ಪುನರುತ್ಥಾನದ ಪಥದಲ್ಲಿ …. ಹೆಜ್ಜೆ 2
ವಿಯೆಟ್ನಾಂ, ಕಾಂಬೋಡಿಯ ಪ್ರವಾಸಕಥನ..…
ನಮ್ಮ ಕಾರು Noi Bai ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹನೋಯ್ ನಗರದತ್ತ ಚಲಿಸುತ್ತಿತ್ತು. ಮಳೆ ಹನಿಯುತ್ತಿದ್ದ ಸಮುದ್ರ ತೀರದ ವಾತಾವರಣ. ಹೆಚ್ಚು ಕಡಿಮೆ ಮಂಗಳೂರಿನಂತಹ ಪರಿಸರ. ದಾರಿಯುದ್ದಕ್ಕೂ ಮಾರ್ಗದರ್ಶಿಯನ್ನು ಅದೂ ಇದೂ ಮಾತನಾಡಿಸುತ್ತಾ ಮಾಹಿತಿ ಪಡೆಯುತ್ತಿದ್ದೆವು. ಈ ದಾರಿಯಲ್ಲಿ ಚೀನಾದಿಂದ ಹರಿದು ಬರುತ್ತಿರುವ ‘ ರೆಡ್ ರಿವರ್’ ಸಿಗುತ್ತದೆ. ಇದರೆ ಮೇಲೆ ಕಟ್ಟಲಾದ ಆರು ಪಥಗಳುಳ್ಳ , ಒಟ್ಟು 8.3 ಕಿಮಿ ದೂರವುಳ್ಳ ‘ನಾಟ್ ಟಾನ್ ಬ್ರಿಡ್ಜ್ ‘ (Nhat Tan Bridge) ಎಂಬ ಹೆಸರಿನ ಸೇತುವೆಯು Noi Bai ನಿಲ್ದಾಣ ಹಾಗೂ ಹನೋಯ್ ನಗರಕ್ಕೆ ಸಂಪರ್ಕ ಕಲ್ಪಿಸುತ್ತದೆ. ಇದು ವಿಯೆಟ್ನಾಂನ ಅತ್ಯಂತ ಉದ್ದದ ಸೇತುವೆಯಾಗಿದ್ದು 1.5 ಕಿಮೀ ದೂರದ ಕೇಬಲ್ ಸೇತುವೆಯನ್ನೂ ಒಳಗೊಂಡಿದೆ. ವಿಯೆಟ್ನಾಂ ಹಾಗೂ ಜಪಾನ್ ಸರಕಾರಗಳ ಸಹಯೋಗದಿಂದ ನಿರ್ಮಿಸಲಾದ ಈ ಸೇತುವೆಯನ್ನು 2015 ರಲ್ಲಿ ಉದ್ಘಾಟಿಸಲಾಯಿತು. ಇದನ್ನು ವಿಯೆಟ್ನಾಂ-ಜಪಾನ್ ಸ್ನೇಹ ಸೇತುವೆ ( Vietnam –Japan Friendship Bridge) ಎಂತಲೂ ಹೇಳುತ್ತಾರೆ. ರೆಡ್ ರಿವರ್ ಮೇಲೆ ಕಟ್ಟಲಾದ ಅತಿ ಉದ್ದದ ಸೇತುವೆಯಾದ ‘ನಾಟ್ ಟಾನ್ ಬ್ರಿಡ್ಜ್’ ವಿಯೆಟ್ನಾಂನವರ ಹೆಮ್ಮೆಯ ಸಂಕೇತವೂ ಆಗಿದೆ. ಅಲ್ಲಿಂದ 6 ಗಂಟೆಗಳ ಕಾಲ ರಸ್ತೆಯಲ್ಲಿ ಪ್ರಯಾಣಿಸಿದರೆ ಚೀನಾ ತಲಪಬಹುದಂತೆ.
ನಮ್ಮ ಮಾರ್ಗದರ್ಶಿ ಎಳೆಯುವಕನಂತೆ ಕಾಣಿಸುತ್ತಿದ್ದುದರಿಂದ ಆತ ಕಾಲೇಜು 18-20 ರ ವಯಸ್ಸಿನ ವಿದ್ಯಾರ್ಥಿ ಅಥವಾ ಪಾರ್ಟ್ ಟೈಮ್ ಉದ್ಯೋಗಿ ಯಾಗಿರಬಹುದೆಂದು ಊಹಿಸಿದ್ದೆ. ಮಾತುಕತೆಗಳ ನಡುವೆ ಗೊತ್ತಾದುದೇನೆಂದರೆ, ಆತನ ವಯಸ್ಸು 28. ಹನೋಯಿ ಗಿಂತ 150 ಕಿಮೀ ದೂರದ ಹಳ್ಳಿಯವನು . ನಗರದಲ್ಲಿ ವಸತಿ ಮಾಡಿಕೊಂಡು ಫ್ರೀಲಾನ್ಸರ್ ಟೂರಿಸ್ಟ್ ಗೈಡ್ ಆಗಿ ಉದ್ಯೋಗ ಮಾಡುತ್ತಾನೆ. ವಿಯೆಟ್ನಾಂನಲ್ಲಿ ಇತ್ತೀಚೆಗೆ ಪ್ರವಾಸೋದ್ಯಮ ಅಭಿವೃದ್ಧಿ ಹೊಂದುತ್ತಿರುವ ಹಿನ್ನೆಲೆಯಲ್ಲಿ ಇಲ್ಲಿ ಇಂಗ್ಲಿಷ್ ಭಾಷೆ ಬಲ್ಲವರಿಗೆ ಹಾಗೂ ಇಂಗ್ಲಿಷ್ ಅಧ್ಯಾಪಕರಿಗೆ ಬಹಳ ಬೇಡಿಕೆಯಿದೆಯಂತೆ.
ವಿದ್ಯಾಭ್ಯಾಸದ ಮಟ್ಟಿಗೆ ಹೇಳುವುದಾದರೆ ಗಂಡು ಹಾಗೂ ಹೆಣ್ಣು ಮಕ್ಕಳಿಗೆ ಸಮಾನ ಅವಕಾಶ ಇದೆ. ಕಾಲೇಜು ವಿದ್ಯಾಭ್ಯಾಸದ ನಂತರ ಸರಕಾರಿ ಉದ್ಯೋಗ ಸಿಗುತ್ತದೆ. ಆದರೆ ಸರಕಾರಿ ಉದ್ಯೋಗಕ್ಕಿಂತ ಸ್ವಯಂ ಉದ್ಯೋಗದಲ್ಲಿ ಸಂಪಾದನೆ ಜಾಸ್ತಿ ಹಾಗೂ ಸ್ವಾತಂತ್ರ್ಯವೂ ಹೆಚ್ಚು. ಹಾಗಾಗಿ ಹೆಚ್ಚಿನ ಯುವಜನರ ಆಯ್ಕೆ ಸ್ವಯಂ ಉದ್ಯೋಗವಾಗಿರುತ್ತದೆ. ಇಲ್ಲಿ ರಷ್ಯಾ ಮಾದರಿಯಿಂದ ಪ್ರೇರಿತವಾದ ಸಮಾಜವಾದಿ ಆಡಳಿತವಿರುವುದರಿಂದ ಯಾರೂ ಅತಿ ಶ್ರೀಮಂತರಾಗುವುದಿಲ್ಲ, ಸಂಪನ್ಮೂಲಗಳನ್ನು ಯಾರ ಬಳಿಯೂ ಅತಿಯಾಗಿ ಕ್ರೋಢೀಕರಿಸಲು ಅವಕಾಶವಿಲ್ಲ. ಎಲ್ಲರೂ ಏನಾದರೊಂದು ಕೆಲಸವನ್ನು ಮಾಡುತ್ತಲೇ ಇರುತ್ತಾರೆ. ದೈನಂದಿನ ದುಡಿಮೆಯ ಅವಧಿ ಜಾಸ್ತಿ. ಭ್ರಷ್ಟಾಚಾರವೂ ಜಾಸ್ತಿಯೇ ಇದೆಯಂತೆ.
ಈತನಿಗೆ ಮದುವೆಯಾಗಿಲ್ಲ, ಆದರೆ ಸ್ನೇಹಿತೆ ಇದ್ದಾಳೆ. ವಿಯೆಟ್ನಾಂನಲ್ಲಿ ಮದುವೆಯ ಸಂದರ್ಭದಲ್ಲಿ ಹುಡುಗನ ಕಡೆಯವರಿಗೆ ಖರ್ಚು ಜಾಸ್ತಿಯಂತೆ. ಕೆಲವು ಸಮುದಾಯಗಳಲ್ಲಿ ಮಾತೃಮೂಲ ಪದ್ಧತಿ ಇರುವುದರಿಂದ ಮದುವೆಯ ನಂತರ ಹುಡುಗನು ತನ್ನ ಪತ್ನಿಯ ಮನೆಗೆ ಹೋಗಬೇಕಾಗುತ್ತದೆ. ಬದಲಾದ ಕಾಲಘಟ್ಟದಲ್ಲಿ, ನೂತನ ದಂಪತಿಗಳು ಬೇರೆ ಮನೆ ಮಾಡಿಕೊಂಡು ಎರಡೂ ಕಡೆಯ ಹೆತ್ತವರ ಮನೆಗೆ ಭೇಟಿ ಕೊಡುತ್ತಾರೆ. ಮದುವೆಯ ಸಮಯದಲ್ಲಿ ಹುಡುಗನು ಹುಡುಗಿಯ ಮನೆಯವರಿಗೆ ಹಲವಾರು ಉಡುಗೊರೆ, ಹಣ ಕೊಡಬೇಕಾಗುತ್ತದೆಯೆಂದು, ಇತ್ತೀಚೆಗೆ ಹುಡುಗರು ಮದುವೆಯಾಗಲು ಹಾಗೂ ಮಕ್ಕಳನ್ನು ಪಡೆಯಲು ಹಿಂಜರಿಯುತ್ತಾರೆ. ಇಲ್ಲಿ ವಿವಾಹ ಪೂರ್ವ ‘ಲಿವ್ ಇನ್ ರಿಲೇಷನ್’ ಎಂಬ ಒಡನಾಟಕ್ಕೆ ಕಾನೂನಾತ್ಮಕ ಸಮ್ಮತಿ ಇರುವುದರಿಂದ, ಮದುವೆಯಾಗದೇ ಇರುವ ಅಭ್ಯಾಸ ಈಗೀಗ ಕಂಡು ಬರುತ್ತಿದೆ. ಹೀಗೆಯೇ ಮುಂದುವರಿದರೆ, ಇನ್ನೂ ಕೆಲವು ವರ್ಷಗಳ ನಂತರ, ನಿಮ್ಮ ದೇಶದಲ್ಲಿ ದುಡಿಯುವ ವಯಸ್ಸಿನ ಯುವಜನಾಂಗ ಕಡಿಮೆಯಾಗದೇ ಅಂದೆ. ‘ಹೂಂ, ಈಗ ಚೀನಾದಲ್ಲಿ ಆಗುತ್ತಿರುವುದು ಅದೇ’ ಅಂದ.
ಮಾತು ಮುಂದುವರಿಸಿದ ಮಾರ್ಗದರ್ಶಿಯು, ನಿಗದಿತ ವೇಳಾಪಟ್ಟಿ ಪ್ರಕಾರ, ಆತ ನಮ್ಮನ್ನು ಕೆಲವು ಸ್ಥಳೀಯ ಪ್ರೇಕ್ಷಣೀಯ ಸ್ಥಳಗಳನ್ನು ತೋರಿಸಿ, ನಾವು ಉಳಕೊಳ್ಳಲಿರುವ ಹೋಟೆಲ್ ಗೆ ಮಧ್ಯಾಹ್ನ ಎರಡು ಗಂಟೆಗೆ ತಲಪಿಸುವೆ ಎಂದ. ಆದರೆ ಮುನ್ನಾ ದಿನ ರಾತ್ರೆ ಬೆಂಗಳೂರಿನಿಂದ ಹೊರಟ ನಮಗೆ ರೂಮಿಗೆ ಹೋಗಿ, ಲಗೇಜು ಇರಿಸಿ , ಸ್ನಾನ , ಉಪಾಹಾರ ಮುಗಿಸಿ ಫ್ರೆಷ್ ಆಗಿ ನಗರ ಸುತ್ತಾಡೋಣ ಅನಿಸುತ್ತಿತ್ತು. ಈ ಬಗ್ಗೆ ಆತನಿಗೆ ಹೇಳಿದಾಗ, ಅಲ್ಲಿಯ ಹೋಟೆಲ್ ಗಳ ಪದ್ಧತಿಯ ಪ್ರಕಾರ ಚೆಕ್ ಇನ್ ಸೌಲಭ್ಯ ಮಧ್ಯಾಹ್ನ 0200 ಗಂಟೆಗೆ .ಈಗ ನಿಮಗೆ ರೂಮ್ ಸಿಗಲಾರದು. ನಿಮ್ಮ ಲಗೇಜು ಕಾರಿನಲ್ಲಿಯೇ ಇರುತ್ತದೆ, ನಿಮಗೆ ಉಪಾಹಾರಕ್ಕಾಗಿ ಸ್ಥಳೀಯ ಹೋಟೆಲ್ ಗೆ ಕರೆದೊಯ್ಯುವೆ, ಇದು ನಿಮ್ಮ ವೇಳಾಪಟ್ಟಿಯಲ್ಲಿ ಇಲ್ಲವಾದರೂ ನಾನು ಕೊಡಿಸುವೆ, ನೀವು ಹಣ ಕೊಡಬೇಡಿ ಅಂದ. ಪರವಾಗಿಲ್ಲ, ಹಣ ನಾವೇ ಕೊಡುವೆವು, ನಮ್ಮನ್ನು ಯಾವುದಾದರೂ ಸಸ್ಯಾಹಾರ ಸಿಗುವ ಹೋಟೇಲ್ ಗೆ ಕರೆದುಕೊಂಡು ಹೋಗೆಂದು ವಿನಂತಿಸಿದೆವು.
ಯಾವುದೋ ಹೋಟೆಲ್ ಮುಂದೆ ಕಾರು ನಿಲ್ಲಿಸಿದ. ಹೋಟೆಲ್ ನ ಬೋರ್ಡ್ ವಿಯೆಟ್ನಾಮೀಸ್ ಭಾಷೆಯಲ್ಲಿತ್ತು . ಮೆನು ಕಾರ್ಡ್ ಇಂಗ್ಲಿಷ್ ನಲ್ಲಿದ್ದ ಕಾರಣ, ಸಸ್ಯಾಹಾರವನ್ನು ಹುಡುಕಿ, ‘ನೋ ಫಿಷ್, ನೋ ಎಗ್, ನೋ ಮೀಟ್’ ಎಂದು ಪುನರುಚ್ಚರಿಸಿ ‘ ಬಲಾಸ್ಮಿಕ್ ಗ್ರೀನ್’ ಎಂಬ ಸಲಾಡ್ ಮತ್ತು ‘ಕ್ಯಾರ್ಮಲ್ ಫ್ರೆಂಚ್ ಟೋಸ್ಟ್’ ತರಿಸಿಕೊಂಡೆವು. ಹಸಿರು ‘ರೋಸ್ ಮಾರಿ’ ಸೊಪ್ಪು, ಕಾಳುಗಳು, ಬೀನ್ಸ್, ಕಡ್ಲೆಬೀಜ ಇತ್ಯಾದಿ ಧಾರಾಳವಾಗಿ ಬಳಸಿದ್ದ ತಿನಿಸುಗಳು ಅರೋಗ್ಯಕರವಾಗಿ ಇದ್ದುವು. ಆದರೆ ರುಚಿ ತೀರಾ ಸಪ್ಪೆ ಎನಿಸಿತು. ಅನಿವಾರ್ಯವಾಗಿದ್ದ ಕಾರಣ ತಿಂದೆವು. ನಮ್ಮ ಮಾರ್ಗದರ್ಶಿಗೂ ಏನಾದರೂ ಆಹಾರ ತೆಗೆದುಕೊ ಅಂದಾಗ, ನನ್ನ ಬ್ರೇಕ್ ಫಾಸ್ಟ್ ಆಗಿದೆ, ನಾಳೆ ನಿಮ್ಮ ಜೊತೆಗೆ ಇನ್ನೊಬ್ಬ ಮಾರ್ಗದರ್ಶಿ ಇರುತ್ತಾರೆ, ನಾನು ಬರುವುದಿಲ್ಲ, ನಿಮಗೆ ನನ್ನ ಸೇವೆ ಇಷ್ಟವಾದರೆ, ಸಂಜೆ ಟಿಪ್ಸ್ ಕೊಡಿ ಅಂದ. ಒಟ್ಟು ಉಪಾಹಾರದ ಬಿಲ್ 250 ಸಾವಿರ ವಿಯೆಟ್ನಾಂ ಡಾಂಗ್ ಆಗಿತ್ತು. ಅಂದರೆ ಸುಮಾರು 833 ರೂ.ಗಳು ಅಥವಾ 10 ಡಾಲರ್ ಗಳು. ಅಲ್ಲಿ ಕ್ರೆಡಿಟ್ ಕಾರ್ಡ್/ ಕ್ಯಾಶ್ ಕಾರ್ಡ್ ಕೊಟ್ಟು ಬಿಲ್ ಚುಕ್ತಾ ಮಾಡಿದೆವಾದರೂ ರೂಪಾಯಿ-ಡಾಲರ್-ಡಾಂಗ್ ಎಂಬ ಗೊಂದಲ ನಮ್ಮ ತಲೆಯಲ್ಲಿ ಡಿಂಗ್-ಡಾಂಗ್ ನೃತ್ಯ ಮಾಡಲಾರಂಭಿಸಿತು.
ಉಪಾಹಾರದ ನಂತರ ಚಹಾ ಸೇವನೆಗಾಗಿ, ಮಾರ್ಗದರ್ಶಿ ನಮ್ಮನ್ನು ಒಂದು ವಿಶಾಲವಾದ ಶಾಪಿಂಗ್ ಕಾಂಪ್ಲೆಕ಼್ ಗೆ ಕರೆದು ಕೊಂಡು ಹೋದ. ಬಟ್ಟೆಬರೆ, ಕರಕುಶಲ ವಸ್ತುಗಳು ಇತ್ಯಾದಿ ಮಾರಾಟಕ್ಕೆ ಲಭ್ಯವಿದ್ದ ಆ ಮಳಿಗೆಯಲ್ಲಿ ಚಹಾ/ಕಾಫಿ ಖರೀದಿಸುವ ವ್ಯವಸ್ಥೆಯೂ ಇತ್ತು. ಅಲ್ಲಿದ್ದ ಎಳೆಯ ವಯಸ್ಸಿನ ಹುಡುಗಿಯರು ಬಣ್ಣ ಬಣ್ಣದ ಸೊಗಸಾದ ಪಾದ ಮುಚ್ಚುವಷ್ಟು ಉದ್ದದ, ತುಂಬುತೋಳಿನ ಕುರ್ತಿ, ಪೈಜಾಮಾ ಧರಿಸಿದ್ದರು. ‘ Ao Doi ‘ಎಂದು ಬರೆದರೂ ‘ಆಸೋಯ್’ ಎಂದು ಉಚ್ಚರಿಸುವ ಈ ದಿರಿಸು ವಿಯೆಟ್ನಾಂನ ಸಾಂಪ್ರದಾಯಿಕ ಉಡುಗೆ. ‘ಆಸೋಯ್’ ತೊಟ್ಟ ಚೆಂದದ ಮೈಮಾಟದ ಗೌರವರ್ಣದ ಆ ಚೆಂದುಳ್ಳಿ ಚೆಲುವೆಯರು ಪ್ರವಾಸಿಗರನ್ನು ನಗುನಗುತ್ತಾ ಮಾತನಾಡಿಸುತ್ತಿದ್ದರು. ನಮ್ಮಿಬ್ಬರಿಗೂ ನಮ್ಮ ಸೊಸೆಯರಿಗಾಗಿ ಒಂದು ‘ಆಸೋಯ್’ ಕೊಳ್ಳಬೇಕೆನಿಸಿತು. ಸಿಲ್ಕ್ ಹಾಗೂ ಶಿಫಾನ್ ಬಟ್ಟೆಯಿಂದ ತಯಾರಿಸಿದ್ದ ವಿವಿಧ ವಿನ್ಯಾಸದ ‘ಆಸೋಯ್’ ಗಳು ಗಮನ ಸೆಳೆದುವು. ಆದರ ಬೆಲೆ 3 ಮಿಲಿಯನ್ ಡಾಂಗ್ ಎಂದಾಗ ಸುಮಾರು 10,000 ರೂ ಆಗುತ್ತದೆಯಲ್ಲವೇ? ದುಬಾರಿಯಾಯಿತಲ್ಲವೇ? ನಮ್ಮ ಊರಿನಲ್ಲಿ ಸಿಗುವ ‘ಆನಾರ್ಕಲಿ ಕುರ್ತಿ’ಯ ಇನ್ನಷ್ಟು ಉದ್ದದ ರೂಪದಂತಿರುವ ಇದಕ್ಕೆ ಇಷ್ಟು ದರ ಹೆಚ್ಚಾಯಿತಲ್ಲವೆ? ಅಷ್ಟಕ್ಕೂ ನಮ್ಮ ಸೊಸೆಯರ ಅಭಿರುಚಿಗೆ ಇದು ಇಷ್ಟವಾಗಬಹುದೇ? ಫೋಟೊ ತೆಗೆದು ವಾಟ್ಸಾಪ್ ನಲ್ಲಿ ಕಳುಹಿಸಿ ಅವರ ಅಭಿಪ್ರಾಯ ಕೇಳಿ ಆಮೇಲೆ ಖರೀದಿಸಿದರಾಯಿತು , ವಿಯಟ್ನಾಂನಲ್ಲಿ ಕಾಲಿಟ್ಟ ಮೊದಲ ದಿನವೇ , ಭೇಟಿ ಕೊಟ್ಟ ಮೊದಲ ಮಳಿಗೆಯಲ್ಲಿಯೇ ಖರೀದಿಸುವ ಆತುರ ಬೇಡ ಅಂದುಕೊಂಡು ನಮ್ಮ ನಿರ್ಧಾರವನ್ನು ಬದಲಿಸಿದೆವು. ಅಲ್ಲಿದ್ದ ಚಹಾ ಕೌಂಟರ್ ನಲ್ಲಿ ಲೆಮನ್ ಟೀ ಖರೀದಿಸಿ ಕುಡಿದೆವು.
ಮೈಸೂರಿಗೆ ಬರುವ ವಿದೇಶಿ ಪ್ರಯಾಣಿಕರನ್ನು ಸ್ಥಳೀಯ ಮಾರ್ಗದರ್ಶಿಗಳು ಇದ್ದುದರಲ್ಲಿ ದುಬಾರಿ ಇರುವ ಮಾಲ್ ಗಳಿಗೆ ಕರೆದೊಯ್ಯುವುದನ್ನು ಗಮನಿಸಿದ್ದೆ. ಅದೇ ಗುಣಮಟ್ಟದ ವಸ್ತುಗಳು ಇತರ ಕೆಲವೆಡೆ ಮಿತ ಬೆಲೆಗೆ ಸಿಗುತ್ತವೆ. ಹಾಗಾಗಿ, ನಮ್ಮ ಮಾರ್ಗದರ್ಶಿ ಬಳಿ, ನನಗೆ ಒಂದು ಆಸೋಯ್ ಖರೀದಿಸಬೇಕು, ಆದರೆ ಬೆಲೆ ತೀರಾ ದುಬಾರಿ ಆಯಿತು . ಹೈ-ಫೈ ಮಾಲ್ ಬೇಡ, ಯಾವುದಾದರೂ ಮಿತಬೆಲೆಯ ಅಂಗಡಿಯನ್ನು ತೋರಿಸಿ ಅಂದೆ. ‘ಒಕೆ, ಹಿಯರ್ ಎಕ್ಸ್ಪೆನ್ಸಿವ್ ಬಟ್ ಕ್ವಾಲಿಟಿ ಈಸ್ ಗುಡ್ ‘ ಅಂದ. ಪ್ರಯಾಣ ಮುಂದುವರಿದು ಟ್ರಾನ್ ಕ್ವೋಕ್ ಪಗೋಡ (Tran Quoc )ಪಗೋಡಾ ತಲಪಿದೆವು.
ಈ ಪ್ರವಾಸ ಕಥನದ ಹಿಂದಿನ ಕಂತು ಇಲ್ಲಿದೆ: https://www.surahonne.com/?p=41225
(ಮುಂದುವರಿಯುವುದು)
–ಹೇಮಮಾಲಾ.ಬಿ, ಮೈಸೂರು
ಪ್ರವಾಸ ಕಥನ..ಸೊಗಸಾದ ನಿರೂಪಣೆಯ ಲ್ಲಿ ಮುಂದುವರೆಯುತ್ತಿದೆ..
ಮೆಚ್ಚುಗೆಗೆ ಧನ್ಯವಾದಗಳು.
ಚಂದದ ಪ್ರವಾಸಿ ಕಥನ
ಮೆಚ್ಚುಗೆಗೆ ಧನ್ಯವಾದಗಳು
Beautiful,
ಬಹಳ ಸ್ವಾರಸ್ಯಕರವಾದ ಪ್ರವಾಸದ ವಿವರಗಳು ಕುತೂಹಲಕಾರಿಯಾಗಿವೆ… ಧನ್ಯವಾದಗಳು ಮಾಲಾ ಅವರಿಗೆ.
ಆಸಕ್ತಿದಾಯಕವಾಗಿ ಓದಿಸಿಕೊಳ್ಳುವ ಪ್ರವಾಸ ಕಥನ ಕಯತೂಹಲ ಮೂಡಿಸುತ್ತಿದೆ.
ತುಂಬಾ ಇಂಟರೆಸ್ಟಿಂಗ್ ಇದೆ ವಿವರಣೆ, ಚೆನ್ನಾಗಿದೆ
ಧನ್ಯವಾದಗಳು