ಲಹರಿ

ಮಾನವೀಯ ಸಂಬಂಧಗಳು ನಶಿಸುತ್ತಿವೆಯೆ?

Share Button

ಮಾನವೀಯ ಸಂಬಂಧಗಳು ವ್ಯಕ್ತಿಯ ಮಾನಸಿಕ ಆರೋಗ್ಯಕ್ಕೆ ಬಹಳ ಅಗತ್ಯ. ಆರೋಗ್ಯಕರ, ಅರ್ಥಪೂರ್ಣ ಹಾಗೂ ಸುಖೀ ಜೀವನ ನಡೆಸಲು ಮಾನವ ಸಂಬಂಧಗಳು ಅವಶ್ಯಕ. ಪ್ರತಿಯೊಬ್ಬನ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಸಂಬಂಧಗಳು ಪ್ರಮುಖ ಪಾತ್ರವನ್ನು ವಹಿಸುತ್ತವೆ. ಅವು ಮನುಷ್ಯನ ಬದುಕಿನ ಅವಿಭಾಜ್ಯ ಅಂಗವಾಗಿದೆ ಎಂದರೆ ತಪ್ಪಾಗಲಾರದು. ಸಂಬಂಧವೆನ್ನುವುದು ತಾಯಿ, ಅಣ್ಣ, ಅಕ್ಕ, ತಂಗಿ, ತಮ್ಮ ಅಲ್ಲದೆ ಕುಟುಂಬಿಕರು, ನೆರೆಹೂರೆಯವರು, ಸಹದ್ಯೋಗಿಗಳು ಹಾಗೂ ನಮ್ಮ ದೈನಂದಿನ ಜೀವನದಲ್ಲಿ ಭೇಟಿಯಾಗುವ ವ್ಯಕ್ತಿಗಳನ್ನು ಅವಲಂಬಿಸಿರುತ್ತದೆ. ಇಲ್ಲಿ ರಕ್ತ ಸಂಬಂಧಗಳನ್ನು ಹೊರತುಪಡಿಸಿ ಮಿಕ್ಕೆಲ್ಲಾ ಸಂಬಂಧಗಳು ನಮ್ಮ ಆಯ್ಕೆಯಾಗಿರುತ್ತದೆ. ಪರಸ್ಪರ ನಂಬಿಕೆ ಮತ್ತು ಗೌರವವನ್ನು ಬೆಳೆಸುವಲ್ಲಿ ವ್ಯಕ್ತಿಗತ ಸಂಬಂಧವು ಅತ್ಯಗತ್ಯ. ಈ ಸಂಬಂಧಗಳು ಭರವಸೆ ಹಾಗೂ ವಿಶ್ವಾಸ ಎಂಬ ಬುನಾದಿಯ ಮೇಲೆ ಬೇರೂರಿ ನಿಂತಿದೆ. ಅಲ್ಲದೆ ಕುಟುಂಬ ಸಂಬಂಧಗಳು, ಸ್ನೇಹ ಸಂಬಂಧಗಳು, ವೃತ್ತಿ ಸಂಬಂಧಗಳು ಮತ್ತು ಸಾಮಾಜಿಕ ಸಂಬಂಧಗಳು ವ್ಯಕ್ತಿಯ ಜೀವನವನ್ನು ಶ್ರೀಮಂತಗೊಳಿಸುತ್ತವೆ. ತಾನು ಭಾವನಾತ್ಮಕವಾಗಿ ಇನ್ನೊಬ್ಬರೊಡನೆ ಬೆರೆಯಲು, ಪರಸ್ಪರ ಪ್ರೀತಿಯನ್ನು ಹಂಚಲು ಸಾಮಾಜಿಕ ಸಂಬಂಧಗಳು ಅಗತ್ಯ. ಉತ್ತಮ ಸಂಬಂಧಗಳು ಜೀವನದಲ್ಲಿ ನೆಮ್ಮದಿಯನ್ನು ಮೂಡಿಸಿ ಮನುಷ್ಯನ ಉನ್ನತಿಗೆ ಕಾರಣವಾಗಬಹುದು.

ಹಿಂದಿನ ಕಾಲದಲ್ಲಿ ಕೂಡು ಕುಟುಂಬಗಳಿದ್ದಾಗ ಎಲ್ಲರಲ್ಲೂ ಅವಿನಾಭವ ಸಂಬಂಧವಿತ್ತು.  ಕೌಟುಂಬಿಕ ಸಂಬಂಧಗಳು ತೀವ್ರತರದ ಗಟ್ಟಿತನವನ್ನು ಹೊಂದಿದ್ದು, ಯಾವ ಸಂಧರ್ಭದಲ್ಲಿಯೂ ಬಿರುಕಾಗಲೀ ಅಥವ ಮುರಿಯುವ ಅವಕಾಶಗಳು ವಿರಳವಾಗಿತ್ತು. ಆದರೆ ಇಂದು ಮಾನವೀಯ ಸಂಬಂಧಗಳು ನಶಿಸುತ್ತಿವೆಯೆ ಎಂಬ ಸಂದೇಹ ಮೂಡಿದೆ. ಮನುಷ್ಯ, ಮನುಷ್ಯರ ನಡುವೆ ಪ್ರೀತಿ, ನಂಬಿಕೆ, ಅನುಕಂಪ, ವಿಶ್ವಾಸ ಮರೆಯಾಗುತ್ತಿದೆ. ಇಂದಿನ ಯಾಂತ್ರಿಕ ಬದುಕಿನಲ್ಲಿ ಸಂಬಂಧಗಳು ಎಂಬ ಪದ ತನ್ನ ಅಸ್ತಿತ್ವವನ್ನು ಕಳೆದುಕೊಂಡಿರುವುದನ್ನು ನಾವು ಕಾಣಬಹುದು. ನಂಬಿಕೆ, ಸಹಾನುಭೂತಿ, ಸಹನೆ ಮತ್ತು ಭಾವಾನಾತ್ಮಕವಾಗಿ ಸ್ಪಂದಿಸಿಸುವುದು ಮಾಯವಾಗಿ ಸಂಬಂಧವು ಹದಗೆಡುವುದು ಸರ್ವೇಸಾಮಾನ್ಯವಾಗಿದೆ.

ವಾಸ್ತವದಲ್ಲಿ ಈ ಸಂಬಂಧ ಎನ್ನುವ ಪದ ಬಹಳ ಸೂಕ್ಷ್ಮವಾದದ್ದು ಎಂದು ನನಗೆ ಅನಿಸುತ್ತಿದೆ. ಇತ್ತೀಚಿಗೆ, ನನ್ನೊಡನೆ ಹಲವಾರು ವರ್ಷಗಳಿಂದ ಉತ್ತಮ ಒಡನಾಟ ಹಾಗೂ ಗೆಳೆತನ ಹೊಂದಿದ್ದ ಸಂಬಂಧಿಕರೊಬ್ಬರು ತಪ್ಪು ಗ್ರಹಿಕೆಯಿಂದಾಗಿ ನನ್ನಲ್ಲಿ ಮಾತು ಬಿಟ್ಟಿದ್ದರು. ಅದೆಷ್ಟೂ ಬಾರಿ ಸಂವಹನದ ಮೂಲಕ ಬಗೆಹರಿಸಿಕೊಳ್ಳಲು ಪ್ರಯತ್ನಿಸಿದರೂ ಆ ವ್ಯಕ್ತಿಯ ಸ್ವಾಭಿಮಾನ ಮತ್ತು ಸಂಕುಚಿತ ಸ್ವಭಾವದ ಕಾರಣ ಸಂಬಂಧದಲ್ಲಿ ಬಿರುಕು ಮೂಡಿತ್ತು. ಪರಸ್ಪರರ ಅಭಿಪ್ರಾಯಗಳನ್ನು ಗೌರವಿಸಿ, ಮುಖ:ತ ಭೇಟಿಯಾಗಿ ಮಾತುಕತೆ ಮತ್ತು ತಿಳುವಳಿಕೆಯ ಮೂಲಕ ಉಂಟಾಗಿದ್ದ ತಪ್ಪು  ಗ್ರಹಿಕೆಯನ್ನು ನಿವಾರಿಸಲು ಅವಕಾಶವಿದ್ದರೂ ನನಗೆ ಈ ಬಾಂಧವ್ಯವನ್ನು ಉಳಿಸಿಕೊಳ್ಳಲಾಗಲಿಲ್ಲ. ಅನೇಕ ಬಾರಿ ಅವರನ್ನು ಸಂಪರ್ಕಿಸಲು ಮುಂದಾದಾಗ ಏನಾದರೂ ನೆಪವೊಡ್ಡಿ ನುಣುಚಿ ಕೊಳ್ಳುವುದು ನನಗೆ ಅರಿವಾಯಿತು. “ಬಿಟ್ಟು ಹೋದವರನ್ನು ಮರೆತು ಬಿಡಿ. ಆದರೆ ಅವರಿಂದ ಕಲಿತ ಪಾಠವ ಮರೆಯದಿರಿ” ಎಂಬ ನುಡಿಮುತ್ತಿನಂತೆ ಅಲ್ಲಿಗೆ ಆ ಅಧ್ಯಾಯ ಅಂತ್ಯವಾಯಿತು.

ಇನ್ನು ಸಂಬಂಧಗಳಲ್ಲೇ ಅತ್ಯಂತ ಬೆಲೆಬಾಳುವ ಬಾಂಧವ್ಯವೆಂದರೆ ಒಡಹುಟ್ಟಿದವರ ನಡುವಿನ ಸಂಬಂಧ. ಬೆಲೆ ಕಟ್ಟಲಾಗದ ಅಮೂಲ್ಯವಾದ ಈ ಸಂಬಂಧವು ನಾವು ಬೆಳೆದು ಪ್ರಭುದ್ದರಾಗುತ್ತಿದಂತೆ, ಮೊದಲಿದ್ದ ಪ್ರೀತಿ, ಸ್ನೇಹಗಳು ಮಾಯವಾಗಿ ಅಪರಿಚಿತರಂತೆ ವ್ಯವಹರಿಸುವುದನ್ನು ಕಾಣಬಹುದು. ಒಂದೇ ಜೀವದಂತಿರುವ ಸಹೋದರ, ಸಹೋದರಿಯರ ನಡುವಿನ ಬಾಂಧವ್ಯವು ಯಾವುದೋ ಕ್ಷುಲಕ ಕಾರಣದಿಂದ ದುರ್ಬಲಗೊಳ್ಳುವುದನ್ನು ಕಾಣುತ್ತೇವೆ. ಒಡಹುಟ್ಟಿದವರೊಡನೆ ಇರುವ ನಮ್ಮ ಸಂಬಂಧಗಳು ಎಷ್ಟೇ ಗಟ್ಟಿತನದಿಂದ ಕೂಡಿದ್ದರೂ ಹಲವಾರು ಸಂದರ್ಭಗಳಲ್ಲಿ ಶಿಥಿಲಗೊಳ್ಳುವ ಸಾಧ್ಯತೆ ಇರುತ್ತದೆ. ನಮ್ಮ ಒಳ್ಳೆತನವೇ ನಮ್ಮ ಪಾಲಿಗೆ ಮುಳುವಾಗುವ ಪರಿಸ್ಥಿತಿ ಹೆಚ್ಚಾಗಿ ಕಾಣಬರುವುದಲ್ಲದೇ, ಒಬ್ಬರ ಸಮಯ, ಪ್ರೀತಿ ಹಾಗೂ ಕಾಳಜಿಯನ್ನು ಲಘುವಾಗಿ ಪರಿಗಣಿಸುವ ಕುಟುಂಬಸ್ಥರಿಗೂ ಕಡಿಮೆಯಿಲ್ಲ. ಸಾಮಾನ್ಯವಾಗಿ ಸಂಬಂಧವು ಕ್ಷೀಣಿಸುವುದು ನೋವಿನ ಪ್ರಕ್ರಿಯೆಯಾಗಿದ್ದು ಇದು ಕುಟುಂಬ ಸದಸ್ಯರು, ಸ್ನೇಹಿತರು, ಪ್ರೇಮಿಗಳು ಅಥವಾ ಸಹದ್ಯೋಗಿಗಳ ನಡುವೆಯೂ ಸಂಭವಿಸಬಹುದು. ಇದರಿಂದಾಗಿ ಮನಸ್ಸಿಗೆ ತೀವ್ರ ಘಾಸಿಯಾಗುವುದಲ್ಲದೇ, ಖಿನ್ನತೆಯ ಸಮಸ್ಯೆಗಳನ್ನು ತಂದೊಡ್ಡಬಹುದು.

ವ್ಯಕ್ತಿಗತ ಸಂಬಂಧ ನಶಿಸಲು ಕಾರ್ಯನಿರತ ಬದುಕು, ಒತ್ತಡದ ಜೀವನ ಶೈಲಿ, ಇನ್ನೊಬ್ಬರ ಭಾವನೆಗಳಿಗೆ ಸ್ಪಂದಿಸುವ ಮನೋಭಾವನೆ ಇಲ್ಲದಾಗಿರುವುದು, ಸಹಾನುಭೂತಿಯ ಕೊರತೆ, ಸಾಮಾಜಿಕ ಮಾಧ್ಯಮಗಳ ಪ್ರಭಾವ, ಕುಟುಂಬ ನಿಷ್ಟೆ ಶೂನ್ಯವಾಗಿರುವುದು, ಐಶಾರಾಮಿ ಬದುಕು, ಆಧುನಿಕ ತಂತ್ರಜ್ಞಾನ, ಹಣ ಸಂಪಾದನೆಯೇ ಜೀವನದ ಗುರಿಯನ್ನಾಗಿರಿಸುವುದು, ಮಾನವರ ನಡುವೆ ಇರುವ ವಿಶ್ವಾಸ ಮಾಯವಾಗಿ, ಎಲ್ಲರನ್ನೂ ಸಂಶಯದ ದ್ರಷ್ಟಿಯಲ್ಲಿ ಕಾಣುವ ಪ್ರವ್ರತ್ತಿ, ಇತ್ಯಾದಿ ಕೆಲವೊಂದು ಕಾರಣಗಳೆಂದು ಪರಿಗಣಿಸಬಹುದು. ಇಂದಿನ ಬಹುತೇಕ ಯುವಜನತೆ ಲಂಗು, ಲಗಾಮು ಇಲ್ಲದ ಸ್ವಾರ್ಥ ಸರದಾರರಾಗಿರುವದನ್ನು ಕಾಣಬಹುದಾಗಿದೆ. ಮುಂದೊದು ದಿನ ಈ ಮನಸ್ಥಿತಿ ಪ್ರೀತಿ, ವಿಶ್ವಾಸಗಳಿಗೆ ಬೆಲೆ ನೀಡದೆ, ಹಣವೊಂದೇ ಎಲ್ಲಕ್ಕಿಂತಲೂ ಮಿಗಿಲು ಎನ್ನುವ ದಿನಗಳೂ ದೂರವಿಲ್ಲ. ಆದ್ದರಿಂದ ದುರ್ಬಲವಾಗುತ್ತಿರುವ ಈ ಮಾನವೀಯ ಸಂಬಂಧಗಳನ್ನು ಸಬಲಗೊಳಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಮಕ್ಕಳಿಗೆ ಎಳೆಯ ವಯಸ್ಸಿನಲ್ಲೇ ಶಿಕ್ಷಣದ ಜೊತೆಗೆ ಮಾನವೀಯ ಮೌಲ್ಯಗಳನ್ನು ತಿಳಿಸುವುದು ಅತೀ ಅಗತ್ಯವಾಗಿದೆ. ಆಧುನಿಕ ಜೀವನ ಶೈಲಿಯೊಂದಿಗೆ ಸ್ವಸ್ಥ ಸಮಾಜ ನಿರ್ಮಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಉತ್ತಮ ಸಂಬಂಧಗಳನ್ನು ಕಾಪಾಡುವಲ್ಲಿ ಶ್ರಮ, ತಾಳ್ಮೆ ಹಾಗೂ ಸಮಯ ಅತ್ಯಗತ್ಯ. ಎಲ್ಲರಲ್ಲೂಉತ್ತಮ ಬಾಂಧವ್ಯವಿರುವ ವ್ಯಕ್ತಿಯು ಸಮಾಜದಲ್ಲಿ ಯಶಸ್ವಿಯಾಗಿ ಬದುಕಿ ಉನ್ನತ ಸ್ಥಾನವನ್ನು ಗಳಿಸಲು ಶಕ್ತನಾಗುವನು. ಮಾನವೀಯ ಸಂಬಂಧಗಳು ಸಾಮಾಜಿಕ ಜೀವನದಲ್ಲಿ ಮಧುರ ಬಾಂಧವ್ಯಕ್ಕೆ ನಾಂದಿ ಎಂಬ ಅರಿವು ಎಲ್ಲರಲ್ಲೂ ಮೂಡಲಿ ಎಂಬುದೇ ನನ್ನ ಆಶಯ.

ಶೈಲಾರಾಣಿ. ಬಿ. ಮಂಗಳೂರು

11 Comments on “ಮಾನವೀಯ ಸಂಬಂಧಗಳು ನಶಿಸುತ್ತಿವೆಯೆ?

  1. This article is thoughtfully highlights the significance and complexities of human relationship. I appreciate the efforts of the writer for reminding us that every kind of relationship requires love, understanding and time. Thank you Dr Shyla Bolar for your reflections on this important topic that truly matters.

  2. I adore the writer of this article Dr Shylarani mainly because any of her writings reflect the realism and factualities as ever. The vital role of Human Relations in personal and professional life is written by her marvalessoly and every line speaks truth. For me it made lots of sense as I could relate her experience with few of mine. I congratulate Dr Shylarani for excellent writing and request her to come up with many more articles for readers.

  3. ಇಂದಿನ ತುರ್ತು ವಿಸ್ತಾರವಾಗಿ ಚರ್ಚಿತವಾಗಿದೆ. ಅಪೇಕ್ಷಣೀಯ

    ನಿಮ್ಮ ಆಶಯವನ್ನು ಸಾಹಿತ್ಯವೂ ಪ್ರತಿಪಾದಿಸುತ್ತಿದೆ. ಅಂದರೆ ಒಳ್ಳೆಯ ಸಾಹಿತ್ಯ !

    ಇದನ್ನು ನಾವೇ ಹುಡುಕಿಕೊಳ್ಳಬೇಕು; ಸಂಬಂಧಗಳನ್ನು ಗಳಿಸಿಕೊಳ್ಳುವಂತೆ ಮತ್ತು ಉಳಿಸಿಕೊಳ್ಳುವಂತೆ.

  4. ಸೊಗಸಾದ ವಾಸ್ತವವನ್ನು ಬಿಂಬಿಸುವ ಲೇಖನ. ಇವತ್ತು ಸಂಬಂಧಗಳು ಬಹಳ ನಾಜೂಕಾಗಿವೆ. ಹೇಗೆ ಮಾತನಾಡಿದರೂ ತಪ್ಪನ್ನೇ ಹುಡುಕುವ ಮನಸ್ಥಿತಿ ಪ್ರಬಲವಾಗಿದೆ. Nice one

  5. Heartiest congratulations Dr Shailarani on your fabulous article, I have read it thoroughly and I must say that it has been written with such passion and dedication that it’s truly inspiring to read through, you have a beautiful way with words and your writing reflects your personality!

  6. ಇಂದಿನ ಸಮಾಜವನ್ನು ಕರಾಳ ರೂಪದಲ್ಲಿ ಕಾಡುತ್ತಿರುವ ಈ ಸಮಸ್ಯೆಯ ಮೇಲೆ ವಿಶ್ಲೇಷಣಾತ್ಮಕವಾಗಿ ಬೆಳಕು ಚೆಲ್ಲಿದ ಲೇಖನ..

  7. ಸಂಬಂಧಗಳ ಮಹತ್ವದೊಂದಿಗೆ ಅದನ್ನು ನಿರ್ವಹಿಸುವ ಕುರಿತೂ ಮಾಹಿತಿಯನ್ನೊಳಗೊಂಡ ಚಂದದ ಲೇಖನ.

Leave a Reply to ನಯನ ಬಜಕೂಡ್ಲು Cancel reply

 Click this button or press Ctrl+G to toggle between Kannada and English

Your email address will not be published. Required fields are marked *