ವಾಟ್ಸಾಪ್ ಕಥೆ 61: ಪರಿಹಾರ.
ಒಂದೂರಿನಲ್ಲಿ ಒಂದು ಸಿಹಿನೀರಿನ ಬಾವಿಯಿತ್ತು. ಊರಿನ ಜನರೆಲ್ಲ ಅದೇ ಬಾವಿಯ ನೀರನ್ನೇ ಕೊಂಡೊಯ್ದು ಬಳಸುತ್ತಿದ್ದರು. ಒಂದುದಿನ ಒಬ್ಬ ಬೆಳಗ್ಗೆ ನಸುಕಿನಲ್ಲಿ ನೀರು ಸೇದಲು ಬಾವಿಯ ಹತ್ತಿರ ಬಂದನು. ಗಾಲಿಯ ಮೇಲಿಂದ ಹಗ್ಗವನ್ನು ಹಾಕಿ ಬಿಂದಿಗೆಗೆ ಕುಣಿಕೆ ಬಿಗಿದು ಬಾವಿಯೊಳಕ್ಕೆ ಬಿಡಲು ಬಗ್ಗಿದನು. ಅವನಿಗೆ ಬಾವಿಯ ನೀರಿನಲ್ಲಿ ಏನೋ ಬಿದ್ದಿರುವುದು ಕಾಣಿಸಿತು. ಅಲ್ಲದೆ ಅದರಿಂದಾಗಿ ಕೆಟ್ಟ ವಾಸನೆ ಅವನ ಮೂಗಿಗೆ ಅಡರಿತು. ಆತ ಗಾಭರಿಯಾಗಿ ಹಗ್ಗ ಮತ್ತು ಬಿಂದಿಗೆಯನ್ನು ಅಲ್ಲಿಯೇ ಬಿಟ್ಟು ಊರಿನೊಳಕ್ಕೆ ಹೋಗಿ ಎಲ್ಲರಿಗೂ ಈ ವಿಷಯವನ್ನು ತಿಳಿಸಿದ. ಹತ್ತಾರು ಜನರ ಗುಂಪೇ ಬಾವಿಯ ಬಳಿಗೆ ಬಂದರು. ಅವರೆಲ್ಲ ಒಳಕ್ಕೆ ಬಗ್ಗಿ ನೋಡಿದರು. ಒಂದು ನಾಯಿಯು ಹೇಗೋ ಬಾವಿಯೊಳಕ್ಕೆ ಬಿದ್ದು ಅಲ್ಲಿಯೇ ಸತ್ತುಹೋಗಿದೆಯೆಂಬುದು ತಿಳಿಯಿತು. ತಲೆಗೊಂದು ಮಾತನಾಡಿಕೊಂಡರು. ಕೊನೆಗೆ ಬಾವಿಯ ನೀರನ್ನು ಪೂರ್ತಿಯಾಗಿ ಖಾಲಿಮಾಡಬೇಕೆಂದು ತೀರ್ಮಾನಿಸಿದರು.
ಎಲ್ಲರೂ ಸೇರಿ ಸಂಜೆಯವರೆಗೆ ನೀರನ್ನು ಸೇದಿಸೇದಿ ಹೊರಕ್ಕೆ ಸುರಿದು ಖಾಲಿಮಾಡಿದರು. ಮಾರನೆಯ ದಿನದ ಹೊತ್ತಿಗೆ ಮತ್ತೆ ಜಲ ಜಿನುಗಿ ಬಾವಿ ನೀರಿನಿಂದ ತುಂಬಿತು. ಆಗ ನೀರನ್ನು ಸೇದಿ ನೋಡಿದರೆ ಅದರಲ್ಲಿಯೂ ಕೆಟ್ಟ ವಾಸನೆ ಬರುತ್ತಿತ್ತು. ಮತ್ತೆ ಹಿಂದಿನ ದಿನದಂತೆ ಕಾರ್ಯಾಚರಣೆ ಮಾಡಿದರು. ನೀರು ಖಾಲಿಯಾಯಿತು. ಮತ್ತೆ ನೀರು ತುಂಬಿದಾಗಲೂ ವಾಸನೆ ಹೋಗಲಿಲ್ಲ. ಬದಲಾಗಿ ಹೆಚ್ಚಾಯಿತು. ಎಲ್ಲರೂ ಏನು ಮಾಡುವುದೆಂದು ತಲೆಮೇಲೆ ಕೈಹೊತ್ತು ಆಲೋಚಿಸುತ್ತಿದ್ದರು. ಅಷ್ಟರಲ್ಲಿ ಪರವೂರಿನ ಒಬ್ಬ ಆ ದಾರಿಯಲ್ಲಿ ನಡೆದು ಹೋಗುತ್ತಿದ್ದವನು ಇವರನ್ನು ನೋಡಿ ಹೀಗೇಕೆ ಕುಳಿತಿದ್ದಾರೆಂದು ವಿಚಾರಿಸಿದ. ಅದಕ್ಕೆ ನಡೆದದ್ದನ್ನೆಲ್ಲಾ ಹೇಳಿದರು. ಆ ದಾರಿಹೋಕ ಸತ್ತ ನಾಯಿಯ ದೇಹವನ್ನು ತೆಗೆದು ಹೊರಕ್ಕೆ ಹಾಕಿದಿರಾ? ಎಂದು ಪ್ರಶ್ನಿಸಿದ. ಅವರು ಇಲ್ಲವೆಂದರು. ಆತ ಗಹಗಹನೆ ನಕ್ಕುಬಿಟ್ಟ. ಏಕೆಂದು ಕೇಳಿದಾಗ “ನೀವೆಲ್ಲರೂ ಎರಡೆರಡು ಬಾರಿ ನೀರನ್ನು ಖಾಲಿಮಾಡಿದಿರಿ ನಿಜ. ಆದರೆ ವಾಸನೆಯಾಗಲು ಮುಖ್ಯ ಕಾರಣವಾದ ಸತ್ತ ನಾಯಿಯ ದೇಹವನ್ನು ಹೊರತೆಗೆದು ಹಾಕಲಿಲ್ಲ. ಎಂತಹ ಮೂರ್ಖರು. ವಾಸನೆಗೆ ಮೂಲ ಕಾರಣ ಗೊತ್ತಿದ್ದರೂ ಅದನ್ನು ನಿವಾರಿಸಿಕೊಳ್ಳದೆ ಸುಮ್ಮನೆ ಮೈಕೈ ನೋಯಿಸಿಕೊಂಡಿದ್ದೀರಿ. ಮೊದಲು ಆ ಕೆಲಸವನ್ನು ಮಾಡಿರಿ. ನಂತರ ಒಮ್ಮೆ ನೀರನ್ನು ಖಾಲಿಮಾಡಿ ಶುದ್ಧೀಕರಿಸುವ ಸುಣ್ಣ, ಸ್ಫಟಿಕ ಮುಂತಾದ ವಸ್ತುಗಳನ್ನು ನೀರಿನೊಳಕ್ಕೆ ಹಾಕಿ. ಆಗ ನೀರು ಶುದ್ಧವಾಗಿ ವಾಸನಾ ರಹಿತವಾಗಿರುತ್ತದೆ ಎಂದು ಸಲಹೆ ಕೊಟ್ಟ.
ಅಲ್ಲಿದ್ದ ಊರಿನ ಜನರು ತಮ್ಮ ದಡ್ಡತನಕ್ಕೆ ತಾವೇ ಪಶ್ಚಾತ್ತಾಪಪಟ್ಟು ದಾರಿಹೋಕನ ಸಲಹೆಯಂತೆ ಇಬ್ಬರನ್ನು ಹಗ್ಗಗಳ ಸಹಾಯದಿಂದ ಬಾವಿಯೊಳಕ್ಕೆ ಒಂದು ಬಿದಿರಬುಟ್ಟಿಯೊಂದಿಗೆ ಇಳಿಸಿದರು. ಸತ್ತನಾಯಿಯ ದೇಹವನ್ನು ತೆಗೆಸಿ ದೂರಕ್ಕೆ ಹಾಕಿದರು. ಮತ್ತೊಮ್ಮೆ ನೀರನ್ನೆಲ್ಲ ಖಾಲಿಮಾಡಿ ಶುದ್ಧೀಕರಿಸುವ ಸಾಮಗ್ರಿಗಳನ್ನು ಬಾವಿಯೊಳಕ್ಕೆ ಹಾಕಿದರು. ಮಾರನೆಯ ದಿನಕ್ಕೆ ಮತ್ತೆ ನೀರು ತುಂಬಿಕೊಂಡಾಗ ಅದು ತಿಳಿಯಾಗಿದ್ದು ವಾಸನೆ ಇರಲಿಲ್ಲ. ಎಲ್ಲರೂ ಸಮಸ್ಯೆ ಪರಿಹಾರವಾದದ್ದರಿಂದ ಸಲಹೆ ಕೊಟ್ಟ ಮನುಷ್ಯನನ್ನು ಅಭಿನಂದಿಸಿದರು.
ಯಾವುದೇ ಸಮಸ್ಯೆಗೆ ಮೂಲ ಕಾರಣವೇನೆಂಬುದನ್ನು ಮೊದಲು ವಿಶ್ಲೇಷಿಸಿ ಅದಕ್ಕೆ ಸೂಕ್ತವಾದ ಖಾಯಂ ಪರಿಹಾರವನ್ನು ಕಂಡುಹಿಡಿಯಬೇಕು ಅದನ್ನು ನಿವಾರಿಸಿಕೊಳ್ಳಬೇಕು. ಅದೇ ನಿಜವಾದ ಜಾಣತನ.
ವಾಟ್ಸಾಪ್ ಕಥೆಗಳು
ಸಂಗ್ರಹ : ಬಿ.ಆರ್ ನಾಗರತ್ನ, ಮೈಸೂರು
ಸುರಹೊನ್ನೆಯ ಪ್ರಕಟಣೆಗಾಗಿ ಧನ್ಯವಾದಗಳು ಗೆಳತಿ ಹೇಮಾ
ಚೆಂದದ ಕಥೆ
ಧನ್ಯವಾದಗಳು ಗಾಯತ್ರಿ ಮೇಡಂ
ಸರಳವಾಗಿ ಜಾಣತನದ ಪಾಠ ಮಾಡಿದ ಕಥೆ ಚಂದದ ರೇಖಾ ಚಿತ್ರದೊಂದಿಗೆ ಮುದ ನೀಡಿತು.
ಸಮಸ್ಯೆಗೆ ಮೂಲ ಕಾರಣವನ್ನು ತಿಳಿದುಕೊಂಡು ಸೂಕ್ತ ಪರಿಹಾರವನ್ನು ನಿರ್ಧರಿಸುವ ಅಗತ್ಯತೆಯನ್ನು ಬಲು ಸುಂದರವಾಗಿ ಕಟ್ಟಿಕೊಟ್ಟ ಕಥೆ…
ಧನ್ಯವಾದಗಳು ನಾಗರತ್ನ ಮೇಡಂ.
ಧನ್ಯವಾದಗಳು ಶಂಕರಿ ಮೇಡಂ
ಚಂದದ ಕಥೆ ಮೇಡಂ.ಸಮಸ್ಯೆಯ ಕಾರಣ ತಿಳಿದು ಅದನ್ನು ಕಿತ್ತೊಗೆಯಬೇಕು ಎಂಬ ತಾತ್ಪರ್ಯದ ಕಥೆ ಅರ್ಥಪೂರ್ಣ.
ಧನ್ಯವಾದಗಳು ಶುಭಲಕ್ಷ್ಮಿ ಮೇಡಂ
ಧನ್ಯವಾದಗಳು ಪದ್ಮಾ ಮೇಡಂ