ವಿಶ್ವ ಮಹಿಳಾ ದಿನಾಚರಣೆ.

Share Button


ವಿಶ್ವ ಮಹಿಳಾ ದಿನವನ್ನು ಮಾರ್ಚಿ ತಿಂಗಳ 8 ನೆಯ ತಾರೀಖಿನಂದು ಆಚರಿಸುತ್ತಾರೆ. ಇದು ಏಕೆ? ಎಂದಿನಿಂದ ಪ್ರಾರಂಭವಾಯಿತು? ಇದರ ಮೂಲ ಉದ್ದೇಶವೇನು? ಎಂಬುದರ ಬಗ್ಗೆ ಸಂಕ್ಷಿಪ್ತವಾಗಿ ತಿಳಿಸುವ ಪ್ರಯತ್ನ ಮಾಡುತ್ತೇನೆ.

ಇದನ್ನು ಮಹಿಳೆಯರ ಹಕ್ಕುಗಳ ರಕ್ಷಣೆ, ಸಮಾನತೆ, ಮತ್ತು ಶೋಷಣೆಗಳ ವಿರುದ್ಧ ಹಿಂದೆ ನಡೆದ ಪ್ರತಿಭಟನೆಯ ಸ್ಮರಣೆಗಾಗಿ ಸಾಂಕೇತಿಕವಾಗಿ ಆಚರಿಸಲಾಗುತ್ತದೆ. ವಿಶ್ವ ಮಹಿಳಾ ದಿನಾಚರಣೆಯ ಮೂಲ ಉದ್ದೇಶ ಲಿಂಗ ಸಮಾನತೆ, ತಾಯ್ತನದ ಹಿರಿಮೆಯ ಸ್ಥಾನ, ಮತ್ತು ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯದ ವಿರುದ್ಧ ಕೇಂದ್ರೀಕೃತವಾಗಿದ್ದು ಅವಳ ವ್ಯಕ್ತಿತ್ವ ಸ್ವಾತಂತ್ರ್ಯಕ್ಕಾಗಿ ಹೋರಾಟವಾಗಿದೆ. ಮೊಟ್ಟ ಮೊದಲಿಗೆ ಯೂರೋಪ್ ಮತ್ತು ಉತ್ತರ ಅಮೆರಿಕೆಯಲ್ಲಿ 20 ನೆಯ ಶತಮಾನದಲ್ಲಿ ನಡೆದ ಕಾರ್ಮಿಕರ ಪ್ರತಿಭಟನೆಯಿಂದ ಇದು ಪ್ರಾರಂಭವಾಯಿತು.

ಈ ಚಳುವಳಿಯನ್ನು ನ್ಯೂಯಾರ್ಕ್ ನಗರದಲ್ಲಿ ಸೋಷಿಯಲಿಸ್ಟ್ ಪಕ್ಷದವರಿಂದ 1909 ರ ಫೆಬ್ರವರಿ 28 ರಂದು ನಡೆಸಲಾಯಿತು. ಕೋಪೆನ್ಹೇಗನ್ ನಲ್ಲಿ ಕಮ್ಯುನಿಸ್ಟ್ ಕಾರ್ಯಕರ್ತೆಯಾಗಿದ್ದ “ಕ್ಲಾರಾ ಜೆಟ್ಕಿನ್” ಎಂಬುವರು ‘ಉದ್ಯೋಗಸ್ಥ ಮಹಿಳೆಯರ ಹಕ್ಕುಗಳಿಗಾಗಿ’ ಅಂತರಾಷ್ಟ್ರೀಯ ಸೋಷಿಯಲಿಸ್ಟ್ ಕಾನ್ಪೆರೆನ್ಸಿನಲ್ಲಿ ಪ್ರತಿಪಾದಿಸಲಾದ ಪ್ರಸ್ತಾವನೆಗೆ ಬೆಂಬಲ ಸೂಚಿಸುವ ಸಲುವಾಗಿ ಇದನ್ನು ಆಚರಿಸಲಾಗಿತ್ತು. ಮರುವರ್ಷ ಇದರ ಆಚರಣೆ ಮತ್ತು ಇಂತಹ ಪ್ರತಿಭಟನಾ ಸಭೆಗಳು ಯೂರೋಪಿನಾದ್ಯಂತ ಹರಡಿಕೊಂಡವು. 1917 ರಲ್ಲಿ ನಡೆದ ರಷಿಯಾದ ಕ್ರಾಂತಿಯ ಸಂದರ್ಭದಲ್ಲಿ ಮಹಿಳೆಯರು ನೀಡಿದ ಸಹಯೋಗದ ಸಲುವಾಗಿ ಕ್ರಾಂತಿಯ ನಾಯಕನಾಗಿದ್ದ “ವ್ಲಾಡಮಿರ್ ಲೆನಿನ್” 1922 ರಲ್ಲಿ ಮಾರ್ಚಿ 8 ನೆಯ ದಿನಾಂಕವನ್ನು ವಿಶ್ವ ಮಹಿಳಾ ದಿನವಾಗಿ ಆಚರಿಸಬೇಕಾಗಿ ಕರೆಕೊಟ್ಟನು. ನಂತರದ ಕಾಲದಲ್ಲಿ ಅದೇ ಪ್ರಕಾರವಾಗಿ ಸಮಾಜವಾದಿ ಮತ್ತು ಕಮ್ಯುನಿಸ್ಟ್ ರಾಷ್ಟ್ರಗಳಲ್ಲಿ ವಿಶ್ವ ಮಹಿಳಾ ದಿನವನ್ನು ಆಚರಿಸುವ ಪರಿಪಾಠವಾಯಿತು. ಇದನ್ನು 1977 ರಲ್ಲಿ ವಿಶ್ವ ಸಂಸ್ಥೆಯು ಸಮರ್ಥಿಸಿತು. ಡಿಸೆಂಬರ್ 1977 ರ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಈ ಪ್ರಸ್ತಾವನೆಯನ್ನು ಅನುಮೋದಿಸಿತು. ಇದನ್ನು ಎಲ್ಲ ಸದಸ್ಯ ರಾಷ್ಟ್ರಗಳು ಮಹಿಳೆಯರ ಹಕ್ಕುಗಳ ಮನ್ನಣೆ ಮತ್ತು ಅಂತರಾಷ್ಟ್ರೀಯ ಸಮಾಧಾನದ ದ್ಯೋತಕವಾಗಿ ಆಯಾ ರಾಷ್ಟ್ರಗಳಲ್ಲಿ ಅವರ ಚಾರಿತ್ರಿಕ ಮತ್ತು ಸಾಂಪ್ರದಾಯಕ ರೀತಿಯಲ್ಲಿ ಆಚರಿಸತಕ್ಕದು ಎಂದು ಸಾರಿತು.

ದಶಕಗಳ ಕಾಲದಲ್ಲಿ ಪ್ರತಿವರ್ಷವೂ ಹೊಸಹೊಸ ಘೋಷವಾಕ್ಯಗಳನ್ನಿಟ್ಟು ಮಹಿಳಾ ದಿನಾಚರಣೆ ಆಚರಿಸಲಾಗುತ್ತಿದೆ. ಇದರಿಂದಾಗಿ ಪ್ರತಿಯೊಂದು ಮಹಿಳಾ ಸಂಘಟನೆ, ಒಕ್ಕೂಟಗಳಿಗೆ ಮಹಿಳೆಯರ ಹಕ್ಕುಬಾಧ್ಯತೆಗಳ ರಕ್ಷಣೆ, ಗೌರವಗಳನ್ನು ಕಾಪಾಡಲು ನಡೆಸುವ ಪ್ರಯತ್ನಗಳಿಗೆ ಸಾಧ್ಯವಾದ ಎಲ್ಲ ನೆರವು ಮತ್ತು ಸಹಯೋಗ ನೀಡಲು ಅವಕಾಶ ಕಲ್ಪಿಸುತ್ತದೆ.

ನಮ್ಮ ನಡುವೆ ನಡೆದಿರುವ ಮಹಿಳೆಯರ ಮೇಲಿನ ದೌರ್ಜನ್ಯ, ಹೆಣ್ಣುಭ್ರೂಣ ಹತ್ಯೆ, ಕೌಟುಂಬಿಕ ಹಿಂಸೆಗಳು ನಿರಂತರವಾಗಿ ಸುದ್ಧಿಮಾಧ್ಯಮಗಳಲ್ಲಿ ಕೇಳಿಬರುತ್ತಲೇ ಇವೆ. ಆದ್ದರಿಂದ ಇವುಗಳ ವಿರುದ್ಧ ಸರ್ಕಾರದೊಡನೆ ಕೈಜೋಡಿಸಿ ಮಹಿಳಾ ಸಂಘಟನೆಗಳು ಕಾರ್ಯ ಪ್ರವೃತ್ತರಾಗಿಬೇಕಾದ ಅಗತ್ಯವಿದೆ. ಅದ್ದರಿಂದ ಮಹಿಳೆಯರೇ, ನಿಮ್ಮ ಪ್ರಯತ್ನ ಈ ದಿನಾಚರಣೆಯ ಒಂದು ದಿನಕ್ಕೆ ಮಾತ್ರ ಮೀಸಲಾಗದೆ ಇರಲಿ. ಪ್ರತಿದಿನವೂ ವಿಶ್ವ ಮಹಿಳಾದಿನವೆಂದೇ ಪರಿಗಣಿಸಿ. ನಿಮ್ಮ ನಿಮ್ಮ ಶಕ್ಯಾನುಸಾರ ನಮ್ಮ ಹೆಣ್ಣುಮಕ್ಕಳ ಹಕ್ಕುಗಳ ರಕ್ಷಣೆ, ಸಾಮಾಜಿಕ ಭದ್ರತೆ, ಮತ್ತು ಅವರ ಸುಖಮಯ ಭವಿಷ್ಯಕ್ಕಾಗಿ ನಿಮ್ಮ ಕೊಡುಗೆ ನಿರಂತರವಾಗಿರಲಿ. ಗೃಹಿಣಿ ಮನಸ್ಸು ಮಾಡಿದರೆ ಏನನ್ನು ಬೇಕಾದರೂ ಸಾಧಿಸಲು ಸಮರ್ಥಳು. ಪುರುಷರಿಗೆ ಎಲ್ಲ ರಂಗಗಳಲ್ಲಿ ಸರಿಸಮನಾಗಿ ಕಾರ್ಯ ನಿರ್ವಹಿಸಬಲ್ಲಳು.

ಇಂತಹ ಅಸಾಮಾನ್ಯ ಸಾಧನೆಗೈದ ಹಲವಾರು ಮಹಿಳೆಯರು ನಮ್ಮೆದುರಿಗೆ ಸ್ಫೂರ್ತಿದಾಯಕರಾಗಿದ್ದಾರೆ. ಉದಾಹರಣೆಗೆ ಹೆಸರಿಸುವುದಾದರೆ ಪೋಲೆಂಡ್ ದೇಶದ ವಿಜ್ಞಾನಿ ನೊಬೆಲ್ ಪ್ರಶಸಿವಿಜೇತೆ “ಮೇರಿ ಕ್ಯೂರಿ” ಅಮೆರಿಕದ ನಾಗರಿಕ ಹಕ್ಕುಗಳ ಪ್ರತಿಪಾದಕಿ “ರೋಸಾ ಪಾರ್ಕ್ಸ್” ಅಮೆರಿಕದ ಪ್ರಸಿದ್ಧ ಟಿ.ವಿ. ನಿರೂಪಕಿ ಮತ್ತು ಸಾಮಾಜಿಕ ಕಾರ್ಯಕರ್ತೆ “ಓಪ್ರಾ ವಿನ್‌ಫ್ರೆ” ಪಾಕಿಸ್ಥಾನದ ತಾಲಿಬಾನಿಗಳಿಂದ ಹತ್ಯೆಗೊಳಗಾದರೂ ಎದೆಗುಂದದೆ ಮಹಿಳೆಯರ ವಿದ್ಯಾಭ್ಯಾಸದ ಬಗ್ಗೆ ಹೋರಾಟ ಮಾಡುತ್ತಿರುವ “ಮಲಾಲಾ ಯೂಸೆಫ್” ಎರಡನೆಯ ಮಹಾಯುದ್ಧದ ನರಮೇಧದಲ್ಲಿ ಬದುಕುಳಿದ ಜರ್ಮನಿಯ ಸಾಹಸಿ ಬರಹಗಾರ್ತಿ “ ಅನ್ನೆ ಫ್ರಾಂಕ್” ಅಮೆರಿಕದ ಬರಹಗಾರ್ತಿಯಾಗಿ ಅಲ್ಲಿನ ಅತ್ಯುನ್ನತ ನಾಗರಿಕ ಪ್ರಶಸ್ತಿವಿಜೇತೆ “ಮಾಯಾ ಏಂಜೆಲ್” ಕೀನ್ಯಾದ ರಾಜಕೀಯ ಕಾರ್ಯಕರ್ತೆ, ಪರಿಸರ ರಕ್ಷಕಿ. ನೊಬೆಲ್ ಶಾಂತಿ ಪುರಸ್ಕೃತೆ “ವಂಗಾರಿ ಮಥಾಯ್” ಸುಮಾರು ಎರಡು ದಶಕಗಳ ಕಾಲ ಟಾಂಜಾನಿಯಾ ಕಾಡಿನಲ್ಲಿ ಜಿಂಪಾಂಜಿಗಳ ಬಗ್ಗೆ ಸಂಶೋಧನೆ ನಡೆಸಿದ ಇಂಗ್ಲೆಂಡಿನ “ಜೇನ್ ಗುಡಾಲ್” ಅಷ್ಟೇ ಏಕೆ ಇತ್ತೀಚೆಗೆ ಅತ್ಯಂತ ಕಠಿಣವಾದ ವ್ಯೋಮಯಾನ ಮಾಡಿ ಒಂಬತ್ತು ತಿಂಗಳ ನಂತರ ಭೂಮಿಗೆ ಹಿಂತಿರುಗಿದ ನಮ್ಮವರೇ ಆದ “ಸುನೀತಾ ವಿಲಿಯಮ್ಸ್”. ಇವರೆಲ್ಲರೂ ಉದಾಹರಣೆಗೆ ಕೆಲವರು ಮಾತ್ರ. ಇಂತಹ ಹಲವಾರು ಮಹಿಳಾ ಸಾಧಕಿಯರು ನಮಗೆ ಮಾದರಿಯಾಗಿದ್ದಾರೆ. ನಮ್ಮ ಇತಿಮಿತಿಯಲ್ಲಿ ಮಹಿಳೆಯರೆಲ್ಲರೂ ಈ ವಿಶ್ವ ಮಹಿಳಾ ದಿನಾಚರಣೆಯ ಮೂಲ ಉದ್ದೇಶವನ್ನು ಗಮನದಲ್ಲಿಟ್ಟುಕೊಂಡು ನಮ್ಮ ಕೆಲಸ ಮಾಡುತ್ತಾ ಇದನ್ನು ಅರ್ಥಪೂರ್ಣವಾಗಿ ಆಚರಿಸೋಣ.

ಬಿ.ಆರ್. ನಾಗರತ್ನ.ಮೈಸೂರು.

7 Responses

  1. ಪ್ರಕಟಣೆಗಾಗಿ ಹೃತ್ಪೂರ್ವಕವಾದ ಧನ್ಯವಾದಗಳು ಗೆಳತಿ ಹೇಮಾ

  2. ಪದ್ಮಾ ಆನಂದ್ says:

    ಮಹಿಳಾ ದಿನಾಚರಣೆಯ ಈ ಸಂದರ್ಭಕ್ಕೆ ಸೂಕ್ತವಾದ ಅತ್ಯಂತ ಆಪ್ತ ಲೇಖನ.

  3. ಶಂಕರಿ ಶರ್ಮ says:

    ಜಾಗತಿಕ ಮಟ್ಟದಲ್ಲಿ ಮಹಿಳಾ ದಿನಾಚರಣೆಯನ್ನು ಆಚರಿಸುತ್ತಿರುವ ಹಿನ್ನೆಲೆಯ ಅಮೂಲಾಗ್ರ ವಿವರನ್ನಿತ್ತ ಲೇಖನ ಚೆನ್ನಾಗಿದೆ ನಾಗರತ್ನ ಮೇಡಂ.

  4. ನಯನ ಬಜಕೂಡ್ಲು says:

    ಉತ್ತಮ ಲೇಖನ

Leave a Reply to ನಯನ ಬಜಕೂಡ್ಲು Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: