ಪ್ರವಾಸ

ಪುನರುತ್ಥಾನದ ಪಥದಲ್ಲಿ …. ಸಿಂಚಾವ್ ಹೆಜ್ಜೆ 1

Share Button

ವಿಯೆಟ್ನಾಂ ಕಾಂಬೋಡಿಯ ಪ್ರವಾಸಕಥನ..

ನನ್ನ ಉದ್ಯೋಗಪರ್ವದ ದಿನಗಳಲ್ಲಿ , ವೃತ್ತಿನಿಮಿತ್ತ  ಕೆಲವು   ಪಾಶ್ಚಿಮಾತ್ಯ ಹಾಗೂ ಪೌರಾತ್ಯ  ದೇಶಗಳಿಗೆ ಭೇಟಿ ಕೊಟ್ಟಿದ್ದೆ. ಆದರೆ 2016 ರಲ್ಲಿ, ಉದ್ಯೋಗದಿಂದ  ಸ್ವಯಂನಿವೃತ್ತಿ  ಪಡೆದ ಮೇಲೆ ನನ್ನ ಪಾಸ್ ಪೋರ್ಟ್ ನಲ್ಲಿ ಯಾವುದೇ ಹೊರದೇಶದ ಮುದ್ರೆ ಬಿದ್ದಿರಲಿಲ್ಲ. ಈ ಕೊರತೆ ಆಗಾಗ ನನ್ನನ್ನು ಕಾಡುತ್ತಿತ್ತು. ಯಾವುದಾದರೂ ವಿದೇಶ ಪ್ರಯಾಣ ಮಾಡಬೇಕೆನ್ನುವ ತುಡಿತ ಮನದಲ್ಲಿತ್ತು.  ಈ ನಡುವೆ ಸಾಮಾಜಿಕ  ಮಾಧ್ಯಮಗಳಲ್ಲಿ ಭಾರತೀಯರಿಗೆ ಅನುಕೂಲಕರವಾಗಿ ಪ್ರಯಾಣಿಸಲು ಸಾಧ್ಯವಾಗುವ ಕೆಲವು ದೇಶಗಳ ಪಟ್ಟಿಯನ್ನು ಗಮನಿಸುತ್ತಿದ್ದಾಗ, ವಿಯೆಟ್ನಾಂ, ಕಾಂಬೋಡಿಯ, ಮಲೇಶ್ಯಾ, ಇಂಡೋನೇಶ್ಯಾ, ಸಿಂಗಾಪುರ, ಥಾಯ್ ಲ್ಯಾಂಡ್ ಮೊದಲಾದ ಪೌರಾತ್ಯ ದೇಶಗಳ ಹೆಸರು ಕಾಣಿಸಿತು.  ಇವುಗಳಲ್ಲಿ, ಕೆಲವೇ ದಿನಗಳ ಮಟ್ಟಿಗೆ  ಮಲೇಶ್ಯಾ,  ಸಿಂಗಾಪುರ ಹಾಗೂ ಥಾಯ್ ಲ್ಯಾಂಡ್ ದೇಶಗಳಿಗೆ ವೃತ್ತಿನಿಮಿತ್ತ ಭೇಟಿ ಕೊಟ್ಟಾಗಿತ್ತು. ಹಾಗಾಗಿ ವಿಯೆಟ್ನಾಂ, ಕಾಂಬೋಡಿಯಾ ಆಯ್ಕೆಗಳನ್ನೇ ಮನಸ್ಸು ಬಯಸಿತು.

ಈಗೀಗ ಹಲವಾರು ಮಂದಿ  ಮಹಿಳೆಯರು ಪ್ರವಾಸದ ಸಮಸ್ತ ವ್ಯವಸ್ಥೆಯನ್ನು  ತಾವೇ ಮಾಡಿಕೊಂಡು  ‘ಸೊಲೋ ಟ್ರಾವೆಲ್’  ಎಂಬ ಹುಮ್ಮಸ್ಸಿನಿಂದ ಏಕಾಂಗಿಯಾಗಿ  ಪ್ರಯಾಣ  ಮಾಡುತ್ತಾರಾದರೂ, ನನಗೆ ವೈಯುಕ್ತಿಕವಾಗಿ  ಆತಂಕ ಪಟ್ಟುಕೊಂಡು ಒಬ್ಬಳೇ ಪ್ರಯಾಣಿಸಲು ಮನಸ್ಸಿಲ್ಲ.  ಟ್ರಾವೆಲ್ ಏಜೆನ್ಸಿಯವರ ಉಸ್ತುವಾರಿಯಲ್ಲಿ, ಹತ್ತಾರು ಜನರ  ಗುಂಪಿನಲ್ಲಿ ನಿರುಮ್ಮಳವಾಗಿ ಪ್ರಯಾಣಿಸಿದರೆ ಅನುಕೂಲವೆಂಬ ಮನೋಭಾವ. ಸಕಲ ವ್ಯವಸ್ಥೆಯ ಜವಾಬ್ದಾರಿಯನ್ನು  ವಿಶ್ವಾಸಾರ್ಹ ಟ್ರಾವೆಲ್ ಏಜೆನ್ಸಿಯವರ ಹೆಗಲಿಗೆ ವರ್ಗಾಯಿಸಿ,   ನಾವು ನಿಶ್ಚಿಂತೆಯಿಂದ  ಪ್ರಯಾಣಿಸಬೇಕೆಂಬ ಅಭಿಲಾಷೆ ನನ್ನದು.

ಹೀಗೆ 2023 ರಲ್ಲಿ ಚಿಗುರಿದ ಕನಸಿಗೆ ಪೋಷಣೆ ಲಭಿಸೀತೆ ಎಂದು ಕಾಯುತ್ತಿದ್ದೆ. ನನ್ನ ಪರಿಚಿತ  ಸ್ನೇಹ ಬಳಗದಲ್ಲಿ , ಬಂಧು ವರ್ಗದಲ್ಲಿ  ವಿಚಾರಿಸಿದೆ.   ‘ಭಾರತದಲ್ಲಿ ನೋಡಲು ಅದೆಷ್ಟು ಜಾಗಗಳಿವೆ, ಆಮೇಲೆ ಬೇರೆ ದೇಶ ನೋಡೋಣ’, ‘ಅಷ್ಟು ದೂರ ಬರಲಾಗದು, ಆಸಕ್ತಿ ಇಲ್ಲ’,  ‘ನಮ್ಮ ಆರೋಗ್ಯ ಸಹಕರಿಸುವುದಿಲ್ಲ ‘ಒಂದು ವಾರಕ್ಕಿಂತ ಹೆಚ್ಚು ಮನೆ ಬಿಟ್ಟಿರಲಾರದು’, ‘ಸಸ್ಯಾಹಾರ ಲಭಿಸದು , ಅಲ್ಲಿಯ ಆಹಾರ ನಮಗೆ ಸೇರದು’  ಇತ್ಯಾದಿ  ಪ್ರತಿಕ್ರಿಯೆಗಳು ದೊರೆತುವು. ನನಗೆ ಪರಿಚಿತರಲ್ಲದಿದ್ದರೂ  ಕನಿಷ್ಟ ಯಾವುದಾದರೂ ಗುಂಪಿನೊಂದಿಗೆ ಪ್ರಯಾಣಿಸುವ ಉದ್ದೇಶದಿಂದ ಬೆಂಗಳೂರಿನ  ‘ಟ್ರಾವೆಲ್  ಫಾರ್ ಯು’  ಸಂಸ್ಥೆಯನ್ನು ಸಂಪರ್ಕಿಸಿದ್ದಾಯಿತು. ಅಲ್ಲಿಯೂ  ಮೂರು ನಾಲ್ಕು ಬಾರಿ  ಗುಂಪು ಪ್ರಯಾಣ ಬುಕ್ ಆಗುವುದು, ರದ್ದಾಗುವುದು, ಸಾಕಷ್ಟು ಜನರಿಲ್ಲ ಎಂದು ಮುಂದೂಡುವುದು ಆಗುತ್ತಲೇ ಇತ್ತು.  ಕೊನೆಗೆ ‘ ಟ್ರಾವೆಲ್ ಫಾರ್ ಯು’ನವರು  , ಕನಿಷ್ಟ 15  ಜನ ರು ಬುಕ್ ಮಾಡದಿದ್ದರೆ, ತಮ್ಮ ಕಡೆಯಿಂದ  ನಿರ್ಧಿಷ್ಟ ಅವಧಿಯ ಗ್ರೂಪ್ ಟೂರ್ ಮಾಡಲಾಗುವುದಿಲ್ಲ,   ನಿಮಗೆ ಕಸ್ಟಮೈಸೆಡ್  ಟೂರ್ ಆಗುತ್ತದೆ ಎಂದಾದರೆ ಯಾವುದೇ  ಅವಧಿಯಲ್ಲಿ ನಿಮ್ಮ ಅನುಕೂಲಕ್ಕೆ ತಕ್ಕಂತೆ , ನಿಮಗೆ ಬೇಕಾದಷ್ಟು ದಿನದ ಟೂರ್ ಪ್ಯಾಕೇಜ್ ಹೊಂದಿಸಿಕೊಡಲಾಗುವುದು ಎಂದರು. 

ಈ ಬಗ್ಗೆ ಬೆಂಗಳೂರಿನಲ್ಲಿರುವ ಗೆಳತಿ  ಶ್ರೀಮತಿ ಹೈಮವತಿ ಮತ್ತು ನಾನು ಚರ್ಚಿಸಿದೆವು.  ಒಮ್ಮೆ ಪ್ರವಾಸಕ್ಕೆ ಹೊರಡೋಣವೆಂದು ಮನಸ್ಸಿಗೆ ಬಂದ ಮೇಲೆ, ಮುಂದೂಡುತ್ತಾ ಇದ್ದರೆ ಸ್ವಾರಸ್ಯವಿರುವುದಿಲ್ಲ, ನಾವಿಬ್ಬರೂ, ಈಗಾಗಲೇ ಮಧ್ಯ ವಯಸ್ಸು ದಾಟಿರುವ, ಬಹುತೇಕ ವೈಯುಕ್ತಿಕ ಜವಾಬ್ದಾರಿಗಳನ್ನು  ನಿರ್ವಹಿಸಿದ,  ನಿವೃತ್ತರು. ಸದ್ಯಕ್ಕೆ ಇನ್ನೇನಾದರೂ ಹೊಸ ಅನಿವಾರ್ಯತೆ ಅಥವಾ ಆರೋಗ್ಯ ಸಮಸ್ಯೆ   ಎದುರಾಗುವಲ್ಲಿ ವರೆಗೆ  ಪ್ರಯಾಣಿಸಲು ಅಡ್ಡಿಯೇನಿಲ್ಲ.  ಹಾಗಾಗಿ, ಪ್ರವಾಸ ಮಾಡಿಯೇ ಬಿಡೋಣ ಆಗದೆ ಎಂದು ಮಾತಾಡಿಕೊಂಡೆವು.    ಹಲವಾರು ಬಾರಿ ಚರ್ಚಿಸಿ, ಗಣೇಶ ಹಬ್ಬದ ನಂತರ ಹೊರಡೋಣ ಎಂದು ನಿರ್ಧರಿಸಿದೆವು.   ಇನ್ನಿಬ್ಬರು ಹಿತೈಷಿಗಳೂ  ಜೊತೆಯಾದರು.   ಪ್ರಯಾಣದ ಕೇವಲ ಎರಡು ದಿನ ಮೊದಲು ಅವರಿಗೆ ಅನಿವಾರ್ಯ ಕಾರಣಗಳಿಂದಾಗಿ ಅವರು ತಮ್ಮ ಪ್ರಯಾಣವನ್ನು ರದ್ದುಪಡಿಸಬೇಕಾಗಿ ಬಂತು.

 ‘ಟ್ರಾವೆಲ್ ಫಾರ್ ಯು’ ಸಂಸ್ಥೆಯವರು ನಮ್ಮ ಅನುಕೂಲಕ್ಕೆ ತಕ್ಕಂತೆ  ಸೆಪ್ಟೆಂಬರ್ 14-26, 2024 ರ ಅವಧಿಯಲ್ಲಿ ವಿಯೆಟ್ನಾಂ ಹಾಗೂ  ಕಾಂಬೋಡಿಯಾ ದೇಶಗಳಿಗೆ   ಭೇಟಿ ಕೊಡಲು ಒಟ್ಟಾಗಿ 12 ದಿನಗಳ ಕಾರ್ಯಸೂಚಿ ಸಿದ್ದಪಡಿಸಿ ಕೊಟ್ಟರು. .   ಈ ಸಂದರ್ಭದಲ್ಲಿ, ವಿಮಾನ ಟಿಕೆಟ್ ದರಗಳು    ವಾರಾಂತ್ಯ ಹಾಗೂ ವಾರದ ಮೊದಲು ಗಣನೀಯವಾಗಿ ಹೆಚ್ಚಿರುತ್ತದೆಯೆಂದು ಗೊತ್ತಾಯಿತು. ಸಾಧ್ಯವಾದಷ್ಟು ಮಿತವ್ಯಯಕಾರಿಯಾಗಿ ಟಿಕೆಟ್ ಬುಕ್ ಮಾಡಿಸಿ ಕೊಟ್ಟರು.  12 ದಿನಗಳ ಪ್ರವಾಸದ ಪ್ಯಾಕೇಜ್ ಹಾಗೂ ಟಿಕೆಟ್ ಗಳ ದರ, ಟ್ಯಾಕ್ಸ್ ಇತ್ಯಾದಿ ನಮಗೆ  ತಲಾ ರೂ.1,80,000/- ದಷ್ಟು  ಖರ್ಚಾಯಿತು.  ಇದರಲ್ಲಿ ನಮ್ಮ 12 ದಿನಗಳ ಊಟೋಪಚಾರ, ವಸತಿ, ಸ್ಥಳೀಯ ಪ್ರಯಾಣಗಳು, ಟಿಕೆಟ್ ಗಳು ಎಲ್ಲವೂ ಸೇರಿದ್ದುವು.    ನಮ್ಮ ಪಾಸ್ ಪೊರ್ಟ್ ಪ್ರತಿಯನ್ನು ಪಡೆದು ವಿಯೆಟ್ನಾಂಗೆ  ಇ-ವೀಸಾ   ತಾವೇ ಮಾಡಿಸಿದರು.   ಕಾಂಬೋಡಿಯಾ ವೀಸಾವನ್ನು ಅಲ್ಲಿಗೆ ತಲಪಿದ ಮೇಲೆ  ಏರ್ಪೋರ್ಟ್ ನಲ್ಲಿ  ( Visa on arrival) ಪಡೆಯಬೇಕೆಂದೂ ಆ ಬಗ್ಗೆ ಸೂಕ್ತ ಮಾಹಿತಿಯನ್ನೂ ಕೊಟ್ಟಿದ್ದರು.

ನಮ್ಮ ವೈಯುಕ್ತಿಕ ಖರ್ಚುಗಳು, ಕಾಂಬೋಡಿಯಾ ವೀಸಾ, ಶಾಪಿಂಗ್ , ಟಿಪ್ಸ್  ಮೊದಲಾದ ಖರ್ಚುಗಳಿಗಾಗಿ ಸ್ಥಳೀಯ ಕರೆನ್ಸಿ  ಅಥವಾ  ಅಮೇರಿಕನ್ ಡಾಲರ್ ವ್ಯವಸ್ಥೆ ಮಾಡಬೇಕಿತ್ತು. ಕ್ರೆಡಿಟ್ ಕಾರ್ಡ್ ಅಥವಾ ಫೋರೆಕ್ಸ್ ಕಾರ್ಡ್ ಬಳಸಬಹುದು ಎಂದು ತಿಳಿಸಿದ್ದರು.   ವಿಯೆಟ್ನಾಂನ ಸ್ಥಳೀಯ ಕರೆನ್ಸಿ ‘ ಡಾಂಗ್’ , ಭಾರತೀಯ ಒಂದು ರೂ.ಗೆ  ಸುಮಾರು  ವಿಯೆಟ್ನಾಂ 300  ಡಾಂಗ್ ಸಿಗುತ್ತದೆ. ಈಗಾಗಲೇ ವಿಯೆಟ್ನಾಂಗೆ ಹೋಗಿ ಬಂದವರ ಬಳಿ ವಿಚಾರಿಸಿದ್ದಾಗ,  ವಿಯೆಟ್ನಾಂನಲ್ಲಿ ಭಾರತೀಯ ಕರೆನ್ಸಿಯನ್ನು ಸ್ವೀಕರಿಸುತ್ತಾರೆ ಎಂದು ಗೊತ್ತಾಗಿತ್ತು. ಹಾಗಾಗಿ, ಸ್ವಲ್ಪ ನಮ್ಮ  ದುಡ್ಡನ್ನೂ  ಇರಿಸಿಕೊಂಡೆವು. ಕಾಂಬೋಡಿಯದ ಕರೆನ್ಸಿ  ‘ ರೀಲ್ ‘  .ಒಂದು ಭಾರತೀಯ ರೂಪಾಯಿಗೆ  ಸುಮಾರು 48 ಕಾಂಬೋಡಿಯನ್ ರೀಲ್ ಸಿಗುತ್ತದೆ . ಎರಡೂ ದೇಶಗಳ ವಿಮಾನ ನಿಲ್ದಾಣಗಳಲ್ಲಿ, ಪ್ರಮುಖ ರಸ್ತೆಗಳಲ್ಲಿರುವ ಕರೆನ್ಸಿ ಎಕ್ಸ್ ಚೇಂಜ್ ಕಿಯೋಸ್ಕ್ ಗಳಲ್ಲಿ, ಹೋಟೇಲ್ ಗಳಲ್ಲಿ  ಅಮೇರಿಕನ್ ಡಾಲರ್ ಗೆ ಸ್ಥಳೀಯ ಕರೆನ್ಸಿ ಕೊಡುತ್ತಾರೆ ಆದರೆ  ವಿನಿಮಯದ ದರದಲ್ಲಿ ವ್ಯತ್ಯಾಸವಿರುತ್ತದೆ.

ವಿದೇಶ ಪ್ರಯಾಣಕ್ಕೆ ಅತಿಮುಖ್ಯವಾದ ಪಾಸ್ ಪೋರ್ಟ್ ಇದೆ ತಾನೇ ಎಂದು ಪದೇ ಪದೇ ಪರಿಶೀಲಿಸಿದೆವು. ನಮಗೆ ಅಲ್ಲಿಯ ಊಟ ರುಚಿಸದಿದ್ದರೆ, ಉಪ್ಪಿನಕಾಯಿ ಇದ್ದರೆ ಉತ್ತಮ ಎಂದು ಮರೆಯದೆ  ಅದನ್ನೂ ಪ್ಯಾಕ್ ಮಾಡಿದೆವು. ಇನ್ನು ಸಮುದ್ರ ತೀರದ ಹವಾಮಾನ ಎಂದರೆ ಸೆಕೆ, ಆರ್ದ್ರತೆ ಇರುತ್ತದೆ ಎಂದು ಸರಳ ಹತ್ತಿಯ ಬಟ್ಟೆಬರೆಗಳನ್ನೂ. ಛತ್ರಿಯನ್ನೂ ಪ್ಯಾಕ್ ಮಾಡಿದೆವು.    

ನಿಗದಿತ ವ್ಯವಸ್ಥೆಯಂತೆ, ನಾವು  14  ಸೆಪ್ಟೆಂಬರ್ 2024  ರಂದು ಬೆಂಗಳೂರಿನ ಅಂತರಾಷ್ಟ್ರೀಯ ವಿಮಾನನಿಲ್ದಾಣದ ಟರ್ಮಿನಲ್ 2 ರಿಂದ  ರಾತ್ರಿ 11: 20  ಕ್ಕೆ ಹೊರಡಲಿರುವ ವಿಮಾನದಲ್ಲಿ ಹೊರಟು,  ಮರುದಿನ ಮುಂಜಾನೆ  ಬ್ಯಾಕಾಂಕ್  ವಿಮಾನ ನಿಲ್ದಾಣ ತಲಪಿ, ಅಲ್ಲಿಂದ   ಬೆಳಗ್ಗೆ 0830 ಕ್ಕೆ  ವಿಯೆಟ್ನಾಂನ ರಾಜಧಾನಿಯಾದ ಹನೋಯ್ ಗೆ ಹೋಗುವ ವಿಮಾನದಲ್ಲಿ ಪ್ರಯಾಣಿಸಬೇಕಿತ್ತು.   ಮೈಸೂರಿನಲ್ಲಿರುವ ನಾನು   ಸಾಕಷ್ಟು ಮುಂಚಿತವಾಗಿ ಹೊರಟು ವಿಮಾನ ನಿಲ್ದಾಣ ತಲಪಿದೆ.  ಬೆಂಗಳೂರಿನಲ್ಲಿರುವ ಹೈಮವತಿಯೂ   ತಲಪಿದ್ದರು.  ನನಗೆ ಇದುವರೆಗೆ ಹಲವಾರು ಬಾರಿ ಬೆಂಗಳೂರು ವಿಮಾನ ನಿಲ್ದಾಣದ  ಟರ್ಮಿನಲ್ 1 ನಿಂದ ಪ್ರಯಾಣಿಸಿದ್ದರೂ,  2022 ರಲ್ಲಿ  ಉದ್ಘಾಟನೆಯಾದ  ಟರ್ಮಿನಲ್ 2 ರಿಂದ ಪ್ರಯಾಣಿಸುವ ಅವಕಾಶ ಸಿಕ್ಕಿರಲಿಲ್ಲ.   ಹಾಗಾಗಿ, ಹೊಸ ಏರ್ ಪೊರ್ಟ್ ನ ಅಂದ ಚೆಂದವನ್ನು ಗಮನಿಸಲು ಖುಷಿಯಾಯಿತು.   ಈ ಟರ್ಮಿನಲ್ ನ ವಿಶೇಷವೇನೆಂದರೆ  ಎಲ್ಲೆಲ್ಲೂ ಕಾಣಿಸುವ ಬಿದಿರಿನ ಬಣ್ಣದ ವಿವಿಧ ವಿನ್ಯಾಸಗಳು, ಉದ್ಯಾನಗಳು, ಅಲ್ಲಲ್ಲಿ ಕಾರಂಜಿಗಳು……ಇತ್ಯಾದಿ ಕಣ್ಣಿಗೆ ತಂಪೆನಿಸುವ  ದೃಶ್ಯಗಳು. 

ಬೆಂಗಳೂರಿನ ಅಂತರಾಷ್ಟ್ರೀಯ ವಿಮಾನನಿಲ್ದಾಣ, ಟರ್ಮಿನಲ್ 2

2019 ರ  ಮೊದಲು , ಈ ‘ವೆಬ್ ಚೆಕ್ ಇನ್’ ಎಂಬ ವಿಧಾನ ಕಡ್ಡಾಯವಾಗಿ ಇರಲಿಲ್ಲ. ಅಗತ್ಯವುಳ್ಳ ಮಾಹಿತಿಯನ್ನು ಕೌಂಟರ್ ನಲ್ಲಿರುವ ಸಿಬ್ಬಂದಿಗಳೇ ಟೈಪ್ ಮಾಡಿ ಬೋರ್ಡಿಂಗ್ ಪಾಸ್ ಕೊಡುತ್ತಿದ್ದರು. ಕೊರೊನಾ ಕಾಲದಲ್ಲಿ,  ಕಡ್ಡಾಯವಾದ ಆರಂಭವಾದ  ‘ವೆಬ್ ಚೆಕ್ ಇನ್’ ವ್ಯವಸ್ಥೆಯ ಪ್ರಕಾರ, ಪ್ರಯಾಣಿಕರು ತಾವಾಗಿ, ನಿಗದಿತ ವಿಮಾನಯಾನದ 72 ಗಂಟೆಗಳ  ಒಳಗೆ , ವಿಮಾನ ಸಂಸ್ಥೆಯು ಕಳುಹಿಸುವ ಲಿಂಕ್ ಮೂಲಕ ಅಥವಾ ಅವರ ಜಾಲತಾಣಕ್ಕೆ ಹೋಗಿ, ನೋಂದಣಿ ಮಾಡಿ ಡಿಜಿಟಲ್ ಬೋರ್ಡಿಂಗ್ ಪಾಸ್ ಪಡೆಯುವ  ಪ್ರಕ್ರಿಯೆ.  ಇದರಿಂದಾಗಿ ಕೌಂಟರ್ ನಲ್ಲಿ ಚೆಕ್ ಇನ್ ಆಗುವ ಪ್ರಕ್ರಿಯೆ ಬೇಗನೆ ಆಗುತ್ತದೆ. ಹೀಗೆ, ಪ್ರಯಾಣಿಕರಿಗೂ, ಸಿಬ್ಬಂದಿಗಳಿಗೂ ಅನುಕೂಲವಾಗುತ್ತದೆಯಾದರೂ,  ಈ ಬಗ್ಗೆ ಗೊತ್ತಿಲ್ಲದವರಿಗೆ ಗೊಂದಲವಾಗುವುದಿದೆ.   ಈಗ  ಅಕಸ್ಮಾತ್  ವೆಬ್ ಚೆಕ್ ಇನ್ ಮಾಡಲಿಲ್ಲವೆಂದಾದರೆ,     ವಿಮಾನ ನಿಲ್ದಾಣದಲ್ಲಿ ಇರಿಸಿಲಾಗಿರುವ  ಒಂದು ಮೆಶಿನ್ ನಲ್ಲಿ ಟಿಕೆಟ್ ನ ಪಿ.ಎನ್.ಆರ್ ಸಂಖ್ಯೆ ನಮೂದಿಸಿದಾಗ ,  ಮುದ್ರಿತ ಬೋರ್ಡಿಂಗ್ ಪಾಸ್  ಬರುತ್ತದೆ. ಅದನ್ನು ಕೈಯಲ್ಲಿ ಹಿಡಿದುಕೊಂಡು,    ಸಂಬಂಧಿತ  ಏರ್‍ ವೇಸ್ ನ ಕೌಂಟರ್ ಗೆ ಹೋಗಿ ನಮ್ಮ ಲಗೇಜು ಕೊಟ್ಟರೆ  ‘ಚೆಕ್ ಇನ್’ ಆಗುತ್ತದೆ.  ಅಕಸ್ಮಾತ್ ಇದು ಗೊತ್ತಾಗದಿದ್ದರೆ, ಸಿಬ್ಬಂದಿಗಳನ್ನು ಕೇಳಿದರೆ ತಿಳಿಸುತ್ತಾರೆ.  ಹೀಗೆ,  ‘ಕೊರೊನಾ ಕೊಡುಗೆ’ಯಾದ  ವೆಬ್ ಚೆಕ್ ಇನ್ ಈಗ ಅನುಕೂಲಸಿಂಧುವಾಗಿ ಪರಿಣಮಿಸಿದ್ದನ್ನು ಗಮನಿಸಿದೆ.

ಏರ್ ಏಶಿಯಾ ಸಂಸ್ಥೆಯ  ಕೌಂಟರ್ ನಲ್ಲಿ ಚೆಕ್ ಇನ್ ಆಗಿ, ಇಮ್ಮಿಗ್ರೇಶನ್ ವಿಭಾಗದಲ್ಲಿ ನಾವು ‘ವಲಸೆ ಹೋಗುವವರಲ್ಲ’ ಎಂಬುದನ್ನು ದೃಢೀಕರಿಸುವ ಸಲುವಾಗಿ ಅವರು ಕೇಳುವ ‘ಎಲ್ಲಿಗೆ ಹೋಗುತ್ತೀರಾ? ಯಾಕೆ ಹೋಗುತ್ತೀರಾ? ಯಾವಾಗ ಹಿಂತಿರುಗಿ ಬರುತ್ತೀರಾ?’ ಎಂಬ ಪ್ರಶ್ನೆಗಳಿಗೆ ಸೂಕ್ತವಾಗಿ ಉತ್ತರಿಸಿ,  ಹಿಂತಿರುಗಿ ಬರುವ ಟಿಕೆಟ್ ಅನ್ನೂ  ತೋರಿಸಿದಾಗ ಪಾಸ್ ಪೋರ್ಟ್ ನ ಪುಟವೊಂದರಲ್ಲಿ, ದಿನಾಂಕ ನಮೂದಿಸಿರುವ ಮುದ್ರೆ ಹಾಕಿದರು. ಅಲ್ಲಿಗೆ, ನಮಗೆ ದೇಶ ಬಿಡಲು ಪರವಾನಗಿ ಸಿಕ್ಕಿತು. 

ಅಲ್ಲಿಂದ ಮುಂದುವರಿದು ಸೆಕ್ಯುರಿಟಿ ಚೆಕ್ ವಿಭಾಗದಲ್ಲಿ ನಮ್ಮ ಕೈಯಲ್ಲಿರುವ  ಪಾಸ್ ಪೋರ್ಟ್ , ಬೋರ್ಡಿಂಗ್ ಪಾಸ್ ಅನ್ನು ಗಮನಿಸಿದರು.  ಇಲ್ಲಿಯ ನಿಯಮದ  ಪ್ರಕಾರ , ನಮ್ಮ ಬ್ಯಾಗ್ ನಲ್ಲಿರಬಹುದಾದ ಎಲ್ಲಾ ಇಲೆಕ್ಟ್ರಾನಿಕ್ ವಸ್ತುಗಳು,  ಚಾರ್ಜರ್ , ಮೊಬೈಲ್ ಇತ್ಯಾದಿಗಳನ್ನು ಹೊರತೆಗೆದು  ಪ್ರತ್ಯೇಕ ಟ್ರೇಯಲ್ಲಿ ಇರಿಸಿಬೇಕು. ಅವುಗಳು ಸ್ಕ್ಯಾನರ್ ಯಂತ್ರದ ಮೂಲಕ ಸ್ಕ್ಯಾನ್ ಆಗಿ ಬರುತ್ತವೆ. ಏನಾದರೂ ನಿಷೇಧಿತ ಅಥವಾ ಅನುಮಾನಾಸ್ಪದ ವಸ್ತುಗಳಿದ್ದರೆ ಆ ವಸ್ತುಗಳ ಬಗ್ಗೆ ಪ್ರಶ್ನಿಸುತ್ತಾರೆ ಅಥವಾ ವಿಮಾನದ ಒಳಗೆ ಒಯ್ಯಲು ಬಿಡುವುದಿಲ್ಲ.  ನೀರು ತುಂಬಿರುವ ಬಾಟಲಿಯನ್ನು ಬಿಡುವುದಿಲ್ಲ. ಬಾಟಲಿಯಲ್ಲಿ  ನೀರಿದ್ದರೆ ಖಾಲಿ ಮಾಡಬೇಕು, ಸೆಕ್ಯೂರಿಟ್ ಚೆಕ್ ಆಗಿ ಒಳಗೆ ಹೋದ ಮೇಲೆ , ಅಲ್ಲಿ  ಕುಡಿಯುವ ನೀರಿನ ವ್ಯವಸ್ಥೆ ಇರುವ ಸ್ಥಳದಲ್ಲಿ  ಬಾಟಲಿಗೆ  ನೀರು ತುಂಬಿಸಬಹುದು. ಇವೆಲ್ಲಾ ಮೊದಲೇ  ಗೊತ್ತಿದ್ದ ಕಾರಣ, ಖಾಲಿ ಬಾಟಲಿಯನ್ನೇ ಇರಿಸಿದ್ದೆ. ಆದರೂ,  ಬೆಲ್ಟ್ ಮೂಲಕ ಹೊರಬರುತ್ತಿದ್ದ ನನ್ನ  ಚಿಕ್ಕ ವ್ಯಾನಿಟಿ ಬ್ಯಾಗ್  ಅನ್ನು ತಡೆಹಿಡಿದರು. ಅದರಲ್ಲಿ ನಿಷೇಧಿತ ವಸ್ತುವೇನಿದೆ ಎಂದು ನಾನು ಪೆಚ್ಚಾಗಿ ಆಲೋಚಿಸುತ್ತಿದ್ದೆ.

ಅಲ್ಲಿ ಸ್ಕ್ಯಾನಿಂಗ್ ಯಂತ್ರದ ಎದುರಿದ್ದ ಕಂಪ್ಯೂಟರ್ ಪರದೆಯನ್ನು ನೋಡುತ್ತಿದ್ದ ಸಿಬ್ಬಂದಿಯವರು ನನ್ನ  ವ್ಯಾನಿಟಿ ಬ್ಯಾಗ್ ಅನ್ನು  ತೋರಿಸಿ ” ದೇರ್ ಇಸ್ ಟಾಲ್ಕಂ ಪೌಡರ್ ಇನ್ ದಿಸ್..  ‘ ಅಂದರು.  ಮತ್ತೊಬ್ಬರು ನನ್ನ ಪರ್ಸ್ ತೆರೆಸಿ, ಅದರಲ್ಲಿದ್ದ    ಪುಟ್ಟ ‘ ಟಾಲ್ಕಮ್ ಪೌಡರ್’ ಡಬ್ಬಿಯನ್ನು ತೆಗೆದು  ‘ನಾಟ್ ಅಲೋವ್ಡ್ ‘ಎಂದು   ಕಸದ ಬುಟ್ಟಿಗೆ ಎಸೆದರು!  ಇದು  ಅತಿ ಚಿಕ್ಕ ವಿಷಯವಾದರೂ, ಟಾಲ್ಕಂ ಪೌಡರ್ ಅನ್ನು ಒಯ್ಯಲು ಯಾಕೆ ಬಿಡುವುದಿಲ್ಲ ಎಂದು ಕುತೂಹಲವಾಗಿ, ಗೂಗಲ್ ನಲ್ಲಿ ಜಾಲಾಡಿದೆ. ಅಂತರಾಷ್ಟ್ರೀಯ ವಿಮಾನಯಾನದ ನಿಯಮಾವಳಿಗಳ ಪ್ರಕಾರ ಟಾಲ್ಕಂ ಪೌಡರ್ ‘ದಹನೀಯ ವಸ್ತು ಹಾಗೂ ಅಪಾಯಕಾರಿ’ ಹಾಗಾಗಿ ಅದನ್ನು  ವಿಮಾನದೊಳಗೆ ಒಯ್ಯಲು ಅನುಮತಿ ಇಲ್ಲ. ಬಹುಶ: ಅಲ್ಲಿಯ ಫಲಕಲ್ಲಿದ್ದ ನಿಷೇಧಿತ  ವಸ್ತುಗಳ ಪಟ್ಟಿಯಲ್ಲಿ ಟಾಲ್ಕಂ ಪೌಡರ್ ಕೂಡಾ ಇದ್ದಿರಬಹುದು , ನಾನು ಗಮನಿಸಿರಲಿಕ್ಕಿಲ್ಲ ಅಂದುಕೊಂಡೆ. ಹಾಗೆಯೇ ಕಸದ ಬುಟ್ಟಿಯತ್ತ ಇಣುಕಿದಾಗ  ಅಲ್ಲಿ ಹತ್ತಾರು ಚಿಕ್ಕ, ದೊಡ್ಡ ಟಾಲ್ಕ್ಂ ಪೌಡರ್ ಡಬ್ಬಿಗಳು, ಪುಟ್ಟ ಕತ್ತರಿ, ವ್ಯಾಸಲೀನ್ ಡಬ್ಬಿ ಇತ್ಯಾದಿಗಳಿದ್ದುದ್ದನ್ನು   ಕಂಡು,  ನಾನು ಕಳೆದುಕೊಂಡಿರುವುದು  ಚಿಕ್ಕದಾದ ಟಾಲ್ಕಂ ಪೌಡರ್ ಡಬ್ಬಿ ಮಾತ್ರ, ಮೇಲಾಗಿ, ನನ್ನಂತವರು ಬಹಳ ಮಂದಿ ಇದ್ದಾರೆ ಎಂದು   ಸಮಾಧಾನಗೊಂಡೆ !

ಒಂದಷ್ಟು ಸಮಯ ಕಾಯುವಿಕೆಯ ನಂತರ ವಿಮಾನದ ಬೋರ್ಡಿಂಗ್ ಸಮಯ ಬಂತು.  ಬೆಂಗಳೂರಿನಿಂದ  ರಾತ್ರಿ 1130 ಕ್ಕೆ  ಹೊರಟ ವಿಮಾನ ಮರುದಿನ ಅಂದರೆ 15 ಸೆಪ್ಟೆಂಬರ್ 2024 ರ ಮುಂಜಾನೆ ನಾಲ್ಕುವರೆ ಗಂಟೆಗೆ ಥಾಯ್ ಲ್ಯಾಂಡ್ ದೇಶದ  ರಾಜಧಾನಿಯಾದ ‘ ಬ್ಯಾಂಕಾಕ್’ ತಲಪಿಸಿತು.  ನಮ್ಮ ಲಗೇಜು ಅನ್ನು ವಿಯೆಟ್ನಾಂನಲ್ಲಿ ಪಡೇದುಕೊಳ್ಳುವುದಾದುದರಿಂದ ಕೈಯಲ್ಲಿದ್ದ ಚಿಕ್ಕ ವ್ಯಾನಿಟಿ ಬ್ಯಾಗ್ ಹಿಡಿದುಕೊಂಡು   ನಮ್ಮ ಮುಂದಿನ ಪ್ರಯಾಣದ ವಿಮಾನಕ್ಕೆ ನಿಗದಿಯಾದ ಗೇಟ್ ಯಾವುದೆಂದು ಗಮನಿಸಿ, ನಿಧಾನಕ್ಕೆ ನಡೆಯಲಾರಂಭಿಸಿದೆವು. ಬ್ಯಾಂಕಾಕ್ ಏರ್ ಪೋರ್ಟ್ ಕೂಡ ಬಹಳ ಸುಂದರವಾಗಿದೆ.  ಅಲ್ಲಿದ್ದ  ‘ಪಗೋಡಾ’ ಮಂದಿರ ಸೊಗಸಾಗಿತ್ತು.  

ಬ್ಯಾಂಕಾಕ್ ವಿಮಾನ ನಿಲ್ದಾಣದಲ್ಲಿದ್ದ  ‘ಪಗೋಡಾ’ ಮಂದಿರ

ಕಾರ್ಪೆಟ್ ಹಾಕಿದ್ದ ನೆಲದಲ್ಲಿ ಸೂಟ್ಕೇಸ್ ಮಾದರಿಯ, ಚಕ್ರಗಳುಳ್ಳ  ಬ್ಯಾಗ್  ಮೇಲೆ ಮಹಿಳೆಯೊಬ್ಬರು ಕುಳಿತುಕೊಂಡು   ಚಲಿಸುತ್ತಿದ್ದರು. ಇದೇನಪ್ಪಾ ಹೊಸ ಮಾದರಿಯ ಸೂಟ್ಕೇಸ್ ಅಂದುಕೊಂಡೆ.   ಗೂಗಲ್ ಮೊರೆ ಹೋದಾಗ, ಅದು  ಸ್ಮಾರ್ಟ್ ಸೂಟ್ಕೇಸ್  (Rideable Smart Suitcase ) ಅಂತ ಗೊತ್ತಾಯಿತು ಸ್ಮಾರ್ಟ್  ಫೋನ್,  ಸ್ಮಾರ್ಟ್ ವಾಚ್, ಸ್ಮಾರ್ಟ್ ಕುಕ್ಕರ್, ಸ್ಮಾರ್ಟ್ ವಾಚ್ ಗಳನ್ನು ಕಂಡಾಗಿದೆ, ಸೂಟ್ ಕೇಸ್ ಕೂಡಾ  ‘ಸ್ಮಾರ್ಟ್ ‘ ಆಗಿದ್ದನ್ನು ನಾನು ಗಮನಿಸಿದ್ದುಇದೇ ಮೊದಲು. ”ಬರಬರುತ್ತಾ, ವಸ್ತುಗಳು ಸ್ಮಾರ್ಟ್ ಆಗುತ್ತಿವೆ, ಮನುಷ್ಯರು ದಡ್ಡರಾಗುತ್ತಿದ್ದಾರೆ” ಎಂದು ಎಲ್ಲೋ ಓದಿದ್ದು ನೆನಪಾಗಿ ನಗು ಬಂತು.

PC: Internet

ನಮಗೆ ಬ್ಯಾಂಕಾಕ್ ನಿಂದ,  ವಿಯೆಟ್ನಾಂಗೆ ಪ್ರಯಾಣಿಸಲಿರುವ ವಿಮಾನ ಬೆಳಗ್ಗೆ 0640 ಕ್ಕೆ ಹೊರಡುವುದಿತ್ತು. ಹೇಗೂ ನಿದ್ರೆ ಬಾರದು, ವಿಮಾನದಲ್ಲಿ ಸಸ್ಯಾಹಾರದ ತಿನಿಸು ಸಿಗುವುದು ಕಷ್ಟ, ದುಬಾರಿ ಮತ್ತು ರುಚಿಯೂ ಇರುವುದಿಲ್ಲ. ಹಾಗಾಗಿ ಏನಾದರೂ ತಿನ್ನಲು ಖರೀದಿಸೋಣ ಎಂದು ಸುತ್ತಮುತ್ತ ಇದ್ದ ಅಂಗಡಿಗಳತ್ತ ಕಣ್ಣು ಹಾಯಿಸುತ್ತಾ ನಮ್ಮ  ಮುಂದಿನ ವಿಮಾನಕ್ಕೆ ನಿಗದಿಯಾದ ಗೇಟ್ ನತ್ತ ನಡೆಯಲಾರಂಭಿಸಿದೆವು. ಅಂಗಡಿಯೊಂದರಲ್ಲಿ ಅನಾನಸ್ , ಕಲ್ಲಂಗಡಿ, ಕರ್ಬೂಜ ಮೊದಲಾದ ಹಣ್ಣುಗಳನ್ನು ಬಹಳ ಕಲಾತ್ಮಕವಾಗಿ ಕತ್ತರಿಸಿ ಪಾರದರ್ಶಕ ಪ್ಲಾಸ್ಟಿಕ್  ಬಾಕ್ಸ್ ಗಳಲ್ಲಿ ಇರಿಸಿದ್ದರು. ಒಂದು ಬಾಕ್ಸ್ ಅನ್ನು ಕೈಗೆತ್ತಿಕೊಂಡು, ಇನ್ನೇನು ಕ್ರೆಡಿಟ್ ಕಾರ್ಡ್ ಕೊಡಬೇಕು ಅನ್ನುವಷ್ಟರಲ್ಲಿ, ಅಂಗಡಿಯಾಕೆ ‘ಒನ್ಲೀ ಕ್ಯಾಶ್   ಪ್ಲೀಸ್’ ಅಂದಳು. ಯು.ಎಸ್.ಡಾಲರ್ ಆಗಬಹುದೇ ಅಂದರೆ,  ‘ನೋ ಚೇಂಜ್,  ಥಾಯ್ ಭಾಟ್ ಒನ್ಲಿ’  ಎಂದು ಥಾಯ್ ಲ್ಯಾಂಡ್ ನ ಹಣ ಕೊಡಿ ಎಂದಳು.  ಸಾಮಾನ್ಯವಾಗಿ, ಎಲ್ಲಾ ದೇಶದ ಏರ್ ಪೋರ್ಟ್ ಗಳಲ್ಲಿ ಅಂತರಾಷ್ಟ್ರೀಯ ಆಯ್ಕೆಯುಳ್ಳ ಕ್ರೆಡಿಟ್ ಕಾರ್ಡ್ ಅನ್ನು ಆರಾಮವಾಗಿ ತೆಗೆದುಕೊಳ್ಳುತ್ತಾರೆ.  ಹಾಗಾಗಿ, ನಾವಿಬ್ಬರೂ, ಸ್ವಲ್ಪವೇ  ಅಮೇರಿಕ ಡಾಲರ್ ಹಣ ಒಯ್ದಿದ್ದೆವು. ಅದನ್ನು ಇನ್ನೂ ತಲಪುವ ಮೊದಲೇ ಖರ್ಚು ಮಾಡಲು ಮನಸ್ಸಾಗಲಿಲ್ಲ. ಮೇಲಾಗಿ, ನಮ್ಮ ಪ್ರಯಾಣದಲ್ಲಿ ಬ್ಯಾಂಕಾಕ್ ಗೆ ಭೇಟಿ ಇರಲಿಲ್ಲ, ಪ್ರಯಾಣ ಮಧ್ಯದಲ್ಲಿ  ಕೆಲವು ಗಂಟೆಗಳ ಕಾಲ ಏರ್ ಪೊರ್ಟ್ ನಲ್ಲಿ ಇರುವುದಕ್ಕೆ ಸ್ಥಳೀಯ  ‘ಭಾಟ್’ ಎಂಬ ಕರೆನ್ಸಿ  ಬೇಕಾಗಬಹುದೆಂಬ ಕಲ್ಪನೆಯೂ ನಮಗಿರಲಿಲ್ಲ.     ಇನ್ನೊಂದು ಅಂಗಡಿಯಲ್ಲಿ ಕಾಫಿ ಕುಡಿಯೋಣವೇ ಅನಿಸಿತು, ಅಲ್ಲಿ ಕ್ರೆಡಿಟ್ ಕಾರ್ಡ್ ಮೂಲಕ ಹಣಪಾವತಿ ಮಾಡುವ ಅನುಕೂಲವಿದೆಯೇ ಎಂದು ದೃಢೀಕರಿಸಿಕೊಂಡ   ಮೇಲೆಯೇ ನಾವು ಕಾಫಿ/ಚಹಾ ಕುಡಿದೆವು.

ಅಷ್ಟರಲ್ಲಿ ನನಗೆ ವಿಯೆಟ್ನಾಂನಲ್ಲಿ ನಮ್ಮ ಪ್ರವಾಸದ ವ್ಯವಸ್ಥೆಗೆ   ಅಯೋಜಿಸಲ್ಪಟ್ಟ  ‘ಹಲೋ ಏಶ್ಯಾ  ಟ್ರಾವೆಲ್’ ಸಂಸ್ಥೆಯಿಂದ  ವಾಟ್ಸಾಪ್ ಸಂದೇಶ ಬಂತು.   ‘ಟೀನ್ ಜಾನ್’ ಎಂಬ ಸ್ಥಳೀಯ ಮಾರ್ಗದರ್ಶಿಯು ನಮ್ಮ ಹೆಸರುಳ್ಳ ಫಲಕವನ್ನು ಹಿಡಿದು ವಿಮಾನ ನಿಲ್ದಾಣ 10 ನೇ ಕಾಲಂ ಬಳಿ ಇರುತ್ತಾರೆಂದೂ ಏನಾದರೂ ಸಮಸ್ಯೆಯಾದರೆ  ಸಂಪರ್ಕಿಸಿ ಎಂದೂ ಫೋನ್ ಸಂಖ್ಯೆ ಸಮೇತವಾದ ವಾಟ್ಸಾಪ್ ಸಂದೇಶ ಓದಿ ನಿರಾಳವಾಯಿತು.  ಬ್ಯಾಂಕೋಕ್ ನಿಂದ ಹೊರಟ ವಿಮಾನ 0850 ಗಂಟೆಗೆ ವಿಯೆಟ್ನಾಂ ದೇಶದ ಹನೋಯ್ ವಿಮಾನನಿಲ್ದಾಣದಲ್ಲಿ ಬಂದಿಳಿಯಿತು. ನಮ್ಮ ಲಗೇಜುಗಳನ್ನು ಪಡೆದುಕೊಂಡು  ವಿಮಾನ ನಿಲ್ದಾಣದ ಹೊರಗೆ ಬಂದಾಗ ಸಣ್ಣದಾಗಿ ಮಳೆ ಹನಿಯುತ್ತಿತ್ತು. 

ಮೊದಲೇ ತಿಳಿಸಿದಂತೆ, ‘ಟೀನ್ ಜಾನ್ ‘ ಎಂಬ  ಎಳೆ ಯುವಕ ನಮಗಾಗಿ ಕಾಯುತ್ತಿದ್ದ. ಬಹಳ ವಿನಯದಿಂದ ತುಸು ಬಾಗಿ ಕೈಮುಗಿದು, ಸ್ವಪರಿಚಯ ಮಾಡಿಕೊಂಡು, ಆದರದಿಂದ ಸ್ವಾಗತಿಸಿದ. ನಾವೂ ಆತನಿಗೆ ಪ್ರತಿ ವಂದಿಸಿದೆವು. ಅವನ ಕೈಯಲ್ಲಿದ್ದ ಫಲಕದಲ್ಲಿ ನಮ್ಮ ಹೆಸರನ್ನು ಚೆಂದಕೆ ಕ್ಯಾಲಿಗ್ರಾಫಿ ಅಕ್ಷರದಲ್ಲಿ ಬರೆದಿತ್ತು. ‘ವೆರಿ ನೈಸ್’ ಅಂದೆ. ಅದನ್ನು ತಾನೇ ಬರೆದೆ ಎಂದು ಉತ್ಸಾಹದಿಂದ ತಿಳಿಸಿದ. ನಮ್ಮನ್ನು ಕಾರಿನ ಸಮೀಪ ಕರೆದೊಯ್ದ.  ಕಾರಿನ ಚಾಲಕ ನಮ್ಮನ್ನು ನೋಡಿ ಮುಗುಳುನಕ್ಕು, ಲಗೇಜುಗಳನ್ನು  ಕಾರಿನಲ್ಲಿರಿಸಿದ. ಎಡಗಡೆ ಇರುವ ಸ್ಟಿಯರಿಂಗ್ ಹಿಡಿದು, ರಸ್ತೆಯ ಬಲಬದಿಯಲ್ಲಿ  ಕಾರು ಚಲಾಯಿಸತೊಡಗಿದ.  ಹೀಗೆ ವಿಯೆಟ್ನಾಂನಲ್ಲಿ ವಾಹನಗಳ ವಿನ್ಯಾಸ ಮತ್ತು ಚಾಲನೆ  ನಮಗಿಂತ ವಿಭಿನ್ನ. ಆತನ  ಹೆಸರು ‘ಡುಕ್’, ಅವನಿಗೆ  ಇಂಗ್ಲಿಷ್ ಮಾತನಾಡಲು ಗೊತ್ತಿಲ್ಲ ಎಂದು ‘ಟೀನ್ ಜಾನ್ ‘ ತಿಳಿಸಿದ. 

ನಮ್ಮ ಮಾರ್ಗದರ್ಶಿ ನಮ್ಮನ್ನು ಸ್ವಾಗತಿಸಿದ ಪರಿ ‘ನಮಸ್ಕಾರ’ ಶೈಲಿಯಲ್ಲಿ ಕೈಜೋಡಿಸಿದ ವಿಧಾನ ಇಷ್ಟವಾಗಿತ್ತು. ಹಾಗಾಗಿ ‘ವಿ ಗ್ರೀಟ್ ಪೀಪಲ್ ಸೇಯಿಂಗ್ ‘ನಮಸ್ತೆ’ . ವಾಟ್ ಡು ಯು ಸೇ ಇನ್ ಯುವರ್ ಲಾಂಗ್ವೇಜ್’ ಎಂದು ಕೇಳಿದೆ. ಆತ ನಗುತ್ತಾ ‘ವಿ ಸೇ ಸಿಂಚಾವ್’ ಎಂದು ಪುನ: ಕೈಮುಗಿದ. ನಾವಿಬ್ಬರೂ ಕೈಮುಗಿದು ‘ಸಿಂಚಾವ್’ ಎಂದೆವು!

(ಮುಂದುವರಿಯುವುದು)
ಹೇಮಮಾಲಾ.ಬಿ, ಮೈಸೂರು

9 Comments on “ಪುನರುತ್ಥಾನದ ಪಥದಲ್ಲಿ …. ಸಿಂಚಾವ್ ಹೆಜ್ಜೆ 1

  1. ವಿಯೆಟ್ನಾಂ ಕಾಂಬೋಡಿಯ ಪ್ರವಾಸಕಥನ..ಸೊಗಸಾದ ನಿರೂಪಣೆಯೊಂದಿಗೆ ಪ್ರಾರಂಭವಾಗಿ..ಮುಂದಿನ ಕಂತಿಗೆ ಕಾಯುವಂತಿದೆ..ಗೆಳತಿ ಹೇಮಾ..

      1. Beautiful. ನೀವು ಬರೆಯುವ ಪ್ರವಾಸ ಕಥನಗಳ ಸವಿಯೇ ಬೇರೆ

  2. ಪರದೇಶಗಳಿಗೆ ಪ್ರವಾಸ ಹೋಗುವವರಿಗೆ ಒಳ್ಳೆಯ ಕೈಪಿಡಿಯಂತಿದೆ, .
    ಮಹಿಳೆಯರೆಂದೂ ಅಬಲೆಯರಲ್ಲ..ತಮಗೆ ತಾವೇ ಸಮರ್ಥರು ಎಂದೆನಿಸಿತು!
    ಮುಂದಿನ ಕಂತಿಗೆ ಕಾಯುತ್ತಾ…
    ಧನ್ಯವಾದಗಳು ಮಾಲಾ

  3. ಕುತೂಹಲ ಭರಿತ, ಮಾಹಿತಿಪೂರ್ಣ ಪ್ರವಾಸ ಕಥನದ ಆರಂಭ ಮನೋಹರವಾಗಿದೆ. ಅಭಿನಂದನೆಗಳು.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *