ಭಗವದ್ಗೀತಾ ಸಂದೇಶ
ಅರ್ಜುನನಿಗೆ ವಿಶ್ವರೂಪದ ದರ್ಶನ ಮಾಡಿಸುವುದಕ್ಕಾಗಿ ಪರಮಾತ್ಮನು ತನ್ನ ಯೋಗ ಬಲದಿಂದ ಒಂದು ಪ್ರಕಾರದ ಯೋಗ ಶಕ್ತಿಯನ್ನು ಅವನಿಗೆ ನೀಡಿದನು. ಆ ಶಕ್ತಿಯ ಪ್ರಭಾವದಿಂದ ಅರ್ಜುನನಿಗೆ ಅಲೌಕಿಕ ಸಾಮರ್ಥ್ಯ ದೊರೆತು ಭಗವಂತನ ದಿವ್ಯ, ಭವ್ಯ, ಅದ್ಭುತ ರೂಪವಾದ ವಿಶ್ವರೂಪವನ್ನು ವೀಕ್ಷಿಸಲು ಸಾಧ್ಯವಾಯಿತು. ಅದೇ ಪರಮಾತ್ಮನು ಕರುಣಿಸಿದ “ದಿವ್ಯದೃಷ್ಟಿ” ಯಾಗಿದೆ. ಇದೇ ಪ್ರಕಾರ ವೇದವ್ಯಾಸರು ನಿನಗೆ “ದಿವ್ಯದೃಷ್ಟಿ”ಯನ್ನು ಕರುಣಿಸುತ್ತೇನೆ; ನೀನು ಕುರುಕ್ಷೇತ್ರ ಯುದ್ಧವನ್ನು ವೀಕ್ಷಿಸಬಹುದು; ಎಂದು ಧೃತರಾಷ್ಟ್ರನಿಗೆ ಯುದ್ಧಾರಂಭಕ್ಕೆ ಮುಂಚಿತವಾಗಿ ಹೇಳುತ್ತಾರೆ. ಆಗ ಅವನು ಮಕ್ಕಳ ಆಟ, ಪಾಠ, ಬೆಳವಣಿಗೆಯನ್ನು ನೋಡದ ನಾನು, ಅವರು ಬಡಿದಾಡಿ ಸಾಯುವ ದೃಶ್ಯವನ್ನು ನೋಡಲಾರೆ. ಆದರೆ ಯುದ್ಧ ರಂಗದ ಸಮಸ್ತ ವಿಚಾರಗಳನ್ನೂ ಸುದ್ಧಿಗಳನ್ನೂ ತಿಳಿಯಲು ಬಯಸುತ್ತೇನೆ. ಆ “ದಿವ್ಯದೃಷ್ಟಿ”ಯನ್ನು ತನ್ನ ಸಾರಥಿ ಆದ ಸಂಜಯನಿಗೆ ಕರುಣಿಸಬೇಕೆಂದು ವ್ಯಾಸರಲ್ಲಿ ಕೇಳಿಕೊಳ್ಳುತ್ತಾನೆ. ಅಂತೆಯೇ ಸಂಜಯನಿಗೂ “ದಿವ್ಯದೃಷ್ಟಿ”ಯ ಅನುಗ್ರಹ ದೊರಕಿತು. ಅವನು ಭಗವಂತನ ವಿರಾಟ ರೂಪದರ್ಶನದ ಭಾಗ್ಯವನ್ನು ಪಡೆದನು.
ಅರ್ಜುನನು ಯಾವಾಗ ಬಲ, ವೀರ್ಯ, ಶಕ್ತಿ ಮತ್ತು ತೇಜದಿಂದ ಯುಕ್ತವಾದ ಭಗವಂತನ “ಈಶ್ವರೀಯ” ರೂಪವನ್ನು ಪ್ರತ್ಯಕ್ಷವಾಗಿ ನೋಡಲು ಇಚ್ಚಿಸುತ್ತಾನೋ, ಆಗ ಭಗವಂತನು ಕೂಡಾ ಶ್ರೀಕೃಷ್ಣನ “ಅವತಾರೀ” ರೂಪದೊಳಗೆ ಒಂದೇ ಕಡೆಯಲ್ಲಿ ಸಮಸ್ತ ವಿಶ್ವವನ್ನು ತೋರಿಸುತ್ತಾನೆ. ಅದನ್ನು ಅರ್ಜುನನಿಗೆ ತನ್ನ “ಚರ್ಮಚಕ್ಷು”ಗಳಿಂದ ವೀಕ್ಷಿಸುವುದು ಅಸಾಧ್ಯವಾಗಿತ್ತು. ಆದ್ದರಿಂದ ದಿವ್ಯ ಜ್ಞಾನವನ್ನು ಅನುಗ್ರಹಿಸುತ್ತಾನೆ. ಭಗವಂತನು ಅಧ್ಯಾಯ 11ರ 8ನೇ ಶ್ಲೋಕದಲ್ಲಿ ಹೀಗೆ ಹೇಳಿದ್ದಾನೆ…..
ನ ತು ಮಾಂ ಶಕ್ಯಸೇ ದ್ರಷ್ಟುಮ್
ಅನೇನೈವ ಸ್ವಚಕ್ಷುಷಾ I
ದಿವ್ಯಂ ದದಾಮಿ ತೇ ಚಕ್ಷುಃ
ಪಶ್ಯ ಮೇ ಯೋಗಮೈಶ್ವರಮ್ II
ಅರ್ಜುನ ನೀನು ನಿನ್ನ ಈ ಸಾಧಾರಣ ನೇತ್ರಗಳಿಂದ ನನ್ನನ್ನು ನೋಡಲಾರೆ. ನಿನಗೆ ದಿವ್ಯವಾದ ಕಣ್ಣುಗಳನ್ನು ಕೊಡುತ್ತೇನೆ. ಆ ದಿವ್ಯ ಚಕ್ಷುಗಳ ಮೂಲಕ ನನ್ನ ವಿಶ್ವರೂಪವನ್ನು ನೋಡು ಎನ್ನುತ್ತಾನೆ ಭಗವಂತ.
ಪರಮಾತ್ಮನಿಂದ ಅನುಗ್ರಹಿತನಾದ ಅರ್ಜುನನು ವಿರಾಟ ರೂಪದ ಆ ಭಯಂಕರ, ಅದ್ಭುತ ರೂಪವನ್ನು ಆಶ್ಚರ್ಯ, ಭಯ, ದಿಗ್ಭ್ರಮೆ ಮುಂತಾದ ಭಾವನೆಗಳಿಂದ ವೀಕ್ಷಿಸುವನು.
ಸಾಮಾನ್ಯ ಮನುಷ್ಯರಿಗೆ ಪ್ರಪಂಚದ ಎಲ್ಲಾ ದೇಶಗಳ ಘಟನೆಗಳನ್ನು ನೋಡಲು, ಸುದ್ದಿಗಳನ್ನು ಕೇಳಲು ಆಗುವುದಿಲ್ಲ. ಅಲ್ಲದೆ ಭವಿಷ್ಯದಲ್ಲಿ ಉಂಟಾಗುವ ಘಟನೆಗಳ ದೃಶ್ಯಗಳನ್ನು ಪ್ರತ್ಯಕ್ಷವಾಗಿ ವೀಕ್ಷಿಸಲಾಗುವುದಿಲ್ಲ. ಆದರೆ ಭಗವಂತನಿಂದ ಕೊಡಲ್ಪಟ್ಟ “ದಿವ್ಯದೃಷ್ಟಿ” ಯ ಮೂಲಕ ವಿಶ್ವರೂಪವನ್ನು ಅರ್ಜುನನಿಗೆ ವೀಕ್ಷಿಸಲು ಸಾಧ್ಯವಾಯಿತು.
ಹೀಗೆ ಭಗವಂತನ ಅದ್ಭುತ ಯೋಗ ಶಕ್ತಿಯ ಮೂಲಕ ಪ್ರಕಟಗೊಂಡ ವಿಶ್ವರೂಪವನ್ನು ಅರ್ಜುನನು ಭೂತ,ಭವಿಷ್ಯತ್, ವರ್ತಮಾನ ಕಾಲಗಳಲ್ಲಿ ಘಟಿಸಿದ ಮುಂದೆ ಘಟಿಸಲಿರುವ ಹಾಗೂ ಪ್ರಸ್ತುತ ಅವನ ಮುಂದೆ ಇರುವ ಎಲ್ಲವನ್ನು ವೀಕ್ಷಿಸುತ್ತಾನೆ.
ಹರಿಃಓಂ
-ವನಿತಾ ಪ್ರಸಾದ್ ಪಟ್ಟಾಜೆ, ತುಮಕೂರು
ನಿಮ್ಮ ಲೇಖನದಿಂದ..ನಮಗೂ ಸ್ವಲ್ಪ ಭಗವದ್ಗೀತಾ ಸಂದೇಶ… ಸಿಗುತ್ತದೆ.. ಆಗಾಗ್ಗೆ ಮೆಲಕುಹಾಕುವ ಹಾಗಾಗುತ್ತದೆ ವನಿತಾ ಮೇಡಂ.
Nice
ದಿವ್ಯ ಚಕ್ಷುಗಳನ್ನು ಪಡೆದ ಅರ್ಜುನನು ಪರಮಾತ್ಮನ ವಿರಾಟ್ ದರ್ಶನವನ್ನು ಪಡೆದು ದಿಗ್ಮೂಢನಾದ! ಭಗವದ್ಗೀತೆಯ ಶ್ಲೋಕವೊಂದರ ಭಾವಾನುವಾದ ಚೆನ್ನಾಗಿದೆ….ವನಿತಕ್ಕ.
ದಿವ್ಯದೃಷ್ಟಿಯ ಮಹತ್ವವನ್ನು ತಿಳಿಸುವ. ಭಗವದ್ಗೀತೆಯ ಭಾಗದ ಚಂದದ ವಿವರಣೆ.
Thankyou dear B.R.Nagarathna madam, Nayana Madam, Padma Anand madam.Thankyou once again.
ಅನಂತ ಧನ್ಯವಾದಗಳು ಶಂಕರಿ ಅಕ್ಕ.
ಹೌದು, ಎಲ್ಲ ಓದುಗರ ಮಾತುಗಳು ನನದೂ ಹೌದು…….ಹೀಗೆ ಮುಂದುವರಿಯಲಿ….ಪಾವನವಾಗುವ ಕಡೆ ಸಾಗೋಣ
ದಿವ್ಯ ಚಕ್ಷು ದೊರೆಯುವ ಸಂದರ್ಭವನ್ನು ಹೈಲೈಟ್ ಮಾಡಿ ಭಗವದ್ಗೀತೆಯನ್ನು ಗಮನಿಸಿರುವುದು ಚೆನ್ನಾಗಿದೆ