ಭಗವದ್ಗೀತಾ ಸಂದೇಶ

Share Button

ಇಂದ್ರಿಯಾಣಾಂ ಹಿ ಚರತಾಮ್
ಯನ್ಮನೋಽನು ವಿಧೀಯತೇ I
ತದಸ್ಯ ಹರತಿ ಪ್ರಜ್ಞಾಮ್
ವಾಯುರ್ನಾವಮಿವಾಂಭಸಿ II 2-67||

ನೀರಿನಲ್ಲಿ ಚಲಿಸುವ ನಾವೆಯನ್ನು ಗಾಳಿಯು ಹೇಗೆ ದಿಕ್ಕು ತಪ್ಪಿಸಿ ಅಪಹರಿಸುವುದೋ ಹಾಗೆಯೇ ವಿಷಯಗಳಲ್ಲಿ ಚಲಿಸುತ್ತಿರುವ ಇಂದ್ರಿಯಗಳಲ್ಲಿ ಮನಸ್ಸು ಯಾವ ಇಂದ್ರಿಯದ ಜೊತೆಯಲ್ಲಿ ಇರುತ್ತದೆಯೋ ಆ ಒಂದೇ ಇಂದ್ರಿಯವು ಅಯುಕ್ತ ಪುರುಷನ ಬುದ್ಧಿಯನ್ನು ಅಪಹರಿಸುತ್ತದೆ. ಇಲ್ಲಿ ದೋಣಿಯ ಸ್ಥಾನದಲ್ಲಿ ‘ಬುದ್ಧಿ’ಯನ್ನೂ, ಗಾಳಿಯ ಸ್ಥಾನದಲ್ಲಿ ಆ ಇಂದ್ರಿಯ ಪ್ರೇರಿತವಾದ ‘ಮನಸ್ಸ’ನ್ನೂ ಉದಾಹರಿಸಲಾಗಿದೆ.

ಸಂಸಾರವೆಂಬ ಸಮುದ್ರ ದೊಡ್ಡ ಜಲಾಶಯದ ಸ್ಥಾನದಲ್ಲಿದ್ದರೆ, ಅದರಲ್ಲಿರುವ ನೀರಿನ ಜಾಗದಲ್ಲಿ ಶಬ್ದಾದಿ ಸಮಸ್ತ ವಿಷಯವಸ್ತುಗಳ ಸಮುದಾಯವಿದೆ. ಪ್ರಬಲವಾದ ಗಾಳಿ ನೌಕೆಯನ್ನು ವಿಚಲಿತಗೊಳಿಸುವಾಗ, ಚತುರನಾದ ಅಂಬಿಗನು ಆ ಗಾಳಿಯ ಪ್ರಕ್ರಿಯೆಯಿಂದ ತನಗೆ ಅನುಕೂಲವಾಗುವಂತೆ ನೌಕೆಯನ್ನು ನಡೆಸುತ್ತಾನೆ. ಅದೇ ಪ್ರಕಾರ ಮನಸ್ಸು ಮತ್ತು ಇಂದ್ರಿಯಗಳನ್ನು ವಶದಲ್ಲಿರಿಸಿಕೊಂಡ ವ್ಯಕ್ತಿಯ ಬುದ್ಧಿಯನ್ನು ವಿಷಯಗಳು ವಿಚಲಿತಗೊಳಿಸುವುದಿಲ್ಲ. ಬದಲಾಗಿ ಅದೇ ವಿಷಯಗಳು ನೌಕಾ ರೂಪಿ ಬುದ್ಧಿಯನ್ನು ಪರಮಾತ್ಮನ ಕಡೆಗೆ ತಲುಪಿಸಲು ಸಹಾಯ ಮಾಡುತ್ತವೆ.

ಇಂದ್ರಿಯಗಳಿಲ್ಲದೆ ಜೀವವಿಲ್ಲ; ಇಂದ್ರಿಯಗಳಿದ್ದರೆ ನೆಮ್ಮದಿಯಿಲ್ಲ. ಅವುಗಳನ್ನು ಹೇಗೆ ನಿಯಂತ್ರಿಸುವುದು ಎಂಬುದೇ ಜೀವಕ್ಕಿರುವ ಸವಾಲು. ಮನಸ್ಸನ್ನು ಕದಡಿ ಕೆಡಿಸುವಂತಹ ಇಂದ್ರಿಯಗಳನ್ನು ನಿಗ್ರಹಿಸಬೇಕು. ಅಂತಹ ಇಂದ್ರಿಯಗಳನ್ನುಗೆದ್ದು ಹದ್ದು ಬಸ್ತಿನಲ್ಲಿಡಬೇಕು. ಅವುಗಳ ಮಿತಿಯರಿತು ಕೆಲಸ ಮಾಡಬೇಕು.

ಉಪನಿಷತ್ತುಗಳಲ್ಲಿ ಇಂದ್ರಿಯಗಳನ್ನು ಕುದುರೆಗೆ ಹೋಲಿಸಿದ್ದಾರೆ. ಕುದುರೆ ಎಲ್ಲೆಲ್ಲಿಗೋ ಓಡಿಹೋಗಬಹುದೆಂಬ ಭಯದಿಂದ ಸವಾರನು ಕುದುರೆಯನ್ನು ಬಿಟ್ಟು ಇಳಿಯುವುದಿಲ್ಲ; ಬದಲಾಗಿ ದೃಢವಾಗಿ ಕುಳಿತಿದ್ದು ಕುದುರೆಯನ್ನು ನಿಯಂತ್ರಿಸುತ್ತಾ ಹಿಡಿತಕ್ಕೆ ತರುತ್ತಾನೆ. ಒಳ್ಳೆಯ ಸವಾರನು ಲಗಾಮು, ಕಡಿವಾಣಗಳನ್ನು ಸರಿಯಾಗಿ ಉಪಯೋಗಿಸಿಕೊಂಡು ಎಂತಹ ಕುದುರೆನ್ನಾದರೂ ಸ್ವಾಧೀನದಲ್ಲಿರಿಸಿಕೊಳ್ಳುತ್ತಾನೆ; ತನಗೆ ಬೇಕಾದ ಕಡೆಗೆ ಹೋಗುತ್ತಾನೆ.

ಜೀವಕ್ಕೆ ಅತ್ಯವಶ್ಯಕವಾಗಿರುವ ಇಂದ್ರಿಯಗಳನ್ನು ಜಯಿಸಿ ಅವನ್ನು ನಮ್ಮ ಹಿಡಿತದಲ್ಲಿರಿಸಿಕೊಳ್ಳಬೇಕು. ನಾವು ಅವುಗಳ ಅಧೀನವಾಗಬಾರದು. ಇಂದ್ರಿಯಗಳಿಗೆ ನಾವು ಒಡೆಯರಾಗಬೇಕೇ ಹೊರತು ದಾಸರಾಗಬಾರದು. ಇಂದ್ರಿಯಗಳ ಮೇಲೆ ಹಿಡಿತ ಸಾಧಿಸಲು ಇರುವ ಒಂದೇ ಒಂದು ಮಾರ್ಗ ಭಗವದ್ಗೀತೆಯ ಅಧ್ಯಯನ ಮತ್ತು ಅನುಸರಣೆ.

ಹರಿಃ ಓಂ

-ವನಿತಾ ಪ್ರಸಾದ್ ಪಟ್ಟಾಜೆ, ತುಮಕೂರು

6 Responses

  1. ಪದ್ಮಾ ಆನಂದ್ says:

    ಇಂದ್ರಿಯ ನಿಗ್ರಹ ಕುರಿತಾದ ಒಂದೊಳ್ಳೆಯ ವ್ಯಾಖ್ಯಾನ. ಅಭಿನಂದನೆಗಳು.

  2. Hema Mala says:

    ಚೆಂದದ ಬರಹ

  3. ಭಗವದ್ಗೀತೆ ಯ ಸಂದೇಶ ಕೊಟ್ಟು ಮನಕ್ಕೆ ಮುದ ನೀಡುವ ನಿಮಗೆ ಧನ್ಯವಾದಗಳು ಮೇಡಂ

  4. ನಯನ ಬಜಕೂಡ್ಲು says:

    ವೆರಿ ನೈಸ್. ಬದುಕಿಗೆ ಬೇಕಾದ ಎಲ್ಲ ಅಗತ್ಯ ಪಾಠಗಳು ಭಗವದ್ಗೀತೆ ಯಲ್ಲೇ ಸಿಗುತ್ತದೆ.

  5. ಶಂಕರಿ ಶರ್ಮ says:

    ಇಂದ್ರಿಯಗಳ ಹಿಡಿತ ಸಾಧಿಸಲು ಇರುವ ಮಾರ್ಗವೇ ಭಗವದ್ಗೀತೆಯ ಅಧ್ಯಯನ ಎನ್ನುವ ದಿವ್ಯ ಸಂದೇಶವನ್ನು ಸಾರುತ್ತಾ ಅದರ ಆಯ್ದ ಶ್ಲೋಕದ ಅರ್ಥವನ್ನು ನೀಡುವ ಲೇಖನ ಚೆನ್ನಾಗಿದೆ.

  6. ವನಿತಾ ಪ್ರಸಾದ್ ಪಟ್ಟಾಜೆ ತುಮಕೂರು says:

    ನನ್ನ ಲೇಖನವನ್ನು ಮೆಚ್ಚಿದ ಪದ್ಮ ಮೇಡಂ, ಹೇಮಮಾಲಾ ಮೇಡಂ, ಶಂಕರಿ ಮೇಡಂ, ನಯನಾ ಮೇಡಂ ಹಾಗೂ ನಾಗರತ್ನ ಮೇಡಂ ತಮಗೆಲ್ಲರಿಗೂ ಅನಂತಾನಂತ ಧನ್ಯವಾದಗಳು.
    ತಮ್ಮ ಪ್ರಶಂಸೆಯೇ ನಮಗೆಲ್ಲ ಪ್ರೇರಣೆ .
    ವಂದನೆಗಳು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: