ಭಾರತದ ಮೊದಲ ಉಪಗ್ರಹದ ಸೂತ್ರಧಾರ..
ಭಾರತೀಯ ಬಾಹ್ಯವಿಜ್ಞಾನ ಸಂಶೋಧನಾ ಸಂಸ್ಥೆ_ಇಸ್ರೋಗೆ 1984-1994ರ ವರೆಗೆ ಹತ್ತು ವರ್ಷಗಳ ಕಾಲ ಅಧ್ಯಕ್ಷರಾಗಿದ್ದು ಭಾರತೀಯ ಬಾಹ್ಯಾಕಾಶ ಯೋಜನೆಗಳಿಗೆ ಮಾರ್ಗದರ್ಶನ ನೀಡಿ ಸಂಸ್ಥೆಯನ್ನು ಬೆಳಸಿದವರು ‘ಉಪಗ್ರಹ ಪಿತಾಮಹ’ ಎಂದೇ ಪ್ರಖ್ಯಾತರಾಗಿದ್ದ ಡಾ.ಉಡುಪಿ ರಾಮಚಂದ್ರರಾವ್. ಜನಸಾಮಾನ್ಯರಿಗೆ ಪ್ರೊ.ಯು.ಆರ್.ರಾವ್ ಎಂದೇ ಪರಿಚಿತರಾಗಿರುವ ಡಾ.ರಾವ್ ಭಾರತದ ಮೊದಲ ಉಪಗ್ರಹ ‘ಆರ್ಯಭಟ’ದ ಉಡಾವಣೆಯ ಜವಾಬ್ದಾರಿಯನ್ನು ಹೊತ್ತು ಯಶಸ್ಸು ಕಂಡವರು. ಅಂದಿನಿಂದ ಇತ್ತೀಚಿನ ‘’ಮಂಗಳಯಾನ’ ದ ವರೆಗೂ ಸತತವಾಗಿ ಸುಮಾರು ಆರು ದಶಕಗಳು ಇಸ್ರೋ ಸಂಸ್ಥೆಯ ದಾರಿ ದೀಪವಾಗಿದ್ದವರು ಅಪ್ಪಟ ಕನ್ನಡಿಗರು ಎನ್ನುವುದು ಕನ್ನಡ ಜನತೆಗೆ ಹೆಮ್ಮೆಯ ವಿಷಯ.
ಕರ್ನಾಟಕದ ಪ್ರಸಿದ್ಧ ಪುಣ್ಯಕ್ಷೇತ್ರ ಉಡುಪಿಯ ಹತ್ತಿರದ ಮಾರ್ಪಳ್ಳಿಯಲ್ಲಿ ಮಾರ್ಚಿ 10, 1932 ರಲ್ಲಿ ಕೃಷಿಕ ಕುಟುಂಬದಲ್ಲಿ ಜನಿಸಿದರು. ರಾಮಚಂದ್ರರಾವ್ ಅವರ ತಂದೆ ಲಕ್ಷ್ಮೀನಾರಾಯಣರಾವ್ ಹಾಗೂ ತಾಯಿ ಕೃಷ್ಣವೇಣಿಯಮ್ಮ. ಅದಮಾರುವಿನಲ್ಲಿ ಅಕ್ಷರಾಭ್ಯಾಸ ಪ್ರಾರಂಭಿಸಿದ ರಾಮಚಂದ್ರರವರು ಉಡುಪಿಯಲ್ಲಿ ಪ್ರೌಢಶಾಲಾ ವಿದ್ಯಾಭ್ಯಾಸ ಮುಗಿಸಿದರು. ಅನಂತರ ಆಂಧ್ರ ಪ್ರದೇಶದ ಅನಂತಪುರದಲ್ಲಿ ಬಿ.ಎಸ್ಸಿ ,, ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿಗಳನ್ನು ಗಳಿಸಿದರು. ಅದೇ ಸಮಯದಲ್ಲಿ ಮತ್ತೊಬ್ಬ ಮೇರು ವಿಜ್ಞಾನಿ ಸಿ.ಎನ್.ಆರ್ ರಾವ್ ಅವರೂ ಬನಾರಸ್ ವಿಶ್ವವಿದ್ಯಾಲಯದಲ್ಲಿಯೇ ಉನ್ನತ ವ್ಯಾಸಂಗ ಮಾಡುತ್ತಿದ್ದು, ಇವರಿಬ್ಬರೂ ಒಂದೇ ವಿದ್ಯಾರ್ಥಿನಿಲಯದಲ್ಲಿದ್ದರಂತೆ! ಮುಂದೆ ಇವರಿಗೆ ಗುರುವಾಗಿ ಡಾಕ್ಟರೇಟ್ ಪದವಿಗೆ ಮಾರ್ಗದರ್ಶನ ಮಾಡಿದವರು ಉತ್ಸಾಹದ ಚಿಲುಮೆಯಂತಿದ್ದ, ಅಂತಾರಾಷ್ಟ್ರೀಯ ಮಟ್ಟದಲ್ಲಿ ‘ಭಾರತದ ಬಾಹ್ಯಾಕಾಶ ಯೋಜನೆಯ ಜನಕ’ ಎಂದೇ ಹೆಸರು ಗಳಿಸಿದ್ದ ಪದ್ಮವಿಭೂಷಣ ಡಾ.ವಿಕ್ರಮ್ ಸಾರಾಭಾಯ್. ಇವರ ಮಾರ್ಗದರ್ಶನ ರಾಮಚಂದ್ರರಾವ್ ಅವರ ಬಾಹ್ಯಾಕಾಶ ಅಧ್ಯಯನದಲ್ಲಿ ಹೊಸ ಅಧ್ಯಾಯವನ್ನೇ ತೆರೆಯಿತು. ಯಾವುದೇ ಅಡೆತಡೆ ಇಲ್ಲದೆ ವಿಶ್ವಕಿರಣಗಳ ಬಗ್ಗೆ ಅಧ್ಯಯನ ನಿರತರಾದ ಯು.ಆರ್ ರಾವ್ ೧೯೬೦ರಲ್ಲಿ ಪಿ.ಎಚ್.ಡಿ ಪದವಿ ಗಳಿಸಿದರು. ಮುಂದೆ ಅವರು ಅಮೆರಿಕದ ಮಸ್ಸಾಚ್ಯುಸೆಟ್ ಮತ್ತು ಟೆಕ್ಸಾಸ್ ವಿಶ್ವವಿದ್ಯಾಲಯಗಳಲ್ಲಿ ಪ್ರಾಧ್ಯಾಪಕರಾಗಿದ್ದರು.
ಡಲ್ಲಾಸ್‍ನ ಯೂನಿವರ್ಸಿಟಿ ಆಫ್ ಟೆಕ್ಸಾಸ್ನಲ್ಲಿ 1963 ರಲ್ಲಿ ಬೋಧಕರಾಗಿ ನೇಮಕಗೊಂಡ ನಂತರ ಪ್ರೊ.ರಾವ್ ಬಾಹ್ಯಾಕಾಶದ ಆಳ ಅನ್ವೇಷಕಗಳಾಗಿ (ಡೀಪ್ ಸ್ಪೇಸ್ ಪ್ರೋಬ್ಸ್) ಉಡ್ಡಯಣೆಗೊಂಡ ‘ಪಯನೀಯರ್ – ೫, ೬ ಹಾಗೂ ೭’ ಮತ್ತು ‘ಎಕ್ಸ್‍ಪ್ಲೋರರ್ – ೩೪ ಹಾಗೂ ೪೧’ ಉಪಗ್ರಹಗಳ ನಿರ್ಮಾಣದಲ್ಲಿ ಪ್ರಧಾನ ಪಾತ್ರ ವಹಿಸಿದರು. ‘ಬೆಳೆಯ ಸಿರಿ ಮೊಳೆಯಲ್ಲಿಯೇ’ ಎನ್ನುವ ಗಾದೆಯಂತೆ ಭಾರತದ ತರುಣ ವಿಜ್ಞಾನಿಯೊಬ್ಬರು ಸೌರ ಮಾರುತದ ನಿರಂತರತೆ ಮತ್ತು ಭೂಕಾಂತೀಯತೆಯ ಮೇಲೆ ಅದರ ಪ್ರಭಾವವನ್ನು ದೃಢಪಡಿಸಿದ ಮೊದಲ ವಿಜ್ಞಾನಿ ಎನ್ನುವ ಹೆಗ್ಗಳಿಕೆಗೂ ಪಾತ್ರರಾದರು. ಸೌರ ಮಾರುತಗಳ ಸತತ ಚಿಮ್ಮುವಿಕೆ ಹಾಗೂ ಅವುಗಳ ಗುಣವಿಶ್ಲೇಷಣೆ ಕುರಿತು ರಾವ್ ಅವರು ನಡೆಸಿದ ಅಧ್ಯಯನಗಳು ನಾಸಾದ ಜೆಟ್ ಪೊಪಲ್ಷನ್ ಲ್ಯಾಬೊರೇಟರಿಯ ವಿಜ್ಞಾನಿಗಳ ಗಮನ ಸೆಳೆದವು. ಮ್ಯಾರಿನರ್ ೨ ಅವಲೋಕನಗಳ ಬಗ್ಗೆ ವಿಸ್ತೃತ ಅಧ್ಯಯನವನ್ನು ಕೈಗೊಂಡು, ಸೌರ ವಿಶ್ವಕಿರಣದ ವಿದ್ಯಮಾನಗಳು ಮತ್ತು ಗ್ರಹಗಳ ನಡುವಿನ ವಿದ್ಯುತ್ಕಾಂತೀಯ ಸ್ಥಿತಿಯ ಬಗ್ಗೆ ಸಾಕಷ್ಟು ಜ್ಞಾನ ಗಳಿಸಿದ ನಂತರ 1966ರಲ್ಲಿ ತಾಯ್ನಾಡಿಗೆ ಹಿಂದಿರುಗಿದ್ದು ಭಾರತದ ಸೌಭಾಗ್ಯವೆಂದೇ ಹೇಳಬಹುದು. ಇವರನ್ನು ಇಸ್ರೋ ಸಂಸ್ಥೆಗೆ ಆಯ್ಕೆ ಮಾಡಿದ ವಿಕ್ರಮ್ ಸಾರಾಭಾಯಿ ದೇಶಕ್ಕೆ ಅನರ್ಘ್ಯ ರತ್ನವನ್ನೇ ಅರ್ಪಿಸಿದ್ದಾರೆ.
ಪ್ರೊ.ರಾವ್ ದೇಶವನ್ನು ಉಡ್ಡಯಣೆ ನೌಕೆಗಳ ನಿರ್ಮಾಣದಲ್ಲೂ ಸ್ವಾವಲಂಬಿಯಾಗಿಸಲು ಇಟ್ಟ ದಿಟ್ಟ ಹೆಜ್ಜೆ ಕ್ಷಿಪಣಿ (ರಾಕೆಟ್) ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವತ್ತ ತಿರುಗಿತು. ನಮ್ಮ ಉಪಗ್ರಹಗಳನ್ನು ಪರದೇಶಗಳ ಉಡ್ಡಯಣ ಕೇಂದ್ರಗಳಿಂದ ಉಡಾವಣೆ ಮಾಡುವುದಕ್ಕಿಂತ ನಮ್ಮ ದೇಶದಿಂದಲೇ ಉಡಾವಣೆ ಮಾಡುವ ಉದ್ದೇಶದಿಂದ ಕ್ಷಿಪಣೆ ಯೋಜನೆಯನ್ನು ಪ್ರಾರಂಭಿಸಿದರು. ಎಸ್ಎಲ್‍ವಿ ಮತ್ತು ಪಿಎಸ್ಎಲ್‍ವಿಗಳು ಆರಂಭದಲ್ಲಿ ವೈಫಲ್ಯ ಕಂಡವು. ಅವರು ಎಲ್ಲಿ ತಪ್ಪಾಗಿದೆ ಎಂದು ತರ್ಕಿಸಿ, ಆಗಿರುವ ತಪ್ಪನ್ನು ಸರಿಪಡಿಸುವ ಬಗ್ಗೆ ತಮ್ಮೊಂದಿಗೆ ಕೆಲಸ ಮಾಡುವವರನ್ನೂ ಹುರಿದುಂಬಿಸುತ್ತಿದ್ದರು. ರಾವ್ ಅವರನ್ನು ಹತ್ತಿರದಿಂದ ಬಲ್ಲವರು ಹೇಳುವ ಪ್ರಕಾರ, ಸೋಲು ಅವರನ್ನು ಎದೆಗುಂದಿಸುತ್ತಿರಲಿಲ್ಲ. ಅವರ ಈ ನಡೆಯಿಂದಾಗಿ ೧೯೯೨ರಲ್ಲಿ ಎಎಸ್ಎಲ್‍ವಿ ಕ್ಷಿಪಣಿಯನ್ನು ಯಶಸ್ವಿಯಾಗಿ ಉಡಾವಣೆ ಮಾಡಲಾಯಿತು. ಮುಂದೆ ಪಿಎಸ್ಎಲ್‍ವಿಯನ್ನು ಯಶಸ್ವಿಯಾಗಿ ಉಡ್ಡಯನ ಮಾಡಲು ಸಾಧ್ಯವಾಯಿತು. ಯು.ಆರ್.ರಾವ್ ಅವರ ಅಧ್ಯಕ್ಷತೆಯ ಅವಧಿಯಲ್ಲಿ ಇಸ್ರೋ ಪ್ರಾಯೋಗಿಕ ಉಡ್ಡಯಣಗಳ ಹಂತದಿಂದ ಪೂರ್ಣ ಸಾಮರ್ಥ್ಯದ ಬಾಹ್ಯಾಕಾಶ ವಹಿವಾಟಿನ ಸಂಸ್ಥೆಯಾಗಿ ಮಾರ್ಪಾಡಾಯಿತು.
ಬಾಹ್ಯಾಕಾಶ ವಿಜ್ಞಾನದಲ್ಲಿ ಮುಂದಡಿ ಇಟ್ಟಿರುವ ಕೆಲವೇ ಕೆಲವು ದೇಶಗಳಲ್ಲಿ ಇಂದು ಭಾರತ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದೆ. ಭಾರತ ಮಿತವ್ಯಯದಲ್ಲಿಯೇ ನವನವೀನ ಸಾಧನೆಗಳನ್ನು ಮಾಡಿರುವುದಕ್ಕೆ ಕಾರಣಕರ್ತರಾದವರೆಂದರೆ ತ್ರಿಮೂರ್ತಿಗಳಾದ ವಿಕ್ರಮ್ ಸಾರಾಬಾಯಿ, ಪ್ರೊ.ಸತೀಶ್ ಧವನ್ ಮತ್ತು ಪ್ರೊ.ಯು. ಆರ್.ರಾವ್ ಎನ್ನುವುದರಲ್ಲಿ ಸಂದೇಹವೇ ಇಲ್ಲ.
ಮುಂದೆ ಧ್ರುವೀಯ ಉಪಗ್ರಹ ಉಡಾವಣಾ ಕ್ಷಿಪಣಿ (PSLV) ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿ, ೮೫೦ ಕಿಲೋ ಗ್ರಾಮ್ ತೂಕದ ಉಪಗ್ರಹವನ್ನು 1995 ರಲ್ಲಿ ಧ್ರುವೀಯ ಕಕ್ಷೆಗೆ ರವಾನಿಸುವುದರಲ್ಲಿಯೂ ರಾವ್ ಅವರ ನಾಯಕತ್ವವಿತ್ತು. ಇಸ್ರೋ ಸಂಸ್ಥೆಯ ಇನ್ಸಾಟ್ ಯೋಜನೆಗಳು 1980-1990 ರ ದಶಕಗಳಲ್ಲಿ ದೇಶದ ಮೂಲೆಮೂಲೆಗಳಿಗೆ ಸಂಪರ್ಕ ಒದಗಿಸಿದ್ದು, ಇವರ ಆಡಳಿತದ ಸಮಯದಲ್ಲಿ ಮಿಂಚಿನ ವೇಗದಲ್ಲಿ ಅಭಿವೃದ್ಧಿಗೊಂಡು, ದೇಶದ ಸರ್ವತೋಮುಖ ಪ್ರಗತಿಗೆ ಕಾರಣವಾದವು.
ದೇಶದ ಯಾವುದೋ ಮೂಲೆಯ ಹಳ್ಳಿಯಲ್ಲಿಯೂ ದೂರವಾಣಿ ಕರೆಮಾಡಲು ಸಾಧ್ಯವಾಯಿತು. ಬಹುಮುಖ್ಯವಾಗಿ ಮಾಹಿತಿ ತಂತ್ರಜ್ಞಾನದ ಮುನ್ನಡೆಗೂ ಬಾಹ್ಯಾಕಾಶ ತಂತ್ರಜ್ಞಾನದ ಕೊಡುಗೆಯೇ ಕಾರಣ. ಭೂಸಮಕಾಲಿಕ ಉಡ್ಡಯಣಾ ಕ್ಷಿಪಣಿ (GSLV) ತಯಾರಿಸುವ ಸಮಯದಲ್ಲಿ ಅದಕ್ಕೆ ಅಗತ್ಯವಾದ ಕ್ರಯೋಜನಿಕ್ ಎಂಜಿನ್ ನೀಡಲು ಒಪ್ಪಿಗೆ ನೀಡಿದ್ದ ದೇಶ ಇದ್ದಕ್ಕಿದ್ದಂತೆ ಹಿಂದೆ ಸರಿಯಿತು. ಯು.ಆರ್ ರಾವ್ ಸ್ವಲ್ಪವೂ ಎದೆಗುಂದಲಿಲ್ಲ. ಭಾರತದಲ್ಲಿಯೇ ಅಂತಹ ಎಂಜಿನ್ ತಯಾರಿಸಲು ಮುಂದಾಗಿ, ಕ್ರಯೋಜನಿಕ್ ಎಂಜಿನ್ಗಳನ್ನು ತಯಾರಿಸುವುದರಲ್ಲಿಯೂ ಯಶಸ್ವಿಯಾದರು.
ಇವರ ಸಾಧನೆಗಳಿಗೆ ೧೯೭೬ರಲ್ಲಿ ಭಾರತ ಸರ್ಕಾರದಿಂದ ಪದ್ಮಭೂಷಣ ಪ್ರಶಸ್ತಿ ದೊರೆಯಿತು. ೧೯೮೪ರಲ್ಲಿ ಇಸ್ರೋ ಸಂಸ್ಥೆಯ ಅಧ್ಯಕ್ಷ ಸ್ಥಾನ ಇವರನ್ನು ಅರಸಿ ಬಂದದ್ದರಲ್ಲಿ ಯಾವುದೇ ಆಶ್ಚರ್ಯವಿಲ್ಲ. ೧೯೯೪ರ ವರೆಗೂ ಇಸ್ರೋ ಸಂಸ್ಥೆಯಲ್ಲಿಯೇ ಸಕ್ರಿಯರಾಗಿದ್ದರು. ೧೯೮೪ರಲ್ಲಿಯೇ ಭಾರತ ತನ್ನ ಪ್ರಪ್ರಥಮ ಗಗನಯಾತ್ರಿ ಸ್ಕ್ವಾಡ್ರನ್ ಲೀಡರ್ ರಾಕೇಶ್ ಶರ್ಮರವರನ್ನು ಬಾಹ್ಯಾಕಾಶಕ್ಕೆ ಕಳಿಸಿತು. ಭಾರತದ ಮಾಜಿ ರಾಷ್ಟ್ರಪತಿ ಭಾರತ ರತ್ನ ಎ.ಪಿ.ಜೆ ಅಬ್ದುಲ್ ಕಲಾಮ್ ಅವರೂ ಇದೇ ಸಮಯದಲ್ಲಿ ಇಸ್ರೋ ಸಂಸ್ಥೆಯಲ್ಲಿದ್ದರೆನ್ನುವುದು ಗಮನಾರ್ಹ. ಸೋಲುಗಳನ್ನು ಗೆಲುವಿನ ಮೆಟ್ಟಿಲೆಂದೇ ಭಾವಿಸುತ್ತಿದ್ದ ರಾವ್ ಅವರು ಅನೇಕ ಯುವವಿಜ್ಞಾನಿಗಳಿಗೆ ಪ್ರೇರಣೆ. ಉಪಗ್ರಹ ವಿನ್ಯಾಸ, ನಿರ್ಮಾಣ ಮತ್ತು ನಿರ್ವಹಣೆಗಳಲ್ಲಿನ ಸಾಧನೆಗಾಗಿ ಅಮೆರಿಕದ ವಾಷಿಂಗ್ಟನ್ನಲ್ಲಿರುವ ‘ಸೊಸೈಟಿ ಆಫ಼್ ಸ್ಯಾಟಿಲೈಟ್ ಪ್ರೊಫೆ಼ಷನಲ್ಸ್ ಇಂಟರ್‍ನ್ಯಾಷನಲ್ ಹಾಲ್ ಆಫ್ ಫೇಮ್’ನಲ್ಲಿ 19, ಮಾರ್ಚ್, ೨೦೧೩ರಲ್ಲಿ ಡಾ.ಯು.ಆರ್ ರವರ ಹೆಸರು ಸೇರ್ಪಡೆಯಾಗಿರುವುದು ಅವರಿಗೆ ಸಂದ ಬಹಳ ದೊಡ್ಡ ಗೌರವ. ಜಗದ್ವಿಖ್ಯಾತ ಬಾಹ್ಯಾಂತರಿಕ್ಷ ವಿಜ್ಞಾನಿಗಳ ಪಟ್ಟಿಯಲ್ಲಿ ಸೇರ್ಪಡೆಯಾಗಿರುವ ಮೊದಲ ಭಾರತೀಯ ಮಾತ್ರವಲ್ಲ, ಮೊದಲ ಕನ್ನಡಿಗ ಎನ್ನುವುದು ನಾವೆಲ್ಲರೂ ಸಂಭ್ರಮಿಸುವ ವಿಷಯವೇ.
ಇಸ್ರೋ ಸಂಸ್ಥೆ ಕೇವಲ ವೈಜ್ಞಾನಿಕ ಪ್ರಯೋಗಶಾಲೆಯಾಗದೆ ಭಾರತದ ಪ್ರಗತಿಗೆ ಕಾರಣವಾಗಿರುವುದಕ್ಕೆ ಯು.ಆರ್.ರಾವ್ ಅವರ ದೂರದೃಷ್ಟಿಯೇ ಕಾರಣ. ಆಂಟ್ರಿಕ್ಸ್ ಕಾರ್ಪೋರೇಷನ್ ಹೆಸರಿನ ವಾಣಿಜ್ಯ ಶಾಖೆಯನ್ನು ಪ್ರಾರಂಭಿಸಿ, ಅದರ ಮೂಲಕ ಬಾಹ್ಯಾಕಾಶ ಉದ್ದೇಶಗಳಿಗೆ ಅಭಿವೃದ್ಧಿಪಡಿಸಿದ ತಂತ್ರಜ್ಞಾನವನ್ನು ಸಾಮಾನ್ಯ ಜನತೆಗೂ ಮುಟ್ಟಿಸುವ ಏರ್ಪಾಡು ಮಾಡಿದರು. ಇದರಿಂದ ಹಲವಾರು ಕೈಗಾರಿಕೆಗಳು ಮತ್ತು ಸಾರ್ವಜನಿಕ ಕ್ಷೇತ್ರದ ಸಂಸ್ಥೆಗಳು ಇಸ್ರೋ ನೆರವಿಗೆ ಮುಂದಾದವು.
ವಿಜ್ಞಾನಿಗಳು ಒಳ್ಳೆಯ ಬರಹಗಾರರಲ್ಲ ಎನ್ನುವ ಅಪವಾದಕ್ಕೆ ಇವರು ಅಪವಾದವಾಗಿದ್ದರು. ಫಿಜಿ಼ಕ್ಸ್ ಆಫ್ ಕಮ್ಯುನಿಕೇಷನ್, ಸ್ಪೇಸ್ ಆ್ಯಂಡ್ ಅಜೆಂಡಾ ೨೧ – ಕೇರಿಂಗ್ ಫಾರ್ ದಿ ಪ್ಲಾನೆಟ್ ಅರ್ಥ್, ಸ್ಪೇಸ್ ಟೆಕ್ನಾಲಜಿ ಫಾರ್ ಸಸ್ಟೇನೆಬಲ್ ಡೆವಲಪ್ಮೆಂಟ್ ಸೇರಿದಂತೆ ಇನ್ನೂ ಅನೇಕ ಕೃತಿಗಳನ್ನು ರಚಿಸಿದ್ದಾರೆ. ವಿಶ್ವಕಿರಣ, ಅತ್ಯಧಿಕ ಶಕ್ತಿಯ ಖಗೋಳವಿಜ್ಞಾನ, ಉಪಗ್ರಹ ಮತ್ತು ಕ್ಷಿಪಣೆ ತಂತ್ರಜ್ಞಾನದ ವಿಷಯಗಳನ್ನು ಕುರಿತು ೩೫೦ಕ್ಕೂ ಹೆಚ್ಚು ಲೇಖನಗಳನ್ನು ಪ್ರಕಟಿಸಿದ್ದಾರೆ.
ಇವರಿಗೆ ೨೫ ವಿದೇಶೀ ವಿಶ್ವವಿದ್ಯಾಲಯಗಳಿಂದ ಗೌರವ ಡಾಕ್ಟರೇಟ್ ಪದವಿ ದೊರೆತಿದೆ. ಭಾರತದ ಅನೇಕ ವಿಶ್ವವಿದ್ಯಾಲಯಗಳಲ್ಲಿ ಹಾಗೂ ವೈಜ್ಞಾನಿಕ ಸಂಸ್ಥೆಗಳಲ್ಲಿ ಉನ್ನತ ಸ್ಥಾನಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಇಂತಹ ಶ್ರೇಷ್ಠ ವಿಜ್ಞಾನಿಗೆ ಭಾರತ ಸರ್ಕಾರ 1976ರಲ್ಲಿ ಪದ್ಮ ಭೂಷಣ ಪ್ರಶಸ್ತಿಯನ್ನು ನೀಡಿದ್ದು, ೨೦೧೭ರಲ್ಲಿ ಪದ್ಮ ವಿಭೂಷಣ ಪ್ರಶಸ್ತಿ ನೀಡಿ ಗೌರವಿಸಿದೆ.
ಅಪರೂಪದ ಪ್ರತಿಭೆಯ ಡಾ.ಯು.ಆರ್ ರಾವ್ ಸರಳ ಸಜ್ಜನಿಕೆಯ ಪ್ರತೀಕವೇ ಆಗಿದ್ದರು. ಅಡುಗೆ ಮನೆಯಲ್ಲಿ ಪತ್ನಿ ಯಶೋದಾರವರಿಗೆ ನೆರವಾಗುತ್ತಿದ್ದರಂತೆ. ರುಚಿ ಶುಚಿಯಾದ ಅಡುಗೆ ಮಾಡುವುದಕ್ಕೂ ಸೈ; ಹಾಲಿಗೆ ಹದವಾಗಿ ಹೆಪ್ಪು ಹಾಕುವುದಕ್ಕೂ ಸೈ ಎಂದು ಮುಂದಾಗುತ್ತಿದ್ದರಂತೆ. ವಿಜ್ಞಾನ ಕ್ಷೇತ್ರದಲ್ಲಿ ಬೆಳಗ್ಗಿನಿಂದ ಸಂಜೆಯವರೆಗೂ ದುಡಿದರೂ ಮನೆಗೆಲಸಗಳನ್ನೂ ಮಾಡುವ ಕಾಳಜಿ ತೋರುತ್ತಿದ್ದರಂತೆ. ಉಪಗ್ರಹ ಉಡ್ಡವಣೆಯ ಹಿಂದಿನ ದಿನವೂ ಯಾವುದೇ ಆತಂಕಕ್ಕೆ ಒಳಗಾಗದೆ ನಿರಾಳವಾಗಿರುತ್ತಿದ್ದರು. ಆಗಲೂ ಮನೆಯ ದಿನಚರಿ, ಮಧ್ಯರಾತ್ರಿವರೆಗೆ ಓದು ನಡೆಯುತ್ತಿತ್ತು. ಎಷ್ಟೋ ಬಾರಿ ಬೆಳಗ್ಗೆ ಡೈರಿಯಿಂದ ಹಾಲು ತರುತ್ತಿದ್ದರಂತೆ. ವಿಶೇಷ ಚೇತನ ಮಕ್ಕಳ ಸೇವೆಯಲ್ಲಿ ತೊಡಗಿದ್ದ ತಮ್ಮ ಪತ್ನಿಗೆ ಬೆಂಬಲ ನೀಡಿ, ಮನೆಗೆಲಸಗಳನ್ನು ನಿಭಾಯಿಸುತ್ತಿದ್ದರಂತೆ. ಮಧ್ಯಮ ವರ್ಗದ ಸಾಮಾನ್ಯ ಕುಟುಂಬದಂತೆಯೇ ಬಾಳಿದವರು ವಿಶ್ವವಿಖ್ಯಾತ ವಿಜ್ಞಾನಿ ಪ್ರೊ. ಯು. ಆರ್ ರಾವ್. ಭಾರತೀಯ ವಿಜ್ಞಾನ ಮಂದಿರದ ಸಭೆಯೊಂದರಲ್ಲಿ ಬಾಂಬು ಸಿಡಿಯಬಹುದು ಎಂದು ಗುಲ್ಲೆದ್ದು ಅಲ್ಲಿದ್ದವರೆಲ್ಲರನ್ನೂ ಬೇರೆ ಸಭಾಂಗಣಕ್ಕೆ ಕರೆದೊಯ್ದಾಗಲೂ ಅಷ್ಟೇ ನಿರ್ಲಿಪ್ತತೆ ಇತ್ತು.
ಮೇರು ವಿಜ್ಞಾನಿ ೨೦೧೭ ಜುಲೈ ೨೪ರಂದು ಬೆಂಗಳೂರಿನಲ್ಲಿ ನಿಧನರಾದರು. ತಮ್ಮ ಬಾಳಿನ ಕೊನೆಯ ಕ್ಷಣದವರೆಗೂ ಇಸ್ರೋ ಸಂಸ್ಥೆಗೆ ಅಮೂಲ್ಯ ಸಲಹೆಗಳನ್ನು ನೀಡುತ್ತಿದ್ದರು. ಅವರ ಜೊತೆಯಲ್ಲಿಯೇ ಕಾರ್ಯ ನಿರ್ವಹಿಸುತ್ತಿದ್ದ ಡಾ.ಕೆ.ರಾಧಾಕೃಷ್ಣರವರ ಮಾತಿನಲ್ಲಿ ಯು. ಆರ್ ರಾವ್ ಅವರು “talisman of the Indian space programme’. ನಿವೃತ್ತಿಯ ನಂತರವೂ ಇಸ್ರೋ ಸಂಸ್ಥೆಯ ಏಳಿಗೆಯ ಕನಸನ್ನೇ ಕಾಣುತ್ತಿದ್ದವರು.
ಮೇರು ವಿಜ್ಞಾನಿಗೆ ಅವರ ಎಂಬತ್ತೊಂಬತ್ತನೆಯ ಹುಟ್ಟುಹಬ್ಬದ ದಿನವಾದ ಮಾರ್ಚಿ ೧೦, ೨೦೧೦ರಂದು ಗೂಗಲ್ ಸಂಸ್ಥೆ ಡೂಡಲ್ ರಚಿಸಿ ವಂದಿಸಿದೆ. ಡೂಡಲ್ನಲ್ಲಿ ಪ್ರೊಫೆಸರ್ ರಾವ್ ಅವರ ರೇಖಾಚಿತ್ರದ ಹಿನ್ನೆಲೆಯಲ್ಲಿ ಭೂಮಿ ಮತ್ತು ನಕ್ಷತ್ರಗಳನ್ನು ಕಾಣಬಹುದು. “Your stellar technological advancements continue to be felt across the galaxy” ಎನ್ನುವ ವಾಕ್ಯದೊಂದಿಗೆ ಗೂಗಲ್ ಗೌರವ ವ್ಯಕ್ತ ಪಡಿಸಿದೆ.
ಜಾಗತಿಕ ಮಟ್ಟದಲ್ಲಿ ಪ್ರಸಿದ್ಧರಾಗಿ, ಭಾರತದ ಉನ್ನತಿಗಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟ ಪದ್ಮವಿಭೂಷಣ ಕನ್ನಡಿಗ ಡಾ.ಉಡುಪಿ ರಾಮಚಂದ್ರರಾವ್ ಅವರನ್ನು ಭಾರತ ಹಾಗೂ ಕರ್ನಾಟಕ ಎಂದೆಂದಿಗೂ ಸ್ಮರಿಸುತ್ತದೆ.
– ಜಿ.ವಿ.ನಿರ್ಮಲ
ವಿಜ್ಞಾನಿಯ ಪರಿಚಯಾತ್ಮಕ ಲೇಖನ.. ಬಹಳ ಉಪಯುಕ್ತ ವಾಗಿದೆ ಮೇಡಂ.
ಧನ್ಯವಾದಗಳು ನಾಗರತ್ನ
ಉಪಯುಕ್ತ ಲೇಖನ ನಿರ್ಮಲ. ಎಷ್ಟು ವಿಜ್ಞಾನಿ ಗಳಿದ್ದಾರೆ ನಮ್ಮಲ್ಲಿ, ಬರೆದಷ್ಟು ಸಾಲದು.
ಮಾಹಿತಿಪೂರ್ಣ ಲೇಖನ
ಇಂತಹ ಮೇಧಾವಿ ನಮ್ಮ ಕನ್ನಡದವರು ಎಂದು ಹೆಮ್ಮೆ ಪಡುವಂತೆ ಅವರ ಜೀವನದ ಯಶೋಗಾಥೆಯನ್ನು ಹಲವಾರು ಉಪಯುಕ್ತ ಮಾಹಿತಿಗಳೊಂದಿಗೆ ತಿಳಿಸುವ ಚಂದದ ಲೇಖನ.
ಹೌದು. ಇಂಥ ಮೇಧಾವಿ ನಮ್ಮವರೆಂಬುದೇ ಹೆಗ್ಗಳಿಕೆ. ಧನ್ಯವಾದ ಮೇಡಂ
ಪ್ರೊ ಯು ಆರ್ ರಾವ್ ಅವರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೀವು ನೀಡಿದ್ದೀರಿ. ಅವರು ಅಂದು ಪ್ರಾರಂಭಿಸಿದ ಕ್ಷಿಪಣಿ ಯೋಜನೆಯು ಇಂದು ಬೇರೆ ದೇಶದವರು ನಮ್ಮ ಕ್ಷಿಪಣಿಗಳಲ್ಲಿ ಅವರ ಉಪಗ್ರಹಗಳನ್ನು ಹಾರಿಸಿ ಎಂದು ಕೇಳಿಕೊಳ್ಳುವ ಮಟ್ಟಕ್ಕೆ ಬೆಳೆದಿದ್ದೇವೆ. ಇದಕ್ಕೆ ಕಾರಣ ಯು. ಆರ್. ರಾವ್, ಅಬ್ದುಲ್ ಕಲಾಂ ಮುಂತಾದ ಅನೇಕ ವಿಜ್ಞಾನಿಗಳ ಮುಂದಾಳತ್ವ ಮತ್ತು ಅವರು ಕಟ್ಟಿದ ದೊಡ್ಡ ವಿಜ್ಞಾನಿಗಳ ತಂಡ.
ಒಳ್ಳೆಯ ಲೇಖನಕ್ಕೆ ನಿಮಗೆ ಅಭಿನಂದನೆಗಳು.
ನಿಮ್ಮ ಮಾತು ನಿಜ.ಇಂದು ಇಸ್ರೋ ಮತ್ತು ಅದರ ಸಾಧನೆಗಳು ಜಗತ್ಪ್ರಸಿದ್ಧ ವಾಗಿವೆ.
ಶ್ರೀಮತಿ. ನಿರ್ಮಲಾ ಅವರೆ ತುಂಬಾ ಮಾಹಿತಿ ಪೂರ್ಣ ವ್ಯಕ್ತಿ ಪರಿಚಯ.
ಬಾಹ್ಯಾಕಾಶದ ಮೇರು ವಿಜ್ಞಾನಿ ಪ್ರೊ.ಯು.ಆರ್.ರಾವ್ ಅವರು ದೇಶಕ್ಕೆ ನೀಡಿದ ಕೊಡುಗೆ ಅನನ್ಯ! ಅವರ ಸಾಧನೆ ಹಾಗೂ ಕಿರುಪರಿಚಯದೊಂದಿಗಿನ ಸಾಂದರ್ಭಿಕ ಲೇಖನವು ಅಮೂಲ್ಯ ಮಾಹಿತಿಗಳನ್ನು ನೀಡಿದೆ.