ವಾಟ್ಸಾಪ್ ಕಥೆ 58: ಆಲೋಚಿಸಿ ಕೆಲಸ ಮಾಡಬೇಕು.

Share Button

ರೇಖಾಚಿತ್ರ : ಬಿ.ಆರ್.ನಾಗರತ್ನ, ಮೈಸೂರು

ಒಂದು ಮರಳುಗಾಡಿನಲ್ಲಿ ಒಬ್ಬ ಪ್ರಯಾಣಿಸುತ್ತ ದಾರಿತಪ್ಪಿದ. ಜೋರಾದ ಬಿರುಗಾಳಿ ಬೀಸಿತು. ಎಲ್ಲೆಲ್ಲೂ ಮರಳು. ಅವನಿಗೆ ತನ್ನ ಗುಂಪಿನವರು ಎಲ್ಲಿದ್ದಾರೆಂಬುದು ತಿಳಿಯದೆ ಸುಮ್ಮನೆ ಅಲೆದಾಡಿದ. ಮೇಲೆ ಸುಡುತ್ತಿರುವ ಸೂರ್ಯನ ಬಿಸಿಲು, ಕೆಳಗೆ ಕಾಯ್ದು ಸುಡುತ್ತಿರುವ ಮರಳು. ಜನವಸತಿ ಎಲ್ಲಿಯಾದರೂ ಇದ್ದರೆ ಸ್ವಲ್ಪ ನೀರನ್ನಾದರೂ ಕುಡಿಯಬಹುದೆಂದು ಹುಡುಕಾಡಿದ. ಅವನಲ್ಲಿದ್ದ ನೀರಿನ ಕ್ಯಾನ್ ಬರಿದಾಗಿತ್ತು. ಇನ್ನು ಸ್ವಲ್ಪ ಕಾಲದೊಳಗೆ ನೀರು ಕುಡಿಯದಿದ್ದರೆ ತಾನು ಸುಸ್ತಾಗಿ ಬಿದ್ದುಬಿಡುತ್ತೇನೆ ಎಂದು ಭಯವಾಯಿತು. ದೇವರನ್ನ ಪ್ರಾರ್ಥಿಸುತ್ತಾ ತನಗೆ ತೋರಿದ ದಿಕ್ಕಿನತ್ತ ಹೆಜ್ಜೆ ಹಾಕಿದ. ಇನ್ನು ಮುಂದಕ್ಕೆ ಹೋಗಲು ಸಾಧ್ಯವೇ ಇಲ್ಲ ಎನ್ನುವಷ್ಟರಲ್ಲಿ ಒಂದು ಗುಡಿಸಲು ಕಾಣಿಸಿತು.

ಇಲ್ಲಿ ಯಾರಾದರೂ ಇರಬಹುದು ಎಂಬ ಆಸೆಯಿಂದ ಕಾಲುಗಳನ್ನು ಎಳೆಯುತ್ತಾ ಗುಡಿಸಲ ಬಳಿ ಬಂದ. ಅಲ್ಲಿ ಯಾರೂ ಇರಲಿಲ್ಲ. ಬಾಗಿಲು ತೆರೆದಿತ್ತು. ಒಳಕ್ಕೆ ನುಸುಳಿದ. ಒಳಗೆ ಎಲ್ಲಾದರೂ ನೀರಿರಬಹುದೇ ಎಂದು ಹುಡುಕಾಡಿದ. ಮೂಲೆಯಲ್ಲಿ ಒಂದು ನೀರೆತ್ತುವ ಯಂತ್ರವಿತ್ತು. ಅದರಿಂದ ನೆಲದೊಳಕ್ಕೆ ಪೈಪನ್ನು ಇಳಿಬಿಡಲಾಗಿತ್ತು. ಮೇಲೊಂದು ನಳವನ್ನು ಅಳವಡಿಸಿತ್ತು. ಯಂತ್ರಕ್ಕೊಂದು ಚಕ್ರವಿತ್ತು ಅದನ್ನು ತಿರುಗಿಸಲು ಒಂದು ಹ್ಯಾಂಡಲ್ ಕೂಡ ಇತ್ತು. ಅದನ್ನು ನೋಡಿದ ನಂತರ ಅವನು ಸುತ್ತ ಕಣ್ಣಾಡಿಸಿದ. ಯಂತ್ರವಿದ್ದ ಮೂಲೆಯಲ್ಲಿ ಒಂದು ಬಾಟಲು ಕಾಣಿಸಿತು. ಅದರಲ್ಲಿ ನೀರನ್ನು ತುಂಬಿಸಿಡಲಾಗಿತ್ತು. ಅದನ್ನು ಬಿರಡೆಯಿಂದ ಮುಚ್ಚಿತ್ತು. ಜೊತೆಗೆ ಅದಕ್ಕೊಂದು ಕಾಗದ ತಗುಲುಹಾಕಿತ್ತು. ಅದರಲ್ಲೇನೋ ಬರೆದಿರುವುದು ಕಾಣಿಸಿತು. ಅವನಿಗೆ ನೀರು ಕುಡಿಯಲು ಆತುರ. ಆದರೂ ಕಾಗದದಲ್ಲಿ ಬರೆದುದನ್ನು ಓದಿದ. “ನೀವು ಈ ಬಾಟಲಿಯಲ್ಲಿನ ನೀರನ್ನು ಯಂತ್ರದ ಪಕ್ಕದಲ್ಲಿರುವ ಫನಲ್ಲಿನೊಳಕ್ಕೆ ಹಾಕಿ ಚಕ್ರವನ್ನು ತಿರುಗಿಸಿ. ನಳದಿಂದ ಜೋರಾಗಿ ನೀರು ಬರುತ್ತದೆ. ಅದನ್ನು ನೀವು ನಿಮ್ಮ ಕ್ಯಾನ್ಗಳಲ್ಲಿ ತುಂಬಿಸಿಕೊಳ್ಳಿ. ಸ್ನಾನಮಾಡಿ ಆಯಾಸ ಪರಿಹರಿಸಿಕೊಳ್ಳಿ. ಆದರೆ ಇಲ್ಲಿರುವ ಬಾಟಲಿಯಲ್ಲಿ ಮತ್ತೆ ನೀರನ್ನು ತುಂಬಿಸಿಡಲು ಮರೆಯದಿರಿ. ಏಕೆಂದರೆ ನಿಮ್ಮಂತೆ ಇನ್ಯಾರಾದರೂ ನೀರನ್ನು ಹುಡುಕಿ ಇಲ್ಲಿಗೆ ಬರುತ್ತಾರೆ, ಅವರಿಗೆ ಉಪಯೋಗ ಆಗಬೇಕಲ್ಲಾ.” ಎಂದು ಬರೆದಿತ್ತು.

ದಾರಿಹೋಕನಿಗೆ ಬಾಯಾರಿಕೆಯನ್ನು ತಡೆದುಕೊಳ್ಳಲು ಆಗುತ್ತಿರಲಿಲ್ಲ. ಅವನು ಬಾಟಲಿಯಲ್ಲಿದ್ದ ನೀರನ್ನು ಕುಡಿಯಲೆಂದು ಎತ್ತಿದವನು ಅದರ ಜೊತೆಯಿದ್ದ ಎಚ್ಚರಿಕೆಯನ್ನು ಗಮನಿಸಿ ಹಾಗೇ ಸುಮ್ಮನಾದ. ಬಾಟಲಿಯಲ್ಲಿದ್ದ ನೀರನ್ನು ಫನಲ್ಲಿಗೆ ಸುರಿದು ಚಕ್ರವನ್ನು ತಿರುಗಿಸಿದಾಗ ಒಂದು ವೇಳೆ ನೀರು ಬರದಿದ್ದರೆ ಎದುರಿಗಿರುವ ಬಾಟಲಿಯ ನೀರೂ ವ್ಯರ್ಥವಾಗುತ್ತದೆ ಎಂಬ ಸಂದೇಹವುಂಟಾಯಿತು. ಆದರೆ ನಿಧಾನವಾಗಿ ಆಲೋಚಿಸಿ ಬಾಟಲಿಯ ನೀರನ್ನು ಫನಲ್ಲಿನೊಳಕ್ಕೆ ಸುರಿದುಬಿಟ್ಟ. ಹ್ಯಾಂಡಲಿನಿಂದ ಚಕ್ರವನ್ನು ಜೋರಾಗಿ ತಿರುಗಿಸತೊಡಗಿದ. ಕಾಗದದಲ್ಲಿ ಬರೆದಂತೆ ಜೋರಾಗಿ ನೀರು ನಳದಲ್ಲಿ ಹರಿಯಿತು. ಅದನ್ನು ಮನಸೋ ಇಚ್ಛೆ ಕುಡಿದು ದಾಹವಾರಿಸಿಕೊಂಡ. ನಂತರ ತನ್ನಲ್ಲಿದ್ದ ಕ್ಯಾನನ್ನೂ ತುಂಬಿಸಿಕೊಂಡ. ಸ್ನಾನವನ್ನೂ ಮಾಡಿ ಆಯಾಸ ಪರಿಹರಿಸಿಕೊಂಡು ವಿಶ್ರಮಿಸಿದ. ಮರೆಯದೆ ಬಾಟಲಿಯಲ್ಲಿ ನೀರನ್ನು ತುಂಬಿಸಿ ಬಿರಡೆ ಮುಚ್ಚಿ ಮೊದಲಿದ್ದಂತೆ ಇರಿಸಿದ. ಕಾಗದದಲ್ಲಿದ್ದ ಬರವಣಿಗೆಯ ಕೆಳಗೆ ಹೀಗೆ ಮಾಡಿದರೆ ಖಂಡಿತ ಹೆಚ್ಚು ನೀರು ಸಿಗುತ್ತದೆ ಎಂದು ಸೇರಿಸಿದ. ಅಲ್ಲಿಂದ ಹೊರಕ್ಕೆ ಬರುವುದರಲ್ಲಿ ಬಾಗಿಲಿಗೆ ಒಂದು ಕಾಗದ ಸಿಕ್ಕಿಸಿರುವುದು ಕಾಣಿಸಿತು. ಕುತೂಹಲದಿಂದ ಅದೇನೆಂದು ನೋಡಿದ, ಅದರಲ್ಲಿ ಗುಡಿಸಲಿನಿಂದ ನಗರಕ್ಕೆ ಹೋಗುವ ಮುಖ್ಯ ದಾರಿಯನ್ನು ಹೇಗೆ ತಲುಪಬಹುದೆಂಬ ನಕ್ಷೆಯಿತ್ತು. ಅದನ್ನು ಅರ್ಥಮಾಡಿಕೊಂಡು ಅದರಂತೆಯೇ ನಡೆದು ಮುಖ್ಯದಾರಿಯ ಮೂಲಕ ತನ್ನ ಊರನ್ನು ತಲುಪಿದ.

ನಾವು ಜೀವನದಲ್ಲಿ ಮುಂದೇನು ಗತಿ? ಎಂಬ ಹಂತ ತಲುಪಿದಾಗ ಹತಾಶರಾಗಿ ಉತ್ಸಾಹ ಕಳೆದುಕೊಳ್ಳಬಾರದು. ಕೊನೆಯ ಕ್ಷಣದವರೆಗೆ ನಮ್ಮ ಸಮಸ್ಯೆಗೆ ಏನಾದರೂ ಪರಿಹಾರ ಸಿಗುವವರೆಗೂ ಪ್ರಯತ್ನ ಮುಂದುವರೆಸುತ್ತಲೇ ಇರಬೇಕು. ‘ಪ್ರಯತ್ನಿಸಿದರೆ ದೇವರೇ ಸಿಗುತ್ತಾನೆ’ ಎನ್ನುತ್ತಾರೆ ಹಿರಿಯರು. ಅಂದಮೇಲೆ ಕರುಣಾಳುವಾದ ಆತನು ನಮಗೆ ಸರಿದಾರಿಯನ್ನು ತೋರಿಸಲಾರನೇ. ಉಪಕಾರ ಪಡೆದ ನಾವುಗಳು ಇತರರಿಗೂ ನೆರವಾಗಲು ಏನನ್ನಾದರೂ ಮಾಡಬೇಕೆಂಬುದೇ ಜೀವನದ ಸಾರ.



ವಾಟ್ಸಾಪ್ ಕಥೆಗಳು
ಸಂಗ್ರಹ : ಬಿ.ಆರ್ ನಾಗರತ್ನ, ಮೈಸೂರು

10 Responses

  1. ಪ್ರಕಟಣೆಗಾಗಿ ಹೃತ್ಪೂರ್ವಕವಾದ ಧನ್ಯವಾದಗಳು ಗೆಳತಿ ಹೇಮಾ

  2. ಪದ್ಮಾ ಆನಂದ್ says:

    ಸುಂದರ ಸಂದೇಶದೊಂದಿಗೆ ಎಚ್ಚರಿಕೆಯ ಗಂಟೆಯನ್ನೂ ಬಾರಿಸುವಲ್ಲಿ ಕಥೆ ಗೆದ್ದಿದೆ. ರೇಖಾಚಿತ್ರವೂ ಸೊಗಸಾಗಿದೆ.

  3. ಧನ್ಯವಾದಗಳು..ಪದ್ಮಾ ಮೇಡಂ

  4. ನಿಮ್ಮ ವಾಟ್ಸಪ್ ಕಥೆ ಎಂದಿನಂತೆ ಉತ್ತಮವಾಗಿ ಮೂಡಿ ಬಂದಿದೆ

  5. ಮುಕ್ತ c. N says:

    ತುಂಬಾ ಚೆನ್ನಾಗಿದೆ.

  6. ಧನ್ಯವಾದಗಳು ಮುಕ್ತಾ ಮೇಡಂ

  7. ಶಂಕರಿ ಶರ್ಮ says:

    ಜೀವನದಲ್ಲಿ ತಾಳ್ಮೆ, ಸಂಯಮಗಳ ಮಹತ್ವವನ್ನು ಸಾರುವ ಕಥೆ ಪುಟ್ಟದಾಗಿದ್ದರೂ ಬೆಟ್ಟದಷ್ಟು ಸಂದೇಶವನ್ನು ನೀಡಿದೆ, ನಾಗರತ್ನ ಮೇಡಂ. ಪೂರಕ ರೇಖಾಚಿತ್ರ ಎಂದಿನಂತೆ ಚಂದ!

  8. ಎಂದಿನಂತೆ ಧನ್ಯವಾದಗಳು ಶಂಕರಿ ಮೇಡಂ

Leave a Reply to ಪದ್ಮಾ ಆನಂದ್ Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: