ಕಾದಂಬರಿ : ತಾಯಿ – ಪುಟ 1

Share Button

ಮೈಸೂರಿನಲ್ಲಿರುವ ಖ್ಯಾತ ಸಾಹಿತಿ ಶ್ರೀಮತಿ ಸಿ.ಎನ್.ಮುಕ್ತಾ ಅವರ ಕಾದಂಬರಿ ‘ತಾಯಿ’… ನಿಮ್ಮ ಓದಿಗಾಗಿ.

ಮಗ-ಸೊಸೆ ತಮ್ಮ ಕೆಲಸಗಳಿಗೆ ಹೋದ ನಂತರ ರಾಜಲಕ್ಷ್ಮಿ ತಮ್ಮ ಕೋಣೆಯ ಕಿಟಕಿ ಪಕ್ಕ ಕುಳಿತು ಹೊರಗಡೆಗೆ ಇಣುಕಿದರು. ಅವರು ಬೆಂಗಳೂರಿಗೆ ಬಂದು ಒಂದು ತಿಂಗಳಾಗಿತ್ತು. ಅವರ ಪತಿ ಶಂಕರಮೂರ್ತಿ ಇರುವವರೆಗೂ ಅವರ ನಂಜನಗೂಡಿನಲ್ಲೇ ಇದ್ದರು. ಶಂಕರಮೂರ್ತಿ ಪ್ರೌಢಶಾಲೆಯ ಗಣಿತದ ಶಿಕ್ಷಕರು. ಅವರಿಗೆ ತಮ್ಮ ವೃತ್ತಿಯ ಬಗ್ಗೆ ಬಹಳ ಪ್ರೀತಿ. ನಿಸ್ಪೃಹತೆಯಿಂದ ಅವರು ಮಕ್ಕಳಿಗೆ ಕಲಿಸುತ್ತಿದ್ದರು. ಅವರಿಗೆ ಒಳ್ಳೆಯ ಫಲಿತಾಂಶ ತರಬೇಕು, ತಮ್ಮ ಶಾಲೆಯ ಮಕ್ಕಳು ವಿಜ್ಞಾನ ಅಥವಾ ಗಣಿತದಲ್ಲಿ ಸಾಧನೆ ಮಾಡಬೇಕು ಎನ್ನುವ ಆಸೆ ಇತ್ತು. ಅವರು ಮಕ್ಕಳಿಗೆ ಕನಸು ಕಾಣುವುದನ್ನು ಕಲಿಸುತ್ತಿದ್ದರು. ಆ ಕನಸನ್ನು ನನಸು ಮಾಡಲು ಮಾರ್ಗದರ್ಶನ ಮಾಡುತ್ತಿದ್ದರು. ಅವರು ಸರ್ಕಾರಿ ಕೆಲಸದಲ್ಲಿದ್ದುದರಿಂದ ವರ್ಗಾವಣೆ ಸಾಮಾನ್ಯವಾಗಿತ್ತು. ಅವರು ನಂಜನಗೂಡಿನಿಂದಲೇ ಬೇರೆ ಊರುಗಳಿಗೆ ಓಡಾಡಿಕೊಂಡಿದ್ದರು. ಅವರಿಗೆ 15 ವರ್ಷ ಸರ್ವೀಸ್ ಮುಗಿದಾಗ ನಂಜನಗೂಡಿನಲ್ಲೇ ಮನೆ ಮಾಡಿಕೊಂಡಿದ್ದರು. ಪರಿಚಿತರ ಮನೆ ಹಳೆಯಕಾಲದ್ದಾದರೂ ವಿಶಾಲವಾಗಿತ್ತು. ದೇವಸ್ಥಾನಕ್ಕೆ ಸಮೀಪದಲ್ಲಿತ್ತು. ದೊಡ್ಡವರಾಂಡ, ದೊಡ್ಡ ಹಾಲು, ಮೂರು ರೂಮುಗಳು, ಅಡಿಗೆಮನೆ, ಊಟದ ಮನೆ, ದೇವರಮನೆ, ಹಿಂಭಾಗದಲ್ಲಿ ಒಗೆಯುವ ಕಲ್ಲು, ಭಾವಿ, ಕೈತೋಟ ಮಾಡಿಕೊಳ್ಳುವಷ್ಟು ಜಾಗ. ಎರಡು ಸಂಡಾಸುಗಳು… ರಾಜಲಕ್ಷ್ಮಿಗೆ ಮನೆ ತುಂಬಾ ಇಷ್ಟವಾಗಿತ್ತು. ಮೂರ್ತಿಗಳಿಗೆ ಇಬ್ಬರು ಮಕ್ಕಳು. ದೊಡ್ಡವಳು ರಜನಿ, ಎರಡನೆಯವನೇ ರಾಹುಲ್. ಇಬ್ಬರೂ ತುಂಬಾ ಬುದ್ಧಿವಂತರು. ರಜನಿ ಪಿ.ಯು.ಸಿ.ಯಲ್ಲಿ ಶೇ.96 ಅಂಕ ಗಳಿಸಿದ್ದಳು.

ತಂದೆ “ಮುಂದೆ ಏನು ಓದುತ್ತೀಯಮ್ಮಾ?” ಎಂದು ಕೇಳಿದಾಗ ಅವಳು ತನ್ನ ಮನದಾಸೆ ಹೇಳಿದ್ದಳು. “ಅಪ್ಪ ನಾನು ಬಿ.ಇ. ಓದ್ತೀನಿ. ನನಗೆ ಕಂಪ್ಯೂಟರ್ ಸೈನ್ಸ್ನಲ್ಲಿ ಬಿ.ಇ. ಮಾಡಲು ತುಂಬಾ ಇಷ್ಟ.”
“ಬಿ.ಎಸ್.ಸಿ.ಗೆ ಸೇರು. ಬಿ.ಇ. ಬೇಡ” ಎಂದಿದ್ದರು ರಾಜಲಕ್ಷ್ಮಿ.

ಆದರೆ ಮೂರ್ತಿಗಳು ಖುಷಿಯಿಂದ ಮಗಳನ್ನು ಬಿ.ಇ.ಗೆ ಸೇರಿಸಿದ್ದರು. ಆಗ ರಾಹುಲ್ ಹೈಸ್ಕೂಲ್‌ನಲ್ಲಿದ್ದ. ಅದೇ ವೇಳೆಯಲ್ಲಿ ಮೈಸೂರಿನಲ್ಲಿದ್ದ ಅವರ ತಂದೆಯಿಂದ ಬಂದಿದ್ದ ಮನೆ ಖಾಲಿಯಾಗಿತ್ತು. ಆ ಮನೆಯಲ್ಲಿ ಬಾಡಿಗೆಗೆ ಇದ್ದವರು ಚೆನ್ನೈಗೆ ಶಿಫ್ಟ್ ಆಗಿದ್ದರು. ನಂಜನಗೂಡಿನ ಮನೆಯನ್ನು ಬಾಡಿಗೆಗೆ ಕೊಟ್ಟು ಮಕ್ಕಳ ವಿದ್ಯಾಭ್ಯಾಸಕ್ಕೋಸ್ಕರ ಮೂರ್ತಿಗಳು ಮೈಸೂರು ಸೇರಿದ್ದರು. ರಜನಿಗೆ ಜೆ.ಸಿ.ಇ.ಯಲ್ಲಿ ಸೀಟು ಸಿಕ್ಕಿತ್ತು. ರಾಹುಲ್‌ನನ್ನು ಮಹಾರಾಜ ಜೂನಿಯರ್ ಕಾಲೇಜ್‌ಗೆ ಸೇರಿಸಿದ್ದರು.

“ಮನೆಯ ಹತ್ತಿರವಿರುವ ಪ್ರೈವೇಟ್ ಶಾಲೆಗೆ ಸೇರಿಸಬಾರದಾ? ಗರ‍್ನಮೆಂಟ್ ಶಾಲೆಗೆ ಯಾಕೆ ಸೇರಿಸ್ತಿದ್ದೀರಿ?” ರಾಜಲಕ್ಷ್ಮಿ ಗಂಡನ ಜೊತೆ ಜಗಳವಾಡಿದ್ದರು.
“ರಾಹುಲ್ ಚೆನ್ನಾಗಿ ಓದುವ ಹುಡುಗ. ನಾನು ಅವನಿಗೆ ಮನೆಯಲ್ಲಿ ಪಾಠ ಹೇಳಿಕೊಡ್ತೀನಿ. ನೀನು ಯೋಚನೆ ಮಾಡಬೇಡ. ಅವನು ಯಾವುದೇ ಶಾಲೆಯಲ್ಲಿದ್ರೂ ಒಳ್ಳೆಯ ಮಾರ್ಕ್ಸ್ ತೆಗೆಯುತ್ತಾನೆ. ನನಗೆ ಆ ನಂಬಿಕೆ ಇದೆ.”

ಮೂರ್ತಿಯವರ ಮನೆ ಇದ್ದಿದ್ದು ಒಂಟಿಕೊಪ್ಪಲ್‌ನಲ್ಲಿ. ರಜನಿಗೆ ಓಡಾಡಲು ಸ್ಕೂಟರ್ ತೆಗೆದುಕೊಟ್ಟಿದ್ದರು. ತಾವೂ ತಮ್ಮ ಸ್ಕೂಟರ್‌ನಲ್ಲಿ ರೈಲ್ವೇ ಸ್ಟೇಷನ್‌ಗೆ ಹೋಗಿ ಅಲ್ಲಿ ನಂಜನಗೂಡಿನ ರೈಲು ಹಿಡಿಯುತ್ತಿದ್ದರು. ರಾಹುಲ್‌ಗೆ ಸೈಕಲ್ ತೆಗೆದುಕೊಟ್ಟಿದ್ದರು.

ಒಂಟಿಕೊಪ್ಪಲ್ ಮನೆ ನಂಜನಗೂಡಿನ ಮನೆಯಷ್ಟು ವಿಶಾಲವಾಗಿರಲಿಲ್ಲ. ಆದರೆ ಕಾಂಪೌಂಡ್‌ನಲ್ಲಿ ಜಾಗವಿತ್ತು. ಎರಡು ತೆಂಗಿನಮರ, ಒಂದು ಮಾವಿನಮರ, ಸೀಬೆ ಮರಗಳಿದ್ದವು. ಹಿಂದುಗಡೆ ಕರಬೇವಿನ ಮರವಿತ್ತು. ತುಳಸಿಕಟ್ಟೆಯ ಸುತ್ತಲೂ ತುಳಸಿಯ ಗಿಡಗಳೇ ಇದ್ದವು. ಮನೆಮಾತ್ರ ನಾಲ್ಕು ಜನರ ಸಂಸಾರಕ್ಕೆ ಅಚ್ಚುಗಟ್ಟಾಗಿತ್ತು. ಚಿಕ್ಕ ವೆರಾಂಡ, ದೊಡ್ಡಹಾಲ್, ಎಡಪಕ್ಕದಲ್ಲೊಂದು, ಬಲ ಪಕ್ಕದಲ್ಲೊಂದು ರೂಮು, ನಂತರ ಪ್ಯಾಸೇಜ್ ಒಂದು ಕಡೆ ಅಡಿಗೆ ಮನೆ, ದೇವರ ಮನೆ, ಮತ್ತೊಂದು ಕಡೆ ಬಚ್ಚಲುಮನೆ, ಹಿಂದುಗಡೆ ಒಗೆಯುವ ಕಲ್ಲು, ನಲ್ಲಿ, ಸಂಡಾಸುಗಳಿದ್ದವು.

ಒಂದು ರೂಂ ರಜನಿ ಇಟ್ಟುಕೊಂಡಳು. ಮತ್ತೊಂದು ರೂಮ್‌ನಲ್ಲಿ ಮೂರ್ತಿ-ರಾಜಲಕ್ಷ್ಮಿ ಬಿಡಾರ. ರಾಹುಲ್‌ಗಾಗಿ ಮಹಡಿಮೇಲೆ ಒಂದು ರೂಮು ಕಟ್ಟಿಸಿದ್ದರು. ಮನೆ ಕೆಲಸಕ್ಕೆ ಚೆನ್ನಿ ಇದ್ದಳು. ಅವಳ ಗಂಡ ರಾಮ ತೋಟದ ಕೆಲಸ ಮಾಡುತ್ತಿದ್ದ. ಕ್ರಮೇಣ ರಾಜಲಕ್ಷ್ಮಿ ಮೈಸೂರು ಜೀವನಕ್ಕೆ ಹೊಂದಿಕೊಂಡಿದ್ದರು.

ರಜನಿ ಕೊನೆಯ ಸೆಮಿಸ್ಟರ್‌ನಲ್ಲಿದ್ದಾಗ, ಮೂರ್ತಿಗಳ ಬಾಲ್ಯದ ಸ್ನೇಹಿತ ಬಾಲಚಂದ್ರ ಕುಟುಂಬ ಸಮೇತ ಬಂದು ಹೋಟೆಲ್‌ನಲ್ಲಿ ತಂಗಿದ್ದರು. ಆತ ಬಾಂಬೆಯಲ್ಲಿ ಇಂಜಿನಿಯರ್. ಇಬ್ಬರು ಗಂಡುಮಕ್ಕಳು. ದೊಡ್ಡವನಿಗೆ ಮದುವೆಯಾಗಿತ್ತು. ಮಗ, ಸೊಸೆ ಇಬ್ಬರೂ ಇಂಜಿನಿಯರ‍್ಸ್. ಎರಡನೆಯವನು ಸೂರತ್ಕಲ್‌ನಲ್ಲಿ ಎಂ.ಟೆಕ್ ಮಾಡುತ್ತಿದ್ದ. ಬಾಲಚಂದ್ರನ ಶ್ರೀಮತಿ ಶಾಲಿನಿ ಗ್ರಾಜುಯೇಟ್.

“8-10 ದಿನ ಮೈಸೂರಿನಲ್ಲಿರಲು ಬಂದಿದ್ದೇವೆ. ಮೈಸೂರು, ಮೈಸೂರಿನ ಸುತ್ತಮುತ್ತಲ ಪ್ರದೇಶಗಳನ್ನು ತೋರಿಸುವ ಜವಾಬ್ದಾರಿ ನಿನ್ನದು” ಎಂದಿದ್ದರು ಬಾಲಚಂದ್ರ.
“ನನಗೆ ಎಸ್.ಎಸ್.ಎಲ್.ಸಿ. ಪೇಪರ್ ವ್ಯಾಲ್ಯೂಯೇಷನ್ ಇದೆ. ನಾನು ಬರಕ್ಕಾಗಲ್ಲ. ನನ್ನ ಬದಲು ನನ್ನ ಮಕ್ಕಳು ಬರ್ತಾರೆ.”
“ಅತ್ತಿಗೆ ನೀವು ಬರ್ತೀರ ತಾನೆ?”
“ನನಗೆ ಎಲ್ಲಾ ಕಡೆಗೆ ಬರಕ್ಕಾಗಲ್ಲ. ನೀವು ನರಸೀಪುರ, ತಲಕಾಡು, ಸೋಮನಾಥಪುರಕ್ಕೆ ಹೋದಾಗ ಬರ್ತೀನಿ” ಎಂದಿದ್ದರು ರಾಜಲಕ್ಷ್ಮಿ.
ಪ್ರತಿದಿನ ಬಾಲಚಂದ್ರ ಕುಟುಂಬ ತಾವು ಇಳಿದುಕೊಂಡಿದ್ದ ಹೋಟೆಲ್‌ನಲ್ಲಿ ತಿಂಡಿ ತಿಂದುಕೊಂಡು ಬರುತ್ತಿದ್ದರು. ರಜನಿ, ರಾಹುಲ್ ಅವರ ಜೊತೆ ಹೊರಡುವಾಗ ರಾಜಲಕ್ಷ್ಮಿ ವಾಂಗಿಭಾತ್, ಪುಳಿಯೋಗರೆ ಇತ್ಯಾದಿ ಕಲಸನ್ನಗಳು ಜೊತೆಗೆ ಮೊಸರನ್ನ ಡಬ್ಬಿಗಳಿಗೆ ಹಾಕಿಕೊಡುತ್ತಿದ್ದರು. ಅವರು ಮೈಸೂರು ನೋಡಲು ಹೊರಟಾಗ ಹೊರಗೇ ಊಟ ಮಾಡುತ್ತಿದ್ದರು. ಬಾಲಚಂದ್ರನ ಕುಟುಂಬಕ್ಕೆ ರಜನಿ ತುಂಬಾ ಇಷ್ಟವಾಗಿದ್ದಳು. ರಜನಿ, ರಾಹುಲ್‌ಗೂ ಅವರ ಕಂಪನಿ ಇಷ್ಟವಾಗಿತ್ತು.
“ರಿಸಲ್ಟ್ ಬಂದ ಕೂಡಲೇ ತಿಳಿಸು” ಎಂದಿದ್ದರು.

ಕಾರಣಾಂತರದಿಂದ ಬಾಲಚಂದ್ರನ ಎರಡನೇ ಮಗ ಭರತ್ ಮೈಸೂರಿಗೆ ಬಂದಿರಲಿಲ್ಲ.
ರಜನಿ ರಿಸಲ್ಟ್ ಬಂದಿತ್ತು. ಜೊತೆಗೆ ಅವಳಿಗೆ ಬೆಂಗಳೂರಿನ ಕಂಪನಿಯೊಂದರಲ್ಲಿ ಕೆಲಸ ಸಿಕ್ಕಿತ್ತು. ಇದೇ ವೇಳೆಯಲ್ಲಿ ಬಾಲಚಂದ್ರ ಫೋನ್ ಮಾಡಿದ್ದರು.
“ನಾನು, ನಮ್ಮ ಭರತ್ ಮುಂದಿನವಾರ ನಿಮ್ಮ ಮನೆಗೆ ರ‍್ತಿದ್ದೀವಿ. ಒಂದು ಸರ್‌ಪ್ರೈಸ್ ಇದೆ.”
“ಏನು ಸರ್‌ಪ್ರೈಸ್ ನ್ಯೂಸ್?”
“ಸರ್‌ಪ್ರೈಸ್ ಅಂತ ಹೇಳ್ತಿದ್ದೀನಲ್ಲಾ? ನಾನು ಬಂದಮೇಲೆ ಗೊತ್ತಾಗತ್ತೆ.”
ಹೇಳಿದಂತೆ ಬಾಲಚಂದ್ರ ಬಂದಿದ್ದರು. ಅವರ ಮಗ ಭರತ್ ಬಹುಬೇಗ ಎಲ್ಲರ ಮನ ಗೆದ್ದಿದ್ದ.
“ಮೂರ್ತಿ ನನಗೆ ಜಾತಕಗಳಲ್ಲಿ ನಂಬಿಕೆ ಇಲ್ಲ. ಗೋತ್ರಗಳು ಹೊಂದುತ್ತವೆ. ನೀವೆಲ್ಲಾ ಒಪ್ಪಿದರೆ ರಜನಿಯನ್ನು ನಮ್ಮ ಮನೆ ಸೊಸೆ ಮಾಡಿಕೊಳ್ತೇನೆ.”
“ಹುಡುಗ-ಹುಡುಗಿ ಒಪ್ಪಬೇಕಲ್ಲಾ?”
“ನನ್ನ ಮಗ ಒಪ್ಪಿದ್ದಾನೆ. ರಜನಿಯೂ ಒಪ್ಪಬಹುದೂಂತ ಅನ್ನಿಸ್ತಿದೆ. ಅವಳನ್ನು ಕೇಳಿಬಿಡು. ನಿನ್ನ ಹೆಂಡತಿಗೂ ಹೇಳು. ಲಗ್ನಪತ್ರಿಕೆ ನಿಮ್ಮಲ್ಲಿ. ಮದುವೆ ನಮ್ಮಲ್ಲಿ.”
“ನನಗೆ ಕೊಂಚ ಟೈಂ ಕೊಡು.”
“ನಾನು ಸೋಮವಾರ ಫೋನ್ ಮಾಡ್ತೀನಿ. ನೀನು ನಿನ್ನ ಹೆಂಡತಿ, ಮಗಳ ಅಭಿಪ್ರಾಯ ತಿಳಿಸು.”
ವಾರದಲ್ಲಿ ರಜನಿ ಮದುವೆ ನಿಶ್ಚಯವಾಗಿತ್ತು.

“ಲಗ್ನಪತ್ರಿಕೆ ಸಿಂಪಲ್ ಆಗಿ ಮಾಡು. ಅದರ ಖರ್ಚು ನಿನ್ನದು. ಮದುವೆ ಖರ್ಚು ನನ್ನದು. ಸಿಂಪಲ್ಲಾಗೇ ಮಾಡ್ತೀನಿ. ನಾನು ಬಾಂಬೆಯಲ್ಲಿದ್ದರೂ ನಮ್ಮ ಬಂಧು-ಬಳಗ ಇರುವುದೆಲ್ಲಾ ಈ ಕಡೆನೇ. ಮದುವೆ ನಂತರ ಮೈಸೂರಲ್ಲಿ ರಿಸೆಪ್ಷನ್ ಕೊಡೋಣ.”
ಮೂರ್ತಿಗಳು ಒಪ್ಪಿದ್ದರು. ರಿಸೆಪ್ಷನ್ ಖರ್ಚು ಇಬ್ಬರೂ ಹಂಚಿಕೊಂಡಿದ್ದರು. ಎರಡೇ ವರ್ಷಗಳಲ್ಲಿ ರಜನಿ ಗಂಡನ ಜೊತೆ ಅಮೇರಿಕಾಕ್ಕೆ ಹಾರಿದ್ದಳು. ಮಗಳ ಬಾಣಂತನಕ್ಕೆ ರಾಜಲಕ್ಷ್ಮಿ ಹೋಗಬೇಕೆಂದಿರುವಾಗ ಮೂರ್ತಿಗಳು ಬಿದ್ದು, ಬಲಗಾಲು ಫ್ರಾಕ್ಚರ್ ಆಗಿತ್ತು. ಮೂರು ತಿಂಗಳ ನಂತರ ಮುದ್ದಾದ ಹೆಣ್ಣುಮಗುವನ್ನು ಕರೆದುಕೊಂಡು ಬಂದಿದ್ದಳು ರಜನಿ.

ರಾಹುಲ್ ಐ.ಐ.ಟಿ. ಡೆಲ್ಲಿಯಲ್ಲಿ ಎಂ.ಟೆಕ್. ಮಾಡುತ್ತಿದ್ದ. ರಜನಿ ಬಂದು ಹೋದ ನಂತರ ಮೂರ್ತಿಗಳು ಹೇಳಿದ್ದರು. “ರಜನಿ ಅಮೇರಿಕಾ ಸೇರಿದಳು. ರಾಹುಲ್ ಮೈಸೂರಿಗೆ ಇರ್ತಾನೆ ಅನ್ನುವ ನಂಬಿಕೆ ಇಲ್ಲ. ನಾವು ನಂಜನಗೂಡಿಗೆ ವಾಪಸ್ಸು ಹೋಗೋಣ.”
ರಾಜಲಕ್ಷ್ಮಿ ಒಪ್ಪಿದ್ದರು. ತಮ್ಮ ಮನೆ ಖಾಲಿ ಮಾಡಿಸಿ ಆಧುನಿಕ ಅನುಕೂಲತೆಗಳಿರುವಂತೆ ದುರಸ್ತಿ ಮಾಡಿಸಿದ್ದರು. ರಜನಿಯ ಎರಡನೇ ಬಾಣಂತನ ಆ ಮನೆಯಲ್ಲೇ ನಡೆದಿತ್ತು. ರಾಹುಲ್ ಬಾಂಬೆಯಲ್ಲಿ ಕೆಲಸಕ್ಕೆ ಸೇರಿದ್ದ. ಆಗ ಮೈಸೂರಿನ ಮೈತ್ರಿ ಪರಿಚಯವಾಗಿದ್ದಳು. ಇಬ್ಬರೂ ಪ್ರೀತಿಸಿ ಮದುವೆಯಾಗಿದ್ದರು. ಮೈತ್ರಿಯ ತಂದೆಯ ಒತ್ತಾಯಕ್ಕೆ ಮಣಿದು ಮೈಸೂರಿಗೆ ಬಂದಿದ್ದರು. ಮೈತ್ರಿ ಇನ್‌ಫೋಸಿಸ್ ಸೇರಿದ್ದಳು. ರಾಹುಲ್‌ಗೆ ಇಂಜಿನಿಯರಿಂಗ್ ಕಾಲೇಜ್‌ನಲ್ಲಿ ಕೆಲಸ ಸಿಕ್ಕಿತ್ತು.

ಮಗ ಹತ್ತಿರದಲ್ಲಿದ್ದಾನೆಂದು ಮೂರ್ತಿ ದಂಪತಿಗಳಿಗೆ ಖುಷಿಯಾಗಿತ್ತು. ಆದರೆ ಮನಸ್ಸುಗಳೇ ದೂರವಿದ್ದಾಗ ಖುಷಿಗೆ ಅವಕಾಶವೆಲ್ಲಿ. ರಜನಿಯ ಮಗಳಿಗೆ 7 ವರ್ಷ, ಮಗನಿಗೆ 3 ವರ್ಷ ನಡೆಯುತ್ತಿತ್ತು. ಮೈತ್ರಿ ಮಗನಿಗೆ ಜನ್ಮ ನೀಡಿದ್ದಳು. ರಜನಿ ಮಕ್ಕಳನ್ನು ಕರೆದುಕೊಂಡು ಬಂದು ತಂದೆ-ತಾಯಿ ಜೊತೆ 15 ದಿನಗಳಿದ್ದಳು. ರಾಹುಲ್ ಅಕ್ಕನಿಗೋಸ್ಕರ ಸಂಸಾರ ಸಮೇತ ನಂಜನಗೂಡಿಗೆ ಬಂದು ಹೋಗಿದ್ದ.

ರಜನಿ ಹಿಂದಿರುಗಿ ಹೋಗಿ ಆರು ತಿಂಗಳಾಗಿತ್ತು. ಅವಳು ಹೋಗುವಾಗ ಇಬ್ಬರಿಗೂ ಹೊಸ ಮೊಬೈಲ್ ಕೊಟ್ಟು ಹೋಗಿದ್ದಳು. ಮಗಳು ದೂರವಿದ್ದರೂ ವಾರಕ್ಕೆರಡು ಸಲ ಫೋನ್ ಮಾಡಿ ತಂದೆ-ತಾಯಿ ಜೊತೆ ಮಾತನಾಡುತ್ತಿದ್ದಳು. ರಾಜಲಕ್ಷ್ಮಿಯೇ ಭಾನುವಾರಗಳಲ್ಲಿ ಮಗನಿಗೆ ಫೋನ್ ಮಾಡುತ್ತಿದ್ದರು.
ಒಂದು ಭಾನುವಾರ ಮಧ್ಯಾಹ್ನ 12 ಗಂಟೆಗೆ ಮೂರ್ತಿಗಳು ಹೆಂಡತಿಯ ಜೊತೆ ಯಾವುದೋ ವಿಚಾರ ಮಾತನಾಡುತ್ತಿದ್ದಾಗ ಅಳಿಯನ ಫೋನ್ ಬಂದಿತ್ತು.
“ಹಲೋ…”
“ಮಾವ ನಾನು……..”
“ಅಪರೂಪಕ್ಕೆ ಫೋನ್ ಮಾಡ್ತಿದ್ದೀರಾ ಏನು ವಿಷಯ?”
“ಮಾವ ಒಂದು ಸ್ಯಾಡ್ ನ್ಯೂಸ್. ರಜನಿ ಇವತ್ತು ಹಾರ್ಟ್ ಅಟ್ಯಾಕ್ ಆಗಿ ಹೋಗಿಬಿಟ್ಟಳು….”
“ಏನು ಹೇಳ್ತಿದ್ದೀಯಪ್ಪಾ?” ಅವರು ನಡುಗುವ ಧ್ವನಿಯಲ್ಲಿ ಕೇಳಿದ್ದರು.
“ಹೌದು ಮಾವ. ನಾಲ್ಕು ತಿಂಗಳ ಹಿಂದೆ ಅವಳಿಗೆ ಮೈಲ್ಡ್ ಹಾರ್ಟ್ ಅಟ್ಯಾಕ್ ಆಗಿತ್ತು. ರೆಸ್ಟ್ನಲ್ಲಿದ್ದಳು. ನಮ್ಮ ತಂದೆ-ತಾಯಿ ಇಲ್ಲೇ ಇದ್ದಾರೆ.”
ರಾಜಲಕ್ಷ್ಮಿ-ಮೂರ್ತಿಗಳಿಗೆ ಮಗಳ ಸಾವಿನ ಸುದ್ದಿ ಕೇಳಿ ಆಘಾತವಾಗಿತ್ತು. ರಜನಿ ತಂದೆ-ತಾಯಿಗೆ “ನೀವು ಪಾಸ್‌ಪೋರ್ಟ್ ಮಾಡಿಸಬೇಕು. ನಾನಿರುವಾಗಲೇ ಮಾಡಿಸಿಕೊಡ್ತೀನಿ. ನೀವು ಒಂದು ಸಲ ಅಮೇರಿಕಾಕ್ಕೆ ಬರಬೇಕು. ಎರಡು ತಿಂಗಳು ನನ್ನ ಜೊತೆ ಇರಿ” ಎಂದಿದ್ದಳು. ಆದರೆ ಅದು ಸಾಧ್ಯವಾಗಿರಲಿಲ್ಲ.
ಮಗಳನ್ನು ಕೊನೆಯ ಸಲ ನೋಡಲು ಆಗಿರಲಿಲ್ಲ.
ರಾಹುಲ್ ಹೋಗಲು ಆಸಕ್ತಿ ತೋರಿರಲಿಲ್ಲ.

(ಮುಂದುವರಿಯುವುದು)

-ಸಿ.ಎನ್. ಮುಕ್ತಾ

6 Responses

  1. ನಯನ ಬಜಕೂಡ್ಲು says:

    ಎಲ್ಲ ಸುಖವಾಗಿ ಸಾಗುತ್ತಿರುವಾಗ ಅನಪೇಕ್ಷಿತ ತಿರುವು. ಬಹಳ ಸೊಗಸಾಗಿದೆ ಕಾದಂಬರಿ.

  2. ಕಾದಂಬರಿಯ ಆರಂಭವೇ ಆಘಾತಕಾರಿಯಾಗಿದೆ..ಮುಂದೇನು ಎನ್ನುವ ಕಾತುರವಾಗಿದೆ..ಮೇಡಂ

  3. ಮುಕ್ತ c. N says:

    ಧನ್ಯವಾದಗಳು ನಯನ ಮತ್ತು ನಾಗರತ್ನ..ಕಾದಂಬರಿ ಪ್ರಕಟಿಸುತ್ತಿರುವ ಹೇಮಮಾಲಾ ಇವರಿಗೂ ಧನ್ಯವಾದಗಳು.

  4. ಶಂಕರಿ ಶರ್ಮ says:

    ಕುತೂಹಲಕಾರಿ ತಿರುವಿನೊಂದಿಗೇ ಆರಂಭವಾದ ‘ತಾಯಿ`ಯ ಮುಂದಿನ ಕಂತುವಿಗಾಗಿ ಕಾತರದಿಂದ ಕಾಯುವಂತಾಗಿದೆ.

  5. ಮುಕ್ತ c. N says:

    ಧನ್ಯವಾದಗಳು ಶಂಕರಿ ಶರ್ಮ ಮೇಡಂ

  6. ಪದ್ಮಾ ಆನಂದ್ says:

    ಮೊದಲ ಕಂತಿನಲ್ಲೇ ಧಾರವಾಹಿ ಕುತೂಹಲ ಕೆರಳಿಸಿ ಮುಂದಿನ ಸಂಚಿಕೆಗೆ ಕಾಯುವಂತೆ ಮಾಡಿದೆ. ಅಭಿನಂದನೆಗಳು.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: