ಬೆಳಕು-ಬಳ್ಳಿ

ಹಾರುವುದಾ ಕಲಿತ ಮರಿ ಹಕ್ಕಿ

Share Button

ಅಮ್ಮ ಕಟ್ಟಿದ ಗೂಡಲ್ಲಿ ಬಾಯಿ ತೆರೆದು ಗುಟುಕಿಗಾಗಿ ಕಾಯುತ್ತಿದ್ದೆ
ಹಾರಿ ಬಂದು ಆಹಾರ ನೀಡುವ ಅಮ್ಮನ ಚಿಂವ್ ಗುಡುತ್ತಾ ಕರೆಯುತ್ತಿದ್ದೆ

ಅಮ್ಮನ ಪೋಷಣೆಯ ಫಲವೂ ಎಂಬಂತೆ ರೆಕ್ಕೆ ಬಲಿಯತೊಡಗಿದವು
ಗೂಡಿನ ಹೊರಗೆ ಹಾರಬೇಕೆಂಬ ಇಚ್ಛೆ ಕನಸುಗಳು ಮೊಳಕೆಯೊಡೆದವು

ಮೊದಮೊದಲು ಪುಟಿಯುತ್ತಾ ಗೂಡ ಬಾಗಿಲಿಗೆ ಬಂದೆ
ನಂತರ ಹಾರುತ್ತಾ ಮರದ ಟೊಂಗೆಯ ಮೇಲೆ  ಕುಳಿತೆ

ಬೀಸುವ ತಂಗಾಳಿ ಮೈಯ ಮೇಲಿನ ಪುಕ್ಕಗಳ ನೇವರಿಸಿ ಶಭಾಷ್ ಗಿರಿ ಕೊಟ್ಟಿತ್ತು
ಗಿಡದ ಎಲೆಗಳೆಲ್ಲಾ ತಲೆದೂಗಿ ಚಪ್ಪಾಳೆ ತಟ್ಟಿತ್ತು

ಶುಭ್ರ ನೀಲಾಕಾಶ ಸ್ವಚ್ಛಂದವಾಗಿ ವಿಹರಿಸಲು ಕೈ ಬೀಸಿ ಕರೆದಿತ್ತು
ಅಮ್ಮ ತರುವ ಗುಟುಕು ಆಹಾರ ಸಾಲದಾಗಿ ಹೊಟ್ಟೆ ತಾಳ ಹಾಕಿತ್ತು

ಗೂಡ ತುದಿಯಿಂದ ಚಂಗನೆ ಧುಮುಕಿರುವೆ
ರೆಕ್ಕೆಗಳ ಬಡಿಯುತಾ ಗಾಳಿಯಲಿ ತೇಲುತ್ತಿರುವೆ

ಹೊಸ ಹೊಸ ಮರಗಳ ತುದಿಯ ಮೇಲೆ ಕೂರುವ ಅವಕಾಶ
ಸರ್ರನೆ ಇಳಿದು ಹುಳ ಹುಪ್ಪಟೆಗಳ ಹೆಕ್ಕಿ ತಿನ್ನುವ ಧಮಾಕ

ಕೊಕ್ಕು ಮೇಲೆ ಮಾಡಿ ಗಾಳಿಯ ಸೀಳಿ ಮೇಲಕ್ಕೇರುವುದಾ‌ ಕಲಿತಿರುವೆ
ಎರಡು ರೆಕ್ಕೆಗಳ ಸೇರಿಸಿ ಲಂಬವಾಗಿರಿಸಿ ಹಾಗೇ ಕೆಳಗಿಳಿಯುವುದಾ ರೂಢಿಸಿಕೊಂಡಿರುವೆ

ಎನ್ನ ಆಹಾರವ ಹುಡುಕಿಕೊಂಡು ತಿನ್ನುವ ಶಕ್ತಿ ಮನೆ ಮಾಡಿದೆ
ಗೂಡು ತೊರೆದು ಬದುಕ ಕಟ್ಟಿಕೊಳ್ಳುವ ಛಲ ಮುನ್ನಡೆಸಿದೆ

ರೆಕ್ಕೆ ಬಲಿತ ಹಕ್ಕಿಗೆ ಆಗಸವೇ ಕಾರ್ಯಕ್ಷೇತ್ರ ಎಂದು ಮನ ಹೇಳಿದೆ
ಎಲ್ಲರಂತೆ ಹಾರುತಾ ಹಾಡುತಾ ಮುಂದೆ ಸಾಗಬೇಕಿದೆ


– ಶರಣಬಸವೇಶ ಕೆ. ಎಂ
( ಕುಮಾರ ದಿನಕರ್.ಎಂ ಆರನೇ ತರಗತಿ. ಈ ಬಾಲ ಪ್ರತಿಭೆ ಬಿಡಿಸಿದ ಚಿತ್ರಕ್ಕೆ ನನ್ನ ಪುಟ್ಟ
ಅಡಿ ಬರಹ )

8 Comments on “ಹಾರುವುದಾ ಕಲಿತ ಮರಿ ಹಕ್ಕಿ

  1. ರೆಕ್ಕೆ ಬಿಚ್ಚಿ ಆತ್ಮವಿಶ್ಹಾಸದಿಂದ ಹಾರುವದ ಕಲಿತ ಹಕ್ಕಿಯ ಚಂದವಾಗಿ ಮೂಡಿ ಬಂದಿದೆ
    ಗೂಡಿನೊಳಗೆ ಕುಳಿತು ಅಮ್ಮನ ಬರುವಿಗಾಗಿ ಕಾಯುವ ಹೆಕ್ಕಿ
    ದಿನಗಳು ಸಾಗಿದಂತೆ ರೆಕ್ಕೆ ಬಿಚ್ಚಿ ಹಾರಲು ಕಲಿತ ಹಕ್ಕಿ
    ಇದೇ ಜಗದ ನಿಯಮ

  2. ಧನ್ಯವಾದಗಳು ನಾಗರತ್ನ ಮೇಡಂ, ಗಾಯತ್ರಿ ದೇವಿ ಸಜ್ಜನ್ ಮೇಡಂ ಹಾಗೂ ನಯನ ಬಜಕೂಡ್ಲು ಮೇಡಂ ಅವರಿಗೆ

  3. ಚಂದದ ಚಿತ್ರಕ್ಕೆ ಒಪ್ಪುವ ಸುಂದರ ಸಾಲುಗಳಿಗಾಗಿ ಈರ್ವರೂ ಅಭಿನಂದನಾರ್ಹರು.

  4. ಸುಂದರವಾದ ಚಿತ್ರಕ್ಕೆ ಪೂರಕವಾಗಿ ರಚನೆಯಾದ ಪ್ರಬುದ್ಧ ಕವನ .

    1. ಓದಿ ಪ್ರತಿಕ್ರಿಯೆ ನೀಡಿದ ಪದ್ಮಾಆನಂದ್ ಮೇಡಂ ಹಾಗೂ ಶಂಕರಿ ಶರ್ಮ ಮೇಡಂ ಅವರಿಗೆ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *