ಪರಾಗ

ಒಲವ ನೋಂಪಿ

Share Button

ಆಗ ತಾನೇ ಬೆಳಗಿನ ತಿಂಡಿಯನ್ನು ಮುಗಿಸಿ ದೈನಂದಿನ ಕೆಲಸಗಳತ್ತ ಗಮನ ಹರಿಸಬೇಕೆನ್ನುವಷ್ಟರಲ್ಲಿ ಬಂದ ದೂರವಾಣಿ ಕರೆ ಸುಚಿತ್ರಾಳ ಮನದಲೆಗಳ ಮೇಲೆ ಬಿದ್ದ ಸಣ್ಣ ಕಲ್ಲಿನಂತಾಗಿ ಎದ್ದ ಆವೃತ್ತಗಳು ಅವಳನ್ನು ನೆನಪಿನಾಳಕ್ಕೆ ಕರೆದೊಯ್ದವು.  ಪತಿಯನ್ನುದ್ದೇಶಿಸಿ ಹೇಳಿದಳು –

ನಾಗೇಶ್‌, ನನಗೇಕೋ ಇಂದು ಮುಂದಿನ ಮನೆಕೆಲಸಗಳನ್ನು ಮಾಡುವ ಮನಸ್ಸಿಲ್ಲ ಪ್ಲೀಸ್‌  .  .  .  .

ಓಕೆ, ಓಕೆ, ಕ್ಯಾರೀ ಆನ್‌, ನನಗರ್ಥವಾಗುತ್ತೆ.  ನಾನು ಏನೋ ಒಂದು ನನಗೆ ತಿಳಿದ ಹಾಗೆ ವ್ಯವಸ್ಥೆ ಮಾಡುತ್ತೇನೆ.  ನೀನು ಫೋನ್‌ನಲ್ಲಿ ಮಾತನಾಡಿದ್ದು ಕೇಳಿಸಿಕೊಂಡೆ, ಜಾಸ್ತಿ ಯೋಚಸಿ ತಲೆ ಕೆಡಿಸಿಕೊಳ್ಳ ಬೇಡ.

ಗಂಡನೆಡೆಗೆ ಕೃತಜ್ಞತೆಯ ನೋಟ ಬೀರಿದ ಸುಚಿತ್ರಾ ಕೈಯಲ್ಲೊಂದು ನೆಪಕ್ಕೆ ಪುಸ್ತಕ ಹಿಡಿದು ಕನ್ನಡಕ ಕಣ್ಣುಗಳಿಗೇರಿಸಿ ಮಲಗುವ ಕೋಣೆಯತ್ತ ನಡೆದಳು.

ಜೀವನದುದ್ದಕ್ಕೂ ಎಲ್ಲಾ ಮನೆವಾರ್ತೆಗಳ ಕರ್ತವ್ಯಗಳನ್ನು ಅತ್ಯಂತ ಜವಾಬ್ದಾರಿಯುತವಾಗಿ ನಿರ್ವಹಿಸಿ ಈ ನಡುವೆ ಅನಾರೋಗ್ಯದಿಂದ ನಿಶ್ಯಕ್ತಳಾಗಿದ್ದ ಸುಚಿತ್ರಾಳನ್ನು ರಿಟೈರ್‌ ಆದ ನಂತರ ತನ್ನ ಆದ್ಯ ಕರ್ತವ್ಯ ಅನ್ನುವಂತೆ ಮುಚ್ಚಟೆಯಂದ ನೋಡಿಕೊಳ್ಳುತ್ತಿದ್ದ ನಾಗೇಶ್‌ ಕೆಲಸ ಹುಡುಕಿಕೊಂಡು ಅಡುಗೆ ಮನೆಯೆಡೆಗೆ ನಡೆದರು.

ಹಾಸಿಗೆಯ ಮೇಲೆ ಮಲಗಿ ಓದಲೆತ್ನಿಸಿದರೂ ಓದಲಾಗದೆ, ನೆನಪುಗಳ ಧಾಳಿಗೆ ಮೈಮನಗಳನ್ನು ಅರ್ಪಿಸಿಬಿಟ್ಟಳು ಸುಚಿತ್ರಾ.

_______________

ಸುಚೀ, ಒಂದು ತುಂಬಾ ಗುಡ್‌ ನ್ಯೂಸ್‌ ಕಣೆ – ಅತ್ತಲ್ಲಿಂದ ಅಣ್ಣ ಸುಬ್ರಹ್ಮಣ್ಯ ಕರೆ ಮಾಡಿದ್ದರು.

ಏನೋ ಸೌಮ್ಯಾಗೆ ಹುಡುಗ ಸೆಟ್‌ ಆದ್ನಾ?

ಅದ್ಹೇಗೆ ನೀನು ಇಷ್ಟು ಕರಾರುವಕ್ಕಾಗಿ ಊಹಿಸಿಬಿಟ್ಟೆ?

ಯಾಕೇ ಅಂದ್ರೆ, ನಿನ್ನ ಮಾತುಗಳಲ್ಲಿದ್ದ ಖುಷಿಯನ್ನು ಕೇಳಿಯೇ ಊಹಿಸಿದೆ.  ನೀನು ಹಾಗೆಲ್ಲಾ ಸಣ್ಣ ಪುಟ್ಟದ್ದಕ್ಕೆಲ್ಲಾ ಬೇಗ ಖುಷಿಯಾಗೋಲ್ಲ, ಇಷ್ಟು ಖುಷಿಯಂತೂ ಎಂದು ಕೇಳಿಲ್ಲ, ಮನವನರಿಯುವ ಸೋದರಿ ನಾನು, ಹೇಳು, ಹುಡುಗ ಯಾರು? ಏನು ಓದಿದ್ದಾನೆ? ಎಲ್ಲಿ ಕೆಲಸ ಮಾಡುತ್ತಿದ್ದಾನೆ? ಒಡಹುಟ್ಟಿದವರು ಎಷ್ಟು ಜನ? ನೋಡೋದಕ್ಕೆ ಹೇಗಿದ್ದಾನೆ?

ಅಬ್ಬಾ, ಅಬ್ಬ, ಎಷ್ಟು ಅರ್ಜೆಂಟೇ ನಿಂಗೆ.  ಹೇಳ್ತೀನಿ ಕೇಳು.  ಮೊದಲಿಗೆ ಜಾತಕಗಳು ತುಂಬಾ ಚೆನ್ನಾಗಿ ಹೊಂದಾಣಿಕೆ ಆಗುತ್ತೆ.  31 ಗುಣಗಳು ಕೂಡುತ್ವಂತೆ.  ಇಬ್ಬರೇ ಗಂಡು ಮಕ್ಕಳು.  ಇವನೇ ಹಿರಿಯವನು.  ಎಂ. ಎಸ್.‌, ಮಾಡಿದ್ದಾನೆ.  ಅಮೆರಿಕೆಯ ಕ್ಯಾಲಿಫೋರ್ನಿಯಾದಲ್ಲಿ ಒಳ್ಳೆಯ ಕೆಲಸದಲ್ಲಿ ಇದ್ದಾನೆ. 

ಅಣ್ಣನ ಬಣ್ಣನೆಗಳು ಕೇಳಿ ಸುಚಿತ್ರಾಳಿಗೆ ತುಂಬಾ ಸಮಾಧಾನವಾಯಿತು.  ಸೌಮ್ಯ ಹುಟ್ಟಿದಾಗ ಅವಳು ಅಲ್ಲೇ ಅಣ್ಣನ ಮನೆಯಲ್ಲಿದ್ದು ಓದುತ್ತಿದ್ದಳು.  ಇವಳು ಎತ್ತಿ ಆಡಿಸಿದ ಮಗು ಸೌಮ್ಯ.  ಒಳ್ಳೆಯ ಮನೆ ಸೇರಿ ಅಮೆರಿಕಾದಲ್ಲಿ ನೆಲೆಸಲು ಹೋಗುತ್ತಾಳೆ ಎಂದರದು ಖುಷಿಯ ಪರಕಾಷ್ಠೆ.

ಗಂಭೀರ ಸ್ವಭಾವದ ಅಣ್ಣನಿಗೆ, ಇಂದು ಮಾತ್ರ ಅಳಿಯನ ಬಗ್ಗೆ ಎಷ್ಟು ಹೇಳಿದರೂ ಸಾಲದು –

ಒಂದು ವಾರದಿಂದ ಮಾತುಕತೆಗಳು ನಡೆಯುತ್ತಿದ್ದವು ಸುಚೀ, ಅವರ ಮನೆಯವರಿಗೆ ಮತ್ತು ನಮಗೂ ಒಪ್ಪಿಗೆ ಎಂದಾದ ಬಳಿಕ ದಿನಾ ಇಬ್ಬರೂ ಗಂಟೆಗಟ್ಟೆಲೆ ಮಾತನಾಡುತ್ತಿದ್ದರು.  ಆದರೂ ಯಾವುದೇ ತೀರ್ಮಾನಕ್ಕೂ ಬಂದಿರಲಿಲ್ಲ.  ಇಂದು ಒಪ್ಪಿಗೆ ಕೊಟ್ಟರು.  ನಾಳೆ ಶುಕ್ರವಾರ ಅವರ ಮನೆಗೆ ನಮ್ಮನ್ನು ಆಹ್ವಾನಿಸಿದ್ದಾರೆ, ಅವರ ಹತ್ತಿರದ ನೆಂಟರಿಷ್ಟರಿಗೆಲ್ಲಾ ಪರಿಚಯಿಸಲು.  ಶನಿವಾರ ಮಧ್ಯಾನ್ಹ ನಮ್ಮ  ಮನೆಯಲ್ಲಿ ಎಲ್ಲರೂ ಸೇರೋಣ, ನೀವೆಲ್ಲರೂ ಆದಷ್ಟು ಬೇಗ ಅಂದು ಬಂದುಬಿಡಿ.

ಬರದೇ ಇರ್ತೀವಾ? ಖಂಡಿತಾ ಬರ್ತೀವಿ.  ಆದ್ರೂ ಇನ್ನೂ ಎರಡು ದಿನ ಕಾಯಬೇಕಲ್ಲ ನಮ್ಮ ಮುದ್ದು ಸೌಮ್ಯಳ ರಾಜಕುಮಾರನನ್ನು ನೋಡಲು, ಇರ್ಲಿ ಬಿಡು.  ಅದು ಸರಿ, ವಾರಗಟ್ಲೆ, ಗಂಟಾನುಗಟ್ಲೆ ಏನು ಮಾತನಾಡುತ್ತಿದ್ದರಂತೆ? ನಮ್ಮ ಸೌಮ್ಯ ಯಾವಾಗ ಮದುವೆ ಮಾಡಿಕೊಳ್ಳುವಷ್ಟು ದೊಡ್ಡವಳಾದಳೋ ತಿಳಿಯಲೇ ಇಲ್ಲ.  ನಿನ್ನೆ ಮೊನ್ನೆ ತೊಡೆಯ ಮೇಲೆ ಮಲಗಿದ ಹಾಗಿದೆ.

ಹುಂ ಸುಚೀ, ನನಗೂ ಹಾಗೇ ಅನ್ನಿಸುತ್ತೆ.  ಸಧ್ಯ ಮಾತಾಡಿದ್ದೆಲ್ಲಾ ಹೇಳ್ತಾರಾ ನಮ್ಮ ಕೈಲಿ.  ಹೈಲೈಟ್ಸ್‌ ಅಂದ್ರೆ, ಎಂಜಿನಿಯರಿಂಗ್‌ ಓದಿರುವ ಇವಳು ಇಷ್ಟಪಟ್ಟರೆ ಮುಂದೆಯೂ ಓದಬಹುದು, ಕೆಲಸ ಮಾಡಬಹುದು . .  ಮುಂತಾದ ಇವಳಿಗೆ ಖುಷಿ ಅನ್ನಿಸುವ ವಿಷಯಗಳು.  ಏನು ಗೊತ್ತಾ ಸುಚೀ – ನಾನೇನು ನೀನು ದಿನಾ ಅಡುಗೆ ಮಾಡಬೇಕೊಂಡು ಕೂತಿರಬೇಕು ಅಂತ ನಿರೀಕ್ಷಿಸುವುದಿಲ್ಲ, ವಾರಕ್ಕೆ 3-4 ದಿನ ಇಬ್ಬರೂ ಸೇರಿ ಅಡುಗೆ ಮಾಡೋಣ – ಅಂದನಂತೆ, ಹೀಗೇ ಏನೇನೋ ವಿಷಯಗಳು.  ಏನೂ ಗೊತ್ತಾ ಸುಚೀ, ಅದೇನೋ ಬರ್ಮುಡಾ ಅಂತೆ, ಚಡ್ಡೀನೇ ಹಾಕ್ಕೊಂಡು ಬಂದು ಬಿಡ್ತಾನೆ, ಇಬ್ಬರೂ ಹರಟ್ತಾ ಕೂತ್ಕೊಂಬಿಡ್ತಾರೆ.

ಅಣ್ಣನಿಗೆ ಅಳಿಯನ ಕುರಿತಾಗಿ ಹೇಳುವ ಉತ್ಸಾಹ ಮೇರೆ ಮೀರಿತ್ತು.  ಸುಚಿತ್ರಾಳಿಗೆ ಎಷ್ಟು ಕೇಳಿದರೂ ಸಾಲದು ಅನ್ನಿಸುತಿತ್ತು.

ಮುಂದಿನದೆಲ್ಲಾ ಧಾಂ, ಧೂಂ  ಎಂದು ನಡೆಯಿತು.  ಸೌಮ್ಯ ಅಮೆರಿಕಾಗೆ ಹಾರಿ ಆಯಿತು.  ಮುಂದಿನ ಹತ್ತು ವರ್ಷಗಳು ಸುಬ್ರಹ್ಮಣ್ಯ ಅವರ ಮನೆಯ ಸ್ವರ್ಣಯುಗ.

ಎರಡು ವರ್ಷಗಳಿಗೊಮ್ಮೆ ಭಾರತಕ್ಕೆ ಬರುವುದು, ಅತ್ತೆ, ಮಾವ, ಅಪ್ಪ, ಅಮ್ಮ ಅವರುಗಳನ್ನು ಅಮೆರಿಕಾಗೆ ಕರೆಸಿಕೊಳ್ಳುವುದು ಮುಂತಾದವುಗಳ ಜೊತೆ ಜೊತೆಯಲ್ಲಿ ಸೌಮ್ಯ ಕೂಡ ಎಂ.ಎಸ್.‌, ಮುಗಿಸಿ ಎರಡು ವರ್ಷಗಳು ಕೆಲಸ ಮಾಡಿ ಮದ್ದಾದ ಗಂಡು ಮಗುವಿಗೆ ತಾಯಿಯೂ ಆದಳು.  ಶರತ್‌ ಎಂದು ಹೆಸರಿಟ್ಟರು.

ಮೊಮ್ಮಗ ಹುಟ್ಟಿದ ನಂತರ ಸುಬ್ರಹ್ಮಣ್ಯ, ಅವರ ಪತ್ನಿ ಅಥವಾ ಅವರ ಬೀಗ, ಬೀಗಿತ್ತಿಯರು ಆರಾರು ತಿಂಗಳು ಸರತಿಯಂತೆ ಹೋಗಿ ಮೊಮ್ಮಗನೊಂದಿಗೆ ಕಾಲ ಕಳೆಯುತ್ತಾ ಸೌಮ್ಯಾ ಮತ್ತವಳ ಗಂಡನ ಕೆರಿಯರಿಗೆ ತೊಂದರೆಯಾಗದಂತೆ ಒತ್ತಾಸೆಯಾಗಿದ್ದರು. ದಿನಗಳು ಓಡುತ್ತಿದ್ದವು.

————————

ಮುಂಚಿನಿಂದಲೂ ಸೌಮ್ಯಳ ಗಂಡ ಅತೀ ಬುದ್ಧಿವಂತ ಮತ್ತು ವರ್ಕಹೋಲಿಕ್.‌ ಒಂದು ದಿನ ಇಬ್ಬರೂ ಕೆಲಸ ಮುಗಿಸಿ ಬಂದರು.  ಅಡುಗೆಯಾಯಿತು, 4 ವರ್ಷದ ಮಗನಿಗೆ ಊಟ ಮಾಡಿಸಿ ಕಥೆ ಹೇಳಿ ಲಾಲಿಸಿ ಪಾಲಿಸಿ ಮಲಗಿಸಿದರು.  ಒಂದೆರಡು ಗಂಟೆ ಇಬ್ಬರೂ ಲ್ಯಾಪಟಾಪಿನಲ್ಲಿ ಮುಖ ಹುದುಗಿಸಿ ಆಫೀಸಿನ ಕೆಲಸಗಳಲ್ಲಿ ತೊಡಗಿದರು.  ರಾತ್ರಿ 8.30 ಆಯಿತು.  ಊಟ ಮುಗಿಸೋಣವೆಂದು ಎದ್ದರು.  ಸೌಮ್ಯ ಊಟ ಮುಗಿಸಿ ಕಿಚನ್‌ ಕ್ಲೀನ್‌ ಮಾಡೋಣವೆಂದು ಅಡುಗೆ ಮನೆಗೆ ನಡೆದಳು.  ಮನೋಜ್‌ ಮೊಸರನ್ನ ತಿನ್ನುತ್ತಿದ್ದ.

ಸೌಮ್ಯಾ ನನ್ನ ಕೈಲಿ ಆಗುತ್ತಿಲ್ಲಾ…….. ಕೆಟ್ಟ ಸ್ವರದಲ್ಲಿ ಚೀರಿದ ಸದ್ದು ಕೇಳಿ ಓಡಿ ಬಂದರೆ ಬೆನ್ನಿನ ಮೇಲೆ ಕತ್ತಿನ ಹತ್ತಿರ ಕೈ ಹಿಡಿದುಕೊಂಡು ಮನೋಜ್‌ ಕೆಳಗೆ ಬಿದ್ದಿದ್ದಾನೆ. ಮುಖ ಭಯಂಕರ ಯಾತನೆಯಿಂದ ಕಿವಿಚಿದೆ.

ಒಂದು ಸೆಕೆಂಡ್‌ ಕೂಡ ವ್ಯರ್ಥ ಮಾಡದೆ ಸಮಯಪ್ರಜ್ಞೆಯಿಂದ ಆಂಬ್ಯುಲೆನ್ಸಗೆ ಫೋನ್‌ ಮಾಡಿದ ಸೌಮ್ಯಾ ನಂತರ ಹತ್ತಿರ ಬಂದು ತೊಡೆಯ ಮೇಲೆ ಮಲಗಿಸಿಕೊಳ್ಳುವಷ್ಟರಲ್ಲೇ ಆಂಬ್ಯಲೆನ್ಸ ಏನೋ ಬಂತು.  ಆದರೆ ಕುಟುಂಬಕ್ಕೆ ರಾಹು ಬಡಿದಾಗಿತ್ತು.   ಬ್ರೈನ್‌ ಹ್ಯಾಮರೇಜ್‌ ಎಂಬ ಹೆಸರನ್ನೇನೋ ವೈದ್ಯರು ಕೊಟ್ಟರು.  34 ವರ್ಷದ ಮನೋಜ್‌ ಬಾರದ ಲೋಕಕ್ಕೆ ನಡೆದಾಗಿತ್ತು.  ಎರಡೂ ಕುಟುಂಬಗಳ ನೋವು ಮೇರೆ ಮೀರಿತ್ತು.

ನೋವಿನ ಮಡುವಿನಲ್ಲಿದ್ದುಕೊಂಡತೆಯೇ ಕಾಲ ಚಕ್ರ ಉರುಳತೊಡಗಿತು.  8-10 ತಿಂಗಳುಗಳು ಕಳೆಯಿತು.

ಮತ್ತೊಮ್ಮೆ ತಂಗಿಗೆ ಸುಬ್ರಹ್ಮಣ್ಯ ಫೋನಾಯಿಸಿದರು.  – ಸುಚೀ ನೀನೊಂದು ನಾಲ್ಕು ತಿಂಗಳು ಅಮೆರಿಕಾಗೆ ಹೋಗಿ ಸೌಮ್ಯಳೊಂದಿಗೆ ಇದ್ದು ಬರಲು ಸಾಧ್ಯವಾ? ನಾವಿಬ್ಬರೂ, ನಮ್ಮ ಬೀಗರಿಬ್ಬರೂ ಪದೇ ಪದೇ ಹೋಗಿ ಬರುತ್ತಿರುವುದರಿಂದ ಇಮ್ಮಿಗ್ರೇಷನ್‌ ತೊಂದರೆಯಾಗುತ್ತಿದೆ.  ಅಂದರೆ ಅಮೆರಿಕಾ ಸರ್ಕಾರ ಅಲ್ಲಿರಲು ಅನುಮತಿ ನೀಡಲು ಸತಾಯಿಸುತ್ತಾ ಇದೆ.  ಹೇಗೂ ನೀನು ಹೋದವರ್ಷ ನಿನ್ನ ಮಗನ ಗ್ರಾಜ್ಯಯೇಷನ್ನಿಗೆಂದು ಹೋಗಿ ಬಂದಾಗ ನೀಡಿದ್ದ ಹತ್ತುವರ್ಷಗಳ ವೀಸಾ ಅವಧಿ ಇನ್ನೂ ಜಾರಿಯಲ್ಲಿದೆ, ಹಾಗಾಗಿ ಈ ಸಹಾಯ ಮಾಡುತ್ತೀಯಾ?

ಒಂದೆರಡು ದಿನಗಳ ಸಮಯ ಕೊಡು ಯೋಚಿಸಿ ಹೇಳುತ್ತೀನಿ.

ಸರಿ.

ಸುಚಿತ್ರಾ ಮನೆಯವರೆಲ್ಲರ ಜೊತೆ ಮಾತನಾಡಿದಳು.  ತನ್ನಣ್ಣನ ಮನೆಯ ದುಃಸ್ಥಿತಿಗೆ ಮರುಗುತ್ತಾ ಎಲ್ಲರನ್ನೂ ಒಪ್ಪಿಸಿ ಹೊರಟೇ ಬಿಟ್ಟಳು.  ಹೊರಡುವ ಮೊದಲು ನಿರ್ಧರಿಸಿದ್ದಳು. ʼತಾನು ಏನೂ ಸೌಮ್ಯಳಿಗೆ ಉಪದೇಶ ಕೊಡಬಾರದು.  ಅವಳು ತೆಗೆದು ಕೊಳ್ಳುವ ನಿರ್ಧಾರಗಳಿಗೆ ಒತ್ತಾಸೆಯಾಗಿರಬೇಕು, ಅಷ್ಟೆʼ  ಎಂದು.

ಹೊರಡಲು ನಾಲ್ಕಾರು ದಿನಗಳಿದ್ದಾಗ ಒಮ್ಮೆ ಬಂದ ಸುಬ್ರಹ್ಮಣ್ಯ ತಂಗಿಯಲ್ಲಿ ಕೇಳಿಕೊಂಡರು –

ಸುಚೀ, ಈ ನಡುವೆ ಸೌಮ್ಯಾ ಕೆಲವೊಮ್ಮೆ ತುಂಬಾ ʼಮೂಡಿʼಯಾಗಿ ವರ್ತಿಸುತ್ತಾಳೆ.  ನಿನಗೆ ಬೇಜಾರೂ ಸಹ ಮಾಡಬಹುದು, ನನಗಾಗಿ ಸಹಿಸಿಕೋಮ್ಮ.

ಅಣ್ಣಾ, ಅದನ್ನು ನೀನು ನನಗೆ ಹೇಳಬೇಕಾ? ಕಠಿಣ ಸಮಯ.  ನನ್ನ ಕೈಲಿ ಆಗುವಷ್ಟೂ ಅವಳಿಗೆ ಒತ್ತಾಸೆಯಾಗಿ ನಿಲ್ಲುತ್ತೇನೆ, ಚಿಂತಿಸಬೇಡ.

ನೀನು ಇಲ್ಲಿಂದ ಹೊರಡುವ ವೇಳೆಗೇ ಈಗ ಅಲ್ಲಿರುವ ಮನೋಜರ ತಾಯಿಯೂ ಅಲ್ಲಿರಬಹುದಾದ ಅವರ ಗಡುವು ಮುಗಿಯುವುದರಿಂದ ಅಲ್ಲಿಂದ ಹೊರಡುತ್ತಾರೆ, ನಾಳೆ ನಿನ್ನೊಂದಿಗೆ ಅವರೂ ಮಾತನಾಡಬಹುದು – ಎಂದು ಹೇಳಿ ಸುಬ್ರಹ್ಮಣ್ಯ ಕಣ್ಣೊರಸಿಕೊಳ್ಳುತ್ತಾ ಹೊರಟರು.

ಅಂದೇ ಸಂಜೆ ಮನೋಜರ ತಾಯಿಯ ಫೋನ್‌ ಬಂತು.  ಮೊದಲ ಸುತ್ತಿನ ಮಾತುಕತೆಗಳ ನಂತರ ಹೇಳಿದರು –

ಒಂದು ಸೂಕ್ಷ್ಮ ವಿಷಯ ಸುಚಿತ್ರಾ, ನಿಮ್ಮೊಂದಿಗೆ ಸೌಮ್ಯ ಆತ್ಮೀಯವಾಗಿದ್ದಾಳೆ.  ನಾವು, ನಿಮ್ಮ ಅಣ್ಣ ಅತ್ತಿಗೆ ಎಲ್ಲರೂ ಅವಳಿಗೆ ಇನ್ನೊಂದು ಮದುವೆಯಾಗಲು ಸಲಹೆ ನೀಡುತ್ತಿದ್ದೇವೆ.  ಅವಳು ಒಪ್ಪುತ್ತಿಲ್ಲ. ನೀವೂ ಸಹ ಇಲ್ಲಿರುವ ಸಮಯದಲ್ಲಿ ಅವಳನ್ನು ಒಪ್ಪಿಸಲು ಪ್ರಯತ್ನಿಸಿ.  ಅವಳ ಕಷ್ಟ ನೋಡಲು ಆಗುತ್ತಿಲ್ಲ. 

ಪ್ರಯತ್ನಿಸುತ್ತೇನೆ – ಎನ್ನುತ್ತಾ ಫೋನ್‌ ಇಟ್ಟ ಸುಚಿತ್ರಾ ಅವರ ಸಜ್ಜನಿಕೆಗೆ ಮೂಕಳಾದಳು.  ಇಂತಹ ಒಳ್ಳೆಯ ಜನ.  ನನ್ನಣ್ಣನೋ ಅಪ್ಪ, ಅಮ್ಮ, ತಮ್ಮ, ತಂಗಿ, ಸ್ನೇಹಿತ, ಮೈದುನ, ನಾದಿನಿ ಎಲ್ಲರನ್ನೂ ಸಲಹುತ್ತಾ ಇಡೀ ಕುಟುಂಬಕ್ಕೇ ಆಧಾರ ಸ್ಥಂಭವಾಗಿದ್ದವನು, ನಿಜಕ್ಕೂ ಎಷ್ಟೇ ನಂಬುವುದಿಲ್ಲ ಎಂದುಕೊಂಡರೂ ಈ ದುರಂತಕ್ಕೆ ಕಾರಣ “ದೃಷ್ಟಿ ತಾಗಿತೇನೋ” ಅಂತಾನೇ ಅನ್ನಿಸುತ್ತೆ ಎಂದು ಹನಿಗಣ್ಣಾದಳು.

ಅಮೆರಿಕಾ ತಲುಪಿಯಾಯಿತು, ಸುಚೀ ಅಜ್ಜಿಗೆ ಮಗು ಶರತ್‌ ಸಹ ಹೊಂದಿಕೊಂಡಿತು.  ಹದಿನೈದು ಇಪ್ಪತ್ತು ದಿನಗಳು ಕಳೆಯಿತು.  ಇವಳು ಚಡಪಡಿಸುತ್ತಿದ್ದ ಕಂಡು ಸೌಮ್ಯಾಳೇ ಒಮ್ಮೆ ಕೇಳಿದಳು – ಅತ್ತೇ ಏನೋ ಹೇಳಬೇಕೆಂದು ಒದ್ದಾಡ್ತಾ ಇದ್ದೀರಿ, ಏನು ಹೇಳಿ?

ಸಿಕ್ಕ ಸಮಯವನ್ನು ಉಪಯೋಗಿಸಿಕೊಳ್ಳ ಬೇಕು ಎಂದುಕೊಳ್ಳುತ್ತಾ ಸುಚಿತ್ರಾ ಹೇಳಿದಳು –

ಸೌಮ್ಯಾ ನಿನಗಿನ್ನೂ 31 ವರುಷಗಳು.  ನಿನ್ನ ವಯಸ್ಸಿನ ಎಷ್ಟೋ ಹೆಣ್ಣು ಮಕ್ಕಳಿಗೆ ಮದುವೆಯೇ ಆಗಿರುವುದಿಲ್ಲ, ಒಂಟಿ ಜೀವನ ಕಷ್ಟ ಪುಟ್ಟಾ, ಪ್ಲೀಸ್‌ ಇನ್ನೊಂದು ಮದುವೆಯಾಗು ಕಂದಾ.

ನನಗೆ ಗೊತ್ತಿತ್ತು.  ನನ್ನ ಅತ್ತೆ ಮಾವ, ಅಪ್ಪ ಅಮ್ಮ, ಎಲ್ಲರ ಒರಾತವೂ ಇದೇ ಆಗಿದೆ.  ಇದಕ್ಕೇ ನೀವೂ ಚಡಪಡಿಸುತ್ತಿದ್ದೀರಿ ಅಂತ.  ಅತ್ತೇ ನೀವು ನಮ್ಮ ಫ್ಯಾಮಿಲಿಯಲ್ಲಿ ಮಕ್ಕಳ ಮನಸ್ಸನ್ನು ಸ್ವಲ್ಪ ಜಾಸ್ತೀನೇ ಅರ್ಥ ಮಾಡಿಕೊಳ್ಳುವವರು.  ಹೇಳಿ ನನ್ನ ಕೈಲಿ ಮನೋಜನನ್ನು ಮರೆಯಲು ಆಗುತ್ತಾ?

ಖಂಡಿತಾ ಆಗಲ್ಲ ಸೌಮ್ಯಾ.  ಮನೋಜನ ನೆನಪು ನಿನ್ನ ಜೊತೆಯಲ್ಲೇ ಇರಲಿ.  ಆದರೆ ವಾಸ್ತವ ಅಂದರೆ ಅದೀಗ ನೆನಪು ಮಾತ್ರ ಕಂದ.  ಉದ್ದವಾದ ಜೀವನ ನಿನ್ನ ಮುಂದೆ ಇದೆ, ನಾವೆಲ್ಲ ಹಿರಿಯರು ಎಷ್ಟು ದಿನ ಇರುತ್ತೀವೆ, ಒಬ್ಬಂಟಿ ಜೀವನ ಕಷ್ಟ ಪುಟ್ಟೀ.

ಆ ನಿಮ್ಮ ದೇವರು ನನ್ನ ಹಣೆಯಲ್ಲಿ ಕಷ್ಟವನ್ನೇ ಬರೆದು ಕಳುಹಿಸಿ ಬಿಟ್ಟಾ ಅತ್ತೆ, ನನ್ನ ಕೈಲಿ ಆಗಲ್ಲ.

ನೀನೀಗ ಪಡುತ್ತಿರುವ ಕಷ್ಟ ಮನೋಜನ ಆತ್ಮವನ್ನು ನೋಯಿಸುತ್ತಿರುತ್ತೆ.  ಏನು ಮಾಡುವುದು ದುರಂತ ಆಗಿ ಹೋಗಿದೆ, ಏನಾದರೂ ಪರಿಹಾರ ಹುಡುಕಬೇಕಲ್ಲಾ.

ಇಲ್ಲಾ ಅತ್ತೆ, ದುರಂತದೊಂದಿಗೇ ಬದುಕಬೇಕಾಗಿರುವುದು ನನ್ನ ದುರಾದೃಷ್ಟ.  ನಾನು ಮನಸ್ಸು ಮಾಡಿ ಆಗಿದೆ. ನಾನು ಮನೋಜ್‌, ಜೀವನದ ಕುರಿತಾಗಿ ಖಂಡುಗದಷ್ಟು ಕನಸು ಕಂಡಿದ್ದೆವು.  ಮಗುವನ್ನು ಯಾವಾಗ ಮಾಡಿಕೊಳ್ಳ ಬೇಕು ಎನ್ನುವುದರಿಂದ ಹಿಡಿದು ಅದನ್ನು ಹೇಗೆ ಬೆಳೆಸಬೇಕು. . .  ಅಯ್ಯೋ ನಂಗೆ ಹೇಳಕ್ಕೆ ಗೊತ್ತಾಗ್ತಾ ಇಲ್ಲ ಅತ್ತೆ, ತುಂಬ, ತುಂಬಾ ಇದೆ.  ಈಗ ನನ್ನ ಮುಂದಿರುವ ಗುರಿ ಒಂದೇ, ನನ್ನ ಮನೋಜನ ಕನಸುಗಳನ್ನು ನನಸು ಮಾಡುವುದು.  ಇಬ್ಬರೂ ಒಟ್ಟಾಗಿ ಇದಿದ್ದರೆ ಖುಷಿಯಾಗಿ ನಿಭಾಯಿಸುತ್ತಿದ್ದೆವು.  ಈಗ ಕರ್ತವ್ಯ ಪ್ರಜ್ಞೆಯಿಂದ ನಡೆಸುತ್ತೇನೆ ಅಷ್ಟೆ,

ನಿನ್ನೆಲ್ಲಾ ಭಾವನೆಗಳಿಗೆ ಸ್ಪಂದಿಸುವಂತಹ ಒಬ್ಬ ಜೊತೆಗಾರನ ಅಗತ್ಯ ಇದೆ ಸೌಮ್ಯಾ.

ಇಲ್ಲ ಅತ್ತೆ, ಪ್ರಪಂಚದಲ್ಲಿ ಸುಂದರತೆಯ ಹಿಂದೆ ಒಂದು ಕರಾಳ ಮುಖವೂ ಇದೆ.  ಹಾಗಾಗಿ ನನ್ನ ನಿರ್ಧಾರ ಅಚಲ.  ನಿಮ್ಮಗಳಿಗೆ ಅರ್ಥಮಾಡಿಸಲು ಹೇಳ್ತೀನಿ, ಕೇಳಿ,   

ಈಗ ನಾನು ಮದುವೆಯಾಗಿಲ್ಲದ ಹುಡುಗನನ್ನು ಮದುವೆಯಾದರೆ ಅವನ ಆಸೆಗಳು, ಕನಸುಗಳು, ನಿರೀಕ್ಷೆಗಳು ಭಿನ್ನವಾರುತ್ವೆ.  ಎಷ್ಟೇ ನೀವು ಪರಿಸ್ಥಿತಿಯನ್ನು ವಿವರಿಸಿದ್ದರೂ, ಒಪ್ಪಿಕೊಂಡಿದ್ದರೂ, ಮುಂದೆ ನಿಭಾಯಿಸುವುದು ಒಪ್ಪಿಕೊಂಡಷ್ಟು ಸುಲಭವಲ್ಲ.  ಅಕಸ್ಮಾತ್‌, ನನ್ನ ಸಿಟಿಜ಼ನ್‌ ಶಿಪ್ಪಿನ ಆಸೆಗೋ, ಸ್ವಂತ ಮನೆಯ ಆಸೆಗೋ ಮದುವೆಯಾಗಿ ನಂತರ ತೊಂದರೆ ಉಂಟಾದರೆ ಅದನ್ನು ಎದುರಿಸುವ ಚೈತನ್ಯ ನನಗಿಲ್ಲ.  ಮಕ್ಕಳಿರುವ ವಿಧುರನನ್ನು ಮದುವೆಯಾದರೆ ಅವನಿಗೆ ನನ್ನ ಮಗುವನ್ನೂ, ನನಗೆ ಅವನ ಮಗುವನ್ನೂ ಒಂದೇ ರೀತಿಯ ಪ್ರೀತಿ, ವಿಶ್ವಾಸ, ಮಮತೆ, ಅಂತಃಕರಣಗಳಿಂದ ನೋಡಿಕೊಳ್ಳಲು ಆಗುತ್ತಾ, ಯೋಚಿಸಿದರೆ ನನಗೇ ನನ್ನ ಮೇಲೆ ಇನ್ನೂ ನಂಬಿಕೆ ಬಂದಿಲ್ಲಾ.  ಇನ್ನು ಮಕ್ಕಳಿಲ್ಲದ ವಿಧುರನನ್ನು ಮದುವೆಯಾದರೆ ನಂತರ ಅವನಿಗೆ ತನ್ನದೇ ಮಗು ಬೇಕೆನ್ನಿಸುವುದು ಸಹಜ.  ನಂತರದ ದಿನಗಳಲ್ಲಿ ಅವನಿಗೆ ಇಬ್ಬರನ್ನೂ ಒಂದೇ ಸಮ ನೋಡಿಕೊಳ್ಳಲು ಸಾಧ್ಯವಾ, ಯೋಚಿಸಬೇಕು ಅಲ್ಲವಾ?  ಇನ್ನು ದೇಹದ ಹಸಿವು.  ಮನೋನಿಗ್ರಹ ಮಾಡಲು ನಿರ್ಧರಿಸಿದ್ದೇನೆ ಅತ್ತೆ.  ಪ್ರೇಮಕ್ಕೆ ಕಾಮವನ್ನು ಜಯಿಸುವ ಶಕ್ತಿ ಇದೆ ಅನ್ನುವುದು ಅಜ್ಜಿ ತಾತ ನನಗೆ ನೀಡಿರುವ ಸಂಸ್ಕಾರದಿಂದ ನನ್ನಲ್ಲಿ ಗಟ್ಟಿಯಾಗಿ ಅನ್ನಿಸುತ್ತಿರುವ ಅನ್ನಿಸಿಕೆ.  ಈ ಹತ್ತು ವರುಷಗಳಲ್ಲಿ ನನ್ನ ಮನೋಜ ಜನುಮ ಜನುಮಗಳಿಗೆ ಆಗುವಷ್ಟು ಪ್ರೇಮವನ್ನು ಕೊಟ್ಟು ಹೋಗಿದ್ದಾನೆ.  ಅವುಗಳ ನೆನಪುಗಳಲ್ಲೇ ನಮ್ಮ ಪ್ರೇಮದ ಕುಡಿಯನ್ನು ಇಲ್ಲೇ ಇದ್ದು ಬೆಳೆಸುವ ನಿರ್ಧಾರ ಮಾಡಿದ್ದೇನೆ.  ನನಗೂ ಗೊತ್ತು, ಅಪ್ಪ ಅಮ್ಮ, ಅತ್ತೆ ಮಾವ ಪದೇ ಪದೇ ಇಲ್ಲಿ ಬಂದಿರಲು ಸಾಧ್ಯವಾಗದು.  ಅವರುಗಳಿಗೂ ವಯಸ್ಸಾಗುತ್ತಿದೆ.  ನಾನೇ ಗಟ್ಟಿಯಾಗುತ್ತೇನೆ. ನನ್ನ ಮಗ ಸ್ವಲ್ಪ ದೊಡ್ಡವನಾಗುತ್ತಿದ್ದಂತೆ ನಾನೇ ಪ್ರತೀ ವರುಷ ಭಾರತಕ್ಕೆ ಬರುತ್ತೇನೆ.  ಸದ್ಯಕ್ಕಂತೂ ನಾನು ಭಾರತಕ್ಕೆ ಹಿಂದಿರುಗುವುದಿಲ್ಲ.  ಮನೋಜನಿಗೆ ಮಗನನ್ನು ಇಲ್ಲಿಯೇ ಓದಿಸಬೇಕೆನ್ನುವ ಕನಸು ಇತ್ತು.  ಹಾಗಾಗಿ ನನ್ನ ಗುರಿ, ಜೀವನದ ಏಕೈಕ ಗುರಿ, ಇನ್ನೂ ಎಷ್ಟೇ ಕಷ್ಟ ಬಂದರೂ, ನನ್ನ ಮನೋಜನ ಕನಸುಗಳನ್ನು ನನಸು ಮಾಡುವುದು, ಹಾಗೇ ನಮ್ಮಿಬ್ಬರ ಕುಡಿಯನ್ನು ಒಂದೊಳ್ಳೆಯ ಮಾನವತಾವಾದಿಯಾಗಿ ಬೆಳೆಸುವುದು.  ನನಗಿನ್ನೂ ಮನೋಜ ಇಲ್ಲಾ ಎಂದೇ ಜೀರ್ಣಿಸಿಕೊಳ್ಳಲು ಆಗುತ್ತಿಲ್ಲ.  ದಿನಾ ಕನಸಿನಲ್ಲಿ ಬರುವ ನನ್ನ ಮನೋಜನೊಂದಿಗೆ ನನ್ನ ದೈನಂದಿನ ಕಷ್ಟ ಸುಖಗಳನ್ನು ಹಂಚಿಕೊಂಡರೇ ನನಗೆ ದಿನ ಪೂರ್ತಿಯಾದಂತೆನಿಸುತ್ತದೆ.  ಈ ಗುರಿ ಮುಟ್ಟಿದ ನಂತರ ಭಾರತಕ್ಕೆ ಬರಬೇಕ್ಕೆನ್ನಿಸಿದರೆ ಖಂಡಿತಾ ಬಂದುಬಿಡುತ್ತೇನೆ, ಅದೂ ಸಹ ನನ್ನದೇ ದೇಶ ತಾನೆ.

ಸೌಮ್ಯಾ ಅತ್ಯಂತ ಭಾವುಕಳಾಗಿದ್ದಳು. ಅವಳ ಕಣ್ಗಳಲ್ಲಿ, ಮೊಗದಲ್ಲಿ ಇಂದು ಎದೆಯೊಳಗೆ ಹೆಪ್ಪುಗಟ್ಟಿದ್ದ ಭಾವನೆಗಳನ್ನೆಲ್ಲಾ ನೀರಾಗಿಸಿ ಹರಿಯಲು ಬಿಡುವ ಚಡಪಡಿಕೆ ಕಾಣುತಿತ್ತು.

ಸುಚಿತ್ತಾ ಮಂತ್ರಮುಗ್ಧಳಾಗಿ, ತನ್ನ ತೊಡೆಯ ಮೇಲೆ ಆಡಿ ಬೆಳೆದ ಕಂದನ ಮನೋವಿಪ್ಲವಗಳನ್ನೆಲ್ಲಾ ಆಲಿಸುವ, ಅವಳ ಕಠಿಣ ತಪಸ್ಸಿಗೆ ಆಸರೆಯಾಗುವ ಹಿರಿಯ   ಗೆಳತಿಯಂತೆ ಮೌನವಾಗಿ ಕುಳಿತಿದ್ದಳು.

ಸೌಮ್ಯಾ ಮುಂದುವರೆಸಿದಳು – ಈ ವಿಚಾರಗಳೊಂದೂ ನನ್ನತ್ತೆ ಮಾವ, ನಮ್ಮಪ್ಪ ಅಮ್ಮನೊಂದಿಗೆ ಹೇಳಿಕೊಳ್ಳಲಾಗುತ್ತಿಲ್ಲ.  ಅವರುಗಳು ಇನ್ನೂ ಶಾಕ್‌ ನಲ್ಲಿದ್ದಾರೆ, ಕುಗ್ಗಿ ಹೋಗುತ್ತಿದ್ದಾರೆ, ಅವರುಗಳೊಂದಿಗೆ ಈ ವಿಚಾರಗಳನ್ನು ನನಗೆ ಚರ್ಚಿಸಲು ಸಾಧ್ಯವಾಗುತ್ತಿಲ್ಲ.  ನಿಮ್ಮಲ್ಲಿ ನನ್ನನ್ನು ಅರ್ಥಮಾಡಿಕೊಳ್ಳುವ ತಾಯಿ ಮತ್ತು ಗೆಳತಿಯ ಸಂಗಮದ ಯಾವುದೋ ಒಂದು ಅನುಬಂಧವನ್ನು ನಾನು ಗುರುತಿಸಿದ್ದೇನೆ ಅತ್ತೆ, ಹಾಗಾಗಿ ಇಂದು ಮನಬಿಚ್ಚಿ ಮಾತನಾಡಿಬಿಟ್ಟೆ, ಇನ್ನೂ ಹೇಳುತ್ತೀನಿ ಅತ್ತೆ, ನನ್ನ ಹಿತೈಷಿಗಳಾದ, ಹಿರಿಯರಾದ ನಿಮಗೆಲ್ಲಾ ನೋವು ನೀಡುವ ಇಚ್ಛೆ ನನಗಿಲ್ಲ.  ಎಂದಾದರೂ ನನ್ನೆಲ್ಲಾ ಮನೋವಿಪ್ಲವಗಳನ್ನು ಶಾಂತಗೊಳಿಸಬಲ್ಲಂತಹ, ನನ್ನನ್ನು ನನ್ನ ಮನೋಜನ ನೆನಪುಗಳೊಂದಿಗೆ ಸ್ವೀಕರಿಸುವ ವ್ಯಕ್ತಿಯನ್ನು ಸಂಧಿಸಿದರೆ, ಮನಸ್ಸಿಗೆ ಬಂದರೆ ಖಂಡಿತಾ ನಿಮ್ಮೆಲ್ಲರ ಮುಂದೆ ನಿಲ್ಲಿಸುತ್ತೇನೆ.  ಆದರೆ ಆ ವಿಚಾರದ ಕುರುಹೂ ಇನ್ನೂ ನನ್ನ ಮನದ ಯಾವ ಮೂಲೆಯಲ್ಲೂ ಸುಳಿದಿಲ್ಲ.

ಇನ್ನೊಂದು ವಿಚಾರವನ್ನೂ ಹೇಳಿಬಿಡುತ್ತೀನಿ, ಇದು ನನ್ನೊಬ್ಬಳ ವೈಯುಕ್ತಿಕ ನಿರ್ಧಾರ ಅಷ್ಟೇ.  ಇದರಿಂದ ನಾನು ಪುರ್ನವಿವಾಹದ ವಿರೋಧಿ ಅಂತಲೋ, ಎರಡನೇ ಮದುವೆಯಾಗುವವರದು ತಪ್ಪು ಎಂಬ ಅಭಿಪ್ರಾಯವೋ ಖಂಡಿತಾ ನನ್ನದಲ್ಲ.  ನನ್ನ ಮನೋಧರ್ಮಕ್ಕೆ ಸ್ವೀಕರಿಸಲು ಸಾಧ್ಯವಾಗುತ್ತಿಲ್ಲ, ಅದಕ್ಕೇ ನನಗೆ ಬೇಡ ಅಷ್ಟೇ, ಯಾರೂ ತಪ್ಪು ತಿಳಿಯಬೇಡಿ.

PC: Internet

ಇಷ್ಟು ಹೇಳಿದ್ದೇ ಜೋರಾಗಿ ಅಳಲು ಶುರು ಮಾಡಿದಳು ಸೌಮ್ಯಾ.  ಅಷ್ಟರವರೆಗೆ ಅವಳ ಮಾತುಗಳನ್ನು ಕೇಳಿಸಿಕೊಳ್ಳುತ್ತಾ, ಕಣ್ಣಿನಿಂದ ಸುರಿಯುತ್ತಿರುವ ಧಾರೆಯನ್ನು ಒರೆಸಿಕೊಳ್ಳಲೂ ಮರೆತು ಕುಳಿತಿದ್ದ ಸುಚಿತ್ರಾಳೂ ಎದ್ದು ಬಂದು ಸೌಮ್ಯಾಳನ್ನು ತಬ್ಬಿಕೊಂಡು ಜೋರಾಗಿ ಅಳಲು ಪ್ರಾರಂಭಿಸಿದಳು.  ನಾಲ್ಕರು ನಿಮಿಷಗಳ ನಂತರ ಸುಚಿತ್ರಾಳೇ ಕೊಂಚ ಸಮಾಧಾನ ಹೊಂದಿ ಸಂತೈಸಿದಳು –

ಆಯ್ತು ಕಂದ, ನಿನ್ನ ನಿರ್ಧಾರಕ್ಕೆ ನನ್ನ ಸಂಪೂರ್ಣ ಒಪ್ಪಿಗೆ, ಸಮ್ಮತಿ ಇದೆ.  ಇಷ್ಟರಮಟ್ಟಿಗೆ ಯೋಚಿಸಿದ್ದೀಯಾ ಎಂದರೆ, ಇನ್ನು ಮುಂದೆ ನಿನ್ನ ನಿರ್ಧಾರಗಳಿಗೆ ಒತ್ತಾಸೆಯಾಗಿ ನಿಲ್ಲುವುದಷ್ಟೇ, ನಮ್ಮೆಲ್ಲ ಹಿರಿಯರ ಕರ್ತವ್ಯ.  ಯಾವ ಕ್ಷಣದಲ್ಲಿ ಬೇಕಾದರೂ, ʼಸಹಾಯʼ ಪದ ಇಲ್ಲಿ ಸೂಕ್ತ ಅಲ್ಲ, ಅದು ಅರ್ಥ ಕಳೆದುಕೊಳ್ಳುತ್ತದೆ, ʼಸಹಕಾರʼ ನೀಡುವುದಷ್ಟೇ ನಾವು ಮಾಡಬೇಕಿರುವುದು.  ಇನ್ನು ಮುಂದೆ ಹಾಗೇ ನಡೆದುಕೊಳ್ಳುತ್ತೀವಿ, ಇದು ನನ್ನ ಪ್ರಾಮಿಸ್.‌ ಚಿನ್ನದಂತಹ ಇಂತಹ ಹುಡುಗಿಯೊಂದಿಗೆ ಬಾಳುವ ಅದೃಷ್ಟ ಮನೋಜನಿಗೆ ಇಲ್ಲವಾಯಿತಲ್ಲಾ . .

ಇಲ್ಲಾ ಅತ್ತೆ, ನನ್ನನ್ನು ಚಿನ್ನ ಮಾಡಿದ್ದೇ ನನ್ನ ಮನೋಜ.  ಅವನ ವ್ಯಕ್ತಿತ್ವದ ಸಂಪರ್ಕಕ್ಕೆ ಬಂದ ಯಾರೇ ಆದರೂ ಚಿನ್ನವಾಗಿ ಬದಲಾಗಿಬಿಡುತ್ತಿದ್ದರು.  ಅಂತಹ ಮೇರು ವ್ಯಕ್ತಿತ್ವದವನು ನನ್ನ ಮನೋಜ.

ಆಯ್ತು ಕಂದ ಇನ್ನು ಮುಂದೆ ಈ ವಿಚಾರಗಳನ್ನು ಚರ್ಚಿಸುವುದಿಲ್ಲ.

ಸರೀ ನಡೀರಿ, ಅರ್ಧ ಕಪ್‌ ಕಾಫಿ ಮಾಡಿಕೊಡಿ.  ಕುಡಿದು ಶರತ್‌ ನನ್ನು ಪಿಕ್‌ ಅಪ್‌ ಮಾಡಲು ಸ್ಕೇಟಿಂಗ್‌ ಕ್ಲಾಸಿಗೆ ಹೊರಡೋಣ.  ನೀವೂ ಒಬ್ಬರೇ ಇರಬೇಡಿ, ನನಗೂ ಒಬ್ಬಳೇ ಹೋಗುವ ಮನಸ್ಸಿಲ್ಲ, ಬನ್ನಿ ಹೋಗೋಣ ಕಾರ್‌ ಆಚೆ ತೆಗೆಯುತ್ತೀನಿ, ಎನ್ನುತ್ತಾ ಭಾವಲೋಕದಿಂದ ಆಚೆ ಬರಲು ಇಬ್ಬರೂ ಯತ್ನಿಸಿದರು.

                                          ——————–

ಇದೆಲ್ಲಾ ಹಿಂದಿನ ಘಟನೆಗಳಾದರೆ ಇಂದು ಫೋನಾಯಿಸಿದ ಸೌಮ್ಯಾ –

ಅತ್ತೇ ಶರತ್‌ ಗೆ ಪ್ರತಿಷ್ಠಿತ ಯೂನಿವರ್ಸಿಟಿಯಿಂದ ಡಾಕ್ಟರೇಟ್‌ ದೊರಕಿದೆ ಅಷ್ಟೇ ಅಲ್ಲ, ಒಂದೊಳ್ಳೆಯ ರಿಸರ್ಚ್‌ ಸೆಂಟರಿನಲ್ಲಿ ಅವನಿಗಿಷ್ಟವಾದ ಕೆಲಸವೂ ದೊರಕಿದೆ.  ಇನ್ನು ಎರಡು ತಿಂಗಳಿಗೆ ಪದವಿ ಪ್ರಧಾನ ಸಮಾರಂಭ.  ಅಮ್ಮ ಅಪ್ಪ, ಅತ್ತೆ, ಮಾವ ಎಲ್ಲರಿಗೂ ಹೇಳುತ್ತೀನಿ, ನೀವೂ ಮತ್ತು ಮಾವ ಸಹ ಬಂದು ನನ್ನ ಸಂತೋಷದಲ್ಲಿ ಭಾಗಿಯಾಗಬೇಕು, ದಿನಾಂಕ ತಿಳಿಸಿ ಟಿಕೆಟ್‌ ಬುಕ್‌ ಮಾಡುತ್ತೀನಿ – ಎಂದಳು.  ಅವಳ ದನಿಯಲ್ಲಿ ಕರ್ತವ್ಯವನ್ನು ನಿಭಾಯಿಸಿದ ಪ್ರೀತಿಯ ಬದ್ಧತೆಯ ಭಾವ ತುಳುಕುತಿತ್ತು.

ವರ್ಷಕ್ಕೆ ಒಂದೆರಡು ಬಾರಿ ರಜಾದಿನಗಳಲ್ಲಿ, ಅದರಲ್ಲೂ ಅಮೆರಿಕಾದಲ್ಲಿ ಆಚರಿಸುವ ʼಥ್ಯಾಂಕ್ಸ್‌ ಗಿವಿಂಗ್‌ ವೀಕ್‌ʼ ದಿನಗಳಲ್ಲಿ ಫೋನಾಯಿಸಿ ಆತ್ಮೀಯವಾಗಿ ಮಾತನಾಡುತ್ತಿದ್ದ, ಭಾರತಕ್ಕೆ ಬಂದಾಗಲೆಲ್ಲಾ ಭೇಟಿಯಾಗಲು ಬರುತಿದ್ದ, ಸೌಮ್ಯಳ ಪ್ರೀತಿ, ಶರತ್‌ನ ಸುಸಂಸ್ಕೃತ ನಡುವಳಿಕೆಗಳಿಗೇ ಫಿದ಼ಾ ಆಗಿದ್ದ ಸುಚಿತ್ರಾಳಿಗೆ ಈ ಮಾತುಗಳಂತೂ ಅರಗಿಸಿಕೊಳ್ಳಲಾಗದಷ್ಟು ಸಂತಸ ನೀಡಿತ್ತು.

-ಪದ್ಮಾ ಆನಂದ್‌, ಮೈಸೂರು

15 Comments on “ಒಲವ ನೋಂಪಿ

  1. ಚಂದದ ಚಿತ್ರ್ಒಂದಿಗೆ ಪ್ರಕಟಿಸಿದ ‘ಸುರಹೊನ್ನೆ”ಗೆ ಧನ್ಯವಾದಗಳು.

  2. ಓದಿದೆ ಮೇಡಂ, ಶೋಕ ಸ್ಥಾಯಿಯಾದ ಭಾವಗೀತೆಯನು
    ಆಲಿಸಿದಂತಾಯಿತು. ವಿಧಿಯು ಬರೆದ ಲಿಪಿ ಜಲಲಿಪಿಯಲ್ಲ
    ಎಂಬುದು ಸಾಬೀತಾಯಿತು. ಧನ್ಯವಾದ ನಿಮ್ಮ ಕತೆಗೆ.

    1. ತಮ್ಮ ಮೆಚ್ಚುಗೆಯ ಪ್ರತಿಕ್ರಿಯೆಗಾಗಿ ವಂದನೆಗಳು.

  3. ಸುಂದರ ವಾದ ಕಥೆಗೆ, ಒಳ್ಳೆಯ ಸಂದೇಶ ಮೆರುಗು ನೀಡಿದೆ.

    1. ಧನ್ಯವಾದಗಳು ಮೇಡಂ, ಓದಿ ಪ್ರತಿಕ್ರಿಯೆ ನೀಡಿದ್ದಕ್ಕಾಗಿ.

  4. ಸೌಮ್ಯಳ ದಿಟ್ಟತನದ ಜೀವನ ಅತ್ಯಂತ ಅಪರೂಪದ್ದಾಗಿದೆ. ಪದ್ಮಾ ಮೇಡಂ… ನಿಮ್ಮ ಕಥಾಹಂದರ ಅಂತೆಯೇ ಸಹಜ ಸುಂದರವಾಗಿದೆ. ಎಲ್ಲೂ ಉತ್ಪ್ರೇಕ್ಷೆ ಇಲ್ಲದ ಚಿಕ್ಕ ಚೊಕ್ಕ ಕಥೆ ಇಷ್ಟವಾಯ್ತು.

    1. ಓದಿ, ಕಥೆಯನ್ನು ಮೆಚ್ಚಿ, ಪ್ರತಿಕ್ರಿಯೆ ನೀಡಿದ್ದಕ್ಕಾಗಿ ಧನ್ಯವಾದಗಳು.

Leave a Reply to ನಯನ ಬಜಕೂಡ್ಲು Cancel reply

 Click this button or press Ctrl+G to toggle between Kannada and English

Your email address will not be published. Required fields are marked *