ಒರಳಿನ ಹೊರಳು ದಾರಿಯ ಗುರುತು
‘ಚಟ್ನಿಪುರಾಣ’ವೆಂಬ ನನ್ನ ಬರೆಹವು ಸುರಹೊನ್ನೆಯಲ್ಲಿ ಪ್ರಕಟವಾದಾಗ ಓದುಗರೊಂದಿಗೆ ಲೇಖಕರೂ ಮೆಚ್ಚುಮಾತುಗಳನ್ನು ದಾಖಲಿಸಿದರು. ಅದರಲ್ಲೂ ಒರಳಿನಲ್ಲಿ ರುಬ್ಬಿ ಮಾಡುವ ಚಟ್ನಿಯನ್ನು ರುಚಿ ಕುರಿತಂತೆ! ಈ ನಿಟ್ಟಿನಲ್ಲಿ ಮೈಸೂರಿನ ಸಾಹಿತ್ಯ ದಾಸೋಹದ ರೂವಾರಿಗಳಲ್ಲೊಬ್ಬರೂ ಸ್ವತಃ ಸಾಹಿತಿಯೂ ಆದ ಶ್ರೀಮತಿ ಪದ್ಮಾ ಆನಂದ ಅವರು ನಮ್ಮ ಮನೆಯ ಒರಳುಕಲ್ಲಿನ ಚಟ್ನಿಯ ಸವಿಯನ್ನು ಬಲ್ಲವರಾದ್ದರಿಂದ ‘ಒರಳುಚಟ್ನಿಯನ್ನು ಸದಾ ಮೆಲ್ಲುತ್ತಿರುವುದು ಸಹ ಈ ಲೇಖನದ ರುಚಿ ಹೆಚ್ಚಾಗಲು ಕಾರಣವಿರಬಹುದು’ ಎಂದು ಶ್ಲಾಘಿಸಿದರು. ಅವರ ಪ್ರತಿಕ್ರಿಯೆಗೆ ಧನ್ಯವಾದ ಸಮರ್ಪಿಸಲು ಹೊರಟಾಗಲೇ ನನಗೆ ಹೊಳೆದದ್ದು: ‘ಅಯ್ಯೋ, ಒರಳುಕಲ್ಲನ್ನು ಕುರಿತೇ ಬರೆಯಬಹುದಲ್ಲ’ ಎಂದು! ಹೀಗೆ ಯಾವುದೋ ನೆಪ ಮತ್ತು ನೆನಪ ಹಿನ್ನೆಲೆಯಿಂದಾಗಿ ಬರೆಹಗಳು ಜನಿಸಿ ಬಿಡುತ್ತವೆ. ಅಕಾಲಿಕವೋ, ಸಕಾಲಿಕವೋ ಓದುಗದೊರೆಗಳು ಹೇಳಬೇಕು ಅಷ್ಟೇ.
ಒರಳುಕಲ್ಲು ತರುವ ನೆನಪುಗಳು ಅಪಾರ. ಅದರಲ್ಲೂ ಸಾಹಿತ್ಯದ ವಿದ್ಯಾರ್ಥಿಯಾದವರಿಗೆ ನಮ್ಮ ಜಾನಪದದ ಮೂಲಕ ಇವುಗಳ ಹರಹು ಚಿರಪರಿಚಿತ. ಮಿಕ್ಸಿ ಮತ್ತು ಗ್ರೈಂಡರುಗಳು ಕಾಣಿಸಿಕೊಂಡು, ನಾವದನ್ನು ಕೊಂಡು, ಗೃಹಬಳಕೆಗೆ ಬಳಸಿ, ಬೀಗುವ ತನಕ ಎಲ್ಲರ ಮನೆಗಳಲ್ಲೂ ಒರಳುಕಲ್ಲು, ರುಬ್ಬುವ ಗುಂಡು, ಬೀಸೆಕಲ್ಲು, ಒನಕೆ, ಕೊಟ್ಟಣ ಮೊದಲಾದ ಅಡುಗೆ ತಯಾರಿಕೆ ಸಂಬಂಧದ ವಸ್ತುಗಳು ಇದ್ದವು. ಆಧುನಿಕತೆಯಿಂದಾಗಿ ನಿಧಾನವಾಗಿ ಇವು ಕಣ್ಮರೆಯಾದವು. ಪರ್ಯಾಯ ಅನುಕೂಲಗಳು ಒದಗಿದ ಮೇಲೆ ಇವು ಅಕ್ಷರಶಃ ಮೂಲೆಗುಂಪಾದವು. ಜಾನಪದ ವಸ್ತು ಸಂಗ್ರಹಾಲಯಗಳಲ್ಲಿ ವಿಧವಿಧವಾದ ಇಂಥ ವಸ್ತುಗಳನ್ನು ಜೋಪಾನ ಮಾಡಿ ಪ್ರದರ್ಶನಕ್ಕೆ ಇಟ್ಟಿರುತ್ತಾರೆ. ಕುವೆಂಪು ಅವರ ಕುಪ್ಪಳಿಯ ಕವಿಮನೆಯಲ್ಲಿ ಇಂಥ ಹಳೆಯ ಕಾಲದ ವೈವಿಧ್ಯಮಯವಾದ ಪದಾರ್ಥಗಳನ್ನು ನೋಡಿದ ಓರ್ವ ಮಹಿಳಾ ವಿದ್ಯಾರ್ಥಿಯು ಅಷ್ಟು ದೊಡ್ಡದಾದ ಒರಳುಕಲ್ಲನ್ನು ನೋಡಿದವಳೇ ‘ಸರ್, ಇದನ್ನು ಯಾರು ಬಳಸುತ್ತಿದ್ದರು?’ ಎಂದು ದಿಗ್ಭ್ರಮೆಯಿಂದ ಉದ್ಗಾರ ತೆಗೆದಿದ್ದಳು. ಆಕೆಯು ಮೂಲತಃ ಗ್ರಾಮೀಣ ಭಾಗದ ಹೆಣ್ಣುಮಗಳಾಗಿದ್ದರೂ ಆ ಒರಳುಕಲ್ಲು, ಬೀಸೆಕಲ್ಲು, ಒನಕೆಗಳನ್ನು ನೋಡಿದವಳೇ ಗಾಬರಿಯಾಗಿದ್ದನ್ನು ಕಂಡು ನಾನು ಚಿಂತಾಕ್ರಾಂತನಾದೆ. ನಿಧಾನವಾಗಿ ನಮ್ಮ ಸಂಸ್ಕೃತಿ ಮತ್ತು ಪರಂಪರೆಗಳ ಅರಿವು ಸಹ ಇಲ್ಲವಾಗುತ್ತಿದೆಯಲ್ಲ! ಎಂದು. ಇರಲಿ.
ಮೂಲಮಟ್ಟಿನ ಜನಪದ ಗೀತೆಗಳಲ್ಲಿರುವ ಹಳ್ಳಿಯ ಸೊಗಡು ಗೊತ್ತಿರುವಂಥದೇ. ರಾಗಿ ಬೀಸುವಾಗ, ಭತ್ತ ಕುಟ್ಟುವಾಗ, ಕೇರುವಾಗ, ಖಾರ ಅರೆಯುವಾಗ, ರುಬ್ಬುವಾಗ ಹೀಗೆ ಶ್ರಮದಾಯಕ ಕೆಲಸಗಳಲ್ಲಿ ಒಟ್ಟೊಟ್ಟಿಗೆ ತೊಡಗಿಸಿಕೊಂಡ ಮಹಿಳೆಯರು ತಮ್ಮ ಮನೋಲ್ಲಾಸ ಮತ್ತು ಕೆಲಸಗಳ ಶ್ರದ್ಧೆಗಳನ್ನು ಕಾಯ್ದುಕೊಳ್ಳಲೆಂದೇ ಹಾಡುಗಳಿದ್ದವು; ಇವು ಶ್ರಮವನ್ನು ಕಡಮೆಗೊಳಿಸುತ್ತಿದ್ದವು. ‘ಒಂದು ಬೊಗಸೆ ಜೋಳ, ನಾ ಬೀಸಬಲ್ಲೆನೆ, ಆ ಹಾಡ ಹಾಡಬಲ್ಲೆನೆ ಈಗ, ಆದಾವ ನಮ ಜೋಳ ಉಳಿದಾವ ನಮ ಹಾಡು, ಈಗ ಸಾಕವ್ವ ನಿನ ಕಲ್ಲ, ಕೈಯಾಗೆ ಹಾಕಿದುಂಗರ ಸವೆದಾವ’ ಎಂದು ಒಬ್ಬಾಕೆ ಕೇಳಿಕೊಳ್ಳುತ್ತಾಳೆ. ಇಲ್ಲಿ ಜೋಳವು ಬದುಕಿನ ಅಗತ್ಯ; ಹಾಡು ಪರಂಪರೆ ಉಳಿಯುವ ಸತ್ಯ! ಬೀಸಿ ಬೀಸಿ ಕೈಯಲ್ಲಿದ್ದ ಉಂಗುರ ಸವೆಯಿತು ಎನ್ನುವಾಗ ಅವಳ ಹಾಡಿನ ಪಾಡು ನಮಗೆ ಮನದಟ್ಟಾಗಬೇಕು. ಹೀಗೆ ಹಿಂದೆ ಕೂಡು ಕುಟುಂಬಗಳಿದ್ದ ಕಾಲದಲ್ಲಿ ಹೆಣ್ಣುಮಕ್ಕಳು ಮನೆಯೊಳಗೇ ದೈಹಿಕಶ್ರಮದ ಹೆಚ್ಚು ಕೆಲಸಗಳನ್ನು ಮಾಡುತ್ತಿದ್ದರು. ಅಷ್ಟೊಂದು ಮಂದಿಗೆ ಆಹಾರ ತಯಾರಿಕೆಗೆ ಬೇಕಾದ ಸಿದ್ಧತೆಯೇ ಒಂದು ದೊಡ್ಡ ಸವಾಲಾಗಿತ್ತು. ಹಾಗಾಗಿ, ಬೀಸುವಕಲ್ಲು, ರುಬ್ಬುವ ಕಲ್ಲು, ಅರೆಯುವ ಕಲ್ಲುಗಳೇ ಮುಂತಾದ ಶಿಲಾಪ್ರಪಂಚದೊಂದಿಗೆ ಅವರು ಗುದ್ದಾಡಬೇಕಿತ್ತು. ಇದರೊಂದಿಗೆ ಮೊರ, ಬೀಸಣಿಗೆ, ಹೂ ಬುಟ್ಟಿ, ಏಣಿ, ಬೆತ್ತದ ಕುರ್ಚಿ ಮೊದಲಾದ ಬಿದಿರಿನ ಪದಾರ್ಥಗಳು ಸಹ ಬಳಕೆಯಲ್ಲಿತ್ತು.
ನಮ್ಮಜ್ಜಿಯದು ವಿಪರೀತ ಮಡಿ. ಅವರೇ ಸ್ವತಃ ಮನೆಯಲ್ಲೇ ಅವಲಕ್ಕಿಯನ್ನು ತಯಾರು ಮಾಡಿಕೊಳ್ಳುತ್ತಿದ್ದರು. ಅಂಗಡಿಯ ರವೆಯು ಮಡಿಗೆ ಬರುವುದಿಲ್ಲವೆಂದು, ಅಕ್ಕಿತರಿಯನ್ನು ಪರ್ಯಾಯವಾಗಿ ಬಳಸುತ್ತಿದ್ದರು. ಯಂತ್ರ ತಂತ್ರಗಳ ಆವಿಷ್ಕಾರವಾಗಿ, ಫ್ಲೋರ್‌ಮಿಲ್ಲುಗಳು ಬರುವತನಕ ಎಲ್ಲ ಬಗೆಯ ಹಿಟ್ಟುಗಳು ಮನೆಯಲ್ಲೇ ತಯಾರಾಗುತ್ತಿದ್ದವು! ನನ್ನ ತಾಯ್ತಂದೆಯರು ಮೈಸೂರಿನ ಕನ್ನೇಗೌಡರ ಕೊಪ್ಪಲಿನಲ್ಲಿ ಬಾಡಿಗೆ ಮನೆ ಮಾಡಿಕೊಂಡಿದ್ದ ದಿನಗಳಲ್ಲೇ ನನ್ನ ಬಾಲ್ಯ ರೂಪುಗೊಂಡಿದ್ದು. ಆಟಕ್ಕೆ ಕರೆಯಲೆಂದು ಸಹಪಾಠಿ ಸ್ನೇಹಿತರ ಮನೆಗಳಿಗೆ ಹೋದಾಗ ಹೆಂಗಸರು ಗುಂಪಾಗಿ ಕುಳಿತುಕೊಂಡು ಬೀಸೆಕಲ್ಲನ್ನು ಬಳಸುತ್ತಿದ್ದರು. ಒನಕೆಯಿಂದ ಕುಟ್ಟುವುದನ್ನು, ಒರಳಕಲ್ಲಿನಲ್ಲಿ ದೋಸೆ ಮತ್ತು ಇಡ್ಲಿಗೆ ಸಂಪಣ ತಯಾರಿಸುವುದನ್ನು ಅರೆಯುವ ಕಲ್ಲಿನಲ್ಲಿ ಖಾರ ಅರೆದು ಉಪ್ಪೆಸರು ಮಾಡುವುದನ್ನು ಕಣ್ಣಾರೆ ನೋಡಿದ್ದೇನೆ. ಎಂಥ ಚಿಕ್ಕ ಪುಟ್ಟ ಮನೆಗಳಾದರೂ ಒರಳುಕಲ್ಲನ್ನು ಕಡ್ಡಾಯವಾಗಿ ವಾಸ್ತು ಪ್ರಕಾರ ನಿರ್ದಿಷ್ಟ ದಿಕ್ಕಿನಲ್ಲಿ ಹೂಳುತ್ತಿದ್ದರು. ‘ಒರಳು ಲಕ್ಷ್ಮಿಯಂತೆ, ಹಾಗಾಗಿ ತುಳಿಯಬಾರದು’ ಎಂದು ಹೇಳಿ ಅದರ ಶುಚಿತ್ವವನ್ನು ಕಾಪಾಡುತ್ತಿದ್ದರು.
ಮನೆಯಲ್ಲಿ ಯಾವುದೇ ಶುಭ ಕಾರ್ಯಗಳಾದಾಗ ಒರಳುಕಲ್ಲಿಗೆ ಪೂಜೆ ಮಾಡುತ್ತಿದ್ದರು. ಬಹುಶಃ ಅದು ಅನ್ನದ ಮೂಲ ಎಂದಿರಬೇಕು. ಹಿಂದೆ ಒರಳುಕಲ್ಲುಗಳು ವ್ಯಾಪಕವಾಗಿ ಮಾರಾಟವಾಗುತ್ತಿದ್ದವು. ಬಳಸೀ ಬಳಸೀ ನುಣುಪಾದ ಮೇಲೆ ಆಗಿಂದಾಗ್ಗ್ಯೆ ಕಲ್ಮುಳ್ಳು ಹಾಕಿಸಬೇಕಾಗುತ್ತಿತ್ತು. ಸುತ್ತಿಗೆ, ಚಾಣ, ಉಳಿಗಳನ್ನು ಗೋಣೀಚೀಲದಲ್ಲಿ ಸುತ್ತಿಕೊಂಡು, ಮನೆಯ ಹೊರಗೆ ‘ಕಲ್ಮುಳ್ಳು’ ಎಂದು ಕೂಗುತ್ತಾ ಹೋದವರನ್ನು ಕರೆದು, ದುಡ್ಡುಕಾಸು ಮಾತಾಡಿ, ಕಲ್ಮುಳ್ಳನ್ನು ಹಾಕಿಸುತ್ತಿದ್ದರು. ಅದಾದ ಮೇಲೆ ಭತ್ತದ ತೌಡನ್ನು ಹಾಗೇ ರುಬ್ಬಿ, ಅದರಲ್ಲಿದ್ದ ಕಲ್ಲುಪುಡಿಯನ್ನು ಹೊರಗೆ ತೆಗೆಯುವ ಕುಸುರಿತನ ನಡೆಯುತ್ತಿತ್ತು. ನಮ್ಮಮ್ಮನಂತೂ ಹಳೆಯ ನ್ಯೂಸ್ ಪೇಪರನ್ನು ಮೆಂತ್ಯಕಾಳಿನೊಂದಿಗೆ ನೆನೆ ಹಾಕಿ ಅದನ್ನು ರುಬ್ಬಿ, ಆ ಮಿಶ್ರಣವನ್ನು ಹೊಸ ಮೊರಗಳಿಗೆ ನೀಟಾಗಿ ಹಚ್ಚಿ ಒಣಗಿಸಿಡುತ್ತಿದ್ದರು. ತರುವಾಯ ಒರಳನ್ನು ನೀರಿನಲ್ಲಿ ತೊಳೆದು, ರುಬ್ಬುಗುಂಡಿನ ಗೂಟವನ್ನು ಬಿಗಿ ಮಾಡಿಕೊಂಡು, ರುಬ್ಬಲು ಹೊರಡುತ್ತಿದ್ದರು. ನಾವು ಹುಣಸೂರಿನ ಮುತ್ತುಮಾರಮ್ಮನ ಬೀದಿಯ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದಾಗ ನಮ್ಮ ಮನೆಯ ಓನರೇ ಒರಳು ತಯಾರಿಸಿ ಮಾರುವ ಕಾಯಕದವರಾಗಿದ್ದರು. ಹುಣಸೂರಿನ ಕಲ್ಕುಣಿಕೆಯ ಸರ್ಕಲಿನಲ್ಲಿ ಕಲ್ಲುಗಳನ್ನು ರಾಶಿ ಹಾಕಿಕೊಂಡು, ಗಾಳಿ ಮಳೆ ಚಳಿಯೆನ್ನದೇ ಒರಳುಕಲ್ಲನ್ನು ತಯಾರಿಸುತ್ತಿದ್ದರು. ನನ್ನ ಸಹಪಾಠಿ ಬಸವರಾಜು ಮನೆಗೆ ಸೈಕಲಿನಲ್ಲಿ ಹೋದಾಗಲೆಲ್ಲಾ ಅವರು ನನ್ನನ್ನು ಕಂಡು ಮಾತಾಡಿಸುತ್ತಿದ್ದರು. ಆಗೆಲ್ಲಾ ಅವರ ಕೈ ಚಳಕವನ್ನು ಸಮೀಪದಿಂದ ನೋಡುತ್ತಿದ್ದೆ. ಹತ್ತಾರು ವಿಧದ ಉಳಿಗಳು, ಚಾಣಗಳು, ಸುತ್ತಿಗೆಗಳನ್ನು ಬಳಸಿಕೊಂಡು ಕಲ್ಲಿನೊಂದಿಗೆ ಯುದ್ಧಕ್ಕೆ ನಿಲ್ಲುತ್ತಿದ್ದರು. ಕಲ್ಲಿನ ಅನಗತ್ಯ ಭಾಗಗಳನ್ನು ತೆಗೆಯುವಾಗ ಅವರು ಬಳಸುತ್ತಿದ್ದ ಕೌಶಲ್ಯವನ್ನು ಸಹ ನೋಡುತ್ತಿದ್ದೆ. ಅಂಥ ಕಠಿಣತಮ ಕೆಲಸ ಮಾಡಿ ಮಾಡಿ, ಅವರ ಕೈ ಕೂಡ ಕಬ್ಬಿಣದಂತಾಗಿತ್ತು. ಕಲ್ಲಿನ ಚಕ್ಕೆಗಳು ಅವರಿಗೆ ಯಾವ ಹಾನಿಯನ್ನೂ ಮಾಡುತ್ತಿರಲಿಲ್ಲ. ಅವುಗಳ ತುದಿಯೇ ಮುರಿದು ಹೋಗಿ ಶರಣಾಗುತ್ತಿತ್ತು. ‘ಇವರೇ ಹೀಗೆ ಕಲ್ಲುಗಳನ್ನು ಆಟಿಕೆಗಳಂತೆ ಬಳಸುತ್ತಿದ್ದಾರೆ; ಇನ್ನು ಜಕಣಾಚಾರಿ ಮೊದಲಾದ ಪ್ರತಿಭಾವಂತ ಕುಶಲ ಶಿಲ್ಪಿಗಳು ಹೇಗೆ ಬಳಸಿರಬಹುದು’ ಎಂದು ಲೆಕ್ಕ ಹಾಕಿ ವಿಸ್ಮಯಗೊಳ್ಳುತ್ತಿದ್ದೆ. ತೇಜಸ್ವಿಯವರ ‘ಅವನತಿ’ ಕತೆಯಲ್ಲಿ ಬರುವ ಸುರಾಚಾರಿಯೇ ನನಗೆ ಈಗ ನೆನಪಾಗುತ್ತಿದ್ದಾನೆ. ಶಿಲ್ಪಕಲಾ ಕೆತ್ತನೆ ಕೋವಿದನಾಗಿದ್ದ ಅವನು ತನ್ನ ವಂಶಪಾರಂಪರ್ಯದಿಂದ ಬಂದಿದ್ದ ಕಲಾಕೌಶಲವನ್ನು ಅರಿಯದೇ, ಚಂಗ್ಲುಬುದ್ಧಿಯಿಂದಾಗಿ ಊರೂರು ಅಲೆಯುತ್ತಾ, ಕೊನೆಗೆ ಒರಳುಕಲ್ಲು ಮಾಡುವ, ರೈತರಿಗೆ ಬೆರ್ಚಪ್ಪ ಅಂದರೆ ಬೆದರುಗೊಂಬೆಗಳನ್ನು ತಯಾರಿಸಿ ಕೊಡುವ ಹಂತಕ್ಕೆ ಬಂದಿಳಿಯುತ್ತಾನೆ.
ಪುಟ್ಪುಟ್ಟ ಗ್ರೈಂಡರುಗಳು ಬರುವ ಮುಂಚೆ ದೊಡ್ಡ ಪ್ರಮಾಣದ ರುಬ್ಬುವ ಯಂತ್ರಗಳಿಂದ ಇಡ್ಲಿಹಿಟ್ಟು, ದೋಸೆಹಿಟ್ಟುಗಳೇ ಮೊದಲಾದುವನ್ನು ರುಬ್ಬಿ ಕೊಡುವ ಅಂಗಡಿಗಳು ಓಪನಾದಾಗ ನಾವು ಸಹ ಅದರ ಗಿರಾಕಿಗಳಾಗಿದ್ದುಂಟು. ಮನೆಯಲ್ಲಿ ನೆನೆ ಹಾಕಿದ ಪದಾರ್ಥಗಳನ್ನು ಅವರಿಗೆ ಕೊಟ್ಟು, ರುಬ್ಬಿಸಿಕೊಂಡು, ದುಡ್ಡು ನೀಡಿ, ಮರಳುತ್ತಿದ್ದುದು ನನಗೆ ನೆನಪಿದೆ. ಆದರೆ ಅವುಗಳ ಓನರು ಹಿಟ್ಟು ಕದಿಯುತ್ತಾರೆಂಬ ಆರೋಪ ಬಂದ ಮೇಲೆ ಬಹಳ ಮಂದಿ ಆ ವ್ಯವಹಾರಕ್ಕೆ ಬೆನ್ನು ತಿರುಗಿಸಿದರು. ಈ ‘ರುಬ್ಬಿಸಿಕೊಳ್ಳುವುದು’ ಎಂಬ ಪದಕ್ಕೆ ಹೀನಾರ್ಥಪ್ರಾಪ್ತವಾಗಿ ಮರ್ಯಾದಸ್ಥರು ಬಳಸದೇ ಇರುವಂತಾಯಿತು. ಅದರಲ್ಲೂ ಸಿನಿಮಾ ಲಾಂಗ್ವೇಜಿನಲ್ಲಿ ಅಶ್ಲೀಲಾರ್ಥದಲ್ಲೂ ಬಳಕೆಯಾಗಿ ಬಿಟ್ಟಿದೆ. ಪೊಲೀಸರು ಕರೆದುಕೊಂಡು ಹೋಗಿ ಅವನನ್ನು ಚೆನ್ನಾಗಿ ರುಬ್ಬಿದರು ಎಂದರೆ ಸಾಕಷ್ಟು ಒದೆತಗಳು ಬಿದ್ದಿವೆ ಎಂದೇ ತಿಳಿಯಬೇಕು. ಅದು ಏನೇ ಇರಲಿ, ನಮ್ಮ ಜಿಹ್ವೇಂದ್ರಿಯಕೆ ಅವಿರತ ಸೇವೆ ಮಾಡುವ ಈ ‘ರುಬ್ಬುವಿಕೆ’ ಎಂಬ ಕ್ರಿಯಾಪದಕ್ಕೆ ಇಂಥ ಅರ್ಥ ಬರಬಾರದಾಗಿತ್ತು! ಏನು ಮಾಡುವುದು? ಶಬ್ದಾರ್ಥ ರೂಪಾಂತರ ತಸ್ಮೈ ನಮಃ!
ಕೆ ಆರ್ ನಗರದಲ್ಲಿ ಮನೆಯನ್ನು ಕಟ್ಟಿಸಿಕೊಂಡಾಗ ನನ್ನ ಜೀವದ ಗೆಳೆಯ ಈಗ ನಾಡಿನ ಖ್ಯಾತ ಸಾಹಿತಿ ಮತ್ತು ವಿಮರ್ಶಕ ಆಗಿರುವ ಚಿಕ್ಕಮಗಳೂರಿನ ಡಾ. ಎಚ್ ಎಸ್ ಸತ್ಯನಾರಾಯಣನು ಆಗ ಕೋಲಾರದ ಮಾಲೂರಿನ ಕಾಲೇಜಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದನು. ಅಲ್ಲಿಂದ ಒರಳುಕಲ್ಲನ್ನು ತಂದು ಕೊಟ್ಟನು. ಕೆಂಪಗಿನ ಕಲ್ಲು, ಅದಕ್ಕೆ ಸೂಕ್ತವಾದ ರುಬ್ಬುಗುಂಡು. ಯಾವುದೋ ಅದ್ಭುತವಾದ ಕಲಾಕೃತಿಯನ್ನು ನೋಡುತ್ತಿದ್ದ ಅನುಭವ. ಅದನ್ನು ನನ್ನ ಮಡದಿಯು ಸತ್ಯನ ನೆನಪಿಗಾಗಿ, ಅಡುಗೆಮನೆಯಲ್ಲೇ ಹೂಳಿಸಿ, ಮನೆಗೆ ಬಂದಾಗಲೆಲ್ಲಾ ‘ನೀವು ಕೊಟ್ಟ ಗಿಫ್ಟು’ ಎಂದು ತಮಾಷೆ ಮಾಡುತ್ತಿದ್ದಳು. ‘ಇದುವರೆಗೆ ಯಾರೂ ಕೊಡದ ನೆನಪಿನ ಕಾಣಿಕೆ’ ಎಂದು ಸತ್ಯಣ್ಣ ಸಹ ನಗಾಡುತ್ತಾ ಅದನ್ನು ಅಷ್ಟು ದೂರದಿಂದ ಸಾಗಿಸಿ ತಂದ ಕಥಾನಕವನ್ನು ಮತ್ತೊಮ್ಮೆ ನೆನಪಿಸುತ್ತಿದ್ದನು. ನಾವು ಆ ಮನೆಯನ್ನು ಮಾರಿದ ಮೇಲೂ ಸತ್ಯ ಕೊಟ್ಟ ಆ ಗಿಫ್ಟು ಕಾಡುತ್ತಿತ್ತು. ಮೈಸೂರು ಮನೆಯ ಒರಳುಕಲ್ಲಿನಲ್ಲಿ ರುಬ್ಬುವಾಗಲೆಲ್ಲಾ ಆ ಮಾಲೂರಿನ ಒರಳುಕಲ್ಲು ಸ್ಮೃತಿಪಟಲದಲ್ಲಿ ಹಾದು ಹೋಗುತ್ತಿತ್ತು. ಅಷ್ಟು ಅದ್ಭುತವಾಗಿತ್ತು ಆ ಒರಳು. ಮೈಸೂರಿನಲ್ಲಿ ಕಟ್ಟಿದ ಮನೆಯನ್ನು ಕೊಂಡುಕೊಂಡಾಗ ಮರೆಯದೇ ಬಿಲ್ಡರಿಗೆ ಹೇಳಿ ಒರಳುಕಲ್ಲನ್ನು ಹಾಕಿಸಿಕೊಂಡಿದ್ದು ನನ್ನ ಮಡದಿ. ಈಗಲೂ ನಾವು ಒರಳುಕಲ್ಲನ್ನು ತಪ್ಪದೇ ಬಳಸುತ್ತೇವೆ. ದೋಸೆ ಮತ್ತು ಇಡ್ಲಿಯ ಸಂಪಣಕ್ಕೆ ಗ್ರೈಂಡರಿದೆ; ಆದರೆ ಚಟ್ನಿಗೆ ಮಾತ್ರ ಒರಳೇ! ಇನ್ನು ನನಗೆ ವರ್ಗಾವಣೆಯಾಗಿ ಹೊಳೆನರಸೀಪುರದಲ್ಲಿ ಬಾಡಿಗೆ ಮನೆಯಲ್ಲಿ ಇರಬೇಕಾದಾಗ ಮತ್ತೂ ಮರೆಯದೇ ಮೈಸೂರಿಂದಲೇ ಒಂದು ಪುಟ್ಟ ಒರಳುಕಲ್ಲನ್ನು ತಂದು ಇಟ್ಟುಕೊಂಡಿದ್ದೇವೆ. ಎಲ್ಲ ಬಗೆಯ ಚಟ್ನಿಗಳು ತಯಾರಾಗುವುದು ಇದರಲ್ಲೇ! ಒರಳುಕಲ್ಲಿನ ಚಟ್ನಿಯ ರುಚಿ ಹತ್ತಿದ ನಾಲಗೆಗೆ ಮಿಕ್ಸಿಯ ಚಟ್ನಿ ಪೇಲವ. ಮಿಕ್ಸಿಯದು ಬ್ಲೇಡು. ಅದು ಕತ್ತರಿಸುತ್ತದೇ ವಿನಾ ರುಬ್ಬಿ ಕೊಡುವುದಿಲ್ಲ; ಎಲ್ಲವನೂ ಸಮೀಕರಿಸುವುದಿಲ್ಲ. ಆದರೆ ಒರಳುಕಲ್ಲು ಎಲ್ಲವನ್ನೂ ಹದವಾಗಿ ರುಬ್ಬಿ, ಅದರ ರಸವನ್ನು ಒಂದುಗೂಡಿಸಿ, ಉತ್ಕೃಷ್ಟ ಔಟ್‌ಪುಟ್ ನೀಡುತ್ತದೆ. ನನಗೆ ಯಾವುದೇ ಚಟ್ನಿಯಾದರೂ ನುಣ್ಣಗಿರಬಾರದು; ತರಿತರಿಯಾಗೇ ಇರಬೇಕು. ಏನೇನು ಐಟಂಗಳನ್ನು ಹಾಕಿದ್ದಾರೆಂಬ ಕುರುಹು ಕಾಣುತ್ತಿರಬೇಕು. ಆದರೆ ಅದು ಎಲ್ಲದರೊಂದಿಗೆ ಬೆರೆತಿರಬೇಕು. ತಟ್ಟೆಗೆ ಒಂದು ಸ್ಪೂನು ಚಟ್ನಿ ಬಡಿಸಿದರೆಂದರೆ ಅದು ಪಂಚೇಂದ್ರಿಯಗಳಿಗೂ ಪರಿಚಿತವಾಗಬೇಕು. ನೋಡಲು ಸುಂದರವಾಗಿದ್ದು, ಕೊಬ್ಬರಿಯ ಹಾಲು ‘ನಾನಿನ್ನು ಇವುಗಳೊಂದಿಗೆ ಇರಲಾರೆ’ನೆಂದು ಹರಿಯಲು ಶುರುವಾಗಬೇಕು. ಕರಿಬೇವು, ಕೊತ್ತಂಬರಿ ಸೊಪ್ಪಿನೆಸಳು ಅಲ್ಲಲ್ಲಿ ಮುಖ ಮುಚ್ಚಿಕೊಂಡು ಇಣುಕುತ್ತಿರಬೇಕು. ಇಂಗು ಒಗ್ಗರಣೆಯ ಘಮವು ಮೂಗಿಗೆ ಬಡಿಯುತ್ತಿರಬೇಕು. ದೋಸೆಗೋ ಇಡ್ಲಿಗೋ ನಂಚಿಕೊಂಡು ತಿನ್ನುವಾಗ ನಾಲಗೆಯು ಸ್ವರ್ಗದಲಿದ್ದು, ಅದರ ಸುಖಕ್ಕೆ ಅಂಗಾಂಗ ತೇಲಾಡುತ್ತಿರಬೇಕು. ಹಿತವಾದ ಖಾರದಿಂದಲೂ ಈ ಸ್ವರ್ಗಸುಖದ ಉಣಿಸಿನಿಂದಲೂ ಕಣ್ಣಿನಿಂದ ಆನಂದಬಾಷ್ಪ ಇಣುಕಬೇಕು. ಬಡಿಸುವಾಗಿನ ಪಾತ್ರೆಗಳ ಸಶಬ್ದ ಕಿವಿಗೆ ಮುಟ್ಟುತಿರಬೇಕು. ಈ ಚತುರೇಂದ್ರಿಯಗಳ ಸಹವಾಸದಿಂದ ಒಟ್ಟೂ ಮೈ ಮನಸು ಚಟ್ನಿಯ ಅಪೂರ್ವ ರುಚಿಯಿಂದ ಆಸ್ವಾದನೀಯವಾಗಬೇಕು. ಹೀಗಾಗಿ ಒರಳುಕಲ್ಲಿನಲ್ಲಿ ರುಬ್ಬಿದ ಚಟ್ನಿಯು ದೇವಲೋಕದ ಖಾರಾಮೃತವೇ ಸರಿ! ಮಿಕ್ಸಿಯಲ್ಲಿ ಮಾಡಿದ ಚಟ್ನಿಯು ಬೇಗನೆ ಕೆಡುತ್ತದೆ; ಆದರೆ ಒರಳಿನಲ್ಲಿ ನೀರು ಹಾಕಿಕೊಳ್ಳದೇ ರುಬ್ಬಿದ ಚಟ್ನಿಯು ಬೇಗ ಹಾಳಾಗುವುದಿಲ್ಲ.
ರುಬ್ಬುವ ಗುಂಡಿಗೆ ಗೂಟವೇ ಇಲ್ಲದೇ ನಮ್ಮಮ್ಮ ವೈನಾಗಿ ರುಬ್ಬುತ್ತಿದ್ದರು. ರುಬ್ಬುಗುಂಡಿಗೆ ಗೂಟ ಇಲ್ಲದೇ ಇದ್ದರೆ ನನಗೆ ರುಬ್ಬಲು ಬರುತ್ತಿರಲಿಲ್ಲ. ಎಷ್ಟೋ ಸಂದರ್ಭಗಳಲ್ಲಿ ನಮ್ಮ ತಂದೆಯವರು ಸಂಪಣವನ್ನು ರುಬ್ಬಿ ಕೊಡುತ್ತಿದ್ದರು. ಮೊದಲ ಬಾರಿಗೆ ನಾನು ಒರಳುಕಲ್ಲಿನಲ್ಲಿ ರುಬ್ಬುವುದನ್ನು ಕಲಿತಾಗ, ‘ಕೈ ಮತ್ತು ಬೆರಳು ಜೋಪಾನ, ಎಚ್ಚರ ತಪ್ಪಿದರೆ ಜಜ್ಜಿ ಹೋಗುತ್ತದೆ’ ಎಂದು ಎಚ್ಚರಿಕೆ ಕೊಟ್ಟಿದ್ದು ನನಗಿನ್ನೂ ಕಿವಿಯಲ್ಲಿದೆ! ಅದರಲ್ಲಿ ರುಬ್ಬುವುದು ಒಂದು ಕಲೆ. ಆಗಿನಿಂದಲೂ ನಮ್ಮ ಮನೆಯಲ್ಲಿ ಒರಳುಕಲ್ಲು ಖಾಯಂ ಸದಸ್ಯ. ಎಲ್ಲರ ಕುಟುಂಬದಲ್ಲಿ ಆಧುನಿಕತೆ ಹಣಕಿದ ಮೇಲೆ, ಉದ್ಯೋಗಸ್ಥ ಮಹಿಳೆಯರು ಹೆಚ್ಚಾದ ಮೇಲೆ ಅಡುಗೆಮನೆಯಲ್ಲಿ ಕ್ರಾಂತಿಯಾಯಿತು. ಮಿಕ್ಸಿ, ಗ್ರೈಂಡರು, ವಾಷಿಂಗ್ ಮಶೀನು, ಕುಕ್ಕರು, ಓವನು, ಪಾತ್ರೆ ತೊಳೆವ ಮಶೀನು, ಕುಡಿಯುವ ನೀರಿನ ಆಕ್ವಾಗಾರ್ಡು, ಹೆಚ್ಚಲು-ತುರಿಯಲು ವಿಧವಿಧವಾದ ಸಲಕರಣೆಗಳು ಕಾಣಿಸಿಕೊಂಡವು. ಇದು ಬದಲಾದ ಕಾಲಮಾನ ಮತ್ತು ಮನೋಮಾನ. ಹಾಗೆ ನೋಡಿದರೆ ಹೆಣ್ಣುಮಕ್ಕಳ ಉದ್ದಜಡೆಗೆ ಕತ್ತರಿ ಬಿದ್ದಿದ್ದು ಸಹ ಹೆಣ್ಣು ಹೊರಗೆ ದುಡಿಯಲು ಹೊರಟಿದ್ದರಿಂದಲೇ! ಮನೆಯ ಒಳಗೂ ಶ್ರಮಿಸಿ, ಎಲ್ಲವನ್ನೂ ಮಾಡಿಟ್ಟು, ಕಛೇರಿಗೋ ಕಾರ್ಖಾನೆಗೋ ಹೋಗಿ ಅಲ್ಲಿಯೂ ದುಡಿಯುವ ಹೆಣ್ಣುಮಕ್ಕಳಿಗೆ ಗಂಟಾನುಗಟ್ಟಲೆ ತಲೆಸ್ನಾನ ಮಾಡಿ, ಹೆರಳು ಹಾಕಿಕೊಳ್ಳಲು ಸಮಯವೆಲ್ಲಿ ಸಿಗುತ್ತದೆ? ಅಂದರೆ ಜೀವನಶೈಲಿಯ ಪಲ್ಲಟಗಳು ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ವಿದ್ಯಮಾನಗಳನ್ನು ಅವಲಂಬಿಸಿರುತ್ತವೆ. ಸರಿತಪ್ಪುಗಳ ನಿರ್ಣಯಕ್ಕೆ ಕೈ ಹಾಕದೇ, ಅದರ ವಾದ ವಾಗ್ವಾದಗಳಿಗೆ ತಲೆ ಹಾಕದೇ ಸಂಯಮದಿಂದ ವಿವರಿಸಿಕೊಳ್ಳುತ್ತಾ ಹೋದರೆ ಬದುಕು ಸಾಗಿದ ದಿಕ್ಕನ್ನು ನಿರ್ಲಿಪ್ತವಾಗಿ ನೋಡಲು ಸಾಧ್ಯ ಮತ್ತು ವಿಶ್ಲೇಷಿಸಲು ಸಾಧ್ಯ.
ಈ ಒರಳುಕಲ್ಲನ್ನು ಗ್ರಾಮೀಣಭಾಗದಲ್ಲಿ ‘ವಳಕಲ್ಲು’ ಎಂದು ಉಚ್ಚರಿಸುವುದು ರೂಢಿ. ವಳಕಲ್ಲು ಒಂದು ಕಾಲಘಟ್ಟದ ಸಾಂಸ್ಕೃತಿಕ ಪ್ರತಿನಿಧಿ. ಮಡಕೆ, ಕುಡಿಕೆ, ಜಾಡಿ, ಕಲ್ಗಡಿಗೆ ಮೊದಲಾದವನ್ನು ಬಳಸುವಾಗ ಒರಳುಕಲ್ಲು ಸಹ ಜೊತೆಗಿತ್ತು. ಸ್ಟೈನ್‌ಲೆಸ್ ಸ್ಟೀಲ್ ಪಾತ್ರೆಗಳು ಬಂದಾಗಲೂ ಜೊತೆಗಿತ್ತು. ತದನಂತರ ಕಾಣೆಯಾಗುತ್ತಾ ಬಂತು. ಮಹಡಿ ಮನೆಗಳು ಹೆಚ್ಚಾದ ಮೇಲೆ ಒರಳುಕಲ್ಲನ್ನು ಪ್ರತಿಷ್ಠಾಪಿಸುವುದು ಕಷ್ಟದ ಮಾತಾಯಿತು. ಅದೇ ಸಮಯಕ್ಕೆ ಸರಿಯಾಗಿ ಪರ್ಯಾಯವೊಂದು ಲಭಿಸಿತು. ಎಲೆಕ್ಟ್ರಿಸಿಟಿಯನ್ನು ಅವಲಂಬಿಸಿದ ಮಿಕ್ಸಿ-ಗ್ರೈಂಡರುಗಳು ಮುನ್ನೆಲೆಗೆ ಬಂದವು. ಈಗಲೂ ಯುಪಿಎಸ್ ಇಲ್ಲದ ಮನೆಗಳವರು ಕರೆಂಟು ಕೈ ಕೊಟ್ಟಾಗ ಮಿಕ್ಸಿಯಲ್ಲಿ ರುಬ್ಬಲು ಆಗದೇ ತಮ್ಮ ಆ ದಿನದ ಮೆನುವನ್ನೇ ಬದಲಾಯಿಸಿ ಬಿಡುತ್ತಾರೆ! ಯುಪಿಎಸ್ ಇಲ್ಲದ ಮನೆಗಳು ಇರಬಹುದು; ಆದರೆ ಮಿಕ್ಸಿಯಿಲ್ಲದ ಮನೆ ಬಹುಶಃ ಇಲ್ಲ! ‘ಮೊಬೈಲ್ ಇಲ್ಲದ ಮನೆಯಿಂದಲೋ ಮಿಕ್ಸಿಯಿಲ್ಲದ ಮನೆಯಿಂದಲೋ ಸಾಸುವೆ ತನ್ನಿ’ ಎಂದೇನಾದರೂ ಈಗ ಬುದ್ಧರು ಬಂದು ನುಡಿದರೆ ‘ಆಗದು’ ಎಂದು ಕೈ ಚೆಲ್ಲಬೇಕಾಗುತ್ತದೆ!! ರುಚಿಗಿಂತಲೂ ಸಮಯಕ್ಕೆ, ಪರಿಟಾವಣೆ ಅಡುಗೆಗಿಂತಲೂ ‘ಹೇಗೋ ಒಂದು ತಿಂದರಾಯಿತು’ ಎಂಬ ಮನೋಧರ್ಮಕ್ಕೆ ಒರಳುಕಲ್ಲು ಹಿಡಿಸುವುದಿಲ್ಲ. ಇದರದು ಪದ್ಧತಿ ಪಾಂಗಿತ. ಒರಳುಕಲ್ಲನ್ನು ಬಳಸುವ ಮುಂಚೆಯೂ ಬಳಸಿದ ಮೇಲೂ ಶುಚಿಗೊಳಿಸಬೇಕು. ಅದಕ್ಕೆ ಸಮಯ ಹಿಡಿಯುತ್ತದೆ. ಮಿಕ್ಸಿಯಾದರೆ ಹಾಗಲ್ಲ; ಅದರ ಜಾರುಗಳನ್ನು ಸಿಂಕಿನ ನಲ್ಲಿಯ ಕೆಳಗೆ ಹಿಡಿದರಾಯಿತು. ಒರಳಿನಲ್ಲಿ ರುಬ್ಬಿದರೆ ರುಚಿ ಹೆಚ್ಚು ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಆದರೆ ಒರಳಿನಲ್ಲಿ ರುಬ್ಬಲು ಸಮಯಾಭಾವ ಮತ್ತು ಈಗಿನ ಬಹಳಷ್ಟು ಮನೆಗಳಲ್ಲಿ ಒರಳು ಇರುವುದೇ ಇಲ್ಲ. ಒರಳು ಕಲ್ಚರ್ ಮಾಯವಾಗುತ್ತಿದೆ. ಈಗಿನದೇನಿದ್ದರೂ ಬೆರಳು ಕಲ್ಚರ್! ಆಫೀಸು, ಫ್ಯಾಕ್ಟರಿಗಳಲ್ಲಿ ಬಯೋಮೆಟ್ರಿಕ್ ಕೊಡಲು ಬೆರಳು. ಸಿಸ್ಟಮಿನ ಮುಂದೆ ಕುಳಿತು ಟೈಪಿಸುವಾಗ ಬೆರಳು. ಇನ್ನು ಮೊಬೈಲ್ ಫೋನಿನ ಪರದೆಯ ಮೇಲಾಡುವ ಬೆರಳು! ಟೀವಿಯ ಮುಂದೆ ಕುಳಿತೂ ರಿಮೋಟನ್ನು ಒತ್ತುತಲೇ ಇರುವ ಬೆರಳು. ಹೀಗೆ ದಾರಿಯಲ್ಲಿ ನಡೆದುಕೊಂಡು ಹೋಗುವಾಗಲೂ ದ್ವಿಚಕ್ರ ವಾಹನಗಳನ್ನು ಚಲಾಯಿಸುತ್ತಿರುವಾಗಲೂ ಮೊಬೈಲಿನತ್ತಲೇ ಗಮನ, ಅಲ್ಲೂ ನಮ್ಮ ಬೆರಳು; ಹೆಚ್ಚೂ ಕಡಮೆಯಾಗಿ ಅನಾಹುತವಾದಾಗ ಬೆರಳಿಗೆ ಕೊರಳು!! ಇರಲಿ. ವಿಷಯ ಅದಲ್ಲ, ‘ಒರಳೂ ಇಲ್ಲ; ಒರಳಿನಲ್ಲಿ ರುಬ್ಬಲೂ ಬರುವುದಿಲ್ಲ’ ಎಂಬುದು ಈಗಿನ ಗಾದೆ.
ಒರಳಿನಲ್ಲಿ ಬರೀ ಚಟ್ನಿಯೊಂದನ್ನೇ ರುಬ್ಬುವುದಿಲ್ಲ. ಹುಳಿ ಅಂದರೆ ತರಕಾರಿ ಗಟ್ಟಿ ಸಾಂಬಾರ್ ಮಾಡಲೂ ಒರಳಿನಲ್ಲಿ ಮಸಾಲೆಯನ್ನು ರುಬ್ಬಿ ಹಾಕಬಹುದು. ಚಿತ್ರಾನ್ನಗಳನ್ನು ಮಾಡುವಾಗಲೂ ಒರಳನ್ನು ಬಳಸಬಹುದು. ಕಾಯಿಸಾಸುವೆ ಚಿತ್ರಾನ್ನ, ಮಾವಿನಕಾಯಿ ಚಿತ್ರಾನ್ನಗಳನ್ನು ತಯಾರಿಸುವಾಗ ಅದರೆಲ್ಲ ಇನ್‌ಗ್ರಿಡಿಯೆಂಟ್ಸ್‌ಗಳನ್ನು ಒರಳಿಗೆ ಹಾಕಿಕೊಂಡು, ಗಟ್ಟಿಯಾಗಿ, ರುಬ್ಬಿ ಆನಂತರ ಅನ್ನ ಕಲೆಸಬಹುದು. ನಮ್ಮಮ್ಮ ಒರಳನ್ನ ಅಂತಲೇ ಮಾಡುತಿದ್ದರು. ಒರಳಿನಲ್ಲಿ ರುಬ್ಬಿದ ಮೇಲೆ ರುಬ್ಬಿದ್ದನ್ನು ಹೊರಗೆ ತೆಗೆದು, ಒರಳನ್ನು ತೊಳೆಯುವ ಮುಂಚೆ ಒರಳನ್ನು ಒರೆಸುವ ಶಾಸ್ತ್ರ ಮಾಡುತಿದ್ದರು. ಅಂದರೆ ನೀರಿನಲ್ಲಿ ತೊಳೆದು ಸ್ವಚ್ಛ ಮಾಡುವ ಮುಂಚೆ, ಒರಳಿಗೆ ಸ್ವಲ್ಪ ಬಿಸಿಯನ್ನ ಹಾಕಿ ಒರಳನ್ನು ಒರೆಸುತ್ತಿದ್ದರು. ಆ ಅನ್ನಕೆ ಆ ಎಲ್ಲ ಮಸಾಲೆಗಳ ಅಂಶ ಬೆರೆತು ವಿಚಿತ್ರವೂ ವಿಶೇಷವೂ ಆದ ರುಚಿಯೊಂದು ಒಡಮೂಡುತಿತ್ತು. ಒರಳು ಒರೆಸಿದ ಈ ಅನ್ನಕೆ ಮನೆಯಲ್ಲಿ ಬಾರಿ ಡಿಮ್ಯಾಂಡು! ನಮ್ಮ ಅತ್ತೆಮನೆಯದೂ ಕೂಡುಕುಟುಂಬ. ನನ್ನ ಮಡದಿಯ ತವರು, ಹಳ್ಳಿಮನೆಯಲ್ಲಿ ಒಂದು ದೊಡ್ಡ ಒರಳು ಇತ್ತು. ಅದರಲ್ಲಿ ರುಬ್ಬಿ, ರುಬ್ಬಿ, ಅದರ ತಳ ತೂತಾಗಿತ್ತು! ಅಂದರೆ ಆ ಮಟ್ಟಿಗೆ ಆ ಒರಳನ್ನು ಬಳಸಿದ್ದರು ಮತ್ತು ಆ ಒರಳು ಸಹ ನಿರ್ವಂಚನೆಯಿಂದ ತನ್ನ ಸೇವೆಯನ್ನು ನೀಡಿತ್ತು. ನಮ್ಮ ಅತ್ತೆಯವರು ಮಾಡುತಿದ್ದ ಒರಳು ಚಟ್ನಿಯ ರುಚಿ ನೋಡಿದ ನಮ್ಮ ಕುಟುಂಬಮಿತ್ರರು ಈಗಲೂ ಅದನ್ನು ನೆನಪಿಸಿಕೊಂಡು, ಬಾಯಿ ಚಪ್ಪರಿಸುತ್ತಾರೆ. ಹಳ್ಳಿಮನೆಯಾದ್ದರಿಂದ ಪದಾರ್ಥಗಳು ತಾಜಾ ಆಗಿ ಸಿಗುತ್ತಿದ್ದವು. ಜೊತೆಗೆ ಹಿಂದಿನ ಕಾಲದವರ ಕೈಗುಣ ಕೂಡ ರುಚಿಯನ್ನು ತರಿಸುತ್ತಿತ್ತು. ಗ್ರೈಂಡರುಗಳಲ್ಲೂ ರುಬ್ಬುಗುಂಡುಗಳಿರುವುದರಿಂದ ಹೆಚ್ಚೂ ಕಡಮೆ ಹಿಂದಣ ಒರಳುಕಲ್ಲಿನ ಚಟ್ನಿಯ ರುಚಿಯೇ ಸ್ವಲ್ಪಮಟ್ಟಿಗೆ ಲಭಿಸೀತು. ಹಾಗಾಗಿಯೇ ಹೊಟೆಲುಗಳ ಚಟ್ನಿ ‘ತಿನ್ನಬಲ್’ ಆಗಿರುತ್ತವೆ! ಒಟ್ಟಿನಲ್ಲಿ ಒರಳು ತನ್ನ ದಾರಿಯಲ್ಲಿ ಹೊರಳಿದೆ; ಗ್ರೈಂಡರಾಗಿ ಬಂದಿದೆ. ಇದೇ ಸಮಾಧಾನ. ಬಹಳ ಮಂದಿಯು ಮಿಕ್ಸಿಯ ಚಟ್ನಿ ತಿಂದು ಚಟ್ನಿಯನ್ನೇ ದ್ವೇಷಿಸುವಂಥವರು. ಅವರಿಗೆ ಒರಳುಕಲ್ಲಿನಲ್ಲಿ ರುಬ್ಬಿದ ಚಟ್ನಿಯ ರುಚಿ ತೋರಿಸಿದರೆ ಬಹುಶಃ ಬದಲಾದಾರು! ಕೊನೆಯಲ್ಲಿ ಕವಿ ಕುವೆಂಪು ಅವರ ಕವಿತೆಯ ಸಾಲುಗಳನ್ನು ಉದ್ಧರಿಸದಿದ್ದರೆ ತಪ್ಪಾಗುತ್ತದೆ: ‘ಚೇತನಮೂರ್ತಿಯು ಆ ಕಲ್ಲು; ತೆಗೆ! ಜಡವೆಂಬುದು ಬರಿ ಸುಳ್ಳು!!’ ಲಕ್ಷ್ಮೀಸದೃಶ ಒರಳಿಗೂ ಈ ಬರೆಹಕೆ ಪ್ರೇರಣೆಯಾದ ಶ್ರೀಮತಿ ಪದ್ಮಾ ಆನಂದರಿಗೂ ಪ್ರಕಟಿಸಿದ ಸುರಹೊನ್ನೆಯ ಹೇಮಮಾಲಾ ಮೇಡಂ ಅವರಿಗೂ ನನ್ನ ಕೃತಜ್ಞಾಪೂರ್ವಕ ಧನ್ಯವಾದಗಳು.
–ಡಾ. ಹೆಚ್ ಎನ್ ಮಂಜುರಾಜ್
ಚೆನ್ನಾಗಿದೆ, ಒರಳು ಕಲ್ಲಿನ ಕುರಿತು ಬರಹ
ಧನ್ಯವಾದ ಮೇಡಂ
ಒರಳಿನ..ಲೇಖನ ಹಲವಾರು ಪರಿಕರಗಳನ್ನು ಹಾಕಿ ಚಟ್ನಿ ರುಬ್ಬಿದಂತೆ ಹಲವಾರು ವಿಷಯಗಳನ್ನು…ಹಾಕಿ ಹದವಾಗಿ ರುಬ್ಬಿ ಒಗ್ಗೂಡಿಸಿ ಒಗ್ಗರಣೆ ಹಾಕಿದಂತಿದೆ ಮಂಜು ಸಾರ್ ಧನ್ಯವಾದಗಳು
ನಿಜ. ಹಲವು ಪರಿಕರಗಳ ಸಾಕಾರ. ಒರಳು ನಮ್ಮ ಸಾಂಸ್ಕೃತಿಕ ಅಸ್ಮಿತೆ.
ಒರಳು ಕ್ಲೀನ ಕುರಿತಾದ ಚೆಂದದ ಲೇಖನಕ್ಕಾಗಿ ಅಭಿನಂದನೆಗಳು ಸರ್. ನನ್ನ ಪ್ರೇರಣೆಯಿಂದ ಎಂದಿದ್ದೀರಿ, ನನಗೆ ಪ್ರೇರಣೆ ನೀಡಿದ್ದು, ನಿಮ್ಮ ಮನೆಯ ಒರಳು ಕಲ್ಲಿನ, ಕೋಮಲಾ ಅವರ ಕೈರುಚಿಯ ಚಟ್ನಿಯ ಸವಿರುಚಿ ಎಂದಿಲ್ಲಿ ಹೇಳಬಯಸುತ್ತೇನೆ. ಒರಳು ಕಲ್ಲನ್ನು ನೆನೆಸಿಕೊಂಡರೇ ನೆನಪುಗಳು ಬಾಲ್ಯಕ್ಕೆ ಜಾರಿಬಿಡುವುದಂತೂ ಖಂಡಿತಾ.
ಖಂಡಿತ ನಿಮ್ಮ ಮಾತುಗಳೇ ಪ್ರೇರಣೆ. ಇದಕೆ ಸಂಶಯ ಬೇಡ!
ನಿಮ್ಮ ಮೆಚ್ಚುನುಡಿಗೆ ಧನ್ಯವಾದ ಮೇಡಂ….
ನಮ್ಮ ಮನೆಯ ಅಡುಗೆ ಕೋಣೆಯಲ್ಲಿ ಸ್ಥಾಪನೆಗೊಂಡಿರುವ ದೊಡ್ಡ ಒರಳು ಕಲ್ಲು ನಿಮ್ಮ ಲೇಖನ ಓದಿ ಖುಷಿಯಿಂದ ಬೀಗಿದೆ…! ಒರಳಿನಲ್ಲಿ ರುಬ್ಬಿದ ಸ್ವಾದಿಷ್ಟವಾದ ಗಟ್ಟಿ ಚಟ್ಣಿಯ ಸವಿಯನ್ನು ನಿರೂಪಿಸಿದ ನಿಮ್ಮ ಮನೆಗೆ ಓದುಗ ಬಂಧುಗಳು ದಾಳಿ ಇಡುವ ದಿನ ದೂರವಿಲ್ಲ ಎಂದು ನನ್ನೆಣಿಕೆ! ಚಂದದ ಬರೆಹಕ್ಕೆ ಧನ್ಯವಾದಗಳು.
ಹೌದೇ! ಸಂತಸವಾಯಿತು.
ದಾಳಿಕೋರರು ಮೈಸೂರಿಗೆ ಬರುವರೋ? ಹೊಳೆನರಸೀಪುರಕೆ ಬರುವರೋ?
ಮುಂಚೆ ತಿಳಿದರೆ ಸಾಕು; ಆತಿಥ್ಯ ನಮ್ಮ ಸಂಸ್ಕೃತಿಯ ಚೆಂಬೆಳಕು!!
ನಿಮ್ಮ ಮೆಚ್ಚುಮಾತಿಗೆ ಧನ್ಯವಾದ ಮೇಡಂ,
ನಿಮ್ಮ ಮನೆಯ ದೊಡ್ಡ ಒರಳುಕಲ್ಲನ್ನು ಕೇಳಿದೆನೆಂದು ತಿಳಿಸಿ.
ಅವರು ಚೆನ್ನಾಗಿರಬೇಕು.
ಎಂದಿನಂತೆ ಬಲು’ರುಚಿ’ಯಾದ ಬರಹ…
ಧನ್ಯವಾದಗಳು ಮೇಡಂ
ರುಚಿ ರುಚಿಯಾದ ಒರಳಿನ ಚಟ್ನಿಯ ಕತೆ ಓದಿ ಬಾಯಲ್ಲಿ ನೀರುರಿತು
ವಂದನೆಗಳು
ಧನ್ಯವಾದ ಮೇಡಂ…
ನಮಸ್ಕಾರ ಗುರುಗಳೆ . ಒರಳು ಕಲ್ಲಿನ ಬಗ್ಗೆ ರುಚಿಕಟ್ಟಾದ ಬರವಣಿಗೆಗೆ ಧನ್ಯವಾದಗಳು.
ನನಗೂ ಒರಳು ಕಲ್ಲಿಗೂ ಅವಿನಾಭಾವ ಸಂಬಂಧವಿದೆ ನಮ್ಮ ಮನೆಯ ಹೆಣ್ಣು ದೇವತೆಯ ಹೆಸರು ಒಳ್ಳುಕಲ್ಲು(ಒರಳು ಕಲ್ಲು )ದ್ಯಾವಮ್ಮ.