ಶಿಕ್ಷಕ ವೃತ್ತಿ ಒಂದು ಅವಲೋಕನ

Share Button

ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯಲ್ಲಿ ಗುರುವಿಗೆ ತುಂಬಾ ಮಹತ್ವದ ಸ್ಥಾನವಿದೆ. ಬ್ರಹ್ಮ,ವಿಷ್ಣು, ಮಹೇಶ್ವರರಿಗೂ ಮಿಗಿಲಾದವನೆಂದೂ, ಸಾಕ್ಷಾತ್ ಪರಬ್ರಹ್ಮನೆಂದೂ ಗುರುವನ್ನು ನಮ್ಮ ಪರಂಪರೆ ಬಣ್ಣಿಸಿದೆ. ತಾಯಿಯನ್ನು ಮೊದಲ ಗುರು ಎಂದೇ ಕವಿ ಮನಸ್ಸು ವರ್ಣಿಸಿದೆ. “ಮನೆಯೆ ಮೊದಲ ಪಾಠಶಾಲೆ, ಜನನಿ ತಾನೆ ಮೊದಲ ಗುರುವು, ಜನನಿಯಿಂದ ಪಾಠ ಕಲಿತ ಜನರೇ ಧನ್ಯರು” ಎಂಬುದೇ ಆ ಕವಿವಾಣಿ.

ಗುರು, ಶಿಕ್ಷಕ, ಆಚಾರ್ಯ, ಉಪಾಧ್ಯಾಯ, ಅಧ್ಯಾಪಕ ಎಂಬೆಲ್ಲಾ ಹೆಸರುಗಳಿಂದ ನಾವು ಗುರುವನ್ನು ಗೌರವಿಸುತ್ತೇವೆ. ಶಿಕ್ಷಕ ವೃತ್ತಿಯನ್ನು ‘ನೋಬಲ್ ಪ್ರೊಫೆಷನ್’ ಎಂದೇ ಕರೆಯಲಾಗಿದೆ. ಶಿಕ್ಷಕರನ್ನು ಗೌರವಿಸುವ ಪರಂಪರೆ, ನಮ್ಮ ಜನಮಾನಸದಲ್ಲಿ ಹಾಸು ಹೊಕ್ಕಾಗಿದೆ. ಈಗ್ಗೆ 40-50 ವರ್ಷಗಳ ಹಿಂದೆಯೂ ಸಹ ಶಿಕ್ಷಕ ಎಂದರೆ ಆ ಊರಿನ ಪ್ರಮುಖರಲ್ಲಿ ಒಬ್ಬ ಎಂದೇ ಪರಿಭಾವಿಸಲಾಗುತ್ತಿತ್ತು. ಆತ ಕೆಲವೊಂದು ವೇಳೆ ಆ ಊರಿನ ನ್ಯಾಯಾಧೀಶನೂ ಆಗಿರುತ್ತಿದ್ದ; ವೈದ್ಯನೂ ಆಗಿರುತ್ತಿದ್ದ; ಸಲಹೆಗಾರನೂ ಅಗಿರುತ್ತಿದ್ದ. ಒಟ್ಟಾರೆಯಾಗಿ ಶಿಕ್ಷಕ ಎಂದರೆ ಎಲ್ಲರ ಗೌರವವನ್ನು ಸಂಪಾದಿಸಿದ ವ್ಯಕ್ತಿಯಾಗಿರುತ್ತಿದ್ದ. ಆದರೆ ಇತ್ತೀಚಿನ ವರ್ಷಗಳಲ್ಲಿ ಎಲ್ಲರೂ ಗಮನಿಸಿರುವಂತೆ ಶಿಕ್ಷಕ ಗೌರವಸ್ಥನಾಗಿ ಉಳಿದಿಲ್ಲ. ಆತನ ಮೇಲೆ ಊರಿನ ಜನರೇ ಆರೋಪ ಮಾಡುತ್ತಿದ್ದಾರೆ. ಈತ ನಮ್ಮ ಮಕ್ಕಳಿಗೆ ಪಾಠ ಮಾಡುವುದು ಬೇಡ ಎನ್ನುತ್ತಿದ್ದಾರೆ.

ಏಕೆ ಹೀಗಾಗುತ್ತಿದೆ ?

ಶಿಕ್ಷಕ ವೃತ್ತಿಯ ಅರ್ಹತೆಗಳಿಸಿ, ಶಿಕ್ಷಕರಾಗಿ ನೇಮಕಗೊಂಡ ಒಂದೆರಡು ವರ್ಷ ಚೆನ್ನಾಗಿಯೇ ಕರ್ತವ್ಯ ನಿರ್ವಹಿಸುವ ನಮ್ಮ ಶಿಕ್ಷಕರಲ್ಲಿ ಕೆಲವರು, ಆನಂತರದ ದಿನಗಳಲ್ಲಿ ತಮ್ಮ ವೃತ್ತಿ ಪಾವಿತ್ರ್ಯವನ್ನು ಮರೆಯುತ್ತಾರೆ. ಶಿಕ್ಷಕರಿಗೆ ಸಲ್ಲದ ಕಾರ್ಯಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ಬೇಡದ ರಾಜಕೀಯ ಆಸೆಗಳಿಗೆ, ಕಾಂಚಾಣದ ಆಕಾಂಕ್ಷೆಗಳಿಗೆ ಬಲಿಯಾಗುತ್ತಾರೆ; ಕೆಟ್ಟ ಹೆಸರು ಪಡೆಯುತ್ತಾರೆ. ಇದರಿಂದ ಪೋಷಕರಿಗೆ ಹಾಗೂ ಮಕ್ಕಳಿಗೆ ಇವರ ಮೇಲಿನ ಗೌರವ ಸಹಜವಾಗಿ ಕಡಿಮೆಯಾಗುತ್ತಾ ಹೋಗುತ್ತದೆ. ಮತ್ತೆ ಕೆಲವು ಶಿಕ್ಷಕರು, ಪಾಠ ಬೋಧನೆಯ ತಂತ್ರಗಳೇನು? ಬೋಧನೆಯಲ್ಲಿ ಆಯೋಜಿಸಬೇಕಾದ ಚಟುವಟಿಕೆಗಳೇನು? ಸ್ಫೂರ್ತಿಗೊಳಿಸಬಹುದಾದ ಅಂಶಗಳೇನು? ಪೂರ್ವ ಸಿದ್ಧತೆಗಳೇನು? ಎಂಬುದನ್ನೆಲ್ಲಾ ಸರಿಯಾಗಿ ಅಭ್ಯಸಿಸದೆ ಬೋಧನೆಗೆ ತೊಡಗುತ್ತಾರೆ. ಇದರಿಂದ ಮಕ್ಕಳಿಗೆ, ಅನುಭವದ ಮೂಲಕ ಸಹಜವಾಗಿ ಕಲಿಯಲು ಸಾಧ್ಯವಾಗುವುದಿಲ್ಲ. ಆಸಕ್ತಿಯೂ ಕಡಿಮೆಯಾಗುತ್ತದೆ; ಕಲಿಕೆಯುವ ಪ್ರಕ್ರಿಯೆಯಲ್ಲಿ ಹಿಂದುಳಿಯುತ್ತಾರೆ. ಇದು ಸಹ ಸಮಾಜದಲ್ಲಿ ಶಿಕ್ಷಕರ ಮೇಲಿನ ಗೌರವ ಕಡಿಮೆಯಾಗಲು ಕಾರಣವಾಗುತ್ತಿದೆ.

ಪರಿಹಾರವೇನು?

ಶಿಕ್ಷಕರು ತಾವು ನೇಮಕಗೊಂಡ ದಿನದಿಂದ ನಿವೃತ್ತಿಯಾಗುವವರೆಗೂ ಕಲಿಯುತ್ತಲೇ ಇರಬೇಕು. ಶಿಕ್ಷಕರಿಗೆ ಸಲ್ಲದ ಕಾರ್ಯಚಟುವಟಿಕೆಗಳನ್ನು ಸಂಪೂರ್ಣ ತ್ಯಜಿಸಬೇಕು.ಶಾಲೆಯಲ್ಲಿ ಮುಖ್ಯ ಶಿಕ್ಷಕರು ಹಾಗೂ ಸಹಶಿಕ್ಷಕರು ಪರಸ್ಪರ ಗೌರವ ವಿಶ್ವಾಸಗಳಿಂದ ಕರ್ತವ್ಯವನ್ನು ನಿರ್ವಹಿಸಬೇಕು.ಊರಿನ ಜನರ ವಿಶ್ವಾಸವನ್ನು ಪಾರದರ್ಶಕ ಕಾರ್ಯವಿಧಾನಗಳ ಮೂಲಕ ಗೆಲ್ಲಬೇಕು. ಶಾಲಾಭಿವೃದ್ಧಿ ಕೆಲಸಗಳಲ್ಲಿ ಅವರನ್ನೂ ತೊಡಗಿಸುವ ಕಲೆಯನ್ನು ತಿಳಿದಿರಬೇಕು.ತಮ್ಮ ಮಕ್ಕಳು ಚೆನ್ನಾಗಿ ಕಲಿಯುತ್ತಿದ್ದಾರೆ ಎಂದು ಪೋಷಕರಿಗೇ ಮನವರಿಕೆಯಾಗಬೇಕು.

ತಮ್ಮ ಮಕ್ಕಳು ಹೋಗುವ ಶಾಲೆಯಲ್ಲಿ ಅಲ್ಲಿನ ಶಿಕ್ಷಕರು ತಮ್ಮ ಮಕ್ಕಳಿಗೆ ಹೇಗೆ ಬೋಧಿಸಬೇಕೆಂದು ತಂದೆ ತಾಯಿಯಾಗಿ ಇವರು ಬಯಸುತ್ತಾರೋ, ಹಾಗೆಯೇ ತಮ್ಮ ಬಳಿ ಬರುವ ಮಕ್ಕಳಿಗೂ ಸಹ ಆ ರೀತಿಯಲ್ಲಿ ತಾವು ಬೋಧಿಸುತ್ತಿದ್ದೇವೆಯೇ ಎಂದು ಶಿಕ್ಷಕರಾದವರು ಆತ್ಮಾವಲೋಕನ ಮಾಡಿಕೊಳ್ಳಬೇಕು. ಪೂರ್ವಸಿದ್ಧತೆ ಇಲ್ಲದೆ ತರಗತಿಗೆ ಹೋಗಲೇಬಾರದು.ಈ ದಿನ ನಾನೇನು ಬೋಧಿಸಬೇಕು? ಪರಿಕಲ್ಪನೆಗಳೇನು? ಹೇಗೆ ಚಟುವಟಿಕೆಗಳನ್ನು ಆಯೋಜಿಸಿದರೆ ಬೋಧನೆ ಮಕ್ಕಳ ಮನಸ್ಸನ್ನು ಮುಟ್ಟುತ್ತದೆ ಎಂಬುದರ ಸಂಕ್ಷಿಪ್ತ ಟಿಪ್ಪಣಿ ಶಿಕ್ಷಕರಲ್ಲಿ ಇರಬೇಕು.

ತೀ.ನಂ. ಶ್ರೀಕಂಠಯ್ಯನವರ ಹೆಸರನ್ನು ಕೇಳದ ಕನ್ನಡಿಗರಿಲ್ಲ. ಅವರ ಸರ್ವ ಶ್ರೇಷ್ಠ ಕೃತಿ ‘ಭಾರತೀಯ ಕಾವ್ಯ ಮೀಮಾಂಸೆ.’ ಇಂದಿಗೂ ಆ ಕೃತಿಯನ್ನು ಸರಿಗಟ್ಟುವ ಕೃತಿ ಕನ್ನಡದಲ್ಲಿ ಮತ್ತೊಂದಿಲ್ಲ. ಕನ್ನಡ ಹಾಗೂ ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ಭಾರತೀಯ ಕಾವ್ಯ ಮೀಮಾಂಸೆಯನ್ನು ಕುರಿತಂತೆ ಪ್ರೊಫೆಸರ್ ತೀ.ನಂ.ಶ್ರೀ ಅವರು ಗಂಟೆಗಳ ಕಾಲ ನಿರರ್ಗಳವಾಗಿ ಮಾತನಾಡಬಲ್ಲವರಾಗಿದ್ದರು. ತರಗತಿಗೆ ಪೂರ್ವ ಸಿದ್ಧತೆಯೊಂದಿಗೆ ಯಾವಾಗಲೂ ತೆರಳುತ್ತಿದ್ದ ತೀನಂಶ್ರೀ ಅವರಿಗೆ, ಅದೊಂದು ದಿನ ಆ ದಿನದ ತರಗತಿಗೆ ಪೂರ್ವ ಸಿದ್ಧತೆ ಮಾಡಿಕೊಳ್ಳಲಾಗಲಿಲ್ಲ. ಕಾಲೇಜಿನಲ್ಲಿಯೂ ಸಹ ಅದಕ್ಕೆ ಅವಕಾಶವಾಗಲಿಲ್ಲ. ಭಾರತೀಯ ಕಾವ್ಯ ಮೀಮಾಂಸೆಯ ವಿಷಯದಲ್ಲಿ ಅಧೀಕೃತವಾಗಿ ಮಾತನಾಡಬಲ್ಲ ತೀನಂಶ್ರೀ, ಈ ದಿನದ ತರಗತಿಗೆ ತಾವು ಸಿದ್ಧತೆ ಮಾಡಿಕೊಂಡಿಲ್ಲ ಎಂಬ ಕಾರಣಕ್ಕೆ ಅರ್ಧ ದಿವಸ ರಜೆ ಹಾಕಿ ಮನೆಗೆ ಬಂದುಬಿಟ್ಟರು.

ಜಿ.ಪಿ ರಾಜರತ್ನಂ ರವರು ಮತ್ತೊಬ್ಬ ಹೆಮ್ಮೆಯ ಕನ್ನಡ ಸಾಹಿತಿ. ಇವರೂ ಸಹ ಅಧ್ಯಾಪಕರಾಗಿದ್ದವರು. “ಶಿಕ್ಷಕರಾದವರು ಪಾಠ ಟಿಪ್ಪಣಿಯೊಂದಿಗೆ ತರಗತಿಯನ್ನು ತೆಗೆದುಕೊಳ್ಳಬೇಕು. ಆ ದಿನದ ಪಾಠ ಬೋಧನೆಯ ತರುವಾಯ ಆ ಪಾಠ ಟಿಪ್ಪಣಿಯನ್ನು ಹರಿದು ಹಾಕಿ ಬಿಡಬೇಕು. ಮುಂದಿನ ವರ್ಷಕ್ಕೆ ಮತ್ತೆ ಅದೇ ಪಾಠಕ್ಕೆ ಹೊಸ ಪಾಠ ಟಿಪ್ಪಣಿಯನ್ನು ಬರೆದುಕೊಳ್ಳಬೇಕು” ಎಂದು ಯಾವಾಗಲೂ ಜಿ.ಪಿ ರಾಜರತ್ನಂ ಹೇಳುತ್ತಿದ್ದರಂತೆ.

ಈ ಎರಡು ಘಟನೆಗಳನ್ನು ಇಂದಿನ ಶಿಕ್ಷಕರು ಅರ್ಥೈಸಿಕೊಂಡರೆ, ಮನನ ಮಾಡಿಕೊಂಡರೆ ಅವರು ಅತ್ಯುತ್ತಮ ಶಿಕ್ಷಕರಾಗುವುದರಲ್ಲಿ ಸಂದೇಹವಿಲ್ಲ.

ಇತ್ತೀಚಿನ ದಿನಗಳಲ್ಲಿ ಶಿಕ್ಷಕರು ಹಲವು ರೀತಿಯ ಕಾರ್ಯ ಒತ್ತಡದಲ್ಲಿ ಕರ್ತವ್ಯ ನಿರ್ವಹಿಸಬೇಕಾಗಿದೆ. ಇಲಾಖೆಗೆ ಅಂಕಿಅಂಶಗಳನ್ನು ನೀಡಲೆಂದೇ ಒಬ್ಬರು ಇರಬೇಕೆಂಬಷ್ಟು ಮಾಹಿತಿಗಳನ್ನು ಮೇಲಿನ ಹಂತದಿಂದ ಕೇಳಲಾಗುತ್ತದೆ.ಹಲವು ಹತ್ತು ಕಾರ್ಯಕ್ರಮಗಳನ್ನು ನಡೆಸಿ ವರದಿ ನೀಡಬೇಕಾದ ಅನಿವಾರ್ಯತೆ ಇರುತ್ತದೆ. ಇವೆಲ್ಲದರ ನಡುವೆ ಶಿಕ್ಷಕರು ಮಕ್ಕಳ ಕಲಿಕೆಯನ್ನು ಕಡೆಗಣಿಸದೇ ಸಾಗಬೇಕಿದೆ.

“ಶಿವ ಭಕ್ತವತ್ಸಲನಾದರೆ ಶಿಕ್ಷಕ ಶಿಷ್ಯವತ್ಸಲನಾಗಬೇಕು” ಎನ್ನುತ್ತಾರೆ ಡಾ.ಎಸ್. ರಾಧಾಕೃಷ್ಣನ್. ಅದರಂತೆ ಶಿಕ್ಷಕರು, ‘ಮಕ್ಕಳು ಕಲಿಯುವುದಿಲ್ಲ’ ಎಂಬ ದೋಷಾರೋಪಣೆ ಮಾಡದೆ ತಮ್ಮ ಬೋಧನೆಯಲ್ಲಿನ ಕೊರತೆಗಳನ್ನು ಶಿಕ್ಷಕರು ಅರ್ಥಮಾಡಿಕೊಳ್ಳಬೇಕಿದೆ ಹಾಗೂ ಆ ಕೊರತೆಗಳನ್ನು ತುಂಬಿಕೊಂಡು ಬೋಧನಾ ಕಾರ್ಯದಲ್ಲಿ ತೊಡಗಬೇಕಿದೆ. ಮಕ್ಕಳು ಮಾಡುವ ಸಣ್ಣ ಸಣ್ಣ ಉತ್ತಮ ಕೆಲಸ ಕಾರ್ಯಗಳನ್ನು ಧನಾತ್ಮಕವಾಗಿ ಪ್ರೋತ್ಸಾಹಿಸಬೇಕಾಗಿದೆ. ಅವರ ಬೆನ್ನು ತಟ್ಟುವ ಕಾರ್ಯ ದಿನನಿತ್ಯದ ಕಾಯಕವಾಗಬೇಕಾಗಿದೆ. ಪೂರ್ಣ ಸಮರ್ಪಣ ಭಾವದಿಂದ ನಿತ್ಯವೂ ಕರ್ತವ್ಯದಲ್ಲಿ ಶಿಕ್ಷಕ ತನ್ನನ್ನು ತಾನು ತೊಡಗಿಸಿಕೊಳ್ಳಬೇಕಾಗಿದೆ. ಹೀಗಾದಾಗ ಮಾತ್ರ ಕಳೆದು ಹೋಗುತ್ತಿರುವ ಗೌರವವನ್ನು ಮತ್ತೆ ಶಿಕ್ಷಕ ಸಮುದಾಯ ಗಳಿಸಿಕೊಳ್ಳಲು ಸಾಧ್ಯವಾಗುತ್ತದೆ.

-ವೆಂಕಟಾಚಲ ಜಿ, ಮೈಸೂರು.

7 Responses

  1. ಚಿಕ್ಕದಾದರೂ ಗುರುಗಳ ಜವಾಬ್ದಾರಿ ಯನ್ನು ಚೊಕ್ಕವಾಗಿ ತಿಳಿಸಿರುವ ಲೇಖನ ಗಮನಸೆಳೆಯುವಂತಿದೆ..ಧನ್ಯವಾದಗಳು ಸಾರ್

  2. ನಯನ ಬಜಕೂಡ್ಲು says:

    ಶಿಕ್ಷಕರ ಇಂದಿನ ಸ್ಥಾನ ಮಾನದ ಕುರಿತು ಸರಿಯಾಗಿ ಅವಲೋಕಿಸಿ ಬರೆದಿದ್ದೀರಿ. ಕೆಲವು ಮಂದಿ ಮಾಡುವ ತಪ್ಪು ಇಡೀ ಶಿಕ್ಷಕ ಸಮುದಾಯಕ್ಕೆ ಕಪ್ಪು ಚುಕ್ಕೆಯನ್ನು ಇಡುತ್ತದೆ.

  3. ಶಂಕರಿ ಶರ್ಮ says:

    ಇಂದಿನ ಶಿಕ್ಷಕರ ದಿನಕ್ಕೆ ಈ ಸಕಾಲಿಕ ಲೇಖನವು ಅತ್ಯಂತ ಸೂಕ್ತವಾಗಿ ಮೂಡಿಬಂದಿದೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: