ಕಾದಂಬರಿ : ಕಾಲಗರ್ಭ – ಚರಣ 25

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು)

“ಅಯ್ಯೋ ದೇವರೇ, ನನ್ನನ್ನು ಇನ್ನೆಷ್ಟು ಪರೀಕ್ಷೆ ಮಾಡುತ್ತೀಯೆ ನನ್ನಪ್ಪ. ಹೀಗೆ ಮಾಡಿದರೆ ರೋಷಗೊಂಡು ನಾನು ಹೇಳಿದಂತೆ ಬಗ್ಗಬಹುದು, ವೈದ್ಯರ ಹತ್ತಿರ ಹೋಗಲು ಒಪ್ಪಬಹುದು. ಇಷ್ಟು ದಿವಸ ಉದಾಸೀನ ಮಾಡಿದ್ದಕ್ಕೆ ಈಗಲಾದರೂ ಪಶ್ಚಾತ್ತಾಪ ಪಡಬಹುದು ಎಂದೆಲ್ಲಾ ಯೋಚಿಸಿ ಇದರ ಬಗ್ಗೆ ಎಲ್ಲವನ್ನೂ ಕೇಳಿ ತಿಳಿದುಕೊಂಡು ಬರೆದೆ. ಅದರೆ ಇದು ನನಗೇ ತಿರುಗುಬಾಣವಾಯ್ತು. ಎಲ್ಲಿ ಹೋದರೋ ಯಾರಿಗೆ ಹೇಳಲಿ.” ಎಂದು ಹಲುಬುತ್ತಾ ಅಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ಕಾಗದದ ಚೂರುಗಳನ್ನು ಅರಿಸಿ ಸುಟ್ಟು ಹಾಕಿದಳು. ಇದನ್ನೆಲ್ಲ ಅನುಭವಿಸಲೆಂದೇ ನನ್ನ ಅಂತರಂಗದಲ್ಲಿ ನೆಲೆಸಿ ನಿನ್ನ ಕೈಹಿಡಿಯುವಂತೆ ಮಾಡಿದ್ದು. ದೇವಾ ಎಂದು ಮಮ್ಮಲ ಮರುಗುತ್ತಾ ನಿಂತಲ್ಲೇ ಕುಸಿದು ಕುಳಿತು ದುಃಖಿಸತೊಡಗಿದಳು ದೇವಿ.

ಹಾಗೇ ಅದೆಷ್ಟು ಹೊತ್ತು ಕುಳಿತಿದ್ದಳೋ ತಿಳಿಯದು. ಯಾರೋ ಅವಳ ಭುಜವನ್ನು ಹಿಡಿದು “ಇದೇನು ಪುಟ್ಟಾ ಮುಂಬಾಗಿಲು ಹಾರೊಡೆದು ಹೀಗೆ ಕುಳಿತಿದ್ದಿ. ಮಹೇಶಪ್ಪ ಇನ್ನೂ ಮನೆಗೆ ಬಂದಿಲ್ವಾ? ಫೊನ್ ಮಾಡಿ ಕೇಳಬೇಕಿತ್ತು” ಎಂದರು ಅಜ್ಜಿ ಬಸಮ್ಮ.

ಅಜ್ಜಿಯ ದನಿಕೇಳಿ ಬೆಚ್ಚಿ ಎಚ್ಚೆತ್ತ ದೇವಿ “ಅಜ್ಜೀ ನೀವು ಮನೆಯಲ್ಲಿದ್ದೀರಾ? ಅವರೆಲ್ಲರೊಡನೆ ನೀವೂ ಮದುವೆಗೆ ಹೋದಂತಿತ್ತು. ನಾನು ನೋಡಿದ್ದು ಸುಳ್ಳೇ. ಹಾಗಿದ್ದೂ ಇಷ್ಟು ಬೇಗ !” ಎಂದು ಕೇಳಿದಳು.

“ಹೆದರಬೇಡ ನಾವೆಲ್ಲರು ಮದುವೆಗೆ ಹೋಗಿದ್ದೂ ನಿಜ. ಹಾಸನಕ್ಕಿನ್ನೂ ಅರ್ಧ ದಾರಿ ಇರುವಾಗಲೇ ಅವರಿಂದ ಫೋನ್ ಬಂತು. ಅವರ ಕಡೆಯವರು ಯಾರೋ ಹತ್ತಿರದ ಸಂಬಂಧಿ ಕಾಲವಾದ್ದರಿಂದ ಮದುವೆಯನ್ನು ಮುಂದಕ್ಕೆ ಹಾಕಿದರಂತೆ. ನಾವು ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಹಿಂದಕ್ಕೆ ಬಂದೆವು. ದಾರಿಯಲ್ಲೆಂತದ್ದೋ ಮುಷ್ಕರವಂತೆ ಅದರಿಂದ ತಡವಾಯಿತು. ನಾನು ಡಾ,ಚಂದ್ರಪ್ಪನ ಕಾರಿನಲ್ಲಿ ಬಂದು ಇಲ್ಲೇ ಮನೆಯ ತಿರುವಿನಲ್ಲಿ ಇಳಿದು ಬಂದೆ. ಅವರೆಲ್ಲರೂ ಇನ್ನೇನು ಬರಬಹುದು. ನೀನೇಕೆ ಇಷ್ಟೊಂದು ಕಂಗೆಟ್ಟು ಕುಳಿತಿದ್ದೀ? ಏಳು ನಿಮ್ಮತ್ತೆ ಮಾವ ಬಂದರೆ ಏನೆಂದುಕೊಳ್ಳುತ್ತಾರೋ. ಮಹೇಶಪ್ಪನಿಗೆ ಏನೋ ಕೆಲಸವಿರಬೇಕು ಅದಕ್ಕೇ ತಡವಾಗಿದೆ ಬರುತ್ತಾನೆ. ನೀನು ವಿದ್ಯಾವಂತೆ, ಬುದ್ಧಿವಂತೆ, ಇನ್ನೊಬ್ಬರಿಗೆ ಬುದ್ಧಿ ಹೇಳಬೇಕಾದವಳು ಏಳು ಏಳು” ಎಂದು ಅವಳನ್ನು ಅಪ್ಪಿ ಹಿಡಿದು “ನಾನೊಂದು ಮಾತು ಹೇಳ್ತೀನಿ ಪುಟ್ಟಾ, ತಪ್ಪು ತಿಳಿಯಬೇಡ. ನೀವಿಬ್ಬರೂ ನಿಮ್ಮ ಕೆಲಸಗಳಿಗೆ ಸ್ವಲ್ಪ ದಿನ ವಿರಾಮ ಕೊಟ್ಟು ಎಲ್ಲಿಯಾದರೂ ಪ್ರವಾಸ ಹೋಗಿಬನ್ನಿ. ಇಲ್ಲೆಲ್ಲಾ ತೋರಿಸಲು ಮುಜುಗರ ಎನ್ನಿಸಿದರೆ ಬೇರೆಲ್ಲಿಯಾದರೂ ತೋರಿಸಿಕೊಳ್ಳಿ. ಏನಾದರೂ ದೋಷವಿದ್ದರೆ ಔಷಧೋಪಚಾರ ಮಾಡಿಸಿಕೊಳ್ಳಿ. ನೀವೇನೂ ಮುದುಕರಾಗಿಲ್ಲ. ಒಬ್ಬರಿಗೊಬ್ಬರು ಬಿಗುಮಾನ ಬಿಟ್ಟು ಹಗುರಾಗಿ. ನಾನೂ ನೋಡುತ್ತಲೇ ಇದ್ದೇನೆ. ನಿಮ್ಮ ತಾತ ಹೋದಾಗಿನಿಂದ ನೀವು ನೀವಾಗಿಲ್ಲ. ಪಾಪ ನಿನ್ನತ್ತೆ ಮನೆಯವರು, ಅದೆ ನನ್ನ ಗೆಳತಿ ಅಪ್ಪಿತಪ್ಪಿಯೂ ಒಂದು ದಿನವೂ ಆಕ್ಷೇಪಿಸಿಲ್ಲ. ಇನ್ನೂ ಅವರ ಮಗನನ್ನೇ ದೂಷಿಸುತ್ತಾರೆ. ಹೇಗಾದರೂ ಮಹೇಶಪ್ಪನನ್ನು ಒಪ್ಪಿಸು. ಹಾಗೂ ಆಗಲೇ ಇಲ್ಲವೆಂದರೆ, ಬೇರೆ ಯಾವುದಕ್ಕೂ ಮನಸ್ಸು ಒಗ್ಗದಿದ್ದರೆ ನಾವು ಪಡೆದುಬಂದಿದ್ದೇ ಇಷ್ಟು ಅಂತ ಸುಮ್ಮನಿದ್ದುಬಿಡಿ. ಸುಬ್ಬು ಚಂದ್ರಾರ ಮಕ್ಕಳೇ ನಿಮ್ಮವು ಅಂದುಕೊಳ್ಳಿ. ಮನೆಯಂತೂ ಖಾಲಿಯಾಗಿಲ್ಲವಲ್ಲ. ಒಂದು ಕುಡಿ ನಮ್ಮ ಮನೆತನದ್ದೂಂತ ಇದ್ದೇ ಇದೆಯಲ್ಲ. ನಗುತ್ತಿರುವುದನ್ನು ಕಲಿಯಿರಿ. ನೀವೇನೂ ಹೇಳದಿದ್ದರೂ ನನಗೆಲ್ಲ ಅರ್ಥವಾಗುತ್ತದೆ” ಎಂದು ಸಮಾಧಾನದ ಮಾತುಗಳನ್ನು ಹೇಳಿದರು ಬಸಮ್ಮನವರು.

ಅಜ್ಜಿ ಹೇಳಿದ್ದನ್ನೆಲ್ಲ ಕೇಳಿದ ದೇವಿ ಮಹೇಶ ಬಂದದ್ದು, ತಮ್ಮಿಬ್ಬರ ನಡುವೆ ಆದ ಮಾತುಕತೆ ಯಾವುದನ್ನೂ ಬಾಯಿ ಬಿಡಲೇ ಇಲ್ಲ. ಹಾಗೇನಾದರೂ ಸತ್ಯ ಹೇಳಿದರೆ ತಾತನಂತೆ ಇವರು ಏನಾದರೂ..ಬೇಡ ಬೇಡ ಎಂದುಕೊಳ್ಳುತ್ತ ಅವರಿಗೊರಗಿ ಬಿಕ್ಕಳಿಸತೊಡಗಿದಳು.

ಇತ್ತ ಗಾಡಿ ಹತ್ತಿ ಹೊರಟ ಮಹೇಶನ ತಲೆ ಕೆಟ್ಟು ಕೆರ ಹಿಡಿದಂತಾಗಿತ್ತು. ಮನೆಯವರೆಲ್ಲ ಊರಿಗೆ ಹೋಗುತ್ತಾರೆಂದು ಮೊದಲೇ ತಿಳಿದಿದ್ದ ಅವನು ಏನೋ ಕಾರಣ ಹೇಳಿ ತಾನು ಹೋಗುವುದನ್ನು ತಪ್ಪಿಸಿಕೊಂಡಿದ್ದ. ಇವತ್ತು ಹೇಗಾದರೂ ದೇವಿಗೆ ಗಣಪನ ಮನೆಗೆ ಹೋಗೋಣವೆಂದು ಹೇಳಿ ಕರೆದುಕೊಂಡು ಹೋಗೋಣವೆಂದು ನಿರ್ಧರಿಸಿದ್ದ. ಹಾಗೇ ಹೋಗುತ್ತಾ ದಾರಿಯಲ್ಲಿ ಸೂಕ್ಷö್ಮವಾಗಿ ತನಗಾಗುತ್ತಿದ್ದ ಹಿಂಜರಿಕೆಯ ಕಾರಣಕ್ಕಾಗಿ ಡಾ. ಶರ್ಮಾರ ಹತ್ತಿರ ಚಿಕಿತ್ಸೆ ಮತ್ತು ಕೌನ್ಸೆಲಿಂಗ್ ಮಾಡಿಸಿಕೊಳ್ಳುತ್ತಿದ್ದು ತಾನೀಗ ಸರಿಯಾಗಿದ್ದೇನೆ, ಆದರೆ ಡಾಕ್ಟರು ದೇವಿಯನ್ನೂ ಕರೆತರಲು ಹೇಳಿದ್ದರು ಎಂದು ಹೇಳಿ ಅದಕ್ಕಾಗಿ ಅವರಲ್ಲಿಗೆ ಹೋಗಬೇಕೆಂದು ಎಲ್ಲವನ್ನು ಪೂರ್ತಿಯಾಗಿ ತಿಳಿಸಬೇಕೆಂದು ಆಲೋಚಿಸಿದ್ದ. ಆದರೆ ಮನೆಗೆ ಬಂದಾಗ ಬೇರೇನೋ ನಡೆಯಿತು. ಆದರವಳು ಬರೆದಿದ್ದ ಪತ್ರದಲ್ಲಿನ ವಿಷಯ, ಅವಳ ನಿರ್ಧಾರ ನೆನೆಸಿಕೊಂಡರೆ ಮೈ ಉರಿಯಿತು. ಇಂಥಾದ್ದರಲ್ಲಿ ಡಾಕ್ಟರು ಹೇಳಿದಂತೆ ತನ್ನ ವಿದ್ಯಾರ್ಥಿ ಜೀವನಕಾಲದಲ್ಲಿ ನಡೆದ ಒಂದು ಘಟನೆ ಬಗ್ಗೆ ಹೇಳಿದ್ದರೆ ನನ್ನ ಗತಿ ಏನಾಗುತ್ತಿತ್ತು? ಅವಳ ಪ್ರತಿಕ್ರಿಯೆ ! ಹಾಗೇ ನೆನಪು ಆ ಘಟನೆಯ ಹಿಂದೋಡಿತು.

ಬೆಂಗಳೂರಿನಲ್ಲಿ ಮಹೇಶ ಓದುತ್ತಿದ್ದ ಕಾಲದಲ್ಲಿ ಅವನನ್ನು ಪರಿಚಯ ಮಾಡಿಕೊಳ್ಳ ಬಯಸಿದ ಹುಡುಗಿಯರಿಗೇನೂ ಕೊರತೆಯಿರಲಿಲ್ಲ. ಆದರೆ ಅವನೆಂದೂ ಅದನ್ನು ದುರುಪಯೋಗ ಪಡಿಸಿಕೊಳ್ಳ ಬಯಸಿರಲಿಲ್ಲ. ಸ್ನೇಹವನ್ನು ಗೌರವಿಸುತ್ತಿದ್ದ. ರೂಪು, ವಿದ್ಯೆ, ಗುಣ, ಮಿಗಿಲಾಗಿ ಹಣ ಎಲ್ಲವನ್ನೂ ಹೊಂದಿದ್ದ ಅವನನ್ನು ತಮ್ಮ ಬಾಳಸಂಗಾತಿ ಮಾಡಿಕೊಳ್ಳಲು ತುದಿಗಾಲಲ್ಲಿ ಹಲವರು ನಿಂತಿದ್ದರು. ಸಮಯ ಸಂದರ್ಭವನ್ನು ನೋಡಿ ತಮ್ಮ ಬಯಕೆಯನ್ನು ಅವನ ಮುಂದೆ ನಿವೇದಿಸಿಕೊಂಡಿದ್ದೂ ಉಂಟು. ಆದರೆ ಅವನು ತನ್ನ ಊರಿನಲ್ಲೇ, ತನ್ನ ನೆಲದಲ್ಲೇ ಕುಲಕಸುಬನ್ನು ಮುಂದುವರೆಸುತ್ತ ರೈತಾಪಿ ಜನರಿಗೆ ಮಾಗದರ್ಶನ ಮಾಡುತ್ತಾ ಹಳ್ಳಿಗಾಡಿನಲ್ಲೇ ಬದುಕು ಕಟ್ಟಿಕೊಳ್ಳುವ ನಿರ್ಧಾರ ಹೊಂದಿದ್ದರಿಂದ ಅವರುಗಳು ಹಿಂದೆ ಸರಿದಿದ್ದರು. ಸ್ನೇಹವನ್ನಂತೂ ಮುಂದುವರೆಸಿದ್ದರು.

ಗುಂಪಿನಲ್ಲಿ ಒಬ್ಬಳು ಮಾತ್ರ ಮಹೇಶನ ಬೆನ್ನು ಬಿಡಲೇ ಇಲ್ಲ. ಪಿಶಾಚಿಯಂತೆ ಕಾಡುತ್ತಲೇ ಇದ್ದಳು. ಅವಳಿಗೆ ನಿಜವಾಗಿ ಮದುವೆಯ ಸಂಬಂಧ ಮಹತ್ವದ್ದಾಗಿರಲಿಲ್ಲ. ಅವನಿಂದ ದೈಹಿಕ ಸಾನ್ನಿದ್ಧö್ಯ ಬೇಕಾಗಿತ್ತು. ಅದನ್ನು ನಾಚಿಕೆ ತೊರೆದು ವ್ಯಕ್ತಪಡಿಸುತ್ತಿದ್ದಳು. ಕಂಡೂ ಕಾಣದ ಹಾಗೆ, ತಿಳಿದರೂ ತಿಳಿಯದ ಹಾಗೆ ನಟಿಸುತ್ತಾ ಅವಳ ಬೇಡಿಕೆಯನ್ನು ದೂರ ತಳ್ಳುತ್ತಾ ಬಂದಿದ್ದ. ಆದಷ್ಟೂ ಅವಳಿಂದ ಅಂತರ ಕಾಯ್ದುಕೊಂಡಿದ್ದ. ಅವಳನ್ನು ತೀರಾ ಎದುರು ಹಾಕಿಕೊಳ್ಳುವ ಪರಿಸ್ಥಿತಿಯಿರಲಿಲ್ಲ. ಏಕೆಂದರೆ ಆಕೆ ಅವನು ಓದುತ್ತಿದ ಕಾಲೇಜಿನ ಪ್ರತಿಷ್ಠಿತ ಹುದ್ದೆಯಲ್ಲಿದ್ದವರೊಬ್ಬರ ಮಗಳಾಗಿದ್ದಳು. ಹಾಗಾಗಿ ಅವನಿಗೆ ಅವರ ಮನೆಗೂ ಆಗಾಗ ಹೋಗಿಬರುವ ಅನಿವಾರ್ಯತೆಯೂ ಒದಗಿಬರುತ್ತಿತ್ತು. ಆಗ ಅವನ ಜವಾಬ್ದಾರಿಯನ್ನು ಬೇರೆಯವರಿಗೆ ಹೊರಿಸಿ ತಾನು ಹೋಗುವುದನ್ನು ತಪ್ಪಿಸುತ್ತಿದ್ದ. ಹಾಗಿದ್ದರೂ ಒಮ್ಮೆ ಹೋಗಲೇ ಬೇಕಾದ ಆವಶ್ಯಕತೆ ಒದಗಿತು. ಆಗ ಅವನಲ್ಲಿಗೆ ಹೋದಾಗ ಆಕೆ ಒಬ್ಬಳೇ ಇದ್ದು ಅವನ ಬಗ್ಗೆ ತಾನಿರಿಸಿಕೊಂಡ ಭಾವನೆ ತಪ್ಪೆಂದು ಅರಿವಾಯ್ತು ಎಂದು ಹೇಳಿಕೊಂಡು ತಾನು ಬದಲಾಗಿದ್ದೇನೆಂಬಂತೆ ನಾಟಕವಾಡಿದಳು. ಅದನ್ನು ನಿಜವೆಂದು ನಂಬಿ ಅವಳು ಅವನಿಗಿತ್ತ ಪಾನೀಯವನ್ನು ಸ್ವೀಕರಿಸಿದ. ಅದನ್ನು ಕುಡಿದಾಗಲೇ ತಿಳಿದದ್ದು ಅದರಲ್ಲಿ ಏನನ್ನೋ ಮತ್ತು ಬರುವಂತೆ ಬೆರೆಸಲಾಗಿದೆ ಎಂದು. ಅರೆಬರೆ ಪ್ರಜ್ಞಾ ಸ್ಥಿತಿಯಲ್ಲಿ ಅವಳೇ ಅವನ ಮೇಲೆ ಬಿದ್ದು ಬಲಾತ್ಕಾರವಾಗಿ ಆತನೊಡನೆ ದೇಹ ಸಂಪರ್ಕಕ್ಕೆ ಮುಂದಾದಳು. ದೈವವಶಾತ್ ಥಟ್ಟನೆ ಅವನಿಗೆಚ್ಚರವಾಗಿ ಅವಳನ್ನು ಬಲವಾಗಿ ದೂರ ತಳ್ಳಿದ. ಆಗ ಅವಳು ಆಡಿದ ಮಾತುಗಳು “ಥೂ..ಒಂದು ಪ್ರಾಯದ ಹೆಣ್ಣು ತಾನಾಗಿಯೇ ಮೇಲೆ ಬಿದ್ದರೂ ಅವಳನ್ನು ಅನುಭವಿಸಲಾದರವನು ನೀನು, ನಿಜಕ್ಕೂ ಒಬ್ಬ ಷಂಡನೆ ಸರಿ.” ಎಂದು ಕಾಲನ್ನಪ್ಪಳಿಸುತ್ತಾ ಇನ್ನೂ ಮಂಪರಿನಿಂದ ತೂರಾಡುತ್ತಿದ್ದ ಮಹೇಶನನ್ನು ಎಳೆದು ಮನೆಯಿಂದ ಆಚೆಗೆ ತಳ್ಳಿ ಬಾಗಿಲು ಹಾಕಿಕೊಂಡಿದ್ದಳು.

ಅಲ್ಲಿಂದ ತನ್ನ ರೂಮಿಗೆ ಹೇಗೆ ಬಂದನೋ ತಿಳಿಯದು. ಎಷ್ಟೋ ಹೊತ್ತು ಮಂಪರು ಸ್ಥಿತಿಯಲ್ಲೇ ಹಾಸಿಗೆಯಲ್ಲಿ ಬಿದ್ದುಕೊಂಡಿದ್ದ. ಈ ವಿಚಾರವನ್ನು ಯಾವ ಗೆಳೆಯರ ಬಳಿಯಲ್ಲೂ ಹಂಚಿಕೊಂಡಿರಲಿಲ್ಲ. ಅನಾರೋಗ್ಯದ ಕಾರಣ ಹೇಳಿ ಸ್ವಲ್ಪ ದಿನ ತನ್ನೂರಿಗೆ ಬಂದುಬಿಟ್ಟಿದ್ದ. ಅವನು ಹಿಂದಿರುಗಿ ಬೆಂಗಳೂರಿಗೆ ಹೋದಾಗ ತಿಳಿದುಬಂದ ಸುದ್ಧಿ ಭಯಂಕರವಾಗಿತ್ತು. ಆ ಹುಡುಗಿಯ ಹೆಣ ಒಂದು ಗಟಾರದಲ್ಲಿ ಪತ್ತೆಯಾಯಿತಂತೆ ಎಂದು. ಅದೇನು ಅಪಘಾತವೋ, ಆಕಸ್ಮಿಕವೋ ತಿಳಿಯದಾಯಿತು. ದೊಡ್ಡ ಮನೆಯವರಾದ್ದರಿಂದ ಸುದ್ಧಿಗೆ ಹೆಚ್ಚು ಪ್ರಚಾರ ಸಿಗದಂತೆ ಮಾಡಿದ್ದರು. ಮಹೇಶ ಅಂತೂ ಹೇಗೋ ಪೀಡೆ ನನ್ನ ಭಾಗಕ್ಕೆ ತೊಲಗಿದಂತಾಯ್ತು ಎಂದುಕೊಂಡು ನಿರಾಳವಾಗಿದ್ದ. ಮನೆಯಲ್ಲಿ ಅವನನ್ನು ಮದುವೆಯಾಗಿ ಬಂದ ಬಾಲ್ಯದ ಗೆಳತಿ ದೇವಿ ಅತನ ಹತ್ತಿರ ಬಂದಾಗಲೆಲ್ಲ ಅವನಿಗೆ ಆ ಬಲಾತ್ಕಾರಿ ಹೆಣ್ಣಿನ ಮುಖವೇ ಎದುರು ಬಂದಂಥ ಅನುಭವವಾಗುತ್ತಿತ್ತು. ಅವನಿಗರಿವಿಲ್ಲದಂತೆ ಕೈಕಾಲುಗಳು ಬಲಹೀನವಾಗಿತ್ತಿದ್ದವು. ನಡುಕ, ಬೆವರುವುದು, ನಾಲಿಗೆ ಒಣಗಿದಂತಹ ಅನುಭವ ಮರುಕಳಿಸುತ್ತಿತ್ತು. ಅವಳು ನಿದ್ರೆ ಮಾಡುತ್ತಿದ್ದಾಗ ಅವನೇ ಸಮೀಪಕ್ಕೆ ಹೋದರೂ ಅವಳನ್ನು ಮುಟ್ಟುವ ಧೈರ್ಯ ಬರುತ್ತಿರಲಿಲ್ಲ. ಇದನ್ನು ಕಂಡ ದೇವಿ ಅವನ ಬಗ್ಗೆ ಸಂಶಯ ಪಡುವುದು ಸಹಜವೇ ಆಗಿತ್ತು. ಅದರಿಂದಾಗಿ ಅವಳಾಡುತ್ತಿದ್ದ ಅವಹೇಳನಾಕಾರಿ ಮಾತುಗಳನ್ನು ಕೇಳಬೇಕಾಗುತ್ತಿತ್ತು. ವೈದ್ಯರಲ್ಲಿ ತೋರಿಸಿಕೊಳ್ಳಲು ಹಿಂಜರಿಕೆ.

ಗೆಳೆಯ ಗಣಪನ ಒತ್ತಾಯದಿಂದ ಡಾ. ಶರ್ಮಾರ ಭೇಟಿಯಾಯಿತು. ಅವರು ಅಪಾರ ಅನುಭವದಿಂದ ಉಪಾಯವಾಗಿ ತನ್ನಲ್ಲೇ ಬಚ್ಚಿಟ್ಟುಕೊಂಡಿದ್ದ ಗುಟ್ಟನ್ನು ಬಿಡಿಸಿದ್ದರು. ನಿಮ್ಮ ಸಂಸ್ಕಾರಕ್ಕೆ ವಿರುದ್ಧವಾಗಿ ನಡೆದ ಘಟನೆ ಆಳವಾಗಿ ನಿಮ್ಮ ಮನಸ್ಸಿನಲ್ಲಿ ಬೇರೂರಿಬಿಟ್ಟಿದೆ. ನಿಮಗೇನೂ ಆಗಿಲ್ಲ ಎಂದು ನನಗೆ ಚಿಕಿತ್ಸೆ ನೀಡಿದರು. ಹೀಗಾಗಿ ನಾನೇನೂ ತಪ್ಪು ಮಾಡಿಲ್ಲ. ಕೈಹಿಡಿದವಳಿಗೂ ದ್ರೋಹವೆಸಗಿಲ್ಲ ಎಂಬ ಅಂಶಗಳನ್ನು ಹಲವಾರು ಉದಾಹರಣೆಗಳೊಂದಿಗೆ ವಿವರಿಸಿ ಮಗುವನ್ನು ಸಂತೈಸುವಂತೆ ಮನದಟ್ಟು ಮಾಡಿಕೊಟ್ಟರು. ಈಗ ನಾನು ಸಂಪೂರ್ಣವಾಗಿ ಗುಣಹೊಂದಿ ಸಹಜವಾಗಿ ದೇವಿಯೊಡನೆ ಹೆಂಡತಿಯಂತೆ ನಡೆಸಿಕೊಳ್ಳಲು ಸಾಧ್ಯ. ಇದನ್ನೆಲ್ಲ ವಿವರವಾಗಿ ಇವಳಿಗೆ ಹೇಳಿಕೊಳ್ಳೋಣವೆಂದು ಬಯಸಿದ್ದೆ. ಆದರೆ ಅವೆಲ್ಲವನ್ನೂ ಕೇಳಿಸಿಕೊಳ್ಳುವ ವ್ಯವಧಾನವೇ ಅವಳಲ್ಲಿಲ್ಲ. ತನ್ನದೇ ರೀತಿಯ ಆಲೋಚನೆಗೆ ಜೋತುಬಿದ್ದಿದ್ದಾಳೆ. ಮನೆಗೆ ಹೋದ ಸ್ಬಲ್ಪ ಹೊತ್ತಿನಲ್ಲೆ ಕನಲಿದ ಬೆಂಕಿಯ ಉಂಡೆಯಂತಾಗಿಬಿಟ್ಟಳು. ಅದೇ ಯೋಚನೆಯಲ್ಲಿ ಅವಡುಗಚ್ಚಿ ಗಾಡಿಯನ್ನು ತಿರುಗಿಸಿದ. “ಧಡ್” ಎಂಬ ಶಬ್ಧವಷ್ಟೇ ಮಹೇಶನಿಗೆ ಕೇಳಿಸಿತು. ಏನೆಂದು ಅರಿವಾಗುವಷ್ಟರಲ್ಲಿ ಮತ್ಯಾವುದೋ ವಾಹನ ಸರಿದು ಹೋದಂತಾಯಿತು.

ದೇವಿಯ ಅಜ್ಜಿ ಬಸಮ್ಮನವರು ಹೇಳಿದಂತೆ ಊರಿಗೆ ಹೋದವರೆಲ್ಲರೂ ಹತ್ತುಗಂಟೆಯ ವೇಳೆಗೆ ಹಿಂದಿರುಗಿದರು. ಬಂದವರು ಕೇಳಿದ ಮೊದಲನೆಯ ಪೃಶ್ನೆಯೇ “ದೇವಿ ಮಹೀ ಇನ್ನೂ ಮನೆಗೆ ಬಂದಿಲ್ಲವೇ?” ಎಂಬುದು “ಇವನು ಫೋನಿಗೂ ಸಿಗುತ್ತಿಲ್ಲ. ಇತ್ತೀಚೆಗೆ ಇವನದ್ದು ಏಕೋ ಅತಿಯಾಗುತ್ತಿದೆ. ಮೊದಲೆಲ್ಲ ಎಲ್ಲಿಗೆ ಹೋಗುತ್ತಿದ್ದೇನೆ, ಏಕೆ? ಯಾವಾಗ ಬರುತ್ತೇನೆ ಎಲ್ಲವನ್ನೂ ಹೇಳುತ್ತಿದ್ದ. ಈಗಂತೂ ನಮಗೆ ಹೋಗಲಿ ನಿನಗಾದರೂ ಹೇಳಬಾರದೇ. ಏನು ಹುಡುಗಿಯೋ ನೀನೂ ಅವನಂಗೆ ಕುಣಿಯುತ್ತೀಯಾ” ಎಂದರು ಗೌರಮ್ಮನವರು.

ದೇವಿಯು ಅವರ ಮಾತಿಗೆ ಉತ್ತರ ಕೊಡುವ ಸ್ಥಿತಿಯಲ್ಲಿರಲಿಲ್ಲ. ಅವಳ ಮನಸ್ಸು ಕಾದ ಕುಲುಮೆಯಂತಾಗಿತ್ತು. ಮಹೇಶನ ಸುಳಿವಿಲ್ಲ…ಏನು ಕಾದಿದೆಯೋ? ಅಜ್ಜಿಯ ಮುಂದೆಯಂತೂ ಬಾಯಿ ಬಿಡಲಿಲ್ಲ. ಈಗ ಎಂದುಕೊಳ್ಳುವಷ್ಟರಲ್ಲಿ ಹೊರಗಡೆ ಗಾಡಿಯ ಸದ್ದಾಯಿತು. ಬಹುತೇಕ ಓಟದ ನಡಿಗೆಯಿಂದಲೇ ಬಾಗಿಲತ್ತ ಓಡಿದಳು ದೇವಿ. ಅದನ್ನು ನೋಡಿದ ಗೌರಮ್ಮ ಮೊದಲಿನ ದಾಷ್ಟಿಕತೆ ಈ ಹುಡುಗಿಗೆ ಎಲ್ಲಿ ಹೋಯಿತೋ? ಒಳ್ಳೇ ಗುಬ್ಬಚ್ಚಿ ಥರ ತರಗುಟ್ಟುತ್ತಾಳೆ ಎಂದುಕೊಂಡು ಅವಳ ಹಿಂದೆಯೇ ತಾವೂ ನಡೆದರು. ಅಲ್ಲಿಯೇ ಕುಳಿತಿದ್ದ ಗಂಗಾಧರಪ್ಪನವರು ಹೆಂಡತಿಯ ಸ್ವಭಾವದ ಅರಿವಿದ್ದುದರಿಂದ ತಟ್ಟನೆ ಮಗನಿಗೆ ಏನಾದರೂ ಅಂದುಬಿಟ್ಟಾಳೆಂದು ಅವರಿಬ್ಬರನ್ನು ಅನುಸರಿಸಿ ಹೊರಬಂದರು.

ಗಾಡಿ ಮಹೇಶನದೇ ಆದರೂ ಅದರಿಂದಿಳಿದವ ಮಹೇಶನಾಗಿರದೆ ಸಾಹುಕಾರ ರುದ್ರಪ್ಪನವರ ಶಿಷ್ಯ ಚಿಕ್ಕಯ್ಯನಾಗಿದ್ದ. ಅವನೊಂದು ಕೈಚೀಲ ತಂದು “ತಕ್ಕಳ್ಳಿ, ಧಣಿಗಳು ನಿಮ್ಮ ಮನೆಯ ಹತ್ತಿರ ಗಾಡಿ ನಿಲ್ಲಿಸಿ ಈ ಚೀಲ ನಿಮಗೆ ಕೊಟ್ಟು ಬಾ ಅಂದರು” ಎಂದು ಕೊಟ್ಟ.

ಅದನ್ನು ತೆಗೆದುಕೊಂಡ ದೇವಿ ಓ ! ಮಹೀ ಬಂದಾಗ ಈ ಚೀಲವನ್ನು ಒಳಗೆ ತಂದಿಲ್ಲ. ನಾನೂ ಗಮನಿಸಲೇ ಇಲ್ಲ. ಒಂದು ರೀತಿಯಲ್ಲಿ ಒಳ್ಳೆಯದೇ ಆಯ್ತು. ಉಡುಪು ಅದರ ಬಗ್ಗೆ ಚಿಂತೆಯಿಲ್ಲ. ಎಷ್ಟೋ ಸಾರಿ ಬರ‍್ಮುಡಾ ಟೀಷರ್ಟ್, ಪೈಜಾಮಾ ಜುಬ್ಬಾ, ಕೆಲವು ಸಾರಿ ಪಂಚೆ ಷರಟಿನಲ್ಲು ಪ್ರಯಾಣ ಮಾಡಿದ್ದಾನೆ. ಯಾರಿಗೂ ಅನುಮಾನ ಬಾರದು. ನಾನಂತೂ ಅಜ್ಜಿ ಎದುರು ಬಾಯ್ಬಿಟ್ಟು ಹೇಳಿಲ್ಲ. ಈಗಲೂ ಬಿಡಲಾರೆ. ಅವರೇನಾದರೂ..ಛೇ ತಮ್ಮ ಕಾಲಮೇಲೆ ತಾವೇ ಚಪ್ಪಡಿ ಎಳೆದುಕೊಳ್ಳುತ್ತಾರೆಯೇ. ಸಾಧ್ಯವೇ ಇಲ್ಲ ಎಂದು ಆಲೋಚನೆ ಮಾಡುತ್ತಲೇ ರುದ್ರಪ್ಪನವರ ಶಿಷ್ಯನತ್ತ ನೋಡಿದಳು.

ಅವನೇನೋ ಕೈ ಬಾಯಿ ಆಡಿಸುತ್ತಾ ಅತ್ತೆ, ಸುಬ್ಬು, ಮಾವನವರ ಹತ್ತಿರ ಹೇಳುತ್ತಿದ್ದ. ಕುತೂಹಲದಿಂದ ಚೀಲವನ್ನು ಅಲ್ಲಿಟ್ಟು ಅವರ ಸಮೀಪಕ್ಕೆ ಬಂದಳು.

“ಅಲ್ಲವೋ ನಿಮ್ಮ ಧಣಿ ನಮ್ಮ ಹುಡುಗನನ್ನು ಎಲ್ಲಿಗೆ ಕರೆದುಕೊಂಡು ಹೋದರು ಹೇಳಲಿಲ್ಲವೇ?” ಎಂದರು ಗೌರಮ್ಮ, ಗಂಗಾಧರಪ್ಪನವರು ಒಟ್ಟಿಗೇ.

“ಅಯ್ಯೋ ಅದ ಹೇಳೋದೇ ಮರೆತೆ, ಮತ್ತೇ ಮತ್ತೆ ಮಹೇಶಪ್ಪನಿಗೆ ರಸ್ತೆಯಲ್ಲಿ ಯಾರೋ ಟಕ್ಕರ್ ಹೊಡೆದು ಹೋದಂತೆ ಕಾಣಿಸುತ್ತದೆ ಎಂದು ಧಣಿಗಳು ಮಾತನಾಡುತ್ತಿದ್ದರು. ಅವರಿಗೆ ಮೈಮೇಲೆ ಜ್ಞಾನವೇ ಇರಲಿಲ್ಲ. ಅವರನ್ನೆತ್ತಿಕೊಂಡು ಮೈಸೂರಿನಲ್ಲಿರುವ ದೊಡ್ಡಾಸ್ಪತ್ರೆಗೆ ಅದೇ ಸ್ವಾಮಿಗಳು ಕಟ್ಟವ್ರಲ್ಲಾ ಅಲ್ಲಿಗೆ ಹೋದರು. ಗಾಡಿಯನ್ನು ರಸ್ತೆಯಲ್ಲೇ ಬಿಟ್ರೆ ಯಾರಾದರೂ ಅದರ ಪಾರ್ಟುಗಳನ್ನು ಕದ್ದುಗಿದ್ದಾರೆಂದು ನನ್ನೊಂದಿಗೆ ಕಳುಹಿಸಿದರು. ನೀವಲ್ಲಿಗೆ ಹೋಗಬೇಕಂತೆ ಅರ್ಜೆಂಟಂದ್ರು. ಸರಿ ನಾನಿನ್ನು ಬರ‍್ತೀನಿ ಎಂದು ತನಗೊಪ್ಪಿಸಿದ್ದ ಕೆಲಸ ಮುಗಿಸಿ ನಡೆದು ಹೋದ ಚಿಕ್ಕಯ್ಯ.

“ಅಯ್ಯೋ ದೇವರೇ, ಇವನೆಂಥಾ ದಡ್ಡ ಶಿಖಾಮಣಿಯಪ್ಪಾ, ಗಂಭೀರವಾದ ವಿಷಯವನ್ನು ಹೀಗೆ ಹೇಳಿಹೋದ” ಎಂದುಕೊಂಡವರೇ ಮನೆಯಲ್ಲಿದ್ದಷ್ಟು ಹಣವನ್ನು ತೆಗೆದುಕೊಂಡು ಶಂಕರ ಸುಬ್ಬು ಹೊರಟರು. ಜೊತೆಯಲ್ಲಿ ಬರುತ್ತೇನೆಂದ ಗಂಗಾಧರಪ್ಪನವರನ್ನು ತಡೆದು “ಬೇಡಿ, ನೀವು ವಯಸ್ಸಾದವರು. ಬೆಳಗಿನಿಂದ ಓಡಾಡಿದ್ದೀರಿ. ಇಲ್ಲಿಯೇ ಇರಿ. ನಾವು ಯಾವುದಕ್ಕೂ ಫೋನ್ ಮಾಡಿ ವಿಷಯ ತಿಳಿಸುತ್ತೇವೆ. ನಂತರ ಡಾ.ಚಂದ್ರಪ್ಪನವರೊಡನೆ ಬರುವಿರಂತೆ. ನಾನು ಅವರಿಗೂ ವಿಷಯ ಹೇಳುತ್ತೇನೆ” ಎಂದು ಹೊರಟರು.

ಮನೆಯಲ್ಲಿ ಮಕ್ಕಳ ಹೊರತಾಗಿ ಮಿಕ್ಕವರೆಲ್ಲ ಕುಳಿತಲ್ಲೇ ಕುಳಿತು ಬೆಳಕು ಹರಿಸಿದರು. ಹೋದವರು ಯಾರಿಂದಲು ಫೋನ್ ಬರದಿದ್ದುದರಿಂದ ತಡೆಯಲಾರದೆ ಗಂಗಾಧರಪ್ಪನವರೇ ಸುಬ್ಬಣ್ಣನಿಗೆ ಫೋನ್ ಮಾಡಿದರು. ಅತ್ತ ಕಡೆಯಿಂದ “ಗಾಭರಿಯಾಗಬೇಡಿ, ದೊಡ್ಡ ಡಾಕ್ಟರ್ ಚೆಕಪ್ ಮಾಡುತ್ತಿದ್ದಾರೆ, ರಾತ್ರೀನೂ ಬೇರೆಬೇರೆ ಡಾಕ್ಟರುಗಳು ಬಂದು ನೋಡುತ್ತಿದ್ದಾರೆ. ನಾನು ಅವರು ಏನು ಹೇಳುತ್ತಾರೋ ತಿಳಿದು ಹೇಳುತ್ತೇನೆ” ಎಂದು ಉತ್ತರ ಬಂತು.

ಈ ಕಾದಂಬರಿಯ ಹಿಂದಿನ ಚರಣ ಇಲ್ಲಿದೆ:    https://www.surahonne.com/?p=41178
(ಮುಂದುವರಿಯುವುದು)

ಬಿ.ಆರ್.ನಾಗರತ್ನ, ಮೈಸೂರು

7 Responses

  1. ಪ್ರಕಟಣೆಗಾಗಿ ಧನ್ಯವಾದಗಳು ಗೆಳತಿ ಹೇಮಾ

  2. ಶಂಕರಿ ಶರ್ಮ says:

    ಮೇಲಿಂದ ಮೇಲೆ ನಡೆಯುತ್ತಿರುವ ದುರಂತಗಳನ್ನು ಕಂಡರೆ ಭಯವಾಗುತ್ತಿದೆ …ನಾಗರತ್ನ ಮೇಡಂ…ಎಲ್ಲಾ ನಿಮ್ಮ ಕೈಯಲ್ಲಿದೆ ನೋಡಿ!!!

  3. ಭಯವೇಕೆ ಶಂಕರಿ ಮೇಡಂ ಇತ್ತೀಚಿನ ದಿನಗಳಲ್ಲಿ ನೆಡೆಯುತ್ತಿರುವ ವಿದ್ಯಾ ಮಾನಗಳು ಕಾದು ನೋಡಿ

  4. ನಯನ ಬಜಕೂಡ್ಲು says:

    ಹಂತ ಹಂತವಾಗಿ ಮಹಿ ಯ ಕತೆ ತೆರೆದು ಕೊಳ್ಳುತ್ತಿದೆ. ಸೂಪರ್

  5. ಪದ್ಮಾ ಆನಂದ್ says:

    ಛೇ, ಘಟಿಸುವ ಕೆಲವು ಅತೀ ಎನಿಸುವ ಘಟನೆಗಳು, ಜೀವನದ ಸಾರವನ್ನೇ ಕೆಲವೊಮ್ಮೆ ಹೀರಿ ಬಿಡುವುದು ನಿಜಕ್ಕೂ ದುಖಃಕರ ವಿಷಯವಾಗಿದೆ. ಕಾದಂಬರಿ ಓದುಗರ ಮನವನ್ನು ಹಿಡಿದಿಡುವಲ್ಲಿ ಯಶಸ್ವಿಯಾಗಿದೆ.

  6. ಧನ್ಯವಾದಗಳು ಪದ್ಮಾ ಮೇಡಂ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: