ಅಜ್ಜಿ ಮನೆ
ಟ್ಯಾಕ್ಸಿಯಿಂದ ಹಾರಿಬಂದ ರಿಚಾ ಮೈಸೂರಿನ ಚಾಮುಂಡಿಪುರಂನ ಅಜ್ಜಿ ಮನೆಯೊಳಗೆ ನುಗ್ಗಲು ಪ್ರಯತ್ನಿಸದಾಗಲೇ –
ಏ, ಮುದ್ದು, ಅಲ್ಲೇ ಇರು, ಆರತಿ ಮಾಡಿ ದೃಷ್ಠಿ ನಿವಾಳಿಸಿದ ನಂತರ ಒಳಗೆ ಬರುವೆಯಂತೆ, ಹನ್ನೊಂದು ವರ್ಷಗಳ ನಂತರ ಈ ಮನೆಗೆ ಬರುತ್ತಿದ್ದೀಯಾ – ಎನ್ನುತ್ತಾ ಪಕ್ಕದ ಮನೆಯ ಕಾಮಾಕ್ಷಮ್ಮನೊಡಗೂಡಿ ಆರತಿ ತಟ್ಟೆಯೊಂದಿಗೆ ಹೊರಬಂದರು ಅಜ್ಜಿ ಸಾವಿತ್ರಮ್ಮ.
ಅಜ್ಜೀ, ಏನಿದೆಲ್ಲಾ, ನಿನ್ನ, ತಾತನ್ನ ಬೇಗ ʼಹಗ್ʼ ಮಾಡ್ಕೋಬೇಕೂ – ಕ್ಯಾಲಿಫೋರ್ನಿಯಾದ ದೊಡ್ಡ ಕಂಪನಿಯೊಂದರ ಸಿ ಇ ಓ ಆಗಿ, ವಿದ್ಯಾ, ಬುದ್ಧಿ, ಪರಿಣಿತಿ, ಅಧಿಕಾರ, ಹಣ ಸಂಪಾದನೆ ಮುಂತಾದ ಎಲ್ಲಾ ಲೌಕಿಕ ವಿಚಾರಗಳಲ್ಲೂ ಸಾಧನೆ ಮಾಡಿ ಚಿಕ್ಕ ವಯಸ್ಸಿಗೇ ಸೈ ಎನಿಸಿಕೊಂಡಿದ್ದ ಮಿಸ್. ರಿಚಾ , ಅಜ್ಜಿ ತಾತನ ಮುಂದೆ ಮುದ್ದಿನ ಮೊಮ್ಮಗಳಾಗಿ ಲಲ್ಲೆಗೆರೆದಳು.
ಆಯ್ತು ಕಣೋ ಪುಟ್ಟಾ, ಒಂದೇ ನಿಮಿಷ, ನಾನು, ತಾತ, ಈ ಮನೆ, ಎಲ್ಲಾ ನೀನು ಬರ್ತೀಯಾ ಅಂತ ಎಷ್ಟು ಕಾಯ್ತಾ ಇದೀವಿ ಗೊತ್ತಾ, ಆದ್ರೂ ಸಂಪ್ರದಾಯ ಬಿಡಕ್ಕೆ ಆಗುತ್ತಾ ಹೇಳು – ಎನ್ನುತ್ತಾ, ಆರತಿ ಎತ್ತಿ, ʼಹಾದಿ ಕಣ್ಣು, ಬೀದಿ ಕಣ್ಣು ನನ್ನ ಕೂಸಿಗೆ ತಾಗದೇ ಇರಲಿʼ ಎಂದು ದೃಷ್ಠಿ ತೆಗೆದು ಆರತಿ ತಟ್ಟೆಯನ್ನು ಕಾಮಾಕ್ಷಮ್ಮನ ಕೈಗೆ ಕೊಡುತ್ತಾ ಒಳ ಬಂದ ರಿಚಾಳನ್ನು ಬರಸೆಳೆದಪ್ಪಿಕೊಂಡರು.
ಇಬ್ಬರ ಮೈಮನಗಳಲ್ಲೂ ಸುಬಧ್ರತೆಯ ಸಾರ್ಥಕಭಾವ ಪಸರಿಸಿ ರೋಮಾಂಚನವಾಯಿತು. ಕಣ್ಣುಗಳಲ್ಲಿ ಆನಂದ ಬಾಷ್ಪದ ಹನಿಗಳು ಮುತ್ತಾಗಿ ಕೆನ್ನೆಯ ಮೇಲೆ ಇಳಿಯ ಹತ್ತಿದವು.
ಎದುರಿಗೇ ನಿಂತಿದ್ದ ಗಂಗಾಧರಯ್ಯನವರು ಈ ಅಜ್ಜಿ-ಮೊಮ್ಮಗಳ ಪುನರ್ಮಿಲನವನ್ನು ಕಣ್ಣುತುಂಬಿಕೊಳ್ಳುತ್ತಿದ್ದರೂ ಯಾಕೋ ಚಡಪಡಿಸುತ್ತಿದ್ದರು.
ರಿಚಳ ಸೂಕ್ಷ್ಮ ಕಣ್ಣುಗಳಿಗದು ಗೋಚರಿಸಿ, ಅಜ್ಜಿಯ ತೆಕ್ಕೆಯಿಂದ ಆಚೆ ಬಂದು – ಹೇಗಿದ್ದೀರಿ ತಾತಾ? – ಎನ್ನುತ್ತಾ ಪ್ರೀತಿಯಿಂದ ಅಪ್ಪಿಕೊಂಡಳು.
ನಾನು ಚೆನ್ನಾಗಿದ್ದೀನಿ ಕೂಸೆ, ನೀನು ಹೇಗಿದ್ದೀಯಾ? ನಿನ್ನ ನೋಡಿದರೆ ತುಂಬಾ ತುಂಬಾ ಹೆಮ್ಮೆ ಅನ್ನಿಸುತ್ತೆ – ಎನ್ನುತ್ತಾ ಅಪ್ಪುಗೆಯಿಂದ ಬಿಡಿಸಿಕೊಂಡು ಅಭಿಮಾನದಿಂದ ತಲೆ ಸವರುತ್ತಾ – ಇಗೋ ತಿನ್ನು – ಎನ್ನುತ್ತಾ ಒಂದು ಪೊಟ್ಟಣ ಕೊಟ್ಟರು.
ಬಿಚ್ಚಿ ನೋಡಿದ ರಿಚಾ – ಓ ತಾತಾ, ನನ್ನ ಫೀವರೆಟ್ ಚಿಕ್ಕಿ, ಕಡ್ಲೇಕಾಯಿ ಮಿಠಾಯಿ, ನಾನು ಚಿಕ್ಕವಳಿದ್ದಾಗ, ದಿನಾ ನಿನ್ನ ಜೊತೆ ವಾಕಿಂಗ್ ಬರುವಾಗ ಕೊಡುಸ್ತಾ ಇದ್ದೀಯಲ್ಲಾ ಅದು! – ಎನ್ನುತ್ತಾ ದೊಡ್ಡ ತುಂಡೊಂದನ್ನು ಬಾಯಿಗೆ ಹಾಕಿಕೊಂಡು ಚಿಕ್ಕ ಮಗುವಿನ ಹಾಗೆ ಆಂ, ಊಂ, ಎಂದು ಕೆನ್ನೆ ಉಬ್ಬಿಸಿಕೊಂಡು ತಿನ್ನುವಾಗ ತಾತನ ಮೊಗ ಚಡಪಡಿಕೆಯಿಂದ ಬಿಡುಗಡೆಗೊಂಡು ಸಂತೃಪ್ತವಾದಂತೆನಿಸಿತು.
ಮುಂದಿನದೆಲ್ಲಾ ಬರೀ ಅಜ್ಜಿ ತಾತನ ಪ್ರೀತಿಯಲ್ಲಿ ಮಿಂದೆದ್ದ ದಿನಗಳವು. ಹರಳೆಣ್ಣೆ ಒತ್ತಿ ಹಂಡೆಯಲ್ಲಿ ಬಿಸಿನೀರು ಕಾಯಿಸಿ, ಸೀಗೇ ಪುಡಿ ಕಲಸಿ ಎಣ್ಣೇ ಸ್ನಾನ ಮಾಡಿಸಿದ್ದೇನು, ಅರಮನೆ, ಜ಼ೂ ಗಾರ್ಡನ್, ಕೆ.ಆರ್.ಎಸ್., ಬೆಟ್ಟ, ನಂಜನಗೂಡು, ಶ್ರೀರಂಗಪಟ್ಟಣ ಸುತ್ತಿದ್ದೇನು, ಒಬ್ಬಟ್ಟು ಆಂಬೊಡೆ, ಪಾಯಸ, ಒರಳುಕಲ್ಲಿನ ಕಾಯಿಸಾಸುವೆ ಚಿತ್ರಾನ್ನ ಮಾಡಿಸಿಕೊಂಡು ತಿಂದಿದ್ದೇನು, ಒಂದೇ, ಎರಡೇ . . . ಇದಲ್ಲದೆ ದಿನಕ್ಕೆ ೧೪-೧೫ ಗಂಟೆಗಳು ಅಜ್ಜಿ ಮೊಮ್ಮಗಳು ಮಾತನಾಡಿದ್ದೇ ಮಾತನಾಡಿದ್ದು. ಮಧ್ಯೆ ಮಧ್ಯೆ ತಾತನ ಎಕ್ಸಪರ್ಟ್ ಕಾಮೆಂಟ್ಸ್ ಅಥವಾ ಇವರುಗಳನ್ನು ರೇಗಿಸುತ್ತಾ ಕಾಲೆಳೆಯುತ್ತಿದ್ದುದು.
ಬೆಳಗ್ಗಿನಿಂದ ಏನೋ ಉತ್ಸಾಹದಲ್ಲಿ ಎಲ್ಲಾ ಮಾಡಿದರೂ ಸಂಜೆಯಾಗುತ್ತಾ ಅಜ್ಜಿ, ತಾತ ಇಬ್ಬರೂ ಸುಸ್ತಾಗುತ್ತಿದುದನ್ನು ನೋಡಿದರೆ ರಿಚಾಳಿಗೆ ಏನೋ ಒಂದು ರೀತಿಯ ಗಾಭರಿ, ಆತಂಕ ಆಗುತಿತ್ತು. – ಅಜ್ಜೀ, ತಾತ, ನೀವುಗಳು ಏನೂ ಮಾಡಬೇಡಿ, ರೆಸ್ಟ್ ಮಾಡಿ – ಎಂದರೆ, – ನೀನು ಊರಿಗೆ ಹೋದ ಮೇಲೆ ರೆಸ್ಟ್ ಮಾಡುವುದು ಇದ್ದೇ ಇದೆ, ಇರಲಿ ಬಿಡು ನನ್ನ ಮುದ್ದಿನ ಮೊಮ್ಮಗಳೇ – ಎನ್ನುತಿದ್ದರು.
ಅವರುಗಳ ಮಾತುಗಳಲ್ಲಿ ಬಾಲ್ಯದ, ಹಿಂದಿನ ನೆನಪುಗಳು, ಮುಂದೆ ಬದುಕಲು ಬೇಕಾದ ಅನುಭವದ ಕಿವಿಮಾತುಗಳು, ಬದ್ಧತೆ, ಕರ್ತವ್ಯ, ಹೊಂದಾಣಿಕೆ, ಕೌಟುಂಬಿಕ ಪ್ರೀತಿ, ಹೀಗೆ ಬಂದು ಹೋಗದ ವಿಚಾರಗಳೇ ಇಲ್ಲ ಎನ್ನುವಂತಿರಲಿಲ್ಲ.
ಒಮ್ಮೆ ಹೀಗೆ ಹರಟುತ್ತಾ ಕುಳಿತಾಗ, ತಾತ ಮೊಮ್ಮಗಳ ಹತ್ತಿರ ಅಜ್ಜಿಯ ಮೇಲೆ ಹುಸಿಮುನಿಸಿನಿಂದ ಚಾಡಿ ಹೇಳಿದರು – ನೋಡು ಮುದ್ದೇ, ನಿನ್ನಜ್ಜಿ, ನೀನು ಹುಟ್ಟಿದಾಗ ಅವಳು ಮನೆಯವರೆಲ್ಲರ ಉಪಯೋಗಿಸಿದ ಬಟ್ಟೆಗಳನ್ನು ಸೇರಿಸಿ ಹೊಲೆದ ಹಚ್ಚಡವನ್ನು ತಾನೇ ಹೊದ್ದು ಮಲಗುತ್ತಾಳೆ. ಯಾರಿಗೂ, ನನಗೂ ಒಂದು ದಿನ ಕೂಡ, ಕೊಡು ಎಂದರೆ ಕೊಡುವುದಿಲ್ಲ – ಎಂದರು.
ರಿಚಾಳಿಗೆ ಆಶ್ಚರ್ಯವಾಯಿತು. ಅವಳು ಮೈಸೂರಿಗೆ ಬಂದಾಗಲಿನಿಂದ ಅಜ್ಜಿ ಹರಟುತ್ತಾ ಅವಳ ಪಕ್ಕವೇ ಮಲಗುತ್ತಿದ್ದರು ಮತ್ತು ಅದೇ ಹಚ್ಚಡವನ್ನು ಇಬ್ಬರೂ ಸೇರಿ ಹೊದ್ದು ಮಲಗುತ್ತಿದ್ದದೂ, ಬೆಳಗ್ಗೆ ಬೇಗ ಎದ್ದು ಹೊರ ಹೋಗುವಾಗ ಅಜ್ಜಿ ಅದನ್ನು ಸರಿಯಾಗಿ ಬೆಚ್ಚಗೆ ರಿಚಾಳಿಗೆ ಹೊದೆಸಿ ಹೋಗುತ್ತಿದ್ದೂ ನೆನಪಿಗೆ ಬಂದು ಕೇಳಿದಳು –
ಯಾಕಜ್ಜಿ ಪಾಪ ತಾತಂಗೆ ಕೊಡೋದಿಲ್ಲ, ಪಾಪ ಛ್ಚೇ ಅವರಿಗೂ ಛಳಿ ಆಗುತ್ತೆ ಅಲ್ವಾ?
ಛಳಿ ಆದ್ರೆ ಅವರ ಮಗ, ನಿಮ್ಮಪ್ಪ ತಂದುಕೊಟ್ಟಿದ್ದಾನಲ್ಲ, ರೇಮೆಂಡ್ಸ್ ರಗ್ಗು, ಅದನ್ನು ಹೊದ್ದು ಮಲಗಲಿ, ಈ ಹಚ್ಚಡ ನಂದು, ನಿಂದು ಅಷ್ಟೆ. ನೀನು ಹುಟ್ಟುವಾಗ ನಾನು ಆಸ್ತೆಯಿಂದ ನಿನಗೆಂದು ಹೊಲೆದ ಹಚ್ಚಡ ಇದು. ನೀನು ದೂರದ ಅಮೆರಿಕೆಯಲ್ಲಿದ್ದರೂ ಇದನ್ನು ಹೊದ್ದು ಮಲಗಿದರೆ ನನಗೆ ನೀನು ನನ್ನೊಂದಿಗೇ ಇರುವೆಯೇನೋ ಎಂಬ ಭಾವ ಇರುತ್ತೆ. ಅದಕ್ಕೇ ಇದು ನನಗೆ, ನಿನಗೆ ಬಿಟ್ಟರೆ ಇನ್ಯಾರಿಗೂ ಇಲ್ಲ. ಈಗ ನಿಂಗೇಂತ ದಿನಾ ಚಿಕ್ಕಿ ತಂದು ಕೊಡ್ತಾರಲ್ಲಾ, ನಂಗೇನಾದರೂ ಒಂದು ದಿನ, ಒಂದು ತುಂಡು ಕೊಡುತ್ತಾರಾ? ನೀನೇ ನೋಡಿದ್ದೀಯಲ್ಲಾ . . – ಸಾವಿತ್ರಮ್ಮನವರು ಮುಖ ಊದಿಸಿಕೊಂಡು ಹೇಳಿದರು.
ಇಷ್ಟು ಮಾಗಿದ ವಯಸ್ಸಿನಲ್ಲೂ ಅವರುಗಳ ಪ್ರೀತಿ, ಅಭಿಮಾನ, ಜೀವನೋತ್ಸಾಹಗಳನ್ನು ನೋಡಿದ, ಅನುಭವಿಸಿದ ರಿಚಾಳಿಗೆ, ತಾನು ಉನ್ನತ ಶಿಕ್ಷಣ ಪಡೆದಿದ್ದರೂ ಕಲಿತಿರದ ಕುಟುಂಬ ಪ್ರೀತಿಯ ಪಾಠದ ಹಲವಾರು ವಿಭಾಗಗಳನ್ನು ತಿಳಿದಂತೆ ಆಯಿತು.
ಅಜ್ಜಿ ಹೇಳಿದರು – ರಿಚು ಪುಟ್ಟಿ, ಈಗ ರಾತ್ರಿ ಹತ್ತು ಗಂಟೆಯಾಗಿದೆ, ಲೇಟಾಗಿದೆ, ಮಲಗು. ನಾಳೆ ನಿಂಗೆ ಈ ಹಚ್ಚಡದ ಕಥೆ ಹೇಳಬೇಕಿದೆ.
ಆಯ್ತು ಅಜ್ಜಿ, ನಾಳೆ ನಿಮ್ಮ ಕಥೆ ಕೇಳಕ್ಕೆ ನಾನು ರೆಡಿ, ಶುಭರಾತ್ರಿ – ರಿಚಾ ಹೇಳಿದಳು.
ಅಯ್ಯೋ ತಡೀ, ಮಲಗಿಬಿಡಬೇಡ, ಕಾಯಿಸಿದ ಸಿದ್ಧನ ಮನೆಯ ಗೌರಿ ಹಸುವಿನ ಹಾಲಿಗೆ ಬಾದಾಮಿ, ಕೇಸರಿ, ಕೆಂಪುಕಲ್ಲುಸಕ್ಕರೆ ಹಾಕಿ ಇಟ್ಟಿದ್ದೀನಿ, ತಂದು ಕೊಡುತ್ತೀನಿ, ಈಗ ಆರಿ ಬೆಚ್ಚಗಾಗಿರುತ್ತೆ, ಕುಡಿದು ಮಲಗುವಿಯಂತೆ, ಅಲ್ಲಿ, ಅಮೆರಿಕೆಯಲ್ಲಿ ಏನು ತಿಂತೀಯೋ, ಏನು ಕುಡೀತೀಯೋ ಆ ಭಗವಂತನೇ ಬಲ್ಲ – ಎನ್ನುತ್ತಾ ಒಳನಡೆದರು.
ಅಜ್ಜಿ ತಂದು ಕೊಟ್ಟ ಹಾಲು ಕುಡಿಯುತ್ತಾ ರಿಚಾ ಯೋಚಿಸಿದಳು. ನಮ್ಮವರೊಂದಿಗೆ ಜೀವಿಸುವ ಪರಿಯ ಸೊಗಸೇ ಬೇರೆ. ಅಲ್ಲಿ ಒಮೊಮ್ಮೆ ರಾತ್ರಿ ಎರಡು, ಮೂರು ಗಂಟೆಯವರೆಗೆ ಕೆಲಸ ಮಾಡುತ್ತಿದ್ದರೂ ಯಾರೂ ಕೇಳುವರಿಲ್ಲ, ಎಷ್ಟು ಮಾಡಿದರೂ ಇನ್ನಷ್ಟು, ಮತ್ತಷ್ಟು ಮಾಡಬೇಕೆನ್ನುವ ರ್ಯಾಟ್(rat) ರೇಸಿನಲ್ಲಿ ಗೆಲ್ಲಬೇಕೆನ್ನುವ ಛಲದಲ್ಲಿ, ಓಟದಲ್ಲಿ ನಾನು ಏನನ್ನಾದರೂ ಕಳೆದುಕೊಳ್ಳುತ್ತಿರುವೆನೇ, ನಾಳೆ ಅಜ್ಜಿಯೊಡನೆ ಮಾತನಾಡಬೇಕು, ಎಂದುಕೊಳ್ಳುತ್ತಾ ಹೊರಳಿದಾಗ, ಅಡುಗೆ ಮನೆಯ ಕೆಲಸ ಮುಗಿಸಿ ಬಂದ ಅಜ್ಜಿ – ಅಯ್ಯೋ ಇನ್ನೂ ನಿದ್ದೆ ಬಂದಿಲ್ಲವಾ, ಸರಿಯಾಗಿ ಹೊದ್ದುಕೋ – ಎನ್ನುತ್ತಾ ಪಕ್ಕದಲ್ಲಿ ಬಂದು ಮಲಗಿ ತಲೆ ಸವರಿದಾಗ ರಿಚಾ ಸಿಹಿ ನಿದ್ರೆಗೆ ಜಾರಿದಳು.
ಮಾರನೆಯ ದಿನ ಮಧ್ಯಾನ್ಹ ಊಟದ ನಂತರ ಅಜ್ಜಿ ಮೊಮ್ಮಗಳು ಹಜಾರದಲ್ಲಿ ಹಿತ್ತಾಳೆಯ ಸರಪಳಿಗೆ ಕಟ್ಟಿದ್ದ ಅಗಲವಾದ ಹಲಗೆಯ ತೂಗುಯ್ಯಾಲೆಯಲ್ಲಿ ಎದುರು ಬದಿರಾಗಿ ಕುಳಿತರು.
ತಾತ ಚುಡಾಯಿಸಿದರು – ಹುಂ, ಶುರು ಹಚ್ಚಿಕೊಳ್ಳಿ, ನಿಮ್ಮ ಪಂಚಾಂಗ ಶ್ರವಣ, ನಾನು ಹೋಗಿ ಸ್ವಲ್ಪ ಮಲಗುತ್ತೇನೆ, ಹೊಟ್ಟೆ ಭಾರವಾಗಿದೆ.
ಅಜ್ಜಿ, ಮೊಮ್ಮಗಳು ತಾತನ ಮಾತಿಗೆ ಮುಕ್ತವಾಗಿ ನಕ್ಕರು. ತಾತ ಇವರುಗಳ ಹರಟೆಗೆ, ಮಾತುಕತೆಗೆ ಇಟ್ಟ ಹೆಸರು ʼಪಂಚಾಂಗ ಶ್ರವಣʼ.
ಅಜ್ಜೀ ಹಚ್ಚಡದ ಕಥೆ ಹೇಳು – ರಿಚಾ ಮುದ್ದುಗರೆದಳು.
ಏನಿಲ್ಲ ಕೂಸೆ, ನೀನು ನಿಮ್ಮ ಅಮ್ಮನ ಹೊಟ್ಟೆಯಲ್ಲಿ ಇದ್ದಾಗಲೇ ನಾನು ಈ ಹಚ್ಚಡವನ್ನು ಕೈಯಿಂದಲೇ ಹೊಲೆದದ್ದು. ಆಗ ನನ್ನ ಮನಸ್ಸಿನಲ್ಲಿ ಮೂಡಿದ ಭಾವನೆ ಎಂದರೆ, ಮುಂದೆ ಬರುವ ನಮ್ಮ ಮನೆಯ ಕುಡಿಗೆ, ನಮ್ಮ ಕುಟುಂಬದವರೆಲ್ಲರ ಬೆಚ್ಚನೆಯ ಹಾರೈಕೆಗಳು ಸದಾ ಇರಲಿ ಎಂದು. ಎಲ್ಲರ ಒಂದೊಂದು ಬಟ್ಟೆಯನ್ನು ಸೇರಿಸಿ ಹೊಲೆದ ಹಚ್ಚಡಾ ಇದು. ಸಾಧಾರಣ ಎಲ್ಲರೂ ಇರುವ ಹಳೆಯ ಬಟ್ಟೆಗಳನ್ನು ಸೇರಿಸಿ ಹಚ್ಚಡಾ ಹೊಲೆಯುತ್ತಾರೆ. ಆದರೆ ನಾನು ಯಾರಿಗೂ ಹೇಳದೆ ಅವರುಗಳು ಉಪಯೋಗಿಸುತ್ತಿದ್ದ ಬಟ್ಟೆಗಳನ್ನೇ ತಂದು ಈ ಹಚ್ಚಡಾ ಹೊಲೆದೆ. ಎಲ್ಲರೂ ತಮ್ಮ ತಮ್ಮ ಬಟ್ಟೆಗಳು ಎಲ್ಲಿ ಹೋಯಿತೆಂದು ಹುಡುಕುವಾಗ ನಾನು ಬಾಗಿಲ ಮರೆಯಲ್ಲೇ ನಿಂತು ನೋಡಿ ನಗುತ್ತಿದ್ದೆ. ನೀನು ಹುಟ್ಟಿದ ನಂತರ ಈ ಹಚ್ಚಡದಲ್ಲಿ ನಿನ್ನನ್ನು ಸುತ್ತಿ ಇಟ್ಟಾಗಲೇ ಅವರಿಗೆಲ್ಲಾ ಅವರುಗಳ ಬಟ್ಟೆ ಮಾಯವಾದ ವಿಷಯ ತಿಳಿದದ್ದು. ನೋಡು, ಇದು ನಮ್ಮ ಮಾವನವರ ಜುಬ್ಬದ ಬಟ್ಟೆ, ಇದು ನಮ್ಮ ಅತ್ತೆಯ ಒಂದು ರವಿಕೆ, ನನ್ನ ಸೀರೆ, ನಿಮ್ಮ ತಾತನ ಪಂಚೆ, ನಿಮ್ಮಪ್ಪನ ಪ್ಯಾಂಟಿನ ಉಲ್ಲನ್ನ ಬಟ್ಟೆ, ಹೊದೆಸಿದಾಗ ಎದೆಯ ಮೇಲೆ ಬರುವಂತೆ ಹೊಲೆದಿದ್ದೇನೆ. ಅವನ ಪ್ರೀತಿ ನಿನ್ನೆದೆಯನ್ನು ಸದಾ ಬೆಚ್ಚಗಿಟ್ಟಿರಲಿ ಅಂತ. ಕೆಳಭಾಗಕ್ಕೆ ಬಂದಿರುವುದು ನಿಮ್ಮಮ್ಮನ ಇಳಕಲ್ಲ ಸೀರೆಯ ಭಾಗ, ಅವಳ, ತಾಯಿಯ ಅಂತಃಕರಣ ಸದಾ ನಿನೊಟ್ಟಿಗಿರಲಿ ಅಂತ, ನಿನ್ನ ಸುಜಿ ಅತ್ತೆ, ಅಂದರೆ ನನ್ನ ಮಗಳು ಸುಜಯ ಹಾಕುತ್ತಿದ್ದ ಲಂಗ, ನಿನ್ನ ಚಿಕ್ಕಪ್ಪನ ಟೀ ಶರ್ಟ್, ಹೀಗೆ ಎಲ್ಲರ ಬಟ್ಟೆಗಳನ್ನೂ ಹಾಕಿ ಹೊಲೆದಿದ್ದೆ – ಎನ್ನುತ್ತಾ ಹಚ್ಚಡದ ಒಂದೊಂದು ತುಂಡುಗಳನ್ನೂ ಗುರುತಿಸುತ್ತಾ ಹೇಳುವಾಗ ನಿಜಕ್ಕೂ ರಿಚಾ ಭಾವುಕಳಾದಳು.
“ಅದಕ್ಕೇ ಇದು ನಿನಗೆ ಮಾತ್ರ. ಅವರೆಲ್ಲರ ಪ್ರೀತಿ, ವಿಶ್ವಾಸದ ರಕ್ಷೆ ಸದಾ ನಿನಗಿರಲಿ ಅಂತ. ನೀನು ದೂರದ ಅಮೆರಿಕೆಯಲ್ಲಿರುವಾಗ ನಾನು ಹೊದ್ದು ಮಲಗುತ್ತೀನಿ, ಯಾಕೇಂದ್ರೆ ಇದನ್ನು ಹೊದ್ದಾಗ, ನೀನೇ ನನ್ನ ಪಕ್ಕ ಬಂದು ಮಲಗಿರುವ ಭಾವ ನನಗೆ ಬರುತ್ತೆ.
ನನ್ನ ಸ್ವಾರ್ಥಕ್ಕೆ ನಿನ್ನ ಕೆಲಸ ಕಾರ್ಯಗಳನ್ನು ಬಿಟ್ಟು ನಮ್ಮ ಮುಂದೆಯೇ ಬಂದಿರು ಎನ್ನುವುದು ನನಗಿಷ್ಟವಿಲ್ಲ. ನಮ್ಮ ಕಾಲದ ಹೆಣ್ಣು ಮಕ್ಕಳಿಗೂ, ಈಗಿನ ನಿಮಗೂ ಹೋಲಿಕೆ ಮಾಡಲು ಸಾಧ್ಯವಿಲ್ಲ, ನೀನು ನನ್ನ ಹೆಮ್ಮೆ.
ಆದರೆ ಒಂದೆರಡು ಮಾತುಗಳನ್ನು ಹೇಳಿ ಬಿಡುತ್ತೇನೆ. ನೀನು ಉಪದೇಶ ಎಂದುಕೊಂಡರೂ ಸರಿ, ಯಾಕೇಂದ್ರೆ, ಈಗಿನ ಅಪ್ಪ ಅಮ್ಮಂದಿರು ಏನೂ ಹೇಳಲು ಹೋಗುವುದಿಲ್ಲ, ಮಕ್ಕಳು ಬುದ್ಧಿವಂತರುತ್ತಾರೆ, ಅವರಿಗೆ ಸರಿ ಎನ್ನಿಸಿದನ್ನು ಮಾಡಲಿ ಬಿಡಿ ಎನ್ನುತ್ತಾರೆ. ಖಂಡಿತಾ ಬುದ್ಧಿವಂತರೇನೋ ಹೌದು, ಆದರೆ ಅನುಭವ, ನಮ್ಮ ಕೌಟುಂಬಿಕ ಜೀವನದ ಅನುಭವ ಅವರಿಗಿರುವುದಿಲ್ಲವಲ್ಲಾ, ಅದಕ್ಕೇ . . .
ಪುಟ್ಟಿ, ಮುದುವೆ ಮಾಡಿಕೋ, ಕೆರಿಯರ್ ಒಂದು ಹಂತ ಹಂತ ಎಂದು ಕಾಯಬೇಡ. ಉದ್ಯೋಗ, ಮದುವೆ, ಮಕ್ಕಳು ಆಥವಾ ಮಗು, ಕುಟುಂಬ ನಿರ್ವಹಣೆ ಎಲ್ಲವೂ ಒಟ್ಟೊಟ್ಟಿಗೇ ಆಗಬೇಕು. ನೀವುಗಳು ಅದೇನೋ ಆಫೀಸಿನಲ್ಲಿ ಮಲ್ಟಿಟಾಸ್ಕ್ ಅಂತ ಮಾಡ್ತೀರಂತಲ್ಲ ಹಾಗೇ. ಮದುವೆ ಅಂದ್ರೆ ಬರೀ ಹುಡುಗ-ಹುಡುಗಿ ಇಷ್ಟ ಪಟ್ಟರೆ ಆಯ್ತು ಅಲ್ಲ, ಕುಟುಂಬಗಳು ಒಂದಾಗಬೇಕು, ಪರಸ್ಪರ ಪ್ರೀತಿ ವಿಶ್ವಾಸ ಬೆಳೆಯಬೇಕು, ಇಬ್ಬರೂ ಒಬ್ಬರ ಭಾವನೆಗಳನ್ನು ಇನ್ನೊಬ್ಬರು ಗೌರವಿಸಬೇಕು. ಹಾಗೆ, ಯಾರೇ ಆಗಲಿ ಭದ್ರ ಬುನಾದಿಯ ಕುಟುಂಬದ ಮೌಲ್ಯಗಳನ್ನು ತಿಳಿದುಕೊಂಡವರು ಜೀವನ ಚಕ್ರದಲ್ಲಿ ಬರುವ ಏರುಪೇರುಗಳನ್ನು ಸುಲಭವಾಗಿ ನಿವಾರಿಸಿಕೊಳ್ಳುತ್ತಾರೆ. ನನ್ನ ಮುದ್ದು, ಆ ರೀತಿಯ ಒಂದು ಕುಟುಂಬದ ಒಡತಿಯಾಗಬೇಕು ಅನ್ನುವುದು ನನ್ನಾಸೆ . .”
ರಿಚಾ – ಅಜ್ಜೀ ಎಷ್ಟೊಂದು ಒಟ್ಟಿಗೃ ಹೇಳಿಬಿಟ್ಟರೆ ನನ್ನ ತಲೆಗೆ ಹೋಗುವುದಿಲ್ಲ.
“ಅಯ್ಯೋ ಇಂಜಿನಿಯರಿಂಗ್ ನಲ್ಲಿ ಚಿನ್ನದ ಪದಕ ಪಡೆದ ನನ್ನ ಮೊಮ್ಮಗಳಿಗೆ ಈ ನಿರಕ್ಷರಕುಕ್ಷಿ ಅಜ್ಜಿ ಹೇಳುವುದು ಅರ್ಥ ಆಗುವುದಿಲ್ಲ ಅಂದ್ರೆ ಏನು? ನಂಗೆ ಹೆಣ್ಣು ಮಕ್ಕಳು ಓದಬೇಕುಂತ ಆಸೆ ಇತ್ತು. ನೀನು, ನಾನು ಅಂದುಕೊಂಡದ್ದಕ್ಕಿಂತ ಜಾಸ್ತಿ ಓದಿದೆ, ದೇಶ ವಿದೇಶಗಳಲ್ಲಿ ಒಬ್ಬಳೇ ಓಡಾಡಿ ನಿಭಾಯಿಸುವ ಛಾತಿಯನ್ನುಗಳಿಸಿದ್ದೀಯಾ, ಕೈ ತುಂಬಾ ಸಂಪಾದಿಸುತ್ತೀಯಾ, ಇದೆಲ್ಲಾ ನನಗಂತೂ ತುಂಬಾನೇ ಖುಷಿ ಕೊಡುವ ವಿಚಾರಗಳೇ. ನಾವುಗಳು ಚಿಕ್ಕವರಿರುವಾಗ ಇದನ್ನೆಲ್ಲಾ ಯೋಚಿಸಲೂ ಸಾಧ್ಯವಿರಲಿಲ್ಲ. ಆದರೂ ನನ್ನ ಮನಸ್ಸಿನ ಆಳದಲ್ಲೆಲ್ಲೋ ಹೀಗೇನಾದರೂ ಆದರೆ . . ಎಂಬ ಕನಸಿತ್ತು. ನನ್ನ ಕಣ್ಣ ಮುಂದೆಯೇ ನನ್ನ ಮೊಮ್ಮಗಳು ಅದನ್ನು ಸಾಧಿಸಿದ್ದಾಳೆ. ಅದು ಹೆಮ್ಮೆಯೇ ಹೌದು ಆದರೆ . . .”
ಆಯ್ತು ಅಜ್ಜಿ, ನಿನ್ನ ಇಷ್ಟ ನನಗರ್ಥ ಆಯಿತು. ʼಡನ್ʼ. ಅಪ್ಪ ಅಮ್ಮನೊಂದಿಗೂ ಮಾತನಾಡುತ್ತೀನಿ. ನನಗೂ ಜೀವನ ಒಂಟಿ ಅನ್ನಿಸಿಬಿಟ್ಟಿದೆ. ಒಮೊಮ್ಮೆ ಮನಸ್ಸಿನಲ್ಲಿ ಆಸೆಯೂ ಆಗುತ್ತೆ. ನನ್ನನ್ನು ಅರ್ಥ ಮಾಡಿಕೊಳ್ಳುವ ಹುಡುಗನನ್ನು ಹುಡುಕುವುದೊಂದೇ ಈಗ ಕೆಲಸ . ನಂತರ ಡುಂ, ಡುಂ, ಪಿ. ಪೀ.
ಅಯ್ಯೋ ನನ್ನ ಮುದ್ದೇ ನಿನ್ನ ಬಾಯಿಗೆ ಸಕ್ಕರೆ ಹಾಕಾ . . ಬರಲಿರುವ ನಿನ್ನ ರಾಜಕುಮಾರನ ಕನಸು ಕಾಣುತ್ತಾ ಒಂದು ಪುಟ್ಟ ನಿದ್ದೆ ಮಾಡು, ಅಷ್ಟರಲ್ಲಿ ನಾನು ಬಿಸಿಬಿಸಿಯಾಗಿ ನಾಲ್ಕು ಚಕ್ಕುಲಿ ಕರೆಯುತ್ತೀನಿ – ಎನ್ನುತ್ತಾ ಎದ್ದು ಅಡುಗೆ ಮನೆಯ ಕಡೆ ನಡೆದರು ಸಾವಿತ್ರಮ್ಮ.
ದಿನಗಳು ರೇಸಿನ ಕುದುರೆಯಂತೆ ಓಡಿದವು. ಇನ್ನೊಂದು ವಾರಕ್ಕೆ ರಿಚಾ ಹೊರಡಬೇಕಿತ್ತು. ಬೆಂಗಳೂರಿಗೆ ಹೋಗಿ ಅಪ್ಪ ಅಮ್ಮನೊಂದಿಗೆ ನಾಲ್ಕಾರು ದಿನಗಳನ್ನು ಕಳೆದು ಊರಿಗೆ ಹಿಂದಿರುಗಬೇಕಿತ್ತು.
ಪ್ರತೀ ಸಲ ಬಂದಾಗಲೂ ದಿನಗಳು ಬೆಂಗಳೂರಿನಲ್ಲೇ ಕಳೆದು ಹೋಗುತಿತ್ತು. ಎಷ್ಟೇ ಪ್ರಯತ್ನಿಸಿದರೂ ಮೈಸೂರಿಗೆ ಬರಲಾಗುತ್ತಲೇ ಇರಲಿಲ್ಲ. ಅಜ್ಜಿ, ತಾತನೇ ಬೆಂಗಳೂರಿಗೆ ಬಂದು ಮೊಮ್ಮಗಳನ್ನು ನೋಡಿ, ಮಾತನಾಡಿಸಿ, ಪ್ರೀತಿಸಿ ಹೊರಡುತ್ತಿದ್ದರು.
ಈ ಬಾರಿ ಅದಕ್ಕೆಂದೇ ಸೀದಾ ಮೈಸೂರಿಗೆ ಬಂದದ್ದು ಒಳ್ಳೆಯದಾಯಿತು. ಅಜ್ಜಿ ತಾತನೊಂದಿಗೆ ಕಳೆಯುತ್ತಿರುವ ದಿನಗಳು ರಿಚಾಳಿಗೆ ಅತ್ಯಂತ ಮುದ ನೀಡುತ್ತಿದ್ದವು.
ಮಧ್ಯಾನ್ಹದಿಂದಲೇ ಯಾಕೋ ಸಾವಿತ್ರಮ್ಮನವರು ತುಂಬಾ ಸುಸ್ತಾದಂತೆ ಸಪ್ಪಗಿದ್ದರು. ರಿಚಾಳೆ ಕಾಫಿ ಮಾಡಿ ಅಜ್ಜಿ ತಾತನಿಗೆ ತಂದುಕೊಟ್ಟಳು. ಅವರಿಬ್ಬರಿಗೂ ಖುಷಿಯೋ ಖುಷಿ. ಸಂಜೆ ಬಂದಿದ್ದ ಕಾಮಾಕ್ಷಮ್ಮನೊಡನೆ ಅಜ್ಜಿ ಹೆಮ್ಮೆಯಿಂದ ಹೇಳುತ್ತಿದ್ದರು – ಪಾಪ, ಈವತ್ತು ನಮ್ಮ ರಿಚೂನೇ ಕಾಫಿ ಮಾಡಿ ಕೊಟ್ಲು, ಎಷ್ಟು ರುಚಿಯಾಗಿತ್ತು ಗೊತ್ತಾ. . ?
ಅಜ್ಜಿ ತಾತ ಸಣ್ಣ ಸಣ್ಣ ವಿಷಯಗಳಿಗಾಗಿ ಸಂಭ್ರಮಿಸುತ್ತಿದ್ದ ರೀತಿ, ಪಡುತ್ತಿದ್ದ ಸಂತಸ ನಿಜಕ್ಕೂ ರಿಚಾಳಿಗೆ ಆಶ್ಚರ್ಯವೆನಿಸುತಿತ್ತು.
ರಾತ್ರಿ ಕೈಲಾಗದಿದ್ದರೂ ಬಿಸಿಯಾಗಿ ಅನ್ನ, ಮೆಣಸಿನ ಸಾರು ಮಾಡಿ ಉಪ್ಪು ಹಚ್ಚಿದ ಮೆಣಸಿನಕಾಯಿಯನ್ನು ಕರಿದಿದ್ದರು. ಊಟದ ನಂತರ ತಿನ್ನಲು ನಂಜನಗೂಡು ರಸಬಾಳೆಯ ಹಣ್ಣನ್ನು ತಾತನಿಗೆ ಹೇಳಿ ತರಿಸಿಟ್ಟಿದ್ದರು.
ಊಟದ ನಂತರ ಅಜ್ಜಿಗೆ ಏನೂ ಕೆಲಸ ಮಾಡಲು ಬಿಡದೆ ರಿಚಾಳೇ ಅಡುಗೆ ಮನೆಯನ್ನೆಲ್ಲಾ ಶುದ್ಧಗೊಳಿಸಿ ಹಾಲು ಕಾಯಿಸಿ, ಚಿಟಿಕೆ ಅರಿಶಿನ, ಕೆಂಪುಕಲ್ಲುಸಕ್ಕರೆ ಹಾಕಿ ಮೂರು ಲೋಟಗಳಿಗೆ ಬಗ್ಗಿಸಿ ತಂದಳು. ಮೊಮ್ಮಗಳು ತಂದಿತ್ತ ಹಾಲನ್ನು ಕುಡಿದು ತೃಪ್ತಿಯಾಗಿ ಅಭಿಮಾನದಿಂದ ಮೊಮ್ಮಗಳೆಡೆಗೆ ನೋಡಿದರು, ಅವರ ಮೊಗದಲ್ಲಿ ಸಂತೃಪ್ತ ಭಾವ ಕಂಡಿತು ರಿಚಾಳಿಗೆ.
ತಾತ ಮಲಗಲು ತಮ್ಮ ಕೋಣೆಯೆಡೆಗೆ ನಡೆದರು. ಅಜ್ಜಿ ಮೊಮ್ಮಗಳು ತಮ್ಮ ಪ್ರೀತಿಯ ಹಚ್ಚಡ ಹೊದೆದು ಬೆಚ್ಚಗೆ ಮಲಗಿದರು. ಎಲ್ಲರೂ ಸಿಹಿ ನಿದ್ರೆಗೆ ಜಾರಿದರು.
ಒಂದು ಹೊತ್ತಿನಲ್ಲಿ ಎಚ್ಚರವಾಗಿ ಸಾವಿತ್ರಮ್ಮನವರಿಗೆ ಯಾಕೋ ಕೆಟ್ಟ ಸಂಕಟವಾಗುತ್ತಿರುವಂತೆನಿಸಿತು. ಒಂದು ಲೋಟ ಬಿಸಿ ನೀರನ್ನಾದರೂ ಕುಡಿಯೋಣವೆಂದು ಎದ್ದು ಅಡುಗೆ ಮನೆಯೆಡೆಗೆ ನಡೆಯುತ್ತಾ ತಮ್ಮ ಮೆಚ್ಚಿನ ಹಚ್ಚಡವನ್ನು ತಮ್ಮ ಮುದ್ದಿನ ಮೊಮ್ಮಗಳಿಗೆ ಮೈತುಂಬಾ ಹೊದೆಸಿ ನಡೆದರು.
ಬೆಳಗ್ಗೆ ಎದ್ದಾಗ ನಡೆಯಬಾರದ ದುರಂತ ನಡೆದು ಹೋಗಿತ್ತು. ವರಾಂಡದಲ್ಲಿ ಚಾಪೆ ಹಾಸಿ ಒಂದು ದಿಂಬಿನ ಮೇಲೆ ತಲೆಯಿಟ್ಟು, ಹೊದ್ದಿಗೆ ಹೊದ್ದು ಮಲಗಿದ್ದರು ಸಾವಿತ್ರಮ್ಮ. ಹೊದ್ದಿಗೆ, ಹೊತ್ತು, ಎರಡೂ ಜಾರಿ ಹೋಗಿತ್ತು. ಪಕ್ಕದಲಿ ಚಿಕ್ಕ ಬಟ್ಟಲಲ್ಲಿ ತುಳಸೀದಳ, ಒಡೆದ ಗಂಗಾಥಾಲಿ ಉರುಳಿ ಬಿದ್ದಿತ್ತು. ಪ್ರಶಾಂತ ಮುಖಭಾವದಲ್ಲಿ ಮಲಗಿದ್ದ ಸಾವಿತ್ರಮ್ಮನವರ ಪ್ರಾಣಪಕ್ಷಿ ಹಾರಿ ಹೋಗಿತ್ತು.
ನಡೆದದ್ದೆಲ್ಲಾ ಕನಸೋ, ನನಸೋ ಊಹಿಸಲಾಗದೆ ದಿಗ್ಭಾಂತರಾಗಿದ್ದರು ಗಂಗಾಧರಯ್ಯ ಮತ್ತು ರಿಚಾ. ಕಾಮಾಕ್ಷಮ್ಮನ ಕುಟುಂಬದವರೇ ಎಲ್ಲರಿಗೂ ಸುದ್ದಿ ತಿಳಿಸಿ ಮುಂದಿನ ಕಾರ್ಯಗಳಿಗೆ ಅನುವು ಮಾಡಿದರು. ಊರೂರಿಂದ ಬರಬೇಕಿದ್ದವರು ಬಂದಾಯಿತು. ಸಾವಿತ್ರಮ್ಮನವರ ದೇಹವನ್ನು ಕೊಂಡೊಯ್ಯುವಾಗ, ರಿಚಾಳ ಅಪ್ಪ, ದುಃಖದಲ್ಲೂ ಹೇಳಿದರು – ಅಮ್ಮ ಈ ಹಚ್ಚಡವನ್ನು ಎಂದೂ ಬಿಟ್ಟಿರುತ್ತಿರಲಿಲ್ಲ. ಆ ಹಚ್ಚಡವನ್ನು ಅಮ್ಮನ ದೇಹಕ್ಕೆ ಸುತ್ತಿಯೇ ಮುಂದಿನ ಕಾರ್ಯಗಳನ್ನು ನಡೆಸೋಣ.
ತಕ್ಷಣ ರಿಚಾ ಹೇಳಿದಳು – ಬೇಡ ಪಪ್ಪಾ, ಅಜ್ಜಿಯ ಮನದ ಮಾತುಗಳು, ನನ್ನ, ಅಜ್ಜಿಯ ಒಡನಾಟದ ನೆನಪುಗಳು ಆ ಹಚ್ಚಡದಲ್ಲಿ ತುಂಬಿವೆ. ಅವರು ಪ್ರಾಣವನ್ನು ಬಿಡಲು ಎದ್ದು ನಡೆಯುಬಾಗಲೂ ನನಗದನ್ನು ಬೆಚ್ಚಗೆ ಹೊದೆಸಿ ಹೋಗಿದ್ದಾರೆ. ಅಜ್ಜಿಯ ಪ್ರೀತಿ ಮತ್ತು ಅನುಭವದ ಬೆಚ್ಚನೆಯ ಭಾವ ತುಂಬಿರುವ ನನ್ನಜ್ಜಿ ನನಗಾಗಿ ಹೊಲೆದ ಹಚ್ಚಡ ನನಗಿರಲಿ, ಅದು ಸದಾ ಕಾಲ ನನ್ನನ್ನು ಕಾಯುತ್ತಿರಲಿ – ಹೇಳುತ್ತಾ, ಹೇಳುತ್ತಾ ರಿಚಾ ಗದ್ಗದಿತಳಾದಳು.
–ಪದ್ಮಾ ಆನಂದ್, ಮೈಸೂರು
ತಲಮಾರುಗಳ ಒಡನಾಟ ಅನುಭವದ ರಸಪಾಕ.ಚೆನ್ನಾದ ಕಥೆ ಪದ್ಮಾ ಮೇಡಂ..
ಮೆಚ್ಚುಗೆಯ ಪ್ರತಿಕ್ರಿಯೆಗಾಗಿ ವಂದನೆಗಳು.
ಪ್ರಕಟಿಸಿದ “ಸುರಹೊನ್ನೆ”ಗೆ ವಂದನೆಗಳು.
ಚೆಂದದ ಕಥೆ. ಧನ್ಯವಾದಗಳು
ಕಣ್ಣು ತೇವವಾಯಿತು; ಮನಸು ಆರ್ದ್ರವಾಯಿತು.
ಕಡಮೆ ಸಾಲುಗಳಲ್ಲಿ ಅತಿ ಹೆಚ್ಚು ವಿಷಯವಿಚಾರ
ಅಷ್ಟೇ ಪ್ರಮಾಣದ ಭಾವಗಳ ಬುತ್ತಿ ಉಣಿಸಿದ್ದೀರಿ.
ಕತೆ ಚೆನ್ನಾಗಿದೆ ಮೇಡಂ, ಧನ್ಯವಾದಗಳು.
ಯಮ ಮತ್ತು ಸಂಯಮ ಎರಡೂ ಸಾಧನೆಯಾಗಿದೆ
ಇದರ ವಸ್ತುವಿನಲ್ಲಿ. ಕೊನೆಯಲ್ಲಿ ಯಮ ಬಂದು ಹೋದರೆ
ಸಂಯಮ ಕತೆಗಾರ್ತಿಯ ಕೈ ಹಿಡಿದು ನಡೆಸಿದೆ. ಗ್ರೇಟ್.
ವಂದನೆಗಳು. ಈ ಮಾದರಿ ನಿಮ್ಮಿಂದ ಚೆನ್ನಾಗಿ ಬರೆಸಿಕೊಂಡು
ಹೋಗುತ್ತದೆ, ದಯಮಾಡಿ ಮುಂದುವರಿಸಿ. ಶುಭವಾಗಲಿ.
ನಿಮ್ಮ ಪ್ರೋತ್ಸಾಹದಾಯಕ ನುಡಿಗಳಿಗಾಗಿ ಧನ್ಯವಾದಗಳು ಸರ್.
ಚಂದದ ಕಥೆ, ಆದರೆ ಅಂತ್ಯ ನೋವಿನಿಂದ ಕೂಡಿದೆ
ಪ್ರತಿಕ್ರಿಯೆಗಾಗಿ ಧನ್ಯವಾದಗಳು.
ಕಣ್ಣು ಮಂಜಾಗಿಸಿದ “ಅಜ್ಜಿ ಮನೆ” ಕಥೆಯು, ಉಡುಗೊರೆಯಾಗಿ ಪಡೆದ ಕೌದಿಯಿಂದ ಮೂಡಿಬಂದ ಸುಧಾ ಮೂರ್ತಿಯವರ “ಥೌಸೆಂಡ್ ಸ್ಟಿಚಸ್” ಕಥೆಯನ್ನು ನೆನಪಿಸುತ್ತಾ, ಮನ ತುಂಬಿತು ಮೇಡಂ.
ಕತೆಯಂತಿರದೆ ನಮ್ಮ ಕಣ್ಮುಂದೆ ನಡೆದ ಘಟನೆಯೇನೋ ಎಂಬಂತ್ತಿದೆ