ಹಾರುವುದಾ ಕಲಿತ ಮರಿ ಹಕ್ಕಿ

ಅಮ್ಮ ಕಟ್ಟಿದ ಗೂಡಲ್ಲಿ ಬಾಯಿ ತೆರೆದು ಗುಟುಕಿಗಾಗಿ ಕಾಯುತ್ತಿದ್ದೆ
ಹಾರಿ ಬಂದು ಆಹಾರ ನೀಡುವ ಅಮ್ಮನ ಚಿಂವ್ ಗುಡುತ್ತಾ ಕರೆಯುತ್ತಿದ್ದೆ
ಅಮ್ಮನ ಪೋಷಣೆಯ ಫಲವೂ ಎಂಬಂತೆ ರೆಕ್ಕೆ ಬಲಿಯತೊಡಗಿದವು
ಗೂಡಿನ ಹೊರಗೆ ಹಾರಬೇಕೆಂಬ ಇಚ್ಛೆ ಕನಸುಗಳು ಮೊಳಕೆಯೊಡೆದವು
ಮೊದಮೊದಲು ಪುಟಿಯುತ್ತಾ ಗೂಡ ಬಾಗಿಲಿಗೆ ಬಂದೆ
ನಂತರ ಹಾರುತ್ತಾ ಮರದ ಟೊಂಗೆಯ ಮೇಲೆ ಕುಳಿತೆ
ಬೀಸುವ ತಂಗಾಳಿ ಮೈಯ ಮೇಲಿನ ಪುಕ್ಕಗಳ ನೇವರಿಸಿ ಶಭಾಷ್ ಗಿರಿ ಕೊಟ್ಟಿತ್ತು
ಗಿಡದ ಎಲೆಗಳೆಲ್ಲಾ ತಲೆದೂಗಿ ಚಪ್ಪಾಳೆ ತಟ್ಟಿತ್ತು
ಶುಭ್ರ ನೀಲಾಕಾಶ ಸ್ವಚ್ಛಂದವಾಗಿ ವಿಹರಿಸಲು ಕೈ ಬೀಸಿ ಕರೆದಿತ್ತು
ಅಮ್ಮ ತರುವ ಗುಟುಕು ಆಹಾರ ಸಾಲದಾಗಿ ಹೊಟ್ಟೆ ತಾಳ ಹಾಕಿತ್ತು
ಗೂಡ ತುದಿಯಿಂದ ಚಂಗನೆ ಧುಮುಕಿರುವೆ
ರೆಕ್ಕೆಗಳ ಬಡಿಯುತಾ ಗಾಳಿಯಲಿ ತೇಲುತ್ತಿರುವೆ
ಹೊಸ ಹೊಸ ಮರಗಳ ತುದಿಯ ಮೇಲೆ ಕೂರುವ ಅವಕಾಶ
ಸರ್ರನೆ ಇಳಿದು ಹುಳ ಹುಪ್ಪಟೆಗಳ ಹೆಕ್ಕಿ ತಿನ್ನುವ ಧಮಾಕ
ಕೊಕ್ಕು ಮೇಲೆ ಮಾಡಿ ಗಾಳಿಯ ಸೀಳಿ ಮೇಲಕ್ಕೇರುವುದಾ ಕಲಿತಿರುವೆ
ಎರಡು ರೆಕ್ಕೆಗಳ ಸೇರಿಸಿ ಲಂಬವಾಗಿರಿಸಿ ಹಾಗೇ ಕೆಳಗಿಳಿಯುವುದಾ ರೂಢಿಸಿಕೊಂಡಿರುವೆ
ಎನ್ನ ಆಹಾರವ ಹುಡುಕಿಕೊಂಡು ತಿನ್ನುವ ಶಕ್ತಿ ಮನೆ ಮಾಡಿದೆ
ಗೂಡು ತೊರೆದು ಬದುಕ ಕಟ್ಟಿಕೊಳ್ಳುವ ಛಲ ಮುನ್ನಡೆಸಿದೆ
ರೆಕ್ಕೆ ಬಲಿತ ಹಕ್ಕಿಗೆ ಆಗಸವೇ ಕಾರ್ಯಕ್ಷೇತ್ರ ಎಂದು ಮನ ಹೇಳಿದೆ
ಎಲ್ಲರಂತೆ ಹಾರುತಾ ಹಾಡುತಾ ಮುಂದೆ ಸಾಗಬೇಕಿದೆ
– ಶರಣಬಸವೇಶ ಕೆ. ಎಂ
( ಕುಮಾರ ದಿನಕರ್.ಎಂ ಆರನೇ ತರಗತಿ. ಈ ಬಾಲ ಪ್ರತಿಭೆ ಬಿಡಿಸಿದ ಚಿತ್ರಕ್ಕೆ ನನ್ನ ಪುಟ್ಟ
ಅಡಿ ಬರಹ )
ಚಿತ್ರ ಕ್ಕೆ ಪೂರಕ ಕವನ ಪೂರಕ ವಾಗಿದೆ ಸಾರ್
ರೆಕ್ಕೆ ಬಿಚ್ಚಿ ಆತ್ಮವಿಶ್ಹಾಸದಿಂದ ಹಾರುವದ ಕಲಿತ ಹಕ್ಕಿಯ ಚಂದವಾಗಿ ಮೂಡಿ ಬಂದಿದೆ
ಗೂಡಿನೊಳಗೆ ಕುಳಿತು ಅಮ್ಮನ ಬರುವಿಗಾಗಿ ಕಾಯುವ ಹೆಕ್ಕಿ
ದಿನಗಳು ಸಾಗಿದಂತೆ ರೆಕ್ಕೆ ಬಿಚ್ಚಿ ಹಾರಲು ಕಲಿತ ಹಕ್ಕಿ
ಇದೇ ಜಗದ ನಿಯಮ
Nice one
ಧನ್ಯವಾದಗಳು ನಾಗರತ್ನ ಮೇಡಂ, ಗಾಯತ್ರಿ ದೇವಿ ಸಜ್ಜನ್ ಮೇಡಂ ಹಾಗೂ ನಯನ ಬಜಕೂಡ್ಲು ಮೇಡಂ ಅವರಿಗೆ
ಚಂದದ ಚಿತ್ರಕ್ಕೆ ಒಪ್ಪುವ ಸುಂದರ ಸಾಲುಗಳಿಗಾಗಿ ಈರ್ವರೂ ಅಭಿನಂದನಾರ್ಹರು.
ಸುಂದರವಾದ ಚಿತ್ರಕ್ಕೆ ಪೂರಕವಾಗಿ ರಚನೆಯಾದ ಪ್ರಬುದ್ಧ ಕವನ .
ಓದಿ ಪ್ರತಿಕ್ರಿಯೆ ನೀಡಿದ ಪದ್ಮಾಆನಂದ್ ಮೇಡಂ ಹಾಗೂ ಶಂಕರಿ ಶರ್ಮ ಮೇಡಂ ಅವರಿಗೆ
ಧನ್ಯವಾದಗಳು