ಕಿಟಕಿ
ಅವರಿರವರ ಮಾತಿಗೆ
ತಲೆಕೆಡಿಸಿ ಕೊಳ್ಳುವಿ ಯಾಕೆ
ನಿನ್ನದಲ್ಲದ ತಪ್ಪಿಗೆ
ಸುಮ್ಮನೆ ಕೊರಗುವಿ ಯಾಕೆ
ಮಾತಿಗೆ ಮಾತು ಬೆಳೆಸಿ
ಜಗಳ ಮಾಡುವಿ ಯಾಕೆ
ಮೌನದಿ ಸಾಗುವುದನ್ನು
ಮರೆಯುವಿ ಯಾಕೆ
ಊರು ಎಂದ ಮೇಲೆ
ಕೇರಿ ಇರಲೇ ಬೇಕು
ಕೇರಿಯಲ್ಲಿಯ ಮೋರಿ
ಗಬ್ಬು ನಾರುವುದು ಯಾಕೆ
ಹೊಂದಾಣಿಕೆ ಇರದ ಮೇಲೆ
ದೂರ ದೂರ ಸರಿಬೇಕು ಜೋಕೆ
ಸುಮ್ಮನೆ ಗುದ್ದಾಟವ ಮಾಡಿ
ಯಾತನೆ ಪಡೆಯುವುದು ಯಾಕೆ
ಮನದೊಳಗಿನ ಕಿಡಿ ನೆರೆ_ಹೊರೆಯ
ಸುಡುವ ಮೊದಲು
ನಿನ್ನ ಮನವನ್ನೇ ಸುಡುವುದು
ಎನ್ನುವುದ ಅರಿಯದೆ ಹೋದೆ ಯಾಕೆ
ನಿನ್ನರಿವು ನಿನ್ನೊಳಗೆ
ಇರದೆ ಹೋದ ಮೇಲೆ
ಜಗದ ಜನರಮೇಲೆ ಸುಮ್ಮನೆ
ಗೂಬೆ ಕೂರಿಸುವೆ ಯಾಕೆ
ಸುಡುವ ಮನವನ್ನು ಮೊದಲು
ತಣ್ಣಗೆ ಮಾಡಿಕೊ
ಸುತ್ತಮುತ್ತಲಿನ ಗೌಜು ಗದ್ದಲದ
ಉಸಾಬರಿಯು ನಿನಗೆ ಯಾಕೆ
ಶಾಂತಿ ಕದಡುವ ಜನರ ನಡುವೆ
ಮನಶಾಂತಿ ಹುಡುಕುವಿ ಯಾಕೆ
ಯಾರದು ಸುಖಕ್ಕೆ ದುಡಿ_ದುಡಿದು
ಕತ್ತೆಯಂತೆ ಆಗುವೆ ಯಾಕೆ
ಶಾಂತಿ ನೆಮ್ಮದಿಯ ಜೀವನವ
ಎಲ್ಲೋ ಹುಡುಕುವಿ ಯಾಕೆ
ನಿನ್ನೊಳಮನದ ಬೆಳಕಿನ ಕಿಟಕಿಯ
ತೆರೆಯುವುದ ಮರೆತೆ ಯಾಕೆ
-ನಾಗರಾಜ ಜಿ. ಎನ್. ಬಾಡ
ಕುಮಟ, ಉತ್ತರ ಕನ್ನಡ.
ತನಗೆ ತಾನೇ ಪ್ರಶ್ನೆಗಳನ್ನು ಹಾಕಿಕೊಳ್ಳುತ್ತಾ…ಪರಹಾರ ಹುಡುಕಿಕೊಡುವ ತಂತ್ರವನ್ನು ಕವನದ ಮೂಲಕ ಹೇಳಿ ರುವ ರೀತಿ ಚೆನ್ನಾಗಿದೆ ಸಾರ್..ವಂದನೆಗಳು
ಧನ್ಯವಾದಗಳು
Nice
ಧನ್ಯವಾದಗಳು
ಮೌಲ್ಯಯುತ ಸಂದೇಶವನ್ನು ನೀಡುತ್ತಾ, ಒಳಮನಸ್ಸಿನ ಕಿಟಕಿಯನ್ನು ತೆರೆದು ಅಲ್ಲಿನ ಕತ್ತಲನ್ನು ದೂರ ಮಾಡುವ ಪ್ರಯತ್ನ ಮಾಡಿದ ಸುಂದರ ಕವನ
ನೆಮ್ಮದಿಯ ಜೀವನಕ್ಕೆ ಸರಳ ವಿಧಾನಗಳನ್ನು ಕಾವ್ಯಾತ್ಮಕವಾಗಿ ಹೆಣೆದಿರುವ ಕವನ ಸೊಗಸಾಗಿ ಮೂಡಿಬಂದಿದೆ..