ಆಹಾ……ಸೆರಗೇ…………!
‘ಮಕ್ಕಳನಾಡಗೊಡ……ಮನೆಯಪೊಕ್ಕು ಉಕ್ಕುವ ಹಾಲುಬಿಡ
ಗಕ್ಕನೆ ಕೊಂಡೋಡುವ ಬೆನ್ನಟಲು ನಕ್ಕುತ ಸೆರಗಬಿಡ…….ಸೆರಗಬಿಡ…….’
ಪುರಂದರದಾಸರು ಬರೆದಿರುವ ಈ ಹಾಡನ್ನು ಗುನುಗುತ್ತಿದ್ದಂತೆಯೇ ಸೆರಗಿನ ಬಗ್ಗೆಯೇ ಇರುವ ಮತ್ತೊಂದು ಹಾಡು ನೆನಪಾಯಿತು.
‘ಹಾಲು ಉಕ್ಕಿತೋ ರಂಗ ಹಾದಿಯ ಬಿಡೋ
ಹಾಲು ಬೇಕೆಂದರೆ ಸೆರಗ ಬಿಡೋ…..ರಂಗ ಸೆರಗ ಬಿಡೋ………’
ಹೌದು, ಆ ಕೃಷ್ಣನಿಗೆ ಗೊತ್ತಿತ್ತು ಸೆರಗನ್ನ ಹಿಡಿದು ಬಿಟ್ಟರೆ ತನ್ನ ಕೆಲಸ ಸಾಧಿಸಿಕೊಳ್ಳಬಹುದು ಅಂತ. ಎಷ್ಟಾದರೂ ಮಕ್ಕಳೇ ಹೆಚ್ಚು ಬುದ್ಧಿವಂತರಲ್ಲವೇ?
ನನ್ನ ಮಗ ಚಿಕ್ಕವನಾಗಿದ್ದಾಗ ಒಮ್ಮೆ “ಅಮ್ಮ, ಸೆರಗು ಅಂದರೇನು?” ಅಂತ ಕೇಳಿದ.
ನಾನು ವಾರ್ಡ್ರೋಬಿನಿಂದ ಸೀರೆಯನ್ನು ತೆಗೆದು ಬಿಚ್ಚಿ ತೋರಿಸುತ್ತಾ “ನೋಡು ಇದೇ ಸೆರಗು” ಅಂದೆ.
“ವಾಹ್ ಸೀರೆ ಇದ್ರೆ ಸೆರಗು ಇರ‍್ಲೇಬೇಕು, ಸೆರಗು ಇದ್ರೆ ಸೀರೆ ಇರ‍್ಲೇಬೇಕು ಅಲ್ವಾ? ಒಳ್ಳೇ ಮಜವಾಗಿದೆ” ಅಂತ ನಕ್ಕು ಹೊರಗೋಡಿದ.
ಹೌದಲ್ಲವೇ? ಸೀರೆಗೂ ಸೆರಗಿಗೂ ಎಂಥ ಅವಿನಾಭಾವ ಸಂಬಂಧ….., ಸೀರೆ ಕೊಳ್ಳುವಾಗ ಸೆರಗನ್ನೂ ನೋಡಬೇಕಲ್ಲವೆ? ಸೆರಗು ಸೊಗಸಾಗಿದ್ದು ಬಿಟ್ಟರೆ ಸಾಕೆ? ಸೀರೆಯೂ ಚಂದವಾಗಿರಬೇಕಲ್ಲವೆ? ಅಂತೂ ಸೀರೆಯನ್ನು ಬಿಟ್ಟು ಸೆರಗಿಲ್ಲ. ಸೆರಗನ್ನು ಬಿಟ್ಟು ಸೀರೆಯಿಲ್ಲ. ಅದೇನೇ ಇರಲಿ, ಸೀರೆಗೆ ಅಂದವಾದ ಸೆರಗಿದ್ದರೆ ಮಾತ್ರ ಸೀರೆಯ ಸೊಬಗು ಹೆಚ್ಚುತ್ತದೆ. ಶುಭಕಾರ್ಯಗಳಿಗೆ ಸೀರೆಯನ್ನು ಆರಿಸುವಾಗ ಸೆರಗಿಗೇ ಹೆಚ್ಚು ಪ್ರಾಶಸ್ತ್ಯ.
ಇತ್ತೀಚಿಗೆ ನನ್ನ ಪರಿಚಿತರೊಬ್ಬರು ವಟಸಾವಿತ್ರಿ ಹುಣ್ಣಿಮೆಯ ದಿವಸ ಅರಿಶಿನ ಕುಂಕುಮಕ್ಕೆ ಕರದಿದ್ದರು. ನಾನು ಅವರ ಮನೆಗೆ ಹೋದಾಗ ಹಿರಿಯ ಮುತ್ತೈದೆಯೊಬ್ಬರು ಸತ್ಯವಾನ – ಸಾವಿತ್ರಿಯ ಕಥೆ ಹೇಳುತ್ತಿದ್ದರು. “ಯಮಧರ್ಮರಾಯ ಸಾವಿತ್ರಿಯ ಪತಿ ಸತ್ಯವಾನನ ಪ್ರಾಣವನ್ನು ತೆಗೆದುಕೊಂಡು ಹೊರಟೇಬಿಟ್ಟ, ಆಗ ನಮ್ಮ ಸಾವಿತ್ರಿ ಯಮರಾಜನ ಮುಂದೆ ಸೆರಗೊಡ್ಡಿ ಬೇಡಿಕೊಂಡಳು. ‘ನನಗೆ ಪತಿ ಭಿಕ್ಷೆ ನೀಡು’ ಅಂತ. ಆಗ ಯಮಧರ್ಮರಾಯನಿಗೆ ಸಾವಿತ್ರಿಯ ಮೇಲೆ ಕರುಣೆ ಉಕ್ಕಿ ಬಂದು ಸತ್ಯವಾನನನ್ನು ಬದುಕಿಸಿದ”.
ಅಲ್ಲಿದ್ದ ಮತ್ತೊಬ್ಬ ಹೆಂಗಸು “ಹೌದ್ರೀ…..ವಿನೀತರಾಗಿ ಸೆರಗೊಡ್ಡಿ ಬೇಡಿಕೊಂಡ್ರೆ ಯಾರ ಕರುಳಾದರೂ ಚುರಕ್ ಅನ್ನುತ್ತೆ. ಅದಿರಲಿ, ನಮ್ಮ ಗಣಪತಿಯ ತಲೆ ಕತ್ತರಿಸಿಬಿಟ್ಟಾಗ ನಮ್ಮ ಪಾರ್ವತಿ ಗಂಡನ ಮುಂದೆ ಸೆರಗೊಡ್ಡಿ ಬೇಡಿಕೊಂಡಳಂತೆ…. ‘ನನ್ನ ಮಗನನ್ನು ಏನಾದರೂ ಮಾಡಿ ಬದುಕಿಸಿ’ ಅಂತ. ಶಿವಪ್ಪನಿಗೆ ಹೆಂಡತಿಯ ದುಃಖವನ್ನು ಕಂಡು ‘ಅಯ್ಯೋ’ ಅನಿಸಿದ್ದರಿಂದ ಆನೆ ತಲೆ ತರಿಸಿ ಗಣಪತಿಯ ಶರೀರಕ್ಕೆ ಅದನ್ನು ಸೇರಿಸಿ ಗಣಪತಿಯನ್ನು ಬದುಕಿಸಿಬಿಟ್ಟ.
ಅಬ್ಬಬ್ಬಾ……ನಮ್ಮ ಶಿವಪ್ಪ ಹಾಗೆ ಮಾಡದೇ ಇದ್ರೆ ನಾವು ಗಣಪತಿ ಹಬ್ಬ ಮಾಡೋಕೆ ಆಗ್ತಾನೆ ಇರಲಿಲ್ಲ ಅಲ್ವಾ?”
ಅಂತ ಒಬ್ಬ ಪುಟ್ಟ ಹುಡುಗ ಕೇಳಿದಾಗ ಎಲ್ಲರೂ ಗಟ್ಟಿಯಾಗಿ ನಕ್ಕರು.
“ಬಹುಶಃ ಬಹಳ ಹಿಂದಿನಿಂದಲೇ ಹೆಂಗಸರ ಸುಮಂಗಲೀತನಕ್ಕೂ ಸೆರಗಿಗೂ ಸಂಬಂಧ ಪ್ರಾರಂಭವಾಯಿತು ಅನ್ನಿಸುತ್ತೆ. ಯಾಕೆ ಅಂದ್ರೆ ಉಡಿತುಂಬೋದು ಸೆರಗಿಗೆ ತಾನೆ? ಬಾಗಿನ ಕೊಡೋದು….ತೆಗೆದು ಕೊಳ್ಳೋದು ಎಲ್ಲಾ ನಮ್ಮ ಸೆರಗಿನ ಸಹಾಯದಿಂದ ತಾನೆ?” ಹೇಳುತ್ತಲೇ ಆ ಮನೆಯ ಗೃಹಿಣಿ ಎಲ್ಲರಿಗೂ ಅರಿಶಿನ ಕುಂಕುಮ ಕೊಟ್ಟರು.
ಎಲ್ಲರ ಮಾತನ್ನೂ ಕೇಳುತ್ತಾ ಕುಳಿತಿದ್ದ ಹಿರಿಯ ಮಹಿಳೆಯೊಬ್ಬರು “ಹೌದಮ್ಮ….ಇಂತಹ ಪವಿತ್ರವಾದ ಸೆರಗನ್ನ ಅದರಲ್ಲೂ ಪರಸ್ತ್ರೀಯ ಸೆರಗನ್ನು ಮುಟ್ಟಿದ ದುಶ್ಯಾಸನನ ಕಥೆ ಕೊನೆಗೆ ಏನಾಯ್ತು ಹೇಳಿ? ಅಂದಾಗ ಎಲ್ಲರೂ ಅರೆಕ್ಷಣ ಮೌನವಾದರು.
ಮನೆಗೆ ಬಂದ ಮೇಲೂ ನಾನು ಸೆರಗಿನ ಬಗ್ಗೆಯೇ ಆಲೋಚಿಸತೊಡಗಿದೆ. ನಂತರ ಸೆರಗಿನ ಉಪಯೋಗಗಳ ಬಗ್ಗೆ ನನಗೆ ತಿಳಿದಷ್ಟನ್ನು ಪಟ್ಟಿ ಮಾಡಲು ಪ್ರಾರಂಭಿಸಿದೆ.
ಸಾಮಾನ್ಯವಾಗಿ ಹಳ್ಳಿಗಳ ಮನೆಗಳಲ್ಲಿ ಅಡಿಗೆ ಮನೆ ತುಂಬಾ ವಿಶಾಲವಾಗಿರುತ್ತವೆ. ಮನೆಯ ಹಿರಿಯ ಗೃಹಿಣಿ ತಮ್ಮ ಅಡಿಗೆಯ ಕೆಲಸ ಮುಗಿದ ಮೇಲೆ ಅಲ್ಪ ವಿಶ್ರಾಂತಿಗಾಗಿ ಅಡಿಗೆ ಮನೆಯ ನೆಲದ ಮೇಲೆ ಮುಖದ ಮೇಲೆ ಸೆರಗು ಮುಚ್ಚಿಕೊಂಡು ಮಲಗಿಬಿಡುತ್ತಾರೆ. ನೊಣದ ಕಾಟದಿಂದ ತಪ್ಪಿಸಿಕೊಳ್ಳಲು.
ಆ ಕಾಲದಲ್ಲಿ ಮಹಿಳೆಯರು ಬಾವಿಯಿಂದ ಅಥವಾ ಕೆರೆಯಿಂದ ನೀರನ್ನು ತರಬೇಕಾದರೆ ಸೀರೆಯ ಸೆರಗನ್ನು ಸಿಂಬಿಯಂತೆ ಸುತ್ತಿ ತಲೆಯ ಮೇಲಿಟ್ಟುಕೊಂಡು ಅದರ ಮೇಲೆ ನೀರು ತುಂಬಿದ ಬಿಂದಿಗೆಯನ್ನಿಟ್ಟುಕೊಂಡು ತರುತ್ತಿದ್ದರಂತೆ . ಈಗಲೂ ಬೀದಿಯಲ್ಲಿರುವ ‘ಬೋರ್‌ವೆಲ್’ನಿಂದ ನೀರು ತರುವ ಎಷ್ಟೋ ಹೆಂಗಸರು ಈ ವಿಧಾನವನ್ನು ಅನುಸರಿಸುತ್ತಾರೆ.
ಕೆಲವು ಮಹಿಳೆಯರು ಗಿರಣಿಯಿಂದ ಹಿಟ್ಟು ಬೀಸಿಸಿಕೊಂಡು ಬರುವಾಗ ಈ ಬಗೆಯ ಸೀರೆ ಸಿಂಬಿಯನ್ನು ಉಪಯೋಗಿಸುವುದುಂಟು.
ಮನೆಯಲ್ಲಿ ಮಕ್ಕಳಿದ್ದರೆ, ಅವರಿಗೆ ದೃಷ್ಟಿಯಾದಾಗ ಹಿರಿಯ ಹೆಂಗಸರು ಮೆಣಸಿನಕಾಯಿ, ಉಪ್ಪು, ಪೊರಕೆ ಕಡ್ಡಿ ಅಂತ ಹುಡುಕಾಡದೇ ತಮ್ಮ ಸೀರೆಯ ಸೆರಗನ್ನು ಎಡಗೈಲಿ ಹಿಡಿದು ಮಗುವಿನ ಮುಖದ ಮುಂದೆ ಮೂರು ಸಾರಿ ಬಳಸಿ ದೃಷ್ಟಿ ತೆಗೆಯುವ ಪದ್ಧತಿಯನ್ನು ನಾವು ಈಗಲೂ ಕಾಣಬಹುದು.
ಚಿಕ್ಕಮಕ್ಕಳಿಗೆ ಕಣ್ಣು ಒತ್ತುತ್ತಾ ಇದ್ದು ಅವರು ಕಣ್ಣುಜ್ಜಿಕೊಳ್ಳುತ್ತಿದ್ದರೆ ಮನೆಯಲ್ಲಿರುವ ಅಜ್ಜಿ ತಮ್ಮ ಸೀರೆ ಸೆರಗನ್ನು ಮುದುರಿಹಿಡಿದುಕೊಂಡು ‘ಉಫ್…’ ಅಂತ ಊದಿ ಮಕ್ಕಳ ಕಣ್ಣ ಮೇಲಿಡುತ್ತಾರೆ. ಅದು ಬೆಚ್ಚಗೆ ಹಿತವಾಗುವುದರಿಂದ ಮಕ್ಕಳು ಸಮಾಧಾನಗೊಳ್ಳುತ್ತಾರೆ.
ತಾಯಿಯ ಸೆರಗು ಹಿಡಿದು ಮಲಗಿದರೆ ಎಷ್ಟೋ ಮಕ್ಕಳಿಗೆ ಬೇಗ ನಿದ್ರೆ ಬಂದು ಬಿಡುತ್ತದೆ.
ತೊಟ್ಟಿಲಲ್ಲಿ ಮಲಗುವಂತಹ ಪುಟ್ಟ ಮಕ್ಕಳಿಗೆ ಸೀರೆಯಿಂದ ಮಾಡುವ ಸಿಂಬಿಯೇ ದಿಂಬು. ಈ ತರಹದ ಸಿಂಬಿ ಹಾಕಿ ಮಲಗಿಸಿದರೆ ಮಗು ಹೆಚ್ಚಿಗೆ ತಲೆ ಆಡಿಸುವುದಿಲ್ಲ. ತಲೆ ಪಕ್ಕಕ್ಕೆ ತಿರುಗುವುದಿಲ್ಲ. ಹೀಗಾಗಿ ತಲೆಯ ಹಿಂಭಾಗ ಸಮತಟ್ಟಾಗಿ ಸುಂದರವಾಗಿ ಕಾಣುತ್ತದೆ ಎನ್ನುವುದು ಇದರ ಉದ್ದೇಶ.
ಭರತನಾಟ್ಯದ ಉಡುಪಿನಲ್ಲಂತೂ ಸೆರಗಿನ ಸೌಂದರ್ಯಕ್ಕೆ ಹೆಚ್ಚಿನ ಪ್ರಾಶಸ್ತ್ಯ. ನೃತ್ಯಗಾರರು ನರ್ತಿಸುವಾಗ ಮಡಿಕೆ ಮಡಿಕೆಯಾಗಿ ಜೋಡಿಸಿ ಹೊಲೆದ ಸೆರಗಿನ ಸೊಬಗನ್ನು ನೋಡುವುದು ಕಣ್ಣಿಗೆ ಹಬ್ಬ.
ಮರೆಗುಳಿ ಮಹಿಳೆಯರಿಗೆ ಸೀರೆಯ ಸೆರಗು ಒಂದು ವರದಾನ. ಯಾವುದೋ ಕೆಲಸದಲ್ಲಿ ನಿರತರಾಗಿದ್ದಾಗ ಗಂಡನಿಗೋ, ಮಕ್ಕಳಿಗೋ, ಗೆಳತಿಯರಿಗೋ….ಏನಾದರೂ ಹೇಳಬೇಕು ಅಂತ ನೆನಪಾಗಿಬಿಟ್ಟರೆ ಆಗ ಸೀರೆಯ ಸೆರಗಿಗೆ ಒಂದು ಗಂಟು ಹಾಕಿಕೊಂಡು ಕೆಲಸ ಮುಂದುವರಿಸಬಹುದು. ನಂತರ ವಿರಾಮವಾಗಿ ಕೂತಾಗ ಸೀರೆಯ ಸೆರಗಿನ ಗಂಟು ಕೈಗೆ ತಾಕಿದ ತಕ್ಷಣವೇ ಹೇಳಬೇಕಾಗಿರುವ ವಿಷಯ ಫಕ್ಕನೆ ನೆನಪಾಗಿಬಿಡುತ್ತೆ. ಆಗ ಆ ವಿಷಯವನ್ನು ಅವರವರಿಗೆ ತಲುಪಿಸಿ ನೆಮ್ಮದಿಯ ಉಸಿರು ಬಿಡಬಹುದು.
ತುಂಬಾ ಸೆಖೆ ಆದಾಗ ಹೆಂಗಸರು ತಮ್ಮ ಸೆರಗಿನಿಂದಲೇ ಗಾಳಿ ಹಾಕಿಕೊಳ್ಳುವುದನ್ನು ನಾವೆಲ್ಲರೂ ಗಮನಿಸಿಯೇ ಇದ್ದೇವೆ. ಮಗುವನ್ನು ತೊಡೆಯ ಮೇಲೆ ಮಲಗಿಸಿಕೊಂಡಾಗಲಂತೂ ಅಮ್ಮಂದಿರು ಅತ್ಯಂತ ಪ್ರೀತಿಯಿಂದ ಮಗುವಿಗೆ ಈ ರೀತಿ ಗಾಳಿ ಹಾಕುವುದು ತುಂಬಾ ಸಹಜ.
ಸೀರೆಯ ಸೆರಗನ್ನು ಸೊಂಟಕ್ಕೆ ಬಿಗಿದ ತಕ್ಷಣವೇ ಧರ‍್ಯ, ಶರ‍್ಯ ಹೆಚ್ಚಾಗುವುದು ಸತ್ಯ. ಇದಕ್ಕೆ ಸಾಕ್ಷಿ ಅಂದರೆ ಕಿತ್ತೂರು ರಾಣಿ ಚೆನ್ನಮ್ಮ, ರಾಣಿ ಅಬ್ಬಕ್ಕ ದೇವಿ, ಒನಕೆ ಓಬವ್ವ. ಅವರುಗಳು ಸೊಂಟಕ್ಕೆ ಸೆರಗು ಸಿಕ್ಕಿಸಿ ಎಂತೆಂತಹ ಶೌರ್ಯ ತೋರಿದರು ಅನ್ನುವುದನ್ನು ನೆನೆಸಿಕೊಂಡರೆ ನಮ್ಮ ಕನ್ನಡ ನಾಡಿನ ವೀರ ಮಹಿಳೆಯರ ಬಗ್ಗೆ ಹೆಮ್ಮೆ ಆಗುತ್ತದೆ.
ಕೆಲವು ವರ್ಷಗಳ ಹಿಂದೆ ನಮ್ಮ ಕನ್ನಡನಾಡಿನ ಮಹಿಳೆಯೊಬ್ಬರು ಉತ್ತರ ಭಾರತಕ್ಕೆ ಪ್ರವಾಸ ಹೋಗಿದ್ದಾಗ ಗಂಗಾನದಿಯಲ್ಲಿ ಮುಳುಗುತ್ತಿದ್ದವರನ್ನು ತಮ್ಮ ಸೀರೆಯ ಸೆರಗಿನ ಸಹಾಯದಿಂದ ಬದುಕಿಸಿದರಂತೆ. ಈ ವಿಷಯ ತಿಳಿದ ಮಹಿಳೆಯರೆಲ್ಲರೂ ತಮ್ಮ ತಮ್ಮ ಸೀರೆಯ ಸೆರಗನ್ನು ಹಿಡಿದು ‘ಭೇಷ್, ಭೇಷ್….’ ಅಂದುಕೊಂಡರಂತೆ.
ಸೀರೆಯ ಸೆರಗಿಗೆ ಹಾಕುವ ‘ಪಿನ್’ಗಳು ಸೆರಗಿನ ಅಂದವನ್ನು ಮತ್ತಷ್ಟು ಹೆಚ್ಚಿಸುತ್ತವೆ. ಕೆಂಪು ಹರಳಿನ ಪಿನ್‌ಗಳು, ಬಿಳಿ ಹರಳಿನ ‘ಪಿನ್’ಗಳು, ಮುತ್ತು, ಹವಳ ಕೂಡಿಸಿರುವ ‘ಪಿನ್’ಗಳು………ಹೀಗೆ ಹಲವಾರು ಬಗೆಯ ‘ಪಿನ್’ಗಳು ಮಾರುಕಟ್ಟೆಯಲ್ಲಿ ದೊರೆಯುತ್ತವೆ. ಇದನ್ನು ಧರಿಸಿದ ಹೆಣ್ಣು ಮಕ್ಕಳ ಸೌಂದರ್ಯ ಮತ್ತಷ್ಟು ಹೆಚ್ಚುವುದರಲ್ಲಿ ಸಂಶಯವಿಲ್ಲ. ಇವರುಗಳನ್ನು ಗಮನಿಸುವವರ ಮನಸ್ಸನ್ನು ಗೆಲ್ಲುವುದರಲ್ಲಿ ಇವರು ಯಶಸ್ವಿಯಾಗುತ್ತಾರೆ.
ಸೆರಗಿನ ಅಂದ ಹೆಚ್ಚಿಸುವುದರಲ್ಲಿ ಸೆರಗಿನ ತುದಿಗೆ ಹಾಕುವ ಕುಚ್ಚಿನ ಪಾತ್ರವೇನೂ ಕಡಿಮೆ ಇಲ್ಲ. ‘ಕುಚ್ಚಿನಲ್ಲಿ ಹಲವು ಬಗೆಗಳಿವೆ, ಸಾವಿರಕ್ಕೂ ಹೆಚ್ಚು ವಿನ್ಯಾಸವಿದೆ’ ಅಂತ ನನಗೆ ಪರಿಚಯವಿರುವ ಕುಚ್ಚು ಕಟ್ಟುವ ಹುಡುಗಿ ನನಗೆ ತಿಳಿಸಿದಾಗ ನಿಜಕ್ಕೂ ತುಂಬಾ ಅಚ್ಚರಿಯಾಯಿತು. ಹಿಂದೆ ಸೆರಗಿನ ಅಂಚಿನಲ್ಲಿ ಬರುವ ರೇಷ್ಮೆದಾರಗಳಿಂದಲೇ ಹಲವು ಬಗೆಯ ಕುಚ್ಚುಗಳನ್ನು ಮಾಡುತ್ತಿದ್ದರು. ಆದರೆ ಈಗ ಕ್ರೋಶಾ ಕುಚ್ಚು, ಮಣಿಗಳ ಕುಚ್ಚು, ಎಂಬ್ರಾಯಿಡರಿ ಕುಚ್ಚು….. ಹೀಗೆ ಬಗೆಬಗೆಯ ಕುಚ್ಚುಗಳನ್ನು ಕಟ್ಟುತ್ತಾರೆ. ಈ ಕಲೆ ಗೊತ್ತಿರುವ ಹೆಣ್ಣು ಮಕ್ಕಳು ತಮ್ಮ ಬಿಡುವಿನ ವೇಳೆಯಲ್ಲಿ ಸೀರೆಯ ಸೆರಗಿಗೆ ಕುಚ್ಚು ಕಟ್ಟಿ ಸಾಕಷ್ಟು ಹಣ ಸಂಪಾದಿಸುತ್ತಾರೆ.
ಇಷ್ಟೊಂದು ಪ್ಲಸ್ ಪಾಯಿಂಟ್ಸ್ ಹೊಂದಿರುವ ಸೆರಗನ್ನು ಜೋಪಾನವಾಗಿ ನೋಡಿಕೊಳ್ಳುವುದು ಸೀರೆ ಉಟ್ಟವರ ಧರ್ಮ, ಅಡಿಗೆ ಮಾಡುವಾಗ ಸೆರಗಿಗೇ ಕೈ ಒರೆಸಿಕೊಳ್ಳುವ ದುರಭ್ಯಾಸ ಇರುವವರು ಮೊದಲು ಅದನ್ನ ಬಿಡಬೇಕು.ದೇವರ ದೀಪ ಹಚ್ಚುವಾಗ ಮರೆಯದೇ ಸೆರಗನ್ನು ಸೊಂಟಕ್ಕೆ ಕಟ್ಟಿಕೊಳ್ಳಬೇಕು.
‘ಅಬ್ಬಬ್ಬಾ…….ಸೀರೆಯ ಸೆರಗಿನಿಂದ ಇಷ್ಟೊಂದು ಪ್ರಯೋಜನ ಇದೆಯಾ?’ ಅಂತ ಅಚ್ಚರಿಯಾಗುತ್ತಿದೆಯೆ? ಅದಕ್ಕೇ ನಮ್ಮ ಹಿರಿಯರು ‘ಸೀರೆಗೆ ಸೆರಗು ಚಂದ, ಮೂಗಿಗೆ ಮೂಗುತಿ ಅಂದ’ ಅಂತ ಗಾದೆ ಮಾತು ಹೇಳಿರುವುದು.
ಸರಿ, ಪುರುಸೊತ್ತು ಮಾಡಿಕೊಂಡು ಇದನ್ನು ಓದಿದಿರಾ? ಇನ್ನಷ್ಟು ಬಿಡುವಿದ್ದರೆ ನೀವೂ ಸೆರಗಿನ ಮತ್ತಷ್ಟು ಉಪಯೋಗಗಳನ್ನು ಪಟ್ಟಿ ಮಾಡಿ ನನಗೆ ತಿಳಿಸಿಬಿಡಿ.
-ಸವಿತಾ ಪ್ರಭಾಕರ್ , ಮೈಸೂರು
ಉತ್ತಮವಾದ ಬರೆಹ….
ಸೆರಗಿನ ಉಪಯೋಗಗಳ ಪಟ್ಟಿ ತಯಾರಿಸಿಕೊಟ್ಟ ನಿಮಗೆ ಅಭಿನಂದನೆಗಳು.
ಲಘು ದಾಟಿಯ ಬರೆಹ ಚೆನ್ನಾಗಿದೆ ಗೆಳತಿ ಅಭಿನಂದನೆಗಳು
ಆಹಾ… ಸೀರೆಯ ಬಹೂಪಯೋಗಿ ಸೆರಗಿನ ಲೇಖನ ಸಖತ್ತಾಗಿದೆ ಮೇಡಂ.. ಸೆರಗಿನಷ್ಟೇ ಅಂದವಾಗಿದೆ!
ಸೊಗಸಾದ ಬರಹ.