ನೀ ನನಗಿದ್ದರೆ ನಾ ನಿನಗೆ ಪುಟ – 1
ಗಡಿನಾಡಿನ ಕನ್ನಡದ ಹಿರಿಯ ಕವಿ ದಿವಂಗತ ಕಯ್ಯಾರ ಕಿಞ್ಷಣ್ಣ ರೈ ರಚಿಸಿದ ‘ನೀ ನನಗಿದ್ದರೆ ನಾ ನಿನಗೆ’ ಎಂಬ ಚೆಂದದ ಮಕ್ಕಳ ಪದ್ಯದೊಂದಿಗೆ ಈ ಚಿಂತನವನ್ನು ಆರಂಭಿಸೋಣ. –
“ಸಂತೆಗೆ ಹೋದನು ಭೀಮಣ್ಣ, ಹಿಂಡಿಯ ಕೊಂಡನು ಹತ್ತು ಮಣ
ಕತ್ತೆಯ ಬೆನ್ನಿಗೆ ಹೇರಿಸಿದ ಕುದುರೆಯ ಜೊತೆಯಲಿ ಸಾಗಿಸಿದ”
ಕತ್ತೆಯು ಹೊರೆಯನ್ನು ಹೊರಲಾರದೆ ನರಳುತ್ತಾ ಕುದುರೆಯ ಸಹಾಯವನ್ನು ಬೇಡಿತು. ಆದರೆ ಕುದುರೆಯು ಕತ್ತೆಯನ್ನು ಅಪಹಾಸ್ಯ ಮಾಡುತ್ತಾ, ‘ಒಡೆಯನು ನಿನ್ನನ್ನು ಸಾಕಿರುವುದೇ ಭಾರವನ್ನು ಹೊರಲಿಕ್ಕೆ, ಸುಮ್ಮನೆ ಹೊರೆಯನ್ನು ಹೊತ್ತು ಬೇಗ ನಡಿ, ಯಜಮಾನ ಬರುತ್ತಿರುವನು’ ಎಂದು ಕೆಣಕಿತು. ಕತ್ತೆಯು ಭಾರವನ್ನು ಹೊರಲಾರದೆ ಕೆಳಗೆ ಕುಸಿದಿತ್ತು. ಆಗ ಅಲ್ಲಿಗೆ ಬಂದ ಒಡೆಯನು ಕತ್ತೆಯ ಮೇಲಿದ್ದ ಹೊರೆಯನ್ನು ಕುದುರೆಯ ಬೆನ್ನಿಗೆ ಸಾಗಿಸಿದ. ಕುದುರೆಯು ಹೊರೆಯನ್ನು ಹೊರಲಾರದೆ ಒದ್ದಾಡಿತು, ತನ್ನ ಮೇಲಿದ್ದ ಹೊರೆಯನ್ನು ಕಡಿಮೆ ಮಾಡೆಂದು ಕತ್ತೆಯನ್ನು ಅಂಗಲಾಚಿತು. ಆಗ ಕತ್ತೆಯ,
“ನನ್ನಯ ಕಷ್ಟದಿ ಹಿಗ್ಗಿದ್ದಿ ಬಂತೇ ಈಗಾದರು ಬುದ್ದಿ
ನೀ ನನಗಿದ್ದರೆ ನಾ ನಿನಗೆ ನೆನಪಿರಲೀ ನುಡಿ ನಮ್ಮೊಳಗೆ”
ಈ ಕವಿತೆಯ ನೀತಿ ಪದ್ಯದ ಕೊನೆಯ ಸಾಲಿನಲ್ಲಿ ಅಡಗಿದೆ, ‘ನೀ ನನಗಿದ್ದರೆ ನಾ ನಿನಗೆ’. ಮಾನವ ಸಂಘಜೀವಿ, ಪರಸ್ಪರ ಒಬ್ಬರಿಗೊಬ್ಬರು ನೆರವಾದರೆ ಬದುಕು ಹಸನಾಗುವುದು. ಇಲ್ಲವಾದರೆ ಕತ್ತೆಯ ಸ್ಥಿತಿ ಬಂದೊದಗುವುದು, ಕುದುರೆಯ ಸ್ಥಿತಿಯೂ ಅದಕ್ಕಿಂತ ಭಿನ್ನವಾಗಿಲ್ಲ. ಇಬ್ಬರೂ ಸಮನಾಗಿ ಹೊರೆಯನ್ನು ಹೊತ್ತು ಸಾಗಿದ್ದರೆ, ಪಯಣ ಸುಗಮವಾಗಿ ಸಾಗುತ್ತಿತ್ತು. ಹಾಗೆಯೇ ಈ ಸಮಾಜದಲ್ಲಿ ಬಾಳುವ ನಾವು ಪರರ ಕಷ್ಟವನ್ನು ನಮ್ಮ ಕಷ್ಟವೆಂದು ಭಾವಿಸಿ, ಅವರಿಗೆ ಸಹಾಯ ಹಸ್ತ ಚಾಚಿದರೆ, ನಾವು ತೊಂದರೆಗೆ ಸಿಲುಕಿದಾಗ ಅವರೂ ನಮಗೆ ನೆರವಾಗುವುದು ಖಚಿತ.
ಈ ಕಥೆಯನ್ನು ಮಾನವನ ಬದುಕಿಗೆ ಅನ್ವಯಿಸೋಣ. ಮನುಜನ ಬಾಳಿನಲ್ಲಿ ನಾಲ್ಕು ಪ್ರಮುಖ ಹಂತಗಳನ್ನು ಗುರುತಿಸಬಹುದು –ಮೊದಲನೆಯದಾಗಿ ಬಾಲ್ಯದಲ್ಲಿ ಕುಟುಂಬದವರೊಡನೆ ನಲಿಯುತ್ತಾ ಕಲಿಯುವ ಮೌಲ್ಯಗಳು, ಎರಡನೆಯದು ಮಗು ಶಾಲೆಗೆ ಹೋದಾಗ ತನ್ನ ಗೆಳೆಯರೊಂದಿಗೆ ಸ್ನೇಹದಿಂದ ಇರುವುದನ್ನು ಕಲಿಯುವುದು, ಮೂರನೆಯದಾಗಿ ಯೌವನದಲ್ಲಿ ತನ್ನ ಸುತ್ತಮುತ್ತಲಿನ ಸಮಾಜದಲ್ಲಿ ಜರುಗುವ ಚಟುವಟಿಕೆಗಳಲ್ಲಿ ಜವಾಬ್ದಾರಿಯಿಂದ ಪಾಲ್ಗೊಳ್ಳುವ ಕರ್ತವ್ಯ, ನಾಲ್ಕನೆಯದು ತನ್ನ ದೇಶದ ಕರ್ತವ್ಯಗಳನ್ನು ಪಾಲಿಸುತ್ತಾ ಸತ್ಪ್ರಜೆಯಾಗುವುದು’
ಬಾಲ್ಯದಲ್ಲಿ ಮಗು ತನ್ನ ಕುಟುಂಬದ ಸದಸ್ಯರೊಂದಿಗೆ ಪ್ರೀತಿ, ಆತ್ಮೀಯತೆಯೊಂದಿಗೆ ಬಾಳಲು ಕಲಿಯುವುದು. ತಂದೆ, ತಾಯಿ, ಅಣ್ಣ, ತಮ್ಮ, ಅಜ್ಜ, ಅಜ್ಜಿಯರ ಮಾರ್ಗದರ್ಶನದಲ್ಲಿ ಬದುಕನ್ನು ಕಟ್ಟಿಕೊಳ್ಳುವುದು. ಅವಿಭಕ್ತ ಕುಟುಂಬಗಳಲ್ಲಿ ನಡೆಯುವ ಒಂದು ಸಣ್ಣ ಪ್ರಸಂಗವನ್ನು ಕಣ್ಣ ಮುಂದೆ ತಂದುಕೊಳ್ಳೋಣ – ಆಗ ತಾನೆ ನಡೆಯಲು ಕಲಿತ ಮಗುವೊಂದರ ಬಳಿ ಅಜ್ಜ ಅಜ್ಜಿ ಕುಳಿತು ಸಂಭ್ರಮಿಸುತ್ತಿರುವರು, ಕೊಠಡಿಯ ಒಂದು ಮೂಲೆಯಲ್ಲಿ ಕುಳಿತ ಅಜ್ಜ, ಒಂದು ಬಿಸ್ಕತ್ತನ್ನು ಮಗುವಿಗೆ ನೀಡಿ ಅಜ್ಜಿಗೆ ಕೊಡು ಎನ್ನುವನು, ಮಗು ಖುಷಿಯಿಂದ ಅಜ್ಜಿಯ ಬಳಿ ಓಡುವುದು, ತನ್ನ ಕೈಲಿದ್ದ ಬಿಸ್ಕತ್ತನ್ನು ಅಜ್ಜಿಗೆ ನೀಡಿ ಚಪ್ಪಾಳೆ ತಟ್ಟುವುದು. ಅಜ್ಜಿ ಮಗುವಿಗೆ ಒಂದು ಮುತ್ತನ್ನಿಟ್ಟು ಅದೇ ಬಿಸ್ಕತ್ತನ್ನು ಅಜ್ಜನಿಗೆ ಕೊಡು ಎಂದು ಹೇಳುವಳು. ಮಗು ಅಜ್ಜನ ಬಳಿ ಓಡುವುದು. ಒಮ್ಮೆ ಈ ಪ್ರಸಂಗದ ಬಗ್ಗೆ ಯೋಚಿಸೋಣ. ಹಿರಿಯರು ಪುಟ್ಟ ಮಗುವಿಗೆ ಉನ್ನತವಾದ ಮಾನವೀಯ ಮೌಲ್ಯವನ್ನು ಕಲಿಸಿಕೊಡುತ್ತಿರುವರು – ತನ್ನಲ್ಲಿರುವುದನ್ನು ಬೇರೆಯವರಿಗೆ ಕೊಡುವ ಗುಣ, ಕೊಡುವುದರಲ್ಲಿ ಇರುವ ಸಂತೋಷ, ಅಜ್ಜ ಅಜ್ಜಿಯರು ಮಗುವನ್ನು ಆಟವಾಡಿಸುತ್ತಲೇ ಎಂತಹ ಉದಾತ್ತವಾದ ಮೌಲ್ಯವನ್ನು ಕಲಿಸುತ್ತಿರುವರಲ್ಲ ಎಂದು ಅಚ್ಚರಿ ಮೂಡುವುದು. ಕುಟುಂಬದ ಸದಸ್ಯರು ಒಬ್ಬರಿಗೊಬ್ಬರು ನೆರವಾಗುತ್ತಾ ಬದುಕಬೇಕೆನ್ನುವ ನೀತಿಯನ್ನು ಕಲಿಸುವರು.
ಮುಂದೆ ವಿದ್ಯೆ ಕಲಿಯಲು ಶಾಲೆಗೆ ಹೋಗುವ ಮಗು ತನ್ನ ಗೆಳೆಯರ ಜೊತೆಗೂಡಿ ಇರುವುದನ್ನು ಕಲಿಯುವುದು. ಒಟ್ಟಿಗೆ ಕಲಿಯುತ್ತಾ, ಒಟ್ಟಿಗೇ ಆಡುತ್ತಾ, ಸೋಲು ಗೆಲುವುಗಳನ್ನು ಹಂಚಿಕೊಳ್ಳುತ್ತಾ ಬಾಳುವುದನ್ನು ಕಲಿಯುವುದು. ಶಿಕ್ಷಕರು ಹೇಳಿಕೊಟ್ಟ ಹಾದಿಯಲ್ಲಿ ಮುನ್ನೆಡೆದರೆ, ಕೇವಲ ಅಕ್ಷರವಂತನಾಗದೆ, ವಿದ್ಯಾವಂತನಾಗುವುದು. ವಿದ್ಯೆ ಅವನಿಗೆ ಸಂಸ್ಕಾರವನ್ನೂ, ವಿನಯವನ್ನೂ, ಮಾನವೀಯ ಮೌಲ್ಯಗಳನ್ನೂ ಕಲಿಸುವುದು. ಮತ್ತೊಬ್ಬರ ಸುಖ ದುಃಖಗಳಲ್ಲಿ ಭಾಗಿಯಾಗುವುದನ್ನೂ ಕಲಿಸುವುದು. ಪ್ಯಾರಾ ಒಲಿಂಪಿಕ್ಸ್ನಲ್ಲಿ ನಡೆದ ಘಟನೆಯನ್ನು ಉದಾಹರಿಸೋಣ ಬನ್ನಿ – ಒಮ್ಮೆ ವಿಶೇಷ ಚೇತನರ ನೂರು ಮೀಟರ್‌ನ ಓಡುವ ಸ್ಪರ್ಧೆ ನಡೆಯುತ್ತಿತ್ತು. ಎಲ್ಲರಿಗಿಂತ ಮುಂದೆಯಿದ್ದ ಕ್ರೀಡಾಪಟು ಅಕಸ್ಮಾತ್ ಎಡವಿ ಬಿದ್ದು ಬಿಟ್ಟ. ಆಗ ಉಳಿದ ಆಟಗಾರರು ಅಲ್ಲಿಯೇ ನಿಂತು, ಅವನಿಗೆ ಕೈ ನೀಡಿ ನಿಲ್ಲಿಸಿ, ಎಲ್ಲರೂ ಕೈ ಕೈ ಹಿಡಿದು ಒಟ್ಟಾಗಿ ಓಡಿದರು, ಒಟ್ಟಾಗಿ ಜಯಗಳಿಸಿದರು, ಎಲ್ಲರೂ ಚಿನ್ನದ ಪದಕ ಪಡೆದರು. ಇವರು ತಮ್ಮ ಚಿನ್ನದ ಪದಕವನ್ನು ಹಂಚಿಕೊಂಡ ಸಂಸ್ಕಾರವಂತರು.
ಮಗು ಬೆಳೆದು ದೊಡ್ಡವನಾಗಿ ಯೌವನಕ್ಕೆ ಕಾಲಿಟ್ಟಾಗ ತನ್ನ ಸುತ್ತಮುತ್ತಲಿರುವ ಸಮಾಜದ ಚಟುವಟಿಕೆಗಳಲ್ಲಿ ಪಾಲ್ಗೊಂಡು ಎಲ್ಲರೊಂದಿಗೆ ಬೆರೆಯುವುದನ್ನು ಕಲಿಯುವುದು. ಉದ್ಯೋಗಸ್ಥನಾದ ತರುಣನು ಹಿರಿಯರಿಗೆ ಗೌರವವನ್ನು ನೀಡುತ್ತಾ, ತನ್ನ ಮಡದಿ ಮಕ್ಕಳನ್ನು ಪಾಲಿಸುತ್ತಾ, ಸಮಾಜಕ್ಕೆ ತನ್ನ ಕೊಡುಗೆಯನ್ನು ನೀಡುವನು. ತನ್ನ ತಾಯ್ನಾಡಿನ ಉತ್ತಮ ಪ್ರಜೆಯಾಗಲು ಬೇಕಾದ ಕೌಶಲವನ್ನು ಮೈಗೂಡಿಸಿಕೊಳ್ಳುವುದು. ಜೊತೆಗೆ ಇಡೀ ವಿಶ್ವದ ಆಗುಹೋಗುಗಳನ್ನು ಗಮನಿಸುತ್ತಾ, ವಿಶ್ವ ಮಾನವನಾಗುವನು.. ಈ ಎಲ್ಲಾ ಹಂತಗಳಲ್ಲೂ ಪರರಿಗೆ ನೆರವಾಗುವ ಹಾಗೂ ಬೇರೆಯವರಿಂದ ಪಡೆದುಕೊಳ್ಳುವ ಕ್ರಿಯೆಗಳು ಜರುಗುತ್ತಲೇ ಇರುತ್ತವೆ. ತನ್ನ ದೇಶವು ತನಗೆ ನೀಡಿರುವ ಹಕ್ಕು ಮತ್ತು ಕರ್ತವ್ಯಗಳನ್ನು ನಿಷ್ಠೆಯಿಂದ ನಿರ್ವಹಿಸುವನು. ಆದರೆ ಈ ಸ್ಪರ್ಧಾತ್ಮಕ ಜಗತ್ತಿನಲ್ಲಿ, ಕೆಲವು ಬಾರಿ ಆದರ್ಶಗಳು ತಲೆಕೆಳಗಾಗುವುದುಂಟು, ಅಧಿಕಾರ ದಾಹ, ದುರಾಸೆಯಿಂದ ಮಾನವ ಸ್ವಾರ್ಥಿಯಾಗುವನು. ಒಬ್ಬರನ್ನು ಕೆಡವಿ ಮತ್ತೊಬ್ಬ ಮೇಲೇರುವ ಸಾಹಸ ಮಾಡುವನು, ಬೇರೆಯವರ ಕಷ್ಟಗಳನ್ನು ಲೇವಡಿ ಮಾಡುತ್ತಾ ಅಹಂಕಾರದಿಂದ ಬೀಗುವನು.
ಸಾಮಾನ್ಯವಾಗಿ ನಾವು ಕೇಳುವ ಕೂಗು, ‘ಈ ಸಮಾಜ ತನಗೆ ಏನು ಕೊಟ್ಟಿದೆ? ಆದರೆ ನಾವು ಈ ಸಮಾಜಕ್ಕೆ ಏನನ್ನು ನೀಡಿದ್ದೇವೆ ಎಂದು ಯಾರಾದರೂ ಪ್ರಶ್ನೆ ಹಾಕಿಕೊಳ್ಳುವರೇ? ಮನೆ ಕಸವನ್ನು ಎಲ್ಲೆಂದರಲ್ಲಿ ಸುರಿದು, ನಗರವೆಲ್ಲಾ ಕಸದ ಗುಂಡಿಯಾಗಿದೆ ಎಂದು ದೂರುತ್ತೇವೆ. ವಾಹನಗಳನ್ನು ವೇಗವಾಗಿ ಓಡಿಸಿ ಅಪಘಾತ ಮಾಡಿ, ರಸ್ತೆಯಲ್ಲಿ ಗುಂಡಿಗಳಿವೆ, ಬೀದಿ ದೀಪಗಳಿಲ್ಲ ಎಂದೆಲ್ಲಾ ದೂರುತ್ತೇವೆ. ಲೈಸೆನ್ಸ್ ಇಲ್ಲದ ಅಪ್ರಾಪ್ತರು ವಾಹನಗಳನ್ನು ಚಲಾಯಿಸುವುದು ಇಂತಹ ಕೃತ್ಯಗಳನ್ನು ಮಾಡಿ ಕೊನೆಗೆ ಟ್ರಾಫಿಕ್ ಪೊಲೀಸರನ್ನು ದೂರುವುದು ನಮ್ಮ ಚಾಳಿ. ಬದಲಿಗೆ ನಾವು ಎಲ್ಲಾ ಕ್ಷೇತ್ರಗಳಲ್ಲಿಯೂ ನಮ್ಮ ದೇಶದ ಕಾನೂನನ್ನು ಪಾಲಿಸಿದರೆ ಉತ್ತಮ ಸಮಾಜವನ್ನು ರೂಪಿಸಲು ಖಂಡಿತಾ ಸಾಧ್ಯ. ಇಲ್ಲಿಯೂ ನೀ ನನಗಿದ್ದರೆ ನಾ ನಿನಗೆ ಎಂಬ ನುಡಿ ಪ್ರಸ್ತುತವಲ್ಲವೇ?
(ಮುಂದುವರೆಯುವುದು )
-ಡಾ. ಗಾಯತ್ರಿ ದೇವಿ ಸಜ್ಜನ್, ಶಿವಮೊಗ್ಗ.
Very good analysis of life events. The initial fable wets the curiosity. The narration is, as usual good.
Heartiest congratulations
Good one! The write up is not only applicable to children but also to grown ups
ಕಥೆ ತುಂಬಾ ಚೆನ್ನಾಗಿದೆ
ಮಾನವೀಯ ಮೌಲ್ಯಗಳನ್ನು ಪ್ರತಿಪಾದಿಸುವ ಸರಳ ಸುಂದರ ಬರಹ. ಅಭಿನಂದನೆಗಳು.
ಪ್ರಾಥಮಿಕ ಶಾಲೆಯ ಪಠ್ಯದಲ್ಲಿದ್ದ ಕತೆಯನ್ನು ನೆನಪಿಸಿದ ಚೆಂದದ ಬರಹ.
ವಂದನೆಗಳು ಸಹೃದಯ ಓದುಗರಿಗೆ
ಚಂದದ ಬರೆಹ ಮೇಡಂ
ಚಂದದ ಬರಹ
ಪರಸ್ಪರ ಸಹಕಾರದೊಂದಿಗಿನ ಸಹಬಾಳ್ವೆಯ ಹಿರಿಮೆಯನ್ನು ಎತ್ತಿ ತೋರಿಸುವಂತಹ ಲೇಖನವು ಚೆನ್ನಾಗಿದೆ ಮೇಡಂ.