ಮಕ್ಕಳ ವಿಷಯದಲ್ಲಿ ಪೋಷಕರ ಪಾತ್ರ.
“ಬೆಳೆಯುವ ಸಿರಿಯನ್ನು ಮೊಳಕೆಯಲ್ಲಿ ಕಾಣು”- ಎನ್ನುವಂತೆ… ಈ ಹಂತದಲ್ಲಿ ನಾವು ಮಕ್ಕಳನ್ನು ಹೇಗೆ ಕಾಣುತ್ತೇವೆ, ಹೇಗೆ ಬೆಳೆಸುತ್ತೇವೆ ಎನ್ನುವುದರ ಮೂಲಕ ನಮ್ಮ ಮಕ್ಕಳ ಉತ್ತಮ ಭವಿಷ್ಯ ಅವರ ಬೆಳವಣಿಗೆ ಅಡಗಿದೆ. ಇವತ್ತಿನ ಸ್ಪರ್ಧಾತ್ಮಕ ಯುಗದಲ್ಲಿ ಶಿಕ್ಷಣ ಕೊಡಿಸುವುದೇ ಸಾಹಸದ ಕೆಲಸ. ಈ ಹಂತದಲ್ಲಿ ಒಂದು ರೀತಿಯಲ್ಲಿ ಗೊಂದಲ. ಕೆಲವರು ಸರ್ಕಾರಿ ಶಾಲೆಗೆ ಸೇರಿಸುತ್ತಾರೆ. ಹಲವರು ಖಾಸಗಿ ಶಾಲೆಗೆ ಸೇರಿಸುತ್ತಾರೆ. ಶಾಲಾ-ಕಾಲೇಜುಗಳಿಗೆ ಆಯ್ಕೆ ಮಾಡಿ, ಸೇರಿಸುವುದು ಒಂದು ಪ್ರತಿಷ್ಠೆಯಾಗಿದೆ.
ಓದುವ ಮಕ್ಕಳು ಯಾವ ಶಾಲೆಯಾದರೇನು? ಯಾವ ಕಾಲೇಜ್ ಆದರರೇನು? ಓದೇ ಓದುತ್ತಾರೆ. ನಾವು ಹೆಚ್ಚಾಗಿ ನಮ್ಮ ನೆರೆಹೊರೆಯವರು ಯಾವ ಶಾಲೆಗೆ ಸೇರಿಸಿದ್ದಾರೆ ಎಂದು ಹೋಲಿಕೆ ಮಾಡಿಕೊಂಡೇ ಅರ್ಧ ಸೇರಿಸುವುದು ಉಂಟು!. ಪರಿಸ್ಥಿತಿ ಹೀಗಿರುವಾಗ ಶಿಕ್ಷಣ ವ್ಯವಸ್ಥೆಯು ಒಂದು ರೀತಿಯಲ್ಲಿ ಕ್ರಾಂತಿ ಉಂಟಾಗಿದೆ. ಬಡಾವಣೆಗೆ ಒಂದು ಶಾಲೆಗಳು, ಕಾಲೇಜುಗಳು ಹುಟ್ಟಿಕೊಂಡಿವೆ. ಈ ಹಂತದಲ್ಲಿ ನಮ್ಮ ಬಾಲ್ಯದ ಶಿಕ್ಷಣ ವ್ಯವಸ್ಥೆಯನ್ನು ನಾವು ನೆನಪಿಸಿಕೊಳ್ಳಲೇಬೇಕು!. ಅಜಗಜಾಂತರ ವ್ಯತ್ಯಾಸ!!. ಒಂದರಿಂದ ಹತ್ತನೇ ತರಗತಿವರೆಗೆ ಲಕ್ಷ ದಾಟಿರುವುದಿಲ್ಲ!. ಆದರೆ ಈಗ ಒಂದೇ ತರಗತಿಗೆ ಲಕ್ಷ ದಾಟುತ್ತದೆ!!. ಅದು ಸಾಲುವುದು ಇಲ್ಲ!. 1 ರಿಂದ 10ನೇ ತರಗತಿ ದಾಟಬೇಕಾದರೆ ಸಾಲ ಸೋಲ ಮಾಡಿ ಮ್ಯಾನೇಜ್ ಮಾಡುತ್ತಾರೆ. ಆದರೆ ಬಡ ತಂದೆ- ತಾಯಿಗಳು ತಮ್ಮ ಮಕ್ಕಳನ್ನು ಓದಿಸುವುದೇ ಒಂದು ರೀತಿಯಲ್ಲಿ ಸಾಹಸದ ಕೆಲಸ. ಜೊತೆಗೆ ಎಲ್ಲಾ ಮಕ್ಕಳು ಕೂಡ ಉತ್ತಮ ಅಂಕ ಪಡೆಯುತ್ತಾರೆ. ಹೋದೆ ಒಂದು ರೀತಿಲಿ ಪೈಪೋಟಿಯಾಗಿದೆ. ನೂರಕ್ಕೆ ನೂರರಷ್ಟು ಅಂಕ ತೆಗೆದರೂ ಕೂಡ ತೃಪ್ತಿ ಆಗುತ್ತಿಲ್ಲ. ಎಷ್ಟು ಜನಕ್ಕೆ ಕೆಲಸ ಸಿಗುತ್ತದೆ ಎನ್ನುವುದೇ ಯಕ್ಷಪ್ರಶ್ನೆ. ಖಾಸಗಿ ಕೆಲಸಗಳಲ್ಲೂ ಕೂಡ ಪೈಪೋಟಿ ಶುರುವಾಗಿದೆ.
ಪ್ರತಿಯೊಬ್ಬ ತಂದೆ ತಾಯಿಗಳಿಗೂ ಕೂಡ ನಮ್ಮ ಮಕ್ಕಳ ವಿದ್ಯಾಭ್ಯಾಸ ಚೆನ್ನಾಗಿರಬೇಕು ಎನ್ನುವ ಆಶಾ ಮನೋಭಾವವನ್ನು ಹೊಂದಿರುತ್ತಾರೆ. ಅದಕ್ಕೆ ತಕ್ಕಂತೆ ಪ್ರತಿಷ್ಠಿತ ಕಾನ್ವೆಂಟ್ ಗಳಿಗೆ, ಶಾಲೆಗಳಿಗೆ ಸೇರಿಸುತ್ತಾರೆ. ಸೇರಿಸಿದರಷ್ಟೇ ಸಾಲದು ತಮ್ಮ ಮಕ್ಕಳ ಚಲನವಲನದ ಬಗ್ಗೆ ಕೂಡ ನಿಗಾ ಇಟ್ಟಿರಬೇಕು. ಶಾಲಾ- ಕಾಲೇಜುಗಳಿಗೆ ಭೇಟಿಕೊಟ್ಟು ಶಿಕ್ಷಕರುಗಳ ಜೊತೆಯಲ್ಲಿ ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಚರ್ಚಿಸಬೇಕು. ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಮಕ್ಕಳು ಪಾಲ್ಗೊಳ್ಳುವಂತೆ ನೋಡಿಕೊಳ್ಳಬೇಕು. . ಸದಭಿರುಚಿಯ ಹವ್ಯಾಸಗಳನ್ನು ನಮ್ಮ ಮಕ್ಕಳಲ್ಲಿ ಮೈಗೂಡಿಸಿಕೊಳ್ಳುವಂತೆ ತಿಳಿಸಬೇಕು. ಅಲ್ಲಿ ನಮ್ಮ ಪ್ರಯತ್ನವೂ ಕೂಡ ಅಡಗಿರುತ್ತದೆ. ಹೆಚ್ಚಾಗಿ ಇಂದು ತಂದೆ ತಾಯಿಗಳು ಇಬ್ಬರೂ ಕೂಡ ಏನಾದರೂ ಒಂದು ಕೆಲಸದಲ್ಲಿ ತೊಡಗಿರುವುದರಿಂದ ಮಕ್ಕಳ ವಿದ್ಯಾಭ್ಯಾಸದ ಬಗ್ಗೆ, ಅವರ ವ್ಯಕ್ತಿತ್ವ ವಿಕಸನದ ಬಗ್ಗೆ ಸಮಯ ಕೊಡುವುದಕ್ಕೆ ಆಗುವುದಿಲ್ಲ . ಪರಿಸ್ಥಿತಿ ಈಗಿರುವಾಗ ನಮ್ಮ ಮಕ್ಕಳು ಪಠ್ಯ ವಿಷಯದಲ್ಲಿ ಪಠ್ಯೇತರ ವಿಷಯದಲ್ಲಿ ಹೇಗೆ ತಾನೆ ಮುಂದೆ ಬರುತ್ತಾರೆ?!.
ನಾ ಮೊದಲೇ ಹೇಳಿದಂತೆ ನಮ್ಮ ಕಾಲದ ಶಿಕ್ಷಣ ವ್ಯವಸ್ಥೆ ಬೇರೆ ಈಗಿನ ಶಿಕ್ಷಣ ವ್ಯವಸ್ಥೆ ಬೇರೆ ಅಜಗಜಾಂತರ ವ್ಯತ್ಯಾಸವಿದೆ. ನಮ್ಮ ಕಾಲದಲ್ಲಿ ನಮಗೆ ವಿದ್ಯಾಭ್ಯಾಸದ ಬಗ್ಗೆ ಯಾವುದೇ ರೀತಿಯಲ್ಲಿ ಒತ್ತಡ ಇರುತ್ತಿರಲಿಲ್ಲ. ಓದಿನ ಜೊತೆಗೆ ಮನೆಯ ಕೆಲಸವನ್ನು ಮಾಡಿ ಎಲ್ಲವನ್ನು ಸಮತೋಲನ ಮಾಡಿಕೊಂಡು ಓದುತ್ತಿದ್ದೆವು. ಕಡಿಮೆ ಅಂಕ ಬಂದರೂ ವ್ಯವಹಾರದ ದೃಷ್ಟಿಯಲ್ಲಿ ನಾವು ರಾಂಕ್ ಪಡೆಯುತ್ತಿದ್ದೆವು!. ಆದರೆ ಈಗಿನ ನಮ್ಮ ಮಕ್ಕಳ ಸ್ಥಿತಿ ಹೇಗಿದೆ ಎಂದರೆ ನೂರಕ್ಕೆ ನೂರರಷ್ಟು ಅಂಕಗಳನ್ನು ಪಡೆದರೂ ಕೂಡ ತೃಪ್ತಿ ಇಲ್ಲ. ಮುಖ್ಯವಾಗಿ ತಂದೆ ತಾಯಿಗೆ. ಆದರೆ ಮಕ್ಕಳು ಉತ್ತಮ ಅಂಕಗಳನ್ನು ಪಡೆಯುತ್ತಾರೆ. ಆದರೆ ಅವರು ಪಠ್ಯೇತರ ವಿಷಯದಲ್ಲಿ, ವ್ಯವಹಾರದ ದೃಷ್ಟಿಯಲ್ಲಿ ಬಹಳ ಹಿಂದೆ ಇರುತ್ತಾರೆ. ಜೊತೆಗೆ ಒಂದು ಕಷ್ಟ ಬಂದಾಗ ಅದನ್ನು ಧೈರ್ಯದಿಂದ ಹೇಗೆ ಎದುರಿಸಬೇಕು ಎನ್ನುವುದು ಕೂಡ ತಿಳಿದಿರುವುದಿಲ್ಲ ಇದರಿಂದಾಗಿ ಎಷ್ಟೋ ಚಿಕ್ಕ ಮಕ್ಕಳು ಬಹಳ ಒತ್ತಡದಿಂದ ಚಿಕ್ಕವಯಸಿನಲ್ಲೇ ಅನೇಕ ರೋಗ ರುಜಿನಗಳಿಗೂ ಕೂಡ ಒಳಗಾಗುತ್ತಿದ್ದಾರೆ. ಜೊತೆಗೆ ತಮ್ಮ ಮಾನಸಿಕ ಸ್ಥೈರ್ಯವನ್ನು ಕಳೆದುಕೊಳ್ಳುತ್ತಿದ್ದಾರೆ. ಕೆಲವು ಮಕ್ಕಳು ಆತ್ಮಹತ್ಯೆಯನ್ನು ಕೂಡ ಮಾಡಿಕೊಂಡ ನಿದರ್ಶನಗಳೂ ಇವೆ.
ಪರಿಸ್ಥಿತಿ ಈಗಿರುವಾಗ ನಾವು ಮಕ್ಕಳಲ್ಲಿ ಒಂದು ರೀತಿಯ ಭಾವನಾತ್ಮಕ ಸಂಬಂಧವನ್ನು ಬೆಳೆಸಬೇಕಾಗಿದೆ. ಸೋಲು ಗೆಲುವಿನ ಸೋಪಾನ, ಸೋತು ಗೆಲ್ಲಬೇಕು, ಕಷ್ಟಗಳು ಬಂದರೆ ಅದನ್ನ ಯಾವ ರೀತಿಯಲ್ಲಿ ಬಗೆಹರಿಸಬೇಕು? ಜೊತೆಗೆ ನಮ್ಮ ಓದಿನ ಸಮಯ ಹೇಗಿರಬೇಕು? ಓದಿನ ಮಹತ್ವ ಜೊತೆಗೆ ಸಮಯೋಚಿತ ದಿನಚರಿ, ಶಾಲೆ ಮತ್ತು ಮನೆಯ ಸ್ಥಿತಿಯನ್ನು ಅರ್ಥ ಮಾಡಿಕೊಳ್ಳುವುದು.
ಇವುಗಳೆಲ್ಲದರ ಜೊತೆಗೆ ನಾವು ಉತ್ತಮ ಸಂಸ್ಕಾರ ಗುಣಗಳನ್ನು ಕೂಡ ನಮ್ಮ ಮಕ್ಕಳಲ್ಲಿ ಬೆಳೆಸಬೇಕು. ಮಕ್ಕಳನ್ನು ಸಮಾಧಾನ ಮಾಡಲು ಸಲುವಾಗಿ ನಾವು ನಮಗೆ ಸಮಯವಿಲ್ಲ ಎಂದು ನಾವು ಬಳಸುವ ಮೊಬೈಲನ್ನು ಮಕ್ಕಳಿಗೆ ಕೊಟ್ಟು ನಾವು ನಮ್ಮ ಕೆಲಸ ಕಾರ್ಯದಲ್ಲಿ ತೊಡಗುತ್ತೇವೆ. ಇದು ಸಲ್ಲದು. ಮಕ್ಕಳಿಗೆ ಈ ಮೊಬೈಲ್ ಗುಮ್ಮ ಒಂದಲ್ಲ ಒಂದು ರೀತಿಯಲ್ಲಿ ಕಾಡುತ್ತದೆ. ಊಟ ಬಿಟ್ಟರೂ ಮೊಬೈಲನ್ನು ಬಿಡಲು ಸಾಧ್ಯವಿಲ್ಲ ಎನ್ನುವಷ್ಟು ಮಟ್ಟಿಗೆ ನಮ್ಮ ಮಕ್ಕಳು ಬಂದು ತಲುಪಿದ್ದಾರೆ!.
ಇಂದು ತಂತ್ರಜ್ಞಾನ ಬೆಳೆದಂತೆ ಮಾಹಿತಿ ಕ್ಷೇತ್ರವು ಕೂಡ ವಿಸ್ತಾರವಾಗಿದೆ. ನಾವು ನಮ್ಮ ಅಧ್ಯಯನದ ದೃಷ್ಟಿಯಿಂದ ಮೊಬೈಲನ್ನು ಮಾತ್ರ ಬಳಸುವಂತೆ ಆಗಬೇಕು. ಆದರೆ ಎಲ್ಲಾ ಸಮಯದಲ್ಲೂ ಕೂಡ ನಾವು ಮೊಬೈಲ್ ಬಳಕೆಯಲ್ಲಿ ಮುಳುಗಿದ್ದರೆ ಮಕ್ಕಳಿಗೆ ವಿದ್ಯಾಭ್ಯಾಸ ಹೇಗೆ ತಾನೇ ತಲೆಗೆ ಹತ್ತುತ್ತದೆ!. ಮುಖ್ಯವಾಗಿ ನಾವು ಮಕ್ಕಳೆದರು ಮೊಬೈಲ್ ಗಳನ್ನು ಬಳಸಲೇಬಾರದು. ಟಿವಿ ಧಾರಾವಾಹಿಗಳನ್ನ ನೋಡಲೇಬಾರದು. ಮಕ್ಕಳಿಗೆ ಯೋಗ್ಯ ಶಿಕ್ಷಣ ಕೊಡುವುದರ ಬಗ್ಗೆ ನಾವು ಸದಾ ಚಿಂತಿಸಬೇಕು.
ಈಗ ಅವಿಭಕ್ತ ಕುಟುಂಬದ ಪರಿಕಲ್ಪನೆ ಇಲ್ಲದಿರುವುದರಿಂದ ಮಕ್ಕಳಿಗೆ ತಂದೆ ತಾಯಿ ಕೂಡ ಹೆಚ್ಚು ಸಮಯವನ್ನು ಅವರೊಟ್ಟಿಗೆ ಕಳೆಯುತ್ತಿಲ್ಲ. ಇದರಿಂದಾಗಿ ಮಕ್ಕಳಿಗೆ ಒಂದು ರೀತಿಯ ಮಾನಸಿಕ ಒತ್ತಡ, ಏಕಾಂಗಿತನ ಕಾಡುತ್ತದೆ. ಅವುಗಳಿಂದ ಮಕ್ಕಳು ಹೊರ ಬರುವಂತೆ ನೋಡಿಕೊಳ್ಳಬೇಕು. ಮಕ್ಕಳಿಗೆ ಮನರಂಜನಾತ್ಮಕವಾಗಿ ನಾವು ಅವರೊಟ್ಟಿಗೆ ಬೆರೆತು, ಕ್ಷಣ ಕ್ಷಣಕ್ಕೂ ಅವರಿಗೆ ಮಾರ್ಗದರ್ಶಕರಾಗಿರಬೇಕು. ನಾವು ವ್ಯವಹಾರದ ದೃಷ್ಟಿಯಿಂದ ಅನ್ಯ ಭಾಷೆಗಳು ಅತಿ ಮುಖ್ಯ ನಿಜ!. ಆದರೆ ನಮ್ಮ ಮಾತೃಭಾಷೆ ನಮ್ಮ ಮನೆ- ಮನದಲ್ಲಿ, ಅಂತರಂಗದಲ್ಲಿ ಸದಾ ಅಡಗಿರಬೇಕು. ಇದು ಮುಖ್ಯವಾಗುತ್ತದೆ.
ಮಕ್ಕಳಿಗೆ ನಾವು ದುಂದು ವೆಚ್ಚ ಮಾಡದಿರುವ ಬಗ್ಗೆ ತಿಳುವಳಿಕೆ ನೀಡಬೇಕು. ನಮ್ಮ ನಾಡು- ನುಡಿ- ಸಂಸ್ಕೃತಿಯ ಬಗ್ಗೆ ಬೆಳಕು ಚೆಲ್ಲುವಂತಹ ಕಥೆಗಳು, ಕೋಟೆ ಕೊತ್ತಲಗಳು ಎಲ್ಲವುಗಳ ಬಗ್ಗೆ ತಿಳಿಸಬೇಕು. ನಮ್ಮ ನಾಡು- ನುಡಿಗೆ ಶ್ರಮಿಸಿದ, ದುಡಿದ, ಮಡಿದ ಎಲ್ಲಾ ರಾಷ್ಟ್ರ ನಾಯಕರನ್ನು, ಸ್ವಾತಂತ್ರ್ಯ ಹೋರಾಟಗಾರರನ್ನು, ಕ್ರಾಂತಿಕಾರಿ ಕಥೆಗಳನ್ನು ತಿಳಿಸಬೇಕು.ಕವಿಗಳನ್ನ ಲೇಖಕರನ್ನ ಅವರ ಸಾಹಿತ್ಯ ಸುಧೆಯನ್ನು ತಿಳಿಸಲೇಬೇಕು. ನಾವು ಬಾಲ್ಯದಿಂದಲೇ ಮಕ್ಕಳಿಗೆ ಸಾಮಾನ್ಯ ಜ್ಞಾನದತ್ತ ಒಲವು ಮೂಡುವಂತೆ ಮಾಡಬೇಕು. ನಂತರದಲ್ಲಿ ಅವರು ಸ್ಪರ್ಧಾ ಪ್ರಪಂಚದಲ್ಲಿ ಸುಲಭವಾಗಿ ಯಾವುದೇ ವಿಷಯಗಳನ್ನು ಚಿಂತಿಸಿ ಚರ್ಚಿಸಲು ಅನುಕೂಲವಾಗುತ್ತದೆ. ಮಕ್ಕಳ ವ್ಯಕ್ತಿತ್ವ ವಿಕಸನದ ಬಗ್ಗೆ, ವೃತ್ತಿ ಕೌಶಲ್ಯದ ಬಗ್ಗೆ ತಿಳುವಳಿಕೆ ನೀಡಲೇಬೇಕು. ಅವರಿಗೆ ಆರೋಗ್ಯ ಕಾಳಜಿಯ ಬಗ್ಗೆ ತಿಳಿಸಬೇಕು. ಜೊತೆಗೆ ನಮ್ಮ ಮನೆಯ ಸುತ್ತಮುತ್ತಲಿನ ವಾತಾವರಣವನ್ನು ಯಾವ ರೀತಿಯಲ್ಲಿ ಸ್ವಚ್ಛವಾಗಿರಬೇಕು ಎನ್ನುವುದನ್ನು ಕೂಡ ತಿಳಿಸಲೇಬೇಕು.
ಮುಖ್ಯವಾಗಿ ನಾವು ಮಕ್ಕಳಿಗೆ ಓದು ಓದು ಎಂದು ಬಲವಂತ ಮಾಡುತ್ತಿರುತ್ತೇವೆ. ಅದರ ಬದಲು ಅವರಿಗೆ ಒಂದು ವೇಳಾಪಟ್ಟಿಯನ್ನು ಹಾಕಿ ಕೊಡಬೇಕು. ಅದರಂತೆ ಅವರು ದಿನಾಲು ಓದಿಗೆ ಇಷ್ಟು ಸಮಯ, ಆಟಕ್ಕೆ ಇಷ್ಟು ಸಮಯ ಎಂದು ಮೀಸಲಿಡುವಂತಾಗಬೇಕು. ಮಕ್ಕಳಿಗೆ ಆಟೋಟಗಳ ಬಗ್ಗೆ ತಿಳಿಸಬೇಕು. ನಾವು ಮೊಬೈಲ್ ನಲ್ಲಿ ಟಿವಿ ಗಳಲ್ಲಿ ನಡೆಯುವ ಆಟಗಳನ್ನು ನೋಡುವುದರ ಬದಲು ನಾವೇ ಅಂತಹ ಆಟಗಳಲ್ಲಿ ಪಾಲ್ಗೊಳ್ಳುವಂತೆ ಮಕ್ಕಳಿಗೆ ತಿಳಿಸಲೇಬೇಕು. ಕ್ರೀಡಾ ಸಾಧನೆ ಮಾಡಿದ ಅನೇಕ ಜೀವನ ಚರಿತ್ರೆಯನ್ನು ಮಕ್ಕಳಿಗೆ ತಿಳಿಸಬೇಕು. ಮುಖ್ಯವಾಗಿ ಮಕ್ಕಳು ಕಡಿಮೆ ಅಂಕ ಪಡೆದಾಗ ಅವರು ಎಲ್ಲಿ ಎಡವಿದ್ದಾರೆ ಎನ್ನುವುದನ್ನು ತಿಳಿದು ಅವರಿಗೆ ಅರ್ಥವಾಗುವ ರೀತಿಯಲ್ಲಿ ನೀನು ಮುಂದಿನ ಪರೀಕ್ಷೆಯಲ್ಲಿ ಖಂಡಿತ ಹೆಚ್ಚು ಅಂಕಗಳನ್ನು ಪಡೆಯುತ್ತೀಯ ಎಂದು ಮಾನಸಿಕವಾಗಿ ಧೈರ್ಯವನ್ನು ತುಂಬಬೇಕು. ಅದು ಬಿಟ್ಟು ಮಕ್ಕಳನ್ನು ನಾವು ಬೇರೆಯವರ ಜೊತೆಯಲ್ಲಿ ಹೋಲಿಸಬಾರದು. ನೋಡು ಅವನು ಇಷ್ಟು ಅಂಕ ತೆಗೆದಿದ್ದಾನೆ ಅವಳು ಇಷ್ಟು ಅಂತ ತೆಗೆದಿದ್ದಾಳೆ ಎಂದು ಹೋಲಿಸಿದರೆ ಮಾನಸಿಕ ಸ್ಥಿತಿಯನ್ನು ಕಳೆದುಕೊಂಡು ಒತ್ತಡದ ರೀತಿಯಲ್ಲಿ ಬದುಕುವಂತಾಗುತ್ತದೆ.
ಮಕ್ಕಳ ಜೊತೆಯಲ್ಲಿ ಪ್ರವಾಸವನ್ನು ಕೂಡ ಹೋಗಬೇಕು ಮಕ್ಕಳನ್ನು ತಿಂಗಳಿಗೆ ಎರಡು ಮೂರು ಬಾರಿಯಾದರೂ ಸಂಬಂಧಿಕರ ಸ್ನೇಹಿತರ ಮನೆಗೂ ಕೂಡ ಕರೆದುಕೊಂಡು ಹೋಗಬೇಕು. ನಾವು ಆಸ್ತಿಯನ್ನು ಮಾಡುವುದರ ಬದಲು ಮಕ್ಕಳನ್ನೇ ದೊಡ್ಡ ಆಸ್ತಿಯನ್ನಾಗಿ ಮಾಡಬೇಕು. ಒಟ್ಟಿನಲ್ಲಿ ನಮ್ಮ ಮಕ್ಕಳ ಮಾನಸಿಕ ಧೈರ್ಯ, ತುಂಬುವುದರ ಜೊತೆಗೆ ಆರೋಗ್ಯ ಕಾಳಜಿ, ಎಲ್ಲದರ ಬಗ್ಗೆಯೂ ಕೂಡ ಆಸಕ್ತಿ ವಹಿಸಲೇಬೇಕು. ಆಗ ಮಾತ್ರ ಮಕ್ಕಳು ಭವಿಷ್ಯ ಉಜ್ವಲವಾಗುತ್ತದೆ. ಮಕ್ಕಳ ವಿಷಯದಲ್ಲಿ ಪೋಷಕರ, ಗುರುಗಳ, ಸಮಾಜದ ಪಾತ್ರ ತುಂಬಾ ಹಿರಿದಾದದ್ದು.
-ಕಾಳಿಹುಂಡಿ ಶಿವಕುಮಾರ್, ಮೈಸೂರು.
ಉತ್ತಮ ಮಾಹಿತಿಯನ್ನು ಒಳಗೊಂಡ ಲೇಖನ…ಹಾಗೇ ಮಕ್ಕಳಿಗೆ ಮತ್ತೊಬ್ಬರು ಹಾರೈಸಿದಾಗ….ಪ್ರೋತ್ಸಾಹಿಸಿದಾಗ ವಂದನೆಗಳನ್ನು ಧನ್ಯವಾದಗಳನ್ನು ಹೇಳುವುದನ್ನು ರೂಡಿ ಮಾಡಿಸ ಬೇಕಾದ್ದು ಗುರು ಹಿರಿಯರ ಖರ್ತವ್ಯವೂ ಹೌದು ಅಲ್ಲವೇ ಸಾರ್.
ಸೊಗಸಾಗಿದೆ ಲೇಖನ. ನಾವು ಮಕ್ಕಳ ಮೇಲೆ ಯಾವ ರೀತಿ ನಿಗಾ ವಹಿಸಬೇಕು ಅನ್ನುವ ಉತ್ತಮ ಸಂದೇಶವಿದೆ.
ಮಕ್ಕಳನ್ನು ಬೆಳೆಸುವ ರೀತಿಯಿಂದ ಅವರಲ್ಲಿ ಸಂಸ್ಕಾರ ಬೆಳೆಯುತ್ತದೆ. ಇದರಲ್ಲಿ ಹೆತ್ತವರು ಪಾತ್ರ ಹಿರಿದು. ಉತ್ತಮ ಸಂದೇಶಯುಕ್ತ ಲೇಖನವು ಈ ಬಗ್ಗೆ ಎಚ್ಚರಿಕೆಯನ್ನಿತ್ತಿದೆ…ಧನ್ಯವಾದಗಳು.
ಮಕ್ಕಳನ್ನು ಬೆಳೆಸುವ ತಾಯಂದಿರಿಗೆ ಉತ್ತಮ ಮಾರ್ಗದರ್ಶನ
ಇಂದಿನ ಸ್ಪರ್ಧಾತ್ಮಕ ದಿನಗಳಲ್ಲಿ ಮಕ್ಕಳನ್ನು ಬೆಳೆಸುವಲ್ಲಿ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳ ಕುರಿತಾಗಿ ಬೆಳಕು ಬೀರುವ ಲೇಖನಕ್ಕಾಗಿ ಅಭಿನಂದನೆಗಳು.