ಮಾತೃ-ಆರಾಧನಾ ಪರಂಪರೆ
ಚಿಂತನ ಧಾರೆ: ಪ್ರಾಚೀನ ಕಾಲದಿಂದಲೂ ಭಾರತದಲ್ಲಿ ಇದ್ದ ಚಿಂತನೆ ಮತ್ತು ಪೂಜಾ ಪರಂಪರೆಯನ್ನು ವಿದ್ವಾಂಸರು ವಿಭಿನ್ನವಾದ ಮತ್ತು ಸಮಾನಾಂತರವಾದ ವೈದಿಕ, ಅವೈದಿಕ ಎಂದು ವರ್ಗೀಕರಿಸಿದರೆ ಮನುಸ್ಮೃತಿಗೆ ಬಹಳ ವ್ಯಾಪಕವಾದ ಅರ್ಥವಿವರಣೆಯನ್ನು ಮೊಟ್ಟಮೊದಲಿಗೆ ಕೊಟ್ಟ ಕಲ್ಲುಭಟ್ಟನು ವೈದಿಕ, ತಾಂತ್ರಿಕ ಎಂದು ವಿಭಾಗಿಸಿದ್ದಾನೆ. ಮೊದಲನೆಯದು ಪುರುಷ-ಕೇಂದ್ರಿತ ಸಾಮಾಜಿಕ ವ್ಯವಸ್ಥೆ ಆಧಾರಿತ, ಎರಡನೆಯದು ಸ್ತ್ರೀ-ಕೇಂದ್ರಿತ ಫಲವಂತಿಕೆ ಆಧಾರಿತ ಎನ್ನುತ್ತಾನೆ.
ನಮ್ಮ ದೇಶದ ಅತ್ಯಂತ ಪ್ರಾಚೀನವಾದ ಪವಿತ್ರವಾದ ದಾಖಲೆಗಳಾದ ವೇದಗಳು ಪುರುಷ ದೈವಗಳಿಗೆ ಪ್ರಾಮುಖ್ಯತೆಯನ್ನುಕೊಟ್ಟಿದ್ದಂತೆ ಅದಿತಿ, ಉಷಸ್, ಭೂದೇವಿ, ವಾಗ್ದೇವಿ, ವಾಕ್, ಸರಸ್ವತೀ, ಪೃಥ್ವೀ, ಶ್ರದ್ಧಾ, ನಿರಿತಿ (annihilator)ಯರಿಗೂ ವಿಶೇಷ ಸ್ಥಾನಮಾನವನ್ನು ಕೊಟ್ಟಿವೆ. ಅವರನ್ನು ಇಂದ್ರ, ಅಗ್ನಿ ಮತ್ತು ಸೋಮ – ಇವರಿಗೆ ಕೊಟ್ಟಷ್ಟೇ ಗೌರವದಿಂದ ಕಂಡಿವೆ. ಈ ದೇವಿಯರನ್ನು ಸ್ತ್ರೀ, ಪುರುಷ ಎರಡೂ ಅಲ್ಲದ ಪ್ರಜಾಪತಿ, ಪುರುಷ, ಬ್ರಹ್ಮನ್ ಗೆ ಸಮಾನ ಎಂದು ಪರಿಗಣಿಸಿವೆ. ಉಪನಿಷತ್ತುಗಳು ಸ್ತ್ರೀ ಮತ್ತು ಪುರುಷ ತತ್ತ್ವಗಳಿಗೆ ಸಮಾನ ಮಹತ್ವ ಕೊಟ್ಟು ಸ್ತ್ರೀ ಪರದೈವವನ್ನು ಪ್ರಕೃತಿ ಎಂದು ಹೆಸರಿಸಿ ವಾಸ್ತವತೆಯು ಪ್ರಕೃತಿ ಮತ್ತು ಪುರುಷ ತತ್ತ್ವಗಳ ನಡುವಿನ ಸಾಮರಸ್ಯತೆ, ಹೊಂದಾಣಿಕೆಯನ್ನು ಒಳಗೊಳ್ಳುತ್ತದೆ ಎನ್ನುತ್ತವೆ. ಕೇನ ಉಪನಿಷತ್ತಿನಲ್ಲಿ ಬ್ರಹ್ಮ ತತ್ತ್ವಕ್ಕೆ ಸಮಾನವಾಗಿ ಉಮಾ ಪರಿಗಣಿತ ಆಗಿದ್ದಾಳೆ.
ದೇವೀ ಸೂಕ್ತ-ಗೀತ: ಋಗ್ವೇದದ ದಶಮ ಮಂಡಲದ 125ನೇ ಮಂತ್ರದಲ್ಲಿ 3-8 ರ ವರೆಗಿನ ಸಾಲುಗಳನ್ನು ದೇವೀ ಸೂಕ್ತ ಎನ್ನುತ್ತಾರೆ. ಅದು ದೇವಿಯ ಒಂದು ರೀತಿಯ ಸ್ವ-ಘೋಷಣೆ “ನಾನು ರಾಣಿ, ನಿಧಿಗಳ ಸಂಗ್ರಾಹಕಿ, ಅತ್ಯಂತ ಹೆಚ್ಚು ವಿಚಾರಪರಳು, ಆರಾಧನಾ ಮಹತ್ವವನ್ನು
ಗುರುತಿಸುವವರ ಸಾಲಿನಲ್ಲಿ ನಾನು ಪ್ರಥಮಳು…… ನನ್ನ ಮೂಲಕ ಮಾತ್ರ ಎಲ್ಲರೂ ತಮಗೆ ದೊರೆತ ಆಹಾರವನ್ನು ತಿನ್ನಲು ಸಾಧ್ಯ;ನೋಡಲು, ಉಸಿರಾಡಲು, ಮುಚ್ಚುಮರೆಯಿಲ್ಲದೆ ಮಾತಾಡಿದುದನ್ನು ಕೇಳಲು ಸಾಧ್ಯ. ಗೊತ್ತಿರಲೀ ಗೊತ್ತಿಲ್ಲದಿರಲಿ ನಾನು ವಿಶ್ವದ ಸಾರ.ದೇವತೆಗಳೂ, ಮನುಷ್ಯರೂ ಸ್ವಾಗತಿಸ ಬಹುದಾದ ಸತ್ಯವನ್ನು ಘೋಷಿಸುವವಳು ನಾನೇ. ತನ್ನ ಶಕ್ತಿ ಮೀರಿ ಮನುಷ್ಯ ಎಲ್ಲವನ್ನೂಪ್ರೀತಿಸುವಂತೆ ಮಾಡುವವಳು, ಅವನನ್ನು ಪೋಷಿಸುವವಳು, ಅವನನ್ನು ಬ್ರಹ್ಮನ್ ಅನ್ನು ತಿಳಿಯುವ ಋಷಿಯನ್ನಾಗಿಸುವವಳೂ ನಾನೇ……ಶಾಶ್ವತವಾದ ಮತ್ತು ಅನಂತವಾದ ಪ್ರಜ್ಞೆ ನಾನೇ. ಇನ್ನೊಂದು ಹಿರಿದಾದ ಇರುವಿಕೆಯ ಅಗತ್ಯವಿಲ್ಲದೆ ನನ್ನ ಇಚ್ಛೆಯಿಂದಲೇ ಎಲ್ಲಪ್ರಪಂಚಗಳನ್ನು ಸೃಷ್ಟಿಸುತ್ತೇನೆ…. ಅಸ್ತಿತ್ವದಲ್ಲಿರುವ ಎಲ್ಲದರಲ್ಲೂ ಅವುಗಳ ಪರಮ ಆತ್ಮವಾಗಿ ತಾಯಿಯಂತೆ ವಾಸಿಸುತ್ತೇನೆ ಮತ್ತು ವ್ಯಾಪಿಸುತ್ತೇನೆ…..”
ದೇವೀ ಭಾಗವತ ಪುರಾಣದ ದೇವೀ ಗೀತದಲ್ಲಿ ದೇವಿಯು “ನಾನು ಮೂರ್ತರೂಪೀ ಹಾಗೂ ಅತೀತ ದೈವಿಕತೆ; ಬ್ರಹ್ಮ, ವಿಷ್ಣು, ಮಹೇಶ್ವರ ಮತ್ತು ಸರಸ್ವತೀ, ಲಕ್ಷ್ಮೀ, ಪಾರ್ವತೀ ಸಹ ಆಗಿದ್ದೇನೆ; ಸೂರ್ಯ, ನಕ್ಷತ್ರ, ಚಂದ್ರ, ಎಲ್ಲಾ ಪ್ರಾಣಿಗಳೂ ಪಕ್ಷಿಗಳೂ ಆಗಿದ್ದೇನೆ….ನಾನೇ ಶಿವನ ಸ್ತ್ರೀ ಮತ್ತು ಪುರುಷ ರೂಪ; ಹೆಸರು ಮತ್ತು ಹೆಸರು ಸೂಚಿಸುವ ಚರಾಚರಗಳ ನಡುವಿನ ಅಂತರವನ್ನು ನನ್ನ ಪವಿತ್ರ ಅಕ್ಷರ ಹ್ರೀಮ್ ಮೀರುತ್ತದೆ… ಯಾರು ನನ್ನನ್ನು ಕಾಲ-ದೇಶಾತೀತ ದೇವಿಯಂತೆ ಧ್ಯಾನಿಸುತ್ತಾರೋ ಅವರು ಅವರ ಆತ್ಮ ಮತ್ತು ನನ್ನ ನಡುವಿನ ಐಕ್ಯತೆ, ಏಕತೆಯನ್ನು ಮನನ ಮಾಡಿಕೊಂಡು ನನ್ನಲ್ಲಿ ವಿಲೀನಗೊಳ್ಳುತ್ತಾರೆ; ಯಾರು ನಾನೇ ಬ್ರಹ್ಮನ್, ನಾನೇ ಪ್ರಪಂಚದ ಸೃಷ್ಟಿಕರ್ತೃ,ವ್ಯಕ್ತಿಯ ಆತ್ಮ ಮತ್ತು ನನ್ನ ಬ್ರಹ್ಮನ್ ಸ್ವರೂಪ ಎರಡೂ ಒಂದೇ ಎಂದು ತಿಳಿಯುತ್ತಾರೋ ಅವರು ಮುಕ್ತರಾಗುತ್ತಾರೆ” ಎಂದು ಹೇಳುತ್ತಾಳೆ.
ಮಾರ್ಕಂಡೇಯ ಪುರಾಣದ ದೇವೀ ಮಹಾತ್ಮೆಯು “ಆದಿಮಾತೆಯ ಅಗಾಧ ಶಕ್ತಿಯು ಮನುಷ್ಯನ ದೇಹದಲ್ಲಿ ಪ್ರತಿಷ್ಠಾಪಿತ ಆಗಿದೆ. ಆ ಶಕ್ತಿ ಕೇಂದ್ರಗಳೇ ಮೂಲಾಧಾರ, ಸ್ವಾಧಿಷ್ಠಾನ ಮಣಿಪೂರ ಇತ್ಯಾದಿ ಚಕ್ರಗಳು. ಮೂಲಾಧಾರದಲ್ಲಿರುವ ಕುಂಡಲಿನೀ ಶಕ್ತಿಯನ್ನುಜಾಗೃತಗೊಳಿಸಿ ಅದು ಶಿರದಲ್ಲಿರುವ ಸಹಸ್ರಾರ ಚಕ್ರವನ್ನು ತಲುಪುವಂತೆ ಮಾಡಿದರೆ ಆದಿಮಾತೆಯ ಅಪಾರ ಸೃಷ್ಟಿ ಸ್ಥಿತಿ ಲಯ ಶಕ್ತಿಯ ಅನುಭವ ಪ್ರತಿಯೊಬ್ಬರಿಗೂ ಉಂಟಾಗುತ್ತದೆ. ಅದು ವೈಯಕ್ತಿಕ ಮಿತಿಗಳನ್ನು ಮೀರಿದ ಸಾಧ್ಯತೆಯಾಗಿ ಪರಮ ಸ್ವಾತಂತ್ರ್ಯದ ಪ್ರತೀಕ ಆದ ಮುಕ್ತಿಯೇ ಆಗಿರುತ್ತದೆ. ಈ ಸಾಧನಾ ಕ್ರಮವನ್ನು ಗುರುಮುಖೇನ ತಿಳಿದು ಅನುಸರಿಸಬೇಕು” ಎಂದು ಹೇಳುತ್ತದೆ.
ಶಕ್ತಿಪೀಠಗಳು: ಏಕ ದೇವಿ ಶಾಕ್ತ ಸಿದ್ಧಾಂತವು ಒಂದೇ ದೇವಿಯ ಅನೇಕ ರೂಪಗಳಾಗಿ ಶಕ್ತಿ-ದೇವತೆಗಳ ಇರುವಿಕೆಯನ್ನು ಮಾನ್ಯ ಮಾಡುತ್ತದೆ. ಕಾಳಿ, ಅಂಬಿಕಾ, ವಿಂಧ್ಯ ವಾಸಿನೀ, ಶಾರದಾ, ಲಲಿತಾ, ಗೌರೀ, ಶಿವದೂತಿ, ತ್ರಿಪುರ ಭೈರವೀ, ಭುವನೇಶ್ವರೀ, ಮಾತಂಗೀ, ಮೀನಾಕ್ಷೀ, ಯೋಗನಿದ್ರಾ, ಯೋಗಮಾಯಾ, ಸರ್ವಮಂಗಳಾ ಮತ್ತಿತರ ಪರಾಶಕ್ತಿ(ಆದಿಶಕ್ತಿ)ಯ ಅವತಾರಗಳ (ವಿವಿಧರೂಪಗಳ) ಆವಾಸ ಸ್ಥಾನಗಳೇ ಶಕ್ತಿಪೀಠಗಳು. ಶಕ್ತಿಪೀಠಗಳ ಸಂಖ್ಯೆ 4ರಿಂದ 108. ಅಷ್ಟಶಕ್ತಿ ಮತ್ತು ವಾರಾಹಿ ತಂತ್ರಗಳು ಕಾಮಾಖ್ಯ (ಕಾಮರೂಪ), ಪೂರ್ಣೇಶ್ವರೀ(ಪೂರ್ಣಗಿರಿ), ವಿಮಲಾ (ಪುರಿ), ತ್ರಿಪುರಮಾಲಿನೀ (ಜಲಂಧರ) ಎಂಬ 4 ಪೀಠಗಳನ್ನು ಒಪ್ಪುತ್ತವೆ.
ಸ್ಕಂದ ಪುರಾಣದ ಶಂಕರ ಸಂಹಿತೆ ಮತ್ತು ಆದಿ ಶಂಕರಾಚಾರ್ಯರ ಅಷ್ಟಾದಶ ಶಕ್ತಿಪೀಠ ಸ್ತೋತ್ರ ಉಲ್ಲೇಖಿಸುವ ಶಕ್ತಿಪೀಠಗಳು – ಲಂಕಾದ ಶಂಕರೀ ಪೀಠ, ಕಂಚಿ ಕಾಮಕೋಠಿಯ ಪೀಠ, ಮೈಸೂರಿನ ಕ್ರೌಂಚ ಪೀಠ, ಪ್ರಾದ್ಮುನ್ಯೀ, ಬಂಗಾಳದ ಶೃಂಕಲಾ ಪೀಠ, ತೆಲಂಗಾಣಾದ ಯೋಗಿನೀ ಪೀಠ, ಆಂಧ್ರಪ್ರದೇಶದ ಶ್ರೀಶೈಲ ಪೀಠ, ಕೊಲ್ಲಾಪುರ, ಮಹಾರಾಷ್ಟ್ರದ ಶ್ರೀ\ಮಹಾಲಕ್ಷ್ಮಿ ಪೀಠ, ಮುಹುರ್, ಮಹಾರಾಷ್ಟ್ರದ ಮೂಲಪೀಠ, ಮಧ್ಯಪ್ರದೇಶದ ಉಜ್ಜೈನಿ ಪೀಠ, ಪೀತಂಪುರ, ಆಂಧ್ರಪ್ರದೇಶದ ಪುಷ್ಕರಿಣೀ ಪೀಠ, ಒರಿಸ್ಸಾದ ಒಡ್ಯಾಣ ಪೀಠ, ದ್ರಾಕ್ಷಾರಾಮ, ಆಂಧ್ರಪ್ರದೇಶದ ದ್ರಾಕ್ಷಾರಾಮ ಪೀಠ, ಕಾಮಾಖ್ಯಾದ ಕಾಮರೂಪ ಪೀಠ, ಪ್ರಯಾಗ ರಾಜ್-ನ ಪ್ರಯಾಗ ಪೀಠ, ಕಾಂಗ್ರಾ, ಮಾಚಲಪ್ರದೇಶದ
ಜ್ವಾಲಾಮುಖೀ ಪೀಠ, ಬಿಹಾರದ ಗಯಾ ಪೀಠ, ಕಾಶಿಯ ವಾರಣಾಸಿ\ವಿಶಾಲಾಕ್ಷಿ ಪೀಠ, ಶಾರದಾ ಕಾಶ್ಮೀರದ ಶಾರದಾ\ಸರಸ್ವತಿ ಪೀಠ, ಲಂಕಾದ ಸಿಂಹಿಕಾ ಪೀಠ, ದಕ್ಷವತಿಯ ಮಣಿಕಾ ಪೀಠ, ಆಂದ್ರಪ್ರದೇಶದ ಷಡ್ಕಲಾ ಪೀಠ, ವಿಜಯಪುರದ ವಿಜಯಾ ಪೀಠ, ಕವಡೇ ಪುರಿಯ ಪದ್ಮಾಕ್ಷೀ
ರೇಣುಕಾ ಪೀಠ, ಸಾಲಗ್ರಾಮದ ಕುಚಾನಂದಾ ಪೀಠ,. ಝಾರ್‌ಖಂಡದ ಸರಲಾ ಪೀಠ, ಹರ್ಮ್ಯಗಿರಿಯ ಭದ್ರೇಶ್ವರೀ ಪೀಠ, ಅಹಿಚ್ಛತ್ರದ ಮಹಾಯೋಗಿ ಪೀಠ, ಕನ್ಯಾಕುಬ್ಜದ ಕನ್ಯಕಾ ಪೀಠ. ಪದ್ಮಗಿರಿ, ದಿಂಡುಗಲ್ಲಿನ ಅಭಿರಾಮೀ ಪೀಠ.
ದಕ್ಷಯಜ್ಞ: ಎಲ್ಲಾ ಮೂಲಗಳ ಪ್ರಕಾರ ದಕ್ಷ ಯಜ್ಞಕ್ಕೂ ಶಕ್ತಿಪೀಠಗಳ ಅಸ್ತಿತ್ವ(ಉಗಮ)ಕ್ಕೂ ಸಂಬಂಧ ಇದೆ. ಅವು ಹೇಳುವ ಬಹುಮುಖಿ ಕಥೆಗಳ ಸಾರಾಂಶ: “ಬ್ರಹ್ಮ ವಿಶ್ವವನ್ನು ನಿರ್ಮಿಸಲು ಆದಿ ಶಕ್ತಿಯ ಸಹಾಯವನ್ನು ಬಯಸಿದ. ಆದಿಶಕ್ತಿ ಶಿವನ ಸಂಗವನ್ನು ಬಿಟ್ಟು ಬಂದಳು, ಬ್ರಹ್ಮ
ಮತ್ತು ಆದಿಶಕ್ತಿ ಇಬ್ಬರೂ ಸೇರಿ ವಿಶ್ವವನ್ನು ನಿರ್ಮಿಸಲು ಆರಂಭಿಸಿದರು. ಅದು ಮುಕ್ತಾಯವಾದ ನಂತರ ಆದಿಶಕ್ತಿ ತನ್ನ ಮನೆಗೆ ಹಿಂತಿರುಗಬೇಕೆಂದುಕೊಂಡಳು. ಆಗ ದಕ್ಷ ಆಕೆ ಅವನ ಮಗಳಾಗಿ ಜನಿಸುವ ವರ ಕೊಡಬೇಕೆಂದು ಆಕೆಯನ್ನು ಪ್ರಾರ್ಥಿಸಿದ. ಶಿವನನ್ನು ಮದುವೆಯಾಗಬೇಕೆಂಬ ಪೂರ್ವಯೋಜಿತ ಉದ್ದೇಶದಿಂದ ದಕ್ಷನ ಮಗಳಾಗಿ ಸತಿ ಎಂಬ ಹೆಸರಿನಿಂದ ಜನಿಸಿದಳು. ದಕ್ಷಬ್ರಹ್ಮನ ಅತ್ಯಂತ ಪ್ರೀತಿಪಾತ್ರ ಕಿರಿಯ\ ಹಿರಿಯ ಮಗಳಾದ ಸತಿ ಶಿವನ ಹೆಂಡತಿ ತಾನಾಗಬೇಕೆಂದು ಆಶಿಸಿದಳು.
“ದಕ್ಷನಿಗೆ ತಾನು ಪ್ರಜಾಪತಿ, ತನ್ನ ಮಗಳು ರಾಜಕುಮಾರಿ, ಶಿವ ಸಾಧಾರಣವಾದ ಜೀವನವನ್ನು ನಡೆಸುವವನು. ಕೆಳವರ್ಗದವರೊಂದಿಗೆ ವಾಸಿಸುವವನು, ಹುಲಿ ಚರ್ಮ ಅವನ ವಸ್ತ್ರ, ಮೈತುಂಬಾ ಬಳಿದುಕೊಂಡ ಬೂದಿ ಅವನ ದೇಹಾಲಂಕಾರ, ಅವನ ವಾಸಸ್ಥಾನ ಕೈಲಾಸ ಪರ್ವತ. ಅವನಿಗೆ ಒಳ್ಳೆಯವರು ಕೆಟ್ಟವರು ಎಂಬ ಭೇದಭಾವ ಇಲ್ಲ. ಅವನನ್ನು ಆಶ್ರಯಿಸಿದವರಿಗೆಲ್ಲ ಅವನು ವರದಾಯಕ. ಭೂತ, ಪಿಶಾಚಿ, ಬೇತಾಳಗಳೇ ಮೊದಲಾದವರು ಅವನ ಅನುಯಾಯಿಗಳು. ಅವನು ಉದ್ಯಾನವನಗಳಲ್ಲಿ ಸುಖವಾಗಿ ಓಡಾಡಿದಂತೆ ಸ್ಮಶಾನದಲ್ಲೂಓಡಾಡುವವನು, ಅಂಥ ಶಿವ ತನಗೆ ಅಳಿಯ ಆಗುವುದು ತನ್ನ ದೊಡ್ಡಸ್ಥಿಕೆಗೆ ಕುಂದು ಎಂಬ ಭಾವನೆ. ಹೀಗೆ ತೋರಿಕೆಗೆ ಶಿವ ಇದ್ದರೂ ಅವನುಪರದೈವ ಎಂದು ತಿಳಿದಿದ್ದ ಸತಿ ತೀವ್ರವಾದ ತಪಸ್ಸನ್ನು ಮಾಡಿ ಶಿವನನ್ನು ಒಲಿಸಿಕೊಂಡಿದ್ದಳು. ಸತಿಯದು ಇಂಥ ದೃಢ ನಿಶ್ಚಯ ಆಗಿದ್ದುದರಿಂದ ಅವಳನ್ನು ದಕ್ಷ ಶಿವನಿಗೆ ಮದುವೆಮಾಡಿಕೊಟ್ಟ”.
“ಒಮ್ಮೆ ಬ್ರಹ್ಮ ಮಾಡುತ್ತಿದ್ದ ಯಜ್ಞಕ್ಕೆ ಎಲ್ಲರೂ ಮೊದಲೇ ನೆರೆದಿದ್ದರು. ದಕ್ಷ ಮಾತ್ರ ತಡವಾಗಿ ಬಂದ. ಬ್ರಹ್ಮ ಮತ್ತು ಶಿವ ಈ ಇಬ್ಬರ ಹೊರತಾಗಿ ಉಳಿದವರೆಲ್ಲ ಎದ್ದು ನಿಂತು ದಕ್ಷನಿಗೆ ಗೌರವ ತೋರಿದರು. ಬ್ರಹ್ಮ ತನ್ನಪ್ಪ, ಯಜ್ಞ ದೀಕ್ಷಿತ, ಆದ್ದರಿಂದ ಅವನು ಎದ್ದುನಿಲ್ಲದಿದ್ದರೆ ಪರವಾಗಿಲ್ಲ ಎಂದುಕೊಂಡ ದಕ್ಷನಿಗೆ, ಹೆಣ್ಣು ಕೊಟ್ಟ ಮಾವ ಎಂದಾದರೂ ಅಳಿಯ ಆದ ಶಿವ ತನಗೆ ಗೌರವ ತೋರಲಿಲ್ಲ ಎನ್ನುವುದನ್ನು ಸಹಿಸಿಕೊಳ್ಳಲು ಆಗಲಿಲ್ಲ. ಈ ಅವಮಾನಕ್ಕೆ ಸೇಡು ತೀರಿಸಿಕೊಳ್ಳಲು ಬೃಹಸ್ಪತಿ ಸ್ತವ ಎನ್ನುವ ಯಾಗ ಮಾಡಲು ನಿರ್ಧರಿಸಿ ಶಿವ, ಸತಿಯರನ್ನು ಬಿಟ್ಟು ಎಲ್ಲರನ್ನೂ ಆಹ್ವಾನಿಸಿದ. ಶಿವನನ್ನು ಕರೆಯದ ಯಜ್ಞಕ್ಕೆ ತಾವೂ ಬರುವುದಿಲ್ಲ ಎಂದು ಬ್ರಹ್ಮ, ವಿಷ್ಣು ಇಬ್ಬರೂ ನಿರಾಕರಿಸಿದರು. ಯಜ್ಞಕಾರ್ಯ ನಿರ್ವಹಿಸುತ್ತಿದ್ದ ದಧೀಚಿಗೆ ಹನ್ನೆರಡು ಆದಿತ್ಯರಿಗೆ ಹವಿಸ್ಸು ಕೊಟ್ಟಮೇಲೆ ಶಿವನಿಗೆ ಮತ್ತು ಸತಿಗೆ ಹವಿಸ್ಸು ಇಟ್ಟಿಲ್ಲ ಎಂಬುದು ತಿಳಿಯಿತು. ವೈಯಕ್ತಿಕ ಕಾರಣಗಳಿಗಾಗಿ ವೇದದ ಕ್ರಮವನ್ನು ಉಲ್ಲಂಘಿಸಬಾರದು ಎಂದು ದಕ್ಷನಿಗೆ ಹೇಳಿದ. ದಕ್ಷ ದಧೀಚಿಯ ಮಾತನ್ನು ಒಪ್ಪಿಕೊಳ್ಳದೇ ಇದ್ದುದರಿಂದ ಅವನೂ ಯಜ್ಞಶಾಲೆಯಿಂದ ಹೊರಟುಹೋದ”.
“ತನ್ನ ಅಪ್ಪ ಭವ್ಯವಾದ ಯಜ್ಞವನ್ನು ಮಾಡುತ್ತಿದ್ದಾನೆ ಎನ್ನುವುದನ್ನು ಅಶ್ವಿನೀ ದೇವತೆಗಳಿಂದ ತಿಳಿದ ಸತಿ ತವರುಮನೆಯವರೊಂದಿಗೆ, ಬಂಧು ಬಾಂಧವರೊಂದಿಗೆ ಯಜ್ಞದ ಸಂಭ್ರಮವನ್ನು ಅನುಭವಿಸಬೇಕು, ತವರಿನವರು ಕರೆಯಲೇ ಬೇಕೆಂಬ ಬಿಗುಮಾನ ಬೇಕಿಲ್ಲ ಎಂದು ನಂದಿಯನ್ನು ಜೊತೆ ಮಾಡಿಕೊಂಡು ಶಿವನ ಅಸಮ್ಮತಿಯನ್ನು ಮೀರಿ ಯಜ್ಞಕ್ಕೆ ಹೋದಳು. ಅಪ್ಪ, ಅಮ್ಮ,ಸೋದರಿಯರೇ ಮೊದಲಾದವರಿಂದ ತಿರಸ್ಕೃತಳಾದಳು. ತನಗೆ ಮತ್ತು ತನ್ನ ಕಾರಣದಿಂದಾಗಿ ಶಿವನಿಗೆ ಅವಮರ್ಯಾದೆ ಆದುದನ್ನು ಸಹಿಸದೆ ಮುಂದಿನ ಜನ್ಮದಲ್ಲಿ ಶಿವನಿಗೆ ಮರ್ಯಾದೆಯನ್ನು ದೊರಕಿಸಿ ಕೊಡುವ ಹೆಂಡತಿ ಆಗಬೇಕೆಂದು ಆತ್ಮಾಹುತಿ ಮಾಡಿಕೊಂಡಳು. ಇದನ್ನು ತಿಳಿದ ಶಿವ ಅತಿಯಾದ ದುಃಖ ಮತ್ತು ಸಿಟ್ಟಿನಿಂದ ವೀರಭದ್ರನ ಅವತಾರದಲ್ಲಿ ದಕ್ಷನ ಯಜ್ಞವನ್ನು ಧ್ವಂಸಗೊಳಿಸಿದ, ದಕ್ಷನ ತಲೆಯನ್ನು ಕತ್ತರಿಸಿಹಾಕಿದ, ಎಲ್ಲವನ್ನೂ ಸುಟ್ಟುರುಹುವ ತನ್ನ ಮೂರನೆಯ ಕಣ್ಣನ್ನು ತೆರೆದ, ಸರ್ವ ವಿನಾಶಕಾರೀ ತಾಂಡವ ನೃತ್ಯ ಮಾಡಲಾರಂಭಿಸಿದ.
ಆದರೂ ಅವನ ಕೋಪ ತಣಿಯಲಿಲ್ಲ, ಸತಿಯ ಮರಣದ ದುಃಖ ಕೊನೆಗಾಣಲಿಲ್ಲ”.
“ಅವಚಿ ಹಿಡಿದುಕೊಂಡುಬಿಟ್ಟಿದ್ದ ಸತಿಯ ಮೃತ ದೇಹದ ಅವಶೇಷಗಳನ್ನು ಹೊತ್ತುಕೊಂಡು ಜಗತ್ತಿನ ಮೂಲೆ ಮೂಲೆಯನ್ನೂ ತಿರುಗಿದ ಶಿವನಿಗೆ ಅವಳ ಹೊರತಾಗಿ ಮತ್ತೆ ಯಾವುದರ ಕಡೆಗೂ ಗಮನವೇ ಇರಲಿಲ್ಲ. ಇದರಿಂದ ಹೆದರಿದ ದೇವತೆಗಳು ವಿಷ್ಣುವಿನ ಮೊರೆ ಹೋದರು. ಹರನ ಧ್ವಂಸ ಕಾರ್ಯವನ್ನು ತಡೆಯಬೇಕೆಂದು ಮನವಿ ಮಾಡಿದರು. ಸತಿಯೊಂದಿಗಿನ ಅಂಟನ್ನು ಕತ್ತರಿಸಿ ಹಾಕಿದರೆ ಶಿವನ ದುಃಖ ಆರಬಹುದು ಎಂದು ವಿಷ್ಣು ಅವನನ್ನು ದುಃಖರೂಪೀ ವ್ಯಾಮೋಹದಿಂದ ಪಾರುಮಾಡಲು ಸತಿಯ ಇರುವಿಕೆಯ ಸೂಚಕ ಆಗಿದ್ದ ಅವಳ ಅವಶೇಷವನ್ನು ತನ್ನ ಸುದರ್ಶನ ಚಕ್ರದಿಂದ ತುಂಡು ತುಂಡು ಮಾಡಿದ. ಆ ತುಂಡುಗಳು ಭೂಲೋಕದ ಯಾವ ಯಾವ ಸ್ಥಳಗಳಲ್ಲಿ ಉದುರಿದವೋ ಅಲ್ಲೆಲ್ಲ ಶಕ್ತಿ ಕೇಂದ್ರಗಳ ಉಗಮ ಆಯಿತು. ಅವೆಲ್ಲ ಆಧ್ಯಾತ್ಮಿಕ ಮಹತ್ವ ಪಡೆದ ಪುಣ್ಯಕ್ಷೇತ್ರಗಳಾಗಿ ರೂಪುಗೊಂಡವು”.
ಶಕ್ತಿಪೀಠಗಳ ಮಹತ್ವ: ಶಿವ ಸತಿಯ ಶವವನ್ನು ಏಕೆ ಹೊತ್ತುಕೊಂಡು ನಿಲ್ಲಲ್ಲಿ ನಿಲ್ಲಲಾರದೆ ತಿರುಗಿದ; ಸತಿಯ ದೇಹದ ತುಣುಕುಗಳು ಬಿದ್ದ ಸ್ಥಳಗಳು ಶಕ್ತಿಕೇಂದ್ರಗಳು ಯಾಕೆ ಆಗುತ್ತವೆ ಎನ್ನುವುದನ್ನು ಕಾಳಿಕಾ ಪುರಾಣದ 5, 6, 14, 16, 18ನೇ ಅಧ್ಯಾಯಗಳು ಸ್ಪಷ್ಟ ಪಡಿಸುತ್ತವೆ:
“ಶಿವ ಕಳೆದುಕೊಂಡ ಪತ್ನಿ ಅಂತಿಂಥವಳಲ್ಲ. ಈಶ್ವರನ ಹೊರತಾಗಿ ಬ್ರಹ್ಮನನ್ನೂ ಒಳಗೊಂಡಂತೆ ಬ್ರಹ್ಮನೊಂದಿಗೆ ಇದ್ದವರೆಲ್ಲ ಕಾಮನ ಬಾಣಗಳಿಗೆ ಗುರಿಯಾಗಿ ಕಾಮಾವೇಶಕ್ಕೆ ಒಳಗಾಗಿದ್ದುದರಿಂದ ಈಶ್ವರನು ತನಗೊಬ್ಬ ಹೆಂಡತಿಯನ್ನು ಸ್ವೀಕರಿಸದಿದ್ದರೆ ಮಧ್ಯ ಮತ್ತು ಅಂತ್ಯದಲ್ಲಿ ಸೃಷ್ಟಿ ಹೇಗಾಗಲು ಸಾಧ್ಯ? ಬೇರೆ ಯಾರಿಂದಲೂ ಸಾಧ್ಯವಿಲ್ಲದ ತಾರಕಾಸುರನ ವಧೆಯು ಹೇಗೆ ಸಾಧ್ಯ? ಎಂದು ಬ್ರಹ್ಮ ಯೋಚಿಸಿದ. ಕಾಮನ ಹೊರತಾಗಿ ಮತ್ತೆ ಯಾರೂ ಈಶ್ವರನನ್ನು ಅವನ ತಪಸ್ಸಿನಿಂದ ವಿಚಲಿತಗೊಳಿಸಲಾರರು ಎಂದು ತಿಳಿದು ಕಾಮನಿಗೆ ಈಶ್ವರನಲ್ಲಿ ಕಾಮಾಕಾಂಕ್ಷೆ ಉಂಟಾಗುವಂತೆ ಮಾಡು; ಅದಕ್ಕಾಗಿ ಈಶ್ವರ ಎಲ್ಲಿಗೆ ಹೋದರೂ ಬಿಡದೆ ಸತತವಾಗಿ ಅವನನ್ನು ಹಿಂಬಾಲಿಸು ಎಂದು ಆದೇಶಿಸಿದ. ಅದಕ್ಕೆ ಅವನು ಈಶ್ವರನು ಆಕರ್ಷಿತ ಆಗಬಹುದಾದ ಸ್ತ್ರೀಯನ್ನು ಸೃಷ್ಟಿಮಾಡು, ನಾನು ನೀನು ಹೇಳಿದಂತೆ ಮಾಡುತ್ತೇನೆ ಎಂದ. ಆಗ ಬ್ರಹ್ಮ ಸಾವಿತ್ರಿ, ಸಂಧ್ಯಾ, ಉಮಾ ಎಂದು ಕರೆಸಿಕೊಳ್ಳುವ ಮಹಾಮಾಯೆಯಾದ ವಿಷ್ಣುಮಾಯೆಯ ಹೊರತಾಗಿ ಮತ್ತೆ ಯಾರೂ ಈಶ್ವರನನ್ನು ಆಕರ್ಷಿಸಲಾರರು ಎಂದು ತಿಳಿದು ನೀನು ವಿಶ್ವರೂಪಿಣಿಯನ್ನು ಆರಾಧಿಸಿ ನಿನ್ನ ಮಗಳಾಗುವಂತೆ ಬೇಡಿಕೊ ಎಂದು ದಕ್ಷನಿಗೆ ಹೇಳಿದ”.
“ದಕ್ಷ ಯಾವ ರೀತಿಯ ಆಹಾರವನ್ನೂ ಸೇವಿಸದೆ ಕ್ಷೀರ ಸಾಗರದ ಉತ್ತರದ ದಂಡೆಯಲ್ಲಿ ಮೂರು ಸಾವಿರ ವರ್ಷಗಳವರೆಗೆ ವಿಷ್ಣುಮಾಯೆಯಾದ ಅಂಬಿಕೆಯನ್ನು ಕುರಿತು ತೀವ್ರವಾಗಿ ತಪಸ್ಸು ಮಾಡಿದ. ಮಂದಾರ ಪರ್ವತಕ್ಕೆ ಹೋದ ಬ್ರಹ್ಮ ಜಗನ್ಮಯಿಯೂ, ಜಗದ್ಧಾತ್ರಿಯೂ, ಯೋಗನಿದ್ರೆಯೂ, ಮೇಧಾ, ಸ್ವಧಾ, ಪುಷ್ಟಿ, ಮೈತ್ರೀ, ಕರುಣಾ, ಶಾಂತಿ, ಕಾಂತಿಯೂ, ಎಲ್ಲರ ಹೃದಯದ ಅಂತರ್ಜ್ಯೋತಿಯೂ ಆದ ವಿಷ್ಣುಮಾಯೆಯನ್ನು ಕುರಿತು ಸತತವಾಗಿ ನೂರು ವರ್ಷಗಳ ವರೆಗೆ ಪ್ರಾರ್ಥನೆ ಮಾಡಿದ. ದೇವಿ ಪ್ರತ್ಯಕ್ಷಳಾದಾಗ ಕೇಶವನಿಗೆ ಹೇಗೆ ಲಕ್ಷ್ಮಿಯಂತೆ ಮನಮೋಹಕಳಾಗಿರುವೆಯೋ ಹಾಗೆಯೇ ಈಶ್ವರನಿಗೂ ಸ್ವ ಇಚ್ಛೆಯಿಂದ ಆಗು ಎಂದು ಬೇಡಿಕೊಂಡ. ದೇವಿಯು ಲೋಕ ಕಲ್ಯಾಣಾರ್ಥವಾಗಿ ದಕ್ಷನ ಸುಂದರ ಮಗಳಾಗಿ ಜನಿಸಿ ಈಶ್ವರನು ತನ್ನ ಹೃದಯದೊಳಗಿನ ವಿದ್ಯೆ ಎಂದು ತನ್ನನ್ನು ಪ್ರಿಯ ಅರ್ಧಾಂಗಿಯಾಗಿ ಸ್ವೀಕರಿಸುವಂತೆ ಮಾಡುವೆ ಮತ್ತು ಅವನನ್ನು ತನ್ನ ವಶವರ್ತಿ ಮಾಡಿಕೊಳ್ಳುವೆ ಎಂದು ಹೇಳಿ ಅದೃಶ್ಯಳಾದಳು. ತಪಸ್ಸು ಮಾಡುತ್ತಿದ್ದ ದಕ್ಷನ ಮುಂದೆಯೂ ಪ್ರತ್ಯಕ್ಷಳಾಗಿ ಅವನು ಕೋರಿಕೊಂಡಂತೆ ಅವನ ಮಗಳಾಗಿ ಜನಿಸಲು ಒಪ್ಪಿಕೊಂಡಳು ಮತ್ತೆ ಜನಿಸಿ ಸತಿ ಎಂದು ಹೆಸರು ಪಡೆದಳು”.
“ಬ್ರಹ್ಮ ಮತ್ತು ವಿಷ್ಣು ಇಬ್ಬರೂ ಶಿವನನ್ನು ಲೋಕಹಿತಾರ್ಥವಾಗಿ ಭೂಲೋಕದ ರಾಕ್ಷಸರನ್ನು ಕೊಲ್ಲುವ ಮಗನನ್ನು ಪಡೆಯುವುದಕ್ಕಾಗಿ ಮದುವೆಯಾಗಬೇಕು ಎಂದು ಕೋರಿಕೊಂಡಾಗ ಅವನು ಹೇಳಿದುದು ನಾನು ಮದುವೆಯಾಗಬಹುದಾದ ಯೋಗಿನಿಯೂ, ಕಾಮರೂಪಿಯೂ, ನನ್ನ ವೀರ್ಯದ ಒಂದು ಅಂಶವನ್ನಾದರೂ ತನ್ನ ಗರ್ಭದಲ್ಲಿ ಧರಿಸುವ ಸಾಮರ್ಥ್ಯ ಇರುವವಳೂ ಆಗಿರುವ ಸ್ತ್ರೀ ಯಾರಾದರೂ ಇದ್ದರೆ ಹೇಳಿ; ನಾನು ಧ್ಯಾನಾಸಕ್ತನಾಗಿದ್ದಾಗ ಅವಳು ಧ್ಯಾನಾಸಕ್ತಳಾಗಿರಬೇಕು, ನಾನು ಭೋಗಾಸಕ್ತನಾದಾಗ ಅವಳೂ ಭೋಗಾಸಕ್ತಳಾಗಿರಬೇಕು ಎಂದು. ಶಿವ ಮದುವೆಯಾದ ಸತಿ ಶಿವ ಬಯಸಿದವಳೂ, ಅವನಲ್ಲಿ ಸಂಪೂರ್ಣವಾಗಿ ತನ್ಮಯಳಾಗಿದ್ದ ಹೆಂಡತಿಯೂ ಆಗಿದ್ದಳು. ಮದುವೆಯಾದ ನಂತರ ಶಿವ ಸತಿಯನ್ನು ಒಂದು ಕ್ಷಣವೂ ಬಿಡಲಾರದವನಾಗಿದ್ದ. ಅವಳೊಡನೆ ಹಿಮಾಲಯದ ಸುಂದರ ನಿಕುಂಜಗಳಲ್ಲಿ, ಗುಹೆಗಳಲ್ಲಿ ಹಗಲೂ ರಾತ್ರಿ ಸುಖಿಸಿದ್ದ. ಹಿಮಾಲಯದ ಶಿಖರದಲ್ಲಿ ಮನೆ ಮಾಡಿದಾಗಲೂ ಶಿವ ಅಲ್ಲಿಯೂ ಅವಳೊಡನೆ ದೇವತೆಗಳ ಲೆಕ್ಕದಲ್ಲಿ ಹತ್ತು ಸಾವಿರ ವರ್ಷಗಳ ಕಾಲ ಸುಖಿಸಿದ್ದ. ಸತಿಯಲ್ಲಿಯೇ ಮನಸ್ಸನ್ನಿಟ್ಟ ಶಂಭುವಿಗೆ ಹಗಲು ರಾತ್ರಿಗಳು ಗೊತ್ತಾಗಲಿಲ್ಲ. ಈ ರೀತಿಯ ಅನುಬಂಧವನ್ನು ಸತಿಯ ಬಗ್ಗೆ ಹೊಂದಿದ್ದುದರಿಂದ ಅವಳು ಮರಣ ಹೊಂದಿದ್ದಾಳೆ ಎಂದು ಗೊತ್ತಾದರೂ ದುಃಖದ ಆವೇಗವನ್ನು ತಡೆಯಲಾರದೆ ಅವಳ ಮೃತ ಶರೀರವನ್ನು ತನ್ನ ಮೈಮೇಲೆ ಇರಿಸಿಕೊಂಡು ಜಗತ್ತಿನ ಮೂಲೆ ಮೂಲೆಯನ್ನು ತಿರುಗಿದುದು ಸಹಜವೇ”.
“ಸತಿಯ ಮೃತ ದೇಹವನ್ನು ಶಿವನಿಂದ ಬೇರ್ಪಡಿಸಿದ ಹೊರತೂ ಶಿವನಿಗೆ ಅವಳು ಮರಣ ಹೊಂದಿರುವುದನ್ನು ಒಪ್ಪಿಕೊಳ್ಳಲೇ ಬೇಕಾದ ಅನಿವಾರ್ಯತೆ ಉಂಟಾಗುತ್ತಿರಲಿಲ್ಲ. ಅವಳು ಪುನರ್ಜನ್ಮವನ್ನು ಪಡೆದರೂ ಅವಳನ್ನು ತನ್ನ ಹೆಂಡತಿಯನ್ನಾಗಿ ಶಿವ ಸ್ವೀಕರಿಸಿ ತಾರಕಾಸುರನನ್ನು ಕೊಲ್ಲುವ ಮಗನನ್ನು ಪಡೆಯಲೂ ಸಾಧ್ಯವಿರಲಿಲ್ಲ. ಶಿವ ಅಷ್ಟೊಂದು ದೀರ್ಘಕಾಲ ಸತಿಯೊಡನೆ ರತಿಸುಖವನ್ನು ಅನುಭವಿಸಿದರೂ ಲೋಕಕಲ್ಯಾಣವನ್ನು ಮಾಡುವ ಮಗುವಿನ ಜನನದ ಸೂಚನೆಯೇ ಕಂಡು ಬಂದಿರಲಿಲ್ಲ. ಆದ್ದರಿಂದ ಬ್ರಹ್ಮ, ವಿಷ್ಣುಇಬ್ಬರೂ ಸೇರಿ ಸತಿಯ ಅಂಗಗಳನ್ನು ಕತ್ತರಿಸುವ ನಿರ್ಣಯವನ್ನು ತೆಗೆದುಕೊಂಡರು. ಆದರೆ ಸತಿಯ ಅಂಗಗಳು ಕೆಳಗೆ ಬಿದ್ದರೂ ಅವು ಬಿದ್ದ ಜಾಗದಲ್ಲೆಲ್ಲ ಆ ಅಂಗಗಳಲ್ಲೆ ಸತಿಯನ್ನು ಇಡಿಯಾಗಿ ಭಾವಿಸುತ್ತ ಶಿವ ಅಲ್ಲಿಯೇ ಲಿಂಗರೂಪಿಯಾಗಿ ನೆಲೆಯೂರಿಬಿಟ್ಟ.” ಶಕ್ತಿಪೀಠವು ದೇವಿಯ ಆವಾಸ ಸ್ಥಾನ ಆಗಿದ್ದರೂ ಅದು ಮಹಾದೇವನ ಆವಾಸಸ್ಥಾನವೂ ಆಯಿತು.
ದಶ ಮಹಾ ವಿದ್ಯಾ ದೇವಿಯರು: ಪಾರ್ವತೀ ದೇವಿ ಅಥವಾ ಆದಿಮಾತೆ ಅಥವಾ ಆದಿ ಪರಾಶಕ್ತಿಯು ಲೋಕಕಲ್ಯಾಣಕ್ಕಾಗಿ ಎತ್ತಿದ ಅವತಾರಗಳೇ ದಶ ಮಹಾ ವಿದ್ಯಾ ದೇವಿಯರು; ಇವರು ಭಯಾನಕತೆ, ಭೀಬತ್ಸತೆಯಿಂದ ಹಿಡಿದು ಪರಮ ಸೌಂದರ್ಯದ ವರೆಗೆ ಸೃಷ್ಟಿಯ ವಿವಿಧ ಭಾವಗಳನ್ನು ಅಭಿವ್ಯಕ್ತ ಪಡಿಸುವ, ಆಧ್ಯಾತ್ಮಿಕ ಸಾಧನೆಯಲ್ಲಿ ಮಾರ್ಗದರ್ಶಿ ಮತ್ತು ಸ್ಫೂರ್ತಿದಾಯಕರಾಗುವ, ಆಂತರಂಗಿಕ ಸತ್ಯಗಳ ದರ್ಶನವನ್ನು ಮಾಡಿಸುವ ಪರಮ ಜ್ಞಾನಿಗಳು ಎನ್ನುವ ಪರಿಕಲ್ಪನೆಯೊಂದಿಗೆ ಇವರೊಂದಿಗೆ ದೇವಿಯು ಲೋಕ ಕಂಟಕರೂ ದೇವತೆಗಳ ಪೀಡಕರೂ ಆದ ಶುಂಭ,ನಿಶುಂಭ, ಚಂಡ, ಮುಂಡ, ರಕ್ತಬೀಜ, ಭಂಡಾಸುರ ಮೊದಲಾದ ರಾಕ್ಷಸರನ್ನು ಸಂಹರಿಸಿದಳು ಎನ್ನುವ ಕಥೆಗಳೂ ಇವೆ ದೇವೀ ಪುರಾಣದಲ್ಲಿ “ದಕ್ಷ ತಾನು ಮಾಡಲು ನಿಶ್ಚಯಿಸಿದ ಯಾಗಕ್ಕೆ ಮಗಳು ಸತಿ ಮತ್ತು ಅಳಿಯ ಶಿವ ಇವರನ್ನು ಹೊರತು ಪಡಿಸಿ ಎಲ್ಲರನ್ನೂ ಕರೆದ. ಕರೆಯದಿದ್ದರೂ ತಾನು ಯಜ್ಞಕ್ಕೆ ಹೋಗಲೇಬೇಕೆಂದು ಹಟಮಾಡಿದ ಸತಿಯನ್ನು ಶಿವ ತಡೆದ. ಅವಳು ಹತ್ತು ರೌದ್ರ ಮೂರ್ತರೂಪ ತಳೆದಳು.ಅವಳ ರೌದ್ರತೆಯನ್ನು ಕಂಡು ಹೆದರಿದ ಶಿವ ದಕ್ಷನ ಯಜ್ಞಕ್ಕೆ ಹೋಗಲು ಅನುಮತಿ ಕೊಟ್ಟ” ಎನ್ನುವ ಕಥೆ ಇದೆ.
ಶಾಕ್ತ ಮಹಾ ಭಾಗವತ ಪುರಾಣ, ಬೃಹದ್ಧರ್ಮ ಪುರಾಣ, ಕಾಳಿಕಾ ಪುರಾಣಗಳಲ್ಲಿ ಇದರ ಮುಂದುವರೆದ ಭಾಗವಾಗಿ “ಶಿವ ಸತಿಯ ಉಗ್ರರೂಪಕ್ಕೆ ಹೆದರಿ ಓಡಿಹೋಗಲು ಪ್ರಯತ್ನಿಸಿದ, ಸತಿ ತನ್ನ ಆ ದಶ ರೂಪಗಳಿಂದ ಎಲ್ಲಾ ದಿಕ್ಕುಗಳನ್ನು ಪ್ರತಿಬಂಧಿಸಿದಳು” ಎನ್ನುವ ವಿಷಯಇದೆ. “ಒಮ್ಮೆ ಶಿವ ಪಾರ್ವತಿಯರು ಪಾರ್ವತಿಯ ತಂದೆಯ ಮನೆಯಲ್ಲಿದ್ದರು, ಶಿವ ತಾನು ಅಲ್ಲಿಂದ ಹೊರಡುವೆ ಎಂದು ಪಾರ್ವತಿಯನ್ನು ಹೆದರಿಸಿದ. ಪಾರ್ವತಿ ಎಷ್ಟು ಅನುನಯಿಸಿದರೂ ಶಿವ ತಲೆಬಾಗಲಿಲ್ಲ. ಅವನನ್ನು ತಡೆಯಲು ಪಾರ್ವತಿ ಹತ್ತು ರೂಪಗಳನ್ನು ಧರಿಸಿ ಶಿವ ಹೊರಹೋಗದಂತೆ ಎಲ್ಲಾ ದಿಕುಗಳನ್ನೂ ಪ್ರತಿಬಂಧಿಸಿದಳು. ಪ್ರತಿಯೊಂದು ರೂಪದಲ್ಲೂ ತನ್ನ ಸಾರಭೂತ ಶಕ್ತಿ-ಸತ್ಯವನ್ನು ಪ್ರಕಟಪಡಿಸಿದಳು. ಶಿವ ಅವಳ ಮೇಲ್ಗೈಯನ್ನು ಒಪ್ಪಿಕೊಳ್ಳಲೇಬೇಕಾಯಿತು” ಎನ್ನುವ ಕಥೆಯೂ ಇದೆ. ಈ ಕಥೆಗಳು ಸ್ತ್ರೀಶಕ್ತಿ ಆರಾಧನೆಯ ಮೇಲ್ಗೈಯನ್ನು ಎತ್ತಿಹಿಡಿಯುವ ಶಾಕ್ತ ಪಂಥಕ್ಕೆ ಪೂರಕವಾದ ಕಥೆಗಳು.
ಶಿವಪುರಾಣದ ಕಥೆಯ ಪ್ರಕಾರ “ದುರ್ಗಮಾ ಎಂಬ ರಾಕ್ಷಸನು ಬ್ರಹ್ಮನಿಂದ ಪಡೆದ ವರದಿಂದ ನಾಲ್ಕೂ ವೇದಗಳನ್ನು ತನ್ನ ವಶಕ್ಕೆ ಪಡೆದು ಇಡೀ ವಿಶ್ವವನ್ನು ತನ್ನ ತೆಕ್ಕೆಗೆ ತೆಗೆದುಕೊಂಡ. ಇದರಿಂದ ಅನೇಕ ವರ್ಷಗಳ ಕಾಲ ಭಯಂಕರ ಬರಗಾಲ ಉಂಟಾಯಿತು. ಚರಾಚರ ವಿಶ್ವ
ತತ್ತರಿಸಿತು. ದೇವತೆಗಳು ವಿಶ್ವವನ್ನು ಕಾಪಾಡಬೇಕೆಂದು ದೇವಿಯನ್ನು ಪ್ರಾರ್ಥಿಸಿದರು. ದೇವಿಯು ಬರವನ್ನು ಕೊನೆಗಾಣಿಸಿದಳು, ಜಲಾಶಯಗಳನ್ನು ನೀರಿನಿಂದ ತುಂಬಿಸಿದಳು. ರಾಕ್ಷಸನನ್ನು ಸಂಹರಿಸಿದಳು, ವೇದಗಳನ್ನು ದೇವತೆಗಳಿಗೆ ದೊರಕಿಸಿಕೊಟ್ಟಳು. ಈ ಕಾರ್ಯದಲ್ಲಿಆಕೆಗೆ ಸಹಾಯಕರಾಗಿ ಆಕೆಯ ದೇಹದಿಂದ ಆಕೆಯೇ ಒಡಮೂಡಿಸಿದವರೇ ದಶ ಮಹಾ ವಿದ್ಯಾದೇವಿಯರು. ದುರ್ಗಮಾ ರಾಕ್ಷಸನನ್ನು ಕೊಂದವಳಾಗಿ ದೇವಿ ದುರ್ಗಾ ಎನ್ನಿಸಿಕೊಂಡಳು”. ದೇವೀ ಭಾಗವತದಲ್ಲೂ ಇದೇ ರೀತಿಯ ಕಥೆ ಇದೆ. ವೇದಗಳ ಸಂರಕ್ಷಣೆಗೆ ಸಂಬಂಧ ಪಟ್ಟ ಕಥೆ ಇದಾಗಿದ್ದು ಮಂತ್ರ ತಂತ್ರಗಳ ಬಳಕೆಯ ಆಯಾಮದಿಂದ ವೈದಿಕ ತಾತ್ವಿಕ ಜ್ಞಾನವನ್ನು ಅನುಭವಾತ್ಮಕ ಜ್ಞಾನವನ್ನಾಗಿಸಿ ಖಿಲ ಆಗುತ್ತಿದ್ದ ವೇದದ ಮಹತ್ವವನ್ನು ಎತ್ತಿಹಿಡಿದುದರ ಸೂಚಕ ಕಥೆಯೂ ಆಗಿದೆ. ಈ ಹಿನ್ನೆಲೆಯಲ್ಲಿ ದೇವಿಯ ದಶರೂಪಿಗಳು ಸಹಜವಾಗಿ ಮಹಾ ವಿದ್ಯಾದೇವಿಯರು.
ಬೃಹದ್ಧರ್ಮ ಪುರಾಣವು ಕಾಳೀ, ತಾರಾ, ಷೋಡಷೀ, ಭುವನೇಶ್ವರೀ, ಭೈರವೀ, ಛಿನ್ನಮಸ್ತಾ, ಸುಂದರೀ, ಬಗಲಾಮುಖೀ, ಧೂಮಾವತೀ, ಮಾತಂಗೀ ದೇವಿಯರೇ ಮಹಾವಿದ್ಯಾದೇವಿಯರು ಎನ್ನುತ್ತದೆ ʼಮಹಾನಿರ್ವಾಣತಂತ್ರʼವು ಶಿವ ತನ್ನ ಸಂಗಾತಿಯಾದ ಆದಿ ಪರಾಶಕ್ತಿಗೆ “ನಾವೂ (ತ್ರಿಮೂರ್ತಿಗಳು) ಮತ್ತು ಎಲ್ಲಾ ಜ್ಞಾನವೂ ನಿನ್ನಿಂದಲೇ ಜನಿತವಾದದ್ದು; ನಿನಗೆ ಇಡೀ ಪ್ರಪಂಚ ಸಹಿತವಾಗಿ ಎಲ್ಲವೂ ಗೊತ್ತು,; ಆದರೆ ಜಗತ್ತಾಗಲೀ ನಮ್ಮಲ್ಲಿ ಯಾರಾದರಾಗಲೀ ನಿನ್ನನ್ನು ಅರಿಯಲು ಸಾಧ್ಯವಿಲ್ಲ; ನೀನೇ ಕಾಳೀ, ತಾರಿಣೀ, ದುರ್ಗಾ, ಷೋಡಷೀ, ಭುವನೇಶ್ವರೀ; ನೀನೇ ಧೂಮಾವತೀ, ಬಗಲಮುಖೀ, ಭೈರವೀ, ಛಿನ್ನಮಸ್ತಾ: ನೀನೇ ಅನ್ನಪೂರ್ಣಾ, ಸರಸ್ವತೀ, ಲಕ್ಷ್ಮೀ. ನೀನು ಎಲ್ಲಾಶಕ್ತಿರೂಪಗಳ ಮತ್ತು ಎಲ್ಲಾ ದೈವಗಳ ಪ್ರತೀಕ” ಎಂದು ಸ್ತುತಿಸಿದ ವಿಷಯವನ್ನು ಹೇಳುತ್ತದೆ.
ಸ್ತ್ರೀಶಕ್ತಿ ವೈಭವ:
ಕಾಳಿಕಾ: ಯಾವುದೇ ರೀತಿಯ ಸೃಷ್ಟಿ ಇಲ್ಲದಿದ್ದಾಗ, ಸೂರ್ಯ ಚಂದ್ರ ಭೂಮಿಯೇ ಮೊದಲಾದ ಗ್ರಹಗಳೂ ಇಲ್ಲದಿದ್ದಾಗ ಕತ್ತಲೆಯು ಮಾತ್ರ ಇತ್ತು; ಆ ಕತ್ತಲೆಯಿಂದಲೇ ಎಲ್ಲವೂ ಮೂಡಿಬಂತು; ಆ ಮೂಲಭೂತ ಕತ್ತಲೆಯೇ ಕಾಳಿ ಅಥವಾ ಮಹಾಕಾಳಿ; ಎಲ್ಲದರ ಸೃಷ್ಟಿಕಾರಕಳೂ,ಸಂರಕ್ಷಕಳೂ ಆದ ಪ್ರಕೃತಿ ಮಾತೆ, ಮೂಲ ಪ್ರಕೃತಿ ಎನ್ನುತ್ತಾರೆ ಶಾಕ್ತ-ತಾಂತ್ರಿಕರು.
ತಾರಾ: ಮಾಯೆಯನ್ನು ಉಂಟುಮಾಡುವವಳೂ ಮತ್ತು ಮಾಯೆಯಿಂದ ಪಾರುಮಾಡುವವಳೂ, ಮುಕ್ತಿಕಾರಕ ಆಗುವ ಅಪಾರ ಜ್ಞಾನದಾಯಕಳು ತಾರಾ ದೇವಿ. ಒಂದು ಕಥೆಯ ಪ್ರಕಾರ “ಎಲ್ಲೆಲ್ಲೂ ನೀರು ಇತ್ತು. ಮಧು ಮತ್ತು ಕೈಟಭರ ಮೃತ ಶರೀರದ ತುಣುಕುಗಳಿಂದ ಭೂರಾಶಿಯು ಸೃಷ್ಟಿಗೊಂಡಿತು. ಜೀವಿಗಳ ಸೃಷ್ಟಿಗೆ ಬೇಕಾಗಿದ್ದ ಸೂರ್ಯನನ್ನು ಸೃಷ್ಟಿಸಲು ಮಹಾಶಕ್ತಿಯು ತಾರಾ ರೂಪವನ್ನು ತಳೆದಳು, ದಕ್ಷಿಣೇಶ್ವರನ ರೂಪವನ್ನು ತಳೆದಿದ್ದ ಮಹಾದೇವನ ಶಕ್ತಿಯೊಂದಿಗೆ ತಾರಾ ದೇವಿಯ ಬೆಳಕು, ಶಾಖ ಮತ್ತು ಚೈತನ್ಯವನ್ನು ಉತ್ಪಾದಿಸುವ ಸಾಮರ್ಥ್ಯವೂ ಸೇರಿಕೊಂಡು ಶಕ್ತಿ ವಲಯಗಳು, ಶಕ್ತಿ ಕಾಯಗಳು, ಶಾಖ, ಬೆಳಕು, ಪ್ರಾಣವನ್ನು ಎಲ್ಲಾ ಇರುವಿಕೆಗಳಿಗೆ ಕೊಡುವ ನಿತ್ಯ ಅಸ್ತಿತ್ವದಲ್ಲಿರುವ ಸೂರ್ಯ ಇವುಗಳ ಸೃಷ್ಟಿ ಆಯಿತು, ನಂತರ ತಾರಾ ದೇವಿಯು ಪ್ರಪಂಚದಲ್ಲಿ ಎಲ್ಲಾ ರೀತಿಯ ಹಸಿರುಸಂಪತ್ತು ಮತ್ತು ಸಸ್ಯಗಳನ್ನು ಉಂಟುಮಾಡಲು ಷೋಡಷೀ ದೇವಿಯ ರೂಪವನ್ನು ತಳೆದಳು. ಭೂಮಿಯ ಒಳಗೆ ಬಿದಿರುಗೋಲನ್ನು ಇಟ್ಟಳು. ತನ್ನ ಕಮಂಡಲದಿಂದ ಅದರಲ್ಲಿ ಒಂದು ಹನಿ ನೀರನ್ನು ಹಾಕಿದಳು. ಅದರಿಂದ ಸಸ್ಯ ಪ್ರಪಂಚ, ಎಲ್ಲಾ ಬಗೆಯ ಕಾಡುಗಳು, ಮರಗಳು ಉಂಟಾದವು, ಪ್ರಕೃತಿ ವೃದ್ಧಿಗೊಂಡಿತು”.
ತ್ರಿಪುರ ಸುಂದರಿ: ಅ, ಕ, ಥ ಎಂಬ ಮೂರು ಅಕ್ಷರಗಳಲ್ಲಿ ಸ್ಥಿತಳಾಗಿರುವ ವಿಶ್ವದ ಆತ್ಯಂತಿಕ ಶಕ್ತಿಯಾದ ತ್ರಿಪುರ ಸುಂದರಿ ದೇವಿಯು ಲಲಿತಾ ಎನ್ನುವ ಹೆಸರಿನಲ್ಲಿಯೂ ಆರಾಧಿತಳಾಗಿದ್ದಾಳೆ. ಲಲಿತಾ ತ್ರಿಪುರಸುಂದರಿ ದೇವಿಯ ಆದೇಶದಂತೆ ವಾಸಿನೀ, ಕಾಮೇಶ್ವರೀ, ಅರುಣಾ, ವಿಮಲಾ,
ಜಯನೀ, ಮೋದಿನೀ, ಸರ್ವೇಶ್ವರೀ, ಕೌಲಿನೀ ಎಂಬ 8 ವಾಗ್ದೇವಿಯರಿಂದ ಲಲಿತಾ ಸಹಸ್ರನಾಮವು ರಚಿತಗೊಂಡಿದೆ ಎನ್ನುತ್ತದೆ ಲಲಿತೋಪಾಖ್ಯಾನ. “ಭಂಡಾಸುರ ಶಿವನನ್ನು ಕುರಿತು ತಪಸ್ಸು ಮಾಡಿ ಅಮರ ಆಗಬಹುದಾದ ರೀತಿಯ ವರವನ್ನು ಪಡೆದು ದೈವಿಕ ಕ್ರಮವನ್ನು ಕೆಡಿಸಲು ಆರಂಭಿಸಿದ್ದ; ಅವನ ವಿನಾಶಾತ್ಮಕ ಧಾಳಿಯನ್ನು ಎದುರಿಸಲು ದೇವತೆಗಳನ್ನು ಒಳಗೊಂಡು ವಿಷ್ಣು ಮತ್ತು ಶಿವ ಲಲಿತಾ ತ್ರಿಪುರ ಸುಂದರಿಯ ಸಹಾಯವನ್ನು ಕೇಳಿದರು; ಉದಾರಿಯೂ ಸುಂದರ ರೂಪಿಯೂ ಆಗಿದ್ದ ಲಲಿತಾ ತ್ರಿಪುರ ಸುಂದರಿಯು ಉಗ್ರರೂಪವನ್ನು ತಾಳಿ ತನ್ನ ದೈವಿಕ ಸಹಚರಿಯರ, ಶಕ್ತಿಯುತ ವಿವಿಧ ಆಯುಧಗಳ ಸಹಾಯದಿಂದ ಭಂಡಾಸುರನನ್ನು ಸಂಹರಿಸಿದಳು, ದೈವಿಕ ಸುವ್ಯವಸ್ಥೆಯನ್ನು ಪುನರ್ಪ್ರತಿಷ್ಠಾಪಿಸಿದಳು” ಎನ್ನುತ್ತದೆ ಲಲಿತಾ ಸಹಸ್ರನಾಮ.
ಭುವನೇಶ್ವರಿ: ಮಹಿಷಾಸುರನನ್ನು ಮರ್ದಿಸಿ ಲೋಕವನ್ನು ಸಂರಕ್ಷಿಸಿದ ಆದಿ ಪರಾಶಕ್ತಿಯ ಪರಿಪೂರ್ಣ ಪ್ರಕಟ ರೂಪವೇ ಭುವನೇಶ್ವರಿ/ತ್ರಿ-ಭುವನೇಶ್ವರಿ. ಈಕೆಯೇ ನವ ದುರ್ಗೆಯರಲ್ಲಿ ಒಬ್ಬಳಾದ ಕೂಷ್ಮಾಂಡ ದೇವಿ. ಎಲ್ಲಾ ಪ್ರಪಂಚಗಳ ಸಾರವನ್ನು ತನ್ನ ಸ್ವರೂಪವನ್ನಾಗಿ
ಹೊಂದಿದ ಈಕೆ ಎಲ್ಲಾ ಪ್ರಪಂಚಗಳ ದೇವಮಾತೆ; ಭೂಃ, ಭುವಃ, ಮತ್ತು ಸ್ವಃ ಎನ್ನುವ ಮೂರು ಲೋಕಗಳ ಒಡತಿ. ಈಕೆಯ ಎರಡು ರೂಪಗಳು ಮಾಯೆ ಮತ್ತು ನಿರ್ಗುಣ ಬ್ರಹ್ಮನ್; ಅನುಭವಿಸುವ ಸುಖ-ದುಃಖಗಳು ಆಕೆಯ ಲೀಲಾ ವಿನೋದ ಎಂದು ಭುವನೇಶ್ವರೀ ದೇವಿಯನ್ನು ಶಾಕ್ತ
ಪುರಾಣಗಳು ವರ್ಣಿಸುತ್ತವೆ.
ಭೈರವಿ: ಶಿವನ ಮೇಲೆ ಕುಳಿತಿರುವ, ದಕ್ಷಿಣಾ ಮೂರ್ತಿಯ ಪತ್ನಿಯೂ ಆದ ಭೈರವಿಯು ಅದ್ಭುತ ಅಥವಾ ಅತಿಯಾದ ಭಯಾನಕತೆಯ ಭಾವವನ್ನು ಹುಟ್ಟಿಸುವವಳಾಗಿ ಭೈರವಿ. ಕ್ರಿಯಾಶೀಲತೆ, ಕನಸುಗಾರಿಕೆ ಮತ್ತು ಗಾಢ ನಿದ್ರಾವಸ್ಥೆ ಎಂಬ ಮೂರು ಸ್ತರಗಳ ಪ್ರತೀಕವಾಗಿ ತ್ರಿಪುರ ಭೈರವಿ. ತ್ರಿಪುರ ಭೈರವಿಯು ವ್ಯಕ್ತಿಯ ಸುಪ್ತ ಶಕ್ತಿಯನ್ನು ಪ್ರಕಟಮಾಡುವ ಚಲನಾತ್ಮಕ ಮೂಲಶಕ್ತಿ; ಅದು ಅಂತಿಮವಾಗಿ ಸಹಸ್ರಾರಚಕ್ರದಲ್ಲಿ ಸಂಪೂರ್ಣವಾಗಿ ಸಾಕ್ಷಾತ್ಕಾರಗೊಳ್ಳುತ್ತದೆ ಎಂದು ಶಾಕ್ತ-ತಾಂತ್ರಿಕರು ನಂಬುತ್ತಾರೆ.
ಛಿನ್ನಮಸ್ತಾ: ತನ್ನ ಕತ್ತರಿಸಿದ ತಲೆಯನ್ನು ತಾನೇ. ತನ್ನ ಕೈಯಲ್ಲಿ ಹಿಡಿದು ರತಿ-ಮನ್ಮಥರ ಜೋಡಿಯ ಮೇಲೆ ನಿಂತಿರುವ ಛಿನ್ನಮಸ್ತಾ, ಮಹಾದೇವಿಯ ಒಂದು ರುದ್ರ ರೂಪ. ಕೊಡುವವಳೂ ಅವಳೇ ಪಡೆಯುವವಳೂ ಅವಳೇ; ಆಹಾರವೂ ಅವಳೇ, ಆಹಾರ ಸ್ವೀಕರಿಸುವವಳೂ ಅವಳೇ; ಅವಳೇ ಅನ್ನಪೂರ್ಣೆ, ಅವಳೇ ಶಾಖಾಂಬರಿ; ರಕ್ಷಕಿಯೂ ಅವಳೇ, ಭಕ್ಷಕಿಯೂ ಅವಳೇ; ಅವಳೇ ಯಜ್ಞ, ಅವಳೇ ಹವಿಸ್ಸು; ಅದ್ಭುತವೂ ಅವಳೇ, ಭೀಭತ್ಸವೂ ಅವಳೇ; ಅವಳೇ ಕಾಮಿ, ಅವಳೇ ಯೋಗಿನಿ; ಅವಳೇ ಸೃಷ್ಟಿಕರ್ತೃ, ಅವಳೇ ಲಯಕರ್ತೃ; ಅವಳೇ ಬಂಧಕಾರಕಿ, ಅವಳೇ
ಮೋಕ್ಷದಾಯಕಿ ಎನ್ನುತ್ತಾರೆ ತಾಂತ್ರಿಕರು.
ಧೂಮಾವತಿ: ಧೂಮಾವತಿಯು ಪ್ರಳಯ ಕಾಲದ ನಂತರ ಮತ್ತು ಹೊಸ ಸೃಷ್ಟಿಯ ಮೊದಲು ಇರುವ ಶೂನ್ಯತೆಯಲ್ಲಿ ಪ್ರಕಟಗೊಳ್ಳುವವಳು. ಮೃದು ಹೃದಯದವಳು. ನಿದ್ರೆ, ಮರೆವು, ಭ್ರಮೆ, ಮಂಕುತನಗಳ ಪ್ರಾಪಂಚಿಕ ಆಲೋಚನೆಗಳನ್ನೆಲ್ಲಾ ಇಲ್ಲವಾಗಿಸಿ ಯಾವುದಕ್ಕೂಅಂಟಿಕೊಳ್ಳದ ಮನಸ್ಥಿತಿಯ ಮಹತ್ವವನ್ನು ಮನಗಾಣಿಸುವ ಈಕೆ ಆತ್ಯಂತಿಕ ಸತ್ಯದ ಅರಿ-ಕ್ಷಯ-ಕಾರಕಳು ಮತ್ತು ಜ್ಞಾನ ಕಾರಕಳು.
ಬಗಲಮುಖಿ: ದೈತ್ಯರನ್ನು ಅಥವಾ ಪ್ರಾಕೃತಿಕ ವಿಕೋಪವನ್ನು ನಾಶಮಾಡಿ ಆಶ್ರಿತರನ್ನು ರಕ್ಷಿಸುವ, ದೈವಿಕ ಸಾಮರ್ಥ್ಯ, ಸಿದ್ಧಿ, ಯಶಸ್ಸುಗಳನ್ನು ಕೊಡುವ ಬಗಲಮುಖಿ ದೇವಿಗೆ ಹೊಂದಿಕೊಂಡಂತೆ ಒಂದು ಕಥೆ ಇದೆ: ಒಮ್ಮೆ ಭಯಂಕರವಾದ ಸುಂಟರಗಾಳಿ ಇಡೀ ಭೂಮಂಡಲವನ್ನೇ ಅಲ್ಲೋಲ ಕಲ್ಲೋಲ ಮಾಡಿತು. ಆಗ ವಿಷ್ಣು ಶಿವನ ಸಹಾಯವನ್ನು ಕೇಳಿದ. ಶಿವ ಹರಿದ್ರಾ ಸರೋವರದ ಬಳಿ ಬಗಲಾಮುಖಿ ದೇವಿಯನ್ನು ಕುರಿತು ತಪಸ್ಸು ಮಾಡಲು ಸಲಹೆ ನೀಡಿದ. ವಿಷ್ಣುವಿನ ತಪಸ್ಸಿಗೆ ಒಲಿದ ದೇವಿ ಹರಿದ್ರಾ ಸರೋವರದಿಂದ ಎದ್ದುಬಂದು ಸುಂಟರಗಾಳಿಯನ್ನು ನಿಯಂತ್ರಿಸಿದಳು. ಇನ್ನೊಂದು ಕಥೆಯ ಪ್ರಕಾರ ಮದನ ಎನ್ನುವ ದೈತ್ಯ ತಾನು ಆಡಿದುದೆಲ್ಲ ಸತ್ಯ ಆಗುವಂಥ ವಾಕ್ ಸಿದ್ಧಿಯ ವರವನ್ನು ಸಂಪಾದಿಸಿ ದುರುಪಯೋಗ ಮಾಡಿಕೊಳ್ಳಲಾರಂಭಿಸಿದ. ಅವನ ಹಿಂಸೆಯನ್ನು ತಾಳಲಾಗದ ದೇವಾನುದೇವತೆಯರು ಬಗಲಮುಖೀ ದೇವಿಗೆ ಮೊರೆಯಿಟ್ಟರು. ದೇವಿಯು ಅವನ ನಾಲಿಗೆಯನ್ನೇ ಕಿತ್ತುಹಾಕಿ ಅವನ ಶಕ್ತಿಯನ್ನು ಸ್ತಂಭನಗೊಳಿಸಿದಳು.
ಮಾತಂಗೀ: ಮಾತಂಗಿ ದೇವಿ ಸರಸ್ವತಿಯ ಅಂಶ ಆಗಿದ್ದು ವಾಕ್, ಸಂಗೀತ, ಕಲೆ ಮತ್ತು ಜ್ಞಾನಗಳ ವಿದ್ಯಾ ದೇವಿ. ಈಕೆಯನ್ನು ಪೂಜಿಸುವುದರಿಂದ ಜನರನ್ನು ತಮ್ಮ ಕಡೆಗೆ ಆಕರ್ಷಿಸಿಕೊಳ್ಳುವ, ಕಲೆಗಳ ಮೇಲೆ ಪ್ರಭುತ್ವವನ್ನು ಪಡೆಯುವ, ಅತ್ಯಂತ ಹಿರಿದಾದ ಜ್ಞಾನವನ್ನು ಪಡೆಯುವ
ಅಸಾಧಾರಣ ಶಕ್ತಿ ದೊರೆಯುತ್ತದೆ ಎನ್ನುತ್ತಾರೆ ತಾಂತ್ರಿಕರು. ನಾನಾ ಅವಯವ ತಂತ್ರವು ಮಾತಂಗಿ ದೇವಿಯನ್ನು ಅರಣ್ಯ-ಜ್ಞಾನಿ, ಅರಣ್ಯ-ಪುನರುತ್ಪಾದಕಿ ಅರಣ್ಯವಾಸಿ ಹಾಗೂ ಅರಣ್ಯಚರಿ; ಮನಸ್ಸಿನ ಭಾವನೆಯನ್ನು ಮಾತಾಗಿಯೂ, ಮಾತನ್ನು ಮನಸ್ಸಿನ ಭಾವವನ್ನಾಗಿಯೂ
ಭಾಷಾಂತರಿಸುವ ಈಕೆ ಮಂತ್ರಗಳ ಅಧಿದೇವಿ ಎನ್ನುವ ಭಾವದಲ್ಲಿ ಮಂತ್ರಿಣೀ, ಆಧ್ಯಾತ್ಮಿಕ ಗುರು ಎನ್ನುತ್ತದೆ.
ಕಮಲಾ: ಕಮಲಾ ದೇವಿಯು ವ್ಯಕ್ತಿಯ ದೇಹದಲ್ಲಿರುವ ಏಳೂ ಚಕ್ರಗಳನ್ನು ಜಾಗೃತಗೊಳಿಸಿ ಸ್ತ್ರೀಚೈತನ್ಯದ ಧರ್ಮವನ್ನು ಪ್ರೇರೇಪಿಸಿ ವ್ಯಕ್ತಿಯನ್ನು ಉನ್ನತಿಯ ಮಾರ್ಗದಲ್ಲಿ ಇರಿಸಬಲ್ಲವಳು. ಕೆಸರಿನಿಂದ ಒಡಮೂಡಿದ ಕಮಲದ ಹೂವಿಗೆ ಕೆಸರಿನ ಸೋಂಕು ಹೇಗೆ ಇರುವುದಿಲ್ಲವೋ ಹಾಗೆ ಈಕೆಯನ್ನು ಆರಾಧಿಸುವ ವ್ಯಕ್ತಿ ಸಂಸಾರದಲ್ಲಿದ್ದೂ ಅದಕ್ಕೆ ಅಂಟಿಕೊಳ್ಳದೆ ಇರಬಲ್ಲ; ಅತ್ಯಂತ ಅಚ್ಚುಕಟ್ಟಾಗಿರುವ ಕಮಲದ ದಳಗಳು ವಿಶ್ವ ಅತ್ಯಂತ ವ್ಯವಸ್ಥಿತ, ಸಮರಸ ಎನ್ನುವುದರ ಸೂಚಕ ಎನ್ನುತ್ತಾರೆ ತಂತ್ರ ಪಂಥೀಯರು.
ಈ ಮಹಾವಿದ್ಯಾದೇವಿಯರಲ್ಲಿ ಕಾಳಿಕಾ ದೇವಿಯು ಪರಮ ಶಕ್ತಿಗೆ, ತಾರಾದೇವಿಯು ವಾಕ್-ಶಕ್ತಿಗೆ, ತ್ರಿಪುರಸುಂದರಿಯು ಪರಮ ಸೌಂದರ್ಯ ಮತ್ತು ಪರಮಾನಂದಕ್ಕೆ, ಭುವನೇಶ್ವರಿಯು ಪರಮ ವ್ಯಾಪಕತೆಗೆ, ಭೈರವಿಯು ಉಜ್ವಲ ಆಕರ್ಷಣೆಗೆ, ಛಿನ್ನಮಸ್ತಾದೇವಿಯು ದಮನಕಾರೀ ಶಕ್ತಿಗೆ, ಧೂಮಾವತಿ ದೇವಿಯು ಸುಪ್ತ ಜಡತ್ವಕ್ಕೆ, ಬಗಲಮುಖೀ ದೇವಿಯು ಸ್ತಂಭನ ಶಕ್ತಿಗೆ, ಮಾತಂಗಿ ದೇವಿಯು ಉತ್ತಮ ಅಭಿವ್ಯಕ್ತಿಗೆ, ಕಮಲಾ ದೇವಿಯು ಸಾಮರಸ್ಯತೆ ಮತ್ತು ಹೊಂದಾಣಿಕೆಗೆ ಒಂದು ಪ್ರತೀಕ ಆಗಿ ವಾಸ್ತವತೆಯ ದಿಗ್-ದರ್ಶಕರು ಆಗಿದ್ದಾರೆ;ವಾಸ್ತವತೆಯ ಅಗಾಧತೆಯ ಅನುಭವವನ್ನು ಪಡೆದು ಅನುಭಾವಿಗಳಾಗಲು ಮಾರ್ಗದರ್ಶಕರಾಗಿದ್ದಾರೆ ಎಂದೆನ್ನಬಹುದು.
ಸಪ್ತಮಾತೃಕೆಯರು: ಶಕ್ತಿ ದೇವಿಯರೆಲ್ಲ ಮೂಲಭೂತವಾಗಿ ಮಾತೆಯರೇ. ದೇವೀ ಮಹಾತ್ಮೆಯು ವರ್ಣಿಸುವ ಸಪ್ತ ಮಾತೃಕೆಯರು – 1. ಬ್ರಹ್ಮನ ಶಕ್ತಿ ಮತ್ತು ಅಸಿತಾಂಗ ಭೈರವನ ಪತ್ನಿ ಆದ ಬ್ರಾಹ್ಮೀ 2. ವಿಷ್ಣುವಿನ ಶಕ್ತಿ ಮತ್ತು ಕ್ರೋಧ ಭೈರವನ ಪತ್ನಿ ಆದ ವೈಷ್ಣವೀ 3. ಶಿವನ ಶಕ್ತಿ ಮತ್ತು ರುರು ಭೈರವನ ಪತ್ನಿ ಆದ ಮಾಹೇಶ್ವರೀ (ರೌದ್ರೀ, ರುದ್ರಾಣೀ, ಮಹೇಶೀ, ಶಿವಾನೀ) 4. ಇಂದ್ರನ ಶಕ್ತಿ ಮತ್ತು ಕಪಾಲಭೈರವನ ಪತ್ನಿ ಆದ ಇಂದ್ರಾಣೀ (ಐಂದ್ರೀ, ಮಹೇಂದ್ರೀ, ವಜ್ರೀ) 5. ಕಾರ್ತಿಕೇಯನ ಶಕ್ತಿ ಮತ್ತು ಚಂಡ ಭೈರವನ ಪತ್ನಿ ಆದ ಕೌಮಾರೀ (ಕುಮಾರೀ,ಕಾರ್ತೀಕೀ, ಕಾರ್ತಿಕೇಯಿನೀ, ಅಂಬಿಕಾ) 6. ವಿಷ್ಣುವಿನ ವರಾಹಾವತಾರದ ಶಕ್ತಿ ಮತ್ತು ಉನ್ಮತ್ತ ಭೈರವನ ಪತ್ನಿ ಆದ ವಾರಾಹೀ (ವೈರಾಲೀ,
ವೇರಲ್, ದಂಡಿನೀ, ಧನದೈ ದೇವೀ) 7. ವಿಷ್ಣುವಿನ ಅವತಾರವಾದ ನರಸಿಂಹನ ಶಕ್ತಿ ಮತ್ತು ಸಂಹಾರ ಭೈರವನ ಪತ್ನಿ ಆದ ನಾರಸಿಂಹೀ (ಪ್ರತ್ಯಾಂಗೀರ).
ಮಾತೃಆರಾಧನಾ ಪ್ರಸ್ತುತತೆ: ಸ್ತ್ರೀಯ ಫಲವಂತಿಕೆ, ಮಾತೃತ್ವ ಮತ್ತು ಚೈತನ್ಯಗಳನ್ನು ಪ್ರಧಾನವಾಗಿ ಪೂಜ್ಯಭಾವ ಮತ್ತು ಭಕ್ತಿಯಿಂದ ಭಾವಿಸುವ ದೈವೀ ಆರಾಧನೆಯ ಶಾಕ್ತ-ತಂತ್ರ ಪಂಥದ ಎಳೆಗಳು ಜಗತ್ತಿನಾದ್ಯಂತ ಅತ್ಯಂತ ಪ್ರಾಚೀನಕಾಲದಿಂದಲೂ ಸಾಮಾಜಿಕ ರೂಢಿಗಳಲ್ಲಿಕಾಣಸಿಗುತ್ತವೆ. ನಮ್ಮ ದೇಶದಲ್ಲಿಯೂ ಅವು ಇದ್ದುದಕ್ಕೆ ಅತ್ಯಂತ ಪ್ರಾಚೀನವಾದ ವಾಸ್ತುಶಿಲ್ಪಾತ್ಮಕ ಪುರಾವೆಯಾಗಿ ಕ್ರಿಸ್ತ ಪೂರ್ವ 9000-8000 ಅವಧಿಯ ಪ್ಯಾಲಿಯಾಲಿತಿಕ್ ಯುಗದ ಬಾಘರ್ ಶಿಲೆಯು ಮಧ್ಯಪ್ರದೇಶದ ಸಿಧಿ ಜಿಲ್ಲೆಯಲ್ಲಿ ದೊರೆತಿದೆ.
ಕ್ರಿಸ್ತಪೂರ್ವದ ಶಾಕ್ತಪಂಥೀಯ ಶಿಶು ಸಂರಕ್ಷಕ ಶಕ್ತಿ ದೇವತೆಗಳು ಪ್ರಧಾನವಾಗಿ ರಣದೇವಿಯರಾಗಿ ಕಾಣಿಸಿಕೊಂಡದ್ದು 5ನೇ ಶತಮಾನದ ಗುಪ್ತರ ಕಾಲದಲ್ಲಿ. ಗುಪ್ತರ ರಾಜಕೀಯ ವಲಯವನ್ನು ಸಾಮ್ರಾಜ್ಯ ಎಂದು ಕರೆಯುತ್ತಾರೆ. ಯುದ್ದ ಮಾಡಿದ ಹೊರತೂರಾಜ್ಯವೊಂದು ಸಾಮ್ರಾಜ್ಯವಾಗಿ ವಿಸ್ತಾರವಾಗಲು ಸಾಧ್ಯವಿಲ್ಲ ಎನ್ನುವುದೊಂದು ವಾಸ್ತವ. ರಾಜ್ಯವಿಸ್ತರಣೆಗೆ ಯುದ್ಧ ಸಹಕಾರಿಯಾದರೂವಿಸ್ತಾರವಾದ ಭೂಪ್ರದೇಶದ ಆಡಳಿತ ಸುಗಮವಾಗಿ ಸಮಾಧಾನಕರವಾಗಿ ಇರಬೇಕಾದರೆ ರಾಜ್ಯದ ಆಡಳಿತದ ರೀತಿ ನೀತಿಗಳು ಮಾತೃತ್ವ ಭಾವವನ್ನು ಹೊಂದಿರುವುದು ಅತ್ಯವಶ್ಯ. ಈ ಹಿನ್ನೆಲೆಯಲ್ಲಿ ಶಕ್ತಿದೇವತೆಗಳು ಬರಿಯ ರಣದೇವಿಯರಾಗಿರದೆ ಆಶ್ರಿತರನ್ನು ಪ್ರೀತಿ ವಾತ್ಸಲ್ಯಗಳಿಂದ ಪೋಷಿಸುವ ಮಾತೆಯರೂ ಆದದ್ದು ಸಹಜ.
ಅಗಾಧ ಸೃಷ್ಟಿ, ಲಯ ಶಕ್ತಿಯ ಸೂಚಕ ಆದ ಮಾತೃ ದೇವತೆಗಳು ಜನಪ್ರಿಯ ದೇವತೆಗಳು. ನವರಾತ್ರಿಯ ಆಚರಣೆಯಲ್ಲಿ ದುರ್ಗಾದೇವಿಯ ವಿವಿಧ ಸಂರಕ್ಷಕ ರೂಪಗಳ ಪೂಜೆಯೇ ಪ್ರಮುಖವಾದದ್ದು. ದಿನನಿತ್ಯದ ಸ್ಮಾರ್ತ ಪೂಜೆಯಲ್ಲಿ ದೇವಿಯನ್ನು ಪ್ರತಿನಿಧಿಸುವ
ಮುದ್ರೆಗಳಿಗೆ, ಸ್ಮಾರ್ತ ಹೋಮ ಹವನಗಳಲ್ಲಿ ಮಂಡಲಕ್ಕೆ ವಿಶೇಷ ಮಹತ್ವ ಇದೆ. ಅನೇಕ ದೇವಸ್ಥಾನಗಳಲ್ಲಿ ದೈನಂದಿನ ಪೂಜೆಯಲ್ಲಿವಾದ್ಯಗೋಷ್ಠಿಯೊಂದಿಗೆ ದೇವಿಯ ಸೂಚಕ ಆದ ಬಲಿಪೀಠಗಳಿಗೆ ಬಲಿ ಹಾಕುವ ಪದ್ಧತಿ ಇದೆ. ಅನೇಕ ಹಳ್ಳಿಗಳಲ್ಲಿ ಚಂಡಿ, ಕಾಳಿ ಮುಂತಾದ ದೇವಿಯರನ್ನು ಗ್ರಾಮ ರಕ್ಷಕ ದೇವಿಯರು ಎಂದೂ, ವೈಯಕ್ತಿಕ ಸಮಸ್ಯೆಗಳನ್ನು ಪರಿಹರಿಸಿ ವ್ಯಕ್ತಿಯ ಹಿತವನ್ನು ಕಾಪಾಡುವವರು ಎಂದೂಪೂಜಿಸುತ್ತಾರೆ. ಈ ದೇವಿಯರ ಆರಾಧನೆ ಸಂತಾನ ಪ್ರಾಪ್ತಿ ಮತ್ತು ಸಂರಕ್ಷಣೆ, ಮರಣ, ರೋಗಭಯ ಮತ್ತಿತರ ಪೀಡಾ ನಿವಾರಣೆ, ಪ್ರಾಕೃತಿಕ ಪೀಡೆಗಳಿಂದ ಗ್ರಾಮಕ್ಕೆ ಉಂಟಾಗಬಹುದಾದ ಅಹಿತಗಳ ನಿವಾರಣೆ ಮುಂತಾದವುಗಳಿಗಾಗಿ ಈಗಲೂ ಪ್ರಾಮುಖ್ಯತೆಯನ್ನು ಉಳಿಸಿಕೊಂಡಿದೆ.
ಭಾರತದಾದ್ಯಂತ ಗುಡ್ಡ, ಬೆಟ್ಟ, ನದೀ ತೀರ, ದಟ್ಟ ಅರಣ್ಯ ಮುಂತಾದ ಸಹಜ ಪ್ರಾಕೃತಿಕ ಸ್ಥಳಗಳಲ್ಲಿ ಇರುವ ಭಕ್ತಿ ಕೇಂದ್ರಿತ ಶಕ್ತಿಪೀಠಗಳು ಭಾರತೀಯರನ್ನು ಸಾಮಾಜಿಕವಾಗಿ, ಧಾರ್ಮಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಒಂದುಗೂಡಿಸುವ ಪ್ರಮುಖ ಪ್ರೇರಕ ಶಕ್ತಿ ಆಗಿರುವುದರ ಜೊತೆಗೆ ಪ್ರಾಕೃತಿಕ ಸಂಪತ್ತಿನ ಸದುಪಯೋಗವಾಗುವುದರಲ್ಲಿ ಮತ್ತು ಅದರ ಸಂರಕ್ಷಣೆಯಾಗುವುದರಲ್ಲಿಯೂ ಪ್ರಮುಖ ಪಾತ್ರ ವಹಿಸಿವೆ. ವ್ಯಕ್ತಿಯ ಬದುಕನ್ನು ಸುಂದರ ಅಥವಾ ಅಸುಂದರಗೊಳಿಸುವುದರಲ್ಲಿ ಅವನ ಸುತ್ತಲಿನ ಪರಿಸರಕ್ಕೆ ಅದರದೇ ಆದ ಪಾತ್ರ ಇರುವುದನ್ನು
ಭಯ ವಿಧೇಯತೆ ಗೌರವ ಕೃತಜ್ಞತೆಗಳಿಂದ ಒಪ್ಪಿಕೊಳ್ಳಲು ಸಾಧ್ಯ ಆಗುವುದು ಸ್ವಾಭಾವಿಕ ಪ್ರಾಕೃತಿಕ ಪರಿಸರವನ್ನು ಭಕ್ತಿಭಾವದಿಂದ ಪರಿಭಾವಿಸಿದಾಗ ಮಾತ್ರ ಎಂಬುದೂ ಒಂದು ವಾಸ್ತವ ಸಂಗತಿ.
ಮಾತೃಕೆಗಳ ಆವಾಸಸ್ಥಾನಗಳು ಏಕೆ ಶಕ್ತಿಪೀಠಗಳಾಗಿವೆ ಎಂಬುದನ್ನು ಶಿವನ ಹಿನ್ನೆಲೆಯಲ್ಲಿಯೇ ವಿವರಿಸಿರುವುದು ಗಮನಾರ್ಹ.ವಾಸ್ತವಿಕತೆಯ ಮೂರು ಮುಖಗಳು ಸೃಷ್ಟಿ, ಸ್ಥಿತಿ, ಲಯ. ಶಿವ ಲಯಕರ್ತೃ. ಸೃಷ್ಟಿ, ಸ್ಥಿತಿ ಕಾರ್ಯಗಳಷ್ಟೇ ಜವಾಬ್ದಾರಿಯುತವಾದದ್ದು ಲಯ ಕಾರ್ಯ. ಉಳಿಸುವ, ಬೆಳೆಸುವ ಮಾತೃಭಾವ ಹಿನ್ನೆಲೆಯಲ್ಲಿ ಇರದಿದ್ದರೆ ಸೃಷ್ಟಿ, ಸ್ಥಿತಿಯಂತೆ ಲಯಕಾರ್ಯವೂ ಅರ್ಥಪೂರ್ಣವಾದದ್ದು ಆಗುವುದಿಲ್ಲ. ಇದಕ್ಕೆ ಪೂರಕವಾದದ್ದು ದಕ್ಷಯಜ್ಞದ ಕಥೆ. ವೈಯಕ್ತಿಕ ಮತ್ತು ಸಾಮುದಾಯಿಕ ಒಳಿತನ್ನು ಆಶಿಸಿ ಮಾಡುವ ಯಜ್ಞ ಮಾತೃಭಾವದ ಹಿನ್ನೆಲೆಯ ಒಂದು ಕರ್ಮಾಂಗ. ಶರತ್ತು ರಹಿತವಾಗಿ ಪ್ರೀತಿ ತೋರುವುದು ಮಾತೃಭಾವದ ಒಂದು ರೂಪ. ಇದನ್ನು ಭಾವಿಸದ ಶಿವನ ಮಾವ ದಕ್ಷ ಮಾಡಲು ಉದ್ದೇಶಿಸಿದ ಯಜ್ಞ ಅವನ ಮಗಳು ಸತಿಯ ಆತ್ಮಾರ್ಪಣೆಯಿಂದಾಗಿ ಧ್ವಂಸಗೊಂಡಿತು. ದುಃಖದಾವೇಗದಲ್ಲಿಸತಿಯ ಮೃತ ದೇಹವನ್ನು ಹೊತ್ತುಕೊಂಡು ಜಗತ್ತನ್ನು ತಿರುಗಿದ ಶಿವನನ್ನು ವಿಷ್ಣು ಮೃತ ಸತಿಯ ಅಂಗಾಂಗಗಳನ್ನೆಲ್ಲ ತುಂಡರಿಸಿ ಕಡು ವ್ಯಾಮೋಹದಿಂದ ಪಾರುಮಾಡಿದ್ದರ ಫಲ ಆ ತುಣುಕುಗಳು ಬಿದ್ದ ಸ್ಥಳಗಳು ಮಾತೃತ್ವದ ಶಕ್ತಿಪೀಠಗಳಾದದ್ದು,
ದಕ್ಷಯಜ್ಞವು ಕ್ರಿಯೆ, ಜ್ಞಾನಗಳ ಸಂಯೋಗವನ್ನು ಸೂಚಿಸುವ ಕಥೆಯೂ ಹೌದು. ಕ್ರಿಯೆಯು ಜ್ಞಾನದೊಂದಿಗೆ ಸಂಯೋಗಗೊಳ್ಳಬೇಕೋ ಅಥವಾ ಜ್ಞಾನವು ಕ್ರಿಯೆಯೊಂದಿಗೆ ಸಂಯೋಗಗೊಳ್ಳಬೇಕೋ ಎಂಬುದೊಂದು ಪ್ರಶ್ನೆ. ಸತಿ ತಾನೇ ಮುಂದಾಗಿ ಶಿವನನ್ನು ಒಲಿಸಿಕೊಂಡು ಮದುವೆಯಾದ ಪ್ರಸಂಗ ಅವಳ ಆತ್ಮಾರ್ಪಣೆಯಲ್ಲಿ ಮುಕ್ತಾಯವಾಯಿತು. ಶಿವ ಮುಂದಾಗಿ ಸತಿಯನ್ನು ಪಡೆಯಲೇ ಬೇಕೆಂಬ ವ್ಯಾಮೋಹಿ ಆದದ್ದು ಅವಳ ಮೃತ ದೇಹದ ತುಣುಕುಗಳು ಬಿದ್ದ ಸ್ಥಳಗಳಲ್ಲೆಲ್ಲ ಇಡೀ ಸತಿಯನ್ನು ಕಾಣುತ್ತಾ ಶಿವನೂ ಆಯಾ ಸ್ಥಳಗಳಲ್ಲಿ ನೆಲೆಸುವುದರಲ್ಲಿ ಕೊನೆಗೊಂಡಿತು. ಶಿವ ಪರಮ ಜ್ಞಾನಕ್ಕೆ ಸತಿ ತೀವ್ರವಾದ ಕ್ರಿಯೆಗೆ ಸಂಕೇತ.
ಕ್ರಿಯೆಯು ಜ್ಞಾನದೊಂದಿಗೆ ಸಂಯೋಗವಾದುದನ್ನು ಸೂಚಿಸುವ ದಕ್ಷಯಜ್ಞದ ಕಥೆಯ ಮೊದಲ ಭಾಗ ಮಾತೃತ್ವ ಭಾವ ಪ್ರಕಟವಾಗದೆ ವಿಫಲ ಆದುದನ್ನು ಹೇಳಿದರೆ ಜ್ಞಾನವು ಕ್ರಿಯೆಯೊಂದಿಗೆ ಸಂಯೋಗವಾದ ದಕ್ಷಯಜ್ಞದ ಕಥೆಯ ಎರಡನೆಯ ಭಾಗವು ಬರಿಯ ಪೌರಾಣಿಕ ಉದ್ದೇಶವಾದ ತಾರಕಾಸುರನ ಸಂಹಾರಕ್ಕೆ ಸೀಮಿತವಾಗದೆ ನಮ್ಮ ಅನುಭವಕ್ಕೆ ದಕ್ಕುವ, ಭಕ್ತರ ಆಶಯಗಳನ್ನು ಈಡೇರಿಸುವ ಮಾತೃಭಾವದ ಶಕ್ತಿಪೀಠಗಳು ಕಾಣಿಸಿಕೊಳ್ಳುವ ವ್ಯಾಪ್ತಿಯನ್ನು ಪಡೆದುದನ್ನು ಹೇಳುತ್ತದೆ.
ತಾಂತ್ರಿಕರು ಕುಂಡಲಿನೀ ಯೋಗವು ಕ್ರಿಯಾ ಶಕ್ತಿ, ಸಾಮರ್ಥ್ಯಗಳು ವಿಕಾಸವಾಗಿ ಬೌದ್ಧಿಕತೆಯಲ್ಲಿ ವಿಲೀನ, ಸಂಲಗ್ನ ಆಗುತ್ತದೆ ಮತ್ತು ಕುಂಡಲಿನಿ ಸಹಸ್ರಾರದಲ್ಲಿ ಅಮೃತ ಆಗುತ್ತದೆ, ಅಮೃತದ ಹನಿಗಳು ಮೈ ಮನಗಳನ್ನು ವ್ಯಾಪಿಸುವ ಅನುಭವ ಆಗುತ್ತದೆ ಎನ್ನುತ್ತಾರೆ. ಇದರಒಂದು ಸೂಚ್ಯಾರ್ಥ ಪರಸ್ಪರ ಒಂದನ್ನೊಂದು ಪ್ರೇರೇಪಿಸುವ, ಒಂದಕ್ಕೊಂದು ಪೂರಕ ಆಗುವ, ಒಂದನ್ನೊಂದು ವಿಸ್ತರಿಸುವ ಕ್ರಿಯೆ ಬುದ್ಧಿಗಳಮತ್ತು ಬುದ್ಧಿ ಕ್ರಿಯೆಗಳ ಸಂಯೋಗ ಆದರೆ ಮಾತ್ರ ಅವು ಅರ್ಥಪೂರ್ಣ ಎಂದು. ಅಮೃತ ಆಗುವ ಈ ಸಂಯೋಗವನ್ನು ಸಮರ್ಥವಾಗಿ,
ಸಮರ್ಪಕವಾಗಿ ಅರ್ಥೈಸುವ ಒಂದು ಪರಿಕಲ್ಪನೆ ಮಾತೃತ್ವ.
ಹರಪ್ಪ ಮೊಹೆಂಜೊದಾರೋ ಉತ್ಖನನದಲ್ಲಿ ದೊರೆತಿರುವ ಮಾತೃದೈವ ಎಂದು ಗುರುತಿಸಿರುವ ಮುದ್ರಿಕೆಯೊಂದರಲ್ಲಿ (plate XII, John Marshall: Mohenjodaro and the Indus Civilization, Vol.1) ಸ್ತ್ರೀಯ ಯೋನಿಯಿಂದ ಮೂಡಿಬಂದ ಸಸ್ಯವೊಂದರ ಚಿತ್ರ ಇದೆ. ಇದು ಸೃಷ್ಟ್ಯಾತ್ಮಕವೂ ಲಯಕಾರಕವೂ ಆದ ಶಕ್ತಿಯು ಹೇಗೆ ಮಾತೃ ತತ್ತ್ವ, ಅಮೃತತ್ವ ಆದೀತು ಎನ್ನುವುದರಸಾಂಕೇತಿಕ ಚಿತ್ರ-ವಿವರಣೆ. ಸಸ್ಯವು ಬೀಜವೊಂದರಿಂದ ಮೂಡಿಬಂದದ್ದು ಸೃಷ್ಟಿ; ಅದು ಬೀಜವನ್ನು ಇಲ್ಲವಾಗಿಸಿ ಮೂಡಿಬಂದದ್ದು ಲಯ.ಸಸ್ಯ ಬೀಜಗಳನ್ನು ಉತ್ಪಾದಿಸಿ ಸಂತಾನಾಭಿವೃದ್ಧಿ ಮಾಡುವುದು ಸೃಷ್ಟಿ. ಬೀಜಗಳನ್ನು ಉತ್ಪಾದಿಸಿದ ನಂತರ ಸಸ್ಯ ಇಲ್ಲವಾಗುವುದು ಲಯ. ಮನುಷ್ಯನ ಸಂದರ್ಭದಲ್ಲಿ ಸ್ತ್ರೀಯ ಗರ್ಭಾಶಯ ಸೃಷ್ಟಿಯ ಮಾಧ್ಯಮ. ಅಲ್ಲಿ ಮಗುವೊಂದರ ಮೂಡುವಿಕೆ ಸೃಷ್ಟಿ, ಅಲ್ಲಿಂದ ಹೊರಬಂದು ಅದರ ಸಂಪರ್ಕವನ್ನು ಕಡಿದುಕೊಳ್ಳುವುದು ಲಯ. ಆ ಮಗು ಮತ್ತೊಂದು ಮಗುವಿನ ಸೃಷ್ಟಿ ಮತ್ತು ಲಯಗಳಿಗೆ, ಆ ಇನ್ನೊಂದು ಮಗು ಮತ್ತೊಂದು ಮಗುವಿನ ಸೃಷ್ಟಿ ಮತ್ತು ಲಯಗಳಿಗೆ ಹೀಗೆ ನಿರಂತರವಾಗಿ ಮಧ್ಯವರ್ತಿ ಆಗುತ್ತಾ ಹೋಗುವುದೇ ಸೃಷ್ಟಿ ಲಯಗಳ ಅಮೃತತ್ವ,ಇಂಥ ಭಾವನಾತ್ಮಕ ತಾತ್ತ್ವಿಕ ಪರಂಪರೆಯೇ ಮಾತೃಆರಾಧನೆಯ ಮೂಲಮಾತೃಕೆ ಎನ್ನಬಹುದು.
-ಕೆ.ಎಲ್. ಪದ್ಮಿನಿ ಹೆಗಡೆ
ನಿಮ್ಮ ಲೇಖನಯಾವುದೇ ವಿಷಯವಾಗಲೀ..ಉತ್ತಮ ಮಾಹಿತಿಯನ್ನು ಒಳಗೊಂಡಿರುತ್ತದೆ..ಹಾಗೇ ನಿಮ್ಮ ಅದ್ಯಯನದ..ಆಳ ವಿಸ್ತಾರವನ್ನು ತಿಳಿಸುವಂತಿರುತ್ತದೆ..ಹಾಗೇ ಮಾತೃ ಆರಾಧನಾ..ಸೊಗಸಾದ ನಿರೂಪಣೆಯದಿಗೆ ಅನಾವರಣಗೊಂಡಿದೆ..ಧನ್ಯವಾದಗಳು ಮೇಡಂ
ಮಾಹಿತಿಪೂರ್ಣ
ಮಾಹಿತಿಪೂರ್ಣ ಸವಿಸ್ತಾರವಾದ ಲೇಖನ ಹಲವು ತಿಳಿಯದ ವಿಚಾರಗಳ ಮೇಲೆ ಬೆಳಕು ಚೆಲ್ಲಿತು.
ಜಗಜ್ಜನನಿಯ ಅಪರೂಪದ ಬಹುಮುಖಗಳನ್ನು ಪರಿಚಯಿಸಿದ ಪ್ರಬುದ್ಧ ಲೇಖನ…ಧನ್ಯವಾದಗಳು ಮೇಡಂ.
ಮಾತೃಪರಂಪರೆಯನ್ನು ಭಾವಿಸಿ ಲೇಖನ ಪ್ರಕಟಿಸಿದ ಹೇಮಮಾಲಾ ಮೇಡಂಗೆ, ಸೊಗಸಾಗಿ ಸ್ಪಂದಿಸಿದ ಬಿ.ಆರ್. ನಾಗರತ್ನ ಮೇಡಂಗೆ, ನಯನ ಬಜಕೂಡ್ಲು ಮೇಡಂಗೆ, ಪದ್ಮ ಆನಂದ್ ಮೇಡಂಗೆ, ಶಂಕರಿ ಶರ್ಮ ಮೇಡಂಗೆ ಮತ್ತು ಅನಾಮಿಕ ಓದುಗರಿಗೆ ಹೃತ್ಪೂರ್ವಕ ಧನ್ಯವಾದಗಳು