ಕಾದಂಬರಿ : ತಾಯಿ – ಪುಟ 11
(ಹಿಂದಿನ ಸಂಚಿಕೆಯಿಂದ ಮುಂದುವರಿದುದು)
ವಿಷಯ ತಿಳಿದು ಗೌರಮ್ಮನಿಗೆ ಖುಷಿಯಾಯಿತು. ಅವರು ಚಿನ್ಮಯಿಗೆ ವಿಷಯ ತಿಳಿಸಿದರು.
“ಅಮ್ಮಾ, ಚಂದ್ರಮೋಹನ್-ಅವರ ಹೆಂಡತಿ ಬರಲು ಒಪ್ಪಿದರೆ ಅಲ್ಲಿ ನಡೆಯುತ್ತಿರುವ ಅವ್ಯವಹಾರಗಳ ಬಗ್ಗೆ ಹೇಳಲು ಒಂದಿಬ್ಬರನ್ನು ತಯಾರು ಮಾಡಬೇಕಾಗುತ್ತದೆ. ಈ ವಿಚಾರ ನೀನು ಈಗಲೇ ಯಾರಿಗೂ ಹೇಳಬೇಡ.”
ಮರುದಿನ ಶುಕ್ರವಾರ. ನಾಗಮಣಿ, ಗೋದಾಮಣಿ, ಮಧುಮತಿ ಹೋಗಿ ಮಂಚ, ಹಾಸಿಗೆಗಳಿಗೆ ಆರ್ಡರ್ ಬುಕ್ ಮಾಡಿ ಬಂದರು. ಕರ್ಟನ್‌ಗಳನ್ನು ಕಿಟಕಿ, ಬಾಗಿಲುಗಳಿಗೆ ಅಳತೆಯ ಪ್ರಕಾರ ಹೊಲಿಸಬೇಕಾಗಿದ್ದುದರಿಂದ 2 ರೀತಿಯ ಕರ್ಟನ್ ಬಟ್ಟೆ ತಂದರು.
“ನನ್ನ ಹತ್ತಿರ ನೀವು ದುಡ್ಡು ಕೇಳಲಿಲ್ಲ….”
“ಅಡ್ವಾನ್ಸ್ ಆನ್‌ಲೈನ್‌ನಲ್ಲಿ ಪೇ ಮಾಡಿದ್ದೇನೆ. ಕರ್ಟನ್‌ಗೆ ಮಧುಮತಿ ಪೇ ಮಾಡಿದ್ದಾರೆ. ಮುಂದಿನವಾರ ನೀವು ಹಣ ಕೊಡಿ.”
ಮರುದಿನ ರಾಜಲಕ್ಷ್ಮಿ ಮೋಹನನಿಗೆ ಫೋನ್ ಮಾಡಿ ಭಾಸ್ಕರನ ಜೊತೆ ಬರಲು ಹೇಳಿದರು.
“ಅಮ್ಮಾ ನೀವು ಮೈಸೂರಿನ ಎಸ್.ಬಿ.ಐನಲ್ಲಿ ಒಂದು ಅಕೌಂಟ್ ಓಪನ್ ಮಾಡುವುದು ಒಳ್ಳೆಯದು.”
“ಒಂಟಿಕೊಪ್ಪಲ್‌ನಲ್ಲಿರುವ ಎಸ್.ಬಿ.ಐ.ನಲ್ಲಿ ಮಾಡ್ತೀನಿ.”
“ಹಾಗೇ ಮಾಡಿ.”
“ನನಗೆ ಕೊಂಚ ಹಣ ಬೇಕಾಗಬಹುದು.”
“ಅಮ್ಮಾ, ನಾನು ಕೊಡಬೇಕಾದ ಹಣದಲ್ಲಿ 30 ಲಕ್ಷಕ್ಕೆ ಚೆಕ್ ಕೊಡ್ತೀನಿ.”
“ನೀವು ಬಂದಾಗ ಮಾತಾಡೋಣ. ಮೊದಲು ನೀನು ಭಾಸ್ಕರ ಬನ್ನಿ.”
ಭಾನುವಾರ ಎಂಟು ಗಂಟೆಗೆ ಗೌರಮ್ಮ, ಗೋದಾಮಣಿ ಹೊರಟರು. ಸರಸಮ್ಮನ ಮುಂದಾಳತ್ವದಲ್ಲಿ ತಿಂಡಿ, ಅಡಿಗೆ ಸಿದ್ಧವಾದವು.
ಸುಮಾರು 12 ಗಂಟೆಯ ಹೊತ್ತಿಗೆ ಮೋಹನ್, ಭಾಸ್ಕರನ ಜೊತೆ ಆಗಮಿಸಿದ.
“ಭಾಸ್ಕರ ಈಗಲೂ ಲಾಯರ್ ಆಫೀಸ್‌ನಲ್ಲಿ ಕೆಲಸ ಮಾಡ್ತಿದ್ದೀಯಾ?”
“ಹೌದಮ್ಮ.”
“ಏನು ಸಂಬಳ ಕೊಡ್ತಾರೆ?”
“ಹತ್ತುಸಾವಿರ ಕೊಡ್ತಿದ್ದಾರೆ. ಮಲಗಕ್ಕೆ ಅಲ್ಲೇ ಜಾಗ ಕೊಟ್ಟಿದ್ದಾರೆ.”
“ತುಂಬಾ ಕೆಲಸವಿರುತ್ತದಾ?”
“ಏನಿದ್ದರೂ ಬೆಳಿಗ್ಗೆ 9 ರಿಂದ 12 ಗಂಟೆಯವರೆಗೆ. ಸಾಯಂಕಾಲ 5 ರಿಂದ 8 ಗಂಟೆಯವರೆಗೆ ಕೆಲಸ ಮಾಡ್ತೀನಿ.”
“ನಾನು ವೃದ್ಧಾಶ್ರಮ ಶುರು ಮಾಡ್ತಿರೋದು ನಿನಗೆ ಗೊತ್ತಿದೆ ಅಲ್ವಾ?”
“ಗೊತ್ತು. ಮೋಹನ್ ಸರ್ ಹೇಳಿದರು.”
“ನಮ್ಮ ಆಶ್ರಮದ ಅಕೌಂಟ್ಸ್ ನೀನು ನೋಡಿಕೊಳ್ಳಕ್ಕಾಗತ್ತಾ?”
“ಆಗಲಿ. ಮಧ್ಯಾಹ್ನ ಬಿಡುವಿರುತ್ತದಲ್ಲಾ. ಆಗ ಬಂದು ಕೆಲಸ ಮಾಡ್ತೀನಿ.”
“ನೀನು ಪ್ರತಿದಿನ ಒಂದು ಗಂಟೆಗೆ ಬಂದುಬಿಡು. ಇಲ್ಲೇ ಊಟ ಮಾಡಿ 3 ಗಂಟೆಯವರೆಗೂ ಕೆಲಸಮಾಡು. ಆಮೇಲೆ ರೆಸ್ಟ್ ತೊಗೊಂಡು ನೀನು ಕೆಲಸಕ್ಕೆ ಹೋಗಕ್ಕೆ ಸರಿಹೋಗತ್ತೆ. ಸಧ್ಯಕ್ಕೆ ತಿಂಗಳಿಗೆ ಹತ್ತುಸಾವಿರ ಕೊಡ್ತೀನಿ.”
“ಐದು ಸಾವಿರ ಕೊಡಿ ಸಾಕು.”
“ನನ್ನ ಹತ್ತಿರ ಸಂಕೋಚಪಡಬೇಡ. ಸುಮ್ಮನೆ ಒಪ್ಪಿಕೋ.”
ಭಾಸ್ಕರ ಒಪ್ಪಿಕೊಂಡ. ರಾಜಲಕ್ಷ್ಮಿಗೆ ಸಮಾಧಾನವಾಯಿತು.
“ಮೋಹನ್ ನಾನು ಚೆಕ್ ಬರೆದುಕೊಡ್ತೀನಿ. ಕೊಂಚ ಹಣ ಡ್ರಾ ಮಾಡಿಸಿ ಕಳುಹಿಸು. ಭಾಸ್ಕರ ತಂದುಕೊಡ್ತಾನೆ.”
“ನಾಳೆ ನಾನೇ ಬಂದು ನಿಮ್ಮನ್ನು ಒಂಟಿಕೊಪ್ಪಲ್‌ಗೆ ಕರೆದುಕೊಂಡು ಹೋಗಿ ಅಕೌಂಟ್ ಓಪನ್ ಮಾಡಿಸ್ತೀನಿ. ನನ್ನ ಚೆಕ್, ಭರತ್ ಸರ್ ಚೆಕ್ ನೀವು ಹೊಸ ಬ್ಯಾಂಕ್‌ಗೆ ಕಟ್ಟಿ.”
“ಆಯ್ತು. ಹಾಗೆ ಮಾಡು. ಭಾಸ್ಕರ್‌ಗೆ ಒಂದು ಸೆಕೆಂಡ್‌ಹ್ಯಾಂಡ್ ಬೈಕ್ ಇದ್ರೆ ನೋಡು ಮೋಹನ. ಅವನಿಗೆ ಓಡಾಡಲು ಅನುಕೂಲವಾಗತ್ತೆ.”
“ಭಾಸ್ಕರಂಗೆ ನನ್ನ ಬೈಕ್ ಕೊಡ್ತೀನಿ ಅಮ್ಮ. ನಾನು ಇತ್ತೀಚೆಗೆ ಕಾರನ್ನೇ ಹೆಚ್ಚು ಉಪಯೋಗಿಸ್ತಿರುವುದರಿಂದ ಬೈಕ್ ಮೂಲೆ ಸೇರಿಬಿಟ್ಟಿದೆ.”
“ಸರಿ. ನೀನೇ ಕೊಡ್ತೀನಿ ಅನ್ನುವಾಗ ನಾನು ಯಾಕೆ ಬೇಡ ಅನ್ನಲಿ?” ಎಂದರು ರಾಜಲಕ್ಷ್ಮಿ.
ಗೋದಾಮಣಿ, ಗೌರಮ್ಮ, ಚಂದ್ರಮೋಹನ್ ಹೇಳಿದ ಸಮಯಕ್ಕೆ ಸರಿಯಾಗಿ ಅವರ ಮನೆಯಲ್ಲಿದ್ದರು. ಚಂದ್ರಮೋಹನ್ ಅವರಿಬ್ಬರನ್ನೂ ತಂದೆಯ ಬಳಿ ಕರೆದೊಯ್ದರು. ನಾಗಮೋಹನ್‌ದಾಸ್ ಗೌರಮ್ಮನನ್ನು ಗುರುತು ಹಿಡಿದು ಮಾತನಾಡಿಸಿದರು. ನಂತರ ಎಲ್ಲರೂ ಹಾಲ್‌ನಲ್ಲಿ ಕುಳಿತರು. ಮಾಧುರಿ ಬಾದಾಮಿಹಾಲು ತಂದರು.
“ನೀವು ಬಂದಿರುವ ಉದ್ದೇಶ ಏನು? ನನ್ನಿಂದ ಏನಾಗಬೇಕು?”
ಗೋದಾಮಣಿ ಅವರಿಗೆ ಅವರು ನಡೆಸುತ್ತಿರುವ ವೃದ್ಧಾಶ್ರಮದ ಬಗ್ಗೆ ತಿಳಿಸಿದರು. ಗೌರಮ್ಮ ಆ ವೃದ್ಧಾಶ್ರಮ ಅನುಭವಿಸುತ್ತಿರುವ ತೊಂದರೆಗಳನ್ನು ವಿವರಿಸಿದರು.
“ನೀಲಕಂಠ ಏನೂ ಕೊಡ್ತಾ ಇಲ್ಲ. ಹೊಟ್ಟೆ ತುಂಬಾ ಊಟವಿಲ್ಲ. ಸ್ನಾನಕ್ಕೆ ಬಿಸಿನೀರಿಲ್ಲ. ಸೋಪು, ಹಲ್ಲುಪುಡಿ, ಪೇಸ್ಟ್ ಏನೂ ಕೊಡಲ್ಲ. ಬಟ್ಟೆ ಅಂಗಡಿಯವರೊಬ್ಬರು ತಾಯಿ ಹೆಸರಿನಲ್ಲಿ ಸೀರೆಗಳನ್ನು ಕೊಟ್ಟರೆ ಅದನ್ನು ಕಿತ್ಕೊಂಡಿದ್ದಾನೆ ನೀಲಕಂಠ. ಜ್ವರ ಬಂದರೆ ಔಷಧಿ ಕೊಡುವವರೂ ಗತಿಯಿಲ್ಲ.”
“ನೀಲಕಂಠ ಇಷ್ಟು ಮೋಸ ಮಾಡ್ತಾನೇಂತ ಗೊತ್ತಿರಲಿಲ್ಲ. ನಾವು ಈಗ ಏನು ಮಾಡಬಹುದು?”
“ನಿಮಗೆ ಆ ವೃದ್ಧಾಶ್ರಮ ನಡೆಸುವುದರಲ್ಲಿ ಆಸಕ್ತಿ ಇದೆಯಾ?”
“ಖಂಡಿತಾ ಇಲ್ಲ. ನನಗೆ ನನ್ನ ಬಿಸಿನೆಸ್ ನೋಡಿಕೊಳ್ಳಕ್ಕೆ ಟೈಂ ಆಗ್ತಾ ಇಲ್ಲ. ಯಾರಾದರೂ ಸರಿಯಾಗಿರುವವರು ವಹಿಸಿಕೊಂಡರೆ ಕೊಟ್ಟುಬಿಡ್ತೀನಿ.”
ಗೋದಾಮಣಿ ಆಗ ರಾಜಲಕ್ಷ್ಮಿ ಆರಂಭಿಸುತ್ತಿರುವ ವೃದ್ಧಾಶ್ರಮದ ಬಗ್ಗೆ ಹೇಳಿದರು.
“ರಾಜಲಕ್ಷ್ಮಿಯವರು ನಿಮ್ಮ ಆಶ್ರಮದಲ್ಲಿರುವವರ ಹೆಂಗಸರ ಜವಾಬ್ದಾರಿ ತೆಗೆದುಕೊಳ್ಳಲು ಬಯಸ್ತಿದ್ದಾರೆ. ಅದಕ್ಕೆ ನಿಮ್ಮ ಒಪ್ಪಿಗೆ ಅಗತ್ಯ. ನಿಮ್ಮ ರ‍್ಮಿಷನ್ ಕೇಳಲು ನಾನು ಬಂದಿದ್ದೇನೆ.”
“ನಿಜವಾಗಿ ಒಳ್ಳೆಯ ವಿಷಯ.”
“ಸರ್ ನೀವು ಒಂದು ಸಲ ನಿಮ್ಮ ಆಶ್ರಮ ಹೇಗಿದೆ ನೋಡಿ ನೀಲಕಂಠಂಗೆ ಶಿಕ್ಷೆ ಕೊಡಬೇಕು. ಇಲ್ಲದಿದ್ದರೆ ಅವನು ತುಂಬಾ ತೊಂದರೆ ಕೊಡ್ತಾನೆ.”
“ಅವನೇನು ತೊಂದರೆ ಕೊಡಲು ಸಾಧ್ಯ?”
ಗೌರಮ್ಮ ಅವನಿಂದ ತನಗಾದ ತೊಂದರೆ, ತಾನು ಮನೆ ಖಾಲಿ ಮಾಡಬೇಕಾದ ಪರಿಸ್ಥಿತಿ ತಿಳಿಸಿದರು.
ಮಾಧುರಿಗೆ ತುಂಬಾ ರೇಗಿತು.
“ಚಂದ್ರ ನಾವು ಖಂಡಿತಾ ಹೋಗಿ ಬರೋಣ. ನಾವು ನೀಲಕಂಠನ್ನ ನಂಬಿ ಆ ಕಡೆ ಹೋಗದೆ ತುಂಬಾ ತಪ್ಪು ಮಾಡಿದೆವು” ಎಂದರು.
“ಆಗಲಿ ಮಧು ನಾವು ಈ ವಾರ ಹೋಗಿ ಬರೋಣ” ಎಂದರು ಚಂದ್ರಮೋಹನ್.
“ಸರ್ ನಾವಿನ್ನು ಬರ‍್ತೇವೆ” ಗೋದಾಮಣಿ ಹೇಳಿದರು.
“ಊಟ ಮಾಡಿಕೊಂಡು ಹೋಗಿ.”
“ಇಲ್ಲ ಸರ್. ನನ್ನ ಫ್ರೆಂಡ್ ಮನೆಗೆ ಊಟಕ್ಕೆ ರ‍್ತೀನಿ ಅಂತ ಹೇಳಿಬಿಟ್ಟಿದ್ದೀನಿ….”
“ಓ.ಕೆ. ನಾವು ಈ ವಾರದಲ್ಲಿ ಬರ‍್ತೀವಿ. ಮೈಸೂರಿಗೆ ಬಂದಾಗ ನಿಮ್ಮನ್ನು ಭೇಟಿ ಮಾಡ್ತೀನಿ.”
ಗೋದಾಮಣಿ, ಗೌರಮ್ಮ ಚಂದ್ರಮೋಹನ್ ಮನೆ ಬಿಟ್ಟಾಗ ಒಂದು ಗಂಟೆಯಾಗಿತ್ತು. ಗೋದಾಮಣಿ ಗೌರಮ್ಮನನ್ನು ಸೀರೆ ಅಂಗಡಿಗೆ ಕರೆದೊಯ್ದು ತಾವು ನಾಲ್ಕು ಡ್ರೆಸ್ ತೆಗೆದುಕೊಂಡರು. ಚಿನ್ಮಯಿಗೆ 2 ಡ್ರೆಸ್, ಗೌರಮ್ಮನಿಗೆ ಒಂದು ಸೀರೆ ತೆಗೆದುಕೊಟ್ಟರು. ನಂತರ ಹೋಟೆಲ್‌ನಲ್ಲಿ ಊಟ ಮಾಡಿ ಮೈಸೂರಿಗೆ ಹಿಂದಿರುಗಿದರು.
ಸೋಮವಾರ ಮೋಹನ್ ಬಂದು ರಾಜಲಕ್ಷ್ಮಿಯನ್ನು ಕರೆದುಕೊಂಡು ಹೋಗಿ ಒಂಟಿಕೊಪ್ಪಲ್ ಎಸ್.ಬಿ.ಐ.ನಲ್ಲಿ ಅಕೌಂಟ್ ಓಪನ್ ಮಾಡಿಸಿದರು. ಅಂದು ರಾತ್ರಿ ರಾಜಲಕ್ಷ್ಮಿ ಗೋದಾಮಣಿಯನ್ನು ಕೇಳಿದರು. “ನಮ್ಮ ವೃದ್ಧಾಶ್ರಮಕ್ಕೆ ಬೇರೆ ಇನ್ನೇನು ತರಬೇಕಾಗಬಹುದು. ನನಗೆ ಏನೂ ಹೊಳೆಯುತ್ತಿಲ್ಲ.”
“ಸ್ವಲ್ಪ ನಿಧಾನಿಸಿ ರಾಜಲಕ್ಷ್ಮಿ ಚಂದ್ರಮೋಹನ್ ಬಂದುಹೋದ ನಂತರ ಮುಂದಿನದು ತೀಮಾನಿಸೋಣ.”
“ಆಗಲಿ. ಅವರು ಫೋನ್ ಮಾಡಿ ಬರ‍್ತಾರಾ?”
“ಗೊತ್ತಿಲ್ಲ. ಬರ‍್ತಾರೋ ಅಥವಾ ನಮ್ಮ ಸಮಾಧಾನಕ್ಕೆ ‘ಬರ‍್ತೀವಿ’ ಅಂತ ಹೇಳಿದರೋ ತಿಳಿಯದು.”
“ಕಾದು ನೋಡೋಣ” ಎಂದರು ನಾಗಮಣಿ.
ಚಂದ್ರಮೋಹನ್‌ಗೆ ತುಂಬಾ ಬೇಸರವಾಗಿತ್ತು. ತಂದೆ ತನ್ನ ಪತ್ನಿಯ ಹೆಸರಲ್ಲಿ ಸ್ಥಾಪಿಸಿದ್ದ ವೃದ್ಧಾಶ್ರಮ ಇಂದು ಹೀನಸ್ಥಿತಿ ತಲುಪಲು ತಾವೇ ಕಾರಣವೇನೋ ಎನ್ನುವ ಅಪರಾಧಿ ಮನೋಭಾವ ಅವರನ್ನು ಕಾಡಿತು.
ಚಂದ್ರಮೋಹನ್ ಬಡವರಿಗೆ ಸಹಾಯ ಮಾಡಲು ಹಿಂಜರಿಯುತ್ತಿರಲಿಲ್ಲ. ಅವರು ತನ್ನ ತಂದೆಗೆ ಹಲವಾರು ಬಾರಿ ಹೇಳಿದ್ದರು. ಅಪ್ಪಾ ಅಮ್ಮನ ಹುಟ್ಟಿದ ಹಬ್ಬದ ದಿನ, ನಿಮ್ಮ ಮದುವೆ ವಾರ್ಷಿಕೋತ್ಸವದ ದಿನ ಯಾವುದಾದರೂ ಅನಾಥಾಶ್ರಮದಲ್ಲೋ, ವೃದ್ಧಾಶ್ರಮದಲ್ಲೋ ಊಟಕ್ಕೆ ಏರ್ಪಾಡು ಮಾಡಿ, ಬಟ್ಟೆ-ಬರೆ ದಾನ ಮಾಡೋಣ. ಅಮ್ಮನ ಹೆಸರಲ್ಲಿ ವೃದ್ಧಾಶ್ರಮ ನಡೆಸೋದೆ ಬೇಡ.”
ಆದರೆ ನಾಗಮೋಹನದಾಸ್ ಒಪ್ಪಿರಲಿಲ್ಲ. ಅವರು ನೀಲಕಂಠನನ್ನು ತುಂಬಾ ನಂಬಿದ್ದರು.
ಗೋದಾಮಣಿ, ಗೌರಮ್ಮ ಹೋದ ಮೇಲೆ ಚಂದ್ರಮೋಹನ್ ತಂದೆಗೆ ನಿಧಾನವಾಗಿ, ಅರ್ಥವಾಗುವಂತೆ ವೃದ್ಧಾಶ್ರಮದ ಪರಿಸ್ಥಿತಿ ವಿವರಿಸಿದ.
“ನೀವು ಮೊದಲು ಹೋಗಿ ಅಲ್ಲಿನ ಪರಿಸ್ಥಿತಿ ನೋಡಿ ಬನ್ನಿ. ಲಕ್ಷಾಂತರ ರೂಪಾಯಿ ನಾನದಕ್ಕೆ ಸುರಿದಿದ್ದೇನೆ. ನೀವು ಹೇಳಿದ ವಿಚಾರ ಕೇಳಿ ನನಗೆ ಸಂಕಟವಾಗ್ತಿದೆ. ನಾವು ವೃದ್ಧಾಶ್ರಮ ಮುಚ್ಚಿದರೆ ಅಲ್ಲಿರುವವರ ಗತಿಯೇನು?”
“ಅವರನ್ನು ನೋಡಿಕೊಳ್ಳಲು ಒಬ್ಬರು ಮುಂದೆ ಬಂದಿದ್ದಾರೆ” ಎಂದ ಚಂದ್ರಮೋಹನ್ ರಾಜಲಕ್ಷ್ಮಿಯ ಬಗ್ಗೆ ತಿಳಿಸಿದರು.
“ಮೊದಲು ನೀವು ಮೈಸೂರಿಗೆ ಹೋಗಿ ಬನ್ನಿ. ಆಮೇಲೆ ಈ ಬಗ್ಗೆ ವಿಚಾರ ಮಾಡೋಣ” ಎಂದರು ನಾಗಮೋಹನದಾಸ್.
ಅಂದು ರಾತ್ರಿ ಚಂದ್ರಮೋಹನ್ ನೀಲಕಂಠನಿಗೆ ಕಾಲ್ ಮಾಡಿದರು.
“ನಮಸ್ತೆ ಸಾರ್.”
“ನಮಸ್ಕಾರ. ವೃದ್ಧಾಶ್ರಮ ಹೇಗೆ ನಡೆಯುತ್ತಿದೆ?”
“ಚೆನ್ನಾಗಿ ನಡೆಯುತ್ತಿದೆ.”
“ಒಟ್ಟು ಎಷ್ಟು ಜನರಿದ್ದಾರೆ?”
“22 ಜನರಿದ್ದಾರೆ.”
“ನಾನು, ನನ್ನ ಮಿಸೆಸ್ ಈ ವಾರ ಬರೋಣಾಂತಿದ್ದೇವೆ. ನೀವು ಊರು ಬಿಟ್ಟು ಹೋಗಬೇಡಿ.”
“ಯಾವತ್ತು ಬರ‍್ತೀರ ಸರ್?”
“ಯಾಕೆ ನೀವು ಊರಿಗೆ ಹೋಗುವ ಪ್ರೋಗ್ರಾಂ ಇದೆಯಾ?”
“ಇಲ್ಲ ಸರ್. ನೀವು ಯಾವತ್ತೂಂತ ಹೇಳಿದರೆ ನಾನು ಊಟ, ತಿಂಡಿ ವ್ಯವಸ್ಥೆ ಮಾಡಬಹುದು.”
“ಅದೆಲ್ಲಾ ಏನೂ ಬೇಡ. ಒಟ್ಟಿನಲ್ಲಿ ನಾವು ಈ ವಾರದಲ್ಲಿ ಬರ‍್ತೀವಿ”
ನೀಲಕಂಠ ಇನ್ನೇನು ಹೇಳಲು ಸಾಧ್ಯ? “ಖಂಡಿತಾ ಬನ್ನಿ ಸರ್” ಎಂದ.
ಸೋಮವಾರ ಅವನು ಬೆಂಗಳೂರಿಗೆ ಹೋಗಬೇಕಾಗಿತ್ತು. ಅವನ ಪರಿಚಯದವರೊಬ್ಬರು ವೃದ್ಧಾಶ್ರಮಕ್ಕೆ ಹತ್ತು ಬೆತ್ತದ ಕುರ್ಚಿಗಳನ್ನು ಕೊಡುವುದಾಗಿ ಹೇಳಿದ್ದರು. ಅದನ್ನು ತರಲು ಹೋಗಬೇಕಾಗಿತ್ತು. ತಕ್ಷಣ ಅವನು ಚಂದ್ರಮೋಹನದಾಸ್ ಡ್ರೈವರ್ ಮೂರ್ತಿಗೆ ಫೋನ್ ಮಾಡಿದ.
“ಓ ನೀಲಕಂಠ ಸರ್, ಹೇಳಿ ಅಣ್ಣ.”
“ನೀವು ಯಾವತ್ತು ಮೈಸೂರಿಗೆ ಬರ‍್ತಿರೋದು?”
“ಸಾಹೇಬರು ಏನೂ ಹೇಳಿಲ್ಲ ಸರ್.”
ನೀಲಕಂಠನಿಗೆ ಸಮಾಧಾನವಾಯಿತು. “ನಾಳೆಯಂತೂ ಬರಲ್ಲ. ‘ಮಂಗಳವಾರ ಹೋಗಿ ಕ್ಲೀನ್ ಮಾಡಿಸಿ, ಅಲ್ಲಿರುವವರಿಗೆ ಹೇಗಿರಬೇಕೆಂದು ತಿಳಿಸಬೇಕು’ ಎಂದುಕೊಂಡ. ಮರುದಿನ ಸೋಮವಾರ ಬೆಳಿಗ್ಗೆ ಬೆಂಗಳೂರಿಗೆ ಹೋಗಿ 10 ಕುರ್ಚಿಗಳನ್ನು ತಂದು, ಆರನ್ನು ತಮ್ಮ ಮನೆಗೆ ಹಾಕಿಸಿ, ನಾಲ್ಕು ಕುರ್ಚಿಗಳನ್ನು ಆಶ್ರಮದಲ್ಲಿ ಹಾಕಿಸಿದ.
(ಮುಂದುವರಿಯುವುದು)
ಈ ಕಾದಂಬರಿಯ ಹಿಂದಿನ ಭಾಗ ಇಲ್ಲಿದೆ : https://www.surahonne.com/?p=41824
-ಸಿ.ಎನ್. ಮುಕ್ತಾ
ದೇವರು ವರ ಕೊಟ್ಟರೂ ಪೂಜಾರಿ ವರ ಕೊಡ ಎಂಬಂತೆ ನೀಲಕಂಠದ ದುರ್ವರ್ತನೆ ಮಿತಿಮೀರುತ್ತಿದೆ. ಕಥೆ ತುಂಬಾ ಚೆನ್ನಾಗಿ ಮುಂದುವರಿಯುತ್ತಿದೆ.
ಸರಾಗವಾಗಿ ಓದಿಸಿಕೊಂಡು ಹೋಗುತ್ತಿದೆ ಧಾರಾವಾಹಿ..ಹಾಗೇ ಸಾಮಾಜಿಕ ವೈರುದ್ಯಗಳ ಕಡೆ ಗಮನ ಹರಿಸುವಂತಿದೆ..ಮೇಡಂ
ಸೊಗಸಾಗಿ ಸಾಗುತ್ತಿದೆ ಕಥೆ
ಯಾರೋ ಒಳ್ಳೆಯ ಕೆಲಸ ಮಾಡುತ್ತೀವಿ ಎಂದರೂ ಈ ಮಧ್ಯದವರು ನೀಡುವ ಕಾಟ, ಕೋಟಲೆಗಳಿಂದಾಗಿ ಮೂಲ ಸದುದ್ದೇಶವೇ ಹಿಂದೆಸರಿಯುವುದು ನಿಜಕ್ಕೂ ನೋವಿನ ಸಂಗತಿಯಾಗಿದೆ. ಕಥೆಯ ಓಘ ಮನಸ್ಸಿಗೆ ನಾಟುವಂತಿದೆ.
ಕಾದಂಬರಿಯು ಅನಿರೀಕ್ಷಿತ ತಿರುವುಗಳನ್ನು ಪಡೆಯುತ್ತಾ ಕುತೂಹಲ ಮೂಡಿಸುತ್ತಾ ಸಾಗುತ್ತಿದೆ..
ಅಭಿಪ್ರಾಯ ತಿಳಿಸಿ ಪ್ರೋತ್ಸಾಹ ನೀಡುತ್ತಿರುವ ಆತ್ಮೀಯರೆಲ್ಲರಿಗೂ ಧನ್ಯವಾದಗಳು.
ಸರಿಯಾಗಿ ನಡೆಯದ ವೃದ್ಧಾಶ್ರಮವನ್ನು ಗಮನಿಸಿ, ಅಲ್ಲಿರುವ ಆಶ್ರಮವಾಸಿಗಳಿಗೆ ಸರಿಯಾದ ನೆಲೆಯನ್ನು ಕಲ್ಪಿಸುವ ನೆಲೆಯಲ್ಲಿ ಸಾಗುತ್ತಿರುವ ಉತ್ತಮ ಸಂದೇಶಯುಕ್ತ ಕಥೆ…ಧನ್ಯವಾದಗಳು ಮೇಡಂ.