ಪರಾಗ

ವಾಟ್ಸಾಪ್ ಕಥೆ 52 : ವ್ಯಾಮೋಹ.

Share Button

ರೇಖಾಚಿತ್ರ : ಬಿ.ಆರ್.ನಾಗರತ್ನ, ಮೈಸೂರು


ಒಂದು ಪುಟ್ಟ ಕೆರೆಯಿತ್ತು. ಅದರ ನೀರು ಬಹಳ ಕಾಲದಿಂದ ಪಾಚಿಕಟ್ಟಿ ಹೊಲಸಾಗಿತ್ತು. ಹೊಸನೀರು ಬಂದಿರಲಿಲ್ಲ. ಮಲೆತುಹೋಗಿದ್ದ ನೀರಿನಲ್ಲಿ ಹುಳುಗಳು ಬೆಳೆದು ಸುತ್ತೆಲ್ಲ ದುರ್ವಾಸನೆ ಬೀರುತ್ತಿತ್ತು. ಒಂದು ಕಪ್ಪೆಯು ಅದರಲ್ಲೇ ಬಹಳ ಕಾಲದಿಂದ ವಾಸಿಸುತ್ತಿತ್ತು. ಅದು ಅಲ್ಲಿದ್ದ ಹುಳುಗಳನ್ನೆ ತಿಂದುಕೊಂಡು ಬದುಕಿತ್ತು.

ಒಂದು ದಿನ ಆ ಕೆರೆಗೆ ಹಂಸವೊಂದು ಹಾರಿಬಂದಿತು. ಅದು ಗಲೀಜಾದ ಕೆರೆಯ ನೀರನ್ನೂ ಮತ್ತು ಅದರಲ್ಲೇ ಇದ್ದ ಕಪ್ಪೆಯನ್ನು ನೋಡಿ ಅಸಹ್ಯ ಪಟ್ಟುಕೊಂಡಿತು. “ಅಯ್ಯೋ! ಇದೇನಿದು ಕೆಟ್ಟ ವಾತಾವರಣ. ಇಂತಹ ದುರವಸ್ಥೆಯಲ್ಲಿ ನೀನು ಹೇಗಿದ್ದೀಯೆ?” ಎಂದು ಕಪ್ಪೆಯನ್ನು ಕೇಳಿತು.
ಕಪ್ಪೆಯು “ಈ ಕೆರೆಯನ್ನು ಮಲಿನವಾಗಿದೆ ಎನ್ನುತ್ತೀಯಾ? ಇದೇ ಕೆರೆ ನನಗೆ ಸ್ವರ್ಗಸಮಾನವಾಗಿದೆ.” ಎಂದಿತು.

ಆಗ ಹಂಸಪಕ್ಷಿಯು ನಾನು ಸುಂದರ ಪರಿಸರದಲ್ಲಿರುವ ವಿಶಾಲವಾದ ಸರೋವರದಲ್ಲಿದ್ದೇನೆ. ನೀನೂ ಅಲ್ಲಿಗೆ ಬಾ” ಎಂದು ಕಪ್ಪೆಯನ್ನು ಆಹ್ವಾನಿಸಿತು.
ಕಪ್ಪೆಯು “ನೀನು ಹೇಳುವ ಸರೋವರದಲ್ಲಿ ತಿನ್ನಲು ಹೀಗೆ ಅಪಾರ ಸಂಖ್ಯೆಯಲ್ಲಿ ಹುಳುಗಳು ಸಿಕ್ಕುತ್ತವೆಯೇ? ಕುಡಿಯಲು ರಾಡಿಯಾದ ನೀರಿದೆಯೇ?” ಎಂದು ಕೇಳಿತು.

ಹಂಸವು “ಸರೋವರದಲ್ಲಿ ನೀರು ಶುದ್ಧವಾಗಿದೆ. ಪಾಚಿಗೀಚಿ ಒಂದೂಇಲ್ಲ. ಹೌದು ನೀನು ಹೇಳಿದ ಹಾಗೆ ಹುಳುಗಳು ಮತ್ತು ರಾಡಿಯಾಗಿರುವ ನೀರಿಲ್ಲ. ಆದರೆ ವಾಸನೆಯೂ ಇಲ್ಲ. ಸುತ್ತಲೂ ಸುಂದರವಾದ ತೋಟವಿದೆ. ಹೂಗಳ ಸುವಾಸನೆ ಎಲ್ಲಕಡೆ ಹರಡಿದೆ. ಆರೋಗ್ಯಕರವಾಗಿ ಅಲ್ಲಿ ಬದುಕಬಹುದು” ಎಂದಿತು.

ಇವೆರಡರ ಸಂಭಾಷಣೆಯನ್ನು ಕೇಳಿಸಿಕೊಳ್ಳುತ್ತಾ ಮರದ ಮೇಲೆ ಕುಳಿತಿದ್ದ ಗಿಳಿಯೊಂದು ಹಂಸಪಕ್ಷಿಗೆ “ನೀನು ಎಷ್ಟು ಹೇಳಿದರೂ ಏನೂ ಪ್ರಯೋಜನವಿಲ್ಲ. ನನಗೆ ಕಪ್ಪೆಗಳ ಸ್ವಭಾವ ಚೆನ್ನಾಗಿ ಗೊತ್ತು. ಅವುಗಳು ಎಲ್ಲಿ ಇರುತ್ತವೆಯೋ ಅದನ್ನೇ ಪ್ರಪಂಚವೆಂದು ತಿಳಿಯುತ್ತವೆ. ಬೇರೆ ಕಡೆಯಲ್ಲಿ ಅದಕ್ಕಿಂತಲೂ ಉತ್ತಮವಾದುದು ಇದೆಯೆಂದು ಹೇಳಿದರೂ ಅವು ನಂಬುವುದಿಲ್ಲ. ಅದಕ್ಕೇ ಅವನ್ನು ‘ಕೂಪಮಂಡೂಕ’ ಎಂದು ಕರೆಯುವುದು. ಆದ್ದರಿಂದ ಕಪ್ಪೆಯು ನಿನ್ನ ಸರೋವರಕ್ಕೆ ಬರಲು ಒಪ್ಪುವುದಿಲ್ಲ. ಅದರ ಚಿಂತೆಯನ್ನು ಬಿಡು. ನಿನ್ನ ಪಾಡಿಗೆ ನೀನು ಹೋಗು” ಎಂದಿತು. ಗಿಳಿಯ ಮಾತನ್ನು ಕೇಳಿ ಹಂಸವು ಅಲ್ಲಿಂದ ಹಾರಿಹೋಯಿತು.

ಕಪ್ಪೆಗಳಂತೆ ವಿಷಯ ವ್ಯಾಮೋಹದ ಕೆಸರಿನಲ್ಲಿ ಸಿಕ್ಕಿಬಿದ್ದ ಮನುಷ್ಯರು ಪಾಪಂಚಿಕ ಪರಿಧಿಯಿಂದ ಆಚೆಗೆ ಹೋಗಲಾರರು. ಹಾಗೆ ಹೊರಬಂದು ಸ್ಚಚ್ಛಂದವಾಗಿ ಅಧ್ಯಾತ್ಮದ ಅರಿವಿನ ತಿಳಿಯಾದ ಕೊಳದಲ್ಲಿ ಹಂಸಪಕ್ಷಿಯಂತೆ ವಿಹರಿಸುವವರೇ ಪರಮ ಜ್ಞಾನಿಗಳಾದವರು.

ವಾಟ್ಸಾಪ್ ಕಥೆಗಳು
ಸಂಗ್ರಹ : ಬಿ.ಆರ್ ನಾಗರತ್ನ, ಮೈಸೂರು

9 Comments on “ವಾಟ್ಸಾಪ್ ಕಥೆ 52 : ವ್ಯಾಮೋಹ.

  1. ಉತ್ತಮ ಸಂದೇಶವನ್ನು ಹೊತ್ತ, ಸೂಕ್ತ ರೇಖಾಚಿತ್ರವನ್ನೊಳಗೊಂಡ ಚಂದದ ಕಥೆಗೆ ಧನ್ಯವಾದಗಳು, ನಾಗರತ್ನ ಮೇಡಂ.

  2. ಚಂದದ ಸಂದೇಶವನ್ನು ಸರಳ, ಸಹಜವಾಗಿ ತಿಳಿ ಹೇಳಿದ ಕಥೆ ಪರಿಣಾಮಕಾರಿಯಾಗಿ ಮೂಡಿ ಬಂದಿದೆ.

Leave a Reply to Gayathri Sajjan Cancel reply

 Click this button or press Ctrl+G to toggle between Kannada and English

Your email address will not be published. Required fields are marked *