ಗಣಪತಿ ನೀಡೋ ನಮಗೆ ಮತಿ

Share Button

ಶ್ರೀ ವರಸಿದ್ಧಿ ವಿನಾಯಕ ವ್ರತ ಅಥವಾ ಗಣೇಶ ಹಬ್ಬವನ್ನು ಭಾದ್ರಪದ ಮಾಸದ ಶುಕ್ಲ ಪಕ್ಷದ ಚತುರ್ಥಿ ದಿನ ಆಚರಿಸುತ್ತಾರೆ. ಗೌರಿ ಗಣೇಶ ಹಬ್ಬವು ವಿಶೇಷವಾಗಿ ದಕ್ಷಿಣ ಕರ್ನಾಟಕ, ಆಂಧ್ರಪ್ರದೇಶ ಮತ್ತು ತಮಿಳುನಾಡಿನಲ್ಲಿ ಆಚರಿಸಲ್ಪಡುವಂತಹ ಅತೀ ಪ್ರಾಮುಖ್ಯ ಹಬ್ಬವಾಗಿದೆ. ಉತ್ತರ ಭಾರತದಲ್ಲಿ ಇದನ್ನು ಹರತಲಿಕಾ ಎಂದು ಕರೆಯಲಾಗುತ್ತದೆ. ಬೆಳ್ಳಿ ಅಥವಾ ಮಣ್ಣಿನಿಂದ ಮಾಡಿದ ಗಣಪತಿಯ ಮೂರ್ತಿಯನ್ನು ವಿಧ್ಯುಕ್ತವಾಗಿ ಪೂಜಿಸಿ, ವ್ರತವೆಂದು ಆಚರಿಸಲಾಗುತ್ತದೆ. ದೇಶ-ವಿದೇಶಗಳಲ್ಲೂ ಜನಪ್ರಿಯಗೊಂಡಿರುವ ಗಣೇಶ ಚತುರ್ಥಿ ಇಂದು ಸಾಂಸ್ಕೃತಿಕವಾಗಿ ಮತ್ತು ಧಾರ್ಮಿಕವಾಗಿ ತುಂಬಾ ಮಹತ್ವವನ್ನು ಪಡೆದುಕೊಂಡಿದೆ. ಗಣೇಶ ಚೌತಿ ಹಿಂದುಗಳ ಪವಿತ್ರ ಹಬ್ಬ. ವಿದ್ಯೆ ಮತ್ತು ಜ್ಞಾನದ ಅಧಿಪತಿ, ಸಂಪತ್ತು ಮತ್ತು ಅದೃಷ್ಟದ ಅಧಿನಾಯಕನಾದ ನಮ್ಮ ಮೂಷಿಕ ವಾಹನನ ಜನನವನ್ನು ನಾವು ವಿಜೃಂಭಣೆಯಿಂದ ಆಚರಿಸುವ ವಿಶೇಷ ಹಬ್ಬ.

ಗಣೇಶ ಚತುರ್ಥಿಯ ಆರಂಭವು ಮರಾಠರು ತಮ್ಮ ಆಳ್ವಿಕೆಯ ಉತ್ತುಂಗದಲ್ಲಿದ್ದಾಗ ಪ್ರಚಾರಕ್ಕೆ ತಂದರು. ಅದರಲ್ಲಿಯೂ ಮರಾಠರ ರಾಜ ಛತ್ರಪತಿ ಶಿವಾಜಿಯು ಇದನ್ನು ಆಚರಿಸಲು ಆರಂಭಿಸದನೆಂದು ಇತಿಹಾಸ ಸಾರುತ್ತದೆ.

ಸ್ವಾತಂತ್ರ್ಯ ಪೂರ್ವದಲ್ಲಿ ಖಾಸಗಿಯಾಗಿ ನಡೆಯುತ್ತಿದ್ದ ಚೌತಿ ಸಂಭ್ರಮಕ್ಕೆ ಅಂದು ದೇಶಪ್ರೇಮಿಗಳಲ್ಲಿ ಸ್ವಾತಂತ್ರ್ಯದ ಕಿಡಿಯನ್ನು ಹೊತ್ತಿಸಲು 1893 ರಲ್ಲಿ ಬಾಲಗಂಗಾಧರ್ ತಿಲಕ್ ಅವರು ಮಹಾರಾಷ್ಟ್ರದಲ್ಲಿ ಅದಕ್ಕೊಂದು ನೂತನ ಸ್ವರೂಪ ನೀಡಿದರು. ಬಳಿಕ ಗಣೇಶನ ಹಬ್ಬ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮಹತ್ತರ ಪಾತ್ರ ವಹಿಸಿ, ರಾಷ್ಟ್ರೀಯ ಹಬ್ಬವಾಗಿರುವುದು ಇತಿಹಾಸ. ಹೀಗಾಗಿ ಇದು ಧಾರ್ಮಿಕ ಮಹತ್ವವಿರುವ ವಿಶೇಷ ಪೂಜಾ ಸಂದರ್ಭ. ಮನೆ, ದೇವಸ್ಥಾನಗಳಿಗೆ ಮಾತ್ರ ನಡೆಯುತ್ತಿದ್ದ ಚೌತಿಗೆ ಸಾರ್ವಜನಿಕ ವೇದಿಕೆ ಒದಗಿಸುವ ಪರಂಪರೆಗೆ ನಾಂದಿ ಹಾಡಿದ್ದು ಬಾಲಗಂಗಾಧರ ತಿಲಕ್ ಅವರು. ಗಣೇಶೋತ್ಸವಗಳ ಮೂಲಕ ಜನರನ್ನು ಒಂದುಗೂಡಿಸಿ ಬ್ರಿಟಿಷರ ದಾಸ್ಯದಿಂದ ಬಿಡುಗಡೆಗೊಳ್ಳಲು ಏಕತೆಯನ್ನು ಸಾಧಿಸುವ ತಿಲಕ್ ಅವರ ಪ್ರಯತ್ನ ಧರ್ಮಜಾಗೃತಿಯ ಜತೆಗೆ ಜಾತಿ, ಧರ್ಮಗಳನ್ನು ಮೀರಿದ ದೇಶಭಕ್ತಿ, ಏಕತಾ ಶಕ್ತಿಗೆ ಮುನ್ನುಡಿ ಬರೆಯಿತು.

ಅಲ್ಲಿಂದ ಮುಂದಕ್ಕೆ ಪ್ರತಿವರ್ಷ ಇದೇ ಕ್ರಮ ಮುಂದುವರಿಯಿತು. ‘ದೇವರು ಸರ್ವರಿಗೂ ಸೇರಿದವನು’ ಎಂಬ ತಿಲಕರ ಕರೆಗೆ ಓಗೊಟ್ಟು ಎಲ್ಲ ಜಾತಿ, ಪಂಥಗಳ ಜನರೂ ಒಂದಾದರು. ಒಟ್ಟಿಗೇ ಸೇರಿದರು. ಪೂಜೆ ಮಾಡಿದರು. ದೇಶಕ್ಕೆ ಒದಗಿಬಂದಿರುವ ದಾಸ್ಯವನ್ನು ತೊಲಗಿಸಲು ಸಂಕಲ್ಪ ಮಾಡತೊಡಗಿದರು. ತಮ್ಮ ತಮ್ಮ ಊರು, ಪ್ರದೇಶಗಳಿಗೂ ಮೀರಿದ ರಾಷ್ಟ್ರೀಯ ದೃಷ್ಟಿಯನ್ನು ಸಾಮಾನ್ಯ ಜನರೂ ಪಡೆಯತೊಡಗಿದರು.

ಭಾರತೀಯ ಜನರು ಒಂದೆಡೆ ಸೇರುವುದನ್ನು ತಡೆಯಲು ಬ್ರಿಟಿಷ್ ಸರಕಾರ ಯತ್ನಿಸುತ್ತಿದ್ದ ಕಾಲ ಅದು. ಆ ಸಮಯದಲ್ಲಿ ಊರೂರುಗಳಿಗೂ ಸಾರ್ವಜನಿಕ ಗಣೇಶೋತ್ಸವ ಪ್ರವೇಶಿಸಿತು. ಹಬ್ಬದ ಸಮಯದಲ್ಲಿ ಸಾರ್ವಜನಿಕವಾಗಿ ಸಂಗೀತ, ನೃತ್ಯ, ನಾಟಕ, ಕವಿಗೋಷ್ಠಿ, ಕಥಾಶ್ರವಣ, ಭಾಷಣ – ಹೀಗೆ ಹಲವಾರು ಕಾರ್ಯಕ್ರಮಗಳು ನಡೆಯುವಂತೆ ತಿಲಕರು ಪ್ರೋತ್ಸಾಹಿಸಿದರು. ವಿವಿಧ ಭಾಷೆ ಹಾಗೂ ಪ್ರಾಂತ್ಯಗಳ, ಆದರೆ ಒಂದೇ ದೇಶದ, ಮಕ್ಕಳನ್ನು ಒಂದಾಗಿ ಬೆಸೆಯಿತು ಗಣೇಶ ಚೌತಿ. ಹೀಗೆ ಭಾರತದ ಸಾಂಸ್ಕೃತಿಕ ಪುನರುಜ್ಜೀವನದ ಮೂಲಕ ತಿಲಕರು ಭಾರತದಲ್ಲಿ ಬ್ರಿಟಿಷ್ ಆಳ್ವಿಕೆಗೆ ಕಷ್ಟಕರವಾದ ಪರಿಸ್ಥಿತಿಯನ್ನು ನಿರ್ಮಿಸಿದರು. ಭಾರತೀಯರ ಸಂಸ್ಕೃತಿಯನ್ನು ನಾಶ ಮಾಡಲು ಸಾಧ್ಯವಾದದೇ ಇದ್ದೂದೂ ಬ್ರಿಟಷರ ನಿರ್ಗಮನಕ್ಕೆ ಒಂದು ಕಾರಣ. ಜನರು ಮಾನಸಿಕವಾಗಿ ಬ್ರಿಟಿಷರೊಡನೆ ಒಂದಾಗದೇ ಇದ್ದುದು, ಅವರ ಮೇಲ್ಮೆಯನ್ನು ಸ್ವೀಕರಿಸದೇ ಇದ್ದುದು, ಅವರ ಆಳ್ವಿಕೆಗೆ ದೊಡ್ಡ ಪೆಟ್ಟು ಕೊಟ್ಟಿತು. ಹೀಗೆ ಸ್ವಾತಂತ್ರ್ಯ ಹೋರಾಟಕ್ಕೆ ಗಣೇಶ ಚತುರ್ಥಿ ಬಹಳ ಸಹಕಾರಿಯಾಯಿತು. ಸ್ವಾತಂತ್ರ್ಯದ ಬಳಿಕವೂ ಧಾರ್ಮಿಕವಾಗಿ ಬಹಳಷ್ಟು ಮಹತ್ವ ಪಡೆದ ಗಣೇಶೋತ್ಸವನ್ನು ಇಂದು ಬೀದಿ-ಬೀದಿಗಳಲ್ಲಿ ಆಚರಿಸಲಾಗುತ್ತಿದೆ.

ಇಷ್ಟೇ ಅಲ್ಲದೆ ಹೊಲ ಗದ್ದೆಗಳಿಗೆ ನುಗ್ಗಿ ಆನೆಗಳು ದಾಳಿ ಮಾಡುವುದನ್ನು ತಡೆಗಟ್ಟಲು ಆನೆಯ ಮುಖವುಳ್ಳ ದೇವನನ್ನು ಪೂಜಿಸುವುದರೊಂದಿಗೆ ಗೋದಾಮುಗಳಲ್ಲಿ ಧಾನ್ಯಗಳನ್ನು ತಿಂದು ತೇಗುವ ಇಲಿಗಳನ್ನು ಸಮಾಧಾನ ಪಡಿಸುವ ನಿಟ್ಟಿನಲ್ಲಿ ಇಬ್ಬರನ್ನೂ ಸಮಾಧಾನಿಸುವುದು ಹಬ್ಬಕ್ಕೆ ಕಾರಣವೆಂದೂ ಕೆಲವರ ಅಭಿಪ್ರಾಯ. ಅದಲ್ಲದೆ ಹೊಲಗಳಲ್ಲಿ ನಿಲ್ಲಿಸುವ ಬೆರ್ಚಪ್ಪನಿಗೂ ಗಣಪತಿಯಂತೆ ಡೊಳ್ಳು ಹೊಟ್ಟೆಯನ್ನು ಮಾಡಿರುತ್ತಾರೆ. ಗಣಪತಿಯನ್ನು ಅಷ್ಟರ ಮಟ್ಟಿಗೆ ಹಿಂದುಗಳು ಪೂಜಿಸುತ್ತಾರೆ. ಗ್ರೀಕರ ಕಲ್ಪನೆಯಲ್ಲಿ ಅರ್ಧ ಪ್ರಾಣಿ ಅರ್ಧ ಮನುಷ್ಯನಿಗೆ ಪೂಜೆ ಸಲ್ಲಿಸಲಾಗುತ್ತಿತ್ತು.

ಗಣೇಶನ ಹುಟ್ಟು
ಯಾಜ್ಞವಲ್ಕ್ಯ ಸ್ಮೃತಿಯ ಪ್ರಕಾರ ಅಂಬಿಕೆಯು ಗಣಪತಿಯ ತಾಯಿ. ಇನ್ನೊಂದು ಕಥೆಯ ಪ್ರಕಾರ ಆತನು ಪಾರ್ವತಿಯ ಮೈಯಿಂದ ಹುಟ್ಟಿದವನು. ಸ್ವರ್ಣಗೌರಿಯ ಮಾನಸ ಪುತ್ರ ಈತ. ಗೌರಿ ತನ್ನ ಮೈಕೊಳೆಯಿಂದ ಆಕೃತಿಯೊಂದನ್ನು ಸೃಷ್ಟಿಸಿ ಅದಕ್ಕೆ ಜೀವತುಂಬಿ ಸ್ನಾನ ಮಾಡಲು ಹೋಗಿರುತ್ತಾಳೆ. ತಾಯಿಯ ಅಣತಿಯಂತೆ ಗಣಪ ಮನೆಯನ್ನು ಕಾಯುತ್ತಿರುತ್ತಾನೆ. ಶಿವನು ಮನೆಗೆ ಹಿಂತಿರುಗಿದಾಗ, ಗಣಪ ಅವನನ್ನು ತಡೆದು ಮನೆಯೊಳಗೆ ಹೋಗಲು ಅಡ್ಡಿಪಡಿಸುತ್ತಾನೆ. ಇದರಿಂದ ಕುಪಿತಗೊಂಡ ಶಿವ ತನ್ನ ತ್ರಿಶೂಲದಿಂದ ಅವನ ಶಿರವನ್ನು ಕತ್ತರಿಸುವನು. ಸ್ನಾನ ಮುಗಿಸಿ ಬಂದ ಗೌರಿ ಮಗನ ಕಳೇಬರ ಕಂಡು ರೋದಿಸುತ್ತಾಳೆ. ಹೆಂಡತಿಯನ್ನು ಸಮಾಧಾನ ಪಡಿಸುವ ಸಲುವಾಗಿ ಶಿವ ತನ್ನ ಗಣಗಳನ್ನು ಕರೆದು ಉತ್ತರ ದಿಕ್ಕಿಗೆ ಯಾರಾದರೂ ತಲೆ ಹಾಕಿ ಮಲಗಿದ್ದರೆ, ಅಂತಹವರ ತಲೆಯನ್ನು ಕತ್ತರಿಸಿ ತರುವಂತೆ ಆಜ್ಞಾಪಿಸುತ್ತಾನೆ. ಅವರು ಉತ್ತರ ದಿಕ್ಕಿನಲ್ಲಿ ಮಲಗಿದ್ದ ಮರಿಯಾನೆ ತಲೆಯನ್ನು ಕತ್ತರಿಸಿ ತರುತ್ತಾರೆ. ನಂತರ ಅದನ್ನು ಗಣಪನ ಶರೀರಕ್ಕೆ ಅಂಟಿಸುವರು. ಹೀಗಾಗಿ ಗಣಪ ಗಜಮುಖನಾಗಿ, ಗಣಗಳ ಅಧಿಪತಿ ಮತ್ತು ಮೊದಲ ಅಗ್ರಪೂಜೆಗೆ ಅರ್ಹನಾಗುತ್ತಾನೆ. ವಿಘ್ನ ವಿನಾಶಕ ವಿನಾಯಕನಾಗಿರುವನು.

ಶಿವಪುರಾಣದಲ್ಲಿ ಹೇಳಿರುವಂತೆ ಗಣಪತಿಯನ್ನು ತುಳಸೀ ದಳದಲ್ಲಿ ಪೂಜಿಸಬಾರದು. ಏಕೆಂದರೆ ತುಳಸಿಯ ದರ್ಶನ ಮತ್ತು ಗಂಧಗಳು ಗಣೇಶ ದೇವರಿಗೆ ಸಂಬಂಧಪಟ್ಟ ಒಳಕೇಂದ್ರಗಳನ್ನು ಮುಚ್ಚುತ್ತವೆ. ಕೇತಕೀ ಪುಷ್ಪದ ಸ್ಪರ್ಶವು ಶಿವನ ದರ್ಶನಕ್ಕೆ ಸಂಬಂಧಪಟ್ಟ ಕೇಂದ್ರಗಳ ಪ್ರಭಾವ ವನ್ನು ಕಡಿಮೆ ಮಾಡುತ್ತದೆ. ಹಾಗೆಯೇ ಚೌತಿಯ ಚಂದ್ರನ ದರ್ಶನವೂ ಗಣೇಶನ ಉಪಾಸನೆಗೆ ಪ್ರತಿಬಂಧಕವಾಗಿದೆ. ಸೂರ್ಯನು ಬುದ್ಧಿತತ್ವಕ್ಕೆ ಮತ್ತು ಚಂದ್ರನು ಮನಸ್ತತ್ವಕ್ಕೆ ದೇವರು. ಗಣೇಶನ ಆಳ್ವಿಕೆಗೆ ಒಳಪಟ್ಟಿರುವ ಇಪ್ಪತ್ತೊಂದು ತತ್ವಗಳಲ್ಲಿ ಕೊನೆಯದು ಮನಸ್ಸು. ಉಳಿದ ಇಪ್ಪತ್ತು ತತ್ವಗಳಾವುವೆಂದರೆ, ಪಂಚಭೂತಗಳು, ಪಂಚ ಕರ್ಮೇಂದ್ರಿಯಗಳು, ಪಂಚ ಜ್ಞಾನೇಂದ್ರಿಯಗಳು ಮತ್ತು ಪಂಚತನ್ಮಾತ್ರೆಗಳು. ಮನಸ್ಸನ್ನು ಸಂಯಮದಿಂದ ಒಳಗಿನ ಜ್ಞಾನಾಕಾಶದಲ್ಲಿ ಲಯಗೊಳಿಸಿದರೆ ಗಣೇಶನ ಮಹಿಮೆಯ ಅನುಭವ ಉಂಟಾಗುತ್ತದೆ.

ಇತ್ತೀಚಿನ ದಿನಗಳಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸ್‌ನಲ್ಲಿ ತಯಾರಿಸಿದ ಗಣೇಶನ ವಿಗ್ರಹಗಳು ಮಾರುಕಟ್ಟೆಯಲ್ಲಿ ತಡೆಹಿಡಿಯಲ್ಪಟ್ಟಿರುವುದರಿಂದ ಮಣ್ಣಿನ ಮೂರ್ತಿಗೆ ಬೇಡಿಕೆ ಹೆಚ್ಚಿದೆ. ತೀರಾ ಗ್ರಾಮೀಣ ಪ್ರದೇಶಗಳಲ್ಲಿ ಜೇಡಿಮಣ್ಣಿನ ಗಣಪತಿ ಮೂರ್ತಿ ಹೆಚ್ಚಾಗಿ ಕಾಣಸಿಗುತ್ತದೆ.

ಈ ದಿನ ಮಂಗಳ ಸ್ನಾನ ಮಾಡಿ, ಪೂಜಗೃಹ ಅಥವಾ ದೇವರು ಇಡುವ ಜಾಗವನ್ನು ಮಾವಿನ ಸೊಪ್ಪು ಬಾಳೆಕಂದು, ರಂಗೋಲಿಯಿಂದ ಅಲಂಕರಿಸುತ್ತಾರೆ. ಅವರ ಮನೆಯ ಪದ್ಧತಿ ಪ್ರಕಾರ ಮಣ್ಣಿನ ಗಣಪತಿ / ಬೆಳ್ಳಿ ಗಣಪತಿ ವಿಗ್ರಹ ಇಟ್ಟು ಪೂಜೆ ಮಾಡುತ್ತಾರೆ. ಗಣಪತಿಯ ಮೂರ್ತಿಯ ಪೂಜೆಗೆ ಮೊದಲು ಸಗಣಿಯಿಂದ ಮಾಡಿ ಅದರ ಮೇಲೆ ಗರಿಕೆಯನ್ನಿಟ್ಟು ಅದನ್ನು ಪಿಳ್ಳೇರಾಯನೆಂದು ಕರೆದು ಅದಕ್ಕೆ ಪೂಜಿಸುವರು. ಮಿಕ್ಕೆಲ್ಲ ದೇವರುಗಳಂತೆ ಇದಕ್ಕೂ ಷೋಡಶಾಂಗ ಪೂಜಾವಿಧಾನದ ರೀತ್ಯಾ ಪೂಜಿಸುವರು. ಪೂಜೆಯ ನಂತರ ಹತ್ತುದಿನಗಳ ವರೆವಿಗೆ ನಿತ್ಯ ಪೂಜೆಯನ್ನು ಮಾಡಿ 10 ನೆಯ ದಿನ ಅಂದರೆ ಅನಂತ ಚತುರ್ದಶಿಯ ದಿನದಂದು ವಿಸರ್ಜನೆ ಮಾಡುವರು.

ಸಾಮಾನ್ಯವಾಗಿ ಉಪಯೋಗಿಸುವ ಪೂಜಾ ಸಾಮಗ್ರಿಗಳ ಜೊತೆಗೆ ಕಲಶ, ಜನಿವಾರ, ಹತ್ತಿ ಎಳೆ, ಹುಲ್ಲಿನ ಗರಿಕೆ ಬೇಕಾಗುತ್ತೆ. ಮೊದಲು ಮನೆಯ ಗಣಪತಿಗೆ ಪೂಜೆ ಮಾಡಿ ನಂತರ ದೊಡ್ಡ ಗಣಪತಿಗೆ ಪೂಜೆ ಮಾಡಬೇಕು. ಗಣಪತಿಗೆ 21 ಹಿಡಿ 21 ಎಳೆಗಳ ಹತ್ತಿ ಹಾರ ಹಾಕಬೇಕು. ನೈವೇದ್ಯಕ್ಕೆ ಸಾಮಾನ್ಯವಾಗಿ 21 ಕಡುಬು, ಮೋದಕ ಮಾಡುತ್ತಾರೆ. ತಿಂಡಿ ಪ್ರಿಯನಾದ ಗಣಪತಿಗೆ ಇದರೊಂದಿಗೆ ಬಗೆಬಗೆಯ ತಿಂಡಿಗಳನ್ನು ನೈವೇದ್ಯಕ್ಕೆ ಮಾಡುತ್ತಾರೆ. ವಿನಾಯಕನಿಗೆ ಷೋಡಶೋಪಚಾರದಿಂದ ಪೂಜೆ ಮಾಡಬೇಕು. ಪೂಜೆಯ ನಂತರ ಕಥಾ ಶ್ರವಣ ಮಾಡಬೇಕು. ಗಣಪತಿ ಹಬ್ಬದ ದಿನ ಚಂದ್ರನನ್ನು ನೋಡಬಾರದು ಅಂತ ಇದೆ. ನೋಡಿದರೆ ನಮ್ಮ ಮೇಲೆ ಮಿಥ್ಯಾಪವಾದ ಬರುತ್ತೆ ಅಂತ ಹೇಳುತ್ತಾರೆ. ಅಕಸ್ಮಾತ್ ಚಂದ್ರನನ್ನು ನೋಡಿದರೆ ಸ್ಯಮಂತಕೊಪಾಖ್ಯಾನ ಕಥೆಯನ್ನು ಓದಿದರೆ ಎಲ್ಲ ಸರಿ ಹೋಗುತ್ತದೆ ಅನ್ನುತ್ತಾರೆ.

ಹಬ್ಬದ ದಿನ ಮೋದಕ, ಕಡುಬು ಎಂಬ ಸಿಹಿ ತಿಂಡಿಯನ್ನು ಮಾಡಿ ಗಣೇಶನಿಗೆ ನೈವೇದ್ಯ ಮಾಡಲಾಗುತ್ತದೆ. ಮೋದಕ ಪ್ರಿಯನಾದ ಗಣಪನನ್ನು ಪೂಜಿಸುವುದರ ಮೂಲಕ ಭಾವೈಕ್ಯತೆಯನ್ನು ಪ್ರದರ್ಶಿಸಿ ನಮ್ಮಲ್ಲಿರುವ ಒಡಕನ್ನೆಲ್ಲ ದೂರ ಮಾಡುವ ಒಂದು ರೀತಿಯ ವಿಶಿಷ್ಠ ಹಬ್ಬವೇ ಗಣೇಶ ಚತುರ್ಥಿ. ಪರಿಸರವನ್ನು ಉಳಿಸುವ ಸಲುವಾಗಿ ಮಣ್ಣಿನ ಗಣಪನನ್ನು ಪೂಜಿಸಿದರೆ ಪ್ರಕೃತಿ ಮಾತೆಗೆ ನಾವು ಕೊಡುಗೆ ನೀಡಿದಂತಾಗುತ್ತದೆ.

ಗಣಪತಿಗೆ ಎಂದೂ ಅಗ್ರಸ್ಥಾನ ಇದ್ದೇ ಇದೆ. ಸರ್ವ ಕಾರ್ಯಗಳಲ್ಲಿ ನಿತ್ಯ ಪೂಜೆ, ವಿವಾಹ, ಉಪನಯನ, ನಾಮಕರಣ, ವಿದ್ಯಾರಂಭ, ಗೃಹಪ್ರವೇಶ ಹೀಗೆ ಎಲ್ಲಾ ಕಾರ್ಯಗಳಲ್ಲೂ ಗಣಪತಿಗಿಗೆ ಅಗ್ರಪೂಜೆ ಸಲ್ಲಿಸುವುದು ವಾಡಿಕೆ. ಗಣಪತಿ ಗುಡಿಗಳಿಲ್ಲದ ಊರಿಲ್ಲ. ಪುರಾಣಗಳಲ್ಲಿ, ಕಾವ್ಯಗಳಲ್ಲಿ, ಸಾಹಿತ್ಯದಲ್ಲಿ, ಜಾನಪದ, ಚಿತ್ರಕಲೆ ಎಲ್ಲೆಡೆಯೂ ಅಡಕವಾಗಿದ್ದಾನೆ. ಸಂಕಷ್ಟಗಳನ್ನು ನಿವಾರಿಸುವ ಗಣೇಶನನ್ನು ವಿಶೇಷವಾಗಿ ಚೌತಿಯಲ್ಲಿ ಪೂಜಿಸಿ ಭಜಿಸುವುದರಿಂದ ಸಕಲ ಇಷ್ಟಾರ್ಥಗಳೂ ಸಿದ್ದಿಸುತ್ತದೆ ಎಂಬುದು ಭಕ್ತರ ಅಚಲವಾದ ನಂಬಿಕೆ.

ನಮ್ಮನ್ನು ಎಡೆಬಿಡದೆ ಕಾಡುತ್ತಿರುವ ಕರೋನ ಎಂಬ ಹೆಮ್ಮಾರಿಯನ್ನು ವಿಶ್ವದಂಚಿನಿಂದಲೂ ವಿಘ್ನನಿವಾರಕನು ಹೊಡೆದೋಡಿಸುವಂತಾಗಲಿ. ಅತೀವೃಷ್ಠಿ ಹಾಗೂ ಅನಾವೃಷ್ಠಿಯಿಂದ ಪ್ರಕೃತಿಮಾತೆಯನ್ನು ರಕ್ಷಿಸಿದರೆ ಅದಕ್ಕಿಂತ ಬೇರೇನು ಭಾಗ್ಯವೂ ನಮಗೆ ಬೇಕಿಲ್ಲವೆಂದೆನಿಸುತ್ತದೆ. ಮಾನವರಾದ ನಾವೂ ಕೂಡ ಪ್ರಕೃತಿಯ ವಿಕೋಪಕ್ಕೆ ಕಾರಣೀಭೂತರಾಗುವುದನ್ನು ತಪ್ಪಿಸಿದಾಗ ಮಾತ್ರ ಗಣಪತಿ ನೀಡಿದ ಮತಿಯನ್ನು ಸದ್ಭಳಕೆ ಮಾಡಿಕೊಂಡಂತಾಗುತ್ತದೆ.

-ಮ.ನ.ಲತಾಮೋಹನ್, ಮೈಸೂರು

3 Responses

  1. ಗಣಪತಿಯ ಬಗ್ಗೆ..ವಿವಿಧ ಕಡೆಗಳಿಂದ ತೆಗೆದ ಮಾಹಿತಿ ಒಳಗೊಂಡ ಲೇಖನ ಚೆನ್ನಾಗಿ ಮೂಡಿಬಂದಿದೆ ಗೆಳತಿ.. ವಂದನೆಗಳು.

  2. ನಯನ ಬಜಕೂಡ್ಲು says:

    ಚೆನ್ನಾಗಿದೆ ಲೇಖನ

  3. ಶಂಕರಿ ಶರ್ಮ says:

    ಮುಂಬರುವ ಗಣಪತಿ ಹಬ್ಬಕ್ಕೆ ಪೂರಕವಾದ ಲೇಖನವು ಚೆನ್ನಾಗಿದೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: