ಬಲದೇವ ಬಲರಾಮ

Share Button

ದುಷ್ಟರ ಶಿಕ್ಷೆಹಾಗೂ ಶಿಷ್ಟರ ರಕ್ಷಣೆಗಾಗಿ ಮಹಾವಿಷ್ಣುವು ದಶಾವತಾರವೆತ್ತಿದನು. ರಾಮಾವತಾರ, ಕೃಷ್ಣಾವತಾರ ಎರಡರಲ್ಲೂ ವಿಷ್ಣುವಿನೊಂದಿಗೆ ಮಹಾಶೇಷನೂ ಸೋದರ ರೂಪದಿಂದ ಅವತಾರವೆತ್ತಿದ್ದನ್ನು ಕಾಣುತ್ತೇವೆ. ರಾಮನ ಅನುಜನಾಗಿ ಲಕ್ಷ್ಮಣ ಬಂದ, ಮಹಾಶೇಷನ ಅಂಶದಿಂದ ಈತ; ಇಲ್ಲಿ ಜನಿಸಿದರೆ, ಕೃಷ್ಣನ ಅಗ್ರಜನಾಗಿ ಬಲರಾಮ ಜನಿಸುತ್ತಾನೆ. ಲಕ್ಷ್ಮಣನ ಮಾಹಿತಿ ಈ ಹಿಂದೆ ಇದೇ ಅಂಕಣದಲ್ಲಿ ಬರೆದಿದ್ದೆ. ಬಲರಾಮನ ಕುರಿತಾಗಿ ಈಗ ತಿಳಿಯೋಣ.ಬಲರಾಮನು ವಸುದೇವ-ರೋಹಿಣಿ ಪುತ್ರನಾಗಿ ಶ್ರೀಕೃಷ್ಣನ ಅಣ್ಣನಾಗಿ ಜನಿಸುತ್ತಾನೆ.

ಶ್ರೀಕೃಷ್ಣ-ಬಲರಾಮರಿಗೆ ತಂದೆ ವಸುದೇವ. ಕೃಷ್ಣನ ಜನನಿ ದೇವಕಿಯಾದರೆ ಬಲರಾಮನ ಹೆತ್ತತಾಯಿ ರೋಹಿಣಿ. ಕಕುದ್ಮಿ ಅಥವಾ ರೇವತ ಎಂಬವನ ಮಗಳಾದ ರೇವತಿಯು ಈತನ ಪತ್ನಿ, ರೇವತನು ತನ್ನ ಮಗಳಿಗೆ ಪತಿ ಯಾರೆಂದು ತಿಳಿಯಲು ಸ್ವತಃ ಮಗಳೊಂದಿಗೆ ಬ್ರಹ್ಮಲೋಕಕ್ಕೆ ಹೋದನಂತೆ. ಅಲ್ಲಿ ಬ್ರಹ್ಮನ ಸಮಯವನ್ನು ಕಾದು ಕುಳಿತು ಕೇಳಲಾಗಿ ‘ಯದುವಂಶದ ಬಲರಾಮನೇ ಈಕೆಗೆ ಪತಿಯಾಗುವನು’ ಎಂದು ಹೇಳಿದನಂತೆ. ರೇವತಿ ಬಲರಾಮರ ಜೋಡಿಯಲ್ಲಿ ರೇವತಿಯೇ ಬಲರಾಮನಿಗಿಂತ ತುಸು ಎತ್ತರವಾಗಿದ್ದಳಂತೆ. ಗಂಡ ಗಿಡ್ಡನಾಗಿಯೂ ಹೆಂಡತಿಯು ಎತ್ತರವಾಗಿಯೂ ಕಂಡು ಬಂದಲ್ಲಿ ರೇವತಿ-ಬಲರಾಮರಂತೆ ಎಂದು ಹೋಲಿಕೆ ಹೇಳುವುದುಂಟು.

ಬಲರಾಮನ ಹಲವು ನಾಮಗಳು:
ಬಲಭದ್ರ, ಬಲದೇವ, ಪ್ರಲಂಬಘ್ನ, ರೋಹಿಣೀಸುತ, ರೇವತಿರಮಣ, ಅಚ್ಯತಾಗ್ರಜ, ಹಲಾಯುಧ, ಕಾಮಪಾಲ, ನೀಲಾಂಬರ, ಸಂಕರ್ಷಣ, ಸೀರಪಾಣಿ, ಕಾಲಿಂದಿ ಭೇದನ, ಮುಸಲ ಹೀಗೆ ಅನೇಕ. ದೇವಕಿಯ ಗರ್ಭದಿಂದ ರೋಹಿಣಿಯ ಗರ್ಭಕ್ಕೆ ಕ್ರಮಿಸಿದನಾದುದರಿಂದ ಸಂಕರ್ಷಣ ಎಂದು ಹೆಸರಾಯಿತು. ಬಲರಾಮನ ಆಯುಧ ನೇಗಿಲು (ಹಲ). ಆದ್ದರಿಂದ ಈಗ ಹಲಾಯುಧನಾದ. ಬಲರಾಮನು ಜಲಕ್ರೀಡೆಗಾಗಿ ಯಮುನಾ ನದಿಯನ್ನು ಕರೆಯಲು ಆಕೆ ಬಾರದಿರಲು ಈತನ ತನ್ನ ನೇಗಿಲ ತುದಿಯಿಂದ ಅದನ್ನು ಬೇಧಿಸತೊಡಗಿದನು. ಆಗ ಯಮುನೆಯು ಈತನಿಗೆ ನೀಲಾಂಬರ,ಮಾಲ್ಯ ಮತ್ತು ಭೂಷಣಗಳನ್ನು ಕಾಣಿಕೆಯಾಗಿಕೊಟ್ಟಳು. ಮುಂದೆ ಈತನಿಗೆ ನೀಲಾಂಬರಿ ಎಂಬ ಹೆಸರೂ ಬಂತು. ಪ್ರಲಂಬ ಎಂಬ ರಾಕ್ಷಸನನ್ನು ಕಂಸನು ಕಳುಹಿಸಲಾಗಿ ಬಲರಾಮನನ್ನು ಹೊತ್ತುಕೊಂಡು ಹೋಗಲು ಬಲರಾಮನು ಅವನನ್ನು ನೆಲಕ್ಕೆ ಕೊಡಹಿ ಕೊಂದನು. ಅದಕ್ಕಾಗಿ ಬಲರಾಮನಿಗೆ ‘ಪ್ರಲಂಬಘ್ನ’ ಎಂಬ ಹೆಸರೂ ಬಂತು. ಸೀರ ಅಂದ್ರೆ ನೇಗಿಲು. ಸೀರಪಾಣಿ ಎಂದ್ರೆ ನೇಗಿಲನ್ನು ಕೈಯಲ್ಲಿ ಹಿಡಿದವ. ಸಾಂದೀಪನಿ ಎಂಬ ವಿದ್ವಾಂಸನಾದ ಬ್ರಾಹ್ಮಣನು ಶ್ರೀಕೃಷ್ಣ-ಬಲರಾಮರ ವಿದ್ಯಾಗುರು. ಸ್ಯಮಂತಕ ಮಣಿಯ ವಿಚಾರದಲ್ಲಿ;ಕೃಷ್ಣ-ಬಲರಾಮರಿಗೆ ವೈಮನಸ್ಯ ಉಂಟಾಗಿ ವಿದೇಹ ದೇಶಕ್ಕೆ ಹೋದಾಗ ಬಲರಾಮನು ದುರ್ಯೋಧನ ಹಾಗೂ ಭೀಮರಿಗೆ ಗದಾವಿದ್ಯೆ ಕಲಿಸುವ ಗುರುವಾಗುತ್ತಾನೆ. ಬಲರಾಮನು ಹೆಸರೇ ಸೂಚಿಸುವಂತೆ ಆತುಲ ಬಲಶಾಲಿ, ಜನರಿಗೆ ಉಪಟಳ ಕೊಡುತ್ತಿದ್ದ ಧೇನುಕನೆಂಬ ರಾಕ್ಷಸನನ್ನು ಕೊಲ್ಲುತ್ತಾನೆ.

ಬಲರಾಮ-ಶ್ರೀಕೃಷ್ಣರ ತಂಗಿ ಸುಭದ್ರೆ, ಈಕೆಯನ್ನು ಶಿಶುಪಾಲನಿಗೆ ಕೊಟ್ಟು ವಿವಾಹ ಮಾಡಬೇಕೆಂದು ಬಲರಾಮ ಯೋಚಿಸಿದರೆ, ಶ್ರೀಕೃಷ್ಣನು ತಂಗಿಯ ಅಪೇಕ್ಷೆಯಂತೆ ಅರ್ಜುನನಿಗೆ ಕೊಡಲು ನಿಶ್ಚಯಿಸಿ ಪೂರ್ವತಯಾರಿ ನಡೆಸುತ್ತಾನೆ. ಅಣ್ಣನಾದ ಬಲರಾಮನಲ್ಲಿ ವಿರೋಧಮಾಡದೆ ಉಪಾಯದಲ್ಲಿ ಮಂತ್ರಾಲೋಚನೆ ಮಾಡಿ ಪಾರ್ಥನು ತೀರ್ಥಯಾತ್ರೆಗೆ ತೆರಳಿದ್ದಾಗ ಸನ್ಯಾಸಿಯ ವೇಷಧರಿಸಿ ಪಟ್ಟಣದ ಹೊರವಲಯದಲ್ಲಿ ಕುಳಿತು ತಪಸ್ಸು ಮಾಡಲು ಪ್ರೇರೇಪಿಸುತ್ತಾನೆ. ಅದೇ ವೇಳೆಗೆ ತಂಗಿಯನ್ನು ಆತನ ಉಪಚಾರಕ್ಕಾಗಿ ಕಳುಹಿಸಲು ಏರ್ಪಾಡು ಮಾಡುತ್ತಾನೆ. ಮುಂದೆ ಸುಭದ್ರೆ ಅರ್ಜುನನ್ನೇ ಮದುವೆಯಾಗುತ್ತಾಳೆ.

ಕುರುಕ್ಷೇತ್ರ ಯುದ್ಧದಲ್ಲಿ ಬಲರಾಮನು ಕೌರವರ ಪಕ್ಷ ವಹಿಸುತ್ತಾನೆ. ಇದು ಶ್ರೀಕೃಷ್ಣನ ತಂತ್ರ ‘ಬಲರಾಮನೂ ಅತುಲ ಬಲಸೇನೆಯೂ ಒಂದು ಪಕ್ಷವಾದರೆ, ನಾನು ಏಕಮಾತ್ರ ಇನ್ನೊಂದು ಪಕ್ಷ! ನಿನ್ನ ಆಯ್ಕೆ ಯಾರು?’ ಎಂದು ದುರ್ಯೋಧನನಲ್ಲಿ ಕೃಷ್ಣ ಕೇಳುತ್ತಾನೆ. ಚತುರಂಗ ಬಲಸೇನೆಯನ್ನೂ ಒಂದೆಡೆ ನಿಲ್ಲಿಸಿ ಇನ್ನೊಂದು ಬದಿಯಲ್ಲಿ ಒಬ್ಬ ಮನುಷ್ಯ ಮಾತ್ರನಿದ್ದರೆ ದುರ್ಯೋಧನ ಸೇನಾಬಲವನ್ನೇ ಆಯ್ಕೆ ಮಾಡುತ್ತಾನೆಂದು ಕೃಷ್ಣನ ಊಹೆ ನಿಜವಾಗುತ್ತದೆ.

ಯುದ್ಧ ಭೂಮಿಗೆ ತೆರಳಲು ಬಲರಾಮನು ಸನ್ನದ್ಧರಾದಾಗ ಒಂದು ಮುದಿ ಎತ್ತು ಅವನ ಮುಂದಾಗಿ ಬರುತ್ತದೆ. ಗೋವು ನಮ್ಮ ಮುಂದೆ ಅಂದರೆ ಅವನ್ನು ಸ್ಪರ್ಶಿಸಿ ನಮಸ್ಕರಿಸುವುದು ಹಿಂದೂಗಳ ಸುಸಂಸ್ಕೃತಿಗಳಲ್ಲೊಂದು. ಅದಲ್ಲದೆ ಶ್ರೀಕೃಷ್ಣ-ಬಲರಾಮರು ಗೋಪಾಲಕರು! ಬಲರಾಮ ಸ್ಪರ್ಶಿಸಿದಾಗ ಆ ವೃಷಭ ಪ್ರಾಣ ಬಿಡುತ್ತದೆ.ತಾನು ಗೋಹತ್ಯೆಗೆ ಒಳಗಾದೆನೆಂಬ ವಿಷಾದದಿಂದ ತೀರ್ಥಯಾತ್ರೆ ಕೈಗೊಳ್ಳುತ್ತಾನೆ.

ನೈಮಿಷಾರಣ್ಯಕ್ಕೆ ಬಂದ ಬಲರಾಮನು ಅಲ್ಲಿ ಪುರಾಣಕಥೆಯನ್ನು ಹೇಳುತ್ತಿದ್ದ ರೋಮಹರ್ಷಣನು ತನಗೆ ಗೌರವ ಕೊಡಲಿಲ್ಲವೆಂದು ಆತನನ್ನು ತನ್ನ ಕೈಯ ದರ್ಭೆಯಿಂದ ಕೊಲ್ಲುತ್ತಾನೆ. ಕೊನೆಗೆ ಅಲ್ಲಿದ್ದ ಮುನಿಗಳ ಪ್ರಾರ್ಥನೆಯಂತೆ ಬದುಕಿಸುತ್ತಾನೆ. ಅವರಿಗೆ ತೊಂದರೆ ಕೊಡುತ್ತಿದ್ದ ‘ಬಲ್ವಲ’ ಎಂಬ ರಾಕ್ಷಸನನ್ನು ಸಂಹರಿಸುತ್ತಾನೆ. ಜಾಂಬವತಿ ಪುತ್ರನಾದ ಸಾಂಬನು ದುರ್ಯೋಧನನ ಮಗಳನ್ನು ಅಪಹರಿಸಲು ಕೌರವನು ಸಾಂಬನನ್ನು ಸೆರೆಯಲ್ಲಿಡುತ್ತಾನೆ. ಇದನ್ನು ಕೇಳಿ ಕ್ರುದ್ಧನಾದ ಬಲರಾಮನು ಹಸ್ತಿನಾವತಿಯ ದಕ್ಷಿಣ ಭಾಗದ ಕೋಟೆಯನ್ನು ತನ್ನ ಹಲಾಯುಧದಿಂದ ಮೀಟಲು ಕೌರವರು ಬಲರಾಮನಲ್ಲಿ ಸಂಧಾನಕ್ಕೆ ಬರುತ್ತಾರೆ.

ತೀರ್ಥಯಾತ್ರೆ ಮುಗಿಸಿ ಹಿಂದಿರುಗಿದ ಬಲರಾಮನು ತೊಡೆ ಮುರಿದು (ಯುದ್ಧದಲ್ಲಿ)ಬಿದ್ದ ದುರ್ಯೋಧನನನ್ನು ಕಂಡು ಕೋಪದಿಂದ ಭೀಮನನ್ನು ಕೊಲ್ಲಲು ಹೊರಟಾಗ ಶ್ರೀಕೃಷ್ಣನು ಸಮಾಧಾನಪಡಿಸುತ್ತಾನೆ.

ಯಾದವರೆಲ್ಲರೂ ಪರಸ್ಪರ ಹೊಡೆದಾಡಿಕೊಂಡು ಮೃತರಾದ ಮೇಲೆ ಬಲರಾಮನು ಸರ್ಪ ಶರೀರ ಹೊಂದಿ ಸಮುದ್ರ ಪ್ರವೇಶ ಮಾಡುತ್ತಾನೆ. ಬಲರಾಮನ ಆಯುರ್ಮಾನ 106 ವರ್ಷ ಎಂದು ತಿಳಿದು ಬರುತ್ತದೆ. ಬಲರಾಮ-ಶ್ರೀಕೃಷ್ಣರು ಅನ್ಯೋನ್ಯ ಅಣ್ಣ-ತಮ್ಮಂದಿರು. ಸಹೋದರರಲ್ಲಿ ಸಣ್ಣ-ಪುಟ್ಟ ಜಗಳವಾದರೂ ಅದನ್ನು ಮುಂದೆ ಬೆಳೆಯಗೊಡದೆ ಕೂಡಲೇ ಪರಿಹರಿಸಿಕೊಳ್ಳಬೇಕು ಎಂಬ ನೀತಿ ಇವರ ಜೀವನದಿಂದ ತಿಳಿದು ಬರುತ್ತದೆ.

-ವಿಜಯಾಸುಬ್ರಹ್ಮಣ್ಯ ಕುಂಬಳೆ

4 Responses

  1. ಪುರಾಣದ ಕಥೆ ಯಲ್ಲಿ ಈ ಸಾರಿ ಬಲದೇವನ ಬಗ್ಗೆ ಕಥನ ರೂಪ ಚೆನ್ನಾಗಿ ಮೂಡಿಬಂದಿದೆ ವಿಜಯಾಮೇಡಂ ಧನ್ಯವಾದಗಳು

  2. ಶಂಕರಿ ಶರ್ಮ says:

    ಬಲರಾಮನ ವಿಷಯ ಬಹಳಷ್ಟು ತಿಳಿದಂತಾಯಿತು.

  3. ನಯನ ಬಜಕೂಡ್ಲು says:

    Nice

  4. Padma Anand says:

    ಬಲರಾಮನ ಕುರಿತಾದ ಅನೇಕ ಮಾಹಿತಿಗಳನ್ನೊಳಗೊಂಡ ಪುರಾಣ ಕಥೆ ಮನಕ್ಕಿಳಿಯಿತು.
    ಅಭಿನಂದನೆಗಳು.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: