ಎಲ್ಲಾ ಅವನ ಕೃಪೆ
”ಎಷ್ಟು ಸಲ ತೂಗಿ,ಸರಿ ತೂಕ ನೋಡುವುದು; ಒಂದಿಷ್ಟು ಹೆಚ್ಚು ಬಂದರೇನೀಗ ಆ ಟೊಮೆಟೋ ತೂಕಕ್ಕೆ….!?”
ತರಕಾರಿಯವನ ಬಳಿ ತಕರಾರುಮಾಡುತ್ತಿದ್ದ ಆ ಮುದುಕಿಯನ್ನು ನೋಡಿದ ವಸುಂಧರಾ ತನ್ನ ಖರೀದಿ ತೀರಿಸಿ ನಡು ನೆಟ್ಟಗೆ ಮಾಡಿ ಇತ್ತ ತಿರುಗಿದ ಆ ವೃದ್ಧೆಯನ್ನು ಬೆರಗಾಗಿ ನೋಡಿದಳು!.
“ಓಹ್…,ಕನಕಮ್ಮ ನೀವಾ?”
“ಹೌದು.., ನೀನು ವಸುಂಧರಾ ತಾನೇ? ಎಷ್ಟು ವರ್ಷಗಳಾದುವು ನಾವು ಭೇಟಿಯಾಗದೆ! ಚೆನ್ನಾಗಿದ್ದಿಯಾ ವಸುಂಧರ? ಎಲ್ಲಿ ನಿಮ್ಮ ಮನೆ?”.
“ಇಲ್ಲೇ ಪಕ್ಕದ ಹಳ್ಳಿ.ನೀವೆಲ್ಲಿದ್ದೀರಾ? ಈ ಸಿಟಿಗೆ ಯಾವಾಗ ಬಂದಿರಿ? ನಿಮ್ಮ ಮಕ್ಕಳೆಲ್ಲ ಏನು ಮಾಡುತ್ತಾರೆ? ಗಂಡು ಮಕ್ಕಳು ಮೂವರೂ ನಿಮ್ಮೊಂದಿಗೆ ಇದ್ದಾರಾ?” ತಡೆಯದ ಕುತೂಹಲ ವಸುಂಧರಮ್ಮನಿಗೆ.
“ಅಲ್ಲಿ ನಿಂತಿರುವ ಆ ತರುಣಿ ನನ್ನೊಂದಿಗೆ ಇದ್ದಾಳೆ.ನನಗೆ ಅವಳಾಸರೆ.ಅವಳಿಗೆ ನಾನಾಸರೆ. ಸದ್ಯಕ್ಕೀಗ ಅಷ್ಟೇ. ಆ ಪರಮಾತ್ಮ ತನ್ನೆಡೆಗೆ ಯಾವಾಗ ಕರೆಸುತ್ತಾನೋ ಆವಾಗ ಹೋಗ್ತೀನಿ”. ಬೆಂದ ಮನದಿಂದ ನೊಂದ ಮಾತು!.
” ಮಕ್ಕಳು ಮೂವರಿದ್ದೂ ನಿಮ್ಮನ್ನು ಹೀಗೆ ಒಂಟಿಯಾಗಿ ಬಿಟ್ಟರೇ”?.
“ಈಗಿನ ಮಕ್ಕಳಿಗೆ ಹೆತ್ತ ತಾಯಿ ಯಾಕಮ್ಮಾ ಬೇಕು?.ಲಾಲನೆ ಪಾಲನೆಯೆಲ್ಲಾ ಅವಳ ಕರ್ತವ್ಯವೆಂದೇ ಇಂದಿನವರ ವಾದ. ‘ಮುತ್ತು ಕೊಡೋಳು ಬಂದರೆ ತುತ್ತು ಕೊಟ್ಟೋಳನ್ನ ಮರೆಯುತ್ತಾರೆ’. ಮಧುಕರ,ಮಾಧವ ಇಬ್ಬರೂ ತಾಯಿ,ತಾಯ್ನಾಡಿನ ಸಂಬಂಧ ಕಡಿದು ಅಮೇರಿಕದಲ್ಲೇ ನೆಲೆಸಿದ್ದಾರೆ. ಹತ್ತು ವರ್ಷಗಳಿಂದೀಚೆ ನಾನವರನ್ನ ನೋಡಿಲ್ಲ.ಇನ್ನು ಕಿರಿಮಗ ಮಧುಚಂದ್ರ ಬೆಂಗಳೂರಲ್ಲಿ ಡಾಕ್ಟರ್. ಅವನೋ ಹೆಂಡತಿಯ ಗುಲಾಮ. ಆಕೆಗೂ ನನಗೂ ಎಣ್ಣೆ-ಸೀಗೆ ಸಂಬಂಧ. ನಾಲ್ಕು ವರ್ಷಗಳ ಹಿಂದೆ ನನ್ನವರು ಕಾಲವಾದರು. ಮಂಗಳೂರಲ್ಲಿದ್ದ ಮನೆಮಾರಿ, ಬೆಂಗಳೂರಿಗೆ ಬಾ ಎಂದ ಮಗ.ಹಾಗೇ ಮಾಡಿದೆ. ಅದೇ ನಾನು ಮಾಡಿದ ತಪ್ಪು. ಬ್ಯಾಂಕಿನಲ್ಲಿದ್ದ ಹಣವನ್ನೆಲ್ಲ ಅವನ ಇಚ್ಛೆಯಂತೆ ಉಪಯೋಗಿಸಿಕೊಂಡ. ಒಂದು ವರ್ಷ ಆ ಸೊಸೆಯೊಂದಿಗೆ ಇದ್ದೆ. ಅವಳು ಅತ್ತೆ, ನಾನು ಸೊಸೆಯಂತೆ ಕಾಲ ಕಳೆದೆವು. ಪಡಬಾರದ ಹಿಂಸೆ ಪಟ್ಟೆ. ನಮ್ಮ ಮನೆಯಲ್ಲಿ ಕೆಲಸಮಾಡುತ್ತಿದ್ದ ನೀಲಮ್ಮನ ಮಗಳೇ ಈ ಗುಲಾಬಿ. ಅಪ್ಪ-ಅಮ್ಮ ತೀರಿಕೊಂಡಾಗ ಇವಳಿಗೆ ದಿಕ್ಕಿಲ್ಲದಾಯ್ತು.ಗುಲಾಬಿಯೊಂದಿಗೆ ಇರುತ್ತೇನೆ ಎಂದು ಹೊರಟೆ. ಮಗ-ಸೊಸೆ ಇಬ್ಬರೂ ಸಂತೋಷದಿಂದ ಒಪ್ಪಿದರು. ಈ ಹುಡುಗಿ ಬೀಡಿ ಕಟ್ಟುತ್ತಾಳೆ.ನನಗೆ ಗಂಡನ ಪೆನ್ ಕ್ಷನ್ ಅಷ್ಟಿಷ್ಟು ಬರುತ್ತದೆ. ಮೂಕಿಯಾದ ಇವಳ ಜೊತೆ ನಾನೂ ಬರಬೇಕಾಗುತ್ತದೆ”.
ಹಳೆ ಸ್ನೇಹಿತೆಗೆ ತನ್ನ ಕಥೆ ಹೇಳಿದ ಕನಕಮ್ಮ ಕ್ಷಣ ಬಿಟ್ಟು ಪುನಃ “ನೋಡು ವಸುಂಧರಾ,ರೆಕ್ಕೆ ಬಲಿತು ದೂರ ಹೋದ ಹಕ್ಕಿಯೂ ಒಂದೊಮ್ಮೆ ತುತ್ತುನೀಡಿದ ಅಮ್ಮನಿದ್ದೆಡೆಗೆ ಬರುತ್ತದೆ. ಆದರೆ ನನ್ನ ಮಕ್ಕಳು…?”
ಅಯ್ಯೋ ಹೇಗಿದ್ದವರು ಹೇಗಾಗಿ ಬಿಟ್ಟರು! ಹೆಚ್ಚೆಂದರೆ ತನಗಿಂತ ಹತ್ತು ವರ್ಷಕ್ಕೆ ಹಿರಿಯರಿವರು.ಬಹುಶಃ ಈಕೆಗೀಗ ಅರವತ್ತರ ಅಂಚು.ನೋಡಿದವರು ಎಂಭತ್ತರ ವೃದ್ಧೆ ಎಂದೇ ಲೆಕ್ಕಹಾಕಬೇಕು. ಪತಿ ಒಬ್ಬ ಇಂಜಿನಿಯರ್ ಆಗಿದ್ದು ಕೈಯಲ್ಲಿ ಸಾಕಷ್ಟು ಹಣ ಓಡಾಡುತ್ತಿದ್ದು ಕಾರು, ಬಂಗ್ಲೆ,ಕೆಲಸಕ್ಕೆ ಆಳು ಕಾಳು ಎಲ್ಲಾ ಇದ್ದು ಜಂಭದ ಕೋಳಿಯಂತಿದ್ದರಲ್ಲ! ಅವರ ಪಕ್ಕದ ಮನೆಯಲ್ಲೇ ಇದ್ದ ನಾವಾದರೋ ಬಡವರು. ನನ್ನವರು ಕೇವಲ ಪ್ರಾಥಮಿಕ ಶಾಲಾ ಶಿಕ್ಷಕರೆಂದು ತಾತ್ಸಾರ ಬೇರೆ! ವಸುಂಧರಾಗೆ ಒಂದೇ ಒಂದು ಹೆಣ್ಣು ಮಗು. ಎಷ್ಟೆಂದರೂ ಹೆಣ್ಣು ಹೆರವರ ವಸ್ತು. ಗಂಡು ಮಕ್ಕಳಿದ್ದರೆ ಫಲಕೊಡುವ ಅಂಗಳದ ಮರವಿದ್ದಂತೆ ಎನ್ನುತ್ತಿದ್ದ ಇವರ ಫಲಕೊಡುವ ಮರವನ್ನು ಯಾರು ಯಾರೋ ಆಕ್ರಮಿಸಿ, ಇವರನ್ನು ಆಚೆಗೆ ನೂಕಿ ಬಿಟ್ಟರಲ್ಲ ಪಾಪ! ಒಂಟಿ ಬದುಕು. ದುಡ್ಡೇ ಮನುಷ್ಯನನ್ನು ಕುಣಿಸುವ ಸಾಧನ.ಹಣಕ್ಕೆ ಗುಣ ಕಮ್ಮಿ.
“ಏನು ಯೋಚಿಸುತ್ತಿದ್ದಿಯಾ..! ನಿನ್ನ ಸಂಗತಿ ಹೇಳೇ ಇಲ್ಲ…!”. ಎಚ್ಚರಿಸಿದರವರು.
“ನನ್ನದೇನಿದೆ ಹೇಳುವುದಕ್ಕೆ? ನನ್ನವರು ಸ್ವರ್ಗಸ್ಥರಾದಾಗ ನಾನು ತವರಿನಾಶ್ರಯ ಪಡೆದೆ.ಆಗ ಮಗಳು ದೇವಿಕಾಗೆ ಹತ್ತು ವರ್ಷ. ಅವಳ ಡಿಗ್ರಿ ಮುಗಿವತನಕ ಅಲ್ಲೇ ಇದ್ವಿ.ಅವಳಿಗೆ ಬ್ಯಾಂಕಲ್ಲಿ ಉದ್ಯೋಗ ಸಿಗ್ತು. ಮದುವೆಯೂ ಆಯ್ತು. ಅಳಿಯನೂ ಬ್ಯಾಂಕ್ ಅಧಿಕಾರಿ. ನಾಲ್ಕೆಕ್ರೆ ಅಡಿಕೆತೋಟವೂ ಇದೆ. ಎರಡು ಗಂಡು, ಒಂದು ಹೆಣ್ಣು, ಮೂರು ಮಕ್ಕಳು ದೇವಿಕಾಗೆ.ಬನ್ನಿ ಹೋಗೋಣ,ಎಲ್ಲಾ ನೋಡಿ ಮಾತಾಡುವಿರಂತೆ”.
“ಬೇಡ ನಿಮಗ್ಯಾಕೆ ತೊಂದರೆ? ವಿಳಾಸ ಕೊಟ್ಟಿರು. ನಾಳೆ ಬರ್ತೀನಿ”.
“ತೊಂದರೆ ಎಲ್ಲಿ ಬಂತು? ನೀವು ಬರುವುದಾದರೆ ಒಂದು ಅಟೋ ಹಿಡೀತೀನಿ”.
“ಸರಿ ಹಾಗಾದರೆ.ಗುಲಾಬೀ,ಇವರು ನನ್ನ ಹಳೆ ಸ್ನೇಹಿತೆ.ಇವರ ಜೊತೆಗೆ ಹೋಗಿದ್ದು, ನಾಳೆ ಬರ್ತೀನಿ.ಈ ತರಕಾರಿ ತಗೊಂಡು ಮನೆಗೆ ಹೋಗು” ತರಕಾರಿ ಚೀಲ ಗುಲಾಬಿಗೆ ಒಪ್ಪಿಸುತ್ತಾ ಹೇಳಿದರವರು.
‘ಶ್ರೀನಿವಾಸ ಸದನ’ ದ ಅಂಗಳದಲ್ಲಿ ಆಟೋ ನಿಂತಿತು.ವಿಶಾಲವಾದ ಅಂಗಳದಲ್ಲಿ ಹಣ್ಣಡಿಕೆ ಹರವಲಾಗಿತ್ತು. ನಾಡ ಹಂಚು ಹೊದಿಸಿದ ಎರಡಂತಸ್ತಿನ ದೊಡ್ಡ ಮನೆ.ಇವರು ಮಾತಾಡುತ್ತಿದ್ದಂತೆ ಮೂರು ಪುಟ್ಟ ಮಕ್ಕಳು ರಿಕ್ಷಾದಲ್ಲಿ ಬಂದಿಳಿದರು.
“ಕೈಕಾಲು ಮುಖ ಎಲ್ಲ ತೊಳೆದು ಬನ್ನಿ ಮಕ್ಕಳೇ. ತಿಂಡಿ ತಿನ್ನುವಿರಂತೆ. ಕನಕಮ್ಮನೋರೇ,ಅದೋ ಅಲ್ಲಿ ಬಾತ್ ರೂಮ್ ಹಂಡೆಯಲ್ಲಿ ಬಿಸಿನೀರಿದೆ. ಹಾಯಾಗಿ ಕೈಕಾಲುಗಳಿಗೆ ಹಾಕ್ಕೊಂಡು ಬನ್ನಿ. ಸುಸ್ತು ಕಡಿಮೆಯಾಗುತ್ತೆ. ಲೋ ..ಕಿಶೋರಾ ಈ ಅಜ್ಜಿಗೆ ಬಾತ್ ರೂಮ್ ತೋರಿಸೋ” ಮೊಮ್ಮಗನಿಗೆ ಹೇಳುತ್ತಾ ಅಡುಗೆಮನೆ ಹೊಕ್ಕಳು ವಸುಂಧರಾ.
“ವಸುಂಧರಾ ಪುಣ್ಯವಂತೆ!.ಆಸರೆಯಾಗಿ ಅಳಿಯ,ಕೊನೆಗಾಲಕ್ಕೆ ಪ್ರೀತಿ ತೋರ್ಸಿ ಕಾಪಾಡುವ ಮಗಳು, ಮುದ್ದುಮಾಡಲು ಮೊಮ್ಮಕ್ಕಳು, ಇದೆಲ್ಲ ಆಕೆಯ ಸುಕೃತ ಫಲ.ತಾಳ್ಮೆ,ತ್ಯಾಗ, ಸಹನೆಗಳಂತಹ ಗುಣಕ್ಕೆ ಕಾಣದ ಕೈ ಕೊಡುಗೆ. ನಾನು ಮೂವರೂ ಗಂಡುಮಕ್ಕಳೆಂದು ಹಿರಿಮೆ ತೋರಿಸಿ ಹೊತ್ತಿದ್ದೇ ಬಂತು. ಕಡೆಗಾಲಕ್ಕೆ ಒಂಟಿಯಾಗಿಸಿ ಬಿಟ್ಟರಲ್ಲ ನನ್ನ ಉದರದಲ್ಲೇ ಉದಿಸಿದವರು!ನನ್ನ ಅಹಂಕಾರ ನನಗೇ ಮುಳ್ಳಾಯಿತೇ? ದೇವರೇ ಇನ್ನಾದರೂ ನನಗೊಂದು ಗತಿ ಕಾಣಿಸಪ್ಪ!”. ಮನದಲ್ಲೇ ಮೊರೆಯಿಟ್ಟಳು ಕನಕಮ್ಮ.
ಸಂಜೆಯಾಗುತ್ತಿದ್ದಂತೆ ಸ್ಕೂಟರಿನ ಸದ್ದು ಕೇಳಿದ ವಸುಂಧರಮ್ಮನ ಕಿವಿ ನಿಮಿರಿತು. ಅಳಿಯ ಮತ್ತು ಮಗಳು ಬಂದ್ರು. ದೇವಿಕಾ ಕನಕಮ್ಮನವರನ್ನು ನೋಡಿದವಳೇ, “ಕನಕ ಆಂಟಿ…!” ಎನ್ನುತ್ತಾ ಮನದ ಮೂಲೆಗೆ ಸೇರಿ ಕುಳಿತಿದ್ದ ನೆನಪನ್ನು ಈಚೆಗೆ ತಂದಳು ದೇವಿಕಾ.
“ಮಧುಕರ, ಮಾಧವ ನೀವು ಇಂಗ್ಲಿಷ್ ಮೀಡಿಯಂ ಓದುವವರು ತಾನೇ! ಸ್ವಲ್ಪ ಈ ಗ್ರಾಮರು ಹೇಳಿ ಕೊಡ್ರಿ..” ದೇವಿಕಾ ನೆರೆಮನೆ ಹುಡುಗರಲ್ಲಿ ಗೋಗರೆದಾಗ
“ಹ್ಞುಂ…,ಇದೊಂದು ಕನ್ನಡದ ಕಾಗೆ. ಹೋಗಮ್ಮ ಅವರನ್ನು ಪೀಡಿಸ್ಬೇಡ. ಅವರು ಸ್ಟಡಿ ಮಾಡೋಕೆ ಬಹಳಷ್ಟಿದೆ. ನೀನಿನ್ನು ಇಂಗ್ಲಿಷ್ ಕಲ್ತು ಉದ್ಧಾರವಾಗೋದು ಅಷ್ಟರಲ್ಲೇ ಇದೆ.ನಿನ್ನ ಮನೆಗೆ ನಡಿ”. ಕನಕಮ್ಮ ಆಕ್ಷೇಪಿಸಿದಾಗ, “ಕೋಗಿಲೆ ಮೊಟ್ಟೆಗೂ ಕಾವು ಕೊಡಲು ಕಾಗೆಯೇ ಬೇಕಾಗುತ್ತೆ. ತಿಳಿಯದ್ದನ್ನು ತಿಳಿದವರಲ್ಲಿ ಕೇಳಿದ್ದಕ್ಕೆ ಕೇವಲವಾಗಿ ಮಾತಾಡಿ ಕಳಿಸಿಬಿಟ್ಟರಲ್ಲ?” ನೊಂದು ಹಿಂದಿರುಗಿದ್ದಳು.
“ಹಾ….! ನೆನಪಿದೆ..,ಧಾರಾಳ ನೆನಪಿದೆ ಆಂಟಿ.” ತನ್ನ ಪತಿಗೆ ಪರಿಚಯಿಸಿದಳು ದೇವಿಕಾ.
“ನಮಸ್ಕಾರ ತಾಯಿ…” ಸೌಜನ್ಯ ತೋರಿ ಮಾತಾಡಿದ ಶ್ರೀನಿವಾಸನನ್ನು ತದೇಕ ದೃಷ್ಟಿಯಿಂದ ನೋಡಿದ ಕನಕಮ್ಮನಿಗೆ ಯಾವುದೋ ಅಂತರಾಳದ ಅಂತಃಕರಣ ಉಕ್ಕಿ ಕಣ್ಣೀರು ಹನಿಯಿತು.
“ಯಾಕೆ ಕಣ್ಣಲ್ಲಿ ನೀರು ? ಹುಶಾರಿಲ್ಲವೇ?”
“ಹಾಗೇನಿಲ್ಲ ಶೀನು ಅವರ ಮಕ್ಕಳು ಹೆಚ್ಚು ಕಮ್ಮಿನಿನ್ನ ವಯಸ್ಸಿನವರೇ. ಏನೋ ನೆನಪಾಗಿರಬೇಕು ” ವಸುಂಧರಾ ಹೇಳಿದರು.
“ನೀವೇನೂ ಹೆದರ್ಕೋಬೇಡಿ ತಾಯಿ. ನಾವೆಲ್ಲ ಇದ್ದೀವಲ್ಲ!.ಏನು ಸಹಾಯ ಬೇಕಿದ್ರೂ ನಮ್ಮೊಡನೆ ಹೇಳಿ”.
“ಹೆತ್ತ ತಾಯನ್ನು ಅತ್ತ ದೂಡಿ ರಕ್ತ ಸಂಬಂಧವನ್ನೇ ಕಡಿದಂತಿರುವ ಆ ಮಕ್ಕಳಿಗಿಂತ ನಿನ್ನಂತಹ ಒಬ್ಬನೇ ಮಗ ಸಾಕಿತ್ತು ನನಗೆ”. ತನ್ನೊಳಗೇ ಹೇಳಿಕೊಂಡರವರು.
” ರಾತ್ರಿಯೂಟಕ್ಕೆ ರೆಡಿಮಾಡು.
ನಾನೊಮ್ಮೆ ಹೊರಗೆ ಸುತ್ತಾಡಿ ಬರ್ತೀನಿ”. ಶೀನು ಮಡದಿಗೆ ಅಂದವನೇ ಹೊರಗೆ ಹೋದ.
ಡೈನಿಂಗ್ ಟೇಬಲ್ ಸುತ್ತ ಎಲ್ಲರೂ ಕುಳಿತು ಊಟಮಾಡುತ್ತಿದ್ದರು. ಶ್ರೀನಿವಾಸನ ಬಲಕೈ ಹೆಬ್ಬೆರಳ ಬುಡದಲ್ಲಿ ಅಂತದೇ ಮತ್ತೊಂದು ಪುಟ್ಟ ಬೆರಳು ಕಂಡು ಅವಾಕ್ಕಾದ ಕನಕಮ್ಮ.”ನಿನ್ನ ನಾಲಿಗೆ ನೋಡೋಣ?” ಎಂದರು.
“ನನ್ನ ನಾಲಿಗೆ ನೋಡಬೇಕೇ…!? ನೋಡಿ.” ನಾಲಿಗೆ ಹೊರಚಾಚಿದನವ. ಅರೇ! ನಾಲಿಗೆಯಲ್ಲೂ ಮಚ್ಚೆಯಿದೆ! ಏನೋ ಹೊಳೆದಂತಾಗಿ ಆವೇಶದಲ್ಲಿ
“ಇಲ್ಲ…,ನನ್ನ ಮೋಹನ ಸತ್ತಿಲ್ಲ.ಜೀವಂತವಾಗಿದ್ದಾನೆ!”. ತನಗರಿವಿಲ್ಲದಂತೆ ಆವೇಶದಿಂದ ಕಿರುಚಿದರವರು. ಎಲ್ಲರೂ ಬಿಟ್ಟ ಕಂಗಳಿಂದ ಅವರೆಡೆಗೆ ನೋಡಿದರು. ತುಸು ಆವೇಶ ಇಳಿದೊಡನೆ..
“ಶೀನೂ ನಾನೊಂದು ಪ್ರಶ್ನೆ ಕೇಳ್ತೇನೆ, ತಪ್ಪು ತಿಳಿಯದೆ ಉತ್ತರ ಹೇಳ್ತಿಯಾ? ನಿನ್ನ ಈ ಅಪ್ಪ-ಅಮ್ಮ ನಿಜವಾಗಿಯೂ ನಿನ್ನ ಹೆತ್ತವರೋ ಅಲ್ಲಾ…,ಸಾಕಿದವರೋ ನನ್ನಲ್ಲಿ ತಪ್ಪು ತಿಳಿಯದೆ ಉತ್ತರ ಹೇಳ್ತಿಯಾ?”
“ತಾಯೀ, ಈ ಪ್ರಶ್ನೆ ನೀವು ಯಾಕೆ ಕೇಳಿದಿರೋ ನಾನರಿಯೆ. ಆದರೆ ಸತ್ಯ ಸಂಗತಿ ಇಷ್ಟೆ. ನನ್ನ ಕಾಪಾಡಿ ಬೆಳೆಸಿದ ಈ ಅಪ್ಪ ಅಮ್ಮಂದಿರಿಗೆ ಮದುವೆಯಾಗಿ ಹತ್ತು ವರ್ಷಕ್ಕೂ ಮಕ್ಕಳಾಗದಿದ್ದಾಗ ಪ್ರಾರ್ಥಿಸಿ ಹರಕೆ ಹೊತ್ತುಕೊಳ್ಳಲು ತಿರುಪತಿ ಕ್ಷೇತ್ರಕ್ಕೆ ಹೋಗಿದ್ದರಂತೆ. ಅಲ್ಲಿಂದ ಹಿಂತಿರುಗುತ್ತಿದ್ದಾಗ ಅನಾಥನಾಗಿ ಅಳುತ್ತಾ ಅಪ್ಪಿಕೊಂಡು ಹಿಂದೆಯೇ ಬಂದ ನನ್ನನ್ನು ವಾರಸುದಾರರಿಗಾಗಿ ವಿಚಾರಿಸಿದರಂತೆ. ಯಾರೂ ದೊರೆಯದಿದ್ದಾಗ ತಿರುಪತಿ ತಿಮ್ಮಪ್ಪನ ಕೊಡುಗೆಯೆಂದು ಸ್ವೀಕರಿಸಿ ಸಾಕಿ ಸಲಹಿದರಂತೆ. ಆದರೆ ಇದುವರೆಗೂ ಇವರು ನನ್ನ ಹೆತ್ತವರಲ್ಲ ಎಂದು ನನಗನ್ನಿಸಿಯೇ ಇಲ್ಲ. ಅದ್ಸರಿ…,ನಿಮಗ್ಯಾಕೆ ಈ ಸಂಶಯ…?”.
“ಶೀನೂ ನಿನ್ನ ಮಾತಿಗೆ ಉತ್ತರ ನನ್ನ ಕತೆಯಲ್ಲಿದೆ ಕೇಳು. ನನ್ನ ಮಗ ಮೋಹನ ಎರಡು ವರ್ಷದವನಿದ್ದಾಗ ನಾವೂ ತಿರುಪತಿ ಕ್ಷೇತ್ರಕ್ಕೆ ಹೋಗಿದ್ದೆವು. ದೇವರ ದರ್ಶನಕ್ಕೆ ಕ್ಯೂ ನಿಲ್ಲಬೇಕಾಗಿ ಬಂತು. ಆ ಗಡಿಬಿಡಿಯಲ್ಲಿ ಮಗು ತಪ್ಪಿಸಿಕೊಂಡ. ಎಷ್ಟೋ ಹುಡುಕಾಡಿದೆವು. ಅಲ್ಲಿ ಹರಕೆ ಹೇಳಿ ಕೊಂಡೆವು. ಪ್ರಯೋಜನವಾಗಲಿಲ್ಲ.
ಮನೆಗೆ ಹಿಂತಿರುಗಿದ ಮೇಲೆ ಮಗ ಸತ್ತುಹೋದ ಬಗ್ಗೆ ಕಾಗದ ಬಂದಿದೆ.ಅವನನ್ನು ಮರತುಬಿಡು ಎಂದು ಅವನಪ್ಪ ಹೇಳಿದರು. ನಾನದನ್ನು ನಿಜವೆಂದೇ ನಂಬಿದ್ದೆ!. ನೀನು ನಾನು ಹೆತ್ತಮಗು ಕಣೋ. ಇದು ತಿಮ್ಮಪ್ಪನಾಣೆಗೂ ನಿಜ”.
“ಅಮ್ಮಾ…” ಎಂದು ಬಿಗಿದಪ್ಪಿದ ಶೀನು. “ಹೆತ್ತಮ್ಮ ಈಗಲಾದರೂ ದೊರಕಿದಳಲ್ಲ. ನೀನು ಇನ್ನು ಎಲ್ಲಿಗೂ ಹೋಗಬೇಡಮ್ಮ.ನಿನಗೆ ಯಾವ ಕೊರತೆಯೂ ತಾಗದಂತೆ ಸಾಕ್ತೀನಿ. ನಾಳೆ ಗುಲಾಬಿಯನ್ನೂ ಕರೆಯಿಸು”.
“ಅಂದರೆ…,ಗುಲಾಬಿಯ ಹೊಣೆಯನ್ನೂ ಹೊತ್ತುಕೊಳ್ತಿಯಾ?”.
“ಅಲ್ಲದೆ ಇನ್ನೇನು? ನಿನ್ನನ್ನೇ ನಂಬಿದ ಅವಳನ್ನು ಕೈಬಿಡುವುದು ಸರಿಯಲ್ಲ. ಅದೂ ಆಕೆ ಮೂಕಿ ಬೇರೆ”. ಶ್ರೀನಿವಾಸನೆಂದ.
– ವಿಜಯಾಸುಬ್ರಹ್ಮಣ್ಯ ಕುಂಬಳೆ.
ಸರಳ ಸುಂದರ ಕಥೆ.ವಿಜಯಾ ಮೇಡಂ
ಮಾನವೀಯ ಮೌಲ್ಯಗಳನ್ನು ತೋರುವ ಸುಂದರವಾದ ಕಥೆ
ಕಥೆ ಚೆನ್ನಾಗಿ ಮೂಡಿ ಬಂದಿದೆ
ಬಹಳ ಮನಮುಟ್ಟುವ ಕಥೆ
ಕನಕಮ್ಮನವರಿಗೆ ಕೊನೆಗೂ ನೆಮ್ಮದಿಯ ಜೀವನ ಸಿಕ್ಕಿತೆಂದು ಸಮಾಧಾನವಾಯಿತು. ಉದಾತ್ತಗುಣಗಳ ಒಳಿತಿನ ಮೇಲೆ ಬೆಳಕು ಚೆಲ್ಲುವ ಸರಳ, ಸುಂದರ ಕಥೆ.
ಮಾನವೀಯತೆಯನ್ನು ಮೆರೆದ ಒಂದು ಸುಖಾಂತದ ಕಥೆ ಮುದ ನೀಡಿತು
ಮನಮಿಡಿಯುವ ಕಥೆ…