ಬೆಳಕು-ಬಳ್ಳಿ

ಮುಕ್ತಕಗಳು

Share Button

1.
ರಾಗ ಲಯ ತಾಳಗಳು ಸೇರಿದೊಡೆ ಮೂಡುವುದು
ಮಾಗಿರುವ ದನಿಯಲ್ಲಿ ಸೊಗದ ಸಂಗೀತ
ಬಾಗಿ ಗುರುವಿಗೆ ನಮಿಸಿ ಮನವಿಟ್ಟು ಸಾಧನೆಯು
ಸಾಗುತಿರೆ ಏಳಿಗೆಯು – ಬನಶಂಕರಿ

2.
ಮರಗಳನು ಕಡಿದೊಗೆದು ನಾಶಗೊಳಿಸುತಲಿರಲು
ಬರಗಾಲ ಬರದಿಹುದೆ ನಮ್ಮ ಧರೆಗೆ
ಧರಣಿಯಲಿ ಜೀವಜಲ ಶುದ್ಧ ಗಾಳಿಯು ಸಿಗಲು
ಇರಬೇಕು ಹಸಿರುಸಿರಿ – ಬನಶಂಕರಿ

3.
ದುಡಿಸದಿರಿ ಬಾಲರನು ಇನಿತು ದಯೆ ತೋರದೆಯೆ
ಕಡೆಗಣಿಸಿ ಕರುಣೆಯನು ಪುಟ್ಟ ಕಂದರಲಿ
ತಡೆಯಬೇಕಿದೆ ಕೂಲಿ ಮಾಡುತಿಹ ಮಕ್ಕಳನು
ಪಡೆಯಲೋಸುಗ ವಿದ್ಯೆ – ಬನಶಂಕರಿ

4.
ಎಡೆಬಿಡದ ಕಾಯಕದ ನಡುವಿನಲಿ ಅತಿಥಿಗಳು
ಸಡಗರದಿ ಆಗಮಿಸೆ ಮುದವದುವೆ ಮನಕೆ
ಅಡುಗೆಗಳನುಣಬಡಿಸಿ ಸಂಪ್ರೀತಿಗೊಳಿಸುತಲಿ
ಕೊಡಬೇಕು ಒಲವನ್ನು – ಬನಶಂಕರಿ

5.
ಸಟೆಯನಾಡುವುದಿಲ್ಲ ದರ್ಪಣವದೆಂದಿಗೂ
ದಿಟವಾದ ಮೊಗವನ್ನು ತೋರುವುದು ನಿತ್ಯ
ಕಟುಸತ್ಯವರಗಿಸುತ ಮನದ ಕನ್ನಡಿಯಿಣುಕಿ
ನಟನೆಯಾಡದೆ ಬದುಕು – ಬನಶಂಕರಿ

-ಶಂಕರಿ ಶರ್ಮ, ಪುತ್ತೂರು..

6 Comments on “ಮುಕ್ತಕಗಳು

    1. ಮೆಚ್ಚುಗೆಯ ನುಡಿಗಳಿಗೆ ವಂದನೆಗಳು, ನಾಗರತ್ನ ಮೇಡಂ

  1. ಗುರುವಿಗೆ ವಂದಿಸಿ
    ಪರಿಸರದೊಂದಿಗೆ ಸಹಬಾಳ್ವೆ ನಡೆಸಲು ಕರೆ ನೀಡಿ
    ಮನವಿಯ ಮೌಲ್ಯಗಳ ತೋರಿ
    ವಾಸ್ತವ ಜಗತ್ತಿಗೆ ಕರೆತಂದ ಮುಕ್ತಕಗಳಿಗೆ
    ನಮೋ ನಮೋ

    1. ಪ್ರೀತಿಯ ಸ್ಪಂದನೆಗೆ ಧನ್ಯವಾದಗಳು ಗಾಯತ್ರಿ ಮೇಡಂ

Leave a Reply to ನಯನ ಬಜಕೂಡ್ಲು Cancel reply

 Click this button or press Ctrl+G to toggle between Kannada and English

Your email address will not be published. Required fields are marked *