ವರ್ತುಲದೊಳಗೆ….ಭಾಗ 1
“ಲಲಿತಾ, ಅಲ್ಲಿಗೆ ಹೋಗಲು ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡೆಯಾ? ಆ ಪ್ರದೇಶದ ಸುತ್ತಮುತ್ತಲಿನ ಪರಿಚಯ, ರೀತಿರಿವಾಜುಗಳ ಬಗ್ಗೆ ವಿಚಾರಿಸಿದೆಯಾ? ಅಲ್ಲಿ ವ್ಯವಸ್ಥೆ ಹೇಗಿದೆ? ಮುಖ್ಯಸ್ಥರು ಯಾರು? ಎಲ್ಲವನ್ನೂ ಕೂಲಂಕುಷವಾಗಿ ಪರಿಶೀಲಿಸಿ ಹೆಜ್ಜೆಯಿಡು. ನೀನು ಒಪ್ಪಿಕೊಂಡಿರುವ ಜವಾಬ್ದಾರಿ ಗುರುತರವಾದುದು. ಮೈಯೆಲ್ಲಾ ಕಣ್ಣಾಗಿರಬೇಕಾಗುತ್ತದೆ. ಎಚ್ಚರಿಕೆ, ಆತುರ ಬೇಡ. ಯಾವುದಕ್ಕೂ ಫೊನ್ ಮಾಡು, ನನ್ನ ಆಫೀಸಿಗೆ ಲೇಟಾಗುತ್ತದೆ. ನಾನಿನ್ನು ಹೊರಡಲೇ?” ಎಂದು ತನ್ನ ಬ್ಯಾಗನ್ನು ಹೆಗಲಿಗೇರಿಸಿ, ಊಟದ ಚೀಲವನ್ನು ಕೈಯಲ್ಲಿ ಹಿಡಿದು ಹೊರನಡೆದ ತನ್ನ ಪತಿ ಶಂಕರನನ್ನು ಪ್ರೀತಿಯಿಂದ ನೋಡಿದಳು ಲಲಿತಾ.
ಇಂತಹ ಸಾಹಸದ ಕೆಲಸ ಲಲಿತಾರವರಿಗೇನೂ ಹೊಸದಲ್ಲ. ಯಾವಾಗ ಕೌನ್ಸೆಲ್ಲಿಂಗ್ ಮಾಡಲು ಪ್ರಾರಂಭ ಮಾಡಿದರೋ ಆವಾಗಿನಿಂದ ಎಷ್ಟೋ ಜಟಿಲವಾದ ಪ್ರಕರಣಗಳನ್ನು ಬಗೆಹರಿಸಿದ ಅನುಭವ ಅವರ ಬೆನ್ನಿಗಿದೆ. ಇಂತಹ ಸನ್ನಿವೇಶಗಳಲ್ಲಿ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಯ ಕ್ರಮಗಳ ಬಗ್ಗೆ ಅವರಿಗೆ ತರಬೇತಿ ಸಮಯದಲ್ಲಿ ಹೇಳಿಕೊಟ್ಟಿದ್ದಾರೆ. ಆದರೆ ತನ್ನ ಗಂಡ ಹೇಳಿದಂತೆ ಇದು ಸ್ವಲ್ಪ ಅಪಾಯಕಾರಿ ಕೆಲಸ. ಉಪಾಯವಾಗಿ ಕೆಲಸ ಸಾಧಿಸಿಕೊಂಡು ಬರುವುದೆಂದು ನಿರ್ಧರಿಸಿ ಮುಂದಿನ ಕೆಲಸಗಳತ್ತ ಗಮನ ಹರಿಸಿದರು. ಮನೆ, ಮಕ್ಕಳ ಕಡೆ ನಿಗಾ ಇಡಲು ಪತಿಗೆ ಹೇಳಿದ್ದರು ಯಾವುದಕ್ಕೂ ಫೋನ್ ಇದ್ದೇ ಇದೆ. ಅಂದುಕೊಳ್ಳುತ್ತಾ ಮಾಡಿಕೊಂಡಿದ್ದ ಸಿದ್ಧತೆಗಳನ್ನು ಮತ್ತೊಮ್ಮೆ ಒಂದೊಂದಾಗಿ ಪರಿಶೀಲಿಸಿದರು. ಮನೆಯನ್ನೆಲ್ಲಾ ಒಂದು ಬಾರಿ ಸುತ್ತುಹಾಕಿ ಎಲ್ಲವೂ ಭಧ್ರಪಾಗಿದೆಯೆಂಬುದನ್ನು ಖಾತರಿಪಡಿಸಿಕೊಂಡರು. ತಮ್ಮ ಬ್ರೀಫ್‌ಕೇಸ್, ಹ್ಯಾಂಡ್‌ಬ್ಯಾಗ್, ಹೊರಗಿಟ್ಟು ಮುಂಭಾಗಿಲಿಗೆ ಡೋರ್‌ಲಾಕ್ ಹಾಕಿ ಮೆಟ್ಟಿಲಿಳಿಯುತ್ತಿದ್ದಂತೆ ಅವರ ಸ್ವಸಹಾಯ ಸಂಘದವರ ಹುಡುಗ ಜಗದೀಶ್ ಕಾರು ತೆಗೆದುಕೊಂಡು ಬಂದ. ಅವನಿಂದ ಒಳನಾಡು ವಿಮಾನ ನಿಲ್ದಾಣಕ್ಕೆ ಡ್ರಾಪ್ ಪಡೆದು ಒಳನಡೆದರು.
ಲಲಿತಾರವರು ಸಮಯಕ್ಕೆ ಸರಿಯಾಗಿ ಆಗಮಿಸಿದ ವಿಮಾನದಲ್ಲಿ ಕಾಯ್ದಿರಿಸಿದ್ದ ಸ್ಥಳದಲ್ಲಿ ಕುಳಿತು ಅತ್ತಿತ್ತ ನೋಡುವಷ್ಟರಲ್ಲಿ ವಿಮಾನ ಚಲಿಸಿತು. ಅಂತೆಯೇ ಅವರ ಆಲೋಚನೆಗಳು ತಮ್ಮ ಬದುಕಿನ ಪಯಣದತ್ತ ಸರಿದವು. ಲಲಿತಾ ತಮ್ಮ ಪತಿ ಶಂಕರ್ ರವರೊಡನೆ ಭಾರತದಿಂದ ಅಮೆರಿಕಕ್ಕೆ ಬಂದು ಎರಡು ದಶಕಗಳೇ ಕಳೆದಿದ್ದವು. ಆ ಸಮಯದಲ್ಲಿ ಅಮೆರಿಕದ ಬಹಳಷ್ಟು ಊರುಗಳಲ್ಲಿ ಪತಿ ಎಲ್ಲೆಲ್ಲಿ ಕೆಲಸ ಮಾಡಿದರೋ ಅಲ್ಲೆಲ್ಲಾ ಇವರು ನೆಲೆಸಿದ್ದರು. ಗಂಡ ಪ್ರಸ್ತುತ ನ್ಯೂಜೆರ್ಸಿಯಲ್ಲಿದ್ದ ಒಂದು ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದರು. ಹಾಗಾಗಿ ಅಲ್ಲಿಗೆ ಸಮೀಪದಲ್ಲಿಯೇ ಅವರು ಮನೆ ಮಾಡಿದ್ದರು. ಅಲ್ಲಿ ಸುತ್ತಮುತ್ತ ಸುಮಾರು ಹನ್ನೆರಡು ಮನೆಗಳಲ್ಲಿ ಕನ್ನಡಿಗರ ಕುಟುಂಬಗಳೇ ವಾಸವಾಗಿದ್ದವು. ಸಹಜವಾಗಿಯೇ ಅವರೆಲ್ಲರೂ ಲಲಿತಾ, ಶಂಕರ್ ಕುಟುಂಬಕ್ಕೆ ಪರಿಚಿತರಾಗಿದ್ದರು. ಭಾರತೀಯ ಹಬ್ಬಹರಿದಿನಗಳಲ್ಲಿ ಅವರೆಲ್ಲ ಒಟ್ಟಿಗೆ ಕೂಡಿ ಆಚರಣೆಯಲ್ಲಿ ಭಾಗಿಯಾಗುತ್ತಿದ್ದರು. ವೀಕ್‌ಎಂಡ್ ದಿನಗಳಲ್ಲಿ ಎಲ್ಲರು ಸೇರಿ ರಜಾ ದಿನವನ್ನು ಸಂಭ್ರಮದಿಂದ ಕಳೆಯುತ್ತಿದ್ದರು.
ಲಲಿತಾರವರು ಅಮೆರಿಕಕ್ಕೆ ಬಂದಮೇಲೆ ಅವರ ಮಕ್ಕಳು ತಮ್ಮ ಕೆಲಸವನ್ನು ತಾವೇ ಮಾಡಿಕೊಳ್ಳುವಷ್ಟು ಹಂತಕ್ಕೆ ಬಂದಾಗ ಸುಮ್ಮನೆ ಮನೆಯಲ್ಲಿ ಬಿಡುವಿನ ವೇಳೆಯನ್ನು ಕಳೆಯುವ ಬದಲು ಏನಾದರೂ ಉಪಯುಕ್ತವಾದ ಹೊಸ ವಿಷಯವನ್ನು ಕಲಿಯಲು ಆಸಕ್ತಿ ತೋರಿದರು. ಹೀಗೆ ನಿರ್ಧರಿಸಿದಾಗ ಅವರಿಗೆ ಹಲವಾರು ಸಾಮಾಜಿಕ ಸೇವೆಯಲ್ಲಿ ತೊಡಗಿದ್ದ ಸಂಸ್ಥೆಗಳ ಪರಿಚಯವಾಯಿತು. ಅವುಗಳಲ್ಲಿ ಸಾಂಸಾರಿಕ ಸಮಸ್ಯೆಗಳಿಗೆ ಕೌನ್ಸೆಲ್ಲಿಂಗ್ ಮಾಡಲು ತರಬೇತಿ ನೀಡುವವರೊಬ್ಬರು ಗುರುತಾದರು. ಅವರ ಸಂಸ್ಥೆಯಿಂದ ಕೌನ್ಸೆಲ್ಲಿಂಗ್ ತರಬೇತಿ ಕೋರ್ಸ್ಗೆ ಸೇರಿಕೊಂಡರು. ಇದಕ್ಕೆ ಅವರ ಪತಿಯ ಸಮ್ಮತಿಯೂ ದೊರೆಯಿತು. ಇದರ ಮೂಲಕ ಸಂಕಷ್ಟದಲ್ಲಿರುವ ಹಲವರಿಗೆ ಸಮಾಧಾನ ನೀಡಬಹುದು ಎಂಬ ಉದ್ದೇಶ ಹೊಂದಿದ್ದರು. ಆದರೆ ಈ ಕೆಲಸ ತಿಳಿದಷ್ಟು ಸುಲಭವಾಗಿರಲಿಲ್ಲ. ಧೈರ್ಯ,ಸ್ಥೈರ್ಯ , ಕೌಶಲ್ಯ, ಚುರುಕುತನ, ಹಾಗೂ ಮಾತುಗಾರಿಕೆ ಅಗತ್ಯವಾಗಿತ್ತು. ಇವೆಲ್ಲ ಲಲಿತಾರವರಿಗೆ ಒಲಿದುಬಂದಿತ್ತು. ಜೊತೆಗೆ ಅವರಿಗೆ ನೆರವಾಗಲು ಇತರ ಸೇವಾಸಂಘಗಳು, ಅಗತ್ಯವಾದರೆ ಪೋಲೀಸ್ ವ್ಯವಸ್ಥೆಯೊಂದಿಗೆ ಸಂಪರ್ಕವಿತ್ತು.
ಲಲಿತಾ ಶಂಕರ್ ದಂಪತಿಗಳಿಗೆ ಇಬ್ಬರು ಹೆಣ್ಣುಮಕ್ಕಳಿದ್ದರು. ಅವರು ಅಲ್ಲಿನ ಇತರ ಮಕ್ಕಳೋಂದಿಗೆ ಸ್ನೇಹಸೌಹಾರ್ದದಿಂದ ಇದ್ದರು. ಅವರುಗಳಲ್ಲಿ ಒಂದು ಕುಟುಂಬ ಕರ್ನಾಟಕದ ರಾಜಧಾನಿ ಬೆಂಗಳೂರಿನಿಂದ ಬಂದಿದ್ದು. ಅವರೊಡನೆ ಇವರಿಗೆ ಹೆಚ್ಚಿನ ಒಡನಾಟವಿತ್ತು. ಆ ಕುಟುಂಬದ ಯಜಮಾನ ರಾಘವ, ಆತನ ಧರ್ಮಪತ್ನಿ ಸುಶೀಲ. ಅವರ ಮೂವರು ಮಕ್ಕಳಾದ ಸಿಂಧು, ಸ್ಮಿತಾ, ಮತ್ತು ಸಂತೋಷ. ಅಚ್ಚಕಟ್ಟಾದ ಸಂಸಾರ. ಮುದ್ದಾದ ಮಕ್ಕಳು. ಓದಿನಲ್ಲಿ ದೊಡ್ಡ ಮಗಳು ತುಂಬ ಚುರುಕು. ಉಳಿದವರು ಸಾಧಾರಣ. ಆದರೆ ರಾಘವ ದಂಪತಿಗಳಿಗೆ ಗಂಡುಮಗನ ಮೇಲೆ ತುಂಬ ವ್ಯಾಮೋಹ. ಹೆಣ್ಣು ಮಕ್ಕಳಿಗಿಂತ ಅವನಿಗೆ ಮನೆಯಲ್ಲಿ ಹೆಚ್ಚಿನ ಪ್ರಾಮುಖ್ಯತೆ. ಹೆಣ್ಣುಮಕ್ಕಳಲ್ಲಿ ಈ ತಾರತಮ್ಯ ನೋವುಂಟು ಮಾಡಿದರೂ ಅದನ್ನು ಯಾರ ಬಳಿಯಲ್ಲೂ ಹೇಳಿಕೊಳ್ಳಲಾಗದು. ಅದರಲ್ಲೂ ದೊಡ್ಡಮಗಳು ಸಿಂಧು ಹತ್ತನೆಯ ತರಗತಿಯಲ್ಲಿದ್ದಾಗ ಲಲಿತಾರವರ ಬಳಿಯಲ್ಲಿ “ನೋಡಿ ಆಂಟಿ, ನಾನೆಷ್ಟು ಛಂದದ ಅಂಕಗಳನ್ನು ತೆಗೆದು ಪಾಸಾದರೂ ನಮ್ಮ ಅಪ್ಪ ಅಮ್ಮನಿಗೆ ಅಂತಹ ಖುಷಿಯೇ ಇಲ್ಲ. ಒಂದು ಭೇಷ್ ಎಂಬ ಮಾತೂ ಆಡುವುದಿಲ್ಲ. ನನಗೆ ತುಂಬ ದುಃಖವಾಗುತ್ತದೆ” ಎಂದು ತನ್ನ ಅಳಲನ್ನು ತೋಡಿಕೊಂಡಿದ್ದುಂಟು. ಆಗೆಲ್ಲ ಲಲಿತಾ ಅವಳಿಗೆ ಸೂಕ್ತವಾದ ಸಮಾಧಾನ ಹೇಳಿ ಸುಶೀಲಾರವರ ಬಳಿ ಈ ವಿಷಯ ಪ್ರಸ್ಥಾಪಿಸಿ “ಮಕ್ಕಳಲ್ಲಿ ಹೆಣ್ಣು ಗಂಡೆಂಬ ಭೇದ ಒಳ್ಳೆಯದಲ್ಲ. ಮಗಳನ್ನು ಕಡೆಗಣಿಸಿ ಮಗನಿಗೆ ಮಾತ್ರ ಪ್ರೋತ್ಸಾಹ ಕೊಡುವುದರಿಂದ ಮುಂದೆ ಅವರ ಮನಸ್ಸಿನಲ್ಲಿ ಈ ಕೊರಗು ಉಳಿದು ಕೆಟ್ಟ ಪರಿಣಾಮವಾಗುತ್ತದೆ” ಎಂದು ಸೂಕ್ಷ್ಮವಾಗಿ ಎಚ್ಚರಿಸಿದ್ದರು. ಇದರಿಂದ ಏನೂ ಪ್ರಯೋಜನವಾಗಲಿಲ್ಲ. ಜೊತೆಗೆ ಮಗಳಿಗೆ ಶಾಲೆಯಲ್ಲಿಯೂ ಹೆಚ್ಚು ಜನ ಸ್ನೇಹಿತರನ್ನು ಮಾಡಿಕೊಳ್ಳಕೂಡದು, ಅದರಲ್ಲೂ ಹುಡುಗರ ಜೊತೆಯಲ್ಲಿ ಹೆಚ್ಚು ಸದರದಿಂದ ಇರಲೇಬಾರದೆಂಬ ಕಟ್ಟುಪಾಡುಗಳನ್ನು ಹಾಕಿದ್ದರು. ಇದರಿಂದ ಆ ಮುಗ್ಧ ಹೆಣ್ಣುಮಗಳು ಸಿಂಧುವಿಗೆ ಹೆತ್ತವರ ಬಗ್ಗೆ ಉದಾಸೀನ ಉಂಟಾಗಲು ಪ್ರಾರಂಭವಾಯಿತು. ತನ್ನ ಒಂಟಿತನವನ್ನು ಕಳೆಯಲಿಕ್ಕೋಸ್ಕರ ಎದುರು ಮನೆಯ ಗೃಹಿಣಿಯ ಮನೆಯಲ್ಲಿ ವಾರವಾರವೂ ನಡೆಸುವ ಭಜನೆ, ಸತ್ಸಂಗಗಳಿಗೆ ಹೋಗಲು ಪ್ರಾರಂಭಿಸಿದಳು. ಇದಕ್ಕೆ ಮಾತ್ರ ಸುಶೀಲ ಗ್ರೀನ್ ಸಿಗ್ನಲ್ ಕೊಟ್ಟಿದ್ದರು. ಆಗಾಗ ಆ ಮನೆಯವರೊಟ್ಟಿಗೆ ಒಂದು ಅಧ್ಯಾತ್ಮ ಸಂಘದ ಕೇಂದ್ರಕ್ಕೂ ಹೋಗುತ್ತಿದ್ದಳು. ಆ ಸಂಘದಲ್ಲಿ ಧ್ಯಾನ, ಯೋಗ, ಪ್ರವಚನ, ನಂತರ ಸಮೂಹ ಭಜನೆಯೊಂದಿಗೆ ನೃತ್ಯವೂ ಇರುತ್ತಿತ್ತು. ಇವೆಲ್ಲ ಸಿಂಧುವಿನ ಮನಸ್ಸಿಗೆ ತುಂಬ ಹಿಡಿಸಿದ್ದವು. ಕ್ರಮೇಣ ಅಂತಹ ಅಧ್ಯಾತ್ಮಕೇಂದ್ರಗಳು ಅಮೆರಿಕದ ಬೇರೆಬೇರೆ ಊರುಗಳಲ್ಲಿಯೂ ಇವೆಯೆಂಬ ವಿಷಯ ಅವಳಿಗೆ ತಿಳಿಯಿತು. ಅಲ್ಲಿ ಬರುತ್ತಿದ್ದ ಪ್ರವಚನಕಾರರ ಬೋಧನೆಗಳು ನಿಧಾನವಾಗಿ ಕೇಳುಗರನ್ನು ಮಂತ್ರಮುಗ್ಧರಾಗುವಂತೆ ಮಾಡುವಂತಿದ್ದವು. ಹಾಗೂ ತೀಕ್ಷ್ಣವಾಗಿ ಆಲೋಚಿಸುವವರ ಮನಸ್ಸನ್ನು ಸಮ್ಮೋಹನಗೊಳಿಸುತ್ತಿದ್ದವು. ಈ ಪರಿಣಾಮ ಕ್ರಮೇಣ ಸಿಂಧುವಿನ ಎಳೆಯ ಮನಸ್ಸಿನ ಮೇಲೂ ಆಗಿತ್ತು. ಮಗಳು ಎದುರು ಮನೆಯಲ್ಲಿ ನಡೆಯುವ ಭಜನೆ, ಸತ್ಸಂಗಕ್ಕೆ ಹೋಗಿಬರುತ್ತಾಳೆ ಎಂದಷ್ಟೇ ಸುಶೀಲಾ ತಿಳಿದಿದ್ದರು. ಆದರೆ ಮನೆಯಲ್ಲಿ ತಿರಸ್ಕಾರಗೊಂಡ ಸಿಂಧು ಅಧ್ಯಾತ್ಮಕೇಂದ್ರದ ಸೆಳೆತಕ್ಕೆ ನಿಧಾನವಾಗಿ ಒಳಗಾಗುತ್ತಿದ್ದಳು. ಇದು ಗೊತ್ತಾದಾಗ ಆಕೆಗೆ ಲಲಿತಾರವರು ಒಮ್ಮೆ ಸೂಕ್ಷ್ಮವಾಗಿ “ಮನೆಯಲ್ಲಿ ಗೊತ್ತಿಲ್ಲದೆ, ಅಥವಾ ಸುಳ್ಳುಹೇಳಿ ಈ ರೀತಿ ನೀನು ಅಲ್ಲಿಗೆಲ್ಲಾ ಹೋಗಬಾರದು” ಎಂದು ಎಚ್ಚರಿಸಿದರು. ಅದಕ್ಕವಳು “ಆಂಟಿ, ನನಗೆ ಅಲ್ಲಿಗೆ ಹೋದಾಗ ಮನಸ್ಸು ನಿರಾಳವಾಗಿ ನೆಮ್ಮದಿಯ ಅನುಭವವಾಗುತ್ತದೆ. ಅದರಿಂದ ಹೋಗುತ್ತೇನೆ. ಬೇರೇನೂ ಕೆಟ್ಟ ಹವ್ಯಾಸವಿಲ್ಲ” ಎಂದು ಅವರಿಗೆ ಭರವಸೆ ನೀಡಿದ್ದಳು. ಇವರೂ ಕ್ರಮೇಣ ದೊಡ್ಡ ತರಗತಿಗಳಿಗೆ ಹೋದಂತೆ ಈ ಹುಚ್ಚು ತಾನೇ ಬಿಟ್ಟುಹೋಗುತ್ತದೆ ಎಂದುಕೊಂಡು ಸುಮ್ಮನಾದರು.
ನಂತರ ಲಲಿತಾರವರ ಗಂಡನಿಗೆ ಬೇರೆ ಊರಿಗೆ ವರ್ಗಾವಣೆಯಾಗಿ ನ್ಯೂಜೆರ್ಸಿ ಬಿಟ್ಟು ಹೊಸ ಊರಿಗೆ ಸ್ಥಳಾಂತರಗೊಂಡರು. ಆ ಸಮಯದಲ್ಲಿ ಸಿಂಧು ಹನ್ನೆರಡನೆಯ ತರಗತಿಯಲ್ಲಿ ಅತ್ಯುತ್ತಮ ಅಂಕಗಳೊಡನೆ ತೇರ್ಗಡೆಗೊಂಡಿದ್ದಳು. ಅವಳು ಇಂಜಿನಿಯರಿಂಗ್ ಕೋರ್ಸಿಗೆ ಸೇರಿಕೊಂಡಿದ್ದಳು. ಅವರ ಕುಟುಂಬದೊಡನೆ ನೇರ ಸಂಪರ್ಕ ತಪ್ಪಿಹೋಯಿತು. ಆಗೀಗ ದೂರವಾಣಿಯಲ್ಲಿ ಕ್ಷೇಮಸಮಾಚಾರ ತಿಳಿಯುತ್ತಿದ್ದರು. ಸಿಂಧು ಇಂಜಿನಿಯರಿಂಗ್ ಮುಗಿಸಿ ಒಳ್ಳೆಯ ಕಂಪೆನಿಯೊಂದರಲ್ಲಿ ನೌಕರಿ ಮಾಡುತ್ತಾ ಬೇರೆ ಊರಿನಲ್ಲಿ ವಾಸವಾಗಿದ್ದಾಳೆಂಬ ವಿಷಯವೂ ಹಲವು ವರ್ಷಗಳ ನಂತರ ತಿಳಿಯಿತು. ಸಿಂಧು ಆಗೀಗ ತಂದೆತಾಯಿಗಳ ಮನೆಗೆ ಬಂದಾಗ ಫೋನಿನಲ್ಲಿ ಲಲಿತಾರನ್ನು “ಆಂಟಿ, ಚೆನ್ನಾಗಿದ್ದೀರಾ?” ಎಂದು ವಿಚಾರಿಸುತ್ತಿದ್ದಳು. ಆಕೆಯ ಮದುವೆಗಾಗಿ ತಂದೆತಾಯಿಗಳು ಪ್ರಯತ್ನ ನಡೆಸುತ್ತಿದ್ದಾಗ ಅವಳು “ನಾನೀಗಲೇ ಮದುವೆಯಾಗುವುದಿಲ್ಲ” ಎಂದು ಇನ್ನೂ ಎರಡು ವರ್ಷ ಹಾಗೇ ಉಳಿದಿದ್ದಳು. ಆದರೆ ಆಕೆಯ ತಂಗಿ ಸಾಮಾನ್ಯ ಡಿಗ್ರಿಯೊಂದನ್ನು ಮುಗಿಸಿ ಮುಂದಕ್ಕೆ ಓದಲಿಷ್ಟವಿಲ್ಲದೆ ತನ್ನ ತಂದೆ ತಾಯಿಗಳು ನೋಡಿದ ಒಬ್ಬ ವರನೊಂದಿಗೆ ವಿವಾಹವಾದಳು. ಲಲಿತಾರಿಗೂ ಆಹ್ವಾನ ಬಂದಿದ್ದು ಗಂಡಹೆಂಡಿರಿಬ್ಬರೂ ಹಾಜರಾಗಿ ವಧೂವರರನ್ನು ಉಡುಗೊರೆಯೊಂದಿಗೆ ಆಶೀರ್ವದಿಸಿ ಬಂದಿದ್ದರು. ತಂಗಿಗೆ ಮೊದಲು ಮದುವೆಯಾಗಲು ಸಿಂಧು ತಾನೇ ಒಪ್ಪಿಗೆ ಕೊಟ್ಟಿದ್ದಳಂತೆ. ಲಲಿತಾರಿಗೆ ಸೋಜಿಗವೆನ್ನಿಸಿತು. ಆದರೂ ಅವರವರಿಷ್ಟ ಎಂದು ಸುಮ್ಮನಾದರು.
ಹೀಗೇ ಮತ್ತೆರಡು ವರ್ಷಗಳು ಉರುಳಿದವು. ಒಂದು ದಿನ ಇದ್ದಕ್ಕಿದ್ದಂತೆ ರಾಘವ, ಸುಶೀಲಾರಿಂದ ಫೋನ್ ಬಂತು. “ನೀವು ಬಿಡುವಾಗಿದ್ದರೆ ನಾವು ನಿಮ್ಮಲ್ಲಿಗೆ ಬರಬೇಕೆಂದಿದ್ದೇವೆ. ನಿಮ್ಮೊಡನೆ ಮುಖ್ಯವಾದ ವಿಷಯವನ್ನು ಮಾತನಾಡಬೇಕಿದೆ” ಎಂದು ಕೇಳಿಕೊಂಡರು.
ಲಲಿತಾರವರು “ಅದರಲ್ಲೇನಿದೆ, ನೀವು ಬರುವ ದಿನ ತಿಳಿಸಿದರೆ, ಆ ದಿನ ನಿಮಗಾಗಿಯೇ ಬಿಡುವು ಮಾಡಿಕೊಳ್ಳುತ್ತೇವೆ. ನನ್ನದೇನು ಸರ್ಕಾರಿ ಕೆಲಸವೇ? ನನ್ನ ಹವ್ಯಾಸಕ್ಕಾಗಿ ಸ್ವಯಿಚ್ಛೆಯಿಂದ ಮಾಡುವ ಕೆಲಸವಷ್ಟೇ. ಖಂಡಿತಾ ಬನ್ನಿ” ಎಂದು ಆಹ್ವಾನಿಸಿದರು. ನಿಗದಿಪಡಿಸಿದ ದಿವಸ ರಾಘವ ದಂಪತಿಗಳು ಲಲಿತಾರವರ ಮನೆಗೆ ಆಗಮಿಸಿದರು. ಮೊದಲಿಗಿಂತ ಇಬ್ಬರೂ ತುಂಬಾ ಸೊರಗಿದವರಂತೆ ಕಾಣಿಸಿದರು. ಅವರ ಮುಖದಲ್ಲಿ ಗೆಲುವಿನ ನಗೆಯಿರಲಿಲ್ಲ. ಯಾವದೋ ಚಿಂತೆಯಿಂದ ಬಳಲುತ್ತಿರುವಂತೆ ಕಂಡುಬರುತ್ತಿತ್ತು.
ಉಟೋಪಚಾರಗಳು ಮುಗಿದ ನಂತರ ಅವರು “ಲಲಿತಾರವರೇ, ನಿಮ್ಮಿಂದ ನಮಗೊಂದು ಮುಖ್ಯವಾದ ಸಹಾಯವಾಗಬೇಕು. ದಯವಿಟ್ಟು ಇಲ್ಲವೆನ್ನದೆ ಮಾಡಿಕೊಡಿ. ನಿಮ್ಮ ಭರವಸೆಯಿಂದಲೇ ಅಲ್ಲಿಂದ ಬಂದಿದ್ದೇವೆ.” ಎಂದರು.
ಅವರ ಮಾತನ್ನು ಕೇಳಿದ ಲಲಿತಾರವರು ಅಚ್ಚರಿಪಡುತ್ತಾ “ಏನು ಅಂತಹ ಮಹತ್ವದ ಕೆಲಸ? ನನ್ನ ಕೈಯಲ್ಲಾಗುವುದಾಗಿದ್ದರೆ ಖಂಡಿತ ಮಾಡೋಣ. ಸಂಕೋಚಪಟ್ಟುಕೊಳ್ಳಬೇಡಿ ಅದೇನೆಂದು ನೇರವಾಗಿ ಹೇಳಿ. ನೀವೇನು ನಮಗೆ ನೆನ್ನೆ ಮೊನ್ನೆಯ ಪರಿಚಯದವರಲ್ಲ” ಎಂದರು.
‘ಏನಿಲ್ಲ, ನಿಮ್ಮೊಡನೆ ನಾವು ಇಲ್ಲಿಯವರೆಗೆ ಒಂದು ವಿಷಯವನ್ನು ತಿಳಿಸದೆ ಮುಚ್ಚಿಟ್ಟಿದ್ದೆವು. ಆದರೆ ಆ ಸಮಸ್ಯೆ ಈಗ ಪೆಡಂಭೂತವಾಗಿ ನಮ್ಮ ಬದುಕನ್ನೇ ಆಹುತಿ ತೆಗೆದುಕೊಳ್ಳುವಷ್ಟಾಗಿದೆ. ಆದ್ದರಿಂದ ಭಯಗೊಂಡು ನಿಮ್ಮಲ್ಲಿಗೆ ಓಡಿ ಬಂದಿದ್ದೇವೆ. ನಮ್ಮ ದೊಡ್ಡ ಮಗಳು ಸಿಂಧು ನಿಮಗೆ ಅಪರಿಚಿತಳೇನಲ್ಲ. ಆಕೆ ನೀವು ಅಲ್ಲಿದ್ದಾಗಲೂ ಒಂದು ಸತ್ಸಂಗ ಸಂಘದ ಕಾರ್ಯಕ್ರಮಗಳಿಗೆ ಹೋಗುತ್ತಿದ್ದಳೆಂಬುದು ನಿಮಗೆ ಗೊತ್ತು. ಅದು ಅವಳಿಗೆ ಮಾನಸಿಕವಾಗಿ ಸಮಾಧಾನ ಕೊಡುತ್ತದೆಂದು ನಾವೂ ಸುಮ್ಮನಿದ್ದೆವು. ನಂತರ ಆಕೆ ಇಂಜಿನಿಯರಿಂಗ್ ಮಾಡಿ ಕಂಪೆನಿಯೊಂದರಲ್ಲಿ ಒಳ್ಳೆಯ ಕೆಲಸ ಹಿಡಿದಿದ್ದಳು. ಆದರೆ ಅವಳು ಆ ಸಂಘದ ಸಂಪರ್ಕವನ್ನು ಆಕೆ ಕಡಿದುಕೊಂಡಿರಲಿಲ್ಲ. ಅವಳು ಬೇರೆ ಊರಿನಲ್ಲಿ ಸ್ವತಂತ್ರ ಬದುಕು ನಡೆಸುತ್ತಿದ್ದಾಗ ನಾವು ಅವಳ ಮದುವೆ ಪ್ರಯತ್ನ ಮಾಡಿದೆವು. ಅದಕ್ಕವಳು ಈಗಲೇ ನಾನು ವಿವಾಹವಾಗುವುದಿಲ್ಲ ಎಂಬ ನೆಪ ಹೇಳಿ ಅವಳ ತಂಗಿಗೆ ಮದುವೆ ಮಾಡಲು ಒಪ್ಪಿದ್ದಳು. ಇದೆಲ್ಲಾ ನಿಮಗೂ ತಿಳಿದದ್ದೇ. ಆದರೆ ಎರಡು ವರ್ಷ ಕೆಲಸ ಮಾಡುತ್ತಿದ್ದವಳು ಇದ್ದಕ್ಕಿದ್ದಂತೆ ತನ್ನ ಕೆಲಸಕ್ಕೆ ರಾಜೀನಾಮೆಯಿತ್ತು ಆ ಅಧ್ಯಾತ್ಮ ಸಂಘದ ಸಕ್ರಿಯ ಸೇವಾಕರ್ತಳಾಗಿ ಸೇರಿಕೊಂಡು ಬಿಟ್ಟಿದ್ದಾಳೆ. ಅಲ್ಲಿಯ ವಾತಾವರಣ ವಿಚಿತ್ರವಾಗಿದೆ. ಆದರೆ ಅವಳ ಮನಸ್ಸು ಅದರಲ್ಲಿ ನೆಟ್ಟುಹೋಗಿದೆ. ಅಲ್ಲಿಂದ ಹಿಂತಿರುಗಿ ಕರೆತರುವ ಪ್ರಯತ್ನ ಮಾಡಿದೆವು. ಆದರೆ ಮೊದಲು ನಮ್ಮೊಡನೆ ಮಾತನಾಡಿದವಳು ನಂತರ ಬಹಳಷ್ಟು ಸಾರಿ ಅಲ್ಲಿಗೆ ಹೋದರೂ ನಮ್ಮೊಡನೆ ಮಾತನಾಡಲೂ ನಿರಾಕರಿಸುತ್ತಿದ್ದಾಳೆ. ಕಾರಣ ಕೇಳಿದರೆ ತಾನು ಆ ಸಂಘಕ್ಕೇ ಮೀಸಲಾಗಿ ಉಳಿಯುವ ತೀರ್ಮಾನ ಮಾಡಿರುವಳಂತೆ ಎಂದು ತಿಳಿಯಿತು. ಅವಳು ಅವರ ಬೋಧನೆಗಳಿಗೆ ಸಂಪೂರ್ಣವಾಗಿ ವಶವರ್ತಿಯಾಗಿಬಿಟ್ಟಿದ್ದಾಳೆ. ಇದರಿಂದಾಗಿ ನಮಗೆ ದಿಕ್ಕು ತೋಚದಂತಾಗಿದೆ. ಹೇಗಾದರೂ ಅವಳಿಗೆ ಹಿಡಿದಿರುವ ಹುಚ್ಚು ಬಿಡಿಸಿ ಅವಳನ್ನು ಹಿಂದಕ್ಕೆ ಕರೆತರುವ ಪ್ರಯತ್ನ ನಿಮ್ಮಿಂದ ಮಾತ್ರ ಸಾಧ್ಯ. ನೀವು ಅನೇಕ ಜಟಿಲವಾದ ಸಾಂಸಾರಿಕ ಸಮಸ್ಯೆಗಳನ್ನು ಮಾನಸಿಕ ಸಲಹೆಗಾರರಾಗಿ ಬಿಡಿಸಿದ್ದೀರಿ. ಇದೊಂದು ಪುಣ್ಯದ ಕೆಲಸವನ್ನು ದಯವಿಟ್ಟು ಮಾಡಿಕೊಡಿ ಎಂದು ಬೇಡಿಕೊಳ್ಳುತ್ತೇವೆ” ಎಂದು ದಂಪತಿಗಳಿಬ್ಬರೂ ಕೈಮುಗಿದರು.
ಅವರ ದೈನ್ಯಾವಸ್ಥೆಯನ್ನು ಕಂಡು ಮರುಕ ಹುಟ್ಟಿತು. ನಮ್ಮ ಕಣ್ಣಮುಂದೆ ಬೆಳೆದ ಹುಡುಗಿ ಹೀಗೆ ದಾರಿತಪ್ಪಿ ಹೋಗಬಾರದು ಎನ್ನಿಸಿ ಲಲಿತಾರವರು “ಖಂಡಿತಾ ನನ್ನ ಪ್ರಯತ್ನ ನಾನು ಮಾಡುತ್ತೇನೆ. ಮುಂದಿನದು ದೈವೇಚ್ಛೆ” ಎಂದು ಅವರನ್ನು ಸಮಾಧಾನಪಡಿಸಿ. ಸಿಂಧು ಕೆಲಸ ಮಾಡುತ್ತಿದ್ದ ಅಧ್ಯಾತ್ಮ ಸಂಘದ ಬಗ್ಗೆ ಅವರಿಗೇನು ತಿಳಿದಿದೆ ಅದನ್ನು ಹೇಳಿ ಎಂದು ಕೇಳಿದರು.
“ಹರಿ ಓಂ” ಎಂಬ ಹೆಸರಿನ ಅಧ್ಯಾತ್ಮ ಸಂಘವು ಸ್ಥಾಪನೆಯಾಗಿ ಎರಡು ದಶಕಕ್ಕೂ ಹೆಚ್ಚುಕಾಲವಾಗಿದೆ. ಮೊದಲು ಅದು ಸಣ್ಣದಾಗಿ ಪ್ರಾರಂಭವಾಗಿ ಈಗ ಬಹುವಿಭಾಗಗಳಾಗಿ ಬೆಳೆದು ಹೆಮ್ಮರವಾಗಿದೆ. ಅಮೆರಿಕದ ಅನೇಕ ನಗರಗಳಲ್ಲಿ ತನ್ನ ಶಾಖೆಗಳನ್ನು ಹೊಂದಿದೆ. ಅದರ ಮುಖ್ಯ ಗುರು ಮತ್ತು ಸ್ಥಾಪಕರು ಷಿಕಾಗೋದಲ್ಲಿದ್ದು ಪ್ರತಿಯೊಂದು ಶಾಖೆಗೂ ಪ್ರತ್ಯೇಕವಾದ ಆಡಳಿತ ವ್ಯವಸ್ಥೆ ಮಾಡಿದ್ದಾರೆ. ಅಲ್ಲಿನ ಶಾಖಾ ಮುಖ್ಯಸ್ಥರೇ ಅಲ್ಲಿನ ಎಲ್ಲ ವಿದ್ಯಮಾನಗಳನ್ನು ನೋಡಿಕೊಳ್ಳುವರು. ಅಲ್ಲಿಗೆ ಸಾವಿರಾರು ಭಕ್ತರು, ಸೇವಾಕರ್ತರು, ದಾನನೀಡಿ ಪೋಷಿಸುತ್ತಿರುವವರು ಇದ್ದಾರೆ. ಅಲ್ಲಿಗೆ ಹರಿದು ಬರುವ ಹಣದ ಮೊತ್ತವೂ ಅಪಾರವಾಗಿದೆ. ಹೀಗಾಗಿ ಪ್ರತಿಷ್ಠಿತರ ಗುಂಪೇ ಅಲ್ಲಿಗೆ ಶರಣಾಗಿದ್ದಾರೆ. ಸಿಂಧು ಇರುವ ಶಾಖೆಯು ರಕ್ಷಿತ ಅರಣ್ಯ ಪ್ರದೇಶವೊಂದರ ಮಧ್ಯೆ ನಿರ್ಮಾಣವಾಗಿದೆ. ಅಲ್ಲಿಗೂ ನೀವು ವಾಸವಿರುವ ಊರಿಗೂ ಸುಮಾರು ನಾಲ್ಕು ಗಂಟೆಗಳ ಪ್ರಯಾಣದಷ್ಟು ದೂರವಾಗಿದೆ. ಸಿಂಧುವನ್ನು ಆಡಳಿತ ಕಛೇರಿಯಲ್ಲಿ ಹಣಕಾಸು ವಿಭಾಗದಲ್ಲಿ ಮುಖ್ಯ ಅಕೌಂಟೆಂಟ್ ಎಂದು ನೇಮಕ ಮಾಡಿದ್ದಾರೆ. ಆಕೆಗೆ ಅಲ್ಲಿಯೇ ವ್ಯವಸ್ಥಿತವಾದ ಕೊಠಡಿಯನ್ನೊಳಗೊಂಡಂತೆ ಎಲ್ಲ ಸೌಲಭ್ಯಗಳನ್ನೂ ನೀಡಲಾಗಿದೆ. ಆದರೆ ಹೊರಗಿನವರ ಸಂಪರ್ಕ ಮಾತ್ರ ಇಲ್ಲ. ಎಲ್ಲವೂ ನಿಗೂಢವಾಗಿದೆ. ಹೇಗಾದರೂ ಮಾಡಿ ನಮ್ಮ ಮಗಳು ನಮಗೆ ದಕ್ಕುವಂತೆ ಮಾಡಬೇಕು. ಅವಳನ್ನು ನಿಮ್ಮ ಹೊಟ್ಟೆಯಲ್ಲಿ ಹುಟ್ಟಿದ ಮಗಳೆಂದೇ ಭಾವಿಸಿ. ನಾವು ನಿಮ್ಮ ಪ್ರಯಾಣಕ್ಕೆ ಸಕಲ ಏರ್ಪಾಡುಗಳನ್ನೂ ಮಾಡಿಕೊಡುತ್ತೇವೆ. ಸಮೀಪದ ವಿಮಾನ ನಿಲ್ದಾಣದಲ್ಲಿ ನೀವು ಇಳಿಯುವ ವೇಳೆಗೆ ಅಲ್ಲಿ ನಾವು ವಾಹನದೊಂದಿಗೆ ನಿಮ್ಮನ್ನು ಸ್ವಾಗತಿಸಲು ಕಾದಿರುತ್ತೇವೆ. ದಯವಿಟ್ಟು ಇಲ್ಲವೆನ್ನಬೇಡಿ” ಎಂದು ಮತ್ತೊಮ್ಮೆ ಕೈಜೋಡಿಸಿದರು. ಅವರ ಕಣ್ಣುಗಳಲ್ಲಿ ಆರ್ದ್ರತೆಯಿತ್ತು. ಅದನ್ನು ಗಮನಿಸಿದ ಲಲಿತಾರವರು ಏನಾದರೂ ಸಾಧಿಸಲೇಬೇಕೆಂಬ ನಿರ್ಧಾರಕ್ಕೆ ಬಂದರು.
(ಮುಂದುವರಿಯುವುದು…)
-ಬಿ.ಆರ್ .ನಾಗರತ್ನ. ಮೈಸೂರು
ಅತ್ಯಂತ ಕುತೂಹಲವನ್ನು ಹುಟ್ಟು ಹಾಕಿದ, ವಿಭಿನ್ನ ಕಥಾವಸ್ತುವನ್ನು ಹೊಂದಿದ ಆಸಕ್ತಿದಾಯಕ ಕಥನ. ಮುಂದಿನ ವಾರಕ್ಕೆ ಕಾಯುವಂತೆ ಮಾಡಿದೆ..
ಧನ್ಯವಾದಗಳು ಪ್ರಿಯ ಗೆಳತಿ ಪದ್ಮಾ
ಪ್ರಕಟಣೆಗಾಗಿ ಹೃತ್ಪೂರ್ವಕವಾದ ಧನ್ಯವಾದಗಳು.. ಗೆಳತಿ ಹೇಮಾ
ಕೆಲವು ಸಾಮಾಜಿಕೆ ಸಮಸ್ಯೆಗಳು ಎಲ್ಲಾ ಕಾಲಕ್ಕೂ ಪ್ರಸ್ತುತ. ಅರಿವಿದ್ದೋ ಇಲ್ಲದೆಯೋ ಸಮಸ್ಯೆಗೆ ಸಿಲುಕುವವರಿಗೆ ತನ್ನಿಂದಾದಷ್ತು ಸಹಾಯ ಮಾಡುವ ಮನೋಭೀಮಿಕೆಯುಳ್ಳ ಕಥಾ ಹಂದರ ಹಾಗೂ ನಿರೂಪಣೆ ಇಷ್ಟವಾಯಿತು.
ಧನ್ಯವಾದಗಳು ಗೆಳತಿ ಹೇಮಾ
ಮನೋವೈಜ್ಞಾನಿಕ ಕಥೆಗಳ ರಚನೆಯಲ್ಲಿ ನೀವು ಎತ್ತಿದ ಕೈ! ಅಮೆರಿಕದಲ್ಲಿ ನೆಲೆಸಿದ ಸಂಸಾರದ ಸಮಸ್ಯೆಯೊಂದನ್ನು ಬಗೆಹರಿಸುವ ಹಾದಿಯಲ್ಲಿ, ಬಹಳ ಕುತೂಹಲಕಾರಿಯಾಗಿ ಸಾಗುತ್ತಿದೆ ಕಥೆ…ಧನ್ಯವಾದಗಳು ನಾಗರತ್ನ ಮೇಡಂ.