ವ್ಯಕ್ತಿ ಪರಿಚಯ

 ಪುಸ್ತಕ ಲೋಕದ ಮಹತಿ, ಅರಿತವರು ಈ ‘ರಮಾವತಿ’

Share Button

ಕೆ.ಆರ್.ಉಮಾದೇವಿ ಉರಾಳ

ದಟ್ಟ ಮಲೆನಾಡಿನ ವಾರಾಹಿ ನದಿ ಸೆರಗಿನ ಗುಬ್ಬಿಗ ಎಂಬ ಚಂದದ ಹೆಸರಿನ ಪುಟ್ಟ ಊರಲ್ಲಿ ತುಂಬು ಕುಟುಂಬದ ಹನ್ನೊಂದು ಮಕ್ಕಳಲ್ಲಿ ಒಬ್ಬರಾಗಿ ಹುಟ್ಟಿದವರು ಎಪ್ಪತ್ಮೂರರ ಹರಯದ ರಮಾವತಿ. ಈಗ ತಮ್ಮ ತವರೂರು ವಾರಾಹಿ ಜಲವಿದ್ಯುತ್ ಯೋಜನೆಗೆ ಒಳಗಾಗಿ ಮುಳುಗಡೆಯಾಗಿದೆ ಎಂಬೊಂದು ನೋವಿನ ಸೆಳಕು ಸದಾ ಇವರ ಮನದಲ್ಲಿದೆ. ಮುಂದೆ ಇವರ ತವರಿನವರು ಶರಾವತಿ ಹಿನ್ನೀರಿನ ಸುಳ್ಳಳ್ಳಿ ಸಮೀಪದ ಹೊಸಕೊಪ್ಪದಲ್ಲಿ ನೆಲೆ ನಿಂತರು. ರಮಾವತಿಯವರ ವ್ಯಕ್ತಿತ್ವದ ವಿಶೇಷತೆ ಎಂದರೆ ಓದುವಿಕೆಗೆ ಅವರು ತಮ್ಮನ್ನೇ ತಾವು ತೆತ್ತುಕೊಂಡ ಪರಿ. ತುಂಬು ಕುಟುಂಬದಲ್ಲಿ ಮಕ್ಕಳ ನಿಗಾ ನೋಡಲೆಂದು, ಗೃಹಕೃತ್ಯದಲ್ಲಿ ನೆರವಾಗಲೆಂದು ಇವರ ಓದು ಐದನೇ ತರಗತಿಗೇ ನಿಂತಿತು. ಹದಿನಾಲ್ಕರ ಆಡುವ ವಯಸ್ಸಿನಲ್ಲೇ ಮದುವೆಯಾಗಿ ಪತಿ ಕೃಷ್ಣಮೂರ್ತಿಯವರ ಊರು ತೀರ್ಥಹಳ್ಳಿ ತಾಲ್ಲೂಕಿನ ಕೊಡೆಕೊಪ್ಪದ ಗಂಡನ ಮನೆಗೆ ಬಂದು ಗೃಹಕೃತ್ಯಕ್ಕೆ ಹೆಗಲು ಕೊಟ್ಟರು. ಆದರೆ ಕೈಗೆ ಸಿಕ್ಕಿದ ಕಾಗದದ ತುಣುಕನ್ನೇ ಆದರೂ ಓದದೇ ಬಿಡಲಾರದ ಓದಿನೊಲುಮೆಯವರು ರಮಾವತಿ. ಶಿಕ್ಷಣ ಪಡೆಯಲಾರದಂತೆ ಅಡೆತಡೆಗಳ ಗೋಡೆಗಳು ತಮ್ಮ ಸುತ್ತ ಅಷ್ಟೆತ್ತರವಿದ್ದರೂ ತಮ್ಮಂತರಂಗದ ಓದಿನೊಲುಮೆಯ ಬಿರಿದರಳಿದ ಹೂವಿನ ಸುಗಂಧದ ಪ್ರಸಾರಕ್ಕೆ ಈ ಗೋಡೆಗಳ ತಡೆ ನಗಣ್ಯ ಎಂಬುದನ್ನು ಸಾಧಿಸಿ ತೋರಿದವರಿವರು. ಇವರ ಓದಿನ ಪ್ರೀತಿಯನ್ನು ಕೆದಕಿದಾಗ, ತಮ್ಮ ತವರಲ್ಲಿ ತಂದೆ ತಂದಿಟ್ಟಿರುತ್ತಿದ್ದ ಅಳಸಿಂಗಾಚಾರ್ಯರ ರಾಮಾಯಣ ಮತ್ತು ಮಹಾಭಾರತವನ್ನು ತಾವು ಮೈಮರೆತು ಓದುತ್ತಿದ್ದುದನ್ನು ನೆನೆಯುತ್ತಾರೆ. ಹಾಗೆಯೇ ತಂದೆಯವರು ಆಗಾಗ ತರುತ್ತಿದ್ದ ಕಸ್ತೂರಿ ಸುಧಾ ಪ್ರಜಾಮತ ಮುಂತಾದ ಮಾಸಿಕ ವಾರಪತ್ರಿಕೆಗಳೂ ಇವರ ಓದುವಿಕೆಯ ತೃಷೆಯಿಂಗಿಸುತ್ತಿದ್ದವು.

ನಂತರದಲ್ಲಿ ಅನಕೃರವರ ಕಾದಂಬರಿಗಳನ್ನು ಓದಲಾರಂಭಿಸುತ್ತಾ ಕನ್ನಡ ಸಾಹಿತ್ಯ ಲೋಕಕ್ಕೆ ಪ್ರವೇಶಿಸಿದರು. ಮುಂದೆ ತರಾಸು, ಕೃಷ್ಣಮೂರ್ತಿ ಪುರಾಣಿಕ, ಬಸವರಾಜ ಕಟ್ಟೀಮನಿಯವರು ಮುಂತಾದವರ ಕೃತಿಗಳ ಓದಿನಲ್ಲಿ ತಲ್ಲೀನರಾದ ರಮಾವತಿಯವರು ಪುಸ್ತಕಲೋಕದ ಮೇರೆಯರಿಯದ ವಾರಿಧಿಯಲ್ಲಿ ಈಜುತ್ತಾ ಸಾಗಿದರು. ತ್ರಿವೇಣಿಯವರ ಕಾದಂಬರಿಗಳು ಮಾಡಿದ ಮೋಡಿಗೆ ಮನಸೋತವರು ರಮಾವತಿ. “ಕಾಶೀಯಾತ್ರೆ” ಕಾದಂಬರಿಯ ಓದು ಅಂದು ನೀಡಿದ್ದ ಅದೇ ಮುದವನ್ನು ಇಂದಿಗೂ ಮನದಾಳದಿಂದ ಮೇಲೆತ್ತಿ ತಂದು ಅದೇ ಆಸ್ವಾದನೀಯತೆಯನ್ನು ಅನುಭವಿಸಬಲ್ಲವರು. “ನಮ್ಮಮ್ಮನ ಒಂದು ವಿಶೇಷತೆ ಎಂದರೆ ಇವರು ತಾವು ಓದಿದ ಪುಸ್ತಕಗಳ ಪುಟ ಪುಟಗಳನ್ನೂ ಪ್ಯಾರಾಗಳನ್ನೂ ನೆನಪಿನಲ್ಲಿಟ್ಟುಕೊಂಡು ಹೇಳಬಲ್ಲವರು” ಎನ್ನುತ್ತಾರೆ ಅವರ ಮಗಳು ನಿರ್ಮಲಾ ನಾರಾಯಣ ಸ್ವಾಮಿ. ನಿಜ, ರಮಾವತಿಯವರಿಗೆ ಓದೆಂದರೆ ಹೊತ್ತು ಕಳೆವ ಸಾಧನವಲ್ಲ; ಅದೊಂದು ದಿವ್ಯಾನುಭೂತಿ. ಹಾಗಾಗಿಯೇ ಓದಿದ್ದು ಅವರ ಮನದಲ್ಲಿ ಅಚ್ಚೊತ್ತಿರುತ್ತದೆ. ಎಂ.ಕೆ.ಇಂದಿರಾರವರು ಮಲೆನಾಡಿನ ಹತ್ತು ಹಲವಾರು ಊರುಗಳನ್ನು ಹಳ್ಳಿಗಳನ್ನು ಹೆಸರಿಸಿರುವುದನ್ನು, ಇಲ್ಲಿನ ಅಡುಗೆ ತಿಂಡಿ, ಗಿಡ ಮರ, ಪ್ರಾಣಿ ಪಕ್ಷಿಗಳು, ನದಿ ಗುಡ್ಡ ಬೆಟ್ಟಗಳನ್ನು ಪ್ರಸ್ತಾಪಿಸಿರುವುದನ್ನು, ಮಲೆನಾಡ ಸೊಗಡಿನ ಭಾಷೆ ಬಳಸಿರುವುದನ್ನು ನೆನೆದು ಹೆಮ್ಮೆಪಡುತ್ತಲೇ “ಅವರು ‘ತುಂಗಭದ್ರಾ’ ಕಾದಂಬರಿಯಲ್ಲಿ ಅಪ್ಪೂರಾಯರ ಅಂಗಡಿ ಹಾಗೂ ಧರ್ಮಪ್ಪಯ್ಯನವರ ಕುರಿತು ಪ್ರಸ್ತಾಪಿಸುತ್ತಾರಲ್ಲಾ, ಆ ಅಂಗಡಿ ಎಲ್ಲಿತ್ತು? ನಿಜಕ್ಕೂ ಅವರು ಇದ್ದರೇ?” ಎಂಬ ಜಿಜ್ಞಾಸೆಗೊಳಗಾಗುತ್ತಾರೆ. ಇಂದಿರಾರವರು ತಮ್ಮ ಭೌಗೋಳಿಕ ಜ್ಞಾನದಿಂದ ಊರುಗಳ ನಡುವಿನ ಅಂತರವನ್ನು ದಿಕ್ಕನ್ನು ಕಟ್ಟಿಕೊಟ್ಟಿರುವುದನ್ನು ನೆನಪಿಸಿಕೊಳ್ಳುತ್ತಾ ಅದು ಹಾಗಿರಲಾರದೇನೋ, ಹೀಗಿರಬೇಕಿತ್ತೇನೋ ಎಂಬ ದ್ವಂದ್ವಕ್ಕೊಳಗಾಗುತ್ತಾರೆ, ರಮಾವತಿ.

ಎಸ್.ಎಲ್. ಭೈರಪ್ಪನವರ ಕಾದಂಬರಿಗಳನ್ನು ಪರಮ ಪ್ರೀತಿಯಿಂದಲೇ ಓದುತ್ತಿದ್ದವರಿಗೆ ಅವರ “ಆವರಣ” ಕಾದಂಬರಿಯ ಓದಿನ ನಂತರ ಇನ್ನು ಇವರ ಕೃತಿಗಳ ಓದು ಸಾಕು ಎನಿಸಿತಂತೆ. ಹೀಗೆ ಸುಮ್ಮನೇ ಓದಿಕೊಂಡು ಹೋಗದೇ ಓದಿದ್ದನ್ನು ಪ್ರಶ್ನಿಸುತ್ತಾ, ವಿಮರ್ಶಿಸುತ್ತಾ ಹೋಗುವುದು ರಮಾವತಿಯವರ ವೈಖರಿ. ಕಾರಂತರು, ಮಾಸ್ತಿ, ಕುವೆಂಪು, ತೇಜಸ್ವಿಯವರ ಕೃತಿಗಳನ್ನು ಲೇಖನಗಳನ್ನು ಓದಿರುವವರಿವರು. ”ಕಿರಿಗೂರಿನ ಗಯ್ಯಾಳಿಗಳು” ಇವರ ಇಷ್ಟದ ಕಾದಂಬರಿ. ವೈದೇಹಿ ಸಾರಾಅಬೂಬಕರ್ ಅನುಪಮಾ ನಿರಂಜನ ವಸುಮತಿ ಉಡುಪ ಮುಂತಾದವರ ಕೃತಿಗಳೇ ಅಲ್ಲದೆ ರಮಾವತಿ ವಿಶೇಷವಾಗಿ ಇಷ್ಟಪಟ್ಟು ಓದಿದ್ದು ಹೆಚ್.ಜಿ.ರಾಧಾದೇವಿ, ಸಾಯಿಸುತೆ, ಅಶ್ವಿನಿ, ಉಷಾ ನವರತ್ನರಾಂ ಮುಂತಾದವರ ಕೃತಿಗಳನ್ನು. ಮಹಿಳಾ ಸಾಹಿತ್ಯವನ್ನು ‘ಅಡುಗೆ ಮನೆ ಸಾಹಿತ್ಯ’ ಎಂದು ಪರಿಗಣಿಸುತ್ತಿದ್ದುದರ ಕುರಿತು ಆಕ್ರೋಶ ವ್ಯಕ್ತಪಡಿಸುತ್ತಾರೆ. ಎಂ.ರಾಮಮೂರ್ತಿ, ಎನ್.ನರಸಿಂಹಯ್ಯ ಮುಂತಾದವರ ಪತ್ತೇದಾರಿ ಕಾದಂಬರಿಗಳೂ ಇವರ ಓದಿನ ಪ್ರೀತಿಯ ವಲಯದಲ್ಲಿ ಸೇರುತ್ತವೆ. ತೀರ್ಥಹಳ್ಳಿಯ ಸಾಹಿತಿ ಶ್ರೇಷ್ಠರಲ್ಲೋರ್ವರಾದ “ನಾಗಾನಂದ” ಕಾವ್ಯನಾಮದ ಡಾ. ಟಿ. ವಿಶ್ವನಾಥರಾಯರ ಕಥೆಗಳನ್ನು ಓದಿರುವ ರಮಾವತಿಯವರಿಗೆ ಅವರ ಕುರಿತು ಕೌತುಕಮಯ ಕುತೂಹಲ. ನಾಗಾನಂದರವರಾದರೋ (ಜನನ–1917) ವೈದ್ಯರಾಗಿ ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸಿದ್ದವರು. ಅಂದಿನ ಕಾಲದಲ್ಲೇ ಅಂತರ್ಜಾತಿ ವಿವಾಹವಾದ ದಂಪತಿಗೆ ಜನಿಸಿದ್ದ ಇವರು ಬಾಲ ವಿಧವೆಯನ್ನು ಮರುವಿವಾಹವಾದವರು. ವೈವಿಧ್ಯಮಯ ಪ್ರಕಾರಗಳಲ್ಲಿ ಸಾಹಿತ್ಯ ರಚನೆ ಮಾಡಿರುವವರು.

ಸುಪ್ರಸಿದ್ಧ ಅಮೆರಿಕನ್ ಲೇಖಕಿ ಲಾರಾ ಇಂಗೆಲ್ಸ್ ವೈಲ್ಡರ್‌ರವರ ಕೃತಿಗಳನ್ನು ಕನ್ನಡಕ್ಕೆ ಎಸ್. ಅನಂತ ನಾರಾಯಣರವರು ಅನುವಾದಿಸಿರುವ “ದೊಡ್ಡ ಕಾಡಿನಲ್ಲಿ ಪುಟ್ಟ ಮನೆ” ಮುಂತಾದ ಒಂಬತ್ತೂ ಸರಣಿಗಳನ್ನು ಓದಿ ಅಪಾರವಾಗಿ ಮೆಚ್ಚಿಕೊಂಡಿರುವುದು ರಮಾವತಿಯವರ ಓದಿನ ವಿಶಾಲ ಹರಿವಿಗೊಂದು ನಿದರ್ಶನ. ಹಿಂದೆಲ್ಲಾ ಇವರಿಗೆ ಪುಸ್ತಕಗಳ ಲಭ್ಯತೆ ಕಷ್ಟವಾಗುತ್ತಿತ್ತಾದರೂ ಈಗ ಅಂತಹ ಸನ್ನಿವೇಶವಿಲ್ಲ. “ನಮ್ಮಮ್ಮನ ಕೈಯ್ಯಲ್ಲಿ ದುಡ್ಡಿತ್ತು ಎಂದರೆ ಪುಸ್ತಕಗಳಿಗಾಗಿ ಸಾವಿರಾರು ರೂಪಾಯಿಗಳನ್ನು ಖರ್ಚು ಮಾಡಲು ಅವರು ತುದಿಗಾಲಲ್ಲಿ ನಿಂತಿರುತ್ತಾರೆ”, ಎಂದು ತಮ್ಮಮ್ಮನ ಬಗ್ಗೆ ಪ್ರೀತಿಯಿಂದ ಹೇಳುತ್ತಾರೆ ಮಗಳು ನಿರ್ಮಲಾ. ಅಂತೆಯೇ ಇದುವರೆವಿಗೂ ಸಾವಿರಾರು ಪುಸ್ತಕಗಳನ್ನು ಓದಿದ್ದಾರೆ ಹಾಗೂ ಸಂಗ್ರಹಿಸಿದ್ದಾರೆ. “ನಾನು ದಿನ ಪತ್ರಿಕೆಯಲ್ಲಿ ಮೊದಲಿಂದ ಕೊನೆಯವರೆಗೂ ಏನನ್ನೂ ಬಿಡದೆ ಓದುತ್ತೇನೆ, ಎಂದೂ ಓದದೇ ಇರುವ ಒಂದು ವಿಷಯವೆಂದರೆ ಅದು ‘ದಿನ ಭವಿಷ್ಯ’. ಆಗುವುದೆಲ್ಲಾ ಆಗಿಯೇ ತೀರುವಾಗ ಭವಿಷ್ಯ ಓದುವುದೇಕೆ ಎಂದು ಅದನ್ನು ಮಾತ್ರ ನಾನು ಎಂದೂ ಓದಿಲ್ಲ” ಎಂದು ಇವರೆನ್ನುವಾಗ ಓದುವಿಕೆ ಇವರಲ್ಲಿ ಮೈಗೂಡಿಸಿರುವ ವೈಚಾರಿಕತೆ ಸ್ಪಷ್ಟವಾಗುತ್ತದೆ. ಕ್ರೀಡೆ ತಮಗೆ ಆಸಕ್ತಿಯ ವಿಷಯವಲ್ಲವಾದರೂ ತಾನು ಕ್ರೀಡಾ ಪುರವಣಿಯನ್ನೂ ಓದುತ್ತೇನೆ ಎನ್ನುವ ಇವರು ಕ್ರಿಕೆಟ್ ಆಟಗಾರರ ಕುರಿತು ಮಾತನಾಡಬಲ್ಲರು. ಇದು ಓದಿನೆಡೆಗಿನ ಅವರ ವ್ಯವಧಾನಕ್ಕೊಂದು ನಿದರ್ಶನ. ಇಂದಿಗೂ ಕೂಡ ಗೃಹಕೃತ್ಯ ನಿರ್ವಹಣೆಯ ಕೆಲಸಗಳೆಡೆಯ ಅಲ್ಪ ಬಿಡುವಲ್ಲೂ ಕೈಯ್ಯಲ್ಲಿ ಪುಸ್ತಕ ಹಿಡಿವ ಅದೇ ತನ್ಮಯತೆಯನ್ನು ಪೋಷಿಸಿಕೊಂಡು ಬಂದಿರುವುದು ರಮಾವತಿಯವರ ಹೆಗ್ಗಳಿಕೆ.

ಶ್ರೀಮತಿ ರಮಾವತಿ


ಐದನೇ ತರಗತಿಯ ಓದಿಗೆ ವಿದ್ಯಾಭ್ಯಾಸ ಕೊನೆಗೊಂಡಿದ್ದ ರಮಾವತಿಯವರು ತಮ್ಮ ಮಕ್ಕಳ ಶಾಲಾ ಓದಿನ ಪಠ್ಯ ಪುಸ್ತಕದ ನೆರವಿನಿಂದ ಸಂಸ್ಕೃತ ಹಿಂದಿ ಭಾಷೆಗಳನ್ನೂ ಓದಲು ಬರೆಯಲು ಕಲಿತವರು. ಮತ್ತೊಂದು ಅವರ ಅನುಕರಣೀಯ ಗುಣವೆಂದರೆ, ತಮ್ಮ ಬಳಿ ಇರುವ ಪುಸ್ತಕ ಅದೆಷ್ಟೇ ಹಳೆಯದಾದರೂ ಅದನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದು. ಪುಸ್ತಕ ಕೈ ಸೇರುತ್ತಲೇ ಅದರಲ್ಲಿ ತಮ್ಮ ಹೆಸರು ಮತ್ತು ದಿನಾಂಕ ಬರೆಯುವ ಇವರು ಪುಸ್ತಕ ಓದಲು ಕೈಗೆತ್ತಿಕೊಳ್ಳುವಾಗ ಅದು ಕೊಳೆಯಾಗಬಾರದೆಂದು ಕೈ ತೊಳೆದು ಪುಸ್ತಕ ಹಿಡಿಯುತ್ತಾರೆಂದರೆ ಪುಸ್ತಕಗಳ ಬಗೆಗಿನ ಇವರ ಕಾಳಜಿ ಅರ್ಥವಾಗುತ್ತದೆ. ಕಸೂತಿ ಹೆಣಿಗೆಯ ಕರಕುಶಲತೆಯನ್ನೂ ಹಿಂದೆ ಮಾಡಿದ್ದವರು. ಮೊಮ್ಮಕ್ಕಳಿಗೆ ದಿನವೂ ಬಿಡದೆ ಕಥೆ ಹೇಳಿ ರಂಜಿಸಿದ್ದ ಇವರು ತಮಗೆ ಗೊತ್ತಿರುವ, ಓದಿದ, ಹೇಳಿದ್ದ ಮಕ್ಕಳ ಕತೆಗಳನ್ನು ಮುಂದೆ ಮರಿಮಕ್ಕಳಿಗಾಗಿ ಬಳಸಿಕೊಳ್ಳಲು ಅನುವಾಗಲೆಂದು ಬರೆದಿಟ್ಟಿದ್ದಾರೆ.

ಪುಸ್ತಕದ ಓದು ರಮಾವತಿಯವರ ಮನೋಲೋಕವನ್ನು ವಿಸ್ತಾರಗೊಳಿಸಿದೆ. ಭಾವಲೋಕವನ್ನು ಶ್ರೀಮಂತಗೊಳಿಸಿದೆ. ತಿಳಿವಳಿಕೆಯೊಂದಿಗೆ ಮನೋದಾರ್ಢ್ಯ ನೀಡಿದೆ. ಓದುವಿಕೆಯನ್ನು ಸಂಗಾತಿಯಾಗಿಸಿಕೊಂಡಿರುವ ಇವರಿಗೆ ಒಂಟಿತನ ಎಂದೂ ಕಾಡಿಲ್ಲ. ಕುಟುಂಬದವರನ್ನೇ ಕಳೆದುಕೊಳ್ಳಬೇಕಾದ ಕಡು ಕಷ್ಟಗಳ ಆಘಾತಗಳನ್ನೆದುರಿಸಬೇಕಾದ ಸಂದರ್ಭಗಳು ಇವರ ಬದುಕಲ್ಲಿ ಬಂದಿವೆ. ಅಂತಹ ಸಂದರ್ಭಗಳಲ್ಲಿ ಕುಗ್ಗಿ ಕುಸಿದು ಹೋಗದೇ ಮೇಲೆದ್ದು ಬರಲು ಇವರಿಗೆ ಸಹಾಯಕವಾದುದೇ ದಿವ್ಯಾಂಜನದಂತಹ ಓದುವಿಕೆ. ಇಂದು ಸೊಸೆ ಹಾಗೂ ಮೊಮ್ಮಗನೊಂದಿಗೆ ನೆಮ್ಮದಿಯಿಂದ ಬದುಕು ಸಾಗಿಸುತ್ತಿದ್ದಾರೆ. ಇನ್ನೋರ್ವ ಮಗಳು ನೀರಜ ಕೂಡ ತೀರ್ಥಹಳ್ಳಿಯ ಸಮೀಪದಲ್ಲೇ ವಾಸವಿದ್ದು ಅವರ ಸಾಂಗತ್ಯವೂ ಇವರಿಗೆ ಸಿಗುತ್ತಿರುತ್ತದೆ. ಅಪರೂಪದ ವೈಶಿಷ್ಟ್ಯತೆಯ “ಓದುಗುಳಿ” ರಮಾವತಿಯವರು ತಮ್ಮ ಬದುಕಿನ ಮುಂದಿನ ದಿನಗಳಲ್ಲೂ ಸಾಹಿತ್ಯದೊಲುಮೆ ತಮ್ಮನ್ನು ಅರಿವಿನ ಬೆಳಕಿನೆಡೆ ಸಾಗಿಸುತ್ತಾ ಬಾಳನ್ನು ಬೆಳಕಾಗಿರಿಸುತ್ತದೆಂಬ ಭರವಸೆ ಹೊಂದಿರುವವರು.

ಕೆ.ಆರ್.ಉಮಾದೇವಿ ಉರಾಳ

8 Comments on “ ಪುಸ್ತಕ ಲೋಕದ ಮಹತಿ, ಅರಿತವರು ಈ ‘ರಮಾವತಿ’

  1. ರಮಾವತಿಯವರನ್ನು ಪರಿಚಯಿಸಿದ್ದಕೆ ಧನ್ಯವಾದ. ಓದಿ ಖುಷಿಯಾಯಿತು.
    ಇವರ ಸಾಹಿತ್ಯಾಸಕ್ತಿ ನಮಗೆಲ್ಲ ಆದರ್ಶ; ಭಗವಂತ ನೂರ್ಕಾಲ ಚೆನ್ನಾಗಿಟ್ಟಿರಲಿ.
    ನಿಜಕೂ ಇವರು ಮಹತಿಯೇ….ಮಹತ್ವದ ಮಾಹಿತಿ. ವಂದನೆ ನಿಮಗೆ

  2. ಲೇಖನ ಪ್ರಕಟಿಸಿಕುವುದಕ್ಕಾಗಿ ತುಂಬಾ ಧನ್ಯವಾದಗಳು.

  3. ಬರೆಹಗಾರರ ಕುರಿತು ಬರೆಯುವಷ್ಟೇ ಕಾಳಜಿಯಿಂದ ಒಬ್ಬ ಒಳ್ಳೆಯ ಓದುಗರನ್ನೂ ಪರಿಚಯಿಸುವ ವಿಭಿನ್ನ ಮನಮುಟ್ಟುವ ಲೇಖನ.

  4. ರಮಾವತಿಯವರ ಆದಮ್ಯ ಓದುವ ಹಂಬಲ, ಅವರ ಸರಳ ವ್ಯಕ್ತಿತ್ವ ಇತ್ಯಾದಿಗಳನ್ನು ಕಟ್ಟಿಕೊಟ್ಟ ಲೇಖನ ಅಸಕ್ತಿದಾಯಕವಾಗಿದೆ.

  5. “ಓದುಗುಳಿ” ರಮಾವತಿಯವರ ಬಗ್ಗೆ ಓದಿ ಬಹಳ ಸಂತೋಷವಾಯಿತು.
    ಈ ಓದುಗುಳಿ ರಮಾವತಮ್ಮ ನನ್ನ ಅಮ್ಮನ ಮನೆಯ ಪಕ್ಕದ ಮನೆಯವರು. ನಾನು ಚಿಕ್ಕವಳಿದ್ದಾಗ ನನಗೆ ನನ್ನ ಅಜ್ಜನಿಗೆ ಪೇಪರ್ ಓದಿ ಹೇಳುವ ನೆಪದಿಂದ ಓದುವ ಹವ್ಯಾಸ ಬೆಳೆದಿತ್ತಾದರೂ ಪುಸ್ತಕಗಳನ್ನು ಕೊಂಡು ಓದುವ ಅನುಕೂಲ ಸ್ಥಿತಿ ಇರಲಿಲ್ಲ. ಆ ಕಾಲಕ್ಕೆ ರಮಾವತಮ್ಮನಿಂದ ಪುಸ್ತಕಗಳನ್ನು ತಂದು ನನ್ನಜ್ಜನಿಗೆ ಎಳೆಯರ ರಾಮಯಣ, ಕಿಶೋರ ಭಾರತ ಓದು ಹೇಳುತ್ತಿದ್ದುದಲ್ಲದೆ, ಮಯೂರ, ಕಸ್ತೂರಿ, ತುಷಾರದಂತಹ ಮಾಸಿಕಗಳನ್ನೂ ಓದಿದ್ದು ಇನ್ನೂ ಮನದಲ್ಲಿ ಅಚ್ಚೊತ್ತಿದೆ. ಆದರೆ ಅವರಂತೆ ನೆನಪಿನ ಸಾಮರ್ಥ್ಯ ನನಗಿಲ್ಲ. ನಿರ್ಮಲ ಹೇಳಿದಂತೆ ಅವರ ನೆನಪಿನ ಶಕ್ತಿ ಅಗಾಧ. ನನ್ನಮ್ಮನ ವಾರಿಗೆಯವರಾದ ಇವರು ಇಳಿವಯಸ್ಸಿನಲ್ಲಿ ಸಹ ಎಲ್ಲಾ ನೆನಪಿಟ್ಟುಕೊಂಡಿರುವುದನ್ನು ನೋಡಿದಾಗ ಅವರೊಂದು ವಿಸ್ಮಯವೆಂಬುದರಲ್ಲಿ ಸಂಶಯವೇ ಇಲ್ಲ.

  6. ಇವರ ಬಗ್ಗೆ ಲೇಖನ ಓದಿ ಬಹಳ ಸಂತೋಷ ವಾಯಿತು ಅವರು ಎಲೆ ಮರೆ ಯ ಕಾಯಿತರ ಅವರ ಮನೆಗೆ ಹೋದಾಗ ಅದರ ಅತಿತ್ಯ ಬಾಯಿತುಂಬಾ ಮಾತು ಉಟೋಪಚಾರ ಯಲವನು ನೋಡಿ ಅನುಭವಿಸಿರುತೇನೆ ಆದರೆ ಅವರ ಸಾಹಿತ್ಯ ಆಸಕ್ತಿ ಲೇಖನ ಓದಿದಮೇಲೆ ಗೊತ್ತಾಗಿರುವುದು ಇತ್ತಿ ಚೆಗೆ ಅವರಮನೆಗೆ ಹೋಗಲು ಪುರುಸೊತ್ತಾಗುತ್ತಿಲವಲ್ಲ ಎಂದು ಬೇಸರವಿದೆ ಅವರಿಗೆ ಯಲ್ಲ ಹಳೆಯ ನೆನಪುಗಳು ತುಂಬಾ ಜಾಸ್ತಿ ಅದರ ಔದರ್ಯ ಅತಿತ್ಯ ದಲ್ಲಿ ಅವರನ್ನು ಮೀರಿಸುವವರಿಲ್ಲ ಅವರು ನನ್ನ ಚಿಕಮ್ಮ ಆದರೂ ಅವರಬಗೆ ತಿಳಿದುಕೊಳ್ಳಲು ಲೇಖನ ಓದಬೇಕಾಯಿತು ಎಂದು ಬೇಸರವಾಯಿತು ಹಾಗೆ ಅವರ ಮಕಳು ನಿರ್ಮಲ ನೀರಜ ಇಬರು ಅತಿತ್ಯಾದಲ್ಲಿ ಅಮ್ಮಂನಂತೆ ಏತಿದಕೈ ಅವರುಗಳ ಮನೆಗೆ ಹೋಗಲು ನನಗೆ ಆಗುತ್ತಿಲವಲ್ಲ ಎಂದು ಬೇಸರವಿದೆ ಲೇಖನದ ಮುಖೆನ ಪರಿಚಿಸಿದಕ್ಕೆ ಲೇಖನ ಬರೆದವರಿಕೆ ಧನ್ಯವಾದ ಗಳು

Leave a Reply to ನಯನ ಬಜಕೂಡ್ಲು Cancel reply

 Click this button or press Ctrl+G to toggle between Kannada and English

Your email address will not be published. Required fields are marked *