ನಾನೇಕೆ ಬರೆಯುತ್ತೇನೆ ?

Share Button

ಒಂದು ಪದದ ಉತ್ತರ ಹೇಳಬೇಕೆಂದಿದ್ದರೆ, ನಾನು ಹೇಳುತ್ತಿದ್ದೆ – ಬರೆಯುವುದು ನನಗಿಷ್ಟ, ಅದಕ್ಕೇ ಬರೆಯುತ್ತೇನೆ – ಎಂದು. ಹಾಗಿಲ್ಲವಲ್ಲ, ಹಾಗಾಗಿ ಹೇಳುತ್ತೇನೆ. ತಿಂಗಳಿಗೊಮ್ಮೆ ಸಮಾನ ಮನಸ್ಕರು ಒಂದೆಡೆ ಸೇರಿ ಹೊಸದಾಗಿ ಬರೆದಿದ್ದ, ಸೃಷ್ಟಿಸಿದ್ದ, ಯಾವುದಾದರೊಂದು ಸಾಹಿತ್ಯ ಪ್ರಕಾರವನ್ನು ವಾಚಿಸಿ, ಇತರ ನವನವೀನ ತಾಜಾ ಸಾಹಿತ್ಯ ಪ್ರಕಾರವನ್ನು ಆಲಿಸಿ, ಅವುಗಳ ಸಾಧಕ ಬಾಧಕಗಳ, ಓರೆಕೋರೆಗಳ ಕುರಿತಾಗಿ ವಿಚಾರ ವಿನಿಮಯ ಮಾಡಿಕೊಳ್ಳುವ ವೇದಿಕೆ, “ಮೈಸೂರು ಸಾಹಿತ್ಯ ದಾಸೋಹ”ದ ಸಕ್ರಿಯ ಸದಸ್ಯಳಾದ್ದರಿಂದ, ಸಂಚಾಲಕಳಾದ್ದರಿಂದ, ಅಲ್ಲಿ ಸಿಗುವ ಅನುಭವ, ಅಭಿಪ್ರಾಯಗಳಿಂದ ನನ್ನ ಬರವಣಿಗೆಯನ್ನು ತಿದ್ದಿಕೊಳ್ಳುವ ಸುವರ್ಣಾವಕಾಶ ನನಗೆ ದೊರಕಿರುವುದರಿಂದ, ಉತ್ಸಾಹದಿಂದ ನನ್ನನ್ನು ನಾನು ಬರವಣಿಗೆಯಲ್ಲಿ ತೊಡಗಿಸಿಕೊಂಡಿದ್ದೇನೆ.

ಯಾವುದರ ಕುರಿತು ಬರೆಯುತ್ತೇನೆ, ಅಥವಾ ಯಾವ ವಿಚಾರಗಳ ಕುರಿತು ನನಗೆ ಬರೆಯಲೇ ಬೇಕೆಂದೆನಿಸುತ್ತದೆ ಎಂದು ಯೋಚಿಸಿದಾಗ, ನನ್ನ ನೆನಪಿನಲ್ಲಿ ಮಾಸದೆ ಉಳಿದ ವಿಚಾರಗಳ ಕುರಿತಾಗಿ ನಾನು ಬರೆಯುತ್ತೇನೆ, ನನ್ನನ್ನು ಕಾಡಿದ ವಿಚಾರಗಳ ಕುರಿತಾಗಿ ನಾನು ಬರೆಯುತ್ತೇನೆ, ನನಗೆ ಜೀವನದಲ್ಲಿ ಸಂತಸ ನೀಡಿದ ವಿಚಾರಗಳಿಗೊಂದು ಅಕ್ಷರ ರೂಪ ನೀಡಬೇಕೆಂದೆನಿಸಿದಾಗ ನಾನು ಬರೆಯುತ್ತೇನೆ. ಕೆಲವೊಮ್ಮೆ ಕೆಲವೊಂದು ವಿಚಾರಗಳ ಚಿಂತನ ಮಂಥನ ಮನಸ್ಸನ್ನು ಎಷ್ಟರ ಮಟ್ಟಿಗೆ ಆವರಿಸಿಕೊಂಡು ಬಿಡುತ್ತದೆ ಎಂದರೆ ಅದನ್ನು ಅಕ್ಷರ ರೂಪಕ್ಕಿಳಿಸದೇ ಹೋದರೆ ಮನಸ್ಸು ಚಡಪಡಿಕೆಯ ಗೂಡಾಗಿ ಬಿಡುತ್ತದೆ. ಹಾಗಾಗಿ ಆ ಚಡಪಡಿಕೆಯ ಬಿಡುಗಡೆಗಾಗಿ ನಾನು ಬರೆಯುತ್ತೇನೆ.

ಕೆಲವೊಮ್ಮೆ ನನ್ನ ಸುತ್ತಮುತ್ತಲಿನ ಸಮಾಜಕ್ಕೆ ಒಂದು ಸಣ್ಣ ಸೂಚನೆ, ಸಂದೇಶ ಕೊಡಬೇಕೆಂದೆನಿಸುತ್ತದೆ. ನನ್ನ ಮನಸ್ಸಿಗೆ ಅದು ಎಷ್ಟೇ ಸರಿ ಎನ್ನಿಸಿದರೂ, ಜನ ಹೇಗೆ ಸ್ವೀಕರಿಸುತ್ತಾರೋ, ಹೇಳಿದರೆ ಅವರಿಗೆಲ್ಲಿ ಅದು ಉಪದೇಶ ಎಂದೆನಿಸಿ ಬಿಡುತ್ತದೋ, ನಗೆಪಾಟಲಿಗೀಡಾಗಿ ಬಿಡುತ್ತೀನೋ ಎಂಬ ಭಯ ಕಾಡಿದಾಗ, ಹೇಳದೆ ಇರಲಾಗದ ಚಡಪಡಿಕೆಗೆ ಮನ ಈಡಾದಾಗಾ ಅದನ್ನೊಂದು ಕಥೆಯ ರೂಪವಾಗಿಸಿ ಹರಿಯ ಬಿಡುತ್ತೇನೆ. ಅದು ನನಗೆ ಸೇಫಾದ, ಸುಭದ್ರವಾದ ಮಾರ್ಗ ಎಂದೆನಿಸುತ್ತದೆ. ಏಕೆಂದರೆ, ಅದೊಂದು ಕಥೆ. ಕಥೆಗೆ ಕಾಲಿಲ್ಲವಲ್ಲ! ಕಥೆಗಾರ ತನಗಿಷ್ಟ ಬಂದಂತೆ ಕಥೆಯನ್ನು ಕೊಂಡೊಯ್ಯಬಹುದಲ್ಲಾ! ತನ್ನ ಕಥೆಗೆ ತಾನೇ ಬ್ರಹ್ಮನಂತೆ! ಹಾಗಾಗಿ ಕಥೆ ಹೆಣೆಯುತ್ತೇನೆ. ನಾನು ಸಮಾಜಕ್ಕೆ ನೀಡ ಬೇಕೆಂದಿರುವ ಸಂದೇಶದಲ್ಲಿ ಗಟ್ಟಿತನವಿದ್ದರೆ, ಸಮಂಜಸವೆನಿಸಿದರೆ ಕೆಲವರ ಮಟ್ಟಿಗಾದರೂ, ಅವರುಗಳ ಮನಸ್ಸಿಗೆ ನಾಟಿಯೇ ನಾಟುತ್ತದೆ. ಇಲ್ಲದಿದ್ದರೆ ಏನೂ ನಷ್ಟವಿಲ್ಲ, ಕಾಲಿಲ್ಲದ ಕಥೆ, ನನ್ನ ಮುಂದಿನ ಕಥಾ ಸಂಕಲನಕ್ಕೊಂದು ಕಥೆಯಾಗಿ ಸೇರ್ಪಡೆಯಾಗಿ ಬಿಡುತ್ತದೆ.

ಪ್ರತಿಯೊಂದು ಕ್ರಿಯೆಗಳಿಗೂ, ವಿಚಾರಗಳಿಗೂ ಹಲವಾರು ಆಯಾಮಗಳಿರುವಂತೆ ನಾನು ಬರೆಯಲು ಇನ್ನೂ ಕೆಲವು ಕಾರಣಗಳಿವೆ. ಅವುಗಳೆಂದರೆ ಬರೆಯುವಾಗ ನನಗೆ ಅತ್ಯಂತ ಸುಖ ಎನಿಸುತ್ತದೆ. ಹೇಗೆ ತನಗೆ ತಾನೇ ಬರೆಸಿಕೊಳ್ಳುತ್ತಾ ಹೋಗುತ್ತದೆ ಎಂದರೆ, ಬರೆಯಲು ಕುಳಿತಾಗ ಇದ್ದ ಭಾವನೆಗಳು ಕೆಲವೊಮ್ಮೆ ಎಲ್ಲೆಲ್ಲೋ ಹರಿದು ಯಾವು ಯಾವುದೋ ತಿರುವುಗಳನ್ನು ಪಡೆದು ಮತ್ತೆ ಹೇಗೋ ಮುಕ್ತಾಯವನ್ನು ಕಾಣುವ ಸೋಜಿಗದ, ವಿಸ್ಮಯದ, ಸುಖದ ಅನುಭಕ್ಕಾಗಿ ನಾನು ಬರೆಯುತ್ತೇನೆ. ಪಾತ್ರಗಳಲ್ಲಿ ಲೀನವಾಗುವ ಮನಸ್ಸಿನ ಸುಖಾನುಭವಕ್ಕಾಗಿ ನಾನು ಬರೆಯುತ್ತೇನೆ. ನನ್ನ ಮನಸ್ಸು ಪಾತ್ರಗಳು ಅತ್ತಾಗ ಅಳುವ, ಸುಖಿಸಿದಾಗ ಸುಖಿಸುವ, ಒಂದು ತಾರ್ಕಿಕ ಅಂತ್ಯ ಕಂಡಾಗ ಉಂಟಾಗುವ ಒಂದು ನೆಮ್ಮದಿಯ, ನಿರಾಳದ ಭಾವದ ಅನುಭವಕ್ಕಾಗಿ ನಾನು ಬರೆಯುತ್ತೇನೆ.

ಹಾಗೆಯೇ ಎಲ್ಲಾದರೂ ನನ್ನ ಬರಹ ಪ್ರಕಟವಾದಾಗ ನನಗೆ ಉಂಟಾಗುವ ಖುಷಿಯಿಂದ ಪ್ರೇರಣೆಗೊಂಡು ನನ್ನಿಂದ ಮತ್ತಷ್ಟು ಬರಹಗಳು ಹುಟ್ಟಿಕೊಳ್ಳುತ್ತವೆ. ಹಲವಾರು ಸಂದರ್ಭಗಳಲ್ಲಿ ಸ್ಪರ್ಧೆಗಳಿಗಾಗಿಯೂ, ನನ್ನಲ್ಲಿ ಉಂಟಾಗುವ ಒಂದು ರೀತಿಯ ಸಾತ್ವಕ ಒತ್ತಡದಿಂದಾಗಿಯೂ ನನ್ನ ಕಥೆಗಳು ರೂಪುಗೊಳ್ಳುತ್ತವೆ.

ನನ್ನ ಇನ್ನೊಂದು ಹವ್ಯಾಸ ಪ್ರವಾಸ. ಆ ಪ್ರವಾಸದ ಸಮಯದಲ್ಲಿ ನಾನು ಕಂಡ ವಿಭಿನ ಸಂಸ್ಕೃತಿಯ, ವಿಭಿನ್ನ ಸಮಾಜದ, ಪ್ರಕೃತಿಯ ವೈಚಿತ್ರಗಳನ್ನು ನಾನು ಲೇಖನವಾಗಿಸಲು, ಬರಹವಾಗಿಸಲು ಬಯಸುತ್ತೇನೆ. ಪ್ರವಾಸ ಕಥನವೂ ನನ್ನ ಇಷ್ಟವಾದ ಬರಹದ ಪ್ರಕಾರಗಳಲ್ಲೊಂದು ಎಂದು ಇಲ್ಲಿ ಉಲ್ಲೇಖಿಸ ಬಯಸುತ್ತೇನೆ.

ಹಾಂ, ಮತ್ತೊಂದು ವಿಚಾರ, ಬರೆಯುವಿಕೆಯಲ್ಲಿ ನಮ್ಮನ್ನು ನಾವು ತೊಡಗಿಸಿಕೊಂಡಾಗ ನಮಗರಿವಿಲ್ಲದಂತೆಯೇ ನಮ್ಮ ಮನಸ್ಸು ಹೆಚ್ಚೆಚ್ಚು ಸೂಕ್ಷ್ಮಾವಲೋಕನಕ್ಕೆ ಒಳಗಾಗುತ್ತದೆ. ಇತರರ ನಡುವಳಿಕೆಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ ಹಲವಾರು ಅರ್ಥಗಳು ಹೊಳೆಯುತ್ತದೆ. ಅವುಗಳಲ್ಲಿ ಮನಸ್ಸಿಗೆ ನಾಟುವ ಅರ್ಥಕ್ಕೊಂದು ಅಕ್ಷರ ರೂಪ ನೀಡಲು ನಾನು ಬಯಸುತ್ತೇನೆ.
ಹಾಗೆಯೇ ಕೆಲವೊಮ್ಮೆ ನಮಗೆ ಸಹಾಯ ಮಾಡಿದವರಿಗೆ ಯಾವುದೋ ಅಹಂನಿಂದಲೋ, ತಪ್ಪು ಕಲ್ಪನೆಯಿಂದಲೋ, ನಿರ್ಲಕ್ಷದಿಂದಲೋ ಅಥವಾ ಇವೆಲ್ಲವೂ ಅಲ್ಲದೆ, ಗೊತ್ತಿದ್ದೋ ಗೊತ್ತಿಲ್ಲದೆಯೋ ಒಂದು ಧನ್ಯವಾದವನ್ನು ಹೇಳಲೂ ಸಾಧ್ಯವಾಗಿರುವುದಿಲ್ಲ. ಅಂತಹ ವಿಚಾರಗಳಿಗೂ ನಾನು ಬರಹ ರೂಪವನ್ನು ನೀಡಿ ನನ್ನನ್ನು ನಾನೇ ಸಾಂತ್ವನಗೊಳಿಸಿಕೊಳ್ಳುತ್ತೇನೆ. ಅದನ್ನು ಓದಿದ ಇತರರು ಹಾಗೆ ಮಾಡದಿರಲಿ ಎಂಬುದು ಒಂದು ಸಣ್ಣ ಸಂದೇಶ.

ಮತ್ತೆ ಕೆಲವೊಮ್ಮೆ ಸಣ್ಣ ನಿರ್ಲಕ್ಷಕ್ಕೆ ಅಗಾಧವಾದ ಬೆಲೆ ತೆರಬೇಕಾಗುತ್ತದೆ. ನಾನು ಅನುಭವಿಸಿದ, ಕಂಡ, ಕೇಳಿದ ಅಂತಹ ಘಟನೆಗಳನ್ನೂ ನಾನು ಕಥೆಯಾಗಿಸಲು ಬಯಸುತ್ತೇನೆ. ಹೀಗೆ ಮನದ ಮಂಥನಕ್ಕೆ ಅಕ್ಷರ ರೂಪದ ದಾರಿ ಮಾಡಿಕೊಟ್ಟು ಮನಸ್ಸನ್ನು ನಿರಾಳ ಮಾಡಿಕೊಳ್ಳಲು ನಾನು ಬರೆಯುತ್ತೇನೆ, ಆತ್ಮ ತೃಪ್ತಿಗಾಗಿ ನಾನು ಬರೆಯುತ್ತೇನೆ.

-ಪದ್ಮಾ ಆನಂದ್, ಮೈಸೂರು

17 Responses

  1. ವೆಂಕಟಾಚಲ says:

    ಉತ್ತಮ ಲೇಖನ

  2. Anonymous says:

    ಒಳ್ಳೆಯ ಬರಹ ಮೇಡಂ

  3. MANJURAJ H N says:

    ನಾನೇಕೆ ಬರೆಯುತ್ತೇನೆ? ಎಂದು ಎಲ್ಲ ಬರೆಹಗಾರರೂ ಕೇಳಿಕೊಂಡರೆ
    (ನಿಮ್ಮಂತೆ!) ಅದು ಉತ್ತಮ ಬರೆಹವಾಗಿಯೇ ರೂಪುಗೊಳ್ಳುತ್ತದೆ.
    ಏಕೆಂದರೆ ಮಾತು ಹೊರಗೆ; ಬರೆಹ ಒಳಗೆ !!

    ಹೀಗಾಗಿ ನೀವು ನಿಮ್ಮನ್ನೇ ಪ್ರಾಮಾಣಿಕವಾಗಿ ಕೇಳಿಕೊಂಡ ಧಾಟಿ
    ನನಗಿಷ್ಟವಾಯಿತು; ಅಂತೆಯೇ ಅದರ ಪ್ರತಿ-ಧ್ವನಿಯೂ !

    ಧನ್ಯವಾದ ಮೇಡಂ, ಪ್ರಕಟಿಸುವುದು ಬಿಡುವುದು ಆಮೇಲಿನದು;
    ಒಂದಂತೂ ಸತ್ಯ: ಬರೆಯುತ್ತಾ ಇದ್ದರೆ ಬದುಕು ಮಾಗುತ್ತದೆ; ಬಾಗುತ್ತದೆ
    ಮತ್ತು ಬೀಗಬಾರದು ಎಂದು ಕಲಿಸುತ್ತದೆ. ಇದಕಿಂತ ಹೆಚ್ಚು ಇನ್ನೇನಿದೆ?

  4. ನಯನ ಬಜಕೂಡ್ಲು says:

    Nice

  5. ಪದ್ಮಾ ಆನಂದ್ says:

    ನನ್ನ ಲೇಖನ ಕುರಿತಾದ ನಿಮ್ಮ ಪ್ರತಿಕ್ರಿಯೆ ಮುದ ನೀಡಿತು ಸರ್.‌ ವಂದನೆಗಳು.

  6. ಪದ್ಮಾ ಆನಂದ್ says:

    ನನ್ನ ಲೇಖನವನ್ನು ಪ್ರಕಟಿಸಿದ “ಸುರಹೊನ್ನೆ”ಗೆ ಧನ್ಯವಾದಗಳು.

  7. ನಾನೇಕೆ ಬರೆಯುತ್ತೇನೆ.. ಚೆಂದದ ಲೇಖನ.. ಪದ್ಮಾ ಮೇಡಂ ಹಾಗೇ ಬರೆಯುತ್ತಿರಿ..ನಮ್ಮನ್ನು ನಾವು ಲವಲವಿಕೆಯಿಂದ ಅನವಶ್ಯಕ ಒತ್ತಡ ಗಳಿಂದ ದೂರ ವಿರಲು ಅತ್ಯಂತ ಉತ್ತಮ ಮಾದ್ಯಮ… ಬರೆಹ ಶುಭವಾಗಲಿ

  8. ಶಂಕರಿ ಶರ್ಮ says:

    ನಿಮ್ಮ ಬರೆಹಗಳು ರೂಪುಗೊಳ್ಳುವ ಬಗೆ ಸ್ವಾರಸ್ಯಕರವಾಗಿದೆ. ಹಾಗೆಯೇ ಈ ಬರೆಹವೂ. ಧನ್ಯವಾದಗಳು ಪದ್ಮಾ ಮೇಡಂ.

  9. Hema Mala says:

    ಸೊಗಸಾದ ಬರಹ.

  10. ನಾನೇಕೆ ಬರೆಯುತ್ತೇನೆ ಎಂಬ ಲೇಖನ ಎಲ್ಲ ಬರಹಗಾರರ ಮನಸ್ಸಿನ ಮಾತಿನಂತಿದೆ
    ಚಂದದ ಲೇಖನ ವಂದನೆಗಳು

  11. ಪದ್ಮಾ ಆನಂದ್ says:

    ಧನ್ಯವಾದಗಳು ತಮ್ಮ ಪ್ರತಿಕ್ರಿಯೆಗಾಗಿ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: