ನಾವು ಚಿಕ್ಕವರಿದ್ದಾಗ ಶಾಲೆಯಲ್ಲಿ ಒಂದು ಪದ್ಯ ಇತ್ತು –
ಚಿಕ್, ಚಿಕ್, ಚೀಂ, ಚೀಂ, ಎಂದುಕೊಂಡು
ಮರಗಳಲ್ಲಿ ಅತ್ತ ಇತ್ತ ಓಡುತಿರುವೆ, ನಾನು ಯಾರು?
ಅಂತ. ಅದಕ್ಕೆ ಉತ್ತರ ನಾವುಗಳು, ʼಇಣಚಿʼ ಎಂದೇ ಹೇಳಬೇಕಿತ್ತು. ಆದರೆ ನಮ್ಮ ಪುಟ್ಟ ಅಳಿಲಿಗೆ ಇಣಚಿ ಎಂಬ ಪರ್ಯಾಯ ಪದ ಇದೆಯಾದರೂ, ಪ್ರಚಲಿತವಿರುವುದು ಅಳಿಲು ಎಂದೇ. ಅಕ್ಷರ ಮಾಲೆಯ ಚಿತ್ರಪಟದಲ್ಲಿ ಮಾತ್ರ ʼಇʼ, ʼಇಣಚಿʼ ಎಂದು ನಾವು ಓದುವ ಕಾಲದಲ್ಲಿ ಇರುತಿತ್ತು, ಅಷ್ಟು ಬಿಟ್ಟರೆ, ಅದು ನಮ್ಮ ಅಳಿಲೇ ಹೌದುಎನ್ನುವುದೇ ನನ್ನ ಅಳಲು.
ಈಗೊಂದು 40-42 ವರ್ಷಗಳ ಹಿಂದೆ ನಾವಾಗ ಗುಜರಾತಿಗೆ ಹೋಗಿ ಸ್ವತಂತ್ರ್ಯವಾಗಿ ಸಂಸಾರ ಹೂಡಿದ ದಿನಗಳು. ಎಲ್ಲರೊಂದಿಗೆ ಒಟ್ಟು ಕುಟುಂಬದಲ್ಲಿ ಇದ್ದ ನಾವು, ನಮ್ಮವರಿಗೆ ಟ್ರಾನ್ಸಫರ್ ಆದ ಕಾರಣ ಪುಟ್ಟ ಮಗಳೊಂದಿಗೆ ಹೋಗಿ ʼವಡೋದರಾʼದಲ್ಲಿ ಸಂಸಾರ ಹೂಡಿದೆವು. ಮೊದಲ ಬಾರಿಗೆ ಅಪಾರ್ಟಮೆಂಟ್ ವಾಸ. ಮನೆಯಲ್ಲಿ ನಮ್ಮೊಂದಿಗೆ ಅಳಿಲುಗಳೂ, ಪಾರಿವಾಳಗಳೂ ವಾಸ ಮಾಡುತ್ತಿದ್ದವು. ಪಾರಿವಾಳಗಳು ಬಾಲ್ಕನಿಗೆ ಮಾತ್ರ ಸೀಮಿತವಾಗಿದ್ದರೂ, ಅಳಿಲುಗಳು ಅವುಗಳದ್ದೇ ಮನೆ ಎನ್ನುವಂತೆ ಅಡುಗೆ ಮನೆಯ ಕಿಟಕಿಯಿಂದ ಒಳಬಂದು ಸರಬರ ಓಡಾಡುತ್ತಿದ್ದವು.
ಆಗೆಲ್ಲಾ ಹಾಲು ಬಾಟಲ್ಲುಗಳಲ್ಲಿ ಬರುತಿತ್ತು. ಬಾಟಲಿನ ಮೇಲೆ ಅಲ್ಯೂಮಿನಿಯಂ ಫಾಯಲ್ಲಿನ ತೆಳುವಾದ ಮುಚ್ಚಳ ಇರುತಿತ್ತು. ಕೆಲವೊಮ್ಮೆ, ಕೆಲವೊಮ್ಮೆ ಏನು, ಯಾವಾಗಲೂ ಆ ಮುಚ್ಚಳದ ಒಳಭಾಗಕ್ಕೆ ಹಾಲಿನ ಕೆನೆಯಂಥಹ ಘನರೂಪದ ಸಾರಭಾಗ ಸ್ವಲ್ಪ ಅಂಟಿರುತಿತ್ತು. ನಮ್ಮ ಮನೆಯಲ್ಲಿ ನಮಗೆಲ್ಲಾ ಹಾಲಿನ ಕೆನೆ ಎಂದರೆ ಇಷ್ಟ. ನಾನಂತೂ ಬೆಳಗಿನ ಕೆಲಸದ ಧಾವಂತದಲ್ಲಿ ಆ ಕೆನೆಯನ್ನು ನೆಕ್ಕಿ ನೆಕ್ಕಿ ತಿನ್ನಲು, ಚಪ್ಪರಿಸಿಕೊಂಡು ಸವಿಯಲು ಸಾಧ್ಯವಿಲ್ಲವೆಂದು ಹಾಲಿನ ಮುಚ್ಚಳಗಳನ್ನು ಅಡುಗೆ ಮನೆಯ ಕಿಟಕಿಯಲ್ಲಿ ಇಟ್ಟಿರುತ್ತಿದ್ದರೆ, ನಾನಿಲ್ಲಿ ಕೆಲಸ ಮಾಡುತ್ತಲೇ ಇರುತ್ತಿದ್ದರೂ ಸ್ವಲ್ಪವೂ ಭಯ, ಭೀತಿ ಇಲ್ಲದೆ ಒಂದು ಅಳಿಲಂತೂ ದಿನಾ ಬಂದು ಎರಡು ಪುಟ್ಟ ಪುಟ್ಟ ಕೈಗಳಲ್ಲಿ ಆ ಮುಚ್ಚಳನ್ನು ಹಿಡಿದು ನೆಕ್ಕಿ ನೆಕ್ಕಿ ಹೇಗೆ ತಿನ್ನುತಿತ್ತು, ಎಂದರೆ ನಂತರ ನೋಡಿದರೆ ʼರೀ ಯೂಜ಼್ʼ ಮಾಡಬಹುದೇನೋ ಎನ್ನುವಂತೆ ತಿಂದು ಅಲ್ಲೇ ಇಟ್ಟು ಓಡಿ ಹೋಗುತಿತ್ತು. ಮುಂದೆ ನಮ್ಮ ಹಾಲಿನ ಕೆನೆಯನ್ನು ಅಳಿಲಿಗೇ ಮೀಸಲಾಗಿ ಇಟ್ಟುಬಿಟ್ಟೆವು. ಆ ದೃಷ್ಯ ಇನ್ನೂ ಕಣ್ಣಿಗೆ ಕಟ್ಟಿದಂತಿದೆ. ಅದು ಹೇಗಿತ್ತೆಂದರೆ ಆಡುವ ಪುಟ್ಟ ಮಕ್ಕಳ ಕೈಗೆ ಆಕಾಶದ ಬೆಳ್ಳಿ ಚಂದಿರ ಇಳಿದು ಬಂದು, ಸಿಕ್ಕಿ ಬಿಟ್ಟಿದ್ದಾನೇನೋ ಎನ್ನುವಂತೆ ಮನೋಹರವಾಗಿ ಕಾಣುತಿತ್ತು. ಈಗಿನಂತೆ ಆಗೆಲ್ಲಾ ಮೊಬೈಲ್ ಕ್ಯಾಮೆರಾಗಳು ಇರುತ್ತಿರಲಿಲ್ಲವಲ್ಲ, ಇದ್ದಿದ್ದರೆ ಎಷ್ಟೊಂದು ಸುಂದರ ಫೋಟೋಗಳನ್ನು ಹಿಡಿದಿಡಬಹುದಾಗಿತ್ತು.
ನಾನು ಹೇಳಿದಂತೆ, ನಮ್ಮಂದಿಗೇ, ನಮಗಿಂತ ಜಾಸ್ತಿ ಸುಟಿಯಾಗಿ, ದಾಷ್ಟೀಕದಿಂದ ನಮ್ಮ ಮನೆಯಲ್ಲಿ ಓಡಾಡಿಕೊಂಡು ಸಾಂಸಾರ ನಡೆಸುತಿದ್ದ ಅಳಿಲುಗಳು ಒಮ್ಮೆ ನನ್ನನ್ನು ಪೇಚಿಕೆ ಸಿಲುಕಿಸಿತ್ತು.
ಮುಂಚಿನಿಂದಲೂ ನನಗೆ ಪ್ರಾಣಿಗಳೆಂದರೆ ಅಷ್ಟಕಷ್ಟೆ. ಇಷ್ಟ ಇಲ್ಲ, ಎನ್ನುವುದಕ್ಕಿಂತ ಭಯ ಜಾಸ್ತಿ. ಟ್ರಾನ್ಸಫರ್ ಆದಾಗ ಇಲ್ಲಿಂದ ಸಾಮಾನುಗಳನ್ನು ತುಂಬಿಕೊಂಡು ಹೋಗಿದ್ದ ಮರದ ಪೆಟ್ಟಿಗೆಗಳೆರಡನ್ನು ಬಾಲ್ಕನಿಯಲ್ಲಿ ಇಟ್ಟಿದ್ದೆವು. ಅವುಗಳನ್ನು ಈ ಅಳಿಲುಗಳು ಬೆಚ್ಚನೆಯ ಬೆಡ್ ರೂಂ ಮಾಡಿಕೊಂಡು ಬಿಟ್ಟಿದ್ದವು.
ಒಮ್ಮೆ ನನ್ನವರನ್ನು ಅಹಮದಾಬಾದಿಗೆ ಹದಿನೈದು ದಿನಗಳ ಟ್ರೈನಿಂಗಿಗೆಂದು ಹಾಕಿದ್ದರು. ದಿನಾ ಬೆಳಗ್ಗೆ ಬೇಗ ಹೊರಟು ರಾತ್ರಿ ಹಿಂದಿರುಗುತ್ತಿದ್ದರು. ಅದೇ ಸಮಯದಲ್ಲಿ ಈ ಅಳಿಲು ಪೆಟ್ಟಿಗೆಯಲ್ಲಿ ಮರಿಗಳನ್ನು ಹಾಕಿತ್ತು ಅನ್ನಿಸುತ್ತೆ, ಚಿಕ್, ಚಿಕ್, ಚೀಂ, ಚೀಂ ಎಂದು ಓಡಾಡಿಕೊಂಡು ನನ್ನನ್ನೇ ಹೆದರಿಸುತಿತ್ತು. ಒಂದೆರಡು ದಿನಗಳಲ್ಲಿ ಏನೋ ವಾಸನೆ ಬರತೊಡಗಿತು. ನನಗೋ ಹೋಗಿ ನೋಡಲು ಭಯ, ಬರಬರುತ್ತಾ ವಾಸನೆಯ ಘಾಡತೆ ಜೋರಾಗತೊಡಗಿತು. ರಾತ್ರಿ ಇವರು ಬರುವ ವೇಳೆಗೆ ಛಳಿ ಜಾಸ್ತಿಯಾಗಿ ಇರುತ್ತಿದುದ್ದರಿಂದ ಬಾಗಿಲು ಹಾಕಿಬಿಟ್ಟಿರುತಿತ್ತು. ಬೆಳಗ್ಗೆಯಿಂದ ಓಡಾಡಿ, ಪ್ರಯಾಣ ಮಾಡಿ ಸುಸ್ತಾಗಿ ಬಂದು ಮಲಗಿರುತ್ತಿದ್ದ ಇವರಿಗೆ ಅಷ್ಟಾಗಿ ವಾಸನೆ ತಟ್ಟುತ್ತಿರಲಿಲ್ಲ. ಅವರ ಸುಸ್ತಾದ ಮುಖ ನೋಡಿದಾಗ, ನನಗೂ ನನ್ನವರಿಗೆ ಈ ಅಳಿಲುಗಳ ಅಳಲನ್ನು ನಿವಾರಿಸಲು ಹೇಳಲು ಮನಸ್ಸು ಬರುತ್ತಿರಲಿಲ್ಲ. ಒಂದೆರಡು ಸಲ ಸೂಕ್ಷ್ಮವಾಗಿ ಹೇಳಿದರೆ ಇವರು ಕಿವಿಯ ಮೇಲೇ ಹಾಕಿಕೊಳ್ಳಲಿಲ್ಲ. ಮೂರನೆಯ ದಿನದ ಹೊತ್ತಿಗೆ ಮನೆಯಲ್ಲಿ ಇರಕ್ಕಾಗದಷ್ಟು ಕೆಟ್ಟ ವಾಸನೆ. ಸರಿ, ರಾತ್ರಿ ಇವರು ಬಂದ ತಕ್ಷಣ ಊಟ ಕೊಟ್ಟು, ಹಾಲು ಬಿಸಿ ಮಾಡಿಕೊಟ್ಟು ಅವರು ಮಲಗಲು ಹವಣಿಸುತ್ತಿದ್ದ ವೇಳೆಗೆ ಮೆತ್ತಗೆ ನಾನು ಹೇಳಿದೆ – ರೀ, ಕೆಳಗಿನ ಮನೆಯ ದೇಸಾಯಿಯವರು ಇಂದು ಬಂದು ಹೇಳಿದರು, ʼನಮ್ಮ ಮನೆಗೆ ಮೇಲಿನಿಂದ ಏನೋ ಕೆಟ್ಟ ವಾಸನೆ ಬರುತ್ತಿದೆ ನೋಡಿʼ ಅಂದರು. ಅವರು ಬಂದಾಗ ಬಾಲ್ಕನಿಯ ಬಾಗಿಲು ತೆಗೆದಿತ್ತು, ʼಹಾಂ, ಇದೇ ವಾಸನೆ, ಇಲ್ಲಿಯೇ ಇನ್ನೂ ಜೋರಾಗಿ ಬರುತ್ತಿದೆ, ಏನೋ ನೋಡಿ ಕ್ಲೀನ್ ಮಾಡಿಸಿʼ ಎಂದು ಖಾರವಾಗಿ ಹೇಳಿ ಹೋದರು – ಅಂದೆ.
ನನ್ನ ಮಾತಿಗೆ ಕಿವಿಯನ್ನೇ ಕೊಡದಿದ್ದ ನನ್ನವರು, ಸುಸ್ತಾಗಿದ್ದರೂ ಪೆಟ್ಟಿಗೆಯನ್ನೆಲ್ಲಾ ತೆಗೆದು ಕ್ಲೀನ್ ಮಾಡಿ, ಒಂದು ಸತ್ತಿದ್ದ ಪುಟ್ಟ ಅಳಿಲು ಮರಿಯನ್ನು ತೆಗೆದು ಬಿಸಾಕಿ ಸ್ನಾನ ಮಾಡಿ ಮಲಗಿದರು. ಇಂದಿನ ತನಕ ನಾನು ಹೇಳಿದ್ದು, ಹಸೀ ಸುಳ್ಳು, ಅದು ನಾನು ವಾಸನೆಯಿಂದ ಮುಕ್ತವಾಗಲು ಮಾಡಿದ ಉಪಾಯ ಎಂದು ನನ್ನವರಿಗೆ ತಿಳಿದೇ ಇಲ್ಲ, ಇಂದು ಅಳಿಲು ಉಂಟುಮಾಡಿದ ಅಳಲಿನ ಗುಟ್ಟು ರಟ್ಟಾಗಿದೆ.
ಆಯ್ತು, ಅದಾಯಿತು, ಹತ್ತಾರು ವರುಷಗಳು ಕಳೆದವು. ನನ್ನ ಮೊಮ್ಮಗಳು ಹುಟ್ಟಿದಳು. ಅವರ ಅಜ್ಜಿ (ನನ್ನ ಮಗಳ ಅತ್ತೆಯವರು) ಮೊಮ್ಮಗಳು ಸ್ಕೂಲಿನಿಂದ ಬಂದ ಕೂಡಲೇ ಮಧ್ಯಾನ್ಹ ಹನ್ನೆರಡು ಗಂಟೆಗೆ ಊಟ ಮಾಡಿಸುತ್ತಿದ್ದರು. ಮಿಕ್ಕ ಒಂದೆರಡು ತುತ್ತುಗಳನ್ನು ಬಾಲ್ಕನಿಯಲ್ಲಿ ಇಟ್ಟಿದ್ದ ತಟ್ಟೆಯಲ್ಲಿ ಹಾಕಿರುತ್ತಿದ್ದರು. ಒಂದೆರಡು ದಿನಗಳಲ್ಲೇ ಅಲ್ಲಿಗೂ ಒಂದೆರಡು ಅಳಿಲುಗಳು ಬಂದು ಇಟ್ಟಿದ್ದ ಊಟ ತಿಂದು ಹೋಗುತ್ತಿದ್ದವು. ನನ್ನ ಪುಟ್ಟ ಮೊಮ್ಮಗಳಿಗೆ ಅದನ್ನು ನೋಡುವುದೇ ಒಂದು ಸೋಜಿಗ. ಆ ಅಳಿಲುಗಳು ಎಷ್ಟು ಸಮಯ ಪರಿಪಾಲನೆ ಮಾಡುತ್ತಿದ್ದವು ಅಂದರೆ, ಅವುಗಳಿಗೋಸ್ಕರವಾದರೂ, ರಜಾ ದಿನಗಳಲ್ಲಿಯೂ ಸಮಯಕ್ಕೆ ಸರಿಯಾಗಿ ಮೊಮ್ಮಗಳಿಗೆ ಊಟ ಮಾಡಿಸಬೇಕಿತ್ತು. ಹಾಗೆಯೇ ಅಳಿಲುಗಳಿಗಾಗಿ ಎಂದೆರಡು ತುತ್ತು ಜಾಸ್ತಿಯೇ ಕಲಸಿ ಇಡುತ್ತಿದ್ದರು. ಹೀಗಿತ್ತು ನನ್ನ ಮೊಮ್ಮಗಳ ಮತ್ತು ಅವರ ಮನೆಯ ಅಳಿಲುಗಳ ಒಡನಾಟ.
ನಂತರದ ದಿನಗಳಲ್ಲಿ ನಾನು ಮಗನ ಮನೆಗೆ ಅಮೆರಿಕೆಯ ವಾಷಿಂಗಟನ್ ಡಿ ಸಿ ಗೆ ಹೋದಾಗ, ಅಲ್ಲಿಯೂ ಅಳಿಲುಗಳದೇ ಭರಾಟೆಯ ಓಡಾಟ. ಆದರೆ ಅಲ್ಲಿಯವುಗಳು ಗಢವಾ ಅಳಲುಗಳು. ಎಷ್ಟು ದೊಡ್ಡದಾಗಿ ಇರುತ್ತಿದ್ದವು ಅಂದರೆ, ಮೊದಲಿಗೆ ನಾನು ಅದೇನೋ ಬೇರೆಯದೇ ಪ್ರಾಣಿಯೇನೋ ಎಂದುಕೊಂಡು ಬಿಟ್ಟೆ. ನನ್ನ ಮಗ – ಇಲ್ಲಾಮ್ಮ, ಸರಿಯಾಗಿ ನೋಡು, ಅಳಿಲುಗಳೇ ಅವು – ಎಂದ. ನಮ್ಮ ಭಾರತದ ಅಳಿಲುಗಳು ಎಷ್ಟು ಪುಟ್ಟದಾಗಿ, ಮುದ್ದಾಗಿ ಪುಳಕ್ ಪುಳಕ್ ಎಂದು ಓಡಾಡಿಕೊಂಡಿರುತ್ತವೆ. ಆದರೆ ಅಮೆರಿಕೆಯ ಅಳಿಲುಗಳು ಮಾತ್ರ ದೊಡ್ಡದಾಗಿ ಬುಳಕ್ ಬುಳಕ್ ಎಂದು ಓಡಾಡುತ್ತಾ ನನ್ನಂತಹವರು ಹೆದರಿಕೊಳ್ಳುವಂತೆ ಇರುತ್ತವೆ. ಎಲ್ಲಕ್ಕಿಂತ ಮುಖ್ಯವಾದ ಮತ್ತೊಂದು ವ್ಯತ್ಯಾಸ ಎಂದರೆ, ನಮ್ಮ ಪುರಾಣಪುರುಷ ಶ್ರೀರಾಮನಿಂದ ಪ್ರೀತಿ ಮಾಡಿಸಿಕೊಂಡು ಬೆನ್ನಮೇಲೆ ಪಡೆದ ಮೂರು ಬಿಳಿಯ ಗೆರೆಗಳು ಅಮೆರಿಕೆಯ ಅಳಿಲುಗಳ ಮೇಲೆ ಇಲ್ಲವೇ ಇಲ್ಲ! ಅದು ಸಹಜವೂ ಹೌದು ತಾನೆ? ರಾಮಸೇತು ಕಟ್ಟುವಾಗ ಅಳಿಲ ಸೇವೆ ಮಾಡಿ ಶ್ರೀರಾಮನ ಪ್ರೀತಿಗೆ ಪಾತ್ರವಾದದ್ದು ಭಾರತದ ಅಳಿಲುಗಳೇ ತಾನೇ? ಅದಕ್ಕೇ ಅವುಗಳ ಮೇಲೆ ಶ್ರೀರಾಮನ ಬೆರಳುಗಳ ಪ್ರೀತಿಯ ಗೆರೆಗಳು ಇವೆ ಅಲ್ಲವೇ?
ಜೀವಶಾಸ್ರ್ತ ತಜ್ಞರುಗಳು ಹೇಳಬಹುದೇನೋ – ಅಳಿಲುಗಳಲ್ಲಿಯೂ ಹಲವಾರು ಪ್ರಭೇದಗಳಿರುತ್ತವೆ, ಭಾರತದಲ್ಲಿರುವುದು, ಅಮೆರಿಕೆಯಲ್ಲಿರುವುದು ಎರಡೂ ಅಳಿಲುಗಳೇ ಆದರೂ ಪ್ರಭೇದಗಳು ವಿಭಿನ್ನವಾಗಿರಬಹುದಾದ್ದರಿಂದ ಬೆನ್ನ ಮೇಲಿನ ರೇಳೆಗಳು ಇರುವುದೂ, ಇಲ್ಲದಿರುವುದೂ ನಿರ್ಧಾರವಾಗುತ್ತದೆ ಎಂದರೂ ನನಗೇನೋ ನಮ್ಮ ಶ್ರೀರಾಮನ ಪ್ರೀತಿಗೆ ಪಾತ್ರವಾದದ್ದು ಭಾರತದ ಅಳಿಲುಗಳೇ, ಆದ್ದರಿಂದಲೇ ಅವುಗಳ ಮೇಲೆ ಮಾತ್ರ ಶ್ರೀರಾಮನು ನೇವರಿಸಿದ ಬೆರಳುಗಳಿಂದ ಉಂಟಾದ ಗೆರೆಗಳಿವೆ, ಎಂಬುದನ್ನೇ ನಂಬಲು ಹೆಚ್ಚು ಇಷ್ಟವಾಗುತ್ತದೆ, ನೀವೇನಂತೀರಿ?
-ಪದ್ಮಾ ಆನಂದ್, ಮೈಸೂರು
ಅಳಲಿನ ಅಳಲು ಅವುಗಳ ಜೊತೆ ಒಡನಾಟ ದೇಶ ಪ್ರದೇಶದಲ್ಲಿನ ಅಳಿಲಿಗಳಲ್ಲಿ ಇರುವ ವ್ಯತ್ಯಾಸ ಅಂತಿಮ ವಾಗಿ ಅದಕ್ಕೆ ನಮ್ಮದೇಶದಲ್ಲಿನ ಮಹತ್ವದ ವಿಚಾರ.. ಎಲ್ಲವನ್ನು ಪುಟ್ಟ ಲೇಖನಲ್ಲಿ ಪಡಿಮೂಡಿಸಿರುವ ರೀತಿ ಚೆನ್ನಾಗಿದೆ… ಪದ್ಮಾ ಮೇಡಂ..
ಪ್ರಕಟಿಸಿದ “ಸುರಹೊನ್ನೆ” ಗೆ ಧನ್ಯವಾದಗಳು.
ಓದಿ ಪ್ರತಿಕ್ರಿಯೆ ನೀಡಿದ ತಮಗೆ ಧನ್ಯವಾದಗಳು.
ಅಳಿಲ ಸೇವೆ; ಮಳಲ ಭಕ್ತಿ ಎಂಬುದೊಂದು ರೂಪಕ, ನಮ್ಮ ಪರಂಪರೆಯ ದ್ಯೋತಕ.
ಜೀವಶಾಸ್ತ್ರ ಏನಾದರೂ ಹೇಳಲಿ
ಭಾವಶಾಸ್ತ್ರ ಮುನ್ನೆಲೆಗೆ ಬರಲಿ !
ಅಳ್ಳಿಕುಂಚ ಎಂದೇ ಗ್ರಾಮೀಣ ಭಾಗಗಳಲ್ಲಿ ಕರೆಯಲ್ಪಡುವ ಈ ಪುಟ್ಟ ಭಾವಜೀವಿಯ
ಲೇಖನ ಮನಸೂರೆಗೊಂಡಿತು. ನಿಮ್ಮೊಂದಿಗೇ ಮಾತಾಡಿದಂತಾಯ್ತು. ಅಲ್ಲಲ್ಲ,
ನೀವು ನಮ್ಮೊಂದಿಗೆ ಮಾತಾಡಿದಂತಾಯ್ತು. ಧನ್ಯವಾದ ಮೇಡಂ.
ನಿಮ್ಮ ಸದಭಿಪ್ರಾಯಕ್ಕೆ ವಂದನೆಗಳು ಸರ್.
ಚೆನ್ನಾಗಿದೆ ಲೇಖನ
ತಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು
ಅಳಿಲು ಪುರಾಣ, ಅದಕ್ಕಾಗಿ ನೀವು ಆಡಿದ ನಾಟಕ ಎಲ್ಲಾ ಸಖತ್ತಾಗಿದೆ ಮೇಡಂ…ಧನ್ಯವಾದಗಳು.
ತಮ್ಮ ಪ್ರತಿಕ್ರಿಯೆಗಾಗಿ ವಂದನೆಗಳು.
ಮೊದಲನೆಯಾಗಿ ಲೇಖನದ ಶೀರ್ಷಿಕೆ ತುಂಬಾ ಇಷ್ಟವಾಯಿತು. ಚೀಂವ್ ಚೀಂವ್ ಅಳಿಲುಗಳ ತುಂಟಾಟವನ್ನೂ, ಅಳಿಲಿಗಾಗಿ ನೀವು ಸೃಷ್ಟಿಸಿದ ಸಂಭಾಷಣೆಯನ್ನೂ ಸೊಗಸಾಗಿ ಚಿತ್ರಿಸಿದ್ದೀರಿ.
ತಮ್ಮ ಮೆಚ್ಚುಗೆಗಾಗಿ ವಂದನೆಗಳು.
ಸರಳ ಸುಂದರ ನಿರೂಪಣೆ
ಮೆಚ್ಚುಗೆಯ ಪ್ರತಿಕ್ರಿಯೆಗಾಗಿ ಧನ್ಯವಾದಗಳು.