ಕೃತಿ ಪರಿಚಯ : ‘ಅಜ್ಞಾತ’, ಲೇಖಕರು :- ವಿವೇಕಾನಂದ ಕಾಮತ್
ಪುಸ್ತಕ :- ಅಜ್ಞಾತ
ಲೇಖಕರು :- ವಿವೇಕಾನಂದ ಕಾಮತ್
ಪ್ರಕಾಶಕರು :- ವಂಶಿ ಪಬ್ಲಿಕೇಶನ್ಸ್
ಬೆಲೆ -170/-
ಪುಟಗಳು -184
ವಾಸುದೇವ ನಾಡಿಗ್ ಅವರ ಮುನ್ನುಡಿ. ಇಲ್ಲಿ ಸಾಹಿತ್ಯ ಲೋಕದ ಇಂದಿನ ಕಹಿ ಸತ್ಯವೊಂದು ಅನಾವರಣಗೊಂಡಿದೆ. ಇವತ್ತು ಸಾಹಿತ್ಯದ ಹೆಸರಲ್ಲಿ ನಡೆಯುತ್ತಿರುವ ಪ್ರಚಾರ, ಹೆಸರಿಗಾಗಿ ನಡೆಯುತ್ತಿರುವ ಸ್ಪರ್ಧೆ ಎಂತಹದ್ದು ಅನ್ನೋದನ್ನ ವಾಸುದೇವ ನಾಡಿಗ್ ಸರ್ ಬಹಳ ಚೆನ್ನಾಗಿ ಹೇಳಿದ್ದಾರೆ. ವಸುಧೇಂದ್ರ ಅವರ ಬೆನ್ನುಡಿ ಕಾದಂಬರಿಯತ್ತ ಬಿಡದೆ ಸೆಳೆಯುತ್ತದೆ.
ಕಾದಂಬರಿಗಳ ಲೋಕದಲ್ಲಿ ಸಾಮಾನ್ಯವಾಗಿ ನನಗೆ ಇಷ್ಟವಾಗುವುದು ಕೆಲವೇ ಕೆಲವು ಮಂದಿಯ ಕಾದಂಬರಿಗಳು. ಅದರಲ್ಲಿ ವಿವೇಕಾನಂದ ಕಾಮತರ ಕಾದಂಬರಿಗಳೂ ಸೇರಿವೆ. ಸಾಕಷ್ಟು ಹೆಸರು ಮಾಡಿದ್ದರೂ ಕೂಡಾ ವಿವೇಕಾನಂದ ಕಾಮತ್ ಅವರದ್ದು ಸೀದಾ ಸಾದಾ, ನಿಗರ್ವಿ ವ್ಯಕ್ತಿತ್ವ. “ತುಂಬಿದ ಕೊಡ ತುಳುಕುವುದಿಲ್ಲ” ಅನ್ನುವ ನಾಣ್ಣುಡಿ ಬಹುಶಃ ಇಂತಹವರನ್ನು ನೋಡಿಯೇ ಹುಟ್ಟಿಕೊಂಡಿದೆ.
ವಿವೇಕಾನಂದ ಕಾಮತ್ ಅವರ ಪ್ರತಿಯೊಂದು ಕಾದಂಬರಿಯೂ ಒಂದರಿಂದ ಒಂದು ವಿಭಿನ್ನ. ಇವರ ಕಥೆಗಳಲ್ಲಿ ಓದುಗನ ಮನಸ್ಸನ್ನು ಹಿಡಿದಿಡುವ ಅಂಶಗಳು ಬಹಳ ಸರಳವಾಗಿ ಇವೆ. ಇವರು ಪ್ರೀತಿ ಪ್ರೇಮ, ಬದುಕು, ವಾಸ್ತವ, ಜೀವನ ಇವೆಲ್ಲವುಗಳ ಕುರಿತಾಗಿ ಬರೆಯುವ ಶೈಲಿ ಬಹಳ ಸರಳ ಹಾಗೂ ಚಂದ. ಈ ಕಾದಂಬರಿಯೂ ಇದೇ ಕಾರಣಕ್ಕೆ ನನಗೆ ಇಷ್ಟವಾಗಿದೆ.
ಪ್ರೀತಿ ಅನ್ನುವುದು ಯಾರನ್ನೂ ಹೇಳಿಕೇಳಿ ಹುಟ್ಟಿಕೊಳ್ಳುವುದಿಲ್ಲ . ಇದು ಹೃದಯಗಳ ನಡುವಿನ ಸಂಗಮ. ಮನಸ್ಸುಗಳ ನಡುವಿನ ಮಿಲನ. ಬಡತನದಲ್ಲೂ ಇದು ಹೇಗೆ ಅರಳುತ್ತದೆ ಮತ್ತು ಹೊಂದಿಕೊಂಡು ಹೇಗೆ ಬದುಕು ನಡೆಸುತ್ತದೆ ಅನ್ನುವ ಅಂಶವನ್ನು ಕಾದಂಬರಿಯ ಆರಂಭದಲ್ಲಿ ಕಾಣಬಹುದು. ಹಂತ ಹಂತವಾಗಿ ಸಾಗುವ ಪ್ರೀತಿ ತುಂಬಿದ ಬದುಕು, ಈ ಪಯಣದಲ್ಲಿ ಜರ್ಜರಿತ ಗೊಳಿಸುವಂತೆ ಘಟಿಸುವ ಘಟನೆಗಳು, ಆ ಘಟನೆಗಳು ಬದಲಾಯಿಸುವ ಕಥಾನಾಯಕನ ಜೀವನದ ದಿಕ್ಕು.
ಕನ್ನಡ ಭಾಷೆಯ ಹಿರಿಮೆಗೆ ಕಾಯಕನಾಥ ಬಂಗಾಳಿಯಾಗಿದ್ದೂ ಕನ್ನಡ ಕಲಿಯುವ ಸಂದರ್ಭವನ್ನು ಕಥೆಯಲ್ಲಿ ಸೃಷ್ಟಿಸುವ ಮೂಲಕ ನೀಡಿದ ಮಹತ್ವ ಲೇಖಕರ ಭಾಷಾಭಿಮಾನಕ್ಕೆ ಇಲ್ಲಿ ಸಾಕ್ಷಿಯಾಗುತ್ತದೆ. ಯಾವುದೇ ವಿಚಾರವಿರಲಿ ಅದನ್ನು ತಮ್ಮ ಕಥೆಯಲ್ಲಿ ಸಂದರ್ಭ ನೋಡಿ ಎಲ್ಲಿ, ಹೇಗೆ, ಯಾವ ರೀತಿ ಅಳವಡಿಸಬೇಕು, ಸಮಾಜಕ್ಕೆ ಸಂದೇಶ ನೀಡಬೇಕು ಅನ್ನುವ ಅಂಶದಲ್ಲಿ ನಿಜವಾಗಿಯೂ ಕಾಮತ್ ರವರು ಪಳಗಿದವರು. ಈ ರೀತಿಯ ಬರವಣಿಗೆ, ಓದುಗರ ಮನಸ್ಸನ್ನು ಸೆಳೆಯುವ ಕಲೆ ಎಲ್ಲರಿಗೂ ಸಿದ್ಧಿಸುವುದಿಲ್ಲ.
ಬಾಳಿನ ಚದುರಂಗದಾಟದಲ್ಲಿ ವಿಧಿಯ ನಿರ್ಣಯವೇ ಅಂತಿಮ. ಆ ವಿಧಿ ಎಂಬ ವಿಧಾತಾ ಆಡಿಸಿದಂತೆ ಈ ಬದುಕು. ಅದು ಎಷ್ಟರ ಮಟ್ಟಿಗೂ ಒಳ್ಳೆಯದಾಗಲು ಬಹುದು, ಉಸಿರನ್ನೇ ಕೊನೆಗಾಣಿಸುವಷ್ಟು ಕೆಟ್ಟದಾಗಲು ಬಹುದು ಅನ್ನುವ ವಿಚಾರಧಾರೆಗಳನ್ನು ಕಾಯಕ ನಾಥನ ಬದುಕಿನ ಚಿತ್ರಣ ಓದುಗರ ಮನಸ್ಸಿನಲ್ಲಿ ತುಂಬುತ್ತದೆ.
ಬಾಳ ಸಂಗಾತಿಯನ್ನು ಕಳೆದುಕೊಂಡಂತಹ ಸಂದರ್ಭದಲ್ಲಿ ಕೆಲವು ಗಂಡಸರು ಮರು ಮದುವೆಯಾಗಲು ಹೆಚ್ಚು ಯೋಚಿಸದೆ ಇನ್ನೊಬ್ಬಳನ್ನು ಮರು ಮದುವೆಯಾಗುತ್ತಾರೆ. ಈ ಕತೆಯಲ್ಲಿ ಮದುವೆಯ ಮಹತ್ವ ಹಾಗೂ ಒಂದು ಬದುಕಿಗೆ ಒಂದೇ ಮದುವೆ ಅನ್ನುವುದರ ಮೂಲಕ ಬಾಳಸಂಗಾತಿಯ ಮಹತ್ವವನ್ನು ಎತ್ತಿ ಹಿಡಿದ ರೀತಿ ಗಮನ ಸೆಳೆಯಿತು. ಒಮ್ಮೆ ಒಬ್ಬರನ್ನು ಬಾಳಸಂಗಾತಿಯ ರೂಪದಲ್ಲಿ ತನ್ನವರನ್ನಾಗಿಸಿಕೊಂಡ ಮೇಲೆ ಅವರು ಜೀವನ ಮಾತ್ರವಲ್ಲ ಉಸಿರಿನಲ್ಲೂ ಬೆರೆತು ಹೋಗುತ್ತಾರೆ. ಅಂತಹವರನ್ನು ಕಳೆದುಕೊಂಡಂತಹ ಸಂದರ್ಭದಲ್ಲಿ ಪುನಃ ಬೇರೊಬ್ಬರನ್ನು ವಿವಾಹವಾಗುವುದಾದರೆ ವಿವಾಹವಾಗಲು ತಯಾರಾಗುವ ವ್ಯಕ್ತಿಯಲ್ಲಿ ಕಳೆದುಕೊಂಡ ಜೀವದೊಡನೆ ಪ್ರೀತಿ, ಬಾಂಧವ್ಯ, ಅನುರಾಗದ ನಂಟು ಆಳವಾಗಿ ಬೇರೂರಿಲ್ಲವೆಂದೇ ಅರ್ಥ ಅನ್ನುವ ವಿಚಾರಗಳು ಈ ಭಾಗವನ್ನು ಓದುವಾಗ ಹಾದುಹೋದವು ಮನದಲ್ಲಿ.
ಕತೆ ಸಾಗಿದಂತೆ ಸಿಗುವ ಸುಂದರ ಪ್ರಕೃತಿಯ ವರ್ಣನೆ. ಇಲ್ಲಿ ಮನುಷ್ಯನ ಬದುಕು ಹಾಗೂ ಪ್ರಾಣಿ ಪಕ್ಷಿಗಳ ಬದುಕಿನ ಜೊತೆಗೆ ಒಂದಷ್ಟು ತುಲನೆ. ಪ್ರಕೃತಿಯೆ ರಮಣೀಯ ಸ್ವರ್ಗ ಅನ್ನುವ ರೀತಿಯಲ್ಲಿ ಇಲ್ಲಿ ಪ್ರತಿಯೊಂದು ಅಂಶವನ್ನು ವಿವರಿಸಲಾಗಿದೆ. ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸಿ, ಅನುಭವಿಸಿದ ಮನಸ್ಸುಗಳಿಗೆ ಇಲ್ಲಿ ಹೇಳಿರುವ ಅಂಶಗಳ ಸತ್ಯಾಸತ್ಯತೆ ಅನುಭವಕ್ಕೆ ಬರುತ್ತದೆ. ಬದುಕಿನ ಜಂಜಾಟ, ತೀರದ ತೃಷೆಗಳ ಹಿಂದೆ ಓಡುವುದೇ ಮಾನವನ ಬದುಕಾದಾಗ ಅವನು ಇಂಥಹ ಪುಟ್ಟ ಪುಟ್ಟ ಸುಂದರ ವಿಚಾರಗಳನ್ನ ಸವಿಯುವುದರಲ್ಲಿ ಸೋಲುತ್ತಾನೆ. ಕೆಲವೊಮ್ಮೆ ಬದುಕಲ್ಲಿ ಬಂದೆರಗುವ ಆಘಾತ, ಹೊಡೆತ, ಸಂದರ್ಭಗಳು ನಮಗೆ ಈ ಸತ್ಯವನ್ನು ಮನದಟ್ಟಾಗಿಸುತ್ತವೆ. ಇದಕ್ಕೆ ಉದಾಹರಣೆ ನಮ್ಮೆಲ್ಲರ ಇಂದಿನ ಪರಿಸ್ಥಿತಿ.
ಈ ಜಗತ್ತಿನಲ್ಲಿ ಹೆಚ್ಚಿನವರು ಎಲ್ಲವೂ ಇದ್ದು ಎಲ್ಲರೂ ಇದ್ದು ಒಂದಲ್ಲ ಒಂದು ರೀತಿಯಲ್ಲಿ ಅನಾಥರೆ. ಯಾರೂ ಇಲ್ಲದ ಒಬ್ಬಂಟಿಗನಾಗಿ ಯಾರ ಜೊತೆ ಇರುತ್ತಾನೊ, ಯಾರ ಸಹಾಯಕ್ಕೆ ಧಾವಿಸುತ್ತಾನೊ ಅವರ ಜೊತೆಗೆಯೆ ಯಾವುದೇ ಅಪೇಕ್ಷೆಯಿಲ್ಲದೆ, ನಿಷ್ಕಲ್ಮಶ ಪ್ರೀತಿ ವಾತ್ಸಲ್ಯ ತೋರಿ, ನವಿರಾದ ಬಾಂಧವ್ಯವನ್ನು ಬೆಸೆದು ನಮ್ಮವನೇ ಅನ್ನಿಸಿಕೊಳ್ಳುವ ಕಥೆಯಲ್ಲಿ ಬರುವ ಒಂದು ಪಾತ್ರ ಜಂಪಯ್ಯನದ್ದು. ಈ ಪಾತ್ರ ಅದೇಕೋ ಬಹಳ ಇಷ್ಟವಾಯಿತು, ಆಪ್ತವಾಯಿತು. ಬಾಂಧವ್ಯ ಯಾವತ್ತೂ ಜಾತಿಯನ್ನು ಕೇಳುವುದಿಲ್ಲ, ಧರ್ಮ ಯಾವುದೆಂದು ಪ್ರಶ್ನಿಸುವುದಿಲ್ಲ. ಅಲ್ಲಿ ಇರುವುದು ಕೇವಲ ಮಾನವೀಯತೆ, ನಿಷ್ಕಲ್ಮಶ ಪ್ರೀತಿ, ಬೆಸೆಯುವ ಸ್ನೇಹ ಮಾತ್ರ. ಈ ಅಂಶವನ್ನು ಲೇಖಕರು ಕಾದಂಬರಿಯಲ್ಲಿ ಕಟ್ಟಿಕೊಟ್ಟ ರೀತಿ ತುಂಬಾ ಸೊಗಸಾಗಿದೆ, ಹೃದಯಸ್ಪರ್ಶಿಯಾಗಿದೆ ಹಾಗೂ ಲೇಖಕರು ಸಮಾಜಕ್ಕೆ ಈ ಮೂಲಕ ನೀಡುತ್ತಿರುವ ಒಂದು ಸುಂದರ ಸಂದೇಶವಾಗಿದೆ.
ಪ್ರಕೃತಿಯ ಮಡಿಲು ಹಾಗೂ ನಗರದ ನಡುವಿನ ತುಲನೆ ಇಲ್ಲಿ ಬಹಳ ಸೊಗಸಾಗಿ ಮೂಡಿಬಂದಿದೆ, ಅದು ನಿಜ ಕೂಡ. ಪ್ರಕೃತಿ ಎಂದರೆ ಕನ್ನಡಿಯಂತೆ ನಿರ್ಮಲ. ಆದರೆ ನಗರದ ಬದುಕಲ್ಲಿ ಕ್ಷಣಕ್ಕೊಂದು ವೇಷ ಮುಖವಾಡ ಧರಿಸಿ ಸಾಗುವುದೇ ಬದುಕು. ನಮ್ಮತನ ಆ ಕಾಂಕ್ರೀಟು ಕಾಡಿನೊಳಗೆ ಹೇಳ ಹೆಸರಿಲ್ಲದಂತೆ ಮಾಯವಾಗುವುದೇ ಹೆಚ್ಚು. ಆದರೆ ಪ್ರಕೃತಿ ಹಾಗಲ್ಲ. ಮನುಷ್ಯನಿಗೆ ಸಹಜತೆಯ ಪಾಠವನ್ನು ಕಲಿಸುತ್ತದೆ.
ಬದುಕಿರುವಷ್ಟು ದಿನವೂ ಯಾವಾಗಲೂ ನಾನು, ನನ್ನದು ಅನ್ನುವ ಭಾವದೊಳಗೆ ಹೊಕ್ಕಿ ನಶ್ವರ ವಸ್ತು, ಜಾಗ ಗಳಿಗೋಸ್ಕರ ಮಾನವೀಯತೆಯನ್ನು ಮರೆತು ಜೊತೆಗಿದ್ದವರೊಂದಿಗೆ, ಆಸುಪಾಸು ನೆರೆಹೊರೆಯವರೊಂದಿಗೆ ಕಿತ್ತಾಟ, ಜಗಳ, ಹೊಡೆದಾಟವನ್ನೇ ನಡೆಸಿ ಬಿಡುತ್ತೇವೆ. ಆದರೆ ಪ್ರಕೃತಿ ವಿಕೋಪದಂತಹ ಘಟನೆ ಮೇಲು ಕೀಳಿಲ್ಲದೆ ಎಲ್ಲವನ್ನೂ ನಾಶ ಮಾಡಿ, ಎಲ್ಲರನ್ನು ಬೀದಿಗೆ ತಂದು ನಿಲ್ಲಿಸಿದಾಗ ಬದುಕಿನ ಸತ್ಯ ಹೇಗೆ ಅರಿವಾಗುತ್ತದೆ ಅನ್ನುವುದನ್ನು ಲೇಖಕರು ಕಥೆಯಲ್ಲಿ ವಿವರಿಸಿದ ಪರಿ ಬಹಳ ಸೊಗಸಾಗಿದೆ. ಹೃದಯ ವಿದ್ರಾವಕ ಅಂತ್ಯ ಕತ್ತೆಯದ್ದು. ಆದರೂ ತುಂಬ ಇಷ್ಟವಾಗುತ್ತದೆ ಕಾದಂಬರಿ ಏಕೆಂದರೆ ಬದುಕಿನ ವಾಸ್ತವದ ಮೇಲೆ ಬೆಳಕು ಚೆಲ್ಲಲಾಗಿದೆ ಇಲ್ಲಿ. ತೀರಾ ಸಾಮಾನ್ಯನ ಬದುಕಿನ ಚಿತ್ರಣವನ್ನು ಕಥೆಯಾಗಿಸಿದ ರೀತಿ ಇಲ್ಲಿ ಗಮನ ಸೆಳೆಯುತ್ತದೆ.
-ನಯನ ಬಜಕೂಡ್ಲು
ಕೃತಿಯ ಪರಿಚಯವನ್ನು ಬಹಳ ಚೆನ್ನಾಗಿ ಮಾಡಿಕೊಟ್ಟಿದ್ದೀರಾ ನಯನ ಮೇಡಂ ಅದಕ್ಕಾಗಿ ಧನ್ಯವಾದಗಳು