ಕಮಲದ ಮೊಗದೋಳೆ..

Share Button

‘ಕಮಲಶಿಲೆಗೆ ಹೋಗಿದ್ದೀಯಾ?’ ಎಂದು ಗೆಳತಿ ಅಂಬುಜಾ ಕೇಳಿದಾಗ, ಇಲ್ಲ ಎಂದು ಉತ್ತರಿಸಿ ಮೌನಕ್ಕೆ ಜಾರಿದ್ದೆ. ‘ಕಮಲಶಿಲೆ’ ಎಂಬ ಹೆಸರೇ ಮನಸ್ಸನ್ನು ಜಾದುಗಾರನಂತೆ ಸೆಳೆದಿತ್ತು. ಕಮಲದ ಬಣ್ಣವುಳ್ಳ ಅಂದಗಾತಿ ಇವಳು. ಕಮಲದಂತೆ ಮೃದುವಾದ ಶಿಲೆಯಲ್ಲಿ ಉದ್ಭವಿಸಿದ ಪರಮೇಶ್ವರಿ ಇವಳು. ಕಮಲದಾಕಾರದ ಶಿಲೆಯಲ್ಲಿ ಉದ್ಭವಿಸಿದ ಲಿಂಗಾಕಾರದ ದುರ್ಗೆ ಇವಳು. ಬ್ರಹ್ಮ, ವಿಷ್ಣು, ಮಹೇಶ್ವರರ ಚೈತನ್ಯವನ್ನು ಮೈಗೂಡಿಸಿಕೊಂಡ ತ್ರಿಶಕ್ತಿ ಸ್ವರೂಪ ಇವಳು. ಭೂಲೋಕದಲ್ಲಿ ಜನರನ್ನು ಪೀಡಿಸುತ್ತಿದ್ದ ಕರಕಾಸುರನೆಂಬ ಅಸುರನನ್ನು ಸಂಹರಿಸಲು ಅವತರಿಸಿದ ಬ್ರಾಹ್ಮೀ ದೇವತೆ ಇವಳು. ಇಂತಹ ಮಹಾಮಹಿಮಳಾದ ಬ್ರಾಹ್ಮೀ ದುರ್ಗಾ ಪರಮೇಶ್ವರಿಯು ಕಮಲಶಿಲೆಯಲ್ಲಿ ನೆಲೆಯಾಗಿ ತನ್ನ ಭಕ್ತರ ಸಂಕಷ್ಟಗಳನ್ನೆಲ್ಲಾ ನಿವಾರಿಸುತ್ತಿರುವಳು.

ಅಂದು ಮಂಗಳವಾರ, ಮುಂಜಾನೆ ಯೋಗ ತರಗತಿಯಿಂದ ಬಂದ ತಕ್ಷಣ ನನ್ನ ಯಜಮಾನರು ಸಿಹಿಯಾದ ಸುದ್ದಿಯನ್ನು ಹೇಳಿದರು, ‘ಯಾವಾಗಲೂ ಕಮಲಮುಖಿ ಅಂತ ಕನವರಿಸುತ್ತಲೇ ಇರ‍್ತೀಯಾ, ಬಾ ಹೋಗೋಣ’ ಎಂದಾಗ ನನಗೆ ನನ್ನ ಕಿವಿಗಳನ್ನು ನಂಬಲಾಗಲಿಲ್ಲ. ತಕ್ಷಣ ಮೊಬೈಲಿನ ಮೊರೆ ಹೊಕ್ಕೆ, ಗೂಗಲ್‌ನಲ್ಲಿ ತಡಕಾಡಿ, ಶಿವಮೊಗ್ಗೆಯಿಂದ ರಿಪ್ಪನ್ ಪೇಟೆ, ಹೊಸನಗರ, ಹುಲಿಕಲ್ ಘಾಟಿ ಮಾರ್ಗವಾಗಿ ಹೋದರೆ 128 ಕಿ.ಮೀ. ಆಗುತ್ತೆ, ಶಿವಮೊಗ್ಗ- ಕುಂದಾಪುರದ ರಾಷ್ಟ್ರೀಯ ಹೆದ್ದಾರಿ, ರಸ್ತೆ ಚೆನ್ನಾಗಿದೆ ಎಂದುಸುರಿದೆ. ಅಡುಗೆ ಮನೆಗೆ ರಜೆ ನೀಡಿ, ಅರ್ಧ ಗಂಟೆಯಲ್ಲಿ ಕಮಲಶಿಲೆಗೆ ರೆಡಿಯಾಗಿ ಹೊರಟೇ ಬಿಟ್ಟೆವು.

ಆಯನೂರು ಬರುತ್ತಿದ್ದ ಹಾಗೆ ‘ಮಲೆಶಂಕರನ ದೇಗುಲ ಕೂಗಿ ಕರೆದಿತ್ತು’, ‘ಇಲ್ಲ ನಾನಿಂದು ಕಮಲಶಿಲೆಗೆ ಹೋಗಬೇಕು’ ಎಂದು ಉತ್ತರಿಸಿ ಮುಂದೆ ಸಾಗಿದೆ. ಹತ್ತಾರು ಕಿ.ಮೀ. ಸಾಗಿದ ಮೇಲೆ ‘ಗುಳೆ ಗುಳೇ ಶಂಕರ ದೇಗುಲಕ್ಕೆ ದಾರಿ’ ಎಂಬ ಬೋರ್ಡು ಕಣ್ಣಿಗೆ ಬಿತ್ತು. ಮೂರು ದಳದ ಬಿಲ್ವಪತ್ರೆಯನ್ನು ಕೊಳದಲ್ಲಿ ಹಾಕಿದರೆ, ಅದು ತೇಲದೆ ಮುಳುಗುವ ಕೌತುಕ, ಅಲ್ಲೇ ಕುಳಿತು ತನ್ಮಯತೆಯಿಂದ ಪ್ರಾರ್ಥಿಸಿದರೆ ಆ ಬಿಲ್ವಪತ್ರೆಯ ದಳ ಮೆಲ್ಲಗೆ ಮೇಲೆದ್ದು ಬರುವ ದೃಶ್ಯವನ್ನು ಕಲ್ಪಿಸಿಕೊಳ್ಳುತ್ತಾ ನಮ್ಮ ಪಯಣ ಮುಂದುವರೆಸಿದೆವು. ಮುಂದೆ ‘ಕಾರಣಗಿರಿಯ ಸಿದ್ಧಿವಿನಾಯಕನಿಗೆ’ ಕುಳಿತಲ್ಲಿಂದಲೇ ನಮಿಸಿದೆ. ಹೊಸನಗರ ಸಮೀಪಿಸುತ್ತಿದ್ದ ಹಾಗೆಯೇ ‘ಅಮ್ಮನಘಟ್ಟಕ್ಕೆ ದಾರಿ’ ಎಂಬ ಫಲಕ ಕಣ್ಣಿಗೆ ಬಿತ್ತು. ತಾಯಿ ರೇಣುಕೆ ತನ್ನ ಭಕ್ತರನ್ನು ಹರಸುತ್ತಾ ಬಂಡೆಗಳ ಮಧ್ಯೆ ನೆಲಸಿರುವ ತಾಣ. ನಗರದ ಹತ್ತಿರ ಬಂದಾಗ ಶತ್ರುಗಳಿಂದ ರಕ್ಷಣೆ ನೀಡುತ್ತಿದ್ದ ಭವ್ಯವಾದ ಕೋಟೆ ಕಂಡಿತ್ತು. ರಾಮಚಂದ್ರಾಪುರ ಮಠದಿಂದ ಗೋವುಗಳ ‘ಅಂಬಾ, ಅಂಬಾ’ ಎಂಬ ಕೂಗು ಕೇಳಿ ಬರುತ್ತಿತ್ತು. ಚಂದ್ರಮೌಳೇಶ್ವರನ ಸುಂದರವಾದ ದೇಗುಲವನ್ನು ನೆನಪಿಸಿಕೊಳ್ಳುತ್ತಾ ಮುಂದೆ ಸಾಗಿದೆವು. ಹೊಂಬುಜದ ಪದ್ಮಾಂಬ ದೇಗುಲದಿಂದ ಮಂತ್ರಘೋಷ ಕೇಳಿಬರುತ್ತಿತ್ತು. ಆದರಿಂದು ಎಲ್ಲಿಯೂ ನಿಲ್ಲಲು ಸಮಯವಿರಲಿಲ್ಲ.

ಕಮಲಶಿಲೆಯ ಹಾದಿಯುದ್ದಕ್ಕೂ ಹಸಿರನ್ನು ಹೊದ್ದ ಬೆಟ್ಟಗುಡ್ಡಗಳು, ಅಕ್ಕಪಕ್ಕದಲ್ಲಿ ಶರಾವತಿಯ ಹಿನ್ನೀರು ಕಣ್ಮನ ತಣಿಸುತ್ತಿದ್ದವು. ‘ವರಾಹಿ ಭೂಗರ್ಭ ವಿದ್ಯುದಾಗಾರ’ ಎಂಬ ಹೆಸರು ಹೊತ್ತ ಹೆಬ್ಬಾಗಿಲು ಕಂಡಾಗ, ಬೆಟ್ಟಗಳನ್ನು ಕಡಿದು ನಿರ್ಮಿಸಿದ, ತಂತ್ರಜ್ಞಾನದ ಕೌಶಲದ ಪ್ರತೀಕವಾದ ವಿದ್ಯಾದಾಗಾರವನ್ನು ನೆನೆದು ಬೆರಗಾದೆವು. ಮುಂದಿತ್ತು ಹುಲಿಕಲ್ ಘಾಟಿ, ಸಹ್ಯಾದ್ರಿ ಗಿರಿಗಳನ್ನು ಬಳಸುತ್ತಾ ದಾರಿಯು ಹಾವಿನಂತೆ ಸಾಗಿತ್ತು. ನಿಸರ್ಗಪ್ರೇಮಿಯಾದ ಯಜಮಾನರು ಅಕ್ಕಪಕ್ಕ ನೋಡುತ್ತಾ ನಿಧಾನವಾಗಿ ಕಾರು ಚಲಾಯಿಸುತ್ತಿದ್ದರು. ಪ್ರಕೃತಿ ಸೌಂದರ್ಯಕ್ಕೆ ಮನಸೋತು ಅಲ್ಲಲ್ಲ್ಲಿ ಕಾರು ನಿಲ್ಲಿಸಿ, ಆ ರಮಣೀಯ ದೃಶ್ಯಗಳನ್ನು ನೋಡುತ್ತಾ ನಿಲ್ಲುತ್ತಿದ್ದರು. ಅಲ್ಲೊಂದು ಮುಗಿಲೆತ್ತರದಿಂದ ಬಂಡೆಗಳ ಮೇಲೆ ನೆಗೆಯುತ್ತಾ ಚಿಮ್ಮುತ್ತಿದ್ದ ಜಲಪಾತ ನಮ್ಮ ಕಾರಿನ ಮೇಲೆಯೂ ನೀರು ಸಿಂಪಡಿಸಿತ್ತು. ಮಕ್ಕಳ ಹಾಗೆ ಕೇಕೆ ಹಾಕುತ್ತಾ, ನಗುತ್ತಾ ನಲಿಯುತ್ತಿದ್ದ ಜಲಪಾತ ಎಲ್ಲರ ಮನಸ್ಸನ್ನೂ ಸೂರೆಗೊಂಡಿತ್ತು. ‘ವಾಹನಗಳನ್ನು ಇಲ್ಲಿ ನಿಲ್ಲಿಸಬೇಡಿ’ ಎಂಬ ಫಲಕವಿದ್ದರೂ. ಬಹಳಷ್ಟು ಜನ ವಾಹನಗಳನ್ನು ನಿಲ್ಲಿಸಿ ಈ ಸುಂದರ ದೃಶ್ಯಗಳನ್ನು ತಮ್ಮ ಮೊಬೈಲುಗಳಲ್ಲಿ ಸೆರೆ ಹಿಡಿಯುತ್ತಿದ್ದರು. ‘ಕಾಡು ಪ್ರಾಣಿಗಳು ರಸ್ತೆ ದಾಟುತ್ತಿರುತ್ತವೆ, ನಿಧಾನವಾಗಿ ಚಲಿಸಿ’ ಎಂಬ ಫಲಕ ನೋಡಿ ಎಲ್ಲಿಯಾದರೂ ಹುಲಿ, ಸಿಂಹ, ಚಿರತೆ ಕಾಣಬಹುದೇನೋ ಎಂದು ಮೈಯೆಲ್ಲಾ ಕಣ್ಣಾಗಿ ನೋಡಿದೆವು. ಆಗ ಒಂದು ದೊಡ್ಡದಾದ ಹಾವು ರಸ್ತೆ ಮೇಲೆ ಸರಸರನೇ ಹರಿದು ಹೋದ ದೃಶ್ಯ ನಮ್ಮ ಕಣ್ಣಿಗೆ ಬಿತ್ತು. ನಿಸರ್ಗದ ಮಡಿಲಲ್ಲಿ ಹಾಯಾಗಿ ಬಾಳಬೇಕಾದ ಪ್ರಾಣಿ ಪಕ್ಷಿಗಳು ಸದಾ ಆತಂಕದಿಂದ ಭಯಪಡುತ್ತಲೇ ಬದುಕುತ್ತಿರುವ ಪರಿಸ್ಥಿತಿ ಕಂಡು ಮರುಕವುಂಟಾಯಿತು.

ಶಿವಮೊಗ್ಗ ಕುಂದಾಪುರ ಹೆದ್ದಾರಿಯನ್ನು ಬಿಟ್ಟು ಬಲಗಡೆ ತಿರುಗಿ ಕಮಲಶಿಲೆ ಮಾರ್ಗವಾಗಿ ಹೊರಟೆವು. ಸುತ್ತಮುತ್ತಲೂ ಭತ್ತದ ಗದ್ದೆಗಳೂ, ಕಂಗು ತೆಂಗಿನ ಮರಗಳೂ ನಮಗೆ ಸ್ವಾಗತ ಬಯಸುತ್ತಿದ್ದವು. ‘ಕಮಲಶಿಲೆಗೆ ದಾರಿ’ ಎಂಬ ಫಲಕ ಕಣ್ಣಿಗೆ ಬಿದ್ದೊಡನೆ ಎಲ್ಲಿಲ್ಲದ ಉತ್ಸಾಹ ಉಲ್ಲಾಸ ಮನದಲ್ಲಿ ಮೂಡಿತ್ತು. ಸಹ್ಯಾದ್ರಿ ತಪ್ಪಲಿನಲ್ಲಿ ಕುಬ್ಜಾ ನದೀ ತೀರದಲ್ಲಿ ಇರುವ ಈ ದೇಗುಲದ ಗೋಪುರ ಕಂಡಾಗ ಭಾವಪರವಶಳಾಗಿ ಕೈಮುಗಿದೆ. ಮಂದಿರದ ಮುಂಬಾಗಿಲಲ್ಲಿದ್ದ ಎತ್ತರವಾದ ಧ್ವಜ ಸ್ಥಂಭ. ಒಂದೇ ಮರದ ಕಾಂಡದಿಂದ ರಚಿಸಲ್ಪಟ್ಟ ಈ ಭವ್ಯವಾದ ಸ್ಥಂಭಕ್ಕೆ ಬೆಳ್ಳಿಯ ಕವಚ. ಅದರ ಮೇಲೆ ದೇವಾನುದೇವತೆಗಳ ಮೂರ್ತಿಗಳ ಕುಸುರಿ ಕೆಲಸ. ದೇವಿಯ ಪೂಜೆಗಾಗಿ ಹಣ್ಣು ಕಾಯಿ ಹೂವಿನ ಪುಟ್ಟಿ ಕೊಂಡು ದೇಗುಲದ ಒಳಗೆ ಹೋಗಿ ಸರತಿ ಸಾಲಿನಲ್ಲಿ ನಿಂತು ದೇವಿಯ ದರ್ಶನ ಮಾಡಿ ಪುನೀತಳಾದೆ. ಈಗ ದೇವಿಯ ಮಹಾ ಮಂಗಳಾರತಿ ಸಮಯ ಎಂದು ಅರ್ಚಕರು ಹೇಳಿದಾಗ, ಭಕ್ತರೆಲ್ಲಾ ಸಾಲುಗಟ್ಟಿ ನಿಂತರು. ಗಂಟೆ ಜಾಗಟೆಗಳು ಮೊಳಗಿದವು, ಪುರೋಹಿತರು ಮಂತ್ರಘೋಷ ಮಾಡುತ್ತಾ ದೇವಿಗೆ ಮಂಗಳಾರತಿ ಮಾಡಿದರು, ಬಗೆ ಬಗೆಯ ದೀಪದಾರತಿಗಳಿಂದ ದೇವಿಗೆ ಪೂಜೆ ಸಲ್ಲಿಸಿದರು. ಸರ್ವಾಲಂಕಾರ ಭೂಷಿತೆಯಾದ ಜಗನ್ಮಾತೆಯನ್ನು ನೋಡಲು ಎರಡು ಕಣ್ಣೂ ಸಾಲದೆನಿಸಿತು. ದೇವಿಯ ದರ್ಶನ ಮಾಡಲು ದೂರದೂರುಗಳಿಂದ ಭಕ್ತರು ಆಗಮಿಸುವರು, ಆದರೆ ದೇವಿಯ ಮುಂದೆ ನಿಂತಾಕ್ಷಣವೇ ಭಕ್ತಿಭಾವದಿಂದ ಕಣ್ಣುಗಳನ್ನು ಮುಚ್ಚಿ ನಿಲ್ಲುವರು. ಇದೊಂದು ಅಚ್ಚರಿಯ ಸಂಗತಿ ಅಲ್ಲವೇ? ಬಹುಶಃ ದೇವಿಯನ್ನು ಅವರ ಅಂತರಂಗದ ಚಕ್ಷುಗಳಿಂದ ವೀಕ್ಷಿಸುತ್ತಿರಬಹುದು. ಒಂದು ಕ್ಷಣ ಎನ್ನಿಸಿತ್ತು, ದೇವಿಯು ದೇಗುಲದಲ್ಲಿಲ್ಲ, ನಮ್ಮ ಹೃದಯಕಮಲದಲ್ಲಿ ನಸುನಗುತ್ತಾ ಕುಳಿತಿದ್ದಾಳೆ. ಅದಕ್ಕೇ ಅವಳಿಗೆ ಕಮಲಶಿಲೆ ಎಂಬ ಹೆಸರು ಬಂದಿರಬಹುದು. ಅರ್ಚಕರು ನೀಡಿದ ತೀರ್ಥಪ್ರಸಾದವನ್ನು ಸ್ವೀಕರಿಸಿ ದೇಗುಲದ ಪ್ರಾಂಗಣದ ಸುತ್ತ ಪ್ರದಕ್ಷಿಣೆ ಹಾಕಿದೆವು.

ದೇಗುಲದ ವಾಸ್ತುಶಿಲ್ಪವು ಅಚ್ಚ ಕರಾವಳಿ ಶೈಲಿಯಲ್ಲಿದ್ದು, ಹಲವು ದೇವರ ಮೂರ್ತಿಗಳು ಭಕ್ತರನ್ನು ಹರಸುತ್ತಿವೆ, ಎಲ್ಲಾ ವಿಘ್ನಗಳನ್ನು ದೂರ ಮಾಡುವ ವಿನಾಯಕ, ದೇವಿಯ ಕಾವಲಿಗೆ ನಿಂತಿರುವ ವೀರಭದ್ರ ಹಾಗೂ ಮಂದಂತಾಯ, ಈಶ್ವರನ ವಿಗ್ರಹ, ನವಗ್ರಹಗಳು, ಹೊಸಮ್ಮ ದೇವಿ ಹಾಗೂ ನಾಗದೇವತೆ. ಅರ್ಚಕರೊಬ್ಬರು ಅಲ್ಲಿನ ಸ್ಥಳಪುರಾಣವನ್ನು ಹೇಳತೊಡಗಿದರು – ತ್ರೇತಾಯುಗದಲ್ಲಿ ಪಿಂಗಳೆಯೆಂಬ ಸುಂದರವಾದ ನರ್ತಕಿ ಕೈಲಾಸದಲ್ಲಿ ಶಿವ ಪಾರ್ವತಿಯರ ಮುಂದೆ ನರ್ತನ ಮಾಡುವ ಕಾಯಕ ಮಾಡುತ್ತಿದ್ದಳು. ಕಾಲ ಸರಿದ ಹಾಗೆ ಅವಳಿಗೆ ತನ್ನಂತಹ ಸುಂದರವಾದ ನರ್ತಕಿ ಯಾರಿಲ್ಲ ಎಂಬ ಅಹಂಕಾರ ಮೂಡತೊಡಗಿತು. ಒಮ್ಮೆ ಶಿವನನ್ನೇ ಅಪಹಾಸ್ಯ ಮಾಡಿದ ಪಿಂಗಳೆಯನ್ನು ಪಾರ್ವತಿಯು, ‘ನೀನು ಭೂಲೋಕದಲ್ಲಿ ಕುರೂಪಿಯಾಗಿ ಕುಬ್ಜಳಾಗಿ ಜನಿಸು’ ಎಂದು ಶಪಿಸುತ್ತಾಳೆ. ಶಾಪಗ್ರಸ್ಥೆಯಾದ ಕುಬ್ಜೆಯು ಪಶ್ಚಾತ್ತಾಪದಿಂದ ಬೇಯುತ್ತಾ, ಜಗನ್ಮಾತೆಯಾದ ದೇವಿಯನ್ನು ಪ್ರಾರ್ಥಿಸುತ್ತಾಳೆ. ಆಗ ಕರುಣಾಮಯಿಯಾದ ಪಾರ್ವತಿಯು ಪ್ರತ್ಯಕ್ಷಳಾಗಿ, ‘ನಿನ್ನ ಶಾಪ ಪರಿಹಾರವಾಗಲು ಶುಕಮುನಿಯ ಆಶ್ರಮದ ಬಳಿಯಿರುವ ಸುಪಾರ್ಶ್ವ ಗುಹೆಯಲ್ಲಿ ದೀರ್ಘಕಾಲ ತಪಸ್ಸು ಮಾಡು. ತ್ರೇತಾಯುಗದಲ್ಲಿ ಕರಕಾಸುರನೆಂಬ ಅಸುರನನ್ನು ಸಂಹರಿಸಲು ನಾನು ಅವತರಿಸಿ ಬರುವೆ. ಆಗ ನೀನು ನನ್ನ ದರ್ಶನ ಮಾಡಿದರೆ ನಿನ್ನ ಶಾಪ ವಿಮೋಚನೆಯಾಗುವುದು’ ಎಂದು ನುಡಿಯುವಳು. ಅಂತೆಯೇ ತಪಸ್ಸಿನಲ್ಲಿ ನಿರತಳಾದ ಪಿಂಗಳೆಯು ಅಸುರನ ಸಂಹಾರ ಮಾಡಿ, ಅಲ್ಲಿಯೇ ನೆಲಸಿದ ಬ್ರಾಹ್ಮೀ ದುರ್ಗಾ ಪರಮೇಶ್ವರಿಯ ದರ್ಶನಭಾಗ್ಯ ಪಡೆದಾಗ ದೇವಿಯು, ‘ನೀನು ಈಗಲೇ ಮಥುರಾ ನಗರಕ್ಕೆ ಹೊರಡು, ದ್ವಾಪರ ಯುಗದಲ್ಲಿ ಅವತರಿಸುವ ಕೃಷ್ಣ ಪರಮಾತ್ಮನ ದರ್ಶನದಿಂದ ನಿನ್ನ ಪಾಪವೆಲ್ಲಾ ಪರಿಹಾರವಾಗಿ ನೀನು ಮೊದಲಿನಂತೆ ಕೈಲಾಸಲೋಕಕ್ಕೆ ಹಿಂದಿರುಗುವೆ’ ಎಂದು ಹರಸುವಳು.

ಮಹಾಭಾರತದಲ್ಲಿಯೂ ಕೃಷ್ಣನು ಈ ಕುಬ್ಜೆಯ ಶಾಪವಿಮೋಚನೆ ಮಾಡಿದ ಪ್ರಸಂಗದ ಬರುತ್ತದೆ. ಎತ್ತಣ ಮಾಮರ ಎತ್ತಣ ಕೋಗಿಲೆ ಎಂಬ ಹಾಗಿದೆ ಈ ದಂತಕಥೆ ಅಲ್ಲವೇ? ದೇವಿಯ ದರ್ಶನದಿಂದ ಪುನೀತಳಾದ ಪಿಂಗಳೆಯು, ‘ಮಾತೆ, ವರ್ಷಕ್ಕೊಂದು ಬಾರಿಯಾದರೂ ನಿನ್ನ ಪಾದ ಸ್ಪರ್ಶ ಮಾಡುವ ಅವಕಾಶ ಕೊಡು’ ಎಂದು ಬೇಡುವಳು. ದೇವಿಯು, ‘ತಥಾಸ್ತು’ ಎಂದು ಅದೃಶ್ಯಳಾಗುವಳು. ಕುಬ್ಜೆಯು ನದಿಯಾಗಿ ಹರಿಯುವಳು. ಪ್ರತಿವರ್ಷ ಮಳೆಗಾಲದಲ್ಲಿ ಉಕ್ಕಿ ಹರಿದು ತನಗೆ ಮಾರ್ಗ ತೋರಿದ ದೇವಿಯ ಪಾದಗಳಿಗೆ ಅಭಿಷೇಕ ಮಾಡುವಳು.

ಕಮಲಶಿಲೆಯ ಬ್ರಾಹ್ಮೀ ದುರ್ಗಾಪರಮೇಶ್ವರಿ ದೇಗುಲದಿಂದ ಒಂದು ಕಿ.ಮೀ ದೂರದಲ್ಲಿರುವ ಸುಪಾರ್ಶ್ವ ಗುಹೆಗೆ ಹೊರಟೆವು. ಸುಪಾರ್ಶ್ವನೆಂಬ ಮಹಾರಾಜನು ತಾನು ತಪಸ್ಸು ಮಾಡಲು ಸೂಕ್ತವಾದ ಸ್ಥಳವನ್ನು ಅರಸುತ್ತಾ ಹೋದಾಗ ಮಹಾದೇವನು ತೋರಿದ ಗುಹೆ ಎಂದು ನಂಬಿಕೆಯೂ ಇದೆ. ಒಮ್ಮೆ ಆದಿಶೇಷನು ಗರುಡನಿಂದ ರಕ್ಷಣೆ ಪಡೆಯಲು ದೇವಿಯನ್ನು ಕೋರಿದಾಗ, ದೇವಿಯು ಅದೇ ಗುಹೆಯ ದಾರಿಯನ್ನು ತೋರುತ್ತಾಳೆ. ಅಂದಿನಿಂದ ಆದಿಶೇಷನು ತನ್ನ ಬಳಗದವರೊಂದಿಗೆ ಆ ಗುಹೆಯಲ್ಲಿ ಆಶ್ರಯ ಪಡೆಯಿತೆಂಬ ದಂತಕಥೆಯೂ ಇದೆ. ಆ ಗುಹೆಯಲ್ಲಿ ಉದ್ಭವಿಸಿದ ಮಹಾಕಾಳಿ, ಮಹಾಲಕ್ಷ್ಮಿ, ಮಹಾ ಸರಸ್ವತಿಯ ಮೂರ್ತಿಗಳೂ ಇದ್ದು ಪಕ್ಕದಲ್ಲಿಯೇ ವೀರಭದ್ರನ ಮೂರ್ತಿಯೂ ಇದೆ. ದೇವಿಯ ವಾಹನವಾದ ಹುಲಿಯು ಈಗಲೂ ಇಲ್ಲಿಗೆ ರಾತ್ರಿ ಬರುತ್ತದೆಂಬ ನಂಬಿಕೆಯೂ ಸ್ಥಳೀಯರಲ್ಲಿ ಮನೆಮಾಡಿದೆ. ಹುಲಿಯು ಬೆಚ್ಚಗಿರಲೆಂದು ನಿತ್ಯವೂ ಗುಹೆಯ ಮುಂದೆ ಬೆಂಕಿ ಹಾಕುವ ಪದ್ದತಿಯೂ ಇದೆ. ಈ ಪವಿತ್ರವಾದ ಸ್ಥಳದಲ್ಲಿ ವರದಾಶ್ರಮದ ಶ್ರೀಧರ ಸ್ವಾಮಿಗಳೂ ಮೂರು ವರ್ಷಗಳ ಕಾಲ ತಪಸ್ಸು ಮಾಡಿದರಂತೆ.

ಸುಪಾರ್ಶ್ವ ಗುಹೆಯಲ್ಲಿ ಉದ್ಭವಿಸುವ ನಾಗತೀರ್ಥವು, ಮಳೆಗಾಲದಲ್ಲಿ ತುಂಬಿ ಹರಿದು ಗುಹೆಯ ಹೊರಗೆ ಕಾಯುತ್ತಿರುವ ಕುಬ್ಜಾ ನದಿಯೊಡನೆ ಸಂಗಮಿಸಿ ದೇವಿಯು ನೆಲಸಿರುವ ದೇಗುಲದೊಳಗೆ ಹೊಕ್ಕು ಅವಳ ಪಾದಗಳಿಗೆ ಅಭಿಷೇಕ ಮಾಡುವಳು. ದೇವಿಯ ಪಾದಸ್ಪರ್ಶ ಮಾಡಿದ ಮೇಲೆ ಕುಬ್ಜೆಯು ಹಿಂದೆ ಸರಿಯುವಳು. ಇಂದಿಗೂ ಈ ಕೌತುಕವನ್ನು ನೋಡಲು ಜನಸಂದಣಿಯೇ ಇಲ್ಲಿ ನೆರೆಯುವುದು. ದೇವಿಯ ಪಾದೋದಕದಲ್ಲಿ ಜನರು ಮಿಂದು ಪುನೀತರಾಗುವರು. ಭಕ್ತರ ಸಂಕಷ್ಟಗಳನ್ನು ಪರಿಹರಿಸಲು ಬ್ರಾಹ್ಮೀ ಮುಹೂರ್ತದಲ್ಲಿ ದೇವಿಯು ಹಲವು ಪವಾಡಗಳನ್ನು ಮಾಡುವಳು, ‘ಮಕ್ಕಳಿಲ್ಲದವರಿಗೆ ಸಂತಾನಭಾಗ್ಯ, ಶಾರೀರಿಕ ಅಸ್ವಸ್ಥತೆ ಇರುವವರಿಗೆ ಆರೋಗ್ಯಭಾಗ್ಯ, ವ್ಯಾಪಾರ ವ್ಯವಹಾರಗಳಲ್ಲಿ ನಷ್ಟ ಅನುಭವಿಸಿದವರಿಗೆ ಸಂಪತ್ತಿನಭಾಗ್ಯ ಹೀಗೆ ತನ್ನ ಭಕ್ತರ ಇಷ್ಟಾರ್ಥಗಳನ್ನೆಲ್ಲಾ ನೆರವೇರಿಸುತ್ತಾ ಕನಕಶಿಲೆಯಲ್ಲಿ ನೆಲೆಯಾಗಿರುವಳು.’ ಹಾಗಾಗಿ ಅವಳಿಗೆ ಬ್ರಾಹ್ಮೀ ದುರ್ಗಾಪರಮೇಶ್ವರಿ ಎಂಬ ಹೆಸರು ಬಂದಿದೆ ಎಂದು ಅರ್ಚಕರು ಹೇಳಿದರು. ಚಂಡಿಕಾ ಹೋಮವು ದೇವಿಗೆ ಅಚ್ಚುಮೆಚ್ಚಿನ ಪೂಜೆ ಎಂದೂ ಹಾಗು ಇಲ್ಲಿ ಜರುಗುವಷ್ಟು ಚಂಡಿಕಾ ಹೋಮಗಳು ಮತ್ತೆಲ್ಲಿಯೂ ನಡೆಯುವುದಿಲ್ಲ ಎಂದೂ ಹೇಳಿದರು.

ದುರ್ಗಾಮಾತೆಯ ಮಂದಿರವನ್ನು ನೋಡಿ ಸುಪಾರ್ಶ್ವ ಗುಹೆಯನ್ನು ಹೊಕ್ಕು ಬಂದವರಿಗೆ ಹಸಿವಾಗತೊಡಗಿತ್ತು. ಕಮಲಶಿಲೆಯ ಪ್ರಸಾದ ನಿಲಯ ನಮಗೆ ಆತ್ಮೀಯವಾದ ಕರೆ ನೀಡಿತ್ತು. ಅತ್ಯಂತ ಶುಚಿಯಾದ ರುಚಿಯಾದ ಭೋಜನ ವ್ಯವಸ್ಥೆ ನೋಡಿ ‘ಸತ್ಯ ಹರಿಶ್ಚಂದ್ರ’ ಸಿನೆಮಾ ಗೀತೆಯೊಂದು ನೆನಪಾಗಿತ್ತು, ‘(ಶ್ರಾದ್ಧದೂಟ) ಹಬ್ಬದೂಟ ಸುಮ್ಮನೆ, ನೆನಸಿಕೊಂಡೆ ಜುಮ್ಮನೆ / ನೀರೂರಿ ನಾಲಿಗೆ ಕುಣಿವುದಯ್ಯ ಕಮ್ಮಗೆ / ಪಾಯಸ ಖೀರು, ನಿಂಬೆ ಸಾರು..’ . ಬೆಂಕಿಯಲ್ಲಿ ಕಂದಿಸಿದ್ದ ಕುಡಿ ಬಾಳೆ ಎಲೆ ಹಾಕಿದರು. ಕೋಸುಂಬರಿ, ಪಲ್ಯ, ಗೊಜ್ಜು, ಚಟ್ನಿ, ಅನ್ನ ತಿಳಿಸಾರು, ಹುಳಿ, ಪಾಯಸ, ಖೀರು, ಮೊಸರು, ಮಜ್ಜಿಗೆಯನ್ನು ಬಡಿಸಿದರು. ಮದುವೆ ಮನೆಯ ಊಟದ ಹಾಗೆ ರುಚಿ ರುಚಿಯಾಗಿತ್ತು. ಹೊಟ್ಟೆ ತುಂಬಾ ಊಟ ಮಾಡಿದೆವು.

ಮನೆಗೆ ಹಿಂದಿರುಗುವಾಗ ‘ಏನೇನು ನೆನಯಲಿ’ ಎಂಬ ಗೊಂದಲ ಮನದಲ್ಲಿ, ‘ಕಮಲಶಿಲೆಯ ಮಾರ್ಗದುದ್ದಕ್ಕೂ ಚಾಚಿಕೊಂಡಿರುವ ಸಹ್ಯಾದ್ರಿ ಗಿರಿಶ್ರೇಣಿಗಳು, ದಟ್ಟವಾದ ಅರಣ್ಯಗಳು, ಅಕ್ಕಪಕ್ಕದಲ್ಲಿದ್ದ ಭತ್ತದ ಗದ್ದೆಗಳು, ಕಂಗು ತೆಂಗಿನ ತೋಟಗಳು, ತುಂಗ, ಸೀತಾ, ವರದಾ ನದಿಗಳ ವಿಹಂಗಮ ನೋಟ, ಪ್ರಕೃತಿ ಸೌಂದರ್ಯಕ್ಕೆ ಬೆರಗಾಗಿ ಇಲ್ಲಿಯೇ ನೆಲೆಯಾದ ದೇವಾನು ದೇವತೆಗಳು ಇತ್ಯಾದಿ. ಮನದ ತುಂಬಾ ಸವಿಯಾದ ನೆನಪುಗಳು, ಕಣ್ಣ ತುಂಬಾ ಸುಂದರವಾದ ದೃಶ್ಯಗಳು, ಕಿವಿಯಲ್ಲಿ ರಿಂಗುಣಿಸುತ್ತಿತ್ತು ಒಂದು ಭಕ್ತಿಗೀತೆ, “ಕಮಲದ ಮೊಗದೋಳೆ / ಕಮಲದ ಕಣ್ಣೋಳೆ / ಕಮಲವ ಕೈಯಲ್ಲಿ ಹಿಡಿದೋಳೆ / ಕಮಲನಾಭನ ಹೃದಯ ಕಮಲದಲಿ ನಿಂತೋಳೆ”

ಡಾ.ಗಾಯತ್ರಿದೇವಿ ಸಜ್ಜನ್, ಶಿವಮೊಗ್ಗ

14 Responses

  1. S Mohanraj says:

    A picturesque description of the places and the travel. Excellent reading material. Felt happy to know about a less known place.

  2. Nirmala says:

    ಮನ ತುಂಬಿ ಹೇಳಿದ ರೀತಿ ತುಂಬಾ ಚೆನ್ನಾಗಿದೆ

  3. Uma says:

    Beautiful write up Gayathri!! You

  4. ವಾಹ್ ಎಂಥ ಸುಂದರ ಸುಲಲಿತ ನಿರೂಪಣೆ ಮೇಡಂ ಬಹಳ ಸೊಗಸಾಗಿ ಮೂಡಿ ಬಂದಿದೆ ಕಮಲ ಶಿಲೆಯ..ಪರಿಚಯ

  5. ನಯನ ಬಜಕೂಡ್ಲು says:

    Beautiful

  6. MANJURAJ H N says:

    ಅಪರೂಪದ ಸಂಗತಿ ಮತ್ತು ಮಾಹಿತಿ, ಗೊತ್ತಿರಲಿಲ್ಲ. ಧನ್ಯವಾದಗಳು
    ಬರೆಹ ಉಪಯುಕ್ತವೂ ಅನುಕೂಲಕರವೂ ಆಗಿದೆ.

  7. ಪದ್ಮಾ ಆನಂದ್ says:

    ಕಮಲಶಿಲೆಯ ಸ್ಥಳಮಹಿಮೆ, ಪುರಾಣ ಪ್ರಸಿದ್ಧಿ, ಪ್ರಾಕೃತಿಕ ಸಂಪತ್ತು ಮುಂತಾದ ಹಲವಾರು ಸಂಗತಿಗಳ ವಿವರಣೆಯನ್ನು ಸೊಗಸಾಗಿ ಮೂಡಿಸಿದ ಲೇಖನ ಮುದ ನೀಡಿತು.

  8. ಸಹೋದಯ ಓದುಗರಿಗೆ ನನ್ನ ಹೃದಯಪೂರ್ವಕ ನಮನಗಳು

  9. SHARANABASAVEHA K M says:

    ನಮ್ಮ ಸಹೋದ್ಯೋಗಿ ಮಿತ್ರರ ಸ್ಟೇಟಸ್ ನಲ್ಲಿ ಈ ದೇವಿಯ ಪೋಟೋ ನೋಡಿದ್ದೆ. ಆ ಮಾತೆಯ ಕೃಪೆಯೇನೋ ನಿಮ್ಮ ಬರಹ‌ ಆದ. ದೇವಿಯ ಬಗ್ಗೆ ಬಂತು…….. ತುಂಬಾ ಚೆನ್ನಾಗಿದೆ ಮೇಡಂ…

  10. ವಂದನೆಗಳು ನಿಮ್ಮ ಪ್ರತಿಕ್ರಿಯೆಗೆ ಶರಣ್ ಸರ್

  11. Hema Mala says:

    ಸೊಗಸಾದ ಮಾಹಿತಿಯುಕ್ತ ಬರಹ

  12. ತಮ್ಮ ಪ್ರೀತಿಯ ಪ್ರತಿಕ್ರಿಯೆಗೆ ಧನ್ಯವಾದಗಳು ಮೇಡಂ

  13. ಶಂಕರಿ ಶರ್ಮ says:

    ಹಲವು ವರ್ಷಗಳ ಹಿಂದೆ ನಮ್ಮೂರಿನಿಂದ ಕಮಲಶಿಲೆಗೆ ಪ್ರವಾಸ ಹೋದ ಸವಿನೆನಪು ಮರುಕಳಿಸಿತು. ಸ್ವಚ್ಛ, ಸುಂದರ ಪರಿಸರ, ಆತ್ಮೀಯವಾಗಿ ಪ್ರೀತಿಯಿಂದ ನೀಡುವ ರುಚಿಕಟ್ಟಾದ ಸುಗ್ರಾಸ ಪ್ರಸಾದ ಭೋಜನ… ಮರೆಯಲುಂಟೇ?. ಆಸಕ್ತಿಕರ ನಿರೂಪಣೆಯಿಂದ ಮನಸೆಳೆದ ಲೇಖನ… ಧನ್ಯವಾದಗಳು ಗಾಯತ್ರಿ ಮೇಡಂ.

  14. ವಂದನೆಗಳು ಶಂಕರಿ ಮೇಡಮ್ ಅವರಿಗೆ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: