ಪುನರುತ್ಥಾನದ ಪಥದಲ್ಲಿ: ಹೆಜ್ಜೆ 29

Share Button

ವಿಯೆಟ್ನಾಂ, ಕಾಂಬೋಡಿಯ  ಪ್ರವಾಸಕಥನ..ದಿನ 10:
ಆಂಗ್ ಕೋರ್
 ವಾಟ್ …ಟಾ  ಪ್ರೋಮ್

ಆಂಗ್ ಕೋರ್ ವಾಟ್ ನ ಉದ್ದವಾದ ಹೊರಾಂಗಣದ ಗೋಡೆಯಲ್ಲಿ ರಾಮಾಯಣ , ಮಹಾಭಾರತದ ಕಥೆಗಳನ್ನು ಬಿಂಬಿಸುವ ಉಬ್ಬುಶಿಲ್ಪಗಳಿವೆ. ನಮ್ಮ ಮಾರ್ಗದರ್ಶಿ ಚನ್ಮನ್ ಗೋಡೆಯಲ್ಲಿದ್ದ ಕೆಲವು ಉಬ್ಬುಶಿಲ್ಪಗಳನ್ನು ತೋರಿಸುತ್ತಾ, ಇದು ಸಮುದ್ರ ಮಥನ, ಅದು ಕುರುಕ್ಷೇತ್ರ ಯುದ್ದ, ಇವನು ಭೀಮ, ಅವನು ಕರ್ಣ ಇತ್ಯಾದಿ ವಿವರಿಸುತ್ತಿದ್ದ. ಆತ ಬೌದ್ದಧರ್ಮೀಯನಾಗಿದ್ದರೂ ಬಹಳಷ್ಟು ಹಿಂದೂ ಪೌರಾಣಿಕ ಕತೆಗಳನ್ನು ತಿಳಿದಿದ್ದ. ‘ಐ ಲೈಕ್ ಹಿಂದೂ ಎಲಿಫೆಂಟ್ ಗಾಡ್ ಗಣೇಶ’ ಎಂದ.

ಚನ್ಮನ್ ಮೂವತ್ತೇಳು ವರ್ಷದ ಲವಲವಿಕೆಯ ತರುಣ. ವಿಯೆಟ್ನಾಂನಂತೆ ಇಲ್ಲಿಯೂ ಮದುವೆಯ ಸಂದರ್ಭದಲ್ಲಿ ವರನು ವಧುವಿನ ಪೋಷಕರಿಗೆ ‘ವಧುದಕ್ಷಿಣೆ’ ಕೊಡಬೇಕು ಹಾಗೂ ಮದುವೆಗೆ ಸಂಬಂಧಿಸಿದ ಖರ್ಚುಗಳನ್ನು ಭರಿಸಬೇಕು. ಸಾಂಪ್ರದಾಯಿಕತೆಯೊಂದಿಗೆ ಆಧುನಿಕತೆಯನ್ನು ರೂಢಿಸಿಕೊಂಡ ಈಗಿನ ನಗರವಾಸಿ ಯುವಕರು ಇವೆಲ್ಲಾ ಜಂಜಾಟ ಬೇಕಿಲ್ಲ ಎಂದು ಅವಿವಾಹಿತರಾಗಿ ಇದ್ದು ಪಾಶ್ಚಾತ್ಯ ಶೈಲಿಯ ಸಹಜೀವನ ಪದ್ಧತಿಯನ್ನು ಆಯ್ಕೆ ಮಾಡಿಕೊಳ್ಳುತ್ತಾರೆ ಎಂದ.

ಕೃಷಿ ಮತ್ತು ವ್ಯಾಪಾರ ಇಲ್ಲಿಯ ಜನರ ಮುಖ್ಯ ಆದಾಯದ ಮೂಲ. 1863 ರಿಂದ ಕಾಂಬೋಡಿಯಾವು ಫ್ರೆಂಚರ ವಸಾಹತು ಆಗಿತ್ತು. ಎರಡನೆಯ ವಿಶ್ವ ಮಹಾಯುದ್ಧದ ಸಮಯದಲ್ಲಿ ಕಾಂಬೋಡಿಯಾವು ಫ್ರೆಂಚ್-ಇಂಡೋಚೀನಾದ ಭಾಗವಾಗಿತ್ತು. ಒಟ್ಟು 90 ವರ್ಷ ಫ್ರೆಂಚರ ವಸಾಹತು ಆಗಿದ್ದ ಕಾಂಬೋಡಿಯಾವು 1953 ರಲ್ಲಿ ನಡೆದ ಒಪ್ಪಂದದ ಪ್ರಕಾರ ರಾಜ ನೋರ್ಡಮ್ ಸಿಹನೌಕ್ (Norodom Sihanouk) ನ ನೇತೃತ್ವದಲ್ಲಿ ಸ್ವತಂತ್ರ ದೇಶವಾಗಿ ಹೊಮ್ಮಿತು. ಅಂದಿನಿಂದಲೂ ಒಂದಿಲ್ಲೊಂದು ಆಂತರಿಕ ಕಲಹ ಹಾಗೂ ಪ್ರಭಾವಿ ಸೂಕ್ತ ನಾಯಕತ್ವದ ಕೊರತೆಯಿಂದ ಇಲ್ಲಿಯ ಆರ್ಥಿಕ ಸ್ಥಿತಿ ಇನ್ನೂ ಆರಂಭಿಕ ಹಂತದಲ್ಲಿದೆ. ಇಂಗ್ಲಿಷ್ ಮಾತನಾಡಬಲ್ಲ ಯುವಕರಿಗೆ ಪ್ರವಾಸಿಗಳು ಬಂದರೆ ತಾತ್ಕಾಲಿಕ ಉದ್ಯೋಗ ದೊರೆಯುತ್ತದೆ. ಚನ್ಮನ್ ಫ್ರೀ ಲಾನ್ಸರ್ ಗೈಡ್ ಆಗಿ ಕೆಲಸ ಮಾಡುತ್ತಾರೆ. ಪ್ರವಾಸಿಗರು ಇಲ್ಲದ ದಿನಗಳಲ್ಲಿ ಏನು ಮಾಡುತ್ತೀರಿ ಎಂದು ಕೇಳಿದಾಗ, ತನ್ನ ಮನೆಯ ಪಕ್ಕದ ಹೊಲ, ಕೆರೆಗಳಲ್ಲಿ ಮೀನು ಹಿಡಿಯುತ್ತೇನೆ ಅಥವಾ ತಂದೆಯೊಂದಿಗೆ ದೋಣಿ ನಡೆಸುತ್ತೇನೆ ಎಂದ. ಅದೂ ಇದೂ ಹರಟುತ್ತಾ, ನಡೆಯುತ್ತಾ ಆಂಗ್ ಕೋರ್ ವಾಟ್ ನ ಇನ್ನೊಂದು ಭಾಗಕ್ಕೆ ತಲಪಿದ್ದೆವು. ಅಲ್ಲಿ ಚನ್ಮನ್ ನಮ್ಮ ಫೊಟೊ ಕ್ಲಿಕ್ಕಿಸಿದ.

ಆಂಗ್ ಕೋರ್ ವಾಟ್ ದೇವಾಲಯ ಸಂಕೀರ್ಣದಿಂದ ಹೊರಬಂದ ಮೇಲೆ ನಮ್ಮ ಕಾರು ಅಲ್ಲಿಂದ 8 ಕಿಮೀ ದೂರದಲ್ಲಿರುವ ‘ಟಾ ಪ್ರೋಮ್ ‘ ನ ( Ta Prohm) ಕಡೆಗೆ ಸಾಗಿತು. ‘ಟಾ ಪ್ರೋಮ್’ ಎಂದರೆ ಪೂರ್ವಜ ಬ್ರಹ್ಮ ಎಂಬ ಅರ್ಥವಂತೆ. ಇದು ಕೂಡ 12 ನೆಯ ಶತಮಾನದಲ್ಲಿ ನಿರ್ಮಿಸಿಲಾದ ಬೃಹತ್ ರಾಜ ವಿಹಾರ ಮಂದಿರ. ಖ್ಮೇರ್ ರಾಜ ಜಯವರ್ಮನ್ 7 , ತನ್ನ ತಾಯಿಯ ಅನುಕೂಲಕ್ಕಾಗಿ ಹಾಗೂ ಬೌದ್ಧ ಧರ್ಮದ ಕಲಿಕಾ ಕೇಂದ್ರವಾಗಿ ಈ ವಿಹಾರವನ್ನು ನಿರ್ಮಿಸಿದನು. .

15 ನೇ ಶತಮಾನದಲ್ಲಿ ಖ್ಮೇರ್ ಸಾಮ್ರಾಜ್ಯ ಪತನವಾಗುವ ವರೆಗೆ ಇಲ್ಲಿ ನೂರಾರು ಬೌದ್ಧ ಧರ್ಮೀಯ ಅರ್ಚಕರು, ಆಸ್ಥಾನ ಕಲಾವಿದರು, ಹಾಗೂ ಇವರಲ್ಲರಿಗೆ ವಿವಿಧ ಸೇವೆ ಸಲ್ಲಿಸುವ ಸ್ಥಳೀಯರು ಸೇರಿ ಚಟುವಟಿಕೆಗಳ ತಾಣವಾಗಿತ್ತು. ಖ್ಮೇರ್ ಸಾಮ್ರಾಜ್ಯದ ಪತನದ ನಂತರ ನಿರ್ವಹಣೆ ಇಲ್ಲದ ಈ ಸ್ಥಳವು ಮರಗಿಡಗಳಿಂದ ಮುಚ್ಚಿ ಹೋಗಿತ್ತು. ಈಗ, ಮರವು ಆಲಯದೊಳಗೋ, ಆಲಯವು ಮರದೊಳಗೋ ಎಂದು ಗೊತ್ತಾಗದಂತೆ ಕಟ್ಟಡದ ಒಳಗೂ ಹೊರಗೂ ಚಾಚಿದ ಮಹಾವೃಕ್ಷಗಳ ಬೇರು, ಬಿಳಲುಗಳಿಂದ ಈ ಕಟ್ಟಡದ ಕಲ್ಲುಗಳು ಭದ್ರವಾಗಿ ಹಿಡಿದಿಟ್ಟಂತೆ ಕಾಣುತ್ತದೆ.

ಟಾ ಪ್ರೋಮ್ ರಾಜವಿಹಾರ

ಬಹುತೇಕ ಅಜ್ಞಾತವಾಗಿದ್ದ ‘ಟಾ ಪ್ರೋಮ್’ ಪ್ರದೇಶವು 2001ರಲ್ಲಿ ‘ಸೈನಮ್ ವೆಸ್ಟ್’ ಎಂಬವರು ನಿರ್ಮಿಸಿದ ‘ಟೋಂಬ್ ರೈಡರ್’ ( Tomb Raider) ಎಂಬ ಹೆಸರಿನ ಸಾಹಸ ವೀಡಿಯೋ ಗೇಮ್ ಸರಣಿ ಹಾಗೂ ಚಲನಚಿತ್ರದಿಂದಾಗಿ ಪ್ರಸಿದ್ಧಿ ಪಡೆಯಿತು. ಹಾಗಾಗಿ ಇದನ್ನು ‘ಟೋಂಬ್ ರೈಡರ್ ಟೆಂಪಲ್ ‘ ಎಂದೂ ಕರೆಯುತ್ತಾರೆ.

ಹೈಮವತಿ ಮತ್ತು ನಾನು ವಿಶಾಲವಾದ ಆವರಣದಲ್ಲಿ ಅಲ್ಲಲ್ಲಿ ಉರುಳಿ ಬಿದ್ದಿದ್ದ ದೇವಾಲಯದ ಅವಶೇಷಗಳ ನಡುವೆ ಚನ್ಮನ್ ನನ್ನು ಹಿಂಬಾಲಿಸಿ ನಿಧಾನವಾಗಿ ನಡೆದೆವು. ಕಟ್ಟಡದ ಅಲ್ಲಲ್ಲಿ ಹುಟ್ಟಿ ಬೆಳೆದಿದ್ದ ಮರಗಳು, ಅಲ್ಲಲ್ಲಿ ಮುಚ್ಚಿದ್ದ ಕಾಲುದಾರಿಗಳು, ಉರುಳಿ ಬಿದ್ದಿದ್ದ ಕಲ್ಲಿನ ಕಂಬಗಳು ಇವುಗಳ ಮಧ್ಯೆ ದಾರಿ ತಪ್ಪುವಂತಹ ಪರಿಸ್ಥಿತಿ ಇತ್ತು. ಅಲ್ಲಲ್ಲಿ ಬೆರಳೆಣಿಕೆಯ ಪ್ರವಾಸಿಗರಿದ್ದರು. ಅಷ್ಟರಲ್ಲಿ ಮಧ್ಯಾಹ್ನವಾಗಿತ್ತು. ಟಾ ಪ್ರೋಮ್ ನಿಂದ ಹೊರಟೆವು. ದಾರಿಯಲ್ಲಿ ಒಂದು ಆಧುನಿಕ ರೆಸ್ಟಾರೆಂಟ್ ಬಳಿ ಕಾರು ನಿಂತಿತು. ಮಾರ್ಗದರ್ಶಿ ಚನ್ಮನ್ ರೆಸ್ಟಾರೆಂಟ್ ಒಳಗೆ ಹೋಗಿ ಸ್ಥಳೀಯ ಭಾಷೆಯಲ್ಲಿ ನಮಗೆ ಬೇಕಾಗುವ ಅಪ್ಪಟ ಸಸ್ಯಾಹಾರದ ಬಗ್ಗೆ ತಿಳಿಸಿದ. ನಮ್ಮನ್ನು ಸ್ವಾಗತಿಸಿದ ಚೆಂದದ ತರುಣಿಯರು ನಮಗೆ ಆಸನ ತೋರಿಸಿದರು.

ವೆಜ್ ಸ್ಪ್ರಿಂಗ್ ರೋಲ್, ನೂಡಲ್ಸ್, ಅಮೋಕ್, ವೆಜ್ ಫ಼್ರೈ

ಸ್ವಲ್ಪ ಸಮಯದಲ್ಲಿ ವೆಜ್ ಸ್ಪ್ರಿಂಗ್ ರೋಲ್, ಅನ್ನ, ಮಿಶ್ರ ತರಕಾರಿಗಳು ಮತ್ತು ಗೋಡಂಬಿ ಸೇರಿಸಿದ ಪಲ್ಯ, ನೂಡಲ್ಸ್, ವಿವಿಧ ತರಕಾರಿಗಳು ಮತ್ತು ತೆಂಗಿನ ಕಾಯಿಯ ಹಾಲನ್ನು ಸೇರಿಸಿ ತಯಾರಿಸಿದ್ದ ‘ಅಮೋಕ್ ‘ ಎಂಬ ಕಾಂಬೋಡಿಯಾದ ಸಿಗ್ನೇಚರ್ ಡಿಶ್ ಹಾಗೂ ಸೊಗಸಾಗಿ ಕತ್ತರಿಸಿದ ಹಣ್ಣುಗಳನ್ನು ತಂದಿರಿಸಿದರು. ಈ ‘ಅಮೋಕ್’ ಎಂಬ ಆಹಾರ ಸುಮಾರಾಗಿ ಕೇರಳದ ‘ಓಲನ್’ ಎಂಬ ಅಡುಗೆಯಂತೆ ಇತ್ತು. ನಕ್ಷತ್ರಾಕಾರವಾಗಿ ಸೊಗಸಾಗಿ ಕತ್ತರಿಸಿದ ಬಾಳೆಲೆಯ ಮೇಲೆ ಬಡಿಸಿದ ಖಾದ್ಯಗಳು ನೋಡಲು ಸೊಗಸಾಗಿದ್ದುವು. ರುಚಿಯೂ ಚೆನ್ನಾಗಿತ್ತು. ಇವುಗಳ ಜೊತೆಗೆ ನಾವು ಒಯ್ದಿದ್ದ ಉಪ್ಪಿನಕಾಯಿಯೂ ಇದ್ದ ಕಾರಣ ಚೆನ್ನಾಗಿ ಊಟ ಮಾಡಿದೆವು.

ಈ ಪ್ರವಾಸ ಕಥನದ ಹಿಂದಿನ ಕಂತು ಇಲ್ಲಿದೆ : https://www.surahonne.com/?p=42676

(ಮುಂದುವರಿಯುವುದು)
ಹೇಮಮಾಲಾ.ಬಿ, ಮೈಸೂರು

10 Responses

  1. ಎಂದಿನಂತೆ ಚಂದದ ಪ್ರವಾಸಿ ಕಥನ ಮನಕ್ಕೆ ಮುದ ನೀಡಿತು ಚಿತ್ರ ಗಳು ಪೂರಕ ವಾಗಿದ್ದ ವು ..ಸೊಗಸಾದ ನಿರೂಪಣೆ ಗೆಳತಿ

  2. ಪದ್ಮಾ ಆನಂದ್ says:

    ಭೇಟಿ ನೀಡಿದ ಪ್ರತಿ ಸ್ಥಳವನ್ನೂ ಸೂಕ್ಷ್ಮವಾಗಿ ಅವಲೋಕಿಸಿ ನಿರೂಪಿಸುವ ನಿಮ್ಮ ಚಾತುರ್ಯ ಈ ಕಂತಿನಲ್ಲೂ ಪ್ರತಿಬಿಂಬಿಸಿದೆ.

  3. ನಯನ ಬಜಕೂಡ್ಲು says:

    Beautiful. ತುಂಬಾ ಇಷ್ಟವಾಗುವ ಪ್ರವಾಸ ಕಥನ

  4. S.sudha says:

    ಇನ್ನೊಮ್ಮೆ ತಾಹ್ ಪ್ರೋ ಮ್ ನೋಡಿದ ಹಾಗಾಯ್ತು. ಅಲ್ಲಿದ್ದ ಬಹುದೊಡ್ಡ ಮರ ಈಗಿಲ್ಲ. ಕ್ಯಾಂಬೊಡಿಯಾ ದಲ್ಲಿ ದಾರಿಯಿಂದ ದೂರಸರಿದು ನಡೆಯುವ ಹಾಗೂ ಇಲ್ಲ. ಇನ್ನೂ dynamite ಗಳಿವೆ.

    • Hema Mala says:

      ಹೌದಾ, ಡೈನಮೈಟ್ ವಿಚಾರ ಗೊತ್ತಿರಲಿಲ್ಲ. ಪ್ರತಿಕ್ರಿಯೆಗೆ ಧನ್ಯವಾದಗಳು ಮೇಡಂ.

  5. ಶಂಕರಿ ಶರ್ಮ says:

    ಕಾಂಬೋಡಿಯಾದ ಆಂಗ್ ಕೋರ್ ವಾಟ್ ನ
    ಹೊರಾಂಗಣದ ಗೋಡೆಯಲ್ಲಿ ರಾಮಾಯಣ, ಮಹಾಭಾರತದ ಕಥೆಯನ್ನು ಬಿಂಬಿಸಿರುವುದು, ಅದು ಹಿಂದೂ ಧರ್ಮೀಯರ ಇರುವಿಕೆಗೆ ಸಾಕ್ಷಿಯಾಗಿ ನಿಂತಿರುವುದು, ಟಾ ಪ್ರೋಮ್ ನ ಬೇರು, ಬೀಳಲು ತುಂಬಿದ ವಿಚಿತ್ರ ಕಟ್ಟಡಗಳು, ನಕ್ಷತ್ರಾಕಾರದ ಬಾಳೆಲೆ ಊಟ, ಅಲ್ಲಿಯ ಐತಿಹಾಸಿಕ ಹಿನ್ನೆಲೆ ಎಲ್ಲವನ್ನೂ ತಿಳಿದು
    ಖುಷಿಯಾಯಿತು…. ಅಂಡಮಾನ್ ಪ್ರವಾಸವನ್ನು ನೆನಪಿಸಿತು. ಎಂದಿನಂತೆ ಚಂದದ ನಿರೂಪಣೆ.

  6. MANJURAJ H N says:

    ಚೆಂದವಾಗಿದೆ ಮೇಡಂ. ನೀವು ನಮ್ಮನ್ನೂ ಜೊತೆಗೇ ಕರೆದುಕೊಂಡು ಹೋಗುತ್ತೀರಿ
    ಇದೇ ನಿಮ್ಮ ಪ್ರವಾಸ ಬರೆಹದ ವೈಶಿಷ್ಟ್ಯ. ಮುಂದುವರೆಯಲಿ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: