
ನವಮಸ್ಕಂದ – ಅಧ್ಯಾಯ – 2
-: ಮನುವಂಶ ಚರಿತೆ – 2 :-
ಮನುಪುತ್ರ ಶರ್ಯಾತಿ ಗುಣಾಢ್ಯ
ಅವನ ಮಗಳು ಸುಕನ್ಯೆ
ವನವಿಹಾರದಲಿ
ಕಂಡ ದೊಡ್ಡ ಹುತ್ತದ ರಂಧ್ರದಿ
ಸೂರ್ಯ ಕಿರಣಗಳಂತಹ
ದಿವ್ಯಕಾಂತಿಗೆ ಮರುಳಾಗಿ
ವಿಧಿ ಪ್ರೇರಿತಳಾಗಿ
ಮುಳ್ಳಿಂದ ರಂಧ್ರಗಳ ಚುಚ್ಚಿದೊಡನೆ
ಕಾಂತಿಗಳು ನಶಿಸಿ, ರಂದ್ರದಿಂ ರಕ್ತ
ಜಿನುಗುವುದ ಕಂಡು ಬೆದರಿ
ಕಳವಳದಿ ಮರುಗುತಿರೆ
ಶರ್ಯಾತಿ ರಾಜಪರಿವಾರದವರೆಲ್ಲರ
ಮಲಮೂತ್ರ ಬಂಧಿತವಾಗಿ
ನರಳುತಿರೆ
ಸುಕನ್ಯೆ ಅಜ್ಞಾನವಶಳಾಗಿ
ಹುತ್ತದ ರಂಧ್ರವ ಮುಳ್ಳಿಂದ ಚುಚ್ಚಿದ
ಕ್ರಿಯೆಯ ಶರ್ಯಾತಿಗೆ ಅರುಹಲು
ಹುತ್ತದಲಿ ತಪೋನಿರತ
ಚ್ಯವನ ಮಹರ್ಷಿಯ ಕ್ಷಮೆಯಾಚಿಸಿ
ಪರಿಹಾರ ಕೇಳಲು
ವೃದ್ಧನೂ ತಪಸ್ವಿಯೂ ಏಕಾಂಗಿಯೂ
ಆದ ಮಹರ್ಷಿ ಸುಕನ್ಯೆಯ
ಪತ್ನಿಯಾಗಿ ಒಪ್ಪಿಸಲು ಬಯಸೆ
ವಿಧಿಯಿಲ್ಲದೆ ಸುಕನ್ಯೆ ವೃದ್ಧ ಮಹರ್ಷಿಯ
ಸತಿಯಾದಳು
ಗುಣಮಯಿ ಸುಕನ್ಯೆ ವೃದ್ಧ ಮುಂಗೋಪಿ ಮಹರ್ಷಿಯ
ಸೇವೆಯಲಿ ಯಾವಲೋಪವೂ ಬಾರದಂತೆ
ನಿರ್ವಹಿಸಿದ ಪರಿಯ ಕಂಡು
ಚ್ಯವನ ಮಹರ್ಷಿ ಪ್ರಸನ್ನನಾಗಿ
ಸಕನ್ಯೆಯ ಮನಸ್ಸಂತೋಷ
ಪಡಿಸಲು
ಆಶ್ರಮಕೆ ಆಗಮಿಸಿ ದಂಪತಿಗಳ ಆದರಾತಿಥ್ಯ ಸ್ವೀಕರಿಸಿ
ಸಂತೃಪ್ತಿ ಪಡೆದ ಅಶ್ವಿನೀ ದೇವತೆಗಳ
ವರಪ್ರಸಾದದಿಂ
ವನೌಷಧಿ ರಸಾದಿಗಳಿಂದ
ಸಿದ್ಧವಾದ ಮಡುವಿನಲಿ
ಮುಳುಗಿ ಯೌವನವ ಮರಳಿ
ಪಡೆದ ಚವನ ಮಹರ್ಷಿ
ತನಗೆ ತಾರುಣ್ಯವ ಕರುಣಿಸಿದ
ಅಶ್ವಿನೀ ದೇವತೆಗಳಿಗೆ
ಶರ್ಯಾತಿ ಮಹಾರಾಜನಿಂದ
ಅವನು ಮಾಡಿಸಿದ ಯಜ್ಞ ಭಾಗದ
ಸೋಮಪಾನವನರ್ಪಿಸಿ
ಧನ್ಯನಾದನು ಮಹರ್ಷಿ
ಕಾವ್ಯ ಭಾಗವತ ಸರಣಿಯ ಹಿಂದಿನ ಪುಟ ಇಲ್ಲಿದೆ : http://surahonne.com/?p=43015
(ಮುಂದುವರಿಯುವುದು)
-ಎಂ. ಆರ್. ಆನಂದ, ಮೈಸೂರು
ಎಂದಿನಂತೆ ಕಾವ್ಯಭಾಗವತ ಓದಿಸಿಕೊಂಡುಹೋಯಿತು.. ಸಾರ್
ಚ್ಯವನ ಮಹರ್ಷಿಯ ಕಥಾ ಕಾವ್ಯ ಭಾಗವು ಸರಳ, ಸುಂದರವಾಗಿ ಮೂಡಿಬಂದಿದೆ ಸರ್
ಚವನ ಮಹರ್ಷಿ ಮತ್ತು ಸುಕನ್ಯರ ಕಥೆ ಕುತೂಹಲಭರಿತವಾಗಿಯೂ ಸರಳವಾಗಿಯೂ ಮೂಡಿ ಬಂದಿದೆ.