ಹಂಚಿಕೊಂಡ ಪುಸ್ತಕ

ಒಬ್ಬರು ಓದಿ ನೀಡಿದ ಪುಸ್ತಕ,
ದೇವಸ್ಥಾನದ ಪ್ರಸಾದವನ್ನು ಉಳಿಸಿ,
ಇಷ್ಟವಾದವರಿಗಾಗಿ ಮನೆಗೆ ತಂದಂತೆ.
ಬಾಲಚುಕ್ಕೆ ಉದುರಿ ಬೀಳುತ್ತಿದ್ದರೆ,
ಪಕ್ಕದಲ್ಲಿರುವವರನ್ನು ತಟ್ಟಿ ತೋರಿಸಿದಂತೆ.
ದೂರದ ಪ್ರೇಮಿಗಳು ಫೋನಿನಲ್ಲಿ,
ಚಂದಮಾಮನನ್ನು ಈಗಲೇ ನೋಡಲು ಗುಸುಗುಸಿದಂತೆ.
ಅವರು ಸೇರಿ ನೆನಪಿಸಿಕೊಳ್ಳಲು ಬಯಸುವ,
ಒಂದು ಸಿಹಿ ನೆನಪಿನಂತೆ.
ಓದಿ, ಗುರುತು ಹಾಕಿ ಕೊಟ್ಟ ಪುಸ್ತಕ,
ನಿನ್ನಂತಹ ಯಾರೋ ನನ್ನ ಕನಸಿಗೆ ಬಂದಂತೆ.
ಅನಿರೀಕ್ಷಿತವಾಗಿ ಯಾರೋ ನನ್ನ ಕೈಗಿಟ್ಟು
ಮುಚ್ಚಿದ ಪ್ರೇಮಪತ್ರದಂತೆ.
ಯೋಜಿಸದ ಪ್ರಯಾಣದಲ್ಲಿ ಸಿಕ್ಕ,
ಹೃದಯಕ್ಕೆ ಹತ್ತಿರವಾದ ಸ್ನೇಹದಂತೆ.
ಹಕ್ಕಿಮರಿಯ ಮೃದುತ್ವ ಅನುಭವಿಸಲು,
ಅದರ ಗರಿಯನ್ನು ಯಾರೋ ನನ್ನ ಕೆನ್ನೆಗೆ ನೇವರಿಸಿದಂತೆ.
ಒಬ್ಬರು ಓದಿ, ಓದಲು ಕೊಟ್ಟ ಪುಸ್ತಕ,
ಜಗವನ್ನೆಲ್ಲಾ ಸುತ್ತಿದರೂ ಕರಗದ,
ಚಂದ್ರನ ಬೆಳಕಿನ ಚೂರಿನಂತೆ.
ಆ ಅನುಭವ,
ಈ ಲೋಕದಲ್ಲಿ ಸೂರ್ಯೋದಯಗಳನ್ನು ನೋಡಲು,
ಆಪ್ತ ಗೆಳೆಯರು ಸೇರಿ ಸಮುದ್ರಗಳಿಗೆ ಹೋದಂತೆ.
ಉಕ್ಕಿ ಹರಿಯುವ ಸಂತೋಷದ ಅಲೆಗೆ ಎದುರಾಗಿ,
ಇಬ್ಬರು ಮನುಷ್ಯರು ಪೂರ್ತಿಯಾಗಿ ನೆನೆದು ಹೋದಂತೆ.
ತೆಲುಗು ಮೂಲ : ಮಾನಸ ಚಾಮರ್ತಿ
ಕನ್ನಡ ಅನುವಾದ : ಕೊಡೀಹಳ್ಳಿ ಮುರಳೀಮೋಹನ್
ಅನುವಾದ ಕವನ ಓ.ಕೆ.
ಧನ್ಯವಾದಗಳು
ಚೆನ್ನಾಗಿದೆ
ಧನ್ಯವಾದಗಳು
ಸೊಗಸಾದ ಭಾವಾನುವಾದ
ಧನ್ಯವಾದಗಳು
ತುಂಬ ಚೆನ್ನಾಗಿ ಭಾವನೆಗಳನ್ನು ವ್ಯಕ್ತ ಮಾಡಿದ್ದೀರಾ. ಒಂದು ಒಳ್ಳೆಯ ಪುಸ್ತಕ ಹೀಗೆ ಹಸ್ತಾಂತರ ಆಗ್ತಾ ಆಗ್ತಾ ಎಷ್ಟೋ ಜನರ ಮನಕ್ಕೆ ಮುದ ಕೊಡುತ್ತೆ, ಬದುಕು ಬದಲಾಯಿಸುತ್ತೆ ಕೆಲವೊಮ್ಮೆ. ದುಃಖ ದೂರ ಮಾಡುತ್ತೆ, ಹೊಸ ಹೆಜ್ಜೆಗೆ ಇಂಬು ಕೊಡುತ್ತೆ.
ಹಳೆ ಪುಸ್ತಕದ ಅಂಗಡಿಯಲ್ಲಿ, ಹಸ್ತಾಕ್ಷರ ಹಾಕಿರುವ, ಅಲ್ಲಲ್ಲಿ ಗೆರೆ ಹಾಕಿ ಇಷ್ಟದ ಸಾಲುಗಳ ಗುರುತು ನೋಡಿದಾಗ, ಆ ಪುಸ್ತಕದ ಬಿಸ್ಕಿಟ್ ವಾಸನೆ ಬಂದಾಗ ಇದನ್ನು ನಾನು ಕೊಳ್ಳಲೆ ಬೇಕು ಎನ್ನುವ ಹಂಬಲ ಹುಟ್ಟುತ್ತೆ, ಮತ್ತೆ ಯಾರಿಗಾದರು ನಂತರ ಕೊಡುವ ಯೋಚನೆ ಸಹ ಹುಟ್ಟುತ್ತೆ.
ಚಂದದ ಅನುವಾದಿತ ಅರ್ಥವತ್ತಾದ ಕವಿತೆ.