ಪುನರುತ್ಥಾನದ ಪಥದಲ್ಲಿ …. ಹೆಜ್ಜೆ 14
ವಿಯೆಟ್ನಾಂ, ಕಾಂಬೋಡಿಯ ಪ್ರವಾಸಕಥನ..
ಸಮುದ್ರಕ್ಕೆ ಖಾರಾ ಸೇವ್ ಅರ್ಪಣೆ..…. 18/09/2024
18 ಸೆಪ್ಟೆಂಬರ್ 2024 ರ ಮುಂಜಾನೆ ಎಂದಿನಂತೆ ಸೂರ್ಯ ಉದಯಿಸಿದ. ‘ಹಾಲಾಂಗ್ ಬೇ ‘ಯಲ್ಲಿ ಕ್ರೂಸ್ ನಲ್ಲಿ ಆರಾಮವಾಗಿ ನಿದ್ರಿಸಿದ್ದ ನಮಗೆ ಎಚ್ಚರವಾಯಿತು. ಬಾಲ್ಕನಿಗೆ ಬಂದರೆ ಹಡಗಿನ ನಾಲ್ಕು ಕಡೆಯೂ ಕಾಣಿಸುವ ಶಾಂತವಾದ ಸಮುದ್ರ, ಅಲ್ಲಲ್ಲಿ ಕಾಣಿಸುವ ಪ್ರವಾಸಿಗಳನ್ನು ಹೊತ್ತ ಚಿಕ್ಕ ದೋಣಿಗಳು, ಬಹುತೇಕ ಒಂದೇ ರೀತಿ ಕಾಣಿಸುವ ನೂರಾರು ಶಿಲಾಪುಂಜಗಳು ……ಹೀಗೆ ಕಣ್ಮನ ತಣಿಯುವ ಏಕ ರೂಪದ ನೋಟ. ನಿನ್ನೆ ರಾತ್ರಿ ಹಡಗು ನಿಂತಲ್ಲಿಯೇ ಇತ್ತೇ ಅಥವಾ ಪ್ರಯಾಣಿಸಿದೆಯೇ ಎಂದೂ ಗೊತ್ತಾಗಲಿಲ್ಲ. ಹಡಗಿನಲ್ಲಿದ್ದ ನಮ್ಮ ಟೂರ್ ಮ್ಯಾನೇಜರ್ ರ ಹೆಸರು ‘ಬಿನ್’ . ಅವರು ಆ ದಿನ ನಮಗೆ ಬೆಳಗ್ಗೆ ಚಹಾದ ಜೊತೆಗೆ , ಲಘು ಉಪಾಹಾರವಿರುತ್ತದೆಯೆಂದೂ ಆಮೇಲೆ ಆಸಕ್ತರು ಹಡಗಿನಲ್ಲಿಯೇ ಇರುವ ಈಜುಕೊಳದಲ್ಲಿ ಈಜಬಹುದು ಅಥವಾ ಸಮುದ್ರದಲ್ಲಿ ಕಯಾಕ್ ಮೂಲಕ ಹುಟ್ಟುಹಾಕಿ ದೋಣಿ ನಡೆಸಿ ಖುಷಿಪಡಬಹುದು. 0930 ಗಂಟೆಗೆ ಮಧ್ಯಾಹ್ನದ ಊಟದ ಬದಲಾಗಿ ಬ್ರಂಚ್ ಎಂಬ ಹೆಸರಿನಲ್ಲಿ ಇನ್ನೊಮ್ಮೆ ಆಹಾರ ಕೊಡಲಾಗುತ್ತದೆ. ಹತ್ತು ಗಂಟೆಯ ಒಳಗೆ ಲಗೇಜುಗಳನ್ನು ಕೊಠಡಿಯ ಹೊರಗೆ ಇರಿಸಬೇಕು ಎಂದು ತಿಳಿಸಿದರು. ಹೈಮವತಿ ಮತ್ತು ನಾನು ಸ್ನಾನಾದಿಗಳನ್ನು ಪೂರೈಸಿ ಹಡಗಿನ ರೆಸ್ಟಾರೆಂಟ್ ಗೆ ಬಂದು ಚಹಾ, ಬ್ರೆಡ್ ಟೋಸ್ಟ್ , ಜ್ಯಾಮ್, ಹಣ್ಣುಗಳನ್ನು ತಿಂದೆವು.
ನಮಗಿಬ್ಬರಿಗೂ ಅವಕಾಶವಿದ್ದರೆ ಹಡಗಿನ ಇತರ ಮಹಡಿಗಳಿಗೆ ಹೋಗುವ ಉದ್ದೇಶವಿತ್ತು. ಸಮುದ್ರ ಮಟ್ಟದಿಂದ ಕೆಳಗಿನ ಮಹಡಿಗಳಲ್ಲಿ ಇಣಿಕಿ ನೋಡಿದೆವು. ದೊಡ್ಡದಾಗಿ ಶಬ್ದ ಮಾಡುತ್ತಾ ಚಾಲನೆಯಲ್ಲಿದ್ದ ಏನೇನೋ ಯಂತ್ರಗಳು ಕಾಣಿಸಿದುವು. ಅದು ನಿಷೇಧಿತ ವಲಯವಾಗಿತ್ತು. ಮೇಲಿನ ಇನ್ನೆರಡು ಮಹಡಿಗಳಲ್ಲಿ ಕೊಠಡಿಗಳಿದ್ದುವು. ಸಮುದ್ರ ಮಟ್ಟದ ಮಹಡಿಯಲ್ಲಿ ಸಣ್ಣದಾದ ಈಜುಕೊಳವಿತ್ತು. ಪಕ್ಕದಲ್ಲಿ ಕೆಲವು ಕಯಾಕ್ ಗಳನ್ನು ಹಗ್ಗದಲ್ಲಿ ಸಿಕ್ಕಿಸಿ ಇರಿಸಿದ್ದರು. ಕೆಲವು ಕಯಾಕ್ ಗಳನ್ನು ಒಬ್ಬನೇ ನಡೆಸುವಂತಾದ್ದು , ಇನ್ನು ಕೆಲವು ಕಯಾಕ್ ಗಳಲ್ಲಿ ಇಬ್ಬರು ಕೂರಬಹುದಿತ್ತು ನಮಗೆ .ಈಗಾಗಲೇ ಸಾಕಷ್ಟು ದೋಣಿಯಾನ ಮಾಡಿಯಾದ ಕಾರಣ ಪುನ: ದೋಣಿಯಾನ ಬೇಕೆನಿಸಲಿಲ್ಲ ಹಾಗೂ ನಾವಾಗಿ ಹುಟ್ಟುಹಾಕಿಕೊಂಡು ಕಯಾಕ್ ನಡೆಸುವ ಜಾಣ್ಮೆ , ತಾಳ್ಮೆ ಎರಡೂ ಇರಲಿಲ್ಲ. ಆಸಕ್ತಿ ಇದ್ದರೆ ಹಡಗಿನಲ್ಲಿಯೇ ಇದ್ದ ಜಿಮ್, ಮಸಾಜ್ , ಬ್ಯೂಟಿ ಪಾರ್ಲರ್ ಗೆ ಹೋಗಿ ಹಣ ಕೊಟ್ಟು ಸೇವೆ ಪಡೆಯಬಹುದಿತ್ತು. ನಮಗೆ ಇದ್ಯಾವುದರಲ್ಲಿ ಆಸಕ್ತಿ ಇಲ್ಲದ ಕಾರಣ ನಮ್ಮ ಕೊಠಡಿಗೆ ಹೋದೆವು. ನಾನು ಬಾಲ್ಕನಿಯಲ್ಲಿ ಕುಳಿತು ನಿನ್ನೆ ಅರ್ಧ ಓದಿದ್ದ ಪುಸ್ತಕವನ್ನು ಕೈಗೆತ್ತಿಕೊಂಡೆ. ಹೈಮವತಿ ಕೊಠಡಿಯ ಒಳಗೆ ಕುಳಿತು ಓದುತ್ತಿದ್ದರು.
ಸಮುದ್ರವನ್ನೇ ನೋಡುತಿದ್ದ ನನಗೆ ಅದ್ಯಾವುದೋ ಕ್ಷಣದಲ್ಲಿ ಮೈಸೂರಿನಿಂದಲೇ ತಂದ ಕುರುಕುಲು ತಿಂಡಿ ಖಾರಾ ಸೇವ್ ಮಿಕ್ಷ್ಚರ್ ನೆನಪಾಯಿತು. ಟ್ರಾವೆಲ್ಸ್ ನವರ ವ್ಯವಸ್ಥೆಯಲ್ಲಿ ನಮಗೆ ಸಾಕಷ್ಟು ಆಹಾರ ಸಿಗುತ್ತಿದ್ದುದರಿಂದ ಹಾಗೂ ನಾವಿಬ್ಬರೂ ಕುರುಕುಲು ತಿನಿಸು ತಂದಿದ್ದುದರಿಂದ ತಂದ ತಿನಿಸನ್ನು ತಿನ್ನಲೇ ಬೇಕಾದ ಅನಿವಾರ್ಯತೆಯಿರಲಿಲ್ಲ. ಮೇಲಾಗಿ ನಾನು ಬೇಕರಿಯಿಂದ ಕೊಂಡುತಂದಿದ್ದ ಖಾರಾ ಸೇವ್ ಅಷ್ಟಾಗಿ ರುಚಿ ಇರಲಿಲ್ಲ. ಅದನ್ನು ಮೀನುಗಳಿಗೆ ಹಾಕಿದರೆ ಹೇಗೆ ಎಂಬ ಆಲೋಚನೆ ಬಂತು. ಹೈಮವತಿಯೂ ಹಾಗೆಯೇ ಮಾಡು ಎಂದು ದನಿಗೂಡಿಸಿ ತಮ್ಮ ಪಾಡಿಗೆ ರೂಮ್ ನಲ್ಲಿ ಇದ್ದರು. ಸುಮಾರು ಅರ್ಧ ಕೆ.ಜಿಯಷ್ಟು ಇದ್ದ ಖಾರಾ ಸೇವ್ ಅನ್ನು ತೆಗೆದುಕೊಂಡು, ಬಾಲ್ಕನಿಗೆ ಒಯ್ದು ಒಂದೊಂದೇ ಮುಷ್ಟಿ ಸಮುದ್ರಕ್ಕೆ ಹಾಕಿದೆ. ಏನಾಶ್ಚರ್ಯ! ಅದುವರೆಗೆ ಬಾಲ್ಕನಿಯ ಪಕ್ಕ ನೀಲಿ-ಹಸಿರಾಗಿದ್ದ ಇದ್ದ ನೀರು ಇದ್ದಕ್ಕಿದ್ದಂತೆ ರಾಡಿಯಾಯಿತು. ಹಡಗು ನಿಧಾನಕ್ಕೆ ಚಲಿಸುತ್ತಿತ್ತು. ನಾನು ಒಂದೊಂದೇ ಮುಷ್ಟಿ ಖಾರಾ ಸೇವ್ ಅನ್ನು ಸಮುದ್ರಕ್ಕೆ ಹಾಕುತ್ತಿದ್ದಾಗ , ನಮ್ಮ ಬಾಲ್ಕನಿಯಿಂದ ಆರಂಭಗೊಂಡು ಉದ್ದಕ್ಕೆ ಕಂದುಬಣ್ಣದ ಗೆರೆ ಎಳೆದಂತೆ ರಾಡಿ ನೀರಿನ ಛಾಯೆ ಕಾಣಿಸಿತು. ರಾಕೆಟ್ ಹೋದ ಮೇಲೆ ಹೊಗೆಯ ಗೆರೆ ಕಾಣಿಸುವಂತೆ! ಹಾಗಾದರೆ ಸಮುದ್ರಲ್ಲಿದ್ದ ಜಲಚರಗಳು ಖಾರಾ ಸೇವ್ ತಿನ್ನಲು ಆಚೀಚೆ ಚಲಿಸಿದಾಗ ನೀರಿನ ಬಣ್ಣ ಬದಲಾಗಿದ್ದು ಅಂತ ಅರ್ಥವಾಯಿತು. ಐದಾರು ಸಲ ಹೀಗೆ ಮಕ್ಕಳಾಟದಂತೆ ಕಾಲಕ್ಷೇಪ ಮಾಡುತ್ತಿದ್ದಾಗ ನಮ್ಮ ಕೊಠಡಿಯೊಳಗಿಂದ ದೊಡ್ಡದಾಗಿ ಬೆಲ್ ಕೇಳಿಸಿತು ಹಾಗೂ ಏನೋ ಅಸ್ಪಷ್ಟ ಮಾತು ಕೂಡಾ ಕೇಳಿಸಿತು. ಆಗ ನನಗೆ ದಿಗಿಲಾಯಿತು, ಇದ್ದಕ್ಕಿದ್ದಂತೆ ನಮ್ಮ ರಾಷ್ಟೀಯ ಅಭಯಾರಣ್ಯಗಳಲ್ಲಿ ಪಾಲಿಸಬೇಕಾದ ವನ್ಯಜೀವಿ ಕಾಯಿದೆಯೆ ನೆನಪಾಯಿತು. ವನ್ಯಪ್ರಾಣಿಗಳಿಗೆ ಹೊರಗಿನ ಆಹಾರ ಕೊಡುವುದು ಶಿಕ್ಷಾರ್ಹ ಅಪರಾಧ. ಹಿಂದೊಮ್ಮೆ ಬಂಡೀಪುರದಲ್ಲಿ ನಮ್ಮೊಂದಿಗಿದ್ದ ಪ್ರವಾಸಿಯೊಬ್ಬರು ಜಿಂಕೆಗೆ ಹಣ್ಣನ್ನು ಕೊಟ್ಟು ಅರಣ್ಯರಕ್ಷಕರಿಂದ ಬೈಸಿಕೊಂಡಿದ್ದು ನೆನಪಾಗಿ ಪೆಚ್ಚಾದೆ. ಈ ಊರಿನಲ್ಲಿ, ಸಮುದ್ರಜೀವಿಗಳಿಗಾಗಿ ಕಾಯಿದೆ ಇರಬಹುದೇ? ಇದ್ದರೆ ನಾನು ಮಾಡಿರುವುದು ಅಪರಾಧವಾಗಿರಬಹುದೇ? ಈಗಂತೂ ಸಿಸಿಟಿವಿ ಕ್ಯಾಮೆರಾಗಳು ಅಲ್ಲಲ್ಲಿ ಇರುತ್ತವೆ. ತಪ್ಪಿಸಿಕೊಳ್ಳಲು ಅವಕಾಶವೇ ಇಲ್ಲ. ಮೇಲಾಗಿ , ನಮ್ಮ ಬಾಲ್ಕನಿಯಿಂದ ಕಿತಾಪತಿ ಮಾಡಿದ್ದಕ್ಕೆ ಸಾಕ್ಷಿ ಎಂಬಂತೆ ಸಮುದ್ರದಲ್ಲಿ ಗೆರೆ ಎಳೆದಂತೆ ರಾಡಿನೀರು ಕಾಣಿಸುತ್ತಿದೆ. ಇನ್ಯಾವ ಗ್ರಹಚಾರ ಕಾದಿರಬಹುದು ಎಂದು ಚಿಂತಿಸುತ್ತಾ ಕೊಠಡಿಯೊಳಗೆ ಬಂದೆ. ಹೈಮವತಿ ಶಾಂತವಾಗಿ ಇದ್ದರು. ಅದೇನೋ ಪ್ರಕಟಣೆ ಕೇಳಿದಂತಾಯಿತು ಎಂದು ನನಗಾದ ಭಯವನ್ನು ಹೇಳಿಕೊಂಡೆ. ಅವರು ನಗುತ್ತಾ, ” ಭಯ ಪಡುವಂತದ್ದೇನಿಲ್ಲ , ನಮ್ಮ ಲಗೇಜು ಬ್ಯಾಗ್ ಗಳನ್ನು ಕೊಠಡಿಗಳ ಹೊರಗೆ ಇರಿಸಬೇಕಂತೆ ಹಡಗಿನ ಸಿಬ್ಬಂದಿಗಳು ಫೆರ್ರಿಗೆ ಲೋಡ್ ಮಾಡುತ್ತಾರಂತೆ, ಬ್ರಂಚ್ ಸಿದ್ಧವಿದೆಯಂತೆ ಎಂಬ ಪ್ರಕಟಣೆ” ಎಂದು ನಕ್ಕರು. ನಾನೂ ನಕ್ಕು ನಿರಾಳವಾಗಿ. ಪುನ: ಬಾಲ್ಕನಿಗೆ ಹೋಗಿ ಎಲ್ಲಾ ಖಾರಾ ಸೇವ್ ಅನ್ನು ಸಮುದ್ರಕ್ಕೆ ಅರ್ಪಿಸಿ ಬಂದೆ.
ಲಗೇಜನ್ನು ಹೊರಗಡೆ ಇರಿಸಿ, ಪುನ: ರೆಸ್ಟಾರೆಂಟ್ ವಿಭಾಗಕ್ಕೆ ಹೋದೆವು. ಆಗ ನಮ್ಮ ಹಾಗೆ ಬೇರೆ ಬೇರೆ ತಂಡಗಳಲ್ಲಿ ಕೆಲವರು ಬ್ರಂಚ್ ಸೇವಿಸುತ್ತಿದ್ದರು. ನೂಡಲ್ಸ್, ಫ್ರೈಡ್ ರೈಸ್, ಹಣ್ಣುಗಳು ಹಾಗೂ ಬಾನ್ ಜಿಯೊ (BAN GIO ) ಎಂಬ ಹೆಸರಿನ ಆಹಾರವಿತ್ತು. ಈ ಬಾನ್ ಜಿಯೋ ವನ್ನು ಅಕ್ಕಿ ಹಾಗೂ ಕಾಯಿಹಾಲಿನಿಂದ ತಯಾರಿಸಿ, ಬಾಳೆ ಎಲೆಯಲ್ಲಿ ಸುತ್ತಿ ಬೇಯಿಸಿ ತಯಾರಿಸುತ್ತಾರಂತೆ. ನೋಡಲು ನಮ್ಮಊರಿನ ಕೊಟ್ಟೆ ಕಡುಬಿನ ಹಾಗೆ ಇತ್ತು . ನಾವಿಬ್ಬರೂ ತಿನ್ನಲು ಪ್ರಯತ್ನಿಸಲಿಲ್ಲ .
ನಮಗಾಗಿ ಕಾದಿರಿಸಿದ ಮೇಜಿನಲ್ಲಿ ಒಂದು ಕವರ್ ಇತ್ತು. ಬಿಡಿಸಿ ನೋಡಿದಾಗ ಒಳಗಡೆ ಒಂದು ಪತ್ರವಿತ್ತು. ನಾವು ಅತಿಥಿಗಳಾಗಿ ಇದ್ದುದಕ್ಕೆ ಸಂತೋಷವೆಂದೂ, ಅವರ ಸೇವೆ ನಮಗೆ ತೃಪ್ತಿಯಾಗಿದ್ದರೆ ನಮಗಿಷ್ಟವಾದಷ್ಟು ಹಣವನ್ನು ಟಿಪ್ಸ್ ಆಗಿ ಆ ಕವರ್ ನಲ್ಲಿ ಇಡಬಹುದೆಂಬ ಒಕ್ಕಣೆ ಆ ಪತ್ರದಲ್ಲಿತ್ತು. ಸ್ವಲ್ಪ ನೂಡಲ್ಸ್ ತಿಂದು ಸ್ವಲ್ಪ ಹಣವನ್ನು ಟಿಪ್ಸ್ ಕವರ್ ನಲ್ಲಿಟ್ಟೆವು. ರೆಸ್ಟಾರೆಂಟ್ಸ್ ನ ಸಿಬ್ಬಂದಿ ನಗುನಗುತ್ತಾ ಸ್ವೀಕರಿಸಿದರು. ಅವರೆಲ್ಲಾ ಎಳೆ ತರುಣ ತರುಣಿಯರು. ಹಡಗಿನಲ್ಲಿಯೇ ಇರುತ್ತಾರಂತೆ. ಹದಿನೈದು ದಿನಕ್ಕೊಮ್ಮೆ ತಮ್ಮ ಊರಿಗೆ ಹೋಗುತ್ತಾರಂತೆ.
ಅರ್ಧ ಗಂಟೆಯೊಳಗೆ ಫೆರ್ರಿ ಬಂತು. ನಮ್ಮ ಲಗೇಜುಗಳನ್ನು ಅದರಲ್ಲಿರಿಸಿದರು. ‘ವೇಲಾರ್ ಆಫ್ ದ ಸೀಸ್’ ಹಡಗಿನ ಸಿಬ್ಬಂದಿಗಳು ನಮ್ಮೆಲ್ಲರಿಗೆ ವಂದಿಸಿ ನಗುನಗುತ್ತಾ ಬೀಳ್ಕೊಟ್ಟರು. ಫೆರ್ರಿಯಲ್ಲಿ ಮುಕ್ಕಾಲು ಗಂಟೆ ಪ್ರಯಾಣಿಸಿ, ‘ಟುನಾ ಚಾವ್ (Tuan Chau)’ ಎಂಬ ಬಂದರಿಗೆ ಕರೆದೊಯ್ದರು. ಅಲ್ಲಿಗೆ ಮೊನ್ನೆ ನಮ್ಮನ್ನು ಕರೆತಂದಿದ್ದ ಮಾರ್ಗದರ್ಶಿ ‘ಲಾರಿ’ ಬಂದಿದ್ದರು. ಬಸ್ಸೊಂದರಲ್ಲಿ ನಮ್ಮ ಲಗೇಜನ್ನು ತುಂಬಿಸಿದರು. ಅಂದಿಗೆ ನಮ್ಮ ಮಟ್ಟಿಗೆ, ‘ಹನೋಯ್’ ಪ್ರವಾಸ ಮುಗಿದು, ‘ಡನಾಂಗ್’ಗೆ ಹೊರಡಬೇಕಿತ್ತು. ಸುಮಾರು ನಾಲ್ಕು ಗಂಟೆಗಳ ಪ್ರಯಾಣದ ನಂತರ ಬಸ್ಸು ಹನೋಯ್ ನಲ್ಲಿರುವ ನೋಯ್ ಬೈ (Nai Bai) ವಿಮಾನ ನಿಲ್ದಾಣ ತಲಪಿತು. ಮಾರ್ಗದರ್ಶಿ ‘ಲಾರಿ’ಯು , ನಮ್ಮ ಬಸ್ಸಿನ ಸಾರಥಿ ಬಹಳ ನಿಷ್ಠಾವಂತ ಶ್ರಮಿಕ ವ್ಯಕ್ತಿ. ನೀವು ಆತನ ಸೇವೆಯನ್ನು ಗಮನಿಸಿ ಖುಷಿಯಿಂದ ಟಿಪ್ಸ್ ಕೊಡುವುದಾರೆ ಸ್ವಾಗತ ಎಂದು ಜಾಣತನದಿಂದ ನೆನಪಿಸಿದ. ನಾವು ಮಾರ್ಗದರ್ಶಿ ‘ಲಾರಿ’ಗೂ ಧನ್ಯವಾದ ಹೇಳಿ, ಟಿಪ್ಸ್ ಕೊಟ್ಟು ಬೀಳ್ಕೊಟ್ಟೆವು.
ನಾವು ಗಮನಿಸಿದ ಅಂಶವೇನೆಂದರೆ, ಇಲ್ಲಿ ಟಿಪ್ಸ್ ಅನ್ನು ಬಹಳ ಸಾಮಾನ್ಯ ಎಂಬಂತೆ ನಿರೀಕ್ಷಿಸುತ್ತಾರೆ. ಭಾರತದಲ್ಲಿರುವಂತೆ ‘ಫೋನ್ ಪೇ’ ವ್ಯವಸ್ಥೆಯಿಲ್ಲ. ಹಾಗಾಗಿ ಸಾಕಷ್ಟು ಸ್ಥಳೀಯ ನಗದು ಬೇಕಾಗುತ್ತದೆ. ಪ್ರತಿದಿನವೂ ಕಾರ್ ಡ್ರೈವರ್, ಮಾರ್ಗದರ್ಶಿ, ಹೋಟೆಲ್ ಸಿಬ್ಬಂದಿ ಹೀಗೆ ಆಗಾಗ ಟಿಪ್ಸ್ ಕೊಡಬೇಕಾದ ಸನ್ನಿವೇಶ ನಮಗೆದುರಾಗಿತ್ತು. ನಾವು ಸಾಕಷ್ಟು ನಗದು ಒಯ್ಯಲಿಲ್ಲವಾದ ಕಾರಣ ಆಗಾಗ ಕಸಿವಿಸಿಯಾಗುತ್ತಿತ್ತು. ಇಲ್ಲಿಯ ಜನರು ಟಿಪ್ಸ್ ಅನ್ನು ನಿರೀಕ್ಷಿಸುತ್ತಾರೆ, ನಮ್ಮ ದೇಶದಲ್ಲಿಯೂ ಟಿಪ್ಸ್ ಕೊಟ್ಟರೆ ತೆಗೆದುಕೊಳ್ಳುತ್ತಾರೆ ಆದರೆ ಅವರಾಗಿ ಸಹಜ ಎಂಬಂತೆ ಕೇಳುವುದು ಕಡಿಮೆ. ಇದು ನಮಗೆ ಹೊಸದು ಹಾಗೂ ಅನಿರೀಕ್ಷಿತ ಖರ್ಚಿಗೆ ಕಾರಣವಾಯಿತು. ಹಾಗಾಗಿ ನಾವು ಏರ್ ಪೋರ್ಟ್ ನಲ್ಲಿ ನಮ್ಮ ಬ್ಯಾಂಕ್ ಕಾರ್ಡ್ ಕೊಟ್ಟು ಸ್ವಲ್ಪ ಹೆಚ್ಚುವರಿ ನಗದು ವಿನಿಮಯ ಪಡೆದುಕೊಳ್ಳೋಣ ಎಂದು ನಿರ್ಧರಿಸಿದೆವು.
‘ಡನಾಂಗ್’ ಗೆ ಹೊರಡುವ ವಿಮಾನ ಸಂಜೆ 0700 ಗಂಟೆಗಿತ್ತು. ವಿಯೆಟ್ನಾಂನ ಉತ್ತರ ಭಾಗದಿಂದ ಮಧ್ಯಭಾಗಕ್ಕೆ ಪ್ರಯಾಣಿಸಲಿದ್ದೆವು. ಯಥಾಪ್ರಕಾರ , ಚೆಕ್ ಇನ್, ಸೆಕ್ಯುರಿಟಿ ಚೆಕ್ , ಬೋರ್ಡಿಂಗ್ ವಿಧಾನಗಳನ್ನು ವಿಮಾನವನ್ನೇರಿ ಸಂಜೆ 0830 ಗಂಟೆಗೆ ‘ಡನಾಂಗ್’ ತಲಪಿದೆವು. ಸಮಯಕ್ಕೆ ತಕ್ಕಂತೆ ಟ್ರಾವೆಲ್ ಸಂಸ್ಥೆಯಿಂದ ಮಾಹಿತಿ ಸಂದೇಶ ಬರುತ್ತಿತ್ತು. ನಾವು ಡನಾಂಗ್ ತಲಪಿದಾಗ ಅಲ್ಲಿ ಸ್ಥಳೀಯ ಮಾರ್ಗದರ್ಶಿ ‘ಟೋಮಿ’ ನಮ್ಮನ್ನು ಸ್ವಾಗತಿಸಿದರು. ಆಗಲೇ ರಾತ್ರಿಯಾದ ಕಾರಣ, ಮೊದಲು ನಿಮ್ಮನ್ನು ರಾತ್ರಿಯ ಊಟಕ್ಕೆ ಕರೆದೊಯ್ದು ಆಮೇಲೆ ಉಳಕೊಳ್ಳಲಿರುವ ಹೋಟೆಲ್ ಗೆ ಕರೆದೊಯ್ಯುತ್ತೇವೆ ಎಂದ. ಸುಮಾರು ಅರ್ಧ ಗಂಟೆ ಪ್ರಯಾಣಿಸಿ ‘ಹೋಟೆಲ್ ಮಾಜ಼ಾ’ ಎಂಬಲ್ಲಿ ಊಟಕ್ಕಾಗಿ ನಿಲ್ಲಿಸಿದರು. ಅನ್ನ, ಸಬ್ಜಿ, ದಾಲ್, ರೋಟಿ, ಗುಲಬ್ ಜಾಮೂನ್ , ಇದ್ದ ಉತ್ತರ ಭಾರತೀಯ ಶೈಲಿಯ ಊಟ ಚೆನ್ನಾಗಿತ್ತು. ಅನಂತರ ನಾವು ಡನಾಂಗ್ ನಲ್ಲಿ ಉಳಕೊಳ್ಳಲಿರುವ ‘ ಸಾಂತಾ ಲಕ್ಷುರಿ’ ಹೋಟೆಲ್ ಗೆ ಕರೆದೊಯ್ದರು. ಆ ಹೋಟೆಲ್ ಚೆನ್ನಾಗಿತ್ತು. ಅನಂತರ ವಿಶ್ರಾಂತಿ ಪಡೆಯುವುದರೊಂದಿಗೆ ಆದಿನ ಸಂಪನ್ನವಾಯಿತು.
ಈ ಪ್ರವಾಸ ಕಥನದ ಹಿಂದಿನ ಕಂತು ಇಲ್ಲಿದೆ : https://www.surahonne.com/?p=41835
(ಮುಂದುವರಿಯುವುದು)
–ಹೇಮಮಾಲಾ.ಬಿ, ಮೈಸೂರು
ಎಂದಿನಂತೆ ಪ್ರವಾಸ ಕಥನ ಓದಿಸಿಕೊಂಡುಹೋಯಿತು.. ಟಿಪ್ಸ್ನ ಪ್ರಸಂಗ..ಪ್ರವಾಸ ಹೋಗುವ ವರಿಗೆ ಟಿಪ್ಸ್ ಕೊಡುವಂತಿದೆ ಗೆಳತಿ ಹೇಮಾ
ಮೆಚ್ಚುಗೆ, ಪ್ರತಿಕ್ರಿಯೆಗೆ ಧನ್ಯವಾದಗಳು.
ಬಹಳ ಖುಷಿ ಕೊಡುವ ಪ್ರವಾಸ ಕಥನ
ಮೆಚ್ಚುಗೆ, ಪ್ರತಿಕ್ರಿಯೆಗೆ ಧನ್ಯವಾದಗಳು.
ಸುಲಲಿತವಾಗಿ ಓದಿಸಿಕೊಂಡ ಪ್ರವಾಸ ಕಥನ. ಅಂತೂ
ನಮ್ಮೂರಿನ ಬೇಕರಿಯ ಖಾರಾಸೇವನ್ನೇಲ್ಲಾ ವಿಯಟ್ನಾಂಮಿನ ಜಲಚರಗಳು ರುಚಿ ನೋಡಿದಂತಾಯಿತು.
ಮೆಚ್ಚುಗೆ, ಪ್ರತಿಕ್ರಿಯೆಗೆ ಧನ್ಯವಾದಗಳು.
ತಮ್ಮ ಕ್ರೂಸ್ ಪ್ರವಾಸ ಅದ್ಭುತವಾಗಿ ಮೂಡಿಬಂದಿದೆ
ಮೆಚ್ಚುಗೆ, ಪ್ರತಿಕ್ರಿಯೆಗೆ ಧನ್ಯವಾದಗಳು.
ಸಮುದ್ರಕ್ಕೆ ಅರ್ಪಣೆಯಾದ ಖಾರಾ ಸೇವ್, ತಮ್ಮ ಹಕ್ಕು ಎಂಬಂತೆ ಟಿಪ್ಸ್ ಕೇಳುವ ರೀತಿ, ಬಾಯಿ ನೀರೂರಿಸುವ ಕೊಟ್ಟೆ ಕಡುಬು, ಆನಂದದಿಂದ ಸಂಪನ್ನಗೊಂಡ ಸಮುದ್ರಯಾನ… ಎಲ್ಲವೂ ಹೊಸ ಅನುಭವವನ್ನು ನೀಡಿತು. ಸರಳ, ಸುಂದರ ಪ್ರವಾಸ ಅನುಭವ ಕಥನ ಚೆನ್ನಾಗಿದೆ…ಧನ್ಯವಾದಗಳು ಮಾಲಾ ಅವರಿಗೆ.
ಮೆಚ್ಚುಗೆ, ಪ್ರತಿಕ್ರಿಯೆಗೆ ಧನ್ಯವಾದಗಳು.