
ಒಲವಲ್ಲಿ ತೇಲಿಬಿಡು
ಗೆಲುವಾಗಿ ಇದ್ದುಬಿಡು
ಸುತ್ತ ಹಸಿರು ರಾಶಿಯ
ನಡುವೆ ಕುಳಿತಾಗ ಒಮ್ಮೆ
ತೂಗಿ ಬಿಡು ತಂಗಾಳಿಯೇ…….
ಹಕ್ಕಿ ಗೂಡೊಳಗೆ
ಕೂತು ಕೂಗುವ
ಹಾಡಿಗೆ ರಾಗ ಸೇರಿಸಿ
ಚೆಲುವಾಗಿ ಒಮ್ಮೆ
ಬೀಸಿ ಬಿಡು ತಂಗಾಳಿಯೇ….
ಮರೆತ ಮಾತೊಂದು
ನೆನಪಾಗಿ ಉಳಿವಂತೆ
ಬೀಜವೊಂದು ಸಸಿಯಾಗಿ
ಬೆಳೆವಾಗ ಮಣ್ಣ ಮಡಿಲಲ್ಲಿ
ಹರಡಿಬಿಡು ತಂಗಾಳಿಯೇ….
ಎಳೆ ಕಂದನ ನಗುವಿಗೆ
ನಸು ನಗುವ ಪಲ್ಲವಿಗೆ
ಹೂವನ್ನು ಚೆಲ್ಲಿಬಿಡು
ಒಮ್ಮೆ ಗಾಳಿಯಾಗಲಿ ಗಂಧ
ತಂಪು ತುಂಬಲಿ ತಂಗಾಳಿಯೇ…..
ಮುಗಿಲು ಹೇಳುವ ಮಾತಿಗೆ
ನೀನೊಂದು ಸೋಜಿಗ
ಸುತ್ತ ಇರಲಿ ತಿಳಿಗಾಳಿ
ನಿನ್ನ ಪರಿಚಯದ ಬಳಗ
ಹಂಚಿಬಿಡು ಒಳಿತು ತಂಗಾಳಿಯೇ……
–ನಾಗರಾಜ ಬಿ. ನಾಯ್ಕ ,
ಹುಬ್ಬಣಗೇರಿ.ಕುಮಟಾ.
ಸರಳವಾದ ಸುಂದರ ಕವನ
ಓದಿನ ಧನ್ಯತೆಯ ಅನಿಸಿಕೆಗೆ ಧನ್ಯವಾದಗಳು
ನಿಮ್ಮ ಮನವಿಯಂತೆ ತಂಗಾಳಿ ಸುಳಿದಾಡಿಬಿಡಲಿ. ಚಂದದ ಕವಿತೆ.
ಓದಿನ ಖುಷಿಗೆ ಅನಿಸಿಕೆಗೆ ಧನ್ಯವಾದಗಳು…….
ನಿಸರ್ಗದ ಮೇಲಿನ ಒಲವು, ಕವನದ ಚೆಲುವನ್ನು ಇಮ್ಮಡಿಸಿದೆ…
ಧನ್ಯವಾದಗಳು ಅನಿಸಿಕೆಗೆ
ಈ ಕವಿತೆಯಲಿ ಬಂದಿರುವ ಕ್ರಿಯಾಪದಗಳತ್ತ
ನನ್ನ ಗಮನ ಬಿತ್ತು. ಕ್ರಿಯೆಯೇ ಈ ಪದ್ಯಪಾದಗಳ
ಸ್ಥಾಯಿ ಭಾವ. ಈ ಕವಿಯ ಕೈ ಹಿಡಿದು ನಡೆಸಿರುವುದು
ಕಾರುಣ್ಯವೆಂಬ ತಾಯಿ ಭಾವ. ಗ್ರೇಟ್ ಸರ್. ಚೆನ್ನಾಗಿದೆ.
ನನ್ನ ವಿದ್ಯಾರ್ಥಿಗಳಿಗೆ ಪಾಠ ಮಾಡುವಾಗ ಇದನ್ನು
ಬಳಸಿಕೊಂಡು, ಅರ್ಥ ಮಾಡಿಸಲು ಪ್ರಯತ್ನಿಸಿದೆ.
ಅವರಿಗೂ ಇಷ್ಟವಾಯಿತು. ಇದಕ್ಕಾಗಿ ಇನ್ನೊಂದು ಧನ್ಯವಾದ.
ಸರ್ ಓದುವ ಓದು ಒಂದು ದೊಡ್ಡ ಸಾರ್ಥಕತೆ. ಆ ಓದನ್ನು ಸೂಕ್ಷ್ಮ ಸಂವೇದನೆಯ ನೆಲೆಯಲ್ಲಿ ನಿಂತು ನೋಡುವುದು ಇನ್ನೂ ವಿಶೇಷ. ಒಂದು ಖುಷಿಯ ಭಾವದೊಟ್ಟಿಗೆ ಬರೆದಾಗ ಮಾತ್ರ ಇನ್ನಷ್ಟು ಹೊಸದು ಹೆಚ್ಚುತ್ತದೆ. ತಮ್ಮ ವಿದ್ಯಾರ್ಥಿಗಳೊಟ್ಟಿಗೆ ಹಂಚಿಕೊಂಡ ಪ್ರಯತ್ನಕ್ಕೆ ಧನ್ಯವಾದಗಳು. ತಮ್ಮ ಅನಿಸಿಕೆ ಹಾಗೂ ಕವಿತೆಯ ಒಳನೋಟ ಇಷ್ಟವಾಗುವುದರೊಟ್ಟಿಗೆ ಒಂದಿಷ್ಟು ಭಾವಗಳನ್ನೂ ಕಟ್ಟಿಕೊಟ್ಟಿತು. ಖುಷಿ ಕೊಟ್ಟಿತು…… ತುಂಬಾ ತುಂಬಾ ಧನ್ಯವಾದಗಳು………
ಕವನ ಚಂದವಾಗಿದೆ. ತಂಗಾಳಿಯಲ್ಲಿ ತೂಗಿದಂತೆ.
ಧನ್ಯವಾದಗಳು ತಮ್ಮ ಓದಿಗೆ
ಅರ್ಥಪೂರ್ಣ ಕವಿತೆ
ನೈಸ್
ಧನ್ಯವಾದಗಳು ತಮ್ಮ ಅನಿಸಿಕೆಗೆ……
ಓದುಗರ ಮನದಲ್ಲೂ ಮೆಲ್ಲನೆ ತಂಗಾಳಿ ಬೀಸಿದ ಭಾವ..! ಉತ್ತಮ ಆಶಯವನ್ನು ಹೊತ್ತ ಕವನ ಚೆನ್ನಾಗಿದೆ.
ಧನ್ಯವಾದಗಳು ತಮ್ಮ ಓದಿಗೆ……
ಈ ಕವಿ ಭಾವ ಪ್ರಕೃತಿಯಂತೆ ಸಮೃದ್ಧ ಸಹಜವಾಗಿದೆ. ಕವಿ ಪ್ರಕೃತಿಯ ಬಗ್ಗೆ ಬರೆಯಲು ಹೊರಟಂತೆಲ್ಲಾ ಪ್ರಕೃತಿಯೇ ಆಗಿ ಬಿಡುವ ರೀತಿ ಸೋಜಿಗ.
ರಾಮಮೂರ್ತಿ ನಾಯಕ.
ಧನ್ಯವಾದಗಳು…….. ಪ್ರಕೃತಿಯ ನಿರೂಪಣೆಗಳಲ್ಲಿ ಹಲವು ಸಾಲುಗಳು ಜೀವಂತವಾಗುತ್ತದೆ…….. ಓದಿಗೆ ಧನ್ಯವಾದಗಳು…….