ಕಾವ್ಯ ಭಾಗವತ 23: ಮೋಕ್ಷಮಾರ್ಗ

23.ಸಪ್ತಮ ಸ್ಕಂದ – ಅಧ್ಯಾಯ – 1
ಮೋಕ್ಷಮಾರ್ಗ
ರಾಗದ್ವೇಷರಹಿತ
ಕರ್ಮಾಧೀನ
ಜನನ ಮರಣಗಳಿಲ್ಲದ
ಭಗವಂತ
ದೇವತೆಗಳ ಬೆಂಬಲಿಸಿ
ದೈತ್ಯದಾನವರ ಶಿಕ್ಷಿಪ
ಭಗವಂತನಲೀಲೆಯ ಒಳಾರ್ಥ
ಅರಿಯದವರಿಗೊಂದು
ಬಗೆಹರಿಯದ ಪ್ರಶ್ನೆಯೇ
ಪ್ರಕೃತಿಯಲ್ಲಿರ್ಪ
ಸಕಲ ಜೀವಿಗಳಲ್ಲಿರ್ಪ
ರಜಸ್ಸು, ತಮಸ್ಸು ಮತ್ತು ಸತ್ವಗುಣ
ಪ್ರಧಾನರಾದ
ದೈತ್ಯ, ಯಕ್ಷ, ರಾಕ್ಷಸ
ದೇವ ಪಕ್ಷಗಳಲ್ಲಿರ್ಪ
ರಜಸ್ಸು, ತಮಸ್ಸು, ಸತ್ವಗುಣಗಳು
ಸಮುದ್ರದಲ್ಲಿನ ಅಲೆಗಳಂತೆ
ಒಂದರಮೇಲೊಂದು ಹೊರಬೀಳುತ್ತ
ಹೆಚ್ಚುತ್ತಾ, ತಗ್ಗುತ್ತಲಿರುವುವು
ವಿವಿಧ ಕಾಲದೆ ಗುಣ
ಧರ್ಮಗಳಿಗನುವಾಗಿ
ದೇವಪಕ್ಷ, ದೈತ್ಯಪಕ್ಷಗಳ
ಜಯಾ ಅಪಜಯಗಳಾಗುವುವು
ಭಗವಂತ ಸಕಲ ಪ್ರಾಣಿಗಳಲಿ
ಅಂತರ್ಯಾಮಿ,
ಸಮದರ್ಶಿಯಾದುದರಿಂದಲೇ
ಶಿಶುಪಾಲನ ನಿಂದನೆಗಳಿಗೆ
ಒಳಗಾಗಿ ಚಕ್ರಾಯುಧದಿಂ ಅವನ
ರುಂಡವ ಕತ್ತರಿಸಿದರೂ
ಅವನ ಕಂಠಪ್ರದೇಶದಿಂ
ಪ್ರಜ್ವಲಿಪ ತೇಜಸ್ಸು
ಸಕಲ ದಿಕ್ಕುಗಳ ಬೆಳಗಿಸುತ್ತ
ಕೃಷ್ಣಾರ್ಪಣವಾಯಿತು
ನಿಂದೆ, ಸ್ತೋತ್ರ, ಸತ್ಕಾರ
ತಿರಸ್ಕಾರ, ಅಲಂಕಾರ, ವಿಕಾರಾದಿಗಳು
ದೇಹಕ್ಕೆ ಮಾತ್ರ
ಆತ್ಮಕ್ಕಲ್ಲವೆಂಬ
ಸೂಕ್ಷ್ಮವನ್ನರಿಯದ
ಜೀವಿಗಳ ತಳಮಳ
ಭಗವಂತನಿಗಿಲ್ಲ
ಭಕ್ತಿಯಿಂದಾಗಲೀ
ಕುಂದದ ದ್ವೇಷದಿಂದಾಗಲೀ
ವಿಶೇಷ ಭಯದಿಂದಾಗಲೀ
ತಣಿವೇ ಇಲ್ಲದ ಕಾಮದಿಂದಾಗಲೀ
ಸ್ವಚ್ಛ ಮನಸ್ಕರಾಗಿ ಭಗವಂತನ
ತದೇಕ ಧ್ಯಾನವುಳ್ಳವಗೆ
ಮೋಕ್ಷ ಕರತಲಾಮಲಕವೆಂಬ
ತತ್ವದರಿವು ಪಡೆದ
ಜೀವಿ ಧನ್ಯ
ಕಾವ್ಯ ಭಾಗವತ ಸರಣಿಯ ಹಿಂದಿನ ಪುಟ ಇಲ್ಲಿದೆ : https://www.surahonne.com/?p=41571
(ಮುಂದುವರಿಯುವುದು)
-ಎಂ. ಆರ್. ಆನಂದ, ಮೈಸೂರು
ನೀವು ಬರೆದು ಪ್ರಸ್ತುತ ಪಡಿಸುತ್ತಿರುವ ಕಾವ್ಯ ಭಾಗವತ.ಸರಳ ಸುಂದರವಾಗಿ…ಬರುತ್ತಿದೆ ಸಾರ್..ವಂದನೆಗಳು..
ಚೆನ್ನಾಗಿದೆ
ಮೋಕ್ಷವನ್ನು ಕರತಲಾಮಲಕವಾಗಿಸಿಕೊಳ್ಳುವ ಸೂಕ್ಷ್ಮವನ್ನು ಸರಳವಾಗಿ ನಿರೂಪಿಸಿರುವ ಭಾಗವತದ ಕಾವ್ಯಭಾಗ ಸೊಗಸಾಗಿ ಮೂಡಿಬಂದಿವೆ.
ಮೋಕ್ಷ ಮಾರ್ಗವನ್ನು ಸರಳ, ಸುಂದರ ಕಾವ್ಯ ರೂಪದಲ್ಲಿ ಪ್ರಸ್ತುತ ಪಡಿಸಿದ ರೀತಿ ಅನನ್ಯ! ಧನ್ಯವಾದಗಳು ಸರ್.
ಪ್ರಕಟಿಸಿದ “ಸುರಹೊನ್ನೆ” ಗೂ ಓದುತ್ತಿರುವ, ಓದಿ ಪ್ರತಿಕ್ರಿಯಿಸುತ್ತಿರುವ ಸಹೃದಯರಿಗೂ ಹೃನ್ಮನಪೂರ್ವಕ ವಂದನೆಗಳು.