ಗುರು ಯಾರು !?
ಇಳೆಗೆ ಮಳೆಯೇ ಗುರು
ಮೇಲಾರು ಮೋಡದ ಚಿತ್ತಾರ ಬಿಡಿಸಿದವರು ?
ಬೆಳೆಗೆ ಹಸಿವೆಯೇ ಗುರು
ಕರುಳೊಳಗೆ ಕಿಚ್ಚು ಹಚ್ಚಿಸಿ ಉರಿಸುತಿರುವವರು ?
ಸೊಬಗಿಗೆ ಒಳಗಣ್ಣೇ ಗುರು
ಸೃಷ್ಟಿಯಲಿ ಮಾಧರ‍್ಯವನೇ ಉಣಿಸಿದವರು ?
ಕವಿತೆಗೆ ರಾಗವೇ ಗುರು
ಸ್ವರಲಯವ ಬೆಸೆದು ತನ್ಮಯವಾಗಿ ಹಾಡಿದವರು ?
ಬಾಳುವೆಗೆ ಬಯಕೆಯೇ ಗುರು
ಜೀವವೀಣೆಯ ತಂತಿ ಮೀಟುತ ನಾದವಾದವರು ?
ಕಾಯಕಕೆ ಕರುಣೆಯೇ ಗುರು
ಎದೆಯ ಹಣತೆಯಲಿ ದೀಪವಾಗಿ ಶಾಂತವಾದವರು
ಹರಿವ ನದಿಗೆ ಸಾಗರವೇ ಗುರು
ಎಂದೂ ನೋಡದ ಹಾದಿಗುಂಟ ಕಂಡರಿಸಿದವರು !
ಗಾಢನಿದ್ರೆಗೆ ಆಯಾಸವೇ ಗುರು
ಎಲ್ಲವ ಮರೆಸುತ ಮೊದಲಿನ ಚೈತನ್ಯವೂಡಿದವರು
ದಾನಗುಣಕೆ ಮಮತೆಯೇ ಗುರು
ಅಳಿಲು ಸೇವೆಯ ಸಾರ್ಥಕ್ಯ ಸವಿಯ ಬೆರೆಸಿದವರು
ಸೃಷ್ಟಿಲೀಲೆಗೆ ಮೋಹವೇ ಗುರು
ಎಲ್ಲಿಯೋ ಇದ್ದವರ ಬೆಸೆದು ಬೆರಸಾಡುವವರು !
ಸ್ನೇಹಸೊಗಕೆ ನಿರಾಳವೇ ಗುರು
ತರತಮಗಳ ಮೀರುವ ಕರುಳ ಕರೆಯಾದವರು
ಹಣ್ಣೆಲೆ ಉದುರಲು ಕಾಲವೇ ಗುರು
ಚಿಗುರೆಲೆ ನಳನಳಿಸಲು ಸರಿದು ದಾರಿಯಾದವರು
ಅಹಮಿನ ಪೊಗರಿಗೆ ಸೋಲೇ ಗುರು
ಬಕುತಿಯ ಏಣಿಯನು ಹತ್ತಿ ಇಳಿಯುತಿರುವವರು !!
-ಡಾ. ಹೆಚ್ ಎನ್ ಮಂಜುರಾಜ್, ಮೈಸೂರು
ಗುರು ಯಾರು ಹಲವಾರು ಉದಾಹರಣೆ ಸಹಿತ ಅನಾವರಣ ಮಾಡುತ್ತಾ ಚಿಂತನೆಗೆ ಹಚ್ಚಿರುವ ನೀವೇ ನಮಗೆ ಗುರು..ಸಾರ್
ಧನ್ಯವಾದಗಳು ಮೇಡಂ….ನಿಮ್ಮ ಅಪರಿಮಿತ ಅಭಿಮಾನ ಎಲ್ಲಕಿಂತ ಹಿರಿದು.
ನಿಮ್ಮಂಥ ಹಿರಿಯರ ಆಶೀರ್ವಚನ ಸದಾ ನಮ್ಮನು ಪೊರೆಯುತಿರಲಿ.
ಪ್ರಾಸದಿಂದ ಕಂಗೊಳಿಸುವ, ಅರ್ಥಗರ್ಭಿತ, ಮನಸ್ಸನ್ನು ಚಿಂತನೆಗೆ ಹಚ್ಚುವ ಸುಂದರ ಕವಿತೆ. ಅಭಿನಂದನೆಗಳು.
thanks madam
ಪ್ರತಿಯೊಂದು ಸೃಷ್ಟಿ ವೈವಿದ್ಯಕ್ಕೂ ಅವುಗಳ ಗಮ್ಯ ತಾಣವೇ ಗುರು. ಅದೇ ಗುರಿ ಪ್ರತಿಯೊಂದನ್ನೂ ತನ್ನೆಡೆಗೆ ಸೆಳೆಯುತ್ತದೆ.
ಸೊಗಸಾದ ಚಿತ್ರಣ.
ಅಭಿನಂದನೆಗಳು ಮಂಜು
ಅರ್ಥವತ್ತಾದ ಸುಂದರ ಕವನ
ತುಂಬಾ ಚನ್ನಾಗಿದೆ ಗುರುಗಳೆ ❤️
ಚಿಂತನೆಗೆ ಹಚ್ಚುವ ಸೊಗಸಾದ ಅರ್ಥಗರ್ಭಿತ ಕವನ