ಟೀಕಿಸುವವರು
ಅನುಕ್ಷಣ ದೇವರ ನೆನೆಯುತ್ತಲೇ
ಅವನಿರುವಿಕೆಯ ಟೀಕಿಸುವವರು
ಆಡಂಬರದಿ ಹಬ್ಬವ ಮಾಡುತ್ತಲೇ
ಆಚರಣೆಗಳನು ಟೀಕಿಸುವವರು.
ಇತಿಹಾಸ ಪುರಾಣಗಳ ಗೊತ್ತಿಲ್ಲದೇ
ಇಲ್ಲಸಲ್ಲದ್ದು ಹೇಳಿ ಟೀಕಿಸುವವರು
ಈಶ್ವರ ಸೃಷ್ಟಿಯಿಂದಲೇ ಹುಟ್ಟಿ
ಈಶ್ವರ ನಶ್ವರವೆಂದು ಟೀಕಿಸುವವರು.
ಉಪಕಾರದ ಸ್ಮರಣೆಯಿಲ್ಲದೇ
ಉಪ್ಪುಂಡ ಮನೆಯ ಟೀಕಿಸುವವರು
ಊಟ ತನ್ನಿಚ್ಛೆ, ನೋಟ ಪರರಿಚ್ಛೆಯರಿಯದೇ
ಊಟ ನೋಟಗಳನ್ನೇ ಟೀಕಿಸುವವರು.
ಋಣತ್ರಯ ತತ್ತ್ವ ತಿಳಿಯದೇ
ಋಣಾತ್ಮಕವಾಗಿ ಟೀಕಿಸುವವರು
ಎಲುಬಿಲ್ಲದ ನಾಲಗೆ ಮನುಜರು
ಎಡಬಿಡಂಗಿಗಳಾಗಿ ಟೀಕಿಸುವವರು.
ಏನು ತಿಳಿಯದೇ ದಾರಿ ತಪ್ಪಿಸಲು
ಏತ್ಲಾಂಡಿಗಳಾಗಿ ಟೀಕಿಸುವವರು
ಐದಾರು ಪದವಿ ಪಡೆದ ಮೂರ್ಖರು
ಐಕ್ಯತೆಯ ಒಡೆಯಲು ಟೀಕಿಸುವವರು.
ಒಂದಾಗಿ ಬಾಳುವ ಬುದ್ಧಿಯಿಲ್ಲದೇ
ಒಳಗೊಳಗೆ ಕುದ್ದು ಟೀಕಿಸುವವರು
ಓದು ಬರಹ ಸಂಸ್ಕಾರ ಗುಣವಿಲ್ಲದೇ
ಓರೆಕೋರೆ ಮನದಿ ಟೀಕಿಸುವವರು.
ಔದಾರ್ಯ ಮನೋಭಾವವಿಲ್ಲದೇ
ಔದಾರ್ಯವಂತರನ್ನು ಟೀಕಿಸುವವರು
ಅಂತಃಸತ್ವದ ಶಿವಜ್ಯೋತಿಯ ನುಡಿಗಳ
ಅಂತಃಕರಣದಿ ಪಾಲಿಸದೇ ಟೀಕಿಸುವವರು.
–ಶಿವಮೂರ್ತಿ.ಹೆಚ್. ದಾವಣಗೆರೆ.
ತುಂಬಾ ಚೆನ್ನಾಗಿ ದೆ,,,,ಪ್ರಸ್ತುತ ವಾಗಿದೆ
ವಾಸ್ತವ ಸಂಗತಿಗಳ ವರ್ತನೆಯ ಅನಾವರಣಗೊಂಡ ಕವನ ಚೆನ್ನಾಗಿದೆ.. ಸಾರ್
ಚೆನ್ನಾಗಿದೆ. ವಾಸ್ತವವನ್ನು ಅರುಹಿದ್ದೀರಿ
ಬದುಕಿನ ವಾಸ್ತವಿಕತೆಯನ್ನು ಅಕ್ಷರಮಾಲೆಯಲ್ಲಿ ತೆರೆದಿಟ್ಟ ಪರಿ ಅನನ್ಯ!