಯದ ಮೈಲುಗಲ್ಲುಗಳಾಗಿವೆ. ವರಕರಿ ಆಂದೋಳನ ಸಂಸ್ಕೃತಿಯ ಆಧಾರ ಧ್ಯಾನೇಶ್ವರರ ಜೀವನ ಹಾಗೂ ರಚನೆಗಳು. ಟೀಕಾಚಾರ್ಯ ಎಂದು ಹೆಸರಾಗಿರುವ

ಮಳಖೇಡದ ಜಯತೀರ್ಥರು, ದ್ವೈತ  ತತ್ವಶಾಸ್ತ್ರ – ತತ್ವವಾದದ ಪ್ರಮುಖ ಪ್ರತಿಪಾದಕರು. ಕ್ರಿ.ಶ.1365ರಲ್ಲಿ ಜನಿಸಿದ ಇವರು ನ್ಯಾಯಸುಧಾ, ತತ್ಪ ಪ್ರಕಾಶಿಕ, ಪ್ರಮೇಯ ದೀಪಿಕ, ನ್ಯಾಯ ದೀಪಿಕಾ ಮುಂತಾದ ಕೃತಿಗಳನ್ನು ರಚಿಸಿದ್ದಾರೆ.

ಕಬೀರ್‌ದಾಸ ಕಾಶಿಯ ಬಳಿ ಸುಮಾರು ಕ್ರಿ.ಶ.1398 ಅಥವಾ 1440ರಲ್ಲಿ ಹುಟ್ಟಿದ. ಈ ಕವಿ ಹಾಗೂ ಸಂತನ ದೋಹಾಗಳು ಹಿಂದುತ್ವದ ಭಕ್ತಿಪಂತದ ಮೇಲೆ ಪ್ರಭಾವ ಬೀರಿದವು. ಯಾರು ಭೂಮಿಯ ಮೇಲಿನ ಎಲ್ಲ ಜೀವಿಗಳನ್ನೂ ತನ್ನವರೆಂದು ತಿಳಿದು, ಪ್ರಾಪಂಚಿಕ ವ್ಯವಹಾರಗಳಿಂದ ನಿಷ್ಕ್ರಿಯವಾಗಿರುತ್ತಾರೋ, ಸದಾಚಾರದ ಮಾರ್ಗದಲ್ಲಿ ನಡೆಯುವ ಮನುಷ್ಯನಲ್ಲೇ ಇದ್ದಾನೆ ನಿಜವಾದ ದೇವರು. ಭಕ್ತಿಪಂಥದ ಸಂತ ಸ್ವಾಮಿ ರಮಾನಾಥರ ಶಿಷ್ಯನಾಗಿ, ನಾಥ (ಶೈವಯೋಗಿ) ಪಂಥದ ಅನುಯಾಯಿಯಾಗಿದ್ದರು ಇವರು.

15-4-1469ರಲ್ಲಿ ಈಗಿನ ಪಾಕಿಸ್ತಾನದ ಪಂಜಾಬ್‌ನಲ್ಲಿ ಹುಟ್ಟಿದ ಗುರುನಾನಕರು, ಸಿಖ್ ಧರ್ಮದ ಸ್ಥಾಪಕರು ಹಾಗೂ ಹತ್ತು ಗುರುಗಳಲ್ಲಿ ಮೊದಲನೇಯವರು. ಸಮಾನತೆ, ಸೋದರ ಸಂಬಂಧಿ ಪ್ರೇಮ, ಒಳ್ಳೆಯತನ ಹಾಗೂ ಸದ್ಗುಣಗಳನ್ನು ಆಧರಿಸಿದ ವಿಶಿಷ್ಠ ಆಧ್ಯಾತ್ಮಿಕ, ಸಾಮಾಜಿಕ ಹಾಗೂ ರಾಜಕೀಯ ವೇದಿಕೆ ಸೃಷ್ಟಿಸಿದರು. ಗುರುಗ್ರಂಥ ಸಾಹೇಬ್‌ದಲ್ಲಿ ಇವರ ಬೋಧನೆಗಳು 974 ಶ್ಲೋಕಗಳಾಗಿ ದಾಖಲಾಗಿವೆ.

ಸಿಖ್ ಧರ್ಮದ ಸ್ಥಾಪಕರಾದ ಶ್ರೀ ಗುರುನಾನಕರು

ಸಂತ ತುಕಾರಾಂ ಕ್ರಿ.ಶ.1578 ಅಥವಾ 1608ರಲ್ಲಿ ಪುಣೆಯ ಬಳಿ ದೇಹು ಗ್ರಾಮದಲ್ಲಿ ಜನಿಸಿ, ವಿಠೋಬನ ಭಕ್ತನಾಗಿ, ಮರಾಠಿ ಸಾಹಿತ್ಯ ಸಂಸ್ಕೃತಿಯಲ್ಲಿ ಜನಪ್ರಿಯವಾಗಿರುವ ತಮ್ಮ ಅಭಂಗಗಳನ್ನು, ಸಮುದಾಯ ಕೀರ್ತನೆಗಳನ್ನು ರಚಿಸಿ, ಸಂತ ರಾಮದಾಸರನ್ನು ಶಿವಾಜಿಗೆ ಪರಿಚಯಿಸಿ, ಶಿವಾಜಿ ಹಿಂದೂ ಸಾಮ್ರಾಜ್ಯ ಕಟ್ಟಲು ಕಾರಣೀಭೂತರಾದರು. ಇವರ ಅಭಂಗ ಕವಿತೆಗಳು ಸರಳ, ನೇರ ಹಾಗೂ ಆಳವಾದ ಆಧ್ಯಾತ್ಮಿಕ ವಿಷಯಗಳನ್ನು ಹೊಂದಿದ, ಜಾನಪದ ಕಥೆಗಳನ್ನು ಬೆಸೆದಿವೆ. ಸತಾತನ ಲೋಕವನ್ನು ಆಧ್ಯಾತ್ಮಿಕತೆಯ ಸಾದೃಶ್ಯತೆಯಲ್ಲಿ ಪರಿವರ್ತಿಸಿ, ಇವರು ಶ್ರೀಸಾಮಾನ್ಯರಿಗೆ ಸಾರುವ ಭಕ್ತಿ ಸಂದೇಶ ಅಪೂರ್ವ.

ರಾಘವೇಂದ್ರ ಸ್ವಾಮಿಗಳು ಕ್ರಿ.ಶ.1595 ರಿಂದ ಕ್ರಿ.ಶ.1601ರೊಳಗೆ, ತಮಿಳು ನಾಡಿನ ಭುವನಗಿರಿಯಲ್ಲಿ ಜನಿಸಿ ದ್ವೈತ  ತತ್ವಶಾಸ್ತ್ರದ ಪ್ರತಿಪಾದಕರಾಗಿ, ಶ್ರೀಮನ್ ನ್ಯಾಯಸುಧಾಗೆ ಟೀಕೆಯಾಗಿ, ಸುಧಾ ಪರಿಮಳ ರಚಿಸಿದರು. ಮಧ್ವರ 10 ಪ್ರಕರಣ ಗ್ರಂಥಗಳಲ್ಲಿ ಆರಕ್ಕೆ ಸೂತ್ರ ಪ್ರಸ್ಥಾನ, ಬ್ರಹ್ಮಸೂತ್ರಗಳು, ರಿಗ್ ಹಾಗೂ ಉಪನಿಷದ್ ಪ್ರಸ್ಥಾನ, ಗೀತಾ ಪ್ರಸ್ಥಾನ, ಶ್ರೀ ರಾಮಚರಿತ ಮಂಜರಿ, ಶ್ರೀಕೃಷ್ಣಚರಿತ ಮಂಜರಿ, ಪ್ರತಾ ಸಂಕಲ್ಪಗದ್ಯ, ಸರ್ವಸಮರ್ಪಣ ಗದ್ಯ ಇವರ ಕೃತಿಗಳು ಮಂತ್ರಾಲಯದಲ್ಲಿ ನೆಲಸಿ, ಭಕ್ತಿಯಿಂದ ಬಂದ ಭಕ್ತರನ್ನು ಕಾಪಾಡುತ್ತಿದ್ದಾರೆ.

12-2-1824ರಂದು ಗುಜರಾಥ್‌ದ ತಂಕಾರಾದಲ್ಲಿ ಹುಟ್ಟಿದ, ಮಹರ್ಷಿ ದಯಾನಂದಸರಸ್ವತಿ ಅನ್ವೇಷಣಾ ಸನ್ಯಾಸಿಯಾಗಿ ವೇದಗಳಲ್ಲಿ ಸಾರಿರುವ ವಿಶ್ವ ಸೋದರತ್ವ ಪ್ರತಿಪಾದಿಸಿ, ಆರ್ಯ ಸಮಾಜ ಸ್ಥಾಪಿಸಿ, ಸಮಾಜ ಸುಧಾರಣೆಗೆ ಯತ್ನಿಸಿ, ಮೂರ್ತಿಪೂಜೆ, ಪ್ರಾಣಿ ಬಲಿ, ತೀರ್ಥಯಾತ್ರೆ, ಜಾತಿ, ಶಿಶುವಿವಾಹ, ಮಾಂಸಹಾರ ಸೇವನೆ, ಮಹಿಳಾ ಶೋಷಣೆಗಳ ವಿರುದ್ಧ ಜಾಗೃತಿ ಮೂಡಿಸಿದರು.

ರಾಮಕೃಷ್ಣ ಪರಮಹಂಸ:- 18-2-1836ರಲ್ಲಿ ಪಶ್ಚಿಮ ಬಂಗಾಳದ ಕಮಾರ್‌ಪುಕೂರ್‌ನಲ್ಲಿ ಹುಟ್ಟಿದ ಇವರು, ಅದ್ವೈತ  ವೇದಾಂತ, ಭಕ್ತಿ ಹಾಗೂ ತಂತ್ರಗಳ ತತ್ವಜ್ಞಾನಿ. ಕಾಳಿಯ ಬಗೆಗಿನ ದರ್ಶನ ಹಾಗೂ ಮದುವೆಯ ಮಧ್ಯೆ, ಹನುಮನಂತೆ ರಾಮನ ದಾಸ್ಯಭಾವ ಅನುಭವಿಸಿದರು. ತಮ್ಮ ಸಾಧನೆಯ ಕೊನೆಯಲ್ಲಿ ರಾಮನ ಪತ್ನಿ ಸೀತೆ ರಾಮನ ದೇಹದಲ್ಲಿ ಐಕ್ಯವಾಗುವ ರೀತಿ, ಸೀತೆಯ ದರ್ಶನ ಇವರಿಗೆ ಸಿಕ್ಕಿತು. ಪತ್ನಿ ಶಾರದಾದೇವಿಗೆ ಷೋಡಷಿ ಪೂಜೆ ಮಾಡಿ, ಆಕೆಯಲ್ಲೇ ಜಗನ್ಮಾತೆಯನ್ನು ಕಂಡರು. ಸ್ವಾಮಿ ವಿವೇಕಾನಂದರಿಗೆ ಆತ್ಮ ಸಾಕ್ಷಾತ್ಕಾರ, ದೇವಿಯ ದರ್ಶನ ಮಾಡಿಸಿದ ಗುರು ಇವರು.

ರಾಮಕೃಷ್ಣ ಪರಮಹಂಸರು ಮತ್ತು ಸ್ವಾಮಿ ವಿವೇಕಾನಂದರು

ಇವರ ಮುಖ್ಯ ಶಿಷ್ಯ ಸ್ವಾಮಿ ವಿವೇಕಾನಂದರು. ರಾಮಕೃಷ್ಣ ಮಿಷನ್ ಆರಂಭಿಸಿದರು. ಸ್ವಾಮಿ ವಿವೇಕಾನಂದ 12-1-1863ರಲ್ಲಿ ನರೇಂದ್ರನಾಥ ದತ್ತನಾಗಿ ಕಲ್ಕತ್ತಾದಲ್ಲಿ ಹುಟ್ಟಿ, ರಾಮಕೃಷ್ಣ ಪರಮಹಂಸರ ಪಟ್ಟಶಿಷ್ಯನಾಗಿ, ಚಿಕಾಗೋದ ವಿಶ್ವ ಧರ್ಮ ಸಮ್ಮೇಳನದಲ್ಲಿ, ಭಾರತೀಯ ಸಂಸ್ಕೃತಿಯ ಅಮೋಘ ಪರಿಚಯ ಮಾಡಿಕೊಟ್ಟರು. ಆ ದಿನ 11-9-1893. ಆರಂಭದಲ್ಲಿ ಕಂಪಿಸಿದರೂ, ಸರಸ್ವತಿ ದೇವಿಯನ್ನು ಸ್ಮರಿಸಿ, ಭಾರತ ಹಾಗೂ ಹಿಂದೂ ಧರ್ಮದ ಬಗ್ಗೆ ನ ಭೂತೋ ನ ಭವಿಷ್ಯತಿ ಭಾಷಣ ಮಾಡಿ, ಪಾಶ್ಚಿಮಾತ್ಯ ರಾಷ್ಟçಗಳ ಗಮನ ಸೆಳೆದರು. ಅಮೇರಿಕದ ಸೋದರ-ಸೋದರಿಯರೇ ಎಂಬ ಇವರ ಆರಂಭದ ವಾಕ್ಯ, ವಿಶ್ವ ಧರ್ಮಗಳ ಸಂಸತ್ತಿನಲ್ಲಿ ಭಾಗವಹಿಸಿದ ಏಳು ಸಾವಿರ ಜನರು ಎದ್ದು ನಿಂತು ಮೆಚ್ಚಿಗೆಯ ಕರತಾಡನ ಮಾಡುವಂತೆ ಪ್ರೇರಣೆ ನೀಡಿತು. ಶಿವ ಮಹಿಮಾ ಸ್ತೋತ್ರದ ಎರಡು ಸೋದಾಹರಣ ವಾಕ್ಯಗಳನ್ನು ಇವರು ನಿವೇದಿಸಿದರು. ‘ವಿವಿಧ ಸ್ಥಳಗಳಲ್ಲಿ ಮೂಲ ಹೊಂದಿದ, ವಿವಿಧ ತೊರೆಗಳು, ಸಮುದ್ರದ ನೀರಿನೊಂದಿಗೆ ಒಂದಾಗಿ ಸೇರುವಂತೆ, ಓ ದೇವನೇ, ಮಾನವರು ವಿವಿಧ ಮಾರ್ಗಗಳನ್ನು ತೆಗೆದುಕೊಂಡರೂ, ಬಾಗಿದ ಅಥವಾ ನೇರ ಎಂದೆನಿಸಿದರೂ, ವಿಭಿನ್ನ ಪ್ರವೃತ್ತಿ ಹೊಂದಿರುವ ಅವರು ಭಿನ್ನ ಎಂದೆನಿಸಿದರೂ, ಎಲ್ಲ ನಿನ್ನಡೆಗೇ ಕರೆದುಕೊಂಡು ಹೋಗುತ್ತವೆ’. ‘ನನ್ನಡೆಗೆ ಯಾರೇ ಬರಲಿ, ನಾನು ಅವನನ್ನು ತಲುಪುತ್ತೇನೆ. ವಿವಿಧ ಪಥಗಳ ಮೂಲಕ, ಹೋರಾಡುತ್ತ ಬರುವ ಎಲ್ಲ ಜನ, ಕೊನೆಯಲ್ಲಿ ನನ್ನಡೆಗೇ ಬರುತ್ತಾರೆ’. ಏಳು ಎದ್ದೇಳು ಗುರಿ ಮುಟ್ಟುವತನಕ ನಿಲ್ಲದಿರಿ, ಎಂದು ಯುವ ಜನರನ್ನು ಬಡಿದೆಬ್ಬಿಸುವ ಪ್ರೇರಕ ಮಂತ್ರ ನೀಡಿದ ವೀರ ಸನ್ಯಾಸಿ ಇವರು.

15-8-1872ರಂದು ಜನಿಸಿದ ಬಂಗಾಲದ ಯೋಗಿ, ರಾಷ್ಟ್ರೀಯವಾದಿ, ತತ್ವಜ್ಞಾನಿ ಹಾಗೂ ಕವಿ ಶ್ರೀ ಅರಬಿಂದೋ ಅವರು, ಸಮೃದ್ಧಿ ಆಧ್ಯಾತ್ಮ ನಾಯಕರು, ಸ್ವಾತಂತ್ರ್ಯ  ಸಂಗ್ರಾಮದಲ್ಲಿ ಪ್ರಭಾವಶಾಲಿ ನಾಯಕರಾಗಿದ್ದರು. ಇವರು ಅಭಿವೃದ್ಧಿಪಡಿಸಿದ ಆಧ್ಯಾತ್ಮಿಕ ಅಭ್ಯಾಸ ಪದ್ಧತಿ, ಅವಿಭಾಜ್ಯ ಯೋಗ.

ಅರುಣಾಚಲ ಸ್ವಾಮಿ ಹಾಗೂ ಭಗವಾನ್ ಎಂದು ಕರೆಸಿಕೊಂಡ ರಮಣ ಮಹರ್ಷಿಗಳು ಜ್ಞಾನ ಮಾರ್ಗ ಪ್ರವರ್ತಕರು. 30-12-1879ರಂದು ತಿರುಚಿಯಲ್ಲಿ ಜನಿಸಿ, 17ನೇ ವಯಸ್ಸಿನಲ್ಲಿ ವಿಚಿತ್ರ ಅನುಭವದಲ್ಲಿ ತನ್ನ ಹಾಗೂ ಮೃತ್ಯುವನ್ನು ಅರಿತು, ತಿರುವಣ್ಣಾಮಲೈಗೆ ಹೋಗಿ ಆಶ್ರಮ ಸ್ಥಾಪಿಸಿ, ಅನುಯಾಯಿಗಳಿಗೆ ಸ್ಫೂರ್ತಿ ಹಾಗೂ ಮಾರ್ಗದರ್ಶನ ನೀಡಿದರು. ತನ್ನನ್ನು ತಾನೇ ತಿಳಿಯಲು ನಿರಂತರ ಹಾಗೂ ತೀವ್ರ ಸ್ವ-ಅರಿವಿನ ಅನ್ವೇಷಣೆ ಮಾಡಲು ಇವರು ಸೂಚಿಸಿದರು.

8-5-1916ರಂದು ಜನಿಸಿದ ಸ್ವಾಮಿ ಚಿನ್ಮಯಾನಂದ, ಭಾರತೀಯ ಭಗವದ್ಗೀತೆ ಹಾಗೂ ಉಪನಿಷತ್ತುಗಳಂತಹ ಪುರಾತನ ಗ್ರಂಥಗಳ ಬಗ್ಗೆ ಅಧಿಕಾರಯುತ ವಾಣಿ ಹೊಂದಿದ್ದರು. 1953ರಲ್ಲಿ ಚಿನ್ಮಯಾ ಮಿಷನ್ ಸ್ಥಾಪಿಸಿ, ಅದರ ಮೂಲಕ ಪ್ರಪಂಚದಾದ್ಯಂತ ಅದ್ವೈತ  ವೇದಾಂತವನ್ನು ಪ್ರಚಾರ ಮಾಡಿದರು. ಹಿಂದೂ ಆಧ್ಯಾತ್ಮಿಕ ತ್ರಿಲೋಕ ಗುರುಗಳು ತಮ್ಮ ಜೀವನ ಹಾಗೂ ಕಲಿಕೆಗಳನ್ನು ಸ್ಮರಿಸುತ್ತಾರೆ. ಉತ್ಸವದ ನಂತರ ಶಿಷ್ಯರಿಗೆ ಭೋಜನ ನೀಡುತ್ತಾರೆ. ತ್ರಿಲೋಕ ಗುರುಗಳ ಮುಖಾಂತರ ದೇವರು ಜ್ಞಾನವನ್ನು ಶಿಷ್ಯರಿಗೆ ಹಂಚಿದ ದಿನ,

ನೇಪಾಳದಲ್ಲಿ ತ್ರಿಲೋಕ ಗುರು ಪೂರ್ಣಿಮಾ ಶಿಕ್ಷಕರ ದಿನವಾಗಿದೆ. ಶಿಷ್ಯರು ಗುರುಗಳಿಗೆ ಹೂಮಾಲೆ, ವಿಶೇಷ ಟೋಪಿ ನೀಡಿ ಗೌರವಿಸುತ್ತಾರೆ.

ಜೈನ ಸಂಪ್ರದಾಯದಂತೆ ಚಾತುರ್ಮಾಸದ ಆರಂಭದ ದಿನ. 24ನೇ ತೀರ್ಥಂಕರ ಮಹಾವೀರ ಕೈವಲ್ಯ ಪಡೆದ ನಂತರ, ಇಂದ್ರಭೂತ ಗೌತಮನನ್ನು (ಮುಂದೆ ಗೌತಮ ಸ್ವಾಮಿ) ತನ್ನ ಮೊದಲ ಶಿಷ್ಯ ಗಧಾದರವನ್ನಾಗಿ ಸ್ವೀಕರಿಸಿ, ತಾನೇ ತ್ರಿಲೋಕ ಗುರು ಆದ. ಆದ್ದರಿಂದ ಜೈನರು ತ್ರಿಲೋಕ ಗುರು ಪೂರ್ಣಿಮಾ ಆಚರಿಸುತ್ತಾರೆ.

-ಎನ್.ವ್ಹಿ ರಮೇಶ್ 

3 Comments on “ಗುರು ಪೂರ್ಣಿಮಾ

  1. ಪ್ರಸ್ತುತ ಬರೆಹ..ಅಗೆದಷ್ಟು ಅರ್ಥ ಮೊಗೆದಷ್ಟು ಜಲ ಎನ್ನುವಂತಹ ಲೇಖನದ ಅನಾವರಣ ಉತ್ತಮ ವಾಗಿದೆ..ಪೂರಕ ಚಿತ್ರ ಗಳು ಚೆನ್ನಾಗಿ ವೆ ಸಾರ್.

  2. ಗುರು ಪರಂಪರೆಯೊಂದಿಗೆ ಗುರು ಪೂರ್ಣಿಮೆಯ ಮಹತ್ವವನ್ನು ಸಾರುವ, ಮಾಹಿತಿಪೂರ್ಣ, ಚಿಂತನಯೋಗ್ಯ, ಸಾಂದರ್ಭಿಕ ಲೇಖನವು ಬಹಳ ಚೆನ್ನಾಗಿದೆ ಸರ್.

  3. ಗುರುಪೂರ್ಣಿಮೆಯಂತಹ ಮಹತ್ವದ ದಿನದ ಸಂದರ್ಭದಲ್ಲಿ ಗುರುಪರಂಪರೆಯ, ಗುರುವಿನ ಮಹತ್ವವನ್ನು ಪರಿಚಯಮಾಡಿಕೊಟ್ಟ ಚಂದದ ಬರಹ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *