ಕಾದಂಬರಿ : ಕಾಲಗರ್ಭ – ಚರಣ 24
(ಹಿಂದಿನ ಸಂಚಿಕೆಯಿಂದ ಮುಂದುವರಿದುದು)
ವಾಡಿಕೆಯಂತೆ ತನಗಿಷ್ಟವಾದ ಒಂದು ಪುಸ್ತಕವನ್ನು ಕೈಯಲ್ಲಿ ಹಿಡಿದು ಅಲ್ಲಿಯೇ ಇದ್ದ ಕುರ್ಚಿಯಮೇಲೆ ಕುಳಿತ. ಊಹುಂ ಓದಲು ಏಕಾಗ್ರತೆ ಸಾಧಿಸಲಾಗದೆ ಪುಸ್ತಕವನ್ನು ಯಥಾಸ್ಥಾನದಲ್ಲಿರಿಸಿ ಹಾಸಿಗೆಯ ಮೇಲೆ ಅಂಗಾತ ಮಲಗಿದ. ಅವನ ನೆನಪುಗಳು ಮಹೇಶನ ಸುತ್ತಲೂ ಗಿರಕಿ ಹೊಡೆಯತೊಡಗಿದವು.
ಬೆಂಗಳೂರಿನಲ್ಲಿ ಓದುತ್ತಿದ್ದಾಗ ಹಾಸ್ಟೆಲಿನಲ್ಲಿದ್ದುಕೊಂಡೇ ವಿದ್ಯಾಭ್ಯಾಸ ಮುಗಿಸಿದ್ದ ಗಣಪತಿಗೆ ಮಹೇಶ ಸಹಪಾಠಿಯಾಗಿದ್ದ. ಆತನ ಸೌಮ್ಯ ಸೌಭಾವ, ಆಕರ್ಷಕ ರೂಪು, ಬುದ್ಧಿವಂತಿಕೆ ಗಣಪನನ್ನು ಆಕರ್ಷಿಸಿ ಸ್ನೇಹಕ್ಕಾಗಿ ಕೈಚಾಚಿದ್ದ. ಅಂದು ಪ್ರಾರಂಭವಾದ ಅವರ ಗೆಳೆತನ, ಒಡನಾಟ ಇಂದಿನವರೆಗೂ ಚ್ಯುತಿಯಿಲ್ಲದಂತೆ ಮುಂದುವರೆದಿತ್ತು. ಗಣಪನು ತನ್ನಲ್ಲಿದ್ದ ಸಾಹಿತ್ಯಾಸಕ್ತಿಯನ್ನು ಮಹೇಶನಲ್ಲಿಯೂ ಬಿತ್ತಿದ್ದ. ಅವನಿಂದ ಕೃಷಿಗೆ ಸಂಬಂಧಪಟ್ಟ ಹೊಸಹೊಸ ಆವಿಷ್ಕಾರಗಳ ಬಗ್ಗೆ ಮಾಹಿತಿಗಳನ್ನು ಪಡೆಯುತ್ತಿದ್ದ. ತಾನೂ ಅದೇ ವಿಷಯದ ವಿದ್ಯಾರ್ಥಿಯಾದರೂ ಮಹೇಶನ ಬುದ್ಧಿಮತ್ತೆ ಅವನಿಗಿಂತ ಎಷ್ಟೋಪಾಲುತೀಕ್ಷ್ಣವಾಗಿತ್ತು. ಆ ದಿನಗಳಲ್ಲಿ ಗಣಪನ ಸಹಪಾಠಿ ನೀಹಾರಿಕಾಳ ಸಂಗವೂ ಇಬ್ಬರ ಸ್ನೇಹಕ್ಕೆ ಅಡ್ಡಿಯಾಗಿರಲಿಲ್ಲ. ಗಣಪ ಅವಳಿಂದ ದೂರವಾದಾಗ ಮಾನಸಿಕವಾಗಿ ಬಹಳ ಕುಗ್ಗಿದ್ದ. ಹುಚ್ಚನಂತಾಗಿದ್ದ ಅವನನ್ನು ಮಹೇಶನೇ ಸಂತೈಸಿ ಅವನನ್ನು ಸ್ವಸ್ಥಿತಿಗೆ ತರುವುದರಲ್ಲಿ ನೆರವಾಗಿದ್ದ. ವಿದ್ಯಾರ್ಥಿದೆಸೆಯಲ್ಲೇ ಮಹೇಶ ಕೃಷಿಗೆ ಸಂಬಂಧಿಸಿದ್ದ ಸೆಮಿನಾರ್‌ಗಳಲ್ಲಿ ಭಾಗವಹಿಸುವ ಸಲುವಾಗಿ ಕಾಲೇಜಿನಿಂದ ವಿದೇಶಕ್ಕೂ ಹೋಗಿಬಂದಿದ್ದ. ನೋಡಲು ಸುಂದರನೂ, ಓದಿನಲ್ಲಿ ಮೇಧಾವಿಯೂ ಆಗಿದ್ದ ಅವನ ಸ್ನೇಹ, ಪ್ರೀತಿಗಾಗಿ ಹಂಬಲಿಸಿ ಹಿಂದೆ ಬೀಳುತ್ತಿದ್ದ ಹುಡುಗಿಯರ ಹಿಂಡೇ ಇತ್ತು. ಆದರೇಕೋ ಅವನ ಅಂತರಂಗದಲ್ಲಿ ಯಾರೂ ಸ್ಥಾನ ಪಡೆಯಲಿಲ್ಲ. ಓದಿನ ನಂತರ ತಮ್ಮದೇ ನೆಲದಲ್ಲಿ ವ್ಯವಸಾಯದ ಸುಧಾರಣೆಯ ಕೆಲಸವನ್ನು ಕೈಗೆತ್ತಿಕೊಂಡಿದ್ದ. ಅಭಿವೃದ್ಧಿ ಊಹೆಗೂ ಮೀರಿದಂತೆ ಆಯಿತು. ಸುತ್ತಮುತ್ತಲಿನವರಿಗೂ ಸಹಾಯ ಹಸ್ತ ಚಾಚುತ್ತಿದ್ದ. ಇದರಿಂದ ಜನಾನುರಾಗಿಯೂ, ಪ್ರಸಿದ್ಧನೂ ಆಗಿದ್ದ. ಆದರೇಕೋ ಅವನನ್ನು ಕೈ ಹಿಡಿವ ಕನ್ಯೆಗಾಗಿ ಮನೆಯವರು ಬಹಳ ಪ್ರಯತ್ನ ಮಾಡಿದರೂ ಸಿಗಲೇ ಇಲ್ಲ. ಕೊನೆಗೆ ಹಿರಿಯರ ಆಣತಿಯಂತೆ ತನ್ನ ಬಾಲ್ಯದ ಗೆಳತಿಯನ್ನೇ ವರಿಸಬೇಕಾಯ್ತು. ಅದವನಿಗೆ ಆಪ್ತವಾಗಿಯೂ ಇತ್ತು. ನಂತರ ಗಣಪನ ಬಳಿ ತನ್ನ ಬಾಳಸಂಗಾತಿಯ ಬಗ್ಗೆ ಹೊಗಳಿಕೆಯ ಮಾತುಗಳನ್ನಾಡಿದ್ದ. ಮನೆಯವರಿಗೆ ಅಕ್ಕರೆಯ ಸೊಸೆ, ಜೊತೆಗೆ ಸ್ವಯಂ ಉದ್ಯೋಗಿಯಾಗಿ ಹಲವಾರು ಮಹಿಳೆಯರಿಗೆ ಸಹಾಯಕಳಾಗಿದ್ದಳು. ಇದರ ಬಗ್ಗೆ ಫೋನ್ ಮಾಡಿದಾಗಲೆಲ್ಲ ಅವಳನ್ನು ಹೊಗಳದೆ ಇರುತ್ತಿರಲಿಲ್ಲ.
ಆದರೆ ಇತ್ತೀಚೆಗೆ ಏಕೋ ಮಹೇಶ ಬಹಳ ಬದಲಾಯಿಸಿದ್ದಂತೆ ತೋರುತ್ತಿದ್ದ. ಅದರಲ್ಲೂ ದೇವಿಯ ತಾತ, ಹಿರಿಯರಾದ ನೀಲಕಂಠಪ್ಪನವರು ಕಾಲವಾದ ಮೇಲೆ ಊಹಿಸಲಾರದಷ್ಟು ಅಂತರ್‌ಮುಖಿಯಾಗಿದ್ದಾನೆ. ಯಾವ್ಯಾವರೀತಿಯಲ್ಲಿ ಬಾಯಿ ಬಿಡಿಸಲು ಪ್ರಯತ್ನಿಸಿ ಗಣಪ ಸೋತುಹೋಗಿದ್ದ. ಅವನ ತಲೆಯಲ್ಲಿ ಏನೇನು ಆಲೋಚನೆಗಳಿವೆಯೋ ಆ ಪರಮಾತ್ಮನೇ ಬಲ್ಲ. ತನ್ನ ಮನೆ, ಜಮೀನು, ತನ್ನವರು ಎಂದು ಅಕ್ಕರೆಯಿಂದ ಅಲ್ಲೇ ತನ್ನ ಬದುಕನ್ನು ಕಟ್ಟಿಕೊಂಡು ಇತರರ ಬದುಕಿಗೂ ಮಾದರಿಯಾಗಿದ್ದ. ಈಗ ತಿರುಗಾಡುವುದನ್ನೇ ತನ್ನ ವೃತ್ತಿಯ ಒಂದು ಭಾಗವಾಗಿಸಿಕೊಂಡಿದ್ದಾನೆ. ಅಪ್ಪಿತಪ್ಪಿಯೂ ತನ್ನ ಪತ್ನಿಯ ಬಗ್ಗೆ ಬಾಯಿಬಿಡುತ್ತಿಲ್ಲ. ಬಲವಂತವಾಗಿ ಇವನೇ ಕೇಳಿದರೆ ಏನೋ ಚುಟುಕಾಗಿ ಉತ್ತರಿಸುತ್ತಾನೆ. ಗಂಡ ಹೆಂಡತಿ ಇಬ್ಬರೂ ವಿದ್ಯಾವಂತರು, ಬುದ್ಧಿವಂತರು. ಏನಾಗಿದೆ ಇವರಿಗೆ? ಇತ್ತೀಚೆಗೆ ಮೇಲಿಂದಮೇಲೆ ಇಲ್ಲಿಗೆ ಬರುತ್ತಿರುತ್ತಾನೆ. ಗಣಪನು ಸ್ನೇಹದ ಮೇಲೆ ಆಣೆಭಾಷೆಯಟ್ಟು ಪ್ರಯತ್ನಿಸಿದ ಮೇಲೆ ಸ್ವಲ್ಪ ಸ್ವಲ್ಪವೇ ಗುಟ್ಟನ್ನು ಬಾಯಿಬಿಟ್ಟಿದ್ದ. ಆ ಸುದ್ಧಿಯನ್ನು ಕೇಳಿ ಗಣಪ ಹೌಹಾರಿದ್ದ. ಸಂಬಂಧವನ್ನು ಸರಿಪಡಿಸಿಕೊಳ್ಳಲು ಈಗಾಗಲೇ ಬಹಳ ತಡವಾಗಿದೆ ಎನ್ನಿಸಿ ಗಣಪನೇ “ಗೆಳೆಯಾ ನಿನಗೆ ಔಷಧೋಪಚಾರ ಬೇಕಾಗಿರುವುದು ದೇಹಕ್ಕಲ್ಲ ಮನಸ್ಸಿಗೆ. ನಾನೂ ಕೌನ್ಸೆಲ್ಲಿಂಗ್ ಕಲಿತಿದ್ದೇನೆ, ಜ್ಯೋತಿಷ್ಯಕ್ಕಿಂತ ನನಗೆ ಇದೇ ಹೆಚ್ಚು ಇಷ್ಟವಾದದ್ದು. ಆದರೆ ಕೆಲವರು ನನಗಿಂತಲೂ ಹೆಚ್ಚು ತಿಳಿದವರಿದ್ದಾರೆ. ನಾನು ಅವರಿಂದಲೇ ತರಬೇತಿ ಪಡೆದಿದ್ದು ಎಂದು ಹೇಳಿ ಡಾ. ಶರ್ಮಾರವರಿಗೆ ಮಹೇಶನ ಸಮಸ್ಯೆಯ ಬಗ್ಗೆ ಸೂಕ್ಷ್ಮವಾಗಿ ತಿಳಿಸಿ ಅವರಿಗೆ ಗೆಳೆಯನನ್ನು ಪರಿಚಯ ಮಾಡಿಕೊಟ್ಟು ಅವನ್ನೊಪ್ಪಿಸಿದ್ದ.
ಡಾ. ಶರ್ಮಾರವರು ಚಿಕಿತ್ಸೆ ಪ್ರಾರಂಭಿಸಿದ್ದರು. ಅಲ್ಪ ಸ್ವಲ್ಪ ಬದಲಾವಣೆಯೂ ಕಂಡುಬರುತ್ತಿದೆ. ಈ ವಿಷಯವನ್ನು ಬೇರೆಲ್ಲೂ ತಿಳಿಸದಂತೆ ಮಹೇಶ ಗಣಪನಿಗೆ ಕಟ್ಟಾಜ್ಞೆ ಮಾಡಿ ಬೇಡಿದ್ದಾನೆ. ಅವನ ಮನಸ್ಸಿನ ಮೇಲೆ ಇಷ್ಟೊಂದು ಪರಿಣಾಮ ಬೀರಿದ ಪ್ರಕರಣ ಯಾವುದೆಂದು ಗಣಪ ಗೆಳೆಯನಿಗಾಗಿ ಹಗಲೂ ಇರುಳೂ ಚಿಂತಿಸಿ ಹಣ್ಣಾಗಿದ್ದಾನೆ.
ಹಿಂದಿನ ವಾರ ಡಾ.ಶರ್ಮಾರವರು ಸಿಕ್ಕಿದ್ದರು. ನೀವು ನಿಮ್ಮ ಗೆಳೆಯನಿಗೆ ತಿಳಿಸಿ ಅವರ ಹೆಂಡತಿ ಕೂಡ ಸಲಹೆಗಾಗಿ ಬರಬೇಕಾಗುತ್ತದೆ. ಎರಡು ವಾರದಿಂದ ಅವರಿಗೆ ಹೇಳುತ್ತಿದ್ದೇನೆ. ಇಂದು ನಾಳೆ ಎಂದು ಮುಂದೂಡುತ್ತಲೇ ಇದ್ದಾರೆ. ದಯವಿಟ್ಟು ಅವರನ್ನೊಪ್ಪಿಸಿ ಎಂದು ಹೇಳಿದ್ದರು. ಅವರ ಸೂಚನೆಯಂತೆ ಗಣಪ ತನ್ನ ಗೆಳೆಯನನ್ನು ಕೂಡಿಸಿಕೊಂಡು ಗಿಳಿಗೆ ಹೇಳುವಂತೆ ತಿಳಿಯಹೇಳಿದ್ದ. ಆದರೆ ಅವನು ನನ್ನದೆಲ್ಲವೂ ಮುಗಿಯಲಿ ಕೊನೆಯ ಹಂತದಲ್ಲಿ ಅವಳು ಬರಲೇಬೇಕಾದರೆ ನೋಡೋಣ. ಅವಳ ಮುಂದೆ ನಾನು ಚಿಕ್ಕವನಾಗುವುದು ನನಗಿಷ್ಟವಿಲ್ಲ. ಅವಳಿಗೆ ನನ್ನ ಮೇಲೆ ತಾತ್ಸಾರ ಬರಬಹುದು. ಮನೆಯಲ್ಲೇನಾದರೂ ಇದು ಗೊತ್ತಾದರೆ ನನ್ನ ಗೌರವ ಮಣ್ಣುಪಾಲು. ಹಾಗೇ ಹೀಗೆಂದು ದಿನಗಳನ್ನು ತಳ್ಳುತ್ತಲೇ ಇದ್ದಾನೆ. ಕಾರಣ ಕೇಳಲೂ ಆಗುತ್ತಿಲ್ಲ. ವಿಷಯ ಗೋಪ್ಯವಾದದ್ದು ಎನ್ನುತ್ತಾರೆ ಡಾಕ್ಟರ್. ಇದನ್ನೆಲ್ಲ ಯಾರ ಹತ್ತಿರ ಹೇಳಲು ಸಾಧ್ಯ. ಹೇಗಿದ್ದವ ಹೇಗಾದ ! ನಿನ್ನ ಜಾತಕ ಕೊಡು ಅದರಲ್ಲೇನಾದರೂ ದೋಷವಿದ್ದರೆ ಶಾಂತಿಪೂಜೆ ಮಾಡುತ್ತೇನೆಂದರೆ ಊಹೂಂ ಜಪ್ಪಯ್ಯಾಂದಿಲ್ಲ. ಹೆಸರಿನ ನಾಮನಕ್ಷತ್ರದ ಪ್ರಕಾರ ಅದನ್ನೆಲ್ಲಾ ಕಂಡುಹಿಡಿಯಲಾಗದು. ಸ್ನೇಹಿತನಾಗಿ ಕುದುರೆಯನ್ನು ನೀರಿರುವ ಕಡೆಗೆ ಕರೆದುಕೊಂಡು ಹೋಗಬಹುದು ಅದನ್ನು ಮಾಡಿದ್ದೇನೆ. ಅದು ನೀರು ಕುಡಿಯುವುದು ಅದರ ಮರ್ಜಿ. ಬಲವಂತವಾಗಿ ಕುಡಿಸಲು ಸಾಧ್ಯವೆ? ಗಣಪತಿಯಷ್ಟೇ ಆತ್ಮೀಯನಾದ ಡಾ.ಚಂದ್ರಪ್ಪನ ಬಳಿಯಲ್ಲೂ ಬಾಯಿ ತೆಗೆದಿಲ್ಲ. ಪುಣ್ಯಕ್ಕೆ ನನ್ನ ಒತ್ತಾಯದಿಂದ ಡಾ.ಶರ್ಮಾರ ಬಳಿ ಹೋಗಿದ್ದಾನೆ. ನೋಡೋಣವೆಂದು ಗೆಳೆಯನಿಗಾಗಿ ಅವನ ಹೆಸರಿನಲ್ಲಿ ಅರ್ಚನೆ ಮಾಡುತ್ತ ಹಾರೈಸುವದಷ್ಟೇ ನನ್ನ ಕೆಲಸ ಎಂದುಕೊAಡು ಹೊದ್ದು ಮಲಗಿದ.
ಇತ್ತ ಗಂಗಾಧರಪ್ಪನವರ ಮನೆಯಲ್ಲಿ ದೇವಿ ತನ್ನ ಅಂಗಡಿಯ ಕೆಲಸವನ್ನು ಮುಗಿಸಿ ಕೆಲಸಗಾರರನ್ನು ಮನೆಗೆ ಕಳುಹಿಸಿ ಮನೆಗೆ ಬಂದಳು. ಸ್ನಾನ ಪೂಜೆ ಮಾಡಿ ಅಡುಗೆ ಕೆಲಸದಲ್ಲಿ ಮಗ್ನಳಾದಳು.
ಸುಮಾರು ಸಂಜೆಯ ಸಮಯದಲ್ಲಿ ಮಹೇಶನ ಆಗಮನವಾಯಿತು. ಬಾಗಿಲು ತೆರೆದು ಏನು ಎತ್ತ ಎಂದು ಪ್ರಶ್ನಿಸದೆ ತನ್ನ ಅಡುಗೆಯ ಕೆಲಸ ಮುಂದುವರೆಸಿದಳು. ಅವಳು ಕೇಳುವುದಾಗಲೀ, ಇವನು ಹೇಳುವುದಾಗಲೀ ತಾತ ನೀಲಕಂಠಪ್ಪನವರು ತೀರಿಹೋದ ನಂತರ ನಿಂತೇ ಹೋಗಿದ್ದವು. ಔಪಚಾರಿಕವಾಗಿ “ಮಹೀ ಊಟ ಲೇಟಾಗಿಯೋ ಇಲ್ಲ” ಎಂದಷ್ಟೇ ಕೇಳಿದಳು ದೇವಿ.
“ಇಲ್ಲ ಸ್ನಾನ ಮುಗಿಸಿ ಪೂಜೆ ಮಾಡಿ ಬರುತ್ತೇನೆ. ಅಡುಗೆಯಾಗಿದ್ದರೆ ಬಡಿಸಿಬಿಡು ದೇವಿ” ಎಂದಷ್ಟೇ ಚುಟುಕಾಗಿ ಹೇಳಿದ. ತನ್ನ ಕೆಲಸಗಳನ್ನು ಮುಗಿಸಿ ಊಟಮಾಡಿ ಮಹಡಿಯನ್ನೇರಿದ.
ಓ. ಮನೆಯವರೆಲ್ಲ ಮದುವೆಗೆ ಹೋಗಿರುವ ವಿಷಯ ಇವರಿಗೆ ತಿಳಿದಿರಬೇಕು. ಸುಬ್ಬು ಹೇಳಿರಬಹುದು. ಇಲ್ಲವೇ ಅತ್ತೆ ಮಾವನಿಂದ ತಿಳಿದಿರಬೇಕು. ಇವರಿಗೆ ಹೋಗಲಿಷ್ಟವಿರದೆ ಏನೋ ಸಬೂಬು ಹೇಳಿರುತ್ತಾರೆ. ಇವರು ಹೋಗದ್ದರಿಂದ ನಾನು ಉಳಿದೆ. ನನಗೂ ಬೇಕಾದದ್ದು ಅದೇ. ಈ ದಿನಕ್ಕಾಗಿ ನಾನೂ ಕಾಯುತ್ತಿದ್ದೆ. ಇವರು ಮನೆಗೆ ಬಂದೇ ಬರುತ್ತಾರೆಂಬ ಖಾತರಿಯಿತ್ತು. ಈಗ ರೂಮಿಗೆ ಹೋಗಿದ್ದಾರೆ. ಅಲ್ಲಿ ನಾನಿರಿಸಿದ ಪತ್ರವನ್ನು ನೋಡಬಹುದು. ಓದಿದ ಮೇಲೆ ಸಿಟ್ಟಾಗಬಹುದು. ಅಥವಾ ಅರ್ಥಮಾಡಿಕೊಂಡು ಒಪ್ಪುತ್ತಾರೋ ನೋಡಬೇಕು. ಒಂದು ವೇಳೆ ಪತ್ರವನ್ನು ನೋಡದೆ ಓದದಿದ್ದರೆ ನಂತರ ನಾನೇ ಅವರ ಕೈಗೆ ಕೊಡುವುದು. ತಾತ ತೀರಿಹೋದಮೇಲೆ ಹೊರಗಡೆ ಮಾತನಾಡುವುದೇ ಬೇಡವೆಂದು ತೀರ್ಮಾನ ತೆಗೆದುಕೊಂಡಾಗಿದೆ. ಮಹೀ ಇತ್ತೀಚೆಗೆ ಹೊರಗೆ ನನ್ನೊಬ್ಬಳನ್ನೇ ಜೊತೆಯಗಿ ಕರೆದುಕೊಂಡು ಹೋಗುವುದನ್ನೆ ಬಿಟ್ಟುಬಿಟ್ಟಿದ್ದಾರೆ. ಎಲ್ಲಿ ಹೋದರೂ ಕುಟುಂಬದವರೊಡನೆ ಮಾತ್ರ. ಪೂರ್ತಿಯಾಗಿ ಒಬ್ಬರಿನ್ನೊಬ್ಬರನ್ನು ಎದುರುಬದರಾಗಿ ನೋಡಿಯೇ ಎಷ್ಟೋ ಕಾಲವಾಯಿತು. ಜಡ್ಡು ಜಾಪತ್ರೆಗಳಾಗಲೀ, ಬೇಕು ಬೇಡಗಳಾಗಲೀ ಯಾವುವೂ ತಮ್ಮಿಬ್ಬರನ್ನು ಹತ್ತಿರಕ್ಕೆ ತರಲೇ ಇಲ್ಲ. ಅವರಿಗೇ ಅಷ್ಟೊಂದು ಅಹಂ ಇರುವಾಗ ನಾನೇಕೆ ಮಣಿಯಬೇಕು. ಕುಳಿತು ಮಾತನಾಡುವ ಸೌಜನ್ಯವೂ ಇಲ್ಲ. ಹೊರಗಡೆ ನೋಡಬೇಕು ನಾಟಕಕಾರನಂತೆ ಪೋಸು. ತನ್ನ ದೌರ್ಬಲ್ಯವನ್ನು ಒಪ್ಪಿಕೊಳ್ಳದವರು. ನಾನ್ಯಾಕೆ ಹೆದರಿಕೊಳ್ಳಬೇಕು. ಇವತ್ತಂತೂ ಮನೆಯಲ್ಲಿ ಯಾರೂ ಇಲ್ಲ. ಅಪರೂಪಕ್ಕೆ ಕುಟುಂಬ ಪರಿವಾರಸಮೇತ ಮದುವೆಗೆಂದು ಹೋಗಿದ್ದಾರೆ. ನಾಳೆಯೇ ಬರುವುದು. ಅಷ್ಟರಲ್ಲಿ ನಾನಂದುಕೊAಡಿದ್ದನ್ನು ಇತ್ಯರ್ಥ ಮಾಡಬೇಕು. ಅವರಿಗೇನು ಗಂಡಸರು ಹೇಗಾದರೂ ನಡೆಯುತ್ತದೆ. ನಾನು ಹೆಂಗಸು ಹೊರಗಡೆ ಜನಗಳಿಂದ ಕೇಳುವ ಮಾತುಗಳು.. ಮನೆಯವರ ಪರೀಕ್ಷಾನೋಟಗಳಿಂದ ಬೇಸತ್ತು ಹೋಗಿದೆ ನನ್ನ ಜೀವ. ಅದಕ್ಕೇ ನಾನು ಈ ನಿರ್ಧಾರ ತೆಗೆದುಕೊಂಡದ್ದು. ನನ್ನ ಮನಸ್ಸು ಒಡಂಬಡಿಸಿದ್ದು…
ಹೀಗೇ ಆಲೋಚನಾಲಹರಿ ಹರಿಯುತ್ತಿದ್ದಂತೆ ಮಹಡಿಯ ಮೆಟ್ಟಿಲುಗಳನ್ನು ಇಳಿದ ಸದ್ದು ಜೊತೆಗೆ “ದೇವೀ ಏನಿದೆಲ್ಲಾ?” ಎಂದು ಅಬ್ಬರದ ದನಿಯಲ್ಲಿ ಬಂದ ಕೂಗು ಅವಳನ್ನು ಎಚ್ಚರಿಸಿತು. ತಾನು ಮಾಡುತ್ತಿದ್ದ ಕೆಲಸವನ್ನು ಅಲ್ಲಿಯೇ ಬಿಟ್ಟು “ಏನು ಮಹೀ ಇಷ್ಟೊಂದು ಗಟ್ಟಿಯಾಗಿ ಕೂಗುತ್ತಿದ್ದೀರಿ? ನನಗೆ ಕಿವಿ ಕೇಳಿಸುತ್ತದೆ ಕೆಪ್ಪಿಯಲ್ಲ” ಎಂದು ಆತನ ಮುಂದೆ ಬಂದು ನಿಂತಳು.
“ಅಹಾ ! ಮಳ್ಳಿ ಮಳ್ಳಿ ಮಂಚಕ್ಕೆ ಎಷ್ಟು ಕಾಲು ಅಂದರೆ ಮೂರು ಮತ್ತೊಂದು ಅಂದಳಂತೆ. ಈ ಪತ್ರ ನೀನೇ ಬರೆದದ್ದು ತಾನೇ? ಇದನ್ನು ನೋಡಿಯೂ ಸುಮ್ಮನೆ ಇರಬೇಕೇ? ನೀನು ಇಷ್ಟರಮಟ್ಟಿಗೆ ಬದಲಾಗುತ್ತೀ ಎಂದು ಅಂದುಕೊಂಡಿರಲಿಲ್ಲ. ಇದರ ಪರಿಣಾಮವೇನು ಗೊತ್ತಾ? ನಿನ್ನ ಅವಿವೇಕದಿಂದ ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದ ನಿಮ್ಮ ತಾತನ ಸಾವಿಗೆ ನೀನೇ ಕಾರಣಳಾದೆ. ಈಗ ಇದೊಂದನ್ನು ಮಾಡಲು ಹೋಗಿ ಮತ್ಯಾರನ್ನು ಕಳೆದುಕೊಳ್ಳಬೇಕೆಂದಿದ್ದೀಯೆ? ಇಲ್ಲವೇ ನನ್ನ ಮಾನ ಮರ್ಯಾದೆಯನ್ನು ಬೀದಿಪಾಲು ಮಾಡಬೇಕೆಂದಿದ್ದೀಯೋ?” ಕೋಪಾವಿಷ್ಟನಾಗಿ ಹಲ್ಲು ಕಚ್ಚುತ್ತಾ ಆರ್ಭಟಿಸತೊಡಗಿದ. ಮಹೇಶ.
ಅವನ ರೌದ್ರಾವತಾರ ಕಂಡ ದೇವಿ ಒಂದರೆಕ್ಷಣ ಬೆಚ್ಚಿದಳು.
ತಕ್ಷಣ ಸಾವರಿಸಿಕೊಂಡು “ಏನೆಂದಿರಿ ನನ್ನ ಅವಿವೇಕದಿಂದ ತಾತ ಕಾಲವಾದರೇ? ಇದರಲ್ಲಿ ನಿಮ್ಮ ಪಾತ್ರವೇನು ಇರಲಿಲ್ಲವೆ? ನಿಮ್ಮಿಂದ ನನಗಾಗಿರುವ ಸ್ಥಿತಿ ತಿಳಿದೇ ಗುಂಡಿಗೆ ಒಡೆದುಹೋಯಿತು. ಅದಕ್ಕೆ ಕಾರಣ ನಿಮಗೇ ಗೊತ್ತಿರಬೇಕು. ಅದಾದ ನಂತರವು ಎಚ್ಚೆತ್ತುಕೊಂಡಿರಾ ಹೇಳಿ? ಬಂಡೆಗಲ್ಲಿನಂತಾದಿರಿ. ನಾನೇನು ಮಾಡಲಿ ಹಿರಿಯರ ಮೂಕವೇದನೆ, ಹೊರಗಿನ ಜನರ ಥರಥರದ ಮಾತುಗಳನ್ನು ಎಷ್ಟೆಂದು ಸಹಿಸಲಿ. ಎಷ್ಟು ಕಾಲವೆಂದು ಕಾಯುತ್ತಿರಲಿ. ಅದು ನನ್ನದೇನೂ ತಪ್ಪಿಲ್ಲದೆ. ಅದಕ್ಕೇ ರೋಸಿಹೋಗಿ ಹೀಗೆ ನಿಶ್ಚಯಕ್ಕೆ ಬಂದಿದ್ದೇನೆ. ಕೇಳಿಸಿಕೊಳ್ಳಿ ಗಂಡುಹೆಣ್ಣಿನ ಸಮಾಗಮ ಪದವನ್ನು ನನ್ನ ಬದುಕಿನಿಂದ ತೆಗೆದುಹಾಕಿಬಿಟ್ಟಿದ್ದೇನೆ. ಹಾಗೆಂದು ತಾಯ್ತನ ಹೊಂದುವ ನನ್ನ ಹಕ್ಕನ್ನು ಕಿತ್ತುಕೊಳ್ಳುವ ಅಧಿಕಾರ ನಿಮಗಿಲ್ಲ. ಆದರೆ ನಾನೊಬ್ಬ ಕನ್ಯೆಯಾಗಿದ್ದುಕೊಂಡೇ ಒಂದು ಮಗುವಿನ ತಾಯಿಯಾಗುತ್ತೇನೆ. ಇದಕ್ಕೆ ವಿಜ್ಞಾನದ ಕೊಡುಗೆಯೂ ಇದೆ. ಕಾನೂನಿನಲ್ಲೂ ಅವಕಾಶವಿದೆ. ಜನರ ದೃಷ್ಟಿಯಲ್ಲಿ ಪತಿಯ ಸ್ಥಾನದಲ್ಲಿ ನೀವಿದ್ದೀರಲ್ಲಾ. ಮೈಯಿನ ತೆವಲು ತೀರಿಸಿಕೊಳ್ಳಲು ನಾನು ಯಾರ ಬಳಿಯೂ ಹೋಗಿಲ್ಲ. ಹೋಗುವುದೂ ಇಲ್ಲ. ‘ಮಡಿಲು ಫರ್ಟಿಲಿಟಿ’ ಕ್ಲಿನಿಕ್ಕಿನಲ್ಲಿ ಡಾ.ನಂದಿನಿಯವರ ಸಲಹೆಯಂತೆ ನನ್ನ ಅಂಡಾಣುವನ್ನು ಶೀತಲೀಕರಿಸಿ ಶೇಖರಿಸಿಡಲಾಗಿದೆ. ವೀರ‍್ಯ ದಾನಿಯ ಹುಡುಕಾಟ ನಡೆಸಿ ಹಿನ್ನೆಲೆ ಯೋಗ್ಯವಾದವರಿಂದ ವೀರ‍್ಯಾಣುವನ್ನು ಪಡೆದುಕೊಂಡು ಕಾಪಾಡಿದ್ದಾರೆ. ಮುಹೂರ್ತಕ್ಕಾಗಿ ಕಾಯುತ್ತಿದ್ದಾರೆ. ನಿಮಗೆ ತಿಳಿಸದೇ ಮುಂದಿನ ಕ್ರಮ ಜರುಗಿಸುವುದು ಸರಿಯಲ್ಲವೆಂದು ಬಹಳ ಆಲೋಚಿಸಿ ಈ ಪತ್ರ ಸಿದ್ಧಪಡಿಸಿದ್ದೇನೆ. ಬರೆದು ಬಹಳ ಕಾಲವಾಗಿದ್ದರೂ ಅದನ್ನು ನಿಮ್ಮ ಅವಗಾಹನೆಗೆ ತರಲು ಇವತ್ತು ಕಾಲ ಕೂಡಿಬಂತು. ಈಗಲೂ ಕಾಲಮಿಂಚಿಲ್ಲ. ಆ ವೀರ‍್ಯದಾನಿ ನೀವೇ ಆಗಿ ಪುರುಷತ್ವದ ಪ್ರಯೋಜನವಾಗಲಿ. ಇಲ್ಲವಾದಲ್ಲಿ ಎಲ್ಲವನ್ನೂ ಗೋಪ್ಯವಾಗಿಯೇ ಮಾಡಿಕೊಂಡು ನಾನು ಹಡೆಯುವ ಮಗುವಿಗೆ ತಂದೆಯ ಸ್ಥಾನ ಕರುಣಿಸಿ. ಎಷ್ಟೋ ಜನರಿಗೆ ಮದುವೆಯಾದ ಹತ್ತು ಹನ್ನೆರಡು ವರ್ಷಗಳ ನಂತರ ಮಕ್ಕಳ ಬಾಗ್ಯ ಒದಗುತ್ತದಲ್ಲಾ ಆದ್ದರಿಂದ ಇದೇನೂ ಅಚ್ಚರಿಯ ಸಂಗತಿಯಾಗುವುದಿಲ್ಲ.” ಎಂದಳು.
“ದೇವಿ..ಸಾಕುಮಾಡು. ನೀನು ಬಳಸುವ ಪದಗಳನ್ನು ಕೇಳಲು ನನಗೆ ಛೀ..…ಇದೇ ನಿನ್ನ ಅಂತಿಮ ನಿರ್ಧಾರವೇ?” ಎಂದು ಚೀರಾಡುತ್ತ ಕೈಲಿದ್ದ ಪತ್ರವನ್ನು ಚೂರುಚೂರಾಗಿ ಹರಿದು ಹಾಕಿದ. ಮುಂಬಾಗಿಲನ್ನು ಧಢಾರನೆ ಹಾಕಿ ಉಟ್ಟ ಬಟ್ಟೆಯಲ್ಲೇ ಹೊರನಡೆದ ಮಹೇಶ.
ಗಾಭರಿಗೊಂಡ ದೇವಿ ಅವನ ಹಿಂದೆಯೇ ಓಡಿಬಂದು “ಮಹೀ..ನಾನು ಹೇಳುವುದನ್ನು ಈಗಲಾದರೂ ಕೇಳಿ. ಕುಳಿತು ನಿಮಗೆ ಏನಾಗಿದೆ, ಏನಾಗುತ್ತಿದೆ ಎಂಬುದನ್ನು ಹೇಳಿ ಪ್ಲೀಸ್. ಇಷ್ಟೊತ್ತಿನಲ್ಲಿ ಎಲ್ಲಿಗೆ ಹೋಗುತ್ತೀರಿ?” ಎಂದು ಅವನ ರೆಟ್ಟೆಯನ್ನು ಹಿಡಿದು ಎಳೆದಳು.
ಊಹುಂ ಅವಳ ಕೈಯನ್ನು ಕಿತ್ತು ಹಾಕಿದವನೇ ಗಾಡಿಯನ್ನು ಸ್ಟಾರ್ಟ್ ಮಾಡಿ ಹೊರಟೇಹೋದ ಮಹೇಶ.
ಈ ಕಾದಂಬರಿಯ ಹಿಂದಿನ ಚರಣ ಇಲ್ಲಿದೆ: https://www.surahonne.com/?p=41070
(ಮುಂದುವರಿಯುವುದು)
–ಬಿ.ಆರ್.ನಾಗರತ್ನ, ಮೈಸೂರು
ಪ್ರಕಟಣೆಗಾಗಿ ಧನ್ಯವಾದಗಳು ಗೆಳತಿ ಹೇಮಾ
ತುಂಬಾ ಚೆನ್ನಾಗಿ ಸಾಗುತ್ತಿದೆ ಕತೆ.
ಧನ್ಯವಾದಗಳು ನಯನಮೇಡಂ
ಒಂದು ರೀತಿಯಲ್ಲಿ ದ್ರೋಹ ವೆಸಗುತ್ತಿದ್ದಾನೆ ಮಹೇಶ ತನ್ನ ಹೆಂಡತಿಗೆ.
ಹೊಸ ವಿಷಯ….. ಪ್ರಸ್ತುತ ಸಮಾಜದಲ್ಲಿ ನಡೆಯುವ ಪ್ರಸಂಗಗಳನ್ನು ಬಿಂಬಿಸುವ ಬರಹ ಬಹಳ ಕುತೂಹಲಕಾರಿಯಾಗಿದೆ….ಮುಂದಿನವಾರಕ್ಕೆ ಕಾಯುವಂತೆ ಮಾಡುತ್ತಿದೆ.ತುಂಬಾ ಚೆನ್ನಾಗಿದೆ ಮೇಡಂ
ಧನ್ಯವಾದಗಳು ಸಾರ್
ಮಹೇಶ ಮತ್ತು ದೇವಿಯ ಸಂಸಾರ ನೌಕೆಯು ತೊಯ್ದಾಡುತ್ತಿದೆಯಲ್ಲಾ… !!
ಮುಂದೇನು ಎಂದು ಕುತೂಹಲದಿಂದ ಕಾಯುವಂತಾಗಿದೆ.
ಚಂದದ ಕಥಾಹಂದರ…ನಾಗರತ್ನ ಮೇಡಂ.
ನಿಮ್ಮ ಪ್ರತಿ ಕ್ರಿಯೆಗೆ ಧನ್ಯವಾದಗಳು ಶಂಕರಿ ಮೇಡಂ
ಎಷ್ಟು ಚಂದದ ಸಂಸಾರ ಕುಳಿತು ಮಾತನಾಡದೇ, ಮಾತನಾಡಿ ಇರುವ ಸಮಸ್ಯೆಯನ್ನು ಬಗೆಹರಿಸಿಕೊಳ್ಳದೆ ಹಳಿ ತಪ್ಪುತ್ತಿದೆಯಲ್ಲಾ, ವಿಷಾದವೆನಿಸುತ್ತಿದೆ.