ಪುನರುತ್ಥಾನದ ಪಥದಲ್ಲಿ: ಹೆಜ್ಜೆ 28
ವಿಯೆಟ್ನಾಂ, ಕಾಂಬೋಡಿಯ ಪ್ರವಾಸಕಥನ..ದಿನ 9/10:
ಆಂಗ್ ಕೋರ್ ವಾಟ್ …
ಮಧ್ಯಾಹ್ನದ ಊಟ ಮುಗಿಸಿ, ತುಸು ವಿರಮಿಸಿ, ಸಂಜೆ ಸೀಮ್ ರೀಪ್ ನದಿಯ ಆಸುಪಾಸಿನಲ್ಲಿ ವಾಕಿಂಗ್ ಮಾಡಿದೆವು. ಮಾರ್ಗದರ್ಶಿ ಚನ್ಮನ್ ನಮ್ಮ ಬಳಿ , ಪಗೋಡಾದ ಪಕ್ಕದಲ್ಲಿಯೇ ಹೋದರೆ ‘ ಕರ್ರಿ ಕಿಂಗ್’ ರೆಸ್ಟಾರೆಂಟ್ ಸಿಗುತ್ತದೆ. ಅಲ್ಲಿ ನಮಗೆ ರಾತ್ರಿಯ ಊಟಕ್ಕಾಗಿ ಟೇಬಲ್ ಕಾದಿರಿಸಲಾಗಿದೆ ಎಂದಿದ್ದ. ಆ ಸ್ಥಳದ ಲೊಕೇಶನ್ ಕೂಡ ಕಳುಹಿಸಿದ್ದ. ಆದರೆ ನಮಗೆ ಅದೇಕೋ ಆ ರೆಸ್ಟ್ರಾರೆಂಟ್ ಕಾಣಿಸಲೇ ಇಲ್ಲ. ಇನ್ನೂ ಸ್ವಲ್ಪ ಆಚೀಚೆ , ಪಕ್ಕದ ರಸ್ತೆಯಲ್ಲಿ ನಡೆದೆವು. ಸುತ್ತಿ ಬಳಸಿ ಪುನ: ಅದೇ ಜಾಗಕ್ಕೆ ಬಂದೆವು. ಆಮೇಲೆ ರಸ್ತೆಯಲ್ಲಿದ್ದ ಪೋಲೀಸ್ ಬೂತ್ ನಲ್ಲಿ ಇದ್ದವರ ಬಳಿ ಕೇಳಿಯಾಯಿತು. ಅವರು ಹೇಳಿದ ಕಡೆ ನಡೆದೆವು. ರೆಸ್ಟಾರೆಂಟ್ ಕಾಣಿಸಲಿಲ್ಲ. ಅಷ್ಟರಲ್ಲಿ ನಾವು ಸಾಕಷ್ಟು ನಡೆದಿದ್ದೆವು. ಕತ್ತಲೆಯಾಗಿತ್ತು . ಒಬ್ಬಿಬ್ಬರು ‘ಮೋಟರ್ ಬೈಕ್ ರಿಕ್ಷಾ’ ದವರ ಬಳಿ ಕೇಳಿ ಆಯಿತು. ಇಲ್ಲಿನ ರಸ್ತೆಗಳಲ್ಲಿ ಮೋಟರ್ ಬೈಕ್ ಅಳವಡಿಸಿದ ‘ಸೈಕಲ್ ರಿಕ್ಷಾ’ ಮಾದರಿಯ ‘ಟುಕ್ ಟುಕ್’ ಎಂದು ಕರಲ್ಪಡುವ ರಿಕ್ಷಾಗಳು ಬಾಡಿಗೆಗೆ ದೊರೆಯುತ್ತವೆ. ಒಬ್ಬಾತ ತನಗೆ ಗೊತ್ತು ಎಂದು ಹೇಳಿ , ಯಾವುದೋ ಯುನಿವರ್ಸಿಟಿ ಆಫೀಸಿನಂತೆ ಕಾಣಿಸುತ್ತಿದ್ದ ದೊಡ್ಡ ಕಟ್ಟಡದ ಮುಂದೆ ನಿಲ್ಲಿಸಿದ . ಜೊತೆಗೆ ‘ ಇಟ್ ಈಸ್ ಕ್ಲೋಸ್ಡ್ ನೌ’ ಅಂದ. ‘ಇಲ್ಲಿಗೆ ಯಾಕೆ ಬಂದಿರಿ, ನಾವು ಹೋಗಬೇಕಾದ ಜಾಗ ಇದಲ್ಲ’ ಎಂದಾಗ, ನೀವು ಕೊಟ್ಟ ಲೊಕೇಶನ್ ಇದುವೇ ಎಂದ.
ನಮ್ಮ ಗೊಂದಲ ಇನ್ನಷ್ಟು ಹೆಚ್ಚಾಗಿ, ಚನ್ಮನ್ ಗೆ ಫೋನ್ ಮಾಡಿದೆವು. ಆಗ ಎಲ್ಲಿದ್ದೇವೆಂದು ಹೇಳಲು ನಮಗೆ ಗೊತ್ತಾಗುತ್ತಿರಲಿಲ್ಲ. ಆತ ಟುಕ್ ಟುಕ್ ಗಾಡಿಯವನಿಗೆ ಫೋನ್ ಕೊಡಿ ಎಂದು ಹೇಳಿ, ಆತನೊಂದಿಗೆ ಮಾತನಾಡಿ ನಮ್ಮನ್ನು ಹೋಟೆಲ್ ಪಿಯರಿಗೆ ಕರೆದೊಯ್ಯಲು ಹೇಳಿದ. ಬಳಿಕ ನಮ್ಮೊಡನೆ ತಾನು ಇನ್ನು ಅರ್ಧ ಗಂಟೆಯೊಳಗೆ ಹೋಟೆಲ್ ಗೆ ಬರುವೆನೆಂದ. ‘ಟುಕ್ ಟುಕ್’ ನಮ್ಮನ್ನು ಹೋಟೆಲ್ ಪಿಯರಿಗೆ ತಲಪಿಸಿದ ಸ್ವಲ್ಪ ಸಮಯದಲ್ಲಿ ಚನ್ಮನ್ ಬಂದಾಗಿತ್ತು. ಆತನೊಂದಿಗೆ ನಡೆಯುತ್ತಾ ಐದೇ ನಿಮಿಷದಲ್ಲಿ ‘ ಕರ್ರಿ ಕಿಂಗ್’ ರೆಸ್ಟಾರೆಂಟ್ ತಲಪಿದೆವು. ಅದೇ ರಸ್ತೆಯಲ್ಲಿ ಅದಾಗಲೇ ಎರಡು ಮೂರು ಬಾರಿ ನಡೆದಿದ್ದರೂ, ರೆಸ್ಟಾರೆಂಟ್ ನ ಹೆಸರು ನಮ್ಮ ಕಣ್ಣಿಗೇಕೆ ಕಾಣಿಸಿರಲಿಲ್ಲ ಎಂದು ಪೆದ್ದುಪೆದ್ದಾಗಿ ನಕ್ಕೆವು!. ನಾವೇನೋ ಪರದೇಶಿಗಳು, ಸ್ಥಳೀಯ ಸೈಕಲ್ ರಿಕ್ಷಾದವರಿಗದರೂ ಗೊತ್ತಾಗಬೇಕಿತ್ತಲ್ಲವೇ, ಅಥವಾ ಪೋಲೀಸ್ ಬೂತ್ ನವರು ಸರಿಯಾಗಿ ಹೇಳಬೇಕಿತ್ತಲ್ಲವೇ ಎಂದೆವು. ಆಗ, ಚನ್ಮನ್ , ತಾನು ಕಳುಹಿಸಿದ ಲೊಕೇಶನ್ ಅಚಾತುರ್ಯದಿಂದ ತಪ್ಪಾಗಿತ್ತು, ಅವರುಗಳು ಆ ಲೊಕೇಶನ್ ಗೆ ತಕ್ಕಂತೆ ಮಾರ್ಗದರ್ಶನ ಮಾಡಿದ್ದಾರೆ ಎಂದ. ಒಟ್ಟಿನಲ್ಲಿ, ಆದಿನ ನಮಗೆ ಸೀಮ್ ರೀಪ್ ನ ರಸ್ತೆಗಳಲ್ಲಿ ಅಕಾರಣವಾಗಿ ನಡೆಯುವ ಯೋಗವಿತ್ತು! ಇನ್ನು ಮುಂದೆ ಮಾರ್ಗದರ್ಶಿ ಇಲ್ಲದೇ ಹೋಗುವ ಸಾಹಸ ಬೇಡ ಎಂದು ನಿರ್ಧರಿಸಿದೆವು! ಅಂತೂ ಹೋಟೆಲ್ ‘ಕರ್ರಿ ಕಿಂಗ್’ ತಲಪಿದ್ದಾಯಿತು. ಅಲ್ಲಿ ಲಭಿಸಿದ ದಕ್ಷಿಣ ಭಾರತೀಯ ಶೈಲಿಯ ಊಟ, ತಿಂಡಿಗಳು ಚೆನ್ನಾಗಿದ್ದುವು. ಪುನ: ನಡೆಯುತ್ತಾ ನಾವು ಉಳಕೊಂಡಿದ್ದ ಹೋಟೆಲ್ ಪಿಯರಿಗೆ ಬಂದೆವು.
24/09/2024 ರ ಮುಂಜಾನೆ ಅಂದಿನ ಸ್ಥಳವೀಕ್ಷಣೆಗೆ ಸಿದ್ದರಾಗಿ ಬಂದೆವು. ಹೋಟೆಲ್ ಪಿಯರಿಯ ಬಫೆ ಉಪಾಹಾರದಲ್ಲಿ ಪ್ಯಾನ್ ಕೇಕ್, ಬ್ರೆಡ್ , ನೂಡಲ್ಸ್, ಹಣ್ಣುಗಳು, ಅನ್ನದ ಗಂಜಿ, ಕಾರ್ನ್ ಫ್ಲೇಕ್ಸ್ ಇತ್ಯಾದಿ ಇದ್ದುವು. ನಮಗೆ ಬೇಕಾದುದನ್ನು ಆರಿಸಿಕೊಂಡು ತಿಂದು ‘ಆಂಗ್ ಕೋರ್ ವಾಟ್’ ಗೆ ಭೇಟಿ ಕೊಡುವ ತವಕದಲ್ಲಿದ್ದೆವು. 0900 ಗಂಟೆಗೆ ಚನ್ಮನ್ ಬಂದ. ಸುಮಾರು 7 ಕಿಮೀ ಪ್ರಯಾಣಿಸಿ , ಆಂಗ್ ಕೋರ್ ವಾಟ್ ನ ಸಮುಚ್ಚಯ ತಲಪಿದೆವು. ಇಲ್ಲಿ ಪ್ರವೇಶಕ್ಕೆ 37 ಅಮೇರಿಕನ್ ಡಾಲರ್ ಕೊಟ್ಟು ಟಿಕೆಟ್ ಪಡೆಯಬೇಕು. ನಮ್ಮ ಫೊಟೊ ಲಗತ್ತಿಸಿದ ಟಿಕೆಟ್ ಕೊಡುತ್ತಾರೆ. ಆಂಗ್ ಕೋರ್ ವಾಟ್ ನ ಪ್ರಮುಖ ದ್ವಾರದಲ್ಲಿ ನಾಗಶಿಲ್ಪವಿದೆ. ವಿಶಾಲವಾದ ಆವರಣದಲ್ಲಿ ನಡೆಯುತ್ತಾ ಹೋಗುತ್ತಿದ್ದಂತೆ, ಒಂದು ಜಾಗದಲ್ಲಿ ಸಣ್ಣ ಕೆರೆಯಿದೆ. ಈ ಕೆರೆಯ ನೀರಿನಲ್ಲಿ ದೇವಾಲಯದ ಪ್ರತಿಬಿಂಬ ಸ್ಪಷ್ಟವಾಗಿ ಕಾಣುವುದು ವಿಶೇಷವಾಗಿದೆ.ಈ ಆವರಣದಲ್ಲಿ ಸ್ಥಳೀಯ ನೂತನ ದಂಪತಿಯರು ಫೊಟೋ ಶೂಟ್ ಮಾಡಿಸಿಕೊಳ್ಳುತ್ತಿದರು. ಒಬ್ಬರ ಅನುಮತಿ ಪಡೆದು ಅವರ ಫೊಟೊ ಕ್ಲಿಕ್ಕಿಸಿಕೊಂಡೆ. ಇನ್ನೊಂದೆಡೆ ಕಾಂಬೋಡಿಯಾ ಶೈಲಿಯಲ್ಲಿ ಸೀರೆಯುಟ್ಟಿದ್ದ ಚೆಂದದ ಬಾಲಕಿಯರು ಕಾಣಸಿಕ್ಕಿದರು. ಅವರ ಬಳಿಯೂ ಅನುಮತಿ ಪಡೆದು ಫೊಟೊ ಕ್ಲಿಕ್ಕಿಸಿಕೊಂಡೆ.
z
12 ನೆಯ ಶತಮಾನದ ವರೆಗೂ ಕಾಂಬೋಡಿಯಾದಲ್ಲಿ ಆಡಳಿತ ನಡೆಸುತ್ತಿದ್ದ ಖ್ಮೇರ್ ರಾಜರ ಕಾಲದಲ್ಲಿ ಕಟ್ಟವಾದ ಆಂಗ್ ಕೋರ್ ವಾಟ್ ದೇವಾಲಯ ಸಮುಚ್ಚಯವು ಅದ್ಭುತವಾದ ವಾಸ್ತುಶಿಲ್ಪವನ್ನು ಹೊಂದಿದೆ. 162 ಹೆಕ್ಟೇರ್ ಪ್ರದೇಶದಲ್ಲಿ ಹಬ್ಬಿಕೊಂಡಿರುವ ಆಂಗ್ ಕೋರ್ ವಾಟ್ ಪ್ರದೇಶದಲ್ಲಿ ನೂರಾರು ದೇವಾಲಯಗಳಿವೆಯಂತೆ. ಅವುಗಳಲ್ಲಿ ಈಗ ಪ್ರಮುಖ ಪ್ರವಾಸಿ ಆಕರ್ಷಣೆಯಾಗಿರುವ ದೇವಾಲಯವು ಖ್ಮೇರ್ ಸಾಮ್ರಾಜ್ಯದ ಜಯವರ್ಮ VII ಎಂಬ ರಾಜನ ಕಾಲದಲ್ಲಿ ಕಟ್ಟಲಾದ ಮೂಲತ: ವಿಷ್ಣುವಿನ ದೇವಾಲಯ. 13 ನೆ ಯ ಶತಮಾನದಲ್ಲಿ ಥ್ಯಾಲ್ಯಾಂಡ್ ನವರ ಆಕ್ರಮಣದ ನಂತರ ಖ್ಮೇ ರ್ ಸಾಮ್ರಾಜ್ಯದ ಅವನತಿಯಾಯಿತು, ಹಾಗೂ ಇಲ್ಲಿ ಬೌದ್ಧ ಧರ್ಮ ಸ್ಥಾಪನೆಯಾಯಿತು. ಈಗ ಇಲ್ಲಿ ಹಿಂದೂ ಹಾಗೂ ಬೌದ್ಧ ಧರ್ಮದ ಆಚರಣೆಗಳನ್ನು ಕಾಣಬಹುದು. ದೇವಾಲಯದ ಆವರಣದಲ್ಲಿರುವ ಸಹಸ್ರಾರು ಶಿಲ್ಪಗಳಲ್ಲಿ ಹಿಂದೂ ಪೌರಾಣಿಕ ಕತೆಗಳ ಚಿತ್ರಣವಿದೆ.
ನಮ್ಮ ಮಾರ್ಗದರ್ಶಿ ತಿಳಿಸಿದ ಪ್ರಕಾರ, ತೀರಾ ಹೊರ ಆವರಣದ ದೇವಾಲಯದಲ್ಲಿ ಸಾಮಾನ್ಯ ಪ್ರಜೆಗಳು, ಸೈನಿಕರು ಪೂಜೆ ಮಾಡುತ್ತಿದ್ದರಂತೆ. ಅನಂತರ ಸಿಗುವ ಎರಡನೆಯ ಹಂತದ ದೇವಾಲಯದಲ್ಲಿ ರಾಜನ ಆಸ್ಥಾನದಲ್ಲಿ ಪ್ರಮುಖ ಹುದ್ದೆಯಲ್ಲಿದ್ದವರು ಪೂಜೆ ಮಾಡುತ್ತಿದ್ದರಂತೆ. . ಅನಂತರ ಸಿಗುವ ಮೂರನೆಯ ಹಂತದ ದೇವಾಲಯದಲ್ಲಿ ಸ್ವತ: ರಾಜ ಮತ್ತು ಆಪ್ತ ಬಳಗದವರು ಪೂಜೆ ಮಾಡುತ್ತಿದ್ದರಂತೆ. ಮೊದಲನೆಯ, ಎರಡನೆಯ ಹಾಗೂ ಮೂರನೆಯ ಹಂತದ ದೇವಾಲಯಗಳ ನಡುವೆ ಸಾಕಷ್ಟು ಅಂತರವಿದೆ. ದೇವಾಲಯದ ಆವರಣದಲ್ಲಿ ಒಂದು ಗಂಟೆಗೂ ಹೆಚ್ಚಿನ ಕಾಲ ನಡೆದಿದ್ದೆವು. ನಮಗೆ ಸುಸ್ತಾಗತೊಡಗಿತ್ತು. ಕೊನೆಯ ಮಂದಿರದಲ್ಲಿ ಮುಖ್ಯ ಪೀಠವನ್ನು ತಲಪಲು ನೂರೈವತ್ತಕ್ಕೂ ಹೆಚ್ಚು ಕಡಿದಾದ ಮೆಟ್ಟಿಲುಗಳಿವೆ. ಈ ಮೆಟ್ಟಿಲುಗಳು ಬಹುಶ 80 ಡಿಗ್ರಿ ನೇರವಾಗಿದ್ದು, ಹೇಗೆ ನಿರ್ಮಿಸಿದರೋ ಎಂದು ಅಚ್ಚರಿಯಾಗುತ್ತದೆ. ಮೆಟ್ಟಿಲುಗಳ ಎರಡೂ ಪಾರ್ಶದಲ್ಲಿ ಕೈಗೆ ಆಧಾರಕ್ಕೆ ಹಿಡಿದುಕೊಳ್ಳಲು ಕಬ್ಬಿಣದ ಪಟ್ಟಿ ಇದ್ದುವು. ನಿಮಗೆ ಸಾಧ್ಯವಾದರೆ ಮೇಲೆ ಹತ್ತಿ ನೋಡಿಕೊಂಡು ಬನ್ನಿ ಮೆಟ್ಟಿಲುಗಳನ್ನು ಹತ್ತುವಾಗ ಅಥವಾ ಇಳಿಯುವಾಗ ಅಕ್ಕ ಪಕ್ಕ ನೋಡಬೇಡಿ, ತಲೆಸುತ್ತು ಬರುವ ಸಾಧ್ಯತೆ ಇದೆ ಎಂದು ಎಚ್ಚರಿಸಿದ್ದ ಮಾರ್ಗದರ್ಶಿ. ನಾವಿಬ್ಬರೂ ನಿಧಾನಕ್ಕೆ ಮೆಟ್ಟಿಲುಗಳನ್ನೇರಿ ಕೊನೆಯ ದೇವಾಲಯವನ್ನೂ ನೋಡಿ ಧನ್ಯತಾ ಭಾವ ಪಡೆದೆವು. ಅಲ್ಲಿಯೂ ವಿವಿಧ ಗುಡಿಗಳು, ನೀರು ಸಂಗ್ರಹಿಸಲಾಗುತ್ತಿದ್ದ ಕೆರೆ ಇತ್ಯಾದಿ ಇದ್ದುವು. 12 ನೇ ಶತಮಾನದಲ್ಲಿ ನಿರ್ಮಿತಗೊಂಡ ಈ ವಾಸ್ತು ವಿಸ್ಮಯ ಇನ್ನೂ ಸುಸ್ಥಿತಿಯಲ್ಲಿರುವುದು ಅಚ್ಚರಿ ಮೂಡಿಸುತ್ತದೆ.
ಸಂಪೂರ್ಣ ಕಲ್ಲಿನ ಕಟ್ಟಡವಾಗಿರುವ ದೇವಾಲಯದಲ್ಲಿ ವಿಷ್ಣುವಿನ ದಶಾವತಾರದ ಮೂರ್ತಿಗಳು, ಲಕ್ಷ್ಮಿಯ ಮೂರ್ತಿಗಳು, ಹಲವಾರು ಪರಿವಾರ ದೇವತೆಗಳ ಮೂರ್ತಿಗಳಿವೆ. ನೂರಾರು ಕಡೆ ‘ಅಪ್ಸರಾ’ ಎಂದು ಕರೆಯಲ್ಪಡುವ ಶಿಲಾಬಾಲಿಕೆಯರ ಶಿಲ್ಪಗಳಿವೆ.ಕಾಂಬೋಡಿಯಾದ ಪೌರಾಣಿಕ ಕತೆಗಳಲ್ಲಿ ಬಿಂಬಿಸಲಾಗಿರುವ ‘ಅಪ್ಸರೆ’ಯರು ದೈವಿಕ ಶಕ್ತಿಯುಳ್ಳವರು. ಕಾಂಬೋಡಿಯಾದ ಪ್ರಮುಖ ನೃತ್ಯಪ್ರಕಾರವಾದ ‘ಅಪ್ಸರಾ’ ನೃತ್ಯಕ್ಕೆ ಇವರೇ ಮೂಲ. ಆಂಗ್ ಕೋರ್ ವಾಟ್ ನ ಗೋಡೆಯಲ್ಲಿ, ಆವರಣದಲ್ಲಿ ನೂರಾರು ಸಂಖ್ಯೆಯಲ್ಲಿ ಕೆತ್ತಲಾದ ಆಪ್ಸರೆಯರ ಕೇಶಶೈಲಿ ಹಾಗೂ ಆಭರಣಗಳು ವಿಭಿನ್ನವಾಗಿದ್ದು ಶಿಲ್ಪಿಯ ಕಲಾನೈಪುಣ್ಯವನ್ನು ಸಾರುತ್ತವೆ.
ಈಗ ಭಗ್ನಾವಶೇಷವಾಗಿರುವ, ಕರ್ನಾಟಕದ ಹಂಪೆಯ ಗತ ವೈಭವಕ್ಕೆ ಹೋಲಿಸಬಹುದಾದ , ಆಂಗ್ ಕೋರ್ ವಾಟ್ ನ ಮೂಲ ಭವ್ಯತೆ ಮತ್ತು ಅಗಾಧತೆ ಎಷ್ಟಿದ್ದಿರಬಹುದೆಂದು ಊಹಿಸಲೂ ಅಸಾಧ್ಯವಾಗುತ್ತದೆ. ಈಗ ಇಲ್ಲಿ ಪೂಜೆ ನಡೆಯುವುದಿಲ್ಲ. ಕಾಂಬೋಡಿಯಾದ ಪ್ರಮುಖ ಪ್ರವಾಸಿ ಆಕರ್ಷಣೆಯಾಗಿದ್ದು, ಯುನೆಸ್ಕೊ ಪಾರಂಪರಿಕ ತಾಣವಾಗಿ ಗುರುತಿಸಲ್ಪಟ್ಟಿದೆ. ಆಂಗ್ ಕೋರ್ ವಾಟ್ ನ ಪುನರ್ನಿಮಾಣಕ್ಕೆ ಯೋಜನೆ ರೂಪಿಸಲಾಗುತ್ತಿದ್ದು, ಈ ಪ್ರಯತ್ನಕ್ಕೆ ಭಾರತದಿಂದ ದೇಣಿಗೆ ಬಂದಿದೆ ಎಂದ ಮಾರ್ಗದರ್ಶಿ.
ಈ ಪ್ರವಾಸ ಕಥನದ ಹಿಂದಿನ ಕಂತು ಇಲ್ಲಿದೆ : https://www.surahonne.com/?p=42630
(ಮುಂದುವರಿಯುವುದು)
–ಹೇಮಮಾಲಾ.ಬಿ, ಮೈಸೂರು
ಪ್ರವಾಸ ಕಥನ ಓದಿ ಸಿಕೊಂಡು ಹೋಯಿತು…ಎಂದಿನಂತೆ ನಿರೂಪಣೆ ಸೊಗಸಾಗಿ ಬಂದಿದೆ..ಫೋಟೋ ಗಳು ಪೂರಕವಾಗಿ ಬಂದಿವೆ.. ವಂದನೆಗಳು ಗೆಳತಿ ಹೇಮಾ
ಧನ್ಯವಾದಗಳು
ಪ್ರವಾಸದಲ್ಲಿ ಆದ ಅಚಾತುರ್ಯಗಳನ್ನು ನಿವಾರಿಸಿಕೊಂಡು ಅಂಗ್ ಕೂರ್ ವಾಟ್ ನ ಕಡಿದಾದ ಮೆಟ್ಟಲುಗಳನ್ನು ಏರಿ ಮೂಲಪೀಠವನ್ನು ತಲುಪಿದ ನಿಮ್ಮ ಯಶೋಗಾಥೆ ಸಾಹಸಮಯವಾಗಿತ್ತು.
ಯುನೆಸ್ಕೋ ಪಾರಂಪರಿಕ ತಾಣವಾಗಿ ಗುರುತಿಸಲ್ಪಟ್ಟ, ಬೃಹದಾಕಾರದ ನಾಗ ಶಿಲ್ಪ ದೊಂದಿಗೆ ಅದ್ಭುತವಾದ ವಾಸ್ತುಶಿಲ್ಪ ಹೊಂದಿದ, ಅತ್ಯಂತ ಸುಂದರ ಆಂಗ್ ಕೋರ್ ವಾಟ್ ಸಮುಚ್ಚಯದ ಪ್ರತಿಬಿಂಬವು ಅಲ್ಲಿಯ ಕೆರೆಯಲ್ಲಿ ಸ್ಪಷ್ಟವಾಗಿ ಮೂಡಿದ ಚಿತ್ರವು ಮನಸೆಳೆಯುವಂತಿದೆ. ಟುಕ್ ಟುಕ್ ಗಾಡಿಯಲ್ಲಿ ರೆಸ್ಟೋರೆಂಟ್ ಗಾಗಿ ಅಲೆದಾಟ, ತಪ್ಪಾಗಿದ್ದ ಲೊಕೇಶನ್, ಕಠಿಣವಾದ ಮೆಟ್ಟಲುಗಳನ್ನು ಹತ್ತಿ ಮೇಲೇರಿ ದೇಗುಲ ದರ್ಶನ, ಅಪ್ಸರೆಯರ ಸುಂದರ ಶಿಲ್ಪಗಳು…
ಅತ್ಯಂತ ಸುಂದರ ಪ್ರವಾಸ ಲೇಖನವು ಖುಷಿ ಕೊಟ್ಟಿತು.
ಮತ್ತೆ ಎಲ್ಲ ನೆನಪಾಯ್ತು. ಮೇರು ಎಂದು ಕರೆಯುತ್ತಾರೆ ಈ ಮೆಟ್ಟಿಲುಗಳನ್ನು ಮತ್ತು ಮೇಲೆ. ನಾನು ಹತ್ತಿದ್ದು ನೆನಪಾಯ್ತು. Tomb raiders cinema ಮಾಡಿದ ಮರ ಈಗ ಬಿದ್ದುಹೋಗಿದೆ. ಸುಂದರ ಚಿತ್ರಣ ಕೊಟ್ಟಿದ್ದೀರಾ.