ಪುನರುತ್ಥಾನದ ಪಥದಲ್ಲಿ …. ಹೆಜ್ಜೆ 22

Share Button

ವಿಯೆಟ್ನಾಂ, ಕಾಂಬೋಡಿಯ ಪ್ರವಾಸಕಥನ..
ದಿನ 7:  ‘ ಹೊ ಚಿ ಮಿನ್ಹ್ ‘ ನಗರ,   ಕು ಚಿ ಸುರಂಗಗಳು ( Cu Chi Tunnels).

ವಿಯೆಟ್ನಾಂ ಲಾಕ್ಯರ್ ಪೈಂಟಿಂಗ್ ಫಾಕ್ಟರಿಗೆ ಭೇಟಿ ಕೊಟ್ಟ ನಂತರ ನಮ್ಮ ಮಾರ್ಗದರ್ಶಿ ಮುಂದುವರಿಯುತ್ತಾ, ‘ಕು ಚಿ ಸುರಂಗಗಳ’ ರಚನೆ, ಉದ್ದೇಶ, ಗೆರಿಲ್ಲಾ ಪಡೆಯ ಯೋಧರು ಈ ಸ್ಥಳವನ್ನು ಸುರಂಗಗಳ ರಚನೆಗೆ ಆಯ್ಕೆ ಮಾಡಿದ ಕಾರಣ, ಸುರಂಗಗಳಲ್ಲಿ ವಾಸವಾಗಿದ್ದವರ ಜೀವನಶೈಲಿ, ಕಾರ್ಯವೈಖರಿ ಇತ್ಯಾದಿ ವಿವರಿಸಿದರು.

ಭಾರತದ ಚರಿತ್ರೆಯಲ್ಲಿ ಛತ್ರಪತಿ ಶಿವಾಜಿ, ಮಹಾರಾಣಾ ಪ್ರತಾಪ್ ಹಾಗೂ ತಾತ್ಯಾ ಟೋಪೆ ಅವರು ಗೆರಿಲ್ಲಾ ಯುದ್ಧ ಮಾಡಿ ವೈರಿಗಳನ್ನು ಮಣಿಸುತ್ತಿದ್ದರು ಎಂದು ಓದಿದ್ದೇವೆ. ಈ ಕು ಚಿ ಸುರಂಗಗಳನ್ನು ನೋಡಿದಾಗ ‘ಗೆರಿಲ್ಲಾ ಯುದ್ದ’ದ ಪರಿಕಲ್ಪನೆ ನಮ್ಮ ಮನಸ್ಸಿನಲ್ಲಿ ಮೂಡುತ್ತದೆ. ಗೆರಿಲ್ಲಾ ಯುದ್ಧದಲ್ಲಿ ಯೋಧರು ಮತ್ತು ವೈರಿಗಳು ಯುದ್ದದಲ್ಲಿ ಮುಖಾಮುಖಿಯಾಗುವುದಿಲ್ಲ. ಅಜ್ಞಾತವಾಗಿದ್ದುಕೊಂಡೇ ವಿವಿಧ ತಂತ್ರಗಳ ಮೂಲಕ ವೈರಿಯನ್ನು ಸೋಲಿಸುತ್ತಾರೆ.

ಕು ಚಿ ಸುರಂಗಗಳು ಹಿಂದಿನ ದಕ್ಷಿಣ ವಿಯೆಟ್ನಾಂನ ರಾಜಧಾನಿಯಾಗಿದ್ದ ಹೋ ಚಿ ಮಿನ್ಹ್ ಸಿಟಿ (ಸೈಗಾನ್) ನಿಂದ 55 ಮೈಲುಗಳಷ್ಟು ದೂರದಲ್ಲಿವೆ. ಸರಳವಾಗಿ ಅರ್ಥೈಸುವುದಾದರೆ, ಇದೊಂದು ಭೂಗತ ಸುರಂಗಗಳ ಜಾಲವಾಗಿದ್ದು, ನೆಲದೊಳಗಿನ ಅಡುಗುತಾಣ. ಉತ್ತರ ವಿಯೆಟ್ನಾಂನ ‘ವಿಯೆಟ್ ಕಾಂಗ್ ‘ ಎಂಬ ಕಮ್ಯೂನಿಸ್ಟ್ ಗೆರಿಲ್ಲಾ ಪಡೆಗಳ ಭೂಗರ್ಭದೊಳಗಿನ ಬಂಕರ್ ಗಳ ಸಮೂಹ. ಸ್ಥಳೀಯ ದಕ್ಷಿಣ ವಿಯೆಟ್ನಾಂನ ಜನರು ಇವರ ಪರವಾಗಿ ಇಲ್ಲದಿದ್ದರೂ, ವಿರೋಧಿಸುತ್ತಲೂ ಇರಲಿಲ್ಲವಂತೆ. ಈ ಸುರಂಗಗಳನ್ನು ಫ್ರಾನ್ಸ್ ವಸಾಹತುಶಾಹಿಗಳು ಮತ್ತು ವಿಯೆಟ್ನಾಂ ಜನರ ನಡುವೆ ಸಂಭವಿಸಿದ ಪ್ರಥಮ ಇಂಡೋಚೈನಾ ಯುದ್ದದಲ್ಲಿ (1946-1954) ನಿರ್ಮಿಸಲು ಆರಂಭಿಸಿದ್ದರು. ಅನಂತರ ಸುದೀರ್ಘ ಕಾಲ ನಡೆದ ರಷ್ಯಾ ಬೆಂಬಲಿತ ಉತ್ತರ ವಿಯೆಟ್ನಾಂ ಹಾಗೂ ಅಮೇರಿಕಾ ಬೆಂಬಲಿತ ದಕ್ಷಿಣ ವಿಯೆಟ್ನಾಂ, ಪಕ್ಕದ ಲಾವೋಸ್ ಕಾಂಬೋಡಿಯಾಗಳೂ ಭಾಗವಹಿಸಿದ್ದ ಎರಡನೆಯ ಇಂಡೋಚೈನಾ ಯುದ್ದದ (1955-1975) ಸಮಯದಲ್ಲಿ ಈ ಸುರಂಗಗಳನ್ನು ಅಭಿವೃದ್ಧಿಪಡಿಸಲಾಯಿತು. ಸರಳ ಪರಿಕರಗಳನ್ನು ಬಳಸಿ ದಿನಕ್ಕೆ 4-5 ಅಡಿಯಂತೆ ಕೈಯಿಂದಲೇ ಕೆತ್ತಿ ರಚಿಸಿದರಂತೆ. ಅರವತ್ತರ ಮತ್ತು ಎಪ್ಪತ್ತರ ದಶಕದಲ್ಲಿ, ‘ಕು ಚಿ ಪ್ರದೇಶ’ವು ವಿಯೆಟ್ನಾಂ ಯುದ್ದದ ಪ್ರಮುಖ ಕೇಂದ್ರವಾಗಿತ್ತು. ವಿಯೆಟ್ನಾಂನ ಬಿನ್ಹ್ ಡುವಾಂಗ್ ಪ್ರಾಂತ್ಯದ 60 ಚದರ ಮೈಲಿ ಪ್ರದೇಶದಲ್ಲಿ “ಐರನ್ ಟ್ರಯಾಂಗಲ್” ಎಂದು ಹೆಸರಿಸಲಾದ ಸ್ಥಳದಲ್ಲಿ ಕು ಚಿ ಪ್ರದೇಶವೂ ಸೇರಿತ್ತು.

ನಮ್ಮ ಮಾರ್ಗದರ್ಶಿ ಹೇಳಿದ ಪ್ರಕಾರ, ಇಲ್ಲಿಯ ಮಣ್ಣು ಮರಳು ಮಿಶ್ರಿತವಾಗಿದ್ದು, ಅಗೆಯಲು ಸುಲಭವಾಗಿತ್ತು. ಮಳೆ ನೀರು ನೆಲದ ಒಳಗೆ ಅಷ್ಟಾಗಿ ಬಸಿಯುತ್ತಿರಲಿಲ್ಲ. ಮೇಲಾಗಿ, ಸುರಂಗಗಳ ಜಾಲ ಒಟ್ಟು 120 ಕಿಮೀ ಗಳಷ್ಟು ದೂರ ವ್ಯಾಪಿಸಿದ್ದು, ಪಕ್ಕದ ಕಾಂಬೋಡಿಯಾ ಹಾಗೂ ಲಾವೋಸ್ ದೇಶಗಳಿಗೂ ಭೂಮಿಯೊಳಗಿನಿಂದಲೇ ಹೋಗಲು ಸಾಧ್ಯವಿದೆ. ಸುರಂಗಗಳು ಕೆಲವೆಡೆ 36 ಅಡಿಗಳಷ್ಟು ಆಳದಲ್ಲಿದ್ದು, ಎರಡು-ಮೂರು ಅಂತಸ್ತುಗಳಾಗಿಯೂ ಇವೆ. ಇಕ್ಕಟ್ಟಾದ ತಗ್ಗಿನ ಸುರಂಗಗಳೂ ಇವೆ, ವಿಶಾಲವಾದ ಜಾಗಗಳೂ ಇದೆ. ವಿಯೆಟ್ ಕಾಂಗ್ ಯೋಧರು ತಮ್ಮ ವಾಸ, ಆಹಾರ ತಯಾರಿ, ತರಬೇತಿ, ವೈದ್ಯಕೀಯ ಚಿಕಿತ್ಸೆ ಎಲ್ಲದಕ್ಕೂ ಸುರಂಗಗಳನ್ನು ಬಳಸಿದ್ದರು.

ಕು ಚಿ ಸುರಂಗಗಳು

ಸುರಂಗದೊಳಗೆ ಜೀವನ ಸುಲಭವೇನೂ ಆಗಿರಲಿಲ್ಲ. ಇಕ್ಕಟ್ಟಾದ ಜಾಗದಲ್ಲಿ, ಬೆಳಕು ಕಡಿಮೆ ಇರುವ ಸ್ಥಿತಿಯಲ್ಲಿ ಅಥವಾ ಕತ್ತಲಲ್ಲಿ ಇರಬೇಕಿತ್ತು. ಸೊಳ್ಳೆ, ವಿಷಪೂರಿತ ಹಾವು, ಚೇಳುಗಳ ಕಡಿತಕ್ಕೆ ಒಳಗಾಗುತ್ತಿದ್ದರು. ಸರಿಯಾದ ಆಹಾರ, ಔಷಧೋಪಚಾರ ಸಿಗದೆ ಅನಾರೋಗ್ಯ ಕಾಡುತ್ತಿತ್ತು. ಇಲಿ, ಹೆಗ್ಗಣ, ಬಾವಲಿಗಳ ಹಿಕ್ಕೆಗಳಿಂದಲೂ ಅಸೌಖ್ಯತೆ ಬರುತ್ತಿತ್ತು. ಮಲೇರಿಯಾದಿಂದ ಹಲವಾರು ಮಂದಿ ಸತ್ತಿದ್ದರಂತೆ. ಯುದ್ಧದಲ್ಲಿ ಗಾಯಗೊಂಡವರಿಗೆ ಸರಿಯಾದ ಚಿಕಿತ್ಸೆ ದೊರಕದೆ ಸಾಯುತ್ತಿದ್ದರು. ಹಗಲಿಡೀ ಸುರಂಗಗಳಲ್ಲಿ ಇರುತ್ತಿದ್ದ ವಿಯೆಟ್ ಕಾಂಗ್ ಪಡೆ, ರಾತ್ರಿ ತಮ್ಮ ಕಾರ್ಯಾಚರಣೆ ಮಾಡುತ್ತಿತ್ತು. ಹೀಗೆ ತಿಂಗಳಾನುಗಟ್ಟಲೆ ಮೈಗೆ ಸೂರ್ಯನ ಕಿರಣಗಳು ಬೀಳದೆ ಕೆಲವು ಆರೋಗ್ಯ ಸಮಸ್ಯೆಗಳು ಅವರನ್ನು ಕಾಡುತ್ತಿದ್ದುವು.

ಇಷ್ಟೆಲ್ಲಾ ಅನಾನುಕೂಲತೆಗಳ ನಡುವೆಯೂ ವಿಯೆಟ್ ಕಾಂಗ್ ಪಡೆ, ಬಲಾಢ್ಯ ಅಮೆರಿಕಾ ಮತ್ತು ಮಿತ್ರಪಡೆಯನ್ನು ಮಣಿಸಿದ ಪರಿ ಅನನ್ಯ. ಕು ಚಿ ಪ್ರದೇಶದಲ್ಲಿ ಅಮೇರಿಕಾ ಮಿತ್ರಸೇನೆ ತನ್ನ ವಿಶಾಲವಾದ ಸೇನಾನೆಲೆಯನ್ನು ಕಟ್ಟಿಕೊಂಡಿತ್ತು. ವಿಯೆಟ್ ಕಾಂಗ್ ಸೇನೆ ರಾತ್ರಿಯಲ್ಲಿ ಅಮೇರಿಕದ ಸೇನಾನೆಲೆಗೆ ಬಂದು ಆಹಾರವಸ್ತುಗಳನ್ನೂ, ಶಸ್ತ್ರಾಸ್ತ್ರಗಳನ್ನೂ ದೋಚಿಕೊಂಡು ಸಾಕಷ್ಟು ಹಾನಿ ಮಾಡುತ್ತಿತ್ತು. ಇವರು ಎಲ್ಲಿಂದ ಬರುತ್ತಿದ್ದಾರೆಂದು ಗೊತ್ತಾಗದ ಅಮೆರಿಕಾದ ಸೈನಿಕರು ತಬ್ಬಿಬ್ಬಾಗುತ್ತಿದ್ದರು. ಈ ಮಾಹಿತಿಯನ್ನು ಸಂಗ್ರಹಿಸುವ ಪ್ರಯತ್ನದಲ್ಲಿ ಹಲವಾರು ಅಮಾಯಕ ಸ್ಥಳೀಯರನ್ನು ದಾರುಣವಾಗಿ ಹಿಂಸಿಸಿದರು. ಕೊನೆಗೂ ವಿಯೆಟ್ ಕಾಂಗ್ ಜನರು ‘ಸುರಂಗಗಳಲ್ಲಿ’ ಅವಿತಿರುತ್ತಾರೆಂದು ಕಂಡು ಹಿಡಿದ ಅಮೆರಿಕಾ ಸುರಂಗಗಳನ್ನು ನಾಶಗೊಳಿಸಲು ಪಣತೊಟ್ಟಿತು. ದಟ್ಟ ಕಾಡಿನ ಅಡಿಯಲ್ಲಿ ನಿರ್ಮಿಸಲಾದ ಈ ಸುರಂಗಗಳನ್ನು ನಿರ್ನಾಮ ಮಾಡಲು ನಡೆದ ವಿಫಲ ಯತ್ನಗಳ ಬಗ್ಗೆ ವರ್ಣರಂಜಿತ ಘಟನೆಗಳನ್ನು ಹೇಳುತ್ತಾರೆ.

ಪ್ರಸ್ತುತ ಯುದ್ದಸ್ಮಾರಕವಾಗಿರುವ ಈ ಸುರಂಗಗಳ ಒಳಗೆ ಹೋಗುವ ದ್ವಾರವು ಸುಮಾರಾಗಿ ನಮ್ಮ ವಾಟರ್ ಸಂಪ್ ನ ಮುಚ್ಚಳದಂತೆ ಇದೆ. ಕಾಡಿನಲ್ಲಿ ಅಲ್ಲಲ್ಲಿ ಹಲವಾರು ಇಂತಹ ಪ್ರವೇಶ ದ್ವಾರಗಳಿವೆಯಂತೆ. ವೈರಿಗಳನ್ನು ಬೇಸ್ತುಬೀಳಿಸಲು ಅವುಗಳಲ್ಲಿ ಕೆಲವು ‘ಡಮ್ಮಿ’ ದ್ಬಾರಗಳೂ ಇವೆ. ಸುರಂಗಗಳ ಒಳಗೆ ಹೋಗಲು ಇರುವ ದ್ವಾರ ಚಿಕ್ಕದಾಗಿದ್ದು, ಸಣ್ಣಶರೀರದ ವಿಯೆಟ್ನಾಂ ಜನರು ಒಳಗೆ ಹೋಗುವಷ್ಟು ಮಾತ್ರ ಅಗಲವಿದೆ. ದೊಡ್ಡ ಶರೀರದ ಅಮೇರಿಕಾದ ಸೈನಿಕರು ಈ ದ್ವಾರಗಳ ಮೂಲಕ ಪ್ರವೇಶಿಸಲು ಸಾಧ್ಯವಾಗದು. ಹಾಗಾಗಿ ಅವರು ತಮ್ಮ ಸೇನಾ ಶ್ವಾನಗಳನ್ನು ಸುರಂಗಗಳ ಒಳಗೆ ಬಿಡುತ್ತಿದ್ದರಂತೆ. ಆದರೆ ವಿಯೆಟ್ ಕಾಂಗ್ ಯೋಧರು, ಅಮೆರಿಕಾ-ಮಿತ್ರಸೇನೆ ಬಳಸುತಿದ್ದ ಸೋಪು, ಬಟ್ಟೆಗಳನ್ನೂ ದೋಚಿ ಸುರಂಗದಲ್ಲಿ ಇರಿಸುತ್ತಿದ್ದ ಕಾರಣ, ಶ್ವಾನಗಳು ‘ಪರಿಚಿತ ವಾಸನೆ’ ಎಂದೇ ಪರಿಗಣಿಸುತಿದ್ದುವಂತೆ! ಕಾಡಿನಲ್ಲಿ ಅಲ್ಲಲ್ಲಿ ಅಂದಾಜು 10 ಅಡಿ ಆಳವಾದ ಹೊಂಡಗಳನ್ನು ನಿರ್ಮಿಸಿ, ಅದರೊಳಗೆ ‘ಬೂಬಿ ಬಲೆ’ ಎಂದು ಕರೆಯಲ್ಪಡುವ ಚೂಪಾದ ಭರ್ಜಿಗಳನ್ನು ನೆಟ್ಟು , ಕಾಣಿಸದಂತೆ ಮರದ ತಿರುಗಣಿಯುಳ್ಳ ಹಲಗೆಯನ್ನು ಮುಚ್ಚಿರುತ್ತಿದ್ದರು. ಅರಿವಿದ್ದೋ, ಅರಿವಿಲ್ಲದೆಯೋ ಹಲಗೆಯ ಅದರೆ ಮೇಲೆ ಕಾಲಿಟ್ಟವರು ಮುಳ್ಳುಗಳುಳ್ಳ ಖೆಡ್ಡಾಕ್ಕೆ ಬೀಳುತ್ತಿದ್ದರು. ಅಲ್ಲಿಗೆ ಅವರ ಅಂತ್ಯ ಖಚಿತ. ಆಗ ಉಪಯೋಗಿಸಲಾಗಿದ್ದ ವಿವಿಧ ವಿನ್ಯಾಸದ ಬೂಬಿಬಲೆಗಳನ್ನು ಈಗ ಅಲ್ಲಿ ಪ್ರದರ್ಶನಕ್ಕಿರಿಸಿದ್ದಾರೆ.

ಬೂಬಿ ಬಲೆ

ಕಾಡಿನಲ್ಲಿ ಕಂಡುಬಂದ ಕೆಲವು ಸುರಂಗಗಳನ್ನು ಪತ್ತೆಹಚ್ಚಿದ ಅಮೇರಿಕಾ ಮಿತ್ರಸೇನೆ ಒಳಗೆ ಇರುವವರನ್ನು ನಾಶಪಡಿಸಲೇಬೇಕೆಂದು ವಿಷಾನಿಲವನ್ನು ಸುರಂಗದೊಳಗೆ ಹಾಯಿಸಿದರಂತೆ. ಹತ್ತಿರದ ಸೈಗಾನ್ ನದಿಯಿಂದ ಟ್ಯಾಂಕ್ ಗಟ್ಟಲೆ ನೀರು ತಂದು ಸುರುವಿದರಂತೆ. ಸ್ವಲ್ಪ ಸಮಯ ಆದ ಮೇಲೆ ಅವರು ಸುರಿದ ನೀರು ಸುರಂಗದ ಇನ್ನೊಂದು ಬದಿಯಿಂದ ಹೊರಗೆ ಬಂತು ಎಂದು ಅವರೇ ಪತ್ತೆ ಹಚ್ಚಿದರಂತೆ. ಅಲ್ಲಿಗೆ ಅದು ಗೆರಿಲ್ಲಾ ಯೋಧರು ವಾಸಿಸುತ್ತಿದ್ದ ಸುರಂಗವಲ್ಲ, ಮಳೆ ನೀರು ಹರಿದು ಹೋಗಲು ಮಾಡಿದ್ದ ಸುರಂಗ, ಇದನ್ನು ಮುಚ್ಚಿಡುವ ಅಗತ್ಯವೇನೂ ಇಲ್ಲ, ಹಾಗಾಗಿ ತೆರೆದಿರಿಸಿದ್ದಾರೆ ಎಂದು ಅಮೇರಿಕಾ ಮಿತ್ರಸೇನೆಗೆ ತಡವಾಗಿ ಅರ್ಥವಾಯಿತು!

ಸುರಂಗಗಳ ಒಳಗೆ ಹೋಗುವ ದಾರಿ ಗೋಚರವಾಗದೆ ಹತಾಶರಾದ ಮಿತ್ರಸೇನೆ ಹಸಿರಾಗಿದ್ದ ಕು ಚಿ ಅರಣ್ಯ ಪ್ರದೇಶದಲ್ಲಿ ಬಾಂಬ್ ಹಾಗೂ ಬೆಂಕಿ ಹಾಕಿ ಕಾಡನ್ನು ಸುಟ್ಟರು. ಉರಿದು ಬೂದಿಯಾದ ಕಾಡಿನಲ್ಲಿ ಸುರಂಗಗಳಿಗೆ ಹೋಗುವ ದಾರಿ ಹಾಗೂ ಡಮ್ಮಿ ದಾರಿಗಳನ್ನು ಗುರುತಿಸಲು ಸುಲಭವಾಯಿತು. ಆದರೆ, ವಿಯೆಟ್ ಕಾಂಗ್ ಪಡೆ ಇಲ್ಲೂ ಜಾಣತನ ಪ್ರದರ್ಶಿಸಿತು. ಬೂದಿಯ ಮೇಲೆ ನಡೆದಾಗ ಹೆಜ್ಜೆ ಗುರುತು ಮೂಡಿ ವೈರಿ ಪಡೆಗೆ ತಮ್ಮ ಸುಳಿವು ಸಿಗುತ್ತದೆ ಎಂದು, ಪಾದದ ಹಿಮ್ಮಡಿಯ ಭಾಗ ಮುಂದೆ- ಬೆರಳುಗಳಿರುವ ಭಾಗ ಹಿಂದೆ ಇರುವಂತೆ ತಿರುವು ಮುರುವು ವಿನ್ಯಾಸ ಮಾಡಿದ ರಬ್ಬರ್ ಚಪ್ಪಲಿಗಳನ್ನು ಧರಿಸಿಕೊಂಡು ನಡೆದರಂತೆ. ಹೀಗೆ ತಾವು ನಡೆದು ಹೋದ ದಾರಿಯ ವಿರುದ್ಧ ದಿಕ್ಕಿನ ಚಲನೆಯ ಹೆಜ್ಜೆ ಗುರುತು ಮೂಡಿಸಿ ದಾರಿ ತಪ್ಪಿಸಿದರು! ಈ ಮಾದರಿಯ ಚಪ್ಪಲಿಗಳನ್ನು ನಮಗೆ ತೋರಿಸಿದರು.

ತಮ್ಮ ಪ್ರಯತ್ನಗಳು ವಿಫಲವಾಗುತ್ತಿರುವುದನ್ನು ಕಂಡು ಬೇಸತ್ತಿದ್ದ ಅಮೇರಿಕಾ ಮಿತ್ರಸೇನೆ ವಿಮಾನದಿಂದ ಬಾಂಬ್ ಮಳೆಗರೆಯಿತು. ಅಂದಾಜು ಪ್ರಕಾರ, 1964 ರಿಂದ 1973 ರ ಅವಧಿಯಲ್ಲಿ ವಿಯೆಟ್ನಾಂನ ವಿವಿಧ ಭಾಗಗಳ ಮೇಲೆ ಅಮೇರಿಕಾ ಎಸೆದ ಬಾಂಬ್ ಮತ್ತು ಸ್ಫೋಟಕಗಳ ಪ್ರಮಾಣ 7. 6 ಮಿಲಿಯ ಟನ್ ಗಳಿಗಿಂತಲೂ ಹೆಚ್ಚು! ಇಷ್ಟಾಗಿಯೂ ಗೆರಿಲ್ಲಾ ಯುದ್ದ ನಡೆಯುತ್ತಲೇ ಇತ್ತು. ನೆಲದ ಅಡಿಯಲ್ಲಿ 10 ಮೀಟರ್ ಆಳಕ್ಕೂ ನುಗ್ಗಿ ನಾಶ ಮಾಡುವ ಸಾಮರ್ಥ್ಯವಿದ್ದ ಸಹಸ್ರಾರು ಟನ್ ಬಾಂಬ್ ಗಳನ್ನು ಎಸೆದಿದ್ದರು. ಆದರೂ ಅಮೇರಿಕಾಕ್ಕೆ ತಾನು ನಿರೀಕ್ಷಿಸಿದ ಗೆಲುವು ಯಾಕೆ ದೊರೆಯಲಿಲ್ಲ ಎಂಬುದು ಅವಮಾನಕರ ವಿಷಯವಾಯಿತು. ಹಾಗಾದರೆ ಸುರಂಗದ ಒಳಗೆ ಇದ್ದವರು ಯಾಕೆ ಸಾಯಲಿಲ್ಲ? ಇದಕ್ಕೆ ಉತ್ತರ ಏನೆಂದರೆ ನೆಲದ ಅಡಿಯಲ್ಲಿದ್ದ ಸುರಂಗದ ವಿನ್ಯಾಸ ತ್ರಿಕೋನಾಕಾರದಲ್ಲಿತ್ತು. ತ್ರಿಕೋನಾಕಾರದ ಸುರಂಗದ ಒಂದು ಭಾಗದಲ್ಲಿ ತೊಂದರೆ ಇದ್ದಾಗ, ವಿಯೆಟ್ ಕಾಂಗ್ ಪಡೆ ಸುರಂಗದ ಇನ್ನೊಂದು ಕಡೆಗೆ ಹೋಗುತ್ತಿತ್ತು. ಇನ್ನೂ ವ್ಯಂಗ್ಯ ಏನೆಂದರೆ, ಸುರಂಗದ ಒಳಗೆ ಪ್ರತಿದಿನ 4-5 ಅಡಿ ಕೆತ್ತುತ್ತಾ, ಅಮೇರಿಕಾ ಸೇನಾನೆಲೆಯಿದ್ದ ಜಾಗದ ವರೆಗೂ ವಿಸ್ತರಿಸಿತ್ತು. ಅಮೇರಿಕಾ ತನ್ನದೇ ಸೇನಾನೆಲೆಯ ಮೇಲೆ ಬಾಂಬ್ ದಾಳಿ ಮಾಡಲಾರದು ಎಂಬ ವಿಶ್ವಾಸದಿಂದ, ವಿಯೆಟ್ ಕಾಂಗ್ ಪಡೆಯು ಅಮೇರಿಕಾದ ಸೇನಾನೆಲೆಯ ಕೆಳಗಡೆಯೇ ಸುರಂಗಗಳಲ್ಲಿ ವಾಸಿಸುತ್ತಿತ್ತು! ಅಮೇರಿಕಾದವರು ಎಸೆದಿದ್ದ ಬಾಂಬ್ ನ ಭಾಗಗಳನ್ನು ಕತ್ತರಿಸಿ ತಮಗೆ ಬೇಕಾದ ಕಬ್ಬಿಣದ ಶಸ್ತಾಸ್ತ್ರ, ಬೂಬಿ ಬಲೆ ಇತ್ಯಾದಿ ತಯಾರಿಸಿಕೊಂಡರು! ಹೀಗೆ ಅಮೇರಿಕಾ ಮಿತ್ರ ಸೇನೆಗೆ ‘ದುಶ್ಮನ್  ಬಗಲ್ ಮೇ  ನಹೀಂ,  ಘರ್ ಕೆ ನೀಚೇ  ಥಾ’!. ಇದು ಅರಿವಾಗುವ ವೇಳೆಗೆ ಅಮೇರಿಕಾದ ಮಾನ ಜಾಗತಿಕವಾಗಿ ಹರಾಜಾಗಿತ್ತು.

ಈ ಯುದ್ದದಲ್ಲಿ ಅಮೇರಿಕಾ ದೇಶಕ್ಕೂ ಆದ ನಷ್ಟ ಗಮನಾರ್ಹ. ಯು.ಎಸ್. ವರದಿಯ ಪ್ರಕಾರ, 58220 ಅಮೇರಿಕನ್ ಯೋಧರು ಮರಣ ಹೊಂದಿದರು. ಆಗಿನ ಕಾಲಘಟ್ಟದಲ್ಲಿ 171 ಬಿಲಿಯನ್ ಡಾಲರ್ ಆರ್ಥಿಕ ನಷ್ಟವಾಯಿತು. ಒಟ್ಟಿನಲ್ಲಿ ಈ ಯುದ್ದ ಅರ್ಥಹೀನ, ಸೇನೆಯನ್ನು ವಾಪಸು ಕರೆಸಿಕೊಳ್ಳಿ ಎಂದು ಅಮೇರಿಕಾದಲ್ಲಿಯೂ ಪ್ರತಿಭಟನೆಗಳಾದುವು.ಇನ್ನೊಂದು ದೇಶದ ರಾಜಕಾರಣದಲ್ಲಿ ಅನಾವಶ್ಯಕವಾಗಿ ಮೂಗು ತೂರಿಸಿ ಕೋಟ್ಯಾಂತರ ಆರ್ಥಿಕ ನಷ್ಟ ಹಾಗೂ ಲಕ್ಷಾಂತರ ಜನರ ಮಾರಣಹೋಮ ನಡೆಸಿದ ಕುಖ್ಯಾತಿ ಗಳಿಸಿ ವಿಯೆಟ್ನಾಂನ ಕ್ಷಮೆ ಕೇಳಬೇಕಾಯಿತು.

ವಿಯೆಟ್ನಾಂನ ನೆಲದಲ್ಲಿ ಬಿದ್ದ ಕೆಲವು ಬಾಂಬ್ ಗಳು

ಹಣಬಲ, ಸೇನಾಬಲ, ತಂತ್ರಜ್ಞಾನ , ಆಧುನಿಕ ಶಸ್ತ್ರಾಸ್ತ್ರಗಳನ್ನು ಹೊಂದಿದ್ದ, ಸೇನಾ ತರಬೇತಿ ಪಡೆದಿದ್ದ ಅಮೇರಿಕಾ ಮಿತ್ರಸೇನೆಯ ಮುಂದೆ ಅಲ್ಪಸಂಖ್ಯೆಯ, ನೂತನ ಶಸ್ತ್ರಾಸ್ತ್ರಗಳಿಲ್ಲದ, ಸಾಮಾನ್ಯ ಜನರೇ ಹೆಚ್ಚಿದ್ದ ವಿಯೆಟ್ ಕಾಂಗ್ ಏನೇನೂ ಅಲ್ಲ. ಇದೇ ರಣಭೂಮಿಯಲ್ಲಿ, 50 ವರ್ಷಗಳ ಹಿಂದೆ ಕೊನೆಗೊಂಡ ಅತ್ಯಂತ ವಿಧ್ವಂಸಕಾರಿಯಾದ ಯುದ್ದದ ಬಗ್ಗೆ ವಿವರಣೆ ಕೇಳಿಸಿಕೊಳ್ಳುತ್ತಿರುವ ಆ ಘನಗಂಭೀರ ಕ್ಷಣದಲ್ಲಿಯೂ ನನಗೆ ಕಾರ್ಟೂನ್ ಚಾನೆಲ್ ನಲ್ಲಿ ಬಿತ್ತರಗೊಳ್ಳುತ್ತಿದ್ದ ‘ಟಾಮ್ ಅಂಡ್ ಜೆರ್ರಿ’  ನೆನಪಾಗಿ ನಗು ಬಂತು. ದಡ್ಡ ಗಡವ ಬೆಕ್ಕನ್ನು ತನ್ನ ಚೇಷ್ಟೆಗಳಿಂದ ಇನ್ನಿಲ್ಲದೆ ಕಾಡುತ್ತಾ ಆಗಾಗ ಮಾಯವಾಗುವ ಪುಟಾಣಿ ಇಲಿ ಜೆರ್ರಿ ಅಬಾಲವೃದ್ದರಿಗೆ ಮನರಂಜನೆ ಕೊಟ್ಟಿದೆಯಲ್ಲವೇ?

ಈ ಪ್ರವಾಸ ಕಥನದ ಹಿಂದಿನ ಕಂತು ಇಲ್ಲಿದೆ :https://www.surahonne.com/?p=42281

(ಮುಂದುವರಿಯುವುದು)
ಹೇಮಮಾಲಾ.ಬಿ, ಮೈಸೂರು

8 Responses

  1. ಪ್ರವಾಸ ಕಥನ ದಲ್ಲಿ ಸುರಂಗಮಾರ್ಗಗಳ ರಚನೆ ಅದರ ಉದ್ದೇಶ ಗೆರಿಲ್ಲಾ ಯುದ್ಧತಂತ್ರ..ಕಾಲಕಾಲಕ್ಕೆ ಬದಲಾವಣೆ…ಎಲ್ಲವನ್ನೂ ವಿವರವಾಗಿ ಬರೆದಿರುವ ಲೇಖನ ಚೆನ್ನಾಗಿದೆ… ಪೂರಕ ಚಿತ್ರ ಗಳು ಮನಸೆಳೆದವು…ಗೆಳತಿ ಹೇಮಾ ಎಂದಿನಂತೆ ಉತ್ತಮ ನಿರೂಪಣೆ

    • Hema Mala says:

      ಮೆಚ್ಚುಗೆ, ಪ್ರತಿಕ್ರಿಯೆಗೆ ಧನ್ಯವಾದಗಳು.

  2. ಪದ್ಮಾ ಆನಂದ್ says:

    ಮಾನವನ ಬುದ್ಧಿಮತ್ತೆಗೆ ಎಲ್ಲೆಯಿಲ್ಲ ಎಂಬುದನ್ನು ನಿರೂಪಿಸುತ್ತಾ, ಸ್ವಾತಂತ್ರ್ಯಕ್ಕಾಗಿ ನಡೆದ ಯುದ್ಧ ತಂತ್ರಗಳ ವಿವರಣೆ ರೋಚಕವಾಗಿ ಮೂಡಿ ಬಂದಿದೆ.

  3. ಶಂಕರಿ ಶರ್ಮ says:

    ಕಳ್ಳನ ತಲೆದಿಂಬಿನ ಕೆಳಗೆ ಅಡಗಿಸಿಟ್ಟ ಹಣದ ಚೀಲದಂತೆ ಸುರಕ್ಷಿತವಾದ ವಿಯೆಟ್ ಕಾಂಗ್ ಕಮ್ಯೂನಿಸ್ಟ್ ಪಡೆಯ ಗೆರಿಲ್ಲಾ ಯುದ್ಧ ತಂತ್ರಗಳಿಂದ ಬೇಸ್ತು ಬಿದ್ದ ಅಮೆರಿಕ ಪಡೆ, ಅಡಗು ತಾಣವಾದ ಸುರಂಗ ಮಾರ್ಗಗಳ ವಿಶಿಷ್ಟ ರಚನೆ, ಅತ್ಯಂತ ಕಷ್ಟದಲ್ಲೂ ಎದೆಗುಂದದೆ; ಭಯಂಕರ ಬೂಬಿ ಬಲೆಯಂತಹ ಸರಳ ಉಪಾಯಗಳಿಂದ ಅಮೆರಿಕದ ಮಾನ ಹರಾಜು ಹಾಕಿದ ಪುಟ್ಟ ವಿಯೆಟ್ನಾಮಿಗಳಿಗೆ ದೊಡ್ಡ ಸಲಾಂ!! ಪೂರಕ ಚಿತ್ರಗಳೊಂದಿಗೆ ಮೂಡಿಬಂದ ಲೇಖನ ಎಂದಿನಂತೆ ಆಕರ್ಷಕ!

    • Hema Mala says:

      ಅಹಾ..ಚೆಂದದ ಉಪಮೆಯೊಂದಿಗಿನ ಪ್ರತಿಕ್ರಿಯೆ….ಧನ್ಯವಾದಗಳು

  4. ನಯನ ಬಜಕೂಡ್ಲು says:

    ಈ ಬಾರಿ ಬಹಳ ಕುತೂಹಲಕಾರಿಯಾಗಿದೆ ಪ್ರವಾಸ ಕಥನ. ಸುರಂಗದ ಕುರಿತು ಓದುವಾಗ ಬಹಳ ರೋಮಾಂಚನ.

    • Hema Mala says:

      ಮೆಚ್ಚುಗೆ, ಪ್ರತಿಕ್ರಿಯೆಗೆ ಧನ್ಯವಾದಗಳು.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: