ಬೆಳಕು-ಬಳ್ಳಿ

ಧೈರ್ಯ ಬಂದೀತು ಬಾಳಿಗೆ

Share Button

ನೂರು ಅಳುವಿನ ನಡುವೆ
ನಗುವೊಂದುಮೂಡಿದರೆ
ಧೈರ್ಯ ಬಂದೀತು ಬಾಳಿಗೆ//

ಬಣಗುಡುವ ನೆಲದಲ್ಲಿ
ಹನಿಎರಡು ಹನಿಸಿದರೆ
ಮೊಳೆದೀತು ಬೀಜ ನಾಳೆಗೆ//

ಕತ್ತಲಿನ ಜಗದಲ್ಲಿ
ಮಿಂಚೊಂದು ಬೆಳಗಿದರೆ
ಬೆಳಕು ಕಂಡೀತು ಲೋಕಕೆ//

ಬಾಯಾರಿ ಬೆಂದಾಗ
ನೀರಸೆಲೆ  ಚಿಮ್ಮಿದರೆ
ದಾಹ ನೀಗೀತು ಜೀವಕೆ//

ನಿಷ್ಕರುಣ ಮನದಲ್ಲಿ
ತುಸು ಕರುಣೆ ಹುಟ್ಟಿದರೆ
ಶಾಂತಿ ದೊರಕೀತು ಧರಣಿಯಲ್ಲಿ//

ಸೋಲುಗಳ ಸಾಲಿನಲಿ
ಗೆಲುವ ಎಳೆ ಕಾಣಲು
ಹೊಮ್ಮೀತು ಉತ್ಸಾಹ ಬಾಳಿನಲ್ಲಿ//

ಕಷ್ಟದ ಶರಧಿಯಲಿ
ಸುಖದ ನಾವೆಯು ಸಿಗಲು
ಸೇರೀತು ಗುರಿಯ ಬದುಕಿನಲ್ಲಿ//

ಹಸಿವಿನಲಿ ಬೆಂದಿರಲು
ಹಿಡಿಯನ್ನ ದೊರೆತಾಗ
ನಲಿದೀತು ತನುಮನವು ತೃಪ್ತಿಯಲ್ಲಿ//

ಇಲ್ಲಗಳ ನಡುವಲ್ಲಿ
ಇದೆಎಂದು ತಿಳಿದಾಗ
ಭರವಸೆಯು ಬಂದೀತು ಬದುಕಿನಲ್ಲಿ//

ಶುಭಲಕ್ಷ್ಮಿ ಆರ್ ನಾಯಕ

4 Comments on “ಧೈರ್ಯ ಬಂದೀತು ಬಾಳಿಗೆ

  1. ನಿಮ್ಮ ಇನ್ನೊಂದು ಕವಿತೆ ಕಂಡು ಖುಷಿಯಾಯಿತು. ನಾನಿನ್ನೂ ಕಳೆದ ವಾರದ ಕವಿತೆಯ ಗುಂಗಿನಿಂದ ಈಚೆ ಬಂದಿರಲಿಲ್ಲ!

    ನೂರು ನೋವಿನ ನಡುವೆ ಒಂದು ನಗೆಯು ಕಾಡಿ……..ಎಂಬ ಈ ಕಾಲದ ಅತ್ಯುತ್ತಮ ಭಾವಗೀತರಚನಾಕಾರರಾದ ಶ್ರೀ
    ರವೀಂದ್ರನಾಯಕ್‌ ಸಣ್ಣಕ್ಕಿಬೆಟ್ಟು ಅವರ ಹಾಡನ್ನು (ನಂಗಿಷ್ಟ) ಗುನುಗಿಕೊಳ್ಳುವ ವೇಳೆಯಲೇ ನಿಮ್ಮದು ಅವತರಿಸಿದೆ.
    ಚೆನ್ನಾಗಿದೆ, ಖುಷಿಯಾಯಿತು. ಸರಳವೂ ಸುಂದರವೂ ಅರಿವಿನ ವಿಸ್ತರವೂ ಆಗಿದೆ.

    ಇಲ್ಲಗಳ ನಡುವಲ್ಲಿ ಇದೆ ಎಂದು ತಿಳಿದಾಗ…..! ಆಹಾ, ಎಂಥ ಸಾಲು. ಕಣ್ತೆರೆಸುವ ಆಳದ ಅರ್ಥ ಹುದುಗಿದ ಕಡಲು !!

    ಪ್ರತಿ ಸಾಲಿನಲಿ ಬಂದಿರುವ ಕ್ರಿಯಾಪದದತ್ತ ನನ್ನ ಗಮನ ಹೋಯಿತು. ಬಂದೀತು, ಮೊಳೆದೀತು, ದೊರಕೀತು ಎಂಬಂಥವು
    ಕೇವಲ ಕ್ರಿಯೆಯನ್ನು ಹೇಳುತ್ತಿಲ್ಲ; ಬದುಕಿನ ಆಶಾವಾದದ ಆಸರೆಯನ್ನು ಪ್ರತಿಪಾದಿಸುತ್ತಿದೆ. ಕವಿಜೀವವೇ ಹೀಗೆ.
    ಅದು ಯಾವತ್ತೂ ತನ್ನ ಪಾಡುಗಳ ಹಾಡು ಮಾಡುವ ಕಾಯಕದಲ್ಲಿ ತಲ್ಲೀನ.

    ಇಂದಲ್ಲ, ನಾಳೆ, ಹೊಸ ಬಾನು ಬಗೆ ತೆರೆದೀತು; ಸುರಿದೀತು ಮುಗಿಲ ಬಳಗ! ಎನ್ನುತ್ತಾರೆ ಅಡಿಗರು ತಮ್ಮ ಅಮೃತವಾಹಿನಿ
    ಯೊಂದು ಹರಿಯುತಿದೆ ಮಾನವನ ಎದೆಯಿಂದ ಎದೆಗೆ ಸತತ ಎಂದು ಬರುವ ಸಾಲುಗಳಲ್ಲಿ !

    ಹೀಗೆ ಕವಿಯ ಹೃದಯವೊಂದು ವೀಣೆ; ಲೋಕವದನೆ ಮಿಡಿವುದು (ಕವಿ ಕುವೆಂಪು)

    ಬರೆದ ನಿಮಗೆ ಮತ್ತು ಓದಿಸಿದ ಸುರಹೊನ್ನೆಗೆ ವಂದನೆಗಳು.

  2. ಇಲ್ಲಗಳ ನಡುವಲ್ಲಿ ಇದೆಯೆಂದು ತಿಳಿದಾಗ ಭರವಸೆಯು ಬಾಳಿನಲ್ಲಿ ಮೂಡುವ ಆಶಯದೊಂದಿಗೆ ಮೂಡಿದ ಕವನವು ತನ್ನೊಳಗೆ ಒಳ್ಳೆಯ ಭರವಸೆಗಳನ್ನು ಹೊತ್ತು ತಂದಿದೆ!

  3. ಕತ್ತಲಲಿ ಬೆಳಕಿನ ರೇಖೆಯೊಂದು ಕಂಡಾಗ ಮೂಡುವ ಭರವಸೆಯನ್ನು ಕವಿತೆ ಹಲವಾರು ಉದಾಹರಣೆಗಳೊಂದಿಗೆ ಶಕ್ತಿಯುತವಾಗಿ ಬಿಂಬಿಸಿದೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *