ಪೌರಾಣಿಕ ಕತೆ

ಕಾವ್ಯ ಭಾಗವತ 41: ಸಮುದ್ರ ಮಥನ –3

Share Button

41.ಅಷ್ಟಮ ಸ್ಕಂದ – ಅಧ್ಯಾಯ -2
ಸಮುದ್ರ ಮಥನ -3

ಅಮೃತ ಪ್ರಾಪ್ತಿಯ ಮಹದಾಸೆ
ದೀರ್ಘ ದ್ವೇ಼ಷಿ ದೇವ ಅಸುರರ
ಒಂದಾಗಿಸಿ ಮಂದರ ಪರ್ವತವ ಮೀಟಿ
ಮೇಲಕೆತ್ತಿ
ಕ್ಷೀರ ಸಾಗರದೆಡೆಗೆ ಸಾಗುತಿರಲು
ಅನಿತಿ ದೂರಕೆ
ಬಳಲಿ ಬೆಂಡಾಗಿ, ಭಾರ ಹೊರಲಾರದೆ
ಮಂದರ ಪರ್ವತವ
ಕೈಬಿಟ್ಟು ನೆಲಕ್ಕೆ ಹಾಕಿದಾಗ
ಬಹುಪಾಲು ದೇವ ದಾನವರು
ನುಗ್ಗಾಗಿ ಕೈಕಾಲು ಮುರಿದು
ಬಳಲುತಿರೆ
ದಯಾನಿಧಿ ಭಗವಂತನೊಂದು
ಕೃಪಾಕಟಾಕ್ಷದಿಂ ಸ್ವಸ್ತರಾಗಿ
ಬಂದರೂ ಮಂದರ ಪರ್ವತವ
ಮುಂದೆ ಸಾಗಿಪ
ಕಠಿಣ ಕಾರ್ಯ
ದೇವದಾನವರಿಗಸಾಧ್ಯ ಎಂದರಿತ
ನಾರಾಯಣ ತನ್ನ
ಒಂದೇ ಕೈಯಿಂದ
ಪರ್ವತವನ್ನೆತ್ತಿ ಗರುಡನ ಹೆಗಲ ಮೇಲಿಟ್ಟು
ಸಮುದ್ರ ಮಧ್ಯದಲ್ಲಿಡಲು
ಅಜ್ಞಾಪಿಸಿದಂತೆ ಗರುಡ
ಮಂದರ ಪರ್ವತವ
ಕ್ಷೀರ ಸಾಗರ ಮಧ್ಯದಲ್ಲಿರಿಸಿ
ನಿರ್ಗಮಿಸಿದ ಪರಿ
ಅದ್ಭುತ

ಸರ್ಪರಾಜ ವಾಸುಕಿಗೂ
ಅಮೃತದಾಸೆ ಹುಟ್ಟಿಸಿ
ಅವನ ದೇಹವ ಮಂದರ ಪರ್ವತಕೆ
ಹಗ್ಗವಾಗಿಸಿ ದೇವತೆಗಳು ವಾಸುಕಿಯ
ಮುಖಭಾಗವ ಹಿಡಿಯುವುದ
ಒಪ್ಪದ ದಾನವರ ಹಠಕ್ಕೆ
ಒಪ್ಪಿ ದಾನವರೇ ಮುಖಭಾಗವ ಹಿಡಿವಂತೆ ಮಾಡಿ
ದೇವತೆಗಳು ಬಾಲ ಹಿಡಿದು
ಸಮುದ್ರವ ಕಡೆಯಲಾರಂಭಿಸಿದಿರೂ
ಪರ್ವತವು ಕ್ರಮ ಕ್ರಮವಾಗಿ ತಳಕ್ಕಿಳಿದು
ನಿಂತಾಗ, ಭಗವಂತನು
ತನ್ನ ಕೂರ್ಮಾವತಾರದ
ರೂಪವ ತೋರುತ್ತ
ಪರ್ವತವ ತನ್ನ
ಹೆಗಲಮೇಲೇರಿಸಿಕೊಂಡು
ದೇವ ದಾನವರ ಅಮೃತ ಮಂಥನಕೆ
ಬೆಂಬಲಿಸಿದರೂ
ವಾಸುಕಿಯ ಆಯಾಸದ
ಬಿಸಿಯುಸಿರು ದಾನವರ ದೃತಿಗೆಡೆಸಲು
ಇಂದ್ರ ವಾಹನನಾದ ಮೇಘಗಳ
ತಂಪಾದ ವೃಷ್ಠಿಯಿಂ
ಸಮುದ್ರತೀರದಿಂ ಬಂದ
ತಂಪಾದ ಗಾಳಿ ಬೀಸೆ
ಆಯಾಸ ಶಮನವಾಗಿ
ಬಹುಕಾಲ ಪರ್ವದಿಂ
ಕಡಲ ಕಡೆದರೂ
ಫಲಿತಾಂಶ ಶೂನ್ಯವಾಗಿ
ಬೇಸರಿಸೆ
ಪರಮಾತ್ಮನೂ
ದೇವ ದಾನವರೊಡಗೂಡಿ
ಸಮುದ್ರ ಮಂಥನವ ಮಾಡೆ
ಅದರ ವೇಗಕೆ
ಹಾಲಾಹಲ ಉತ್ಪತ್ತಿಯಾಗಿ
ವಿಷದ ಜ್ವಾಲೆಯ ಸಹಿಸಲಾಗದೆ
ಜಗದ ಜೀವಿಗಳು ಕಂಗಾಲಾಗಿ
ಕೈಲಾಸವಾಸಿ ಸದಾಶಿವನೊಬ್ಬನೇ
ಈ ಕಾಲಕೂಟ ವಿಷದಿಂದ
ತಲ್ಲಣಿಪ ಮೂರು ಲೋಕವಂ
ಸಂರಕ್ಷಸಲು ಸಮರ್ಥನೆಂದವನ
ಮೊರೆಹೋಗೆ
ಕರುಣಾಳು ಮಹದೇವ
ಹಾಲಾಹಲ ಮಹಾವಿಷವ
ಅಂಗೈಯಲ್ಲಿ ಆಕರ್ಷಿಸಿ
ಆಪೋಷಣಗೊಂಡು ಕುಡಿದುಬಿಟ್ಟನು

ಆ ಘೋರ ವಿಷವು
ಕಂಠ ಪ್ರದೇಶದಿಂದೊಳಕ್ಕೆ
ಇಳಿಯದಂತೆ
ಶಿವನರ್ಧಾಂಗಿ ಪಾರ್ವತಿಯು
ತನ್ನ ಅಮೃತಕರಗಳಿಂ ಶಿವನ
ಕಂಠಪ್ರದೇಶವ ಸ್ಪರ್ಷಿಸಲು
ಹಾಲಹಾಲ ವಿಷವು
ಅಲ್ಲೇ ಕೃಷ್ಣವರ್ಣದಿಂ ನಿಂತು
ಜಗಕೆಲ್ಲ ಶುಭಕರ ಚಿಹ್ನೆಯಾಗಿ
ಕಂಗೊಳಿಸಿತು

ಕಾವ್ಯ ಭಾಗವತ ಸರಣಿಯ ಹಿಂದಿನ ಪುಟ ಇಲ್ಲಿದೆ :  http://surahonne.com/?p=42463
(ಮುಂದುವರಿಯುವುದು)

-ಎಂ. ಆರ್.‌ ಆನಂದ, ಮೈಸೂರು

10 Comments on “ಕಾವ್ಯ ಭಾಗವತ 41: ಸಮುದ್ರ ಮಥನ –3

  1. ಸಮುದ್ರ ಮಥನದ ಸಾರಾಂಶವನ್ನು ಸೊಗಸಾಗಿ ಕವನದಲ್ಲಿ ಕಟ್ಟಿಕೊಟ್ಟಿದ್ದೀರಿ.

    1. ನಿರಂತರವಾಗಿ ಪ್ರಕಟಿಸುತ್ತಿರುವುದಕ್ಕೂ, ತಮ್ಮ ಮೆಚ್ಚುಗೆಗೂ ವಂದನೆಗಳು.

  2. ಸಮುದ್ರ ಮಥನ, ಕೂರ್ಮಾವತಾರದ ಕಥೆಗಳು ಸರಳ ಕಾವ್ಯ ರೂಪದಲ್ಲಿ ಮುದನೀಡಿದವು.

    1. ಧನ್ಯವಾದಗಳು ತಮ್ಮ ಪ್ರತಿಕ್ರಿಯೆಯಾಗಿ

  3. ಹಾಲಹಾಲ ಉತ್ಪತ್ತಿಯಾಗುವ ಪರಿ ಹಾಗೂ ಅದ ನಿಯಂತ್ರಿಸಿದ ರೀತಿಯ ವಿವರಿಸುವ ಭಾಗವತದ ಕಾವ್ಯ ಸೊಗಸಾಗಿದೆ.

    1. ವಂದನೆಗಳು ತಮ್ಮ ಮೆಚ್ಚುಗೆಗಾಗಿ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *