ಭೂವಿಜ್ಞಾನಿ ಡಾ.ಟಿ. ಆರ್. ಅನಂತರಾಮು

Share Button

 ಜಿ.ವಿ.ನಿರ್ಮಲ

ಶೀರ್ಷಿಕೆಯೇ ಸೂಚಿಸುವಂತೆ ಡಾ. ಟಿ. ಆರ್. ಅನಂತರಾಮು ಮೂಲತಃ ಭೂವಿಜ್ಞಾನಿ. ಕನ್ನಡ ಸಾಹಿತ್ಯಕ್ಕೂ ಭೂವಿಜ್ಞಾನಿಗಳಿಗೂ ಏನೋ ಆಗಾಧ ನೆಂಟಿರುವಂತಿದೆ. ಪ್ರಸಿದ್ಧ ಕವಿ ನಾಡೋಜ ನಿಸಾರ್‍, ನಿಸ್ಸೀಮ ಸಾಹಿತಿ ಡಾ. ಸೀತಾರಾಮು ಮುಂತಾದವರು ಭೂವಿಜ್ಞಾನಿಗಳೇ. ಇವರೆಲ್ಲರೂ ತಮ್ಮ ಕ್ಷೇತ್ರದಲ್ಲಿ ಪಾರಂಗತರಾಗಿದ್ದಲ್ಲದೆ ಕನ್ನಡ ಸಾಹಿತ್ಯಕ್ಕೆ ಮತ್ತು ಕನ್ನಡದ ವಿಜ್ಞಾನ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಕನ್ನಡದ ವಿಜ್ಞಾನ ಸಾಹಿತ್ಯ ಓದುಗರಿಗೆ ಚಿರಪರಿಚಿತರಾಗಿರುವ ಅನಂತರಾಮುರವರು ಇದೇ ಸಾಲಿಗೆ ಸೇರುವ ಅಸಾಮಾನ್ಯ ಲೇಖಕರು.

ಅಪ್ಪಟ ಕನ್ನಡಿಗರಾದ ಅನಂತರಾಮುರವರು ಜನಿಸಿದ್ದು ಆಗಸ್ಟ್ 3, 1949 ರಂದು ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕಿನ ತಾಳಗುಂದದಲ್ಲಿ. ಸುಸಂಸ್ಕೃತರಾದ ತಂದೆ ರಾಮಣ್ಣನವರು ಮತ್ತು ತಾಯಿ ವೆಂಕಟಲಕ್ಷಮ್ಮನವರು ವಿದ್ಯಾವಂತರೂ ಆಗಿದ್ದರು. ತಂದೆತಾಯಂದಿರೇ ಅನಂತರಾಮುರವರಿಗೆ ಬಹುಮಾನ್ಯ ಆದರ್ಶ ವ್ಯಕ್ತಿಗಳು. ಅನಂತರಾಮುರವರು ಶಿರಾದಲ್ಲಿ ಶಾಲಾ ವಿದ್ಯಾಭ್ಯಾಸ ಮುಗಿಸಿದ ನಂತರ ತುಮಕೂರಿನ ಸರ್ಕಾರಿ ಕಾಲೇಜಿನಿಂದ 1970 ನೆಯ ಸಾಲಿನಲ್ಲಿ ಪದವಿ ಮತ್ತು ಮೈಸೂರು ವಿಶ್ವವಿದ್ಯಾಲಯದಿಂದ ಭೂವಿಜ್ಞಾನದಲ್ಲಿ 1972 ರಲ್ಲಿ ಎಂ.ಎಸ್ಸಿ ಪದವಿ ಗಳಿಸಿದರು.

ಮುಂದೆ ಬೆಂಗಳೂರಿನ ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ಮತ್ತು ಸುರತ್ಕಲ್‍ ರೀಜಿನಲ್ ಇಂಜನಿಯರಿಂಗ್‍ ಕಾಲೇಜಿನಲ್ಲಿ ಅ‍ಧ್ಯಾಪಕರಾಗಿ ಸೇವೆ ಸಲ್ಲಿಸಿದರು. 1977 ರಿಂದ ನಿವೃತ್ತಿಯವರೆಗೆ ಭಾರತೀಯ ಭೂವೈಜ್ಞಾನಿಕ ಸರ್ವೇಕ್ಷಣ ಸಂಸ್ಥೆಯಲ್ಲಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಚಿನ್ನದ ನಿಕ್ಷೇಪಗಳಿಗಾಗಿ ಅನಂತರಾಮುರವರು ಕನ್ನಡ ನಾಡಿನ ಭೂಮಿ ಸಮೀಕ್ಷೆಯನ್ನು ಶೋಧನೆ ನಡೆಸುತ್ತಿರುವಂತೆಯೇ, ಕನ್ನಡ ಸರಸ್ವತಿ ಚಿನ್ನದ ಲೇಖಕನನ್ನು ರೂಪಿಸಿ ಕನ್ನಡ ಸಾರಸ್ವತ ಲೋಕವನ್ನು ಶ್ರೀಮಂತಗೊಳಿಸಿದ್ದಾಳೆ.

ಇವರು ಕೋಲಾರ ಗೋಲ್ಡ್ ಫೀಲ್ಡಿನಲ್ಲಿ ಉದ್ಯೋಗಸ್ಥರಾಗಿದ್ದಾಗ ಚಿನ್ನದ ಗಣಿಯೊಳಗೆ ಮೂರು ಕಿಲೋಮೀಟರ್ ಆಳಕ್ಕೂ ಹೆಚ್ಚು ದೂರ ಇಳಿದು, 69 ಡಿಗ್ರಿ ತಾಪಮಾನದಲ್ಲಿ ಸಂಶೋಧನೆಗಳನ್ನು ಕೈಗೊಂಡಿದ್ದಾರೆ. ಗಣಿಯೊಳಗೆ ಇಳಿಯುವುದು ಸಾಹಸದ ಕೆಲಸವೇ ಸರಿ. ಅನಂತರಾಮುರವರು ಮೇಘಾಲಯದ ಬೆಟ್ಟ ಹಾಗೂ ಕಣಿವೆಗಳಲ್ಲಿಯೂ ಸಮೀಕ್ಷೆ ನಡೆಸಿದ್ದಾರೆ. ಮಲೆ ಮಹದೇಶ್ವರ ಬೆಟ್ಟ ಪ್ರದೇಶದ ದುರ್ಗಮ ಕಾಡುಗಳಲ್ಲಿ ಸಮೀಕ್ಷೆ ನಡೆಸಿ, ಅಲ್ಲಿನ ಶಿಲಾನಿಕ್ಷೇಪಗಳ ನಕ್ಷೆ ಸಿದ್ಧಪಡಿಸಿದವರಲ್ಲಿ ಇವರೇ ಮೊದಲಿಗರು. ಜಿಲ್ಲಾ ಸಂಪನ್ಮೂಲಗಳಾದ ನೀರು, ಮಣ್ಣು, ಅರಣ್ಯ, ಖನಿಜ ನಿಕ್ಷೇಪಗಳು ಇತ್ಯಾದಿಗಳ ಬಗ್ಗೆ ಜಿಲ್ಲಾ ಸಂಪನ್ಮೂಲ ನಕ್ಷೆಯನ್ನು ಸಿದ್ಧಪಡಿಸುವ ವ್ಯವಸ್ಥೆಯನ್ನು ಜಾರಿಗೆ ತಂದಿದ್ದಾರೆ.

ಭೂವೈಜ್ಞಾನಿಕ ಸಂಸ್ಥೆಯ 150 ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಇವರು ಸಂಪಾದಿಸಿರುವ ‘ನ್ಯಾಷನಲ್‍ ಜಿಯಲಾಜಿಕಲ್‍ ಮಾನ್ಯುಮೆಂಟ್‍’ ಅತಿ ವಿಶಿಷ್ಟವಾದ, ಬಹಳ ಕಾಲದವರೆಗೆ ಹಲವಾರು ಸಂಶೋಧನೆಗಳಿಗೆ ಉಪಯುಕ್ತವಾದ ಕೃತಿ ಎನ್ನುವ ಮನ್ನಣೆಗೆ ಪಾತ್ರವಾಗಿದೆ. ಇದು ಕರ್ನಾಟಕದ ಮರಡಿಹಳ್ಳಿಯಲ್ಲಿರುವ ದಿಂಬುಲಾವ, ಲಾಲ್‍ಬಾಗಿನ ಬೆಟ್ಟ, ಮಂಗಳೂರಿನ ಸೇಂಟ್‍ ಮೇರಿ ದ್ವೀಪದ ಶಿಲಾಕಂಬಗಳು ಹಾಗೂ ಕೆ.ಜಿ.ಎಫ್‍ ನಲ್ಲಿರುವ ಜ್ವಾಲಾಮುಖಿಯ ಕಲ್ಲುಗಳ ಬಗ್ಗೆ ಮಹತ್ವದ ದಾಖಲೆಗಳನ್ನು ಒಳಗೊಂಡಿದೆ.

ಯಾವುದೇ ಕೆಲಸದಲ್ಲಾದರೂ ಶಿಸ್ತುಬದ್ಧರಾಗಿ ಕೆಲಸವನ್ನು ಮಾಡುವ ಟಿ.ಆರ್. ಅನಂತರಾಮುರವರನ್ನು ನಾನು ವೈಯಕ್ತಿಕವಾಗಿ ಬಲ್ಲೆ. ಕುವೆಂಪು ಭಾಷಾ ಭಾರತಿಯಲ್ಲಿ ಜೆ.ಡಿ.ಬರ್ನಾಲ್‍ರ Science in History ಪುಸ್ತಕದ ನಾಲ್ಕು ಸಂಪುಟಗಳನ್ನು ಅನುವಾದ ಮಾಡಿದವರಲ್ಲಿ ನಾನೂ ಒಬ್ಬಳಾಗಿದ್ದೆ. ಮುಖ್ಯ ಸಂಪಾದಕರಾಗಿದ್ದ ಅನಂತರಾಮುರವರ ಶಿಸ್ತು ಬದ್ಧತೆಗಳನ್ನು ಕಂಡು ಬೆರಗಾದೆ. ಇವರ ಮಾರ್ಗದರ್ಶನದಲ್ಲಿ ಬಹಳಷ್ಟು ಕಲಿತಿದ್ದೇನೆ.

ಡಾ. ಟಿ. ಆರ್. ಅನಂತರಾಮು

ಮೊದಲೇ ಹೇಳಿರುವಂತೆ ಅನಂತರಾಮುರವರು ವಿಜ್ಞಾನ ಲೇಖಕ, ಸಂಪಾದಕ ಹಾಗೂ ಜನಪ್ರಿಯ ಅಂಕಣಕಾರ. ಅಧ್ಯಯನ ಮಾಡಿದ್ದು ಭೂವಿಜ್ಞಾನವಾದರೂ ಇವರ ಬರಹಗಳು ಎಂದೂ ಭೂವಿಜ್ಞಾನಕ್ಕೆ ಮಾತ್ರವೇ ಸೀಮಿತವಾಗಿಲ್ಲ. ವಿವಿಧ ವೈಜ್ಞಾನಿಕ ವಿಷಯಗಳ ಬಗ್ಗೆ ಸರಳವಾಗಿ, ಸ್ವಾರಸ್ಯವಾಗಿ ಬರೆಯುವ ಸಮರ್ಥ ಬರಹಗಾರರು. ಇವರ ಲೇಖನಗಳು ಕಸ್ತೂರಿ, ತರಂಗ ಮುಂತಾದ ಪತ್ರಿಕೆಗಳ ಮೂಲಕ ಜನ ಸಾಮಾನ್ಯರಿಗೂ ತಲುಪುತ್ತಿವೆ. ವಿವಿಧ ಮಾಧ್ಯಮಗಳ ಮೂಲಕ ವಿಜ್ಞಾನವನ್ನು ಜನಪ್ರಿಯಗೊಳಿಸುವ ಕೆಲಸದಲ್ಲಿ ಹಲವು ದಶಕಗಳಿಂದ ತೊಡಗಿದ್ದಾರೆ. ಆಕಾಶವಾಣಿ, ದೂರದರ್ಶನಗಳ ಮೂಲಕವೂ ವೈಜ್ಞಾನಿಕ ಮಾಹಿತಿಗಳನ್ನು ಜನರಿಗೆ ತಲುಪಿಸುತ್ತಿರುವ ಅನಂತರಾಮುರವರು ವಿಜ್ಞಾನ ಗೋಷ್ಠಿಗಳಲ್ಲಿ ವಿದ್ವತ್ಪೂರ್ಣ ಉಪನ್ಯಾಸಗಳನ್ನು ನೀಡುವುದರಲ್ಲಿಯೂ ಸಿದ್ಧಹಸ್ತರು. ಕನ್ನಡ ವಿಜ್ಞಾನ ಸಾಹಿತ್ಯದ ದಿಗ್ಗಜ ಪ್ರೊ.ಜಿ.ಟಿ.ನಾರಾಯಣರಾವ್ ಆವರು ಬಹಳ ಮುಂಚೆಯೇ ಇವರನ್ನು ಗುರುತಿಸಿದ್ದರು ಹಾಗೂ ಅನಂತರಾಮುರವರ ಬರಹವನ್ನು ಬಹುವಾಗಿ ಮೆಚ್ಚುತ್ತಿದ್ದರು. ಮತ್ತೊಬ್ಬ ವಿಜ್ಞಾನ ಸಾಹಿತಿ ಡಾ.ಎಚ್‍.ಆರ್. ಕೃಷ್ಣಮೂರ್ತಿಯವರೂ ಅನಂತರಾಮುರವರ ಬಗ್ಗೆ “ಕನ್ನಡದ ಜನಪ್ರಿಯ ವಿಜ್ಞಾನ ಪತ್ರಿಕೆಯು ಹೇಗಿರಬೇಕೆನ್ನುವ ‘ಬೆಂಚ್‍ ಮಾರ್ಕ್’ ಅನ್ನು ವಿಜ್ಞಾನ ಸಂಗಾತಿ ಪತ್ರಿಕೆಯ ಮೂಲಕ ತೋರಿಸಿಕೊಟ್ಟಿದ್ದಾರೆ” ಎಂದು ಹೊಗಳಿದ್ದಾರೆ.

ವಿಜ್ಞಾನ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಲೀಲಾಜಾಲವಾಗಿ ಬರೆದು, ತಮ್ಮ ಕೊಡುಗೆಗಳನ್ನು ನೀಡಿರುವ ಶ್ರೀಯುತರು ವಿಸ್ಮಯ ವಿಜ್ಞಾನ ಮಾಲಿಕೆಯ ಕೃತಿಗಳನ್ನು ಸಂಪಾದನೆ ಮಾಡಿದ್ದಾರೆ. ಸಾಕ್ಷ್ಯಚಿತ್ರಗಳಿಗೆ ಸಾಹಿತ್ಯ ಒದಗಿಸಿದ್ದಾರೆ. ಜ್ಞಾನ-ವಿಜ್ಞಾನ ವಿಶ್ವಕೋಶ, ಕನ್ನಡ ವಿಶ್ವಕೋಶ, ಕರ್ನಾಟಕ ಕೋಶ, ಕಿರಿಯರ ಕರ್ನಾಟಕ ಮುಂತಾದ ವಿಶ್ವಕೋಶಗಳಿಗೆ ಲೇಖನಗಳನ್ನು ಬರೆದಿದ್ದಾರೆ. ಅನೇಕ ಪದ ವಿವರಣಾ ಕೋಶಗಳ ಸಂಪಾದಕತ್ವವನ್ನು ಸಮರ್ಪಕವಾಗಿ ನಿರ್ವಹಿಸಿದ್ದಾರೆ.

ವಿಜ್ಞಾನವನ್ನು ಸರಳವಾಗಿ ಆದರೆ ಸಾರಗೆಡದಂತೆ ಬರೆಯುವುದು ಇವರ ವೈಶಿಷ್ಟ್ಯ. ವಿಜ್ಞಾನ ಕೃತಿಗಳನ್ನೂ ಸಾಹಿತ್ಯಕೃತಿಯೋ ಎನ್ನುವ ಭ್ರಮೆ ಹುಟ್ಟಿಸುವಂತೆ ಓದುಗರಿಗೆ ತಲುಪಿಸುವುದಕ್ಕೆ ಇವರ ಆಕರ್ಷಕ ಶೈಲಿಯೇ ಕಾರಣ. ಇವರ ನಿರೂಪಣಾ ತಂತ್ರ ಓದುಗರ ಮೆಚ್ಚುಗೆ ಗಳಿಸಿದೆ. ಇವರ ಶೈಲಿಯನ್ನು ಮೆಚ್ಚಿರುವ ಮತ್ತೊಬ್ಬ ವಿಜ್ಞಾನ ಸಾಹಿತಿ ಪ್ರೊ. ಎಚ್.ಆರ್. ರಾಮಕೃಷ್ಣರಾವ್ ಇವರ ಬಗ್ಗೆ ಹೇಳುತ್ತಾ–ಕನ್ನಡದಲ್ಲಿ ಅನೇಕ ದಶಕಗಳಿಂದ ಶ್ರೇಷ್ಠ ವೈಜ್ಞಾನಿಕ ಕೃತಿಗಳನ್ನು ರಚಿಸಿರುವ ಶ್ರೀ.ಟಿ.ಆರ್. ಅನಂತರಾಮು. …ಕನ್ನಡ ಸಾರಸ್ವತ ಲೋಕದಲ್ಲಿ, ವಿಜ್ಞಾನ ಸಾಹಿತ್ಯದಲ್ಲಿ “ಟಿಆರ್‍ಎ‘ ಒಂದು ‘ಬ್ರಾಂಡ್ ನೇಮ್’-ಇಂಗ್ಲೆಂಡಿನಲ್ಲಿ ಅಸಿಮೋವ್ ಇದ್ದಂತೆ- ಎಂದು ಅಭಿಮಾನದಿಂದ ನುಡಿದಿದ್ದಾರೆ. ದೂರದರ್ಶಕ ಕಂಡ ವಿಶ್ವರೂಪ ಕೃತಿಯ ಮುನ್ನುಡಿಯಲ್ಲಿ ‘ಕನ್ನಡದಲ್ಲಿ ವಿಜ್ಞಾನ ಸಾಹಿತ್ಯ ರಚನೆಗೆ ಸಮರ್ಥವಾದ ಭಾಷಾಶೈಲಿ ಇನ್ನೂ ರೂಪಗೊಂಡಿಲ್ಲ ಎಂದು ಮರಗುವವರ ಕಣ್ಣು ತೆರೆಸುವ ಕೃತಿ ಇದಾಗಿದೆ’ ಎಂದು ಕನ್ನಡವನ್ನು ಬೀಳಾಗಿ ಕಾಣುವ ಸಮಸ್ತ ಕನ್ನಡ ಜನತೆಗೆ ಎಚ್ಚರಿಕೆ ನೀಡಿದ್ದಾರೆ. ಇಷ್ಟೆಲ್ಲಾ ಪ್ರಶಂಸೆಗಳಿಗೆ ಭಾಜನರಾಗಿರುವ ಅನಂತರಾಮುರವರ ಪುಸ್ತಕದ ಪಟ್ಟಿ ದೊಡ್ಡದಾಗಿದೆ. ಒಟ್ಟು ಪ್ರಕಟಣೆಗಳು 2021 ರ ವರೆಗೆ 118 ಕ್ಕೂ ಹೆಚ್ಚು! ಇದರಲ್ಲಿ ಸಂಪಾದಿತ ಕೃತಿಗಳೂ ಸೇರಿವೆ. ಸ್ವಂತ ರಚನೆಗಳು 60, ಅನುವಾದಿತ 13. ಇವಲ್ಲದೆ ಮಕ್ಕಳಿಗಾಗಿಯೂ ಹಲವಾರು ವೈಜ್ಞಾನಿಕ ಪುಸ್ತಕಗಳನ್ನು ರಚಿಸಿದ್ದಾರೆ.

ಅತ್ಯಾಕರ್ಷಕವಾಗಿರುವ ಇವರ ಪುಸ್ತಕಗಳ ಶೀರ್ಷಿಕೆಗಳೇ ಓದುಗರ ಗಮನ ಸೆಳೆಯುತ್ತವೆ. 39 ಕೃತಿಗಳ ಪಟ್ಟಿಯಲ್ಲಿ ಇಂತಹ ಶೀರ್ಷಿಕೆಗಳುಳ್ಳ ಕೃತಿಗಳೆಂದರೆ ಹಿಮದ ಸಾಮ್ರಾಜ್ಯದಲ್ಲಿ, ರಾಜರ ಲೋಹ-ಲೋಹಗಳ ರಾಜ ಚಿನ್ನ, ಬೆಳೆಯುತ್ತಿರುವ ಹಿಮಾಲಯ, ಪೆಡಂಭೂತಗಳು ಅಳಿದವೇಕೆ?, ಕಾಲಗರ್ಭಕ್ಕೆ ಕೀಲಿಕೈ, ದಣಿಯಿಲ್ಲದ ಧರಣಿ, ಬಾನಂಗಳದ ಬತ್ತಳಿಕೆಯಲ್ಲಿ, ಕರ್ತಾರನಿಗೊಂದು ಕಿವಿಮಾತು, ಕರೆಯದೇ ಬಂದ ಅತಿಥಿಗಳು ಇತ್ಯಾದಿ. ಸಾಕೇ?

ಬಹಳ ಹಿಂದೆ ನಾನು ಇವರ ಕೃತಿ ‘ದೂರದರ್ಶಕ ಕಂಡ ವಿಶ್ವರೂಪ’ ದ ವಿಮರ್ಶೆ ಬರೆದಿದ್ದೆ. ಆಗ ನನಗೆ ಆ ಕೃತಿಯ ಲೇಖನಗಳ ಶೀರ್ಷಿಕೆಗಳೇ ಮನ ಸೆಳೆದವು. ಅನಂತರಾಮುರವರು ನೀಡಿರುವ ಅತಿ ಸುಂದರವಾದ ಶೀರ್ಷಿಕೆಗಳನ್ನು ಹೆಣೆದು ನಾನು ಅವರ ಕೃತಿಯ ವಿಮರ್ಶೆ ಮಾಡಿದ್ದು ಹೀಗೆ.

ಭೂವಿಜ್ಞಾನಿಯೊಬ್ಬರು ಮಿಲಿಯನ್-ಬಿಲಿಯನ್-ಟ್ರಿಲಿಯನ್ ಬಗ್ಗೆ ಮಾತನಾಡುತ್ತಿರುವಂತೆಯೇ ಆಕಾಶದೆಡೆಗೆ ಮೊಗ ಮಾಡಿ, ಬೆಳಕಿನೊಂದಿಗೆ ಮಾನವನಾಡಿದ ಆಟಗಳ ಬಗ್ಗೆ ತಿಳಿಸುತ್ತಾ ಅರೆ ಘಳಿಗೆ ಹಿಂದಕ್ಕೆ ಹೋದರೆ ಆಕಾಶಕಾಯಗಳು ಎಷ್ಟೆಲ್ಲಾ ಕೆಲಸಗಳನ್ನು ಸಾಧಿಸುತ್ತವೆಂದು ಆಶ್ಚರ್ಯ ಚಕಿತರಾಗಿ ಅಲ್ಲಿಯವರೆಗೂ ಸುತ್ತುತ್ತಿದ್ದ ಸೂರ್ಯನಿಗೊಂದು ನೆಲೆ (ಸೂರ್ಯನೇ ಸೌರವ್ಯೂಹದ ಕೇಂದ್ರ ಎಂಬ ವಾದ ಒಪ್ಪಿಗೆಯಾದ ಸಂದರ್ಭ) ನೀಡುತ್ತಾರೆ. ಮುಂದೆ ಸಾಗಿ ಬದಲಾದ ಬಾನ ಚಿತ್ರಣವನ್ನು ಗಮನಿಸುವುದೇ ಅಲ್ಲದೆ ಅಗೋಚರ ವಿಶ್ವದ ಅಶರೀರ ವಾಣಿಯನ್ನೂ ಆಲಿಸುತ್ತಾರೆ. ಅಷ್ಟರಲ್ಲಿ ವಿಶ್ವ ವೀಕ್ಷಣೆಗೆ ದಿವ್ಯನೇತ್ರವನ್ನು ಪಡೆದುಕೊಂಡು ವಿರಾಟ್ ಸ್ವರೂಪವನ್ನು ನೋಡಿ ಆನಂದಿಸಿ ‘ಚಂದ್ರ ಕಂಡ ವಿಶ್ವವನ್ನೂ ಓದುಗರಿಗೂ ಪರಿಚಯಿಸುತ್ತಾರೆ. ಇದ್ದಕ್ಕಿದ್ದಂತೆಯೇ ಕೋಟಿ ಸೂರ್ಯ ಸಮಪ್ರಭೆಯ ಬೆಳಕು ಓದುಗರನ್ನು ಜಾಗೃತಗೊಳಿಸುತ್ತದೆ. ವಿಜ್ಞಾನಿಗಳ ಹುಡುಕಾಟ ಎಂದಿಗೂ ನಿಲ್ಲುವಂತಹುದಲ್ಲ. ಮತ್ತಷ್ಟು ಶಕ್ತಿಯುತವಾದ ದೂರದರ್ಶಕಗಳು, ತಾಂತ್ರಿಕ ಸೌಲಭ್ಯಗಳು, ಉಪಗ್ರಹಗಳು, ಕಂಪ್ಯೂಟರ್‍ಗಳು ದೊರಕಿದಾಗ ತಾರೆಗಳ ತೊಟ್ಟಿಲಲ್ಲಿ ಬಗ್ಗಿ ನೋಡಿ ಆನಂದಿಸುವ ಕಾರ್ಯ ಆರಂಭವಾಗುತ್ತದೆ. ಮಹಾಸ್ಫೋಟ-ವಿಶ್ವ ಹುಟ್ಟಿದ ಘಳಿಗೆ, ನಕ್ಷತ್ರಗಳ ವಿಕಾಸ, ಅವಸಾನ ಮತ್ತು ಗೋರಿ ಎಲ್ಲವನ್ನೂ ವಿಶ್ಲೇಷಣೆ ಮಾಡಿ, ಅಂತಿಮವಾಗಿ ಹವಾಯಿ ದ್ವೀಪದಲ್ಲಿ ನಿಷ್ಕ್ರಿಯವಾಗಿರುವ ಜ್ವಾಲಾಮುಖಿಯ ತುತ್ತತುದಿಯಲ್ಲಿರುವ ಕೆಕ್ ವೀಕ್ಷಣಾಲಯಭೂತಕಾಲಕ್ಕೊಯ್ಯುವ ಭವಿಷ್ಯದ ಕನ್ನಡಿಗಳು-ದೂರದರ್ಶಕಗಳು – ಹಿಂದೆ ಸಂಭವಿಸಿರುವ ಅನೇಕ ಖಗೋಳ ಸಂಗತಿಗಳ ಬಗ್ಗೆ ವಿಜ್ಞಾನಿಗಳಿಗೆ ವಿವರಣೆ ನೀಡಲು ಹೇಗೆ ಸಹಾಯಕವಾಗಿವೆ ಎಂದು ತಿಳಿಸುತ್ತಾರೆ. (ಮೇಲಿನ ಪ್ಯಾರಾಗ್ರಾಫ್‍ನ ಬಣ್ಣದ ಬರಹಗಳು ಲೇಖನಗಳ ಶೀರ್ಷಿಕೆಗಳು). ಅನಂತರಾಮುರವರೂ ಈ ನನ್ನ ಬರೆಹವನ್ನು ಮೆಚ್ಚಿಕೊಂಡಿದ್ದರು.

ಇವರ ಸಂಪಾದಿಸಿರುವ ‘ವಿಜ್ಞಾನದ ಹೆದ್ದಾರಿಯಲ್ಲಿ ಮಹಾ ತಿರುವುಗಳು’ (2018ರಲ್ಲಿ ಪ್ರಕಟ) ಕೃತಿಯಲ್ಲಿ ವಿವಿಧ ವಿಜ್ಞಾನ-ತಂತ್ರಜ್ಞಾನದ ಹದಿನಾಲ್ಕು ಶಾಖೆಗಳಲ್ಲಿ, ಇಪ್ಪತ್ತೈದು ಮಂದಿ ಪ್ರಬುದ್ಧ ಲೇಖಕರಿಂದ ರಚಿತವಾದ ಲೇಖನಗಳಿವೆ. ವೈದ್ಯಕೀಯ ಕ್ಷೇತ್ರದ ಔಷಧಿವಿಜ್ಞಾನ ಮತ್ತು ವಿಧಿವಿಜ್ಞಾನ(ಫೊ಼ರೆನ್ಸಿಕ್ ಸೈನ್ಸ್‍) ವಿಷಯಗಳಲ್ಲಿಯೂ ಲೇಖನಗಳಿರುವುದು ಗಮನಾರ್ಹ. ಸಾಮಾನ್ಯ ಓದುಗರಿಗೂ ವಿಜ್ಞಾನ ಕ್ಷೇತ್ರದ ಆಗುಹೋಗುಗಳು ಮತ್ತು ಬೆಳವಣಿಗೆಯ ವಿಷಯ ಅರಿವಾಗುವುದರಲ್ಲಿ ಸಂದೇಹವಿಲ್ಲ. ವಿಜ್ಞಾನ ಎರಡಲಗಿನ ಕತ್ತಿಯಂತೆ ಎನ್ನುವ ದಿಶೆಯಲ್ಲಿ ಮೊದಲನೇ ಮಹಾಯುದ್ಧದ ವಿಷಾನಿಲಗಳ ಪ್ರಯೋಗ, ಎರಡನೇ ಮಹಾಯುದ್ಧದಲ್ಲಿ ಜಪಾನಿನ ಎರಡು ನಗರಗಳ ಮೇಲಾದ ಬಾಂಬ್ ದಾಳಿ ಎಲ್ಲವೂ ಈ ಲೇಖನಗಳಲ್ಲಿ ಚರ್ಚೆಯಾಗಿವೆ. ಇತ್ತೀಚಿನ ಪರಿಸರ ವಿರೋಧ ಬೆಳವಣಿಗೆಗಳು, ಜೀವಿ ಸಂಕುಲಗಳ ದಾರುಣ ಸ್ಥಿತಿ ಮುಂತಾದವುಗಳ ಬಗ್ಗೆಯ ಲೇಖನಗಳು ಜನಸಮುದಾಯಕ್ಕೆ ಎಚ್ಚರಿಕೆ ನೀಡುವಂತಿವೆ. ತಂತ್ರಜ್ಞಾನದ ಹಲವು ಅಧ್ಯಾಯಗಳು ಮಾಹಿತಿಪೂರ್ಣವಾಗಿವೆ.  ತಾಂತ್ರಿಕ ಪದಗಳ ಬಳಕೆ ಬಂದಾಗ ಸಂವಾದಿಯಾದ ಇಂಗ್ಲಿಷ್ ಪದಗಳನ್ನೂ ಕಾಣಬಹುದು. ಒಟ್ಟಾಗಿ ವಿಜ್ಞಾನದ ಪ್ರಮುಖ ಕ್ಷೇತ್ರಗಳಾದ ಭೌತವಿಜ್ಞಾನ, ಖಭೌತವಿಜ್ಞಾನ, ಅಂತರಿಕ್ಷವಿಜ್ಞಾನ, ರಸಾಯನವಿಜ್ಞಾನ, ಸಸ್ಯವಿಜ್ಞಾನ, ಪ್ರಾಣಿವಿಜ್ಞಾನ, ವೈದ್ಯವಿಜ್ಞಾನ, ಔಷಧಿವಿಜ್ಞಾನ, ವಿಧಿವಿಜ್ಞಾನ, ಕೃಷಿವಿಜ್ಞಾನ, ಭೂವಿಜ್ಞಾನ, ಪರಿಸರವಿಜ್ಞಾನ, ಗಣಿತ, ಎಂಜಿನಿಯರಿಂಗ್, ದೂರಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ-ಇತ್ಯಾದಿ ಅನೇಕ ವಿಷಯಗಳ ಲೇಖನಗಳು ಪುಸ್ತಕದೊಳಗೆ ಅಡಕವಾಗಿವೆ.

ಇತ್ತೀಚಿಗೆ ಡಾ.ಬಿ.ಎಸ್‍.ಶೈಲಜರವರೊಂದಿಗೆ ರಚಿಸಿರುವ ‘ಖಗೋಳ ದರ್ಶನ’ ಮತ್ತೊಂದು ಉತ್ತಮ ವೈಜ್ಞಾನಿಕ ಕೃತಿ. ‘ಅಂತರಿಕ್ಷಕ್ಕೆ ಹಂತ ಹಂತವಾದ ಮೆಟ್ಟಿಲು’ ಎಂದು ಘೋಷವಾಕ್ಯ ಹೊಂದಿರುವ ಈ ಕೃತಿ ಅನೇಕ ಹೊಸ ವಿಷಯಗಳನ್ನು ಪರಿಚಯಿಸುವ ಆಕರ ಗ್ರಂಥವೆಂದೇ ಗುರುತಿಸಲಾಗಿದೆ.

‘ಆಡು ಮುಟ್ಟದ ಸೊಪ್ಪಿಲ್ಲ’ ಎನ್ನುವ ಗಾದೆಯಂತೆ ಡಾ.ಅನಂತರಾಮು ಅವರು ಸೆಪ್ಟೆಂಬರ್‍ 2023ರಲ್ಲಿ ಸಂಪಾದಿಸಿರುವ ‘ಕರ್ನಾಟಕದಲ್ಲಿ ಸ್ಮಾರ್ತ ಬ್ರಾಹ್ಮಣರು: ನೆಲೆ-ಹಿನ್ನೆಲೆ’ ಕೃತಿಯಲ್ಲಿ ಹೆಸರಾಂತ ವಿದ್ವಾಂಸರ ಲೇಖನಗಳಿದ್ದು, ಹರಿವು ಪ್ರಕಾಶನದಿಂದ ಪ್ರಕಟಣೆಯಾಗಿದೆ. ಈ ಪುಸ್ತಕವನ್ನು ಹಲವಾರು ದಿಗ್ಗಜರು ಅಚ್ಚುಕಟ್ಟಾಗಿ ಸಂಪಾದಿಸಲ್ಪಟ್ಟಿರುವ ಬಹುಮೂಲ್ಯ ಕೃತಿಯೆಂದು ಸ್ವಾಗತಿಸಿದ್ದಾರೆ.

ಒಬ್ಬ ಯಶಸ್ವಿ ಪುರುಷನ ಹಿಂದೆ ಒಬ್ಬ ಮಹಿಳೆ ಇರುತ್ತಾಳೆ ಎನ್ನುವ ಮಾತಿನಂತೆ ಅನಂತರಾಮುರವರ ಬರೆಹಗಳನ್ನು ಬೆರಳಚ್ಚಿಸಿ, ಅಂತಿಮ ರೂಪ ಕೊಟ್ಟು ಅಚ್ಚುಕಟ್ಟಾಗಿ ಪ್ರಕಟಣೆಗೆ ತಯಾರಿಸುವುದು ಅವರ ಪತ್ನಿ ಅನ್ನಪೂರ್ಣ ಎನ್ನುವುದು ಹೆಮ್ಮೆಯ ವಿಷಯ. ಸತಿ ಪತಿಗಳ ಅನ್ಯೋನ್ಯತೆ ಮೆಚ್ಚತಕ್ಕದ್ದೇ. ಚಿಕ್ಕ ಸಂಸಾರ, ಚೊಕ್ಕ ಸಂಸಾರ ಎನ್ನುವ ನುಡಿಗಟ್ಟಿನಂತೆ ಅನಂತರಾಮುರವರಿಗೆ ಒಬ್ಬ ಮಗಳು ಮತ್ತು ಒಬ್ಬ ಮಗ ಇದ್ದಾರೆ.

ಅನಂತರಾಮುರವರಿಗೆ ಸಂದ ಪ್ರಶಸ್ತಿಗಳೂ ಹಲವಾರು. ‘ಭೂಕಂಪನಗಳು’ ಕೃತಿಗೆ ಆರ್ಯಭಟ ಪ್ರಶಸ್ತಿ. – 1994, ‘ಕಾಲಗರ್ಭಕ್ಕೆ ಕೀಲಿಕೈ` ಕೃತಿಗೆ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಪ್ರಶಸ್ತಿ- 2006, ವಿಜ್ಞಾನ ಸಾಹಿತ್ಯದ ಕೊಡುಗೆಗಾಗಿ – ಮೌಲ್ಯ ಗೌರವ ಪ್ರಶಸ್ತಿ 2006, ಕರ್ನಾಟಕ ಸರ್ಕಾರದ ಪರಿಸರ ಮತ್ತು ಅರಣ್ಯ ಇಲಾಖೆಯಿಂದ 2008 ರ `ಪರಿಸರ ಪತ್ರಿಕೋದ್ಯಮ ಪ್ರಶಸ್ತಿ, ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ `ವಿಷನ್ ಗ್ರೂಪ್’ ನಿಂದ `ಶ್ರೇಷ್ಠ ವಿಜ್ಞಾನ ಸಂವಹನಕಾರ’ ಪ್ರಶಸ್ತಿ-2011, ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯಿಂದ `ಶ್ರೇಷ್ಠ ಲೇಖಕ ಪ್ರಶಸ್ತಿ’ (2012-13). ಕೃತಿ:`ದೈತ್ಯ ಪ್ರತಿಭೆಗಳ ಹೆಗಲ ಮೇಲೆ’, ಕರ್ನಾಟಕ ಸರ್ಕಾರದ `ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅನುವಾದ ಪುರಸ್ಕಾರ-2011 (`ರಾಕೆಟ್’), ಜನಪ್ರಿಯ ವಿಜ್ಞಾನ ಸಾಹಿತ್ಯಕ್ಕೆ ಕೊಡುಗೆಯನ್ನು ಪರಿಗಣಿಸಿ ತುಮಕೂರು ವಿಶ್ವವಿದ್ಯಾನಿಲಯದ ‘ಗೌರವ ಡಾಕ್ಟರೇಟ್’- 2015, ಶಿವಮೊಗ್ಗ ಕರ್ನಾಟಕ ಸಂಘದಿಂದ ಜೀವಮಾನ ಸಾಧನೆಗಾಗಿ ‘`ಡಾ. ಶಿವರಾಮ ಕಾರಂತ ವಿಜ್ಞಾನ ಪ್ರಶಸ್ತಿ’- 2017, ವಿ.ಸಿ. ಸಂಪದದಿಂದ ಜೀವಮಾನ ಸಾಧನೆಗಾಗಿ ಗೌರವಾರ್ಪಣೆ–2018, ವಿಜ್ಞಾನ ಶಿಕ್ಷಕರಿಗೆ, ಸಂವಹನಕಾರರಿಗೆ ಕರ್ನಾಟಕ ಸರ್ಕಾರದ ವಾರ್ಷಿಕ ಪ್ರಶಸ್ತಿ, ‘ಹಿಮದ ಸಾಮ್ರಾಜ್ಯದಲ್ಲಿ’ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ 1985 ರ ಅತ್ಯುತ್ತಮ ವಿಜ್ಞಾನ ಕೃತಿ,  ‘ಕರ್ತಾರನಿಗೊಂದು ಕಿವಿಮಾತು‘ ಕೃತಿಗೆ 2003 ರ ಅತ್ತುತ್ತಮ ವಿಜ್ಞಾನ ಕೃತಿ, ಹಾಗೂ 2008 ರಲ್ಲಿ ಪ್ರವಾಸ ಸಾಹಿತ್ಯಕ್ಕಾಗಿ ‘ಪಶ್ಚಿಮ ಮುಖಿ’ ಕೃತಿಗೆ ಪ್ರಶಸ್ತಿಗಳು ಲಭಿಸಿವೆ.

ಡಾ.ಅನಂತರಾಮು ಮತ್ತು ಕೆಲವು ಸಮಾನ ಮನಸ್ಕರು ಜನವರಿ 12, 2021 ರಂದು ಸಮಾಜದಲ್ಲಿ ವಿಜ್ಞಾನದ ವಿಷಯದಲ್ಲಿ ಅರಿವು ಮೂಡಿಸುವ ಅಭಿಲಾಷೆಯಿಂದ ಡಾ.ಟಿ.ಆರ್.ಅನಂತರಾಮು ವಿಜ್ಞಾನ ಪ್ರತಿಷ್ಠಾನ ಸಂಸ್ಥೆಯನ್ನು ಹುಟ್ಟುಹಾಕಿದ್ದಾರೆ. ಪ್ರತಿಷ್ಠಾನದ ವತಿಯಿಂದ ವಿಜ್ಞಾನ ಪ್ರಸರಣ, ಮಕ್ಕಳಿಗಾಗಿ ‘ಸೂತ್ರ’ ವಿಜ್ಞಾನ ಮಾಸಪತ್ರಿಕೆಯ ಪ್ರಕಟಣೆ, 6 ನೆಯ ತರಗತಿಯಿಂದ 10 ನೆಯ ತರಗತಿಯ ಮಕ್ಕಳಿಗೆ ವಿಜ್ಞಾನ ಮತ್ತು ಗಣಿತದಲ್ಲಿ ಆಸಕ್ತಿ ಮೂಡಿಸುವ ಪ್ರಯತ್ನ, ಮಕ್ಕಳಿಗೆ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯ ಇತ್ಯಾದಿ ಚಟುವಟಿಕೆಗಳನ್ನು ಹಮ್ಮಿಕೊಂಡಿದ್ದಾರೆ.

ಅಂದು ಗೆಲಿಲಿಯೋ ದೂರದರ್ಶಕವನ್ನು ಬಾನಿನೆಡೆಗೆ ತಿರುಗಿಸದಿದ್ದರೆ ಏನಾಗುತ್ತಿತ್ತು ಎಂಬ ಪ್ರಶ್ನೆ ಹಲವು ವಿಜ್ಞಾನಿಗಳನ್ನು ಕಾಡಿದೆ. ಆದರೆ ವೃತ್ತಿಯಿಂದ ಭೂವಿಜ್ಞಾನಿಯಾಗಿರುವ ಶ್ರೀ.ಅನಂತರಾಮುರವರು ಭೂಮಿಯ ಆಳದಲ್ಲಿಯೇ ತಮ್ಮ ದೃಷ್ಟಿಯನ್ನು ಕೇಂದ್ರೀಕರಿಸಿಕೊಂಡು ಸಂತೃಪ್ತರಾಗಿದ್ದರೆ ಜನಪ್ರಿಯ ವಿಜ್ಞಾನ ಸಾಹಿತ್ಯ ಲೋಕಕ್ಕೆ ಇಂತಹ ಅಮೂಲ್ಯವಾದ ‘ಬರೆಹ ರತ್ನ’ ದೊರೆಯುತ್ತಿರಲಿಲ್ಲವೆಂಬುದು ನಿರ್ವಿವಾದವಾದ ವಿಷಯ. ಎಪ್ಪತ್ತರ ಹರಯದಲ್ಲಿಯೂ ಸದಾಕಾಲ ಬರೆವಣಿಗೆಯಲ್ಲಿ ನಿರತರಾಗಿರುವ ಡಾ.ಟಿ.ಆರ್.ಅನಂತರಾಮುರವರು ವಿಜ್ಞಾನ ಸಾಹಿತ್ಯ ಲೋಕವನ್ನು ಮತ್ತಷ್ಟು ಶ್ರೀಮಂತಗೊಳಿಸುವುದರಲ್ಲಿ ಸಂಶಯವಿಲ್ಲ.   

– ಜಿ.ವಿ.ನಿರ್ಮಲ

8 Responses

  1. S.sudha says:

    ಅಭಿನಂದನೆಗಳು. ಒಳ್ಳೆಯ ಮಾಹಿತಿ ನಿರ್ಮಲ

  2. ಉತ್ತಮ ಮಾಹಿತಿಯನ್ನು ಒಳಗೊಂಡ ಡಾ.ಅನಂತರಾಮು ವ್ಯಕ್ತಿ ಪರಿಚಯ..ಚೆನ್ನಾಗಿ ಮೂಡಿಬಂದಿದೆ.. ಮೇಡಂ

  3. ನಯನ ಬಜಕೂಡ್ಲು says:

    ಮಾಹಿತಿಪೂರ್ಣ ಲೇಖನ

  4. ಶಂಕರಿ ಶರ್ಮ says:

    ಡಾ. ಟಿ. ಆರ್. ಅನಂತರಾಮು ಅವರ ಕುರಿತು ಸಮಗ್ರ ಮಾಹಿತಿಗಳನ್ನೊಳಗೊಂಡ ಪರಿಚಯಾತ್ಮಕ ಲೇಖನವು ಚೆನ್ನಾಗಿದೆ. ಧನ್ಯವಾದಗಳು ಮೇಡಂ.

  5. Anonymous says:

    ಸುಂದರ ಪರಿಚಯ. ಮಾಹಿತಿಪೂರ್ಣ ಲೇಖನ

  6. Anonymous says:

    ಉತ್ತಮ ಮಾಹಿತಿ ಮೇಡಂ

  7. Vitthal says:

    ತುಂಬಾ ಮಾಹಿತಿ ಪೂರ್ಣ ಲೇಖನ. ವಿಜ್ಞಾನ ಲೇಖನಗಳೇ ಅಪರೂಪ, ಅನಂತರಾಮು ಅವರು 118 ಕೃತಿಗಳು, ಮಕ್ಕಳ ವಿಜ್ಞಾನ ಪುಸ್ತಕಗಳು, ಮತ್ತು ಚಿನ್ನದ ಸಂಶೋಧ ನೆಗೆ ಪಟ್ಟ ಶ್ರಮ ಎಲ್ಲವೂ ಅವರ ವಿಶೇಷತೆಯನ್ನು ತಿಳಿಸುತ್ತವೆ..

  8. ಪದ್ಮಾ ಆನಂದ್ says:

    ಭೂವಿಜ್ಞಾನ ಲೋಕಕ್ಕೆ, ಕನ್ನಡ ಸಾರಸ್ವತ ಲೋಕಕ್ಕೆ ಅತ್ಯುತ್ತಮ ಕೊಡುಗೆಯಾದ ಡಾ. ಅನಂತರಾಮು ಅವರ, ಅವರ ಕೃತಿಗಳ ಪರಿಚಯಾತ್ಮಕ ಲೇಖನ ಮಾಹಿತಿಪೂರ್ಣವಾಗಿದ್ದು, ಅವರ ಬಗ್ಗೆ ಹೆಮ್ಮೆ ಪಡುವಂತಿದೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: