ಮನಸೇಕೆ ಮರುಗುತಿದೆ ?

Share Button

ಇತ್ತೀಚೆಗೆ ಆತ್ಮಹತ್ಯೆಯ ಸುದ್ದಿಗಳನ್ನು ಪದೇ ಪದೇ ಅಲ್ಲಲ್ಲಿ ಕೇಳುತ್ತಿರುತ್ತೇವೆ, ಓದುತ್ತಿರುತ್ತೇವೆ. ಮೊನ್ನೆ ನಮ್ಮ ನಡುವಿನ ಹಿರಿಯ ಸಾಹಿತಿ, ವೃಕ್ಷಪ್ರೇಮಿ, ಸಂಘಟಕರು ಫೇಸ್‌ಬುಕ್ಕಿನಲ್ಲಿ ನನ್ನ ಸಾವಿಗೆ ನಾನೇ ಕಾರಣ… ಎಂದು ಎರಡು ಸಾಲುಗಳನ್ನು ಮಧ್ಯರಾತ್ರಿ ಬರೆದು, ಪೋಸ್ಟ್ ಮಾಡಿ, ಬೆಳಗಾಗುವಾಗ ಇನ್ನಿಲ್ಲವಾದರು. ವೈಯಕ್ತಿಕವಾಗಿ ಅವರ ಪರಿಚಯ ನನಗೆ ಇಲ್ಲವಾದರೂ ದಿನವಿಡೀ ಬೇಜಾರಾಗಿದ್ದಂತೂ ಸತ್ಯ. ಛೆ! ಇಷ್ಟು ದೊಡ್ಡ ಮನುಷ್ಯರಿಗೂ ಸಾಯುವಂಥಹ ಸಮಸ್ಯೆಗಳಾ? ಸಮಸ್ಯೆಗಳು ಯಾರಿಗಿಲ್ಲ? ಪ್ರತಿಯೊಬ್ಬರಿಗೂ ಒಂದಲ್ಲ ಒಂದು ಸಮಯದಲ್ಲಿ, ಏನಾದರೂ ಒಂದು ಕಾರಣಕ್ಕೆ ಸಾಯಬೇಕು ಎಂದೆನಿಸುವುದು ಸಹಜ. ಆದರೆ ಸಾಯಲೇಬೇಕು ಎಂದು ನಿರ್ಧಾರ ತೆಗೆದುಕೊಂಡು ಸಾಯುವುದು ಮಾತ್ರ ಭಯಾನಕ. ನಾನು ಕಾಲೇಜಿನಲ್ಲಿ ಸಿಲ್ವಿಯಾ ಪ್ಲಾತ್ ಎಂಬ ಕವಿಯಿತ್ರಿಯ ಬಗ್ಗೆ ಓದುವಾಗ, ಆಕೆಗೆ ಇದ್ದ ಮಾನಸಿಕ ಖಾಯಿಲೆಯಿಂದ ಮೂರು ಬಾರಿ ಆತ್ಮಹತ್ಯೆಯ ಪ್ರಯತ್ನ ಮಾಡಿ, ಮೂರನೆಯ ಬಾರಿಗೆ ಓವನ್ ಒಳಗೆ ತನ್ನ ತಲೆ ಇಟ್ಟು ಸತ್ತಳು ಎಂಬ ವಿಚಾರ ತಿಳಿದು, ವಿಚಲಿತಳಾಗಿ, ಓವನ್ ಒಳಗೆ ತಲೆ ಇಡುವಂತಹ ಸಮಸ್ಯೆ ಏನು ಇದ್ದೀತು ಎಂದು ಆಶ್ಚರ್ಯವಾಗಿತ್ತು. ಸ್ವಲ್ಪ ಬಿಸಿತಾಗಿದರೆ ಉರಿ ತಡೆಯಲಾಗದೆ ಒದ್ದಾಡುವ ನಾವು, ತಲೆಯನ್ನೇ ಓವನ್ ಒಳಗಿಟ್ಟು ಉರಿಯನ್ನು ಹೇಗೆ ಅನುಭವಿಸಿದ್ದು? ಅವಳ ಒಳಗಿನ ಉರಿ, ಓವನ್ನಿನ ಉರಿಗಿಂತ ಹೆಚ್ಚೇ ಇರಬೇಕು. ಇಲ್ಲದಿದ್ದರೆ ಪುಟ್ಟ ಮಕ್ಕಳನ್ನು ಬಿಟ್ಟು, ಯಶಸ್ವೀ ಜೀವನ, ಹೆಸರಾಂತ ಕವಿಯಾಗಿದ್ದ ಗಂಡನನ್ನ ಬಿಟ್ಟು ಹೀಗೇಕೆ ಸಾಯುತ್ತಿದ್ದಳು? ಅವಳಿಗೆ ಕೊಡಿಸಿದ್ದAnti-depressants ಯಾವುದೂ ಕೆಲಸಕ್ಕೆ ಬಾರದೇ ಆಕೆ 30 ನೇ ವಯಸ್ಸಿಗೆ ತನ್ನ ಅಂತ್ಯಕಾಣಿಸಿಕೊಂಡಳು.

ನಾನು ತೀರಾ ಹತ್ತಿರದಲ್ಲಿ ಒಂದೆರಡು ಆತ್ಮಹತ್ಯೆಗಳನ್ನು ನೋಡಿದ್ದೇನೆ. ನಾನು ಡಿಗ್ರಿ ಓದುವಾಗ, ನಮ್ಮ ಮನೆಯ ಹತ್ತಿರದಲ್ಲೇ ಇದ್ದ ನನ್ನದೇ ವಯಸ್ಸಿನ ಚಂದದ ಹುಡುಗಿ ಮನೆಯ ಬಾತ್‌ರೂಮಿನಲ್ಲಿ ನೇಣುಹಾಕಿಕೊಂಡಳು. ಕಾರಣ… ಪ್ರತಿ ತಿಂಗಳ ಮುಟ್ಟಿನ ನೋವು ಸಹಿಸಲಾಗದೆ. ಪ್ರತಿ ತಿಂಗಳು ಆಸ್ಪತ್ರೆಗೆ ಅಡ್ಮಿಟ್ ಆಗುವುದು, ನೋವು ತಡೆಯಲಾಗದೆ ಒದ್ದಾಡುವುದು, ಆ ನೋವಿಗೆ ಒಂದು ಮುಕ್ತಿಬೇಕಿತ್ತು. ಆತ್ಮಹತ್ಯೆಯು, ನೋವಿಗಷ್ಟೇ ಅಲ್ಲದೆ ಅವಳ ಜೀವಕ್ಕೇ ಮುಕ್ತಿಕೊಟ್ಟಿತು. ಆಕೆ ಸತ್ತ ನಂತರ ಬೀದಿಯ ಜನರೆಲ್ಲಾ ಅವಳು ದೆವ್ವವಾಗಿ ತನ್ನ ಅಣ್ಣ ಅತ್ತಿಗೆಗೆ ಕಾಡುತ್ತಿದ್ದಾಳೆ ಎಂದು ಸುದ್ದಿ ಹಬ್ಬಿಸಿದರು. ಸ್ವಲ್ಪ ದಿನದಲ್ಲೇ ಮನೆ ಖಾಲಿ ಮಾಡಿದ ಅವಳ ಕುಟುಂಬ, ದೂರದ ಬಡಾವಣೆಗೆ ಮನೆಯನ್ನು ಬದಲಿಸಿದರು.

ಕೆಲ ವರ್ಷಗಳ ಹಿಂದೆ ನನ್ನ ಚಿಕ್ಕಮ್ಮ ಹೀಗೇ ನೇಣಿಗೆ ಶರಣಾದಳು. ಅನೇಕ ದಿನಗಳಿಂದ ಅನಿಯಂತ್ರಿತ ಕೆಮ್ಮು ತಡೆಯಲಾಗದೆ ಡಾಕ್ಟರ್ ಬಳಿ ಹೋದಾಗ ಟಿ.ಬಿ. ಇದೆ ಮಕ್ಕಳಿಂದ ಸ್ವಲ್ಪ ದಿನ ದೂರ ಇರು, ಯಾರನ್ನು ಮುಟ್ಟಿಸಿಕೊಳ್ಳಬೇಡ, ಇದು ಅಂಟು ರೋಗ ಎಂದರು. ಅಂಟು ರೋಗ ಎಂಬ ಪದಕ್ಕೆ ಹೆದರಿ, ಎಲ್ಲಿ ತನ್ನ ಗಂಡ ಮಕ್ಕಳಿಗೂ ತನ್ನ ಖಾಯಿಲೆ ಹತ್ತಿ ಬಿಡುತ್ತೋ ಎಂದು, ಮಕ್ಕಳು ಸ್ಕೂಲಿಂದ ಬರುವುದರ ಒಳಗೆ ನೇಣಿಗೆ ಶರಣಾಗಿದ್ದಳು.ಆತ್ಮಹತ್ಯೆ ಮಾಡಿಕೊಂಡ ದೇಹ ಸುಡದಿದ್ದರೆ ದೆವ್ವವಾಗುವುದು ಎಂದು ಅವಳನ್ನು ಸುಟ್ಟರು. ಚಿತೆಗೆ ಬೆಂಕಿ ಹಚ್ಚುವಾಗ ಪುಟ್ಟ ಪುಟ್ಟ ಹೆಣ್ಣು ಮಕ್ಕಳು ನಮ್ಮಮ್ಮಂಗೆ ಬೆಂಕಿ ಹಚ್ಚಬೇಡಿ ಎಂದು ಕರುಳುಕಿತ್ತು ಬರುವಂತೆ ಅತ್ತಿದ್ದು ಇನ್ನೂ ನನ್ನ ಕಣ್ಣಲ್ಲೇ ಇದೆ. ಆಕೆಯ ಡೆತ್ ಸರ್ಟಿಫಿಕೇಟ್ ಪಡೆಯಲಿಕ್ಕೆ ಹೋದಾಗ ಅವಳನ್ನು ನೋಡಿದ್ದ ಡಾಕ್ಟರ್ ಹೇಳಿದರು, ನಂಗೆ ಡೌಟ್ ಇತ್ತು ಇವಳು ಸಾಯಬಹುದು ಎಂದು. ಸಿಕ್ಕಾಪಟ್ಟೆ ಡಿಪ್ರೆಸ್ಸ್ ಆಗಿದ್ಲು. ನಾನು ಕೌಂಸೆಲಿಂಗ್ ಮಾಡೋಣ ಎನ್ನುವಷ್ಟರಲ್ಲಿ ಹೋಗೆ ಬಿಟ್ಟಳಾ? ಛೇ! ಆ ಡಾಕ್ಟರ್ ಮೇಲೆ ನಖಶಿಖಾಂತ ಕೋಪ ಬಂದಿತ್ತು. ಡಾಕ್ಟರ್‌ನ ಸಮಯ ಪ್ರಜ್ಞೆಯಿಂದ ಅವಳನ್ನು ಉಳಿಕೊಳ್ಳುವುದು ಕಷ್ಟವಾಗಿರಲಿಲ್ಲ. ಎರಡು ಪುಟ್ಟ ಹೆಣ್ಣು ಮಕ್ಕಳಿಗೆ ತಾಯಿ ಇಲ್ಲದಂತಾಯಿತು. ಕೆಲವರು ಹೇಳಿದರು, ಅಷ್ಟೇ ಆಯಸ್ಸು ಇದ್ದಿದ್ದು, ಅಷ್ಟೇ ಹಣೆಬರಹ, ದೇವರಿಗೆ ಪ್ರೀತಿಯಾದರು…

ಈ ಎರಡೂ ಸಂಧರ್ಭಗಳಲ್ಲಿ ಇವರಿಬ್ಬರನ್ನು ಉಳಿಸಬಹುದಿತ್ತ?…ಇನ್ನೂ ಇಪ್ಪತ್ತರ ಆಸುಪಾಸಿನಲ್ಲಿದ್ದ ಇವರಿಬ್ಬರು ಮುಂದೆ ಭವಿಷ್ಯದಲ್ಲಿ ಸುಖಜೀವನವನ್ನು ಖಂಡಿತ ಕಾಣಬಹುದಿತ್ತು. ಇವರಿಬ್ಬರಿಗೆ ಉಳಿಯಲಿಕ್ಕೆ ಬೇಕಿದ್ದುದೇನು? ಮುಷ್ಟಿಯಷ್ಟು ಪ್ರೀತಿ, ಜೊತೆಗೆ ನಿಲ್ಲುವ ಮನಸ್ಸು, ಒಂದೆರಡು ಧೈರ್ಯದ ಮಾತು.

ಖಿನ್ನತೆಯಿಂದ ನರಳುತ್ತಿರುವವರು, ಆತ್ಮಹತ್ಯೆಗೆ ಪ್ರಯತ್ನಪಡುವವರು, ಅನೇಕ ಆಟೋ ಇಮ್ಯೂನ್ ಖಾಯಿಲೆಯಿಂದ ನರಳುವವರಿಗೆ ಮನಸ್ಸೇ ಮುಖ್ಯ ಕಾರಣ. ಆತ್ಮಹತ್ಯೆಯಂತಹ ನಿರ್ಧಾರ ತೆಗೆದುಕೊಳ್ಳಲು ಕಾರಣಗಳು ಅನೇಕ, ಮನೆಯಲ್ಲಿ ನೆಮ್ಮದಿಯಿಲ್ಲದೆ, ಸದಾ ಜಗಳ, ಗಲಾಟೆಗಳಿರಬಹುದು, ಗಂಡನ ಜೊತೆಯ ಸಹ್ಯವಲ್ಲದ ಸಂಬಂಧ, ಇಳಿವಯಸ್ಸಿನಲ್ಲಿ ಸೊಸೆಯ, ಮಕ್ಕಳ ಜೊತೆಯ ಮುನಿಸುಗಳು, ಸ್ನೇಹಿತರ ನಂಬಲಾರದ ಮೋಸ, ಕೆಲಸ ಮಾಡುವ ಕಛೇರಿಯಲ್ಲಿನ ಕಿರುಕುಳಗಳು, ಕೆಲಸದ ಸ್ಥಳದಲ್ಲಿನ ಸಹುದ್ಯೋಗಿಗಳ ರಾಜಕೀಯ, ಜೊತೆಯಲ್ಲಿ ಇರುವವರ ಅಸಡ್ಡೆ, ಕ್ಯಾನ್ಸರ್‌ನಂತಹ ಮಾರಣಾಂತಿಕ ಖಾಯಿಲೆ, ಆರ್ಥಿಕ ನಷ್ಟ, ನಿಂದನೆ, ಮದ್ಯದ ಚಟ, ದೀರ್ಘಕಾಲದ ಕಾಯಿಲೆಗಳು, ಕೌಟುಂಬಿಕ ಸಮಸ್ಯೆಗಳು, ಒಂಟಿತನದ ಭಾವನೆಗಳು, ವೃತ್ತಿಪರ ಸಮಸ್ಯೆಗಳು, ಹೆಣ್ಣುಮಕ್ಕಳಿಗೆ ಮೆನೋಪಾಸಿನ ಸಮಯದಲ್ಲಿ ಈಸ್ಟ್ರೋಜನ್ ಮತ್ತು ಪ್ರೊಜೆಸ್ಟಿರೋನ್ ಹಾರ್ಮೋನಿನ ವ್ಯತ್ಯಾಸ, ಅವರ ಮಾನಸಿಕ ಸಂತುಲನೆಯನ್ನು ಹೆಚ್ಚುಕಮ್ಮಿ ಮಾಡಿ, ಖಿನ್ನತೆಗೆ ದೂಡಬಹುದು, ಹಾಗೆಯೇ ಗಂಡಸರಲ್ಲೂ ಟೆಸ್ಟೋಸ್ಟಿರಾನ್ ಹಾರ್ಮೋನಿನ ವ್ಯತ್ಯಾಸ ಖಿನ್ನತೆಯನ್ನು ತರಬಹುದು. ಇದಷ್ಟೇ ಅಲ್ಲದೇ ಕೆಲವರಿಗೆ ಅನುವಂಶೀಯವಾದ ಖಿನ್ನತೆಯು ಇರಬಹುದು. ಇತ್ತೀಚೆಗೆ ಯುವಕರಲ್ಲಿ ಕಾಣುವ ಇನ್ನೊಂದು ಕಾರಣ ಬ್ರೇಕ್ ಅಪ್. ಪ್ರೀತಿಸಿದ ಹುಡುಗನೋ, ಹುಡುಗಿಯೋ, ಕೈಕೊಟ್ಟರೆ ಮುಂದೆ ಕಾಣುವ ದಾರಿ ಸಾವು. ಹೊರನೋಟಕ್ಕೆ ಯಶಸ್ವೀ ಮಹಿಳೆ, ಯಶಸ್ವೀ ಮಹನೀಯರಂತೆ ಕಂಡರೂ ಮನೆಯ ನಾಲ್ಕು ಗೋಡೆಯ ಒಳಗೆ ಮುಷ್ಠಿಯಷ್ಟು ಪ್ರೀತಿ ದೊರೆಯದಿದ್ದರೆ ಎಲ್ಲಾ ಸಾಧನೆಗಳು ಯಃಕಶ್ಚಿತ್! ನಮ್ಮ ಸೋಲನ್ನು, ಗೆಲುವನ್ನು, ಸಂಭ್ರಮವನ್ನು, ಸಂಕಟವನ್ನು ಹಂಚಿಕೊಳ್ಳಲಿಕ್ಕೆ ನಮ್ಮದೇ ಆದ ಒಂದು ಜೀವ ಇಲ್ಲದಿದ್ದರೆ ಮನಸ್ಸು ವಿಚ್ಚಿನ್ನ.

ಆತ್ಮಹತ್ಯೆ ಎಂಬುದು ಕೇವಲ ಮಾನಸಿಕ ಸ್ಥಿತಿಯಲ್ಲ, ಇದು ಮೆದುಳಿನ ಹಲವು ಜಟಿಲ ಪ್ರಕ್ರಿಯೆಗಳ ಫಲ, ಮೆದುಳಿನ ರಾಸಾಯನಿಕ ಬದಲಾವಣೆಗಳು, ನರವಿಜ್ಞಾನ ಮತ್ತು ಮನೋವೈಜ್ಞಾನಿಕ ಅಂಶಗಳು ಅತ್ಮಹತ್ಯೆಯ ಸಮಯದಲ್ಲಿ ಕೆಲಸ ಮಾಡುತ್ತದೆ. ನಮ್ಮ ಮೆದುಳಿನ ಪ್ರಿಫ್ರಂಟಲ್‌ಕಾರ್ಟೆಕ್ಸ್, ನಮ್ಮ ತಾರ್ಕಿಕ ಚಿಂತನೆ, ನಿರ್ಧಾರ ತೆಗೆದುಕೊಳ್ಳುವಿಕೆಯನ್ನು ನಿಯಂತ್ರಿಸುತ್ತದೆ. ಆತ್ಮಹತ್ಯೆಯ ಸಮಯದಲ್ಲಿ ಈ ಭಾಗದ ಕಾರ್ಯಕ್ಷಮತೆ ಕಡಿಮೆಯಾಗಬಹುದು. ಹಾಗೆಯೆ ನಮ್ಮ ಭಾವನೆಗಳನ್ನು ನಿಯಂತ್ರಿಸುವ ಅಮಿಗ್ಡಾಲಾ, ತೀವ್ರ ಭಾವನಾತ್ಮಕ ಒತ್ತಡದಲ್ಲಿ ಸರಿಯಾಗಿ ಕೆಲಸ ಮಾಡದೇ ಆತ್ಮಹತ್ಯೆಯಂತಹ ಆತುರದ ನಿರ್ಧಾರಗಳಿಗೆ ಕಾರಣವಾಗಬಹುದು. ನಮ್ಮ ಆಲೋಚನೆ ಮತ್ತು ಸ್ಮರಣಶಕ್ತಿಗೆ ಸಂಬಂಧಿಸಿದ ಹಿಪ್ಪೋಕ್ಯಾಂಪಸ್, ಮಾನಸಿಕ ಒತ್ತಡದಿಂದ ಭಾವನಾತ್ಮಕ ಹಾದಿಗಳ ಮೇಲೆ ಪ್ರಭಾವ ಬೀರುತ್ತದೆ.

ಮನಸ್ಸಿನಲ್ಲಿ ಆತ್ಮಹತ್ಯೆಯ ವಿಚಾರ ಸುಲಭವಾಗಿ ಘನೀಭವಿಸುವುದಿಲ್ಲ. ಮನಸ್ಸು ಸಾವಿರಾರು ಬಾರಿ ಯೋಚಿಸಿ, ಬೇರೆಯಾವ ಮಾರ್ಗವೂ ಕಾಣದಂತಾಗಿ ಕಡೆಗೆ ಆತ್ಮಹತ್ಯೆಗೆ ಶರಣಾಗುತ್ತದೆ. ಮನಸ್ಸು ಖಿನ್ನವಾಗಿರುವಾಗ ನಮ್ಮ ಮೆದುಳಿನಲ್ಲಿ ಸೆರೆಟೋನಿನ್ ಎಂಬ ನ್ಯೂರೋ ಟ್ರಾನ್ಸ್ಮಿಟರ್‌ನ ಮಟ್ಟವು ತಗ್ಗಿ, ತೀವ್ರ ನಿರಾಶೆಯನ್ನು ಮತ್ತು ಆತ್ಮಹತ್ಯೆಯ ಆಲೋಚನೆಗಳನ್ನು ಪ್ರೇರೇಪಿಸುತ್ತದೆ. ಜೊತೆಗೆ ಕಾರ್ಟಿಸೋಲ್ ಎಂಬ ಸ್ಟೆçಸ್ ಹಾರ್ಮೋನನ್ನು ಬಿಡುಗಡೆ ಮಾಡುತ್ತದೆ. ಇದರಿಂದಾಗಿ ಸಕ್ಕರೆಯ ಮಟ್ಟ ಹೆಚ್ಚಾಗಿ ಮೆದುಳಿನ ಕಾರ್ಯಕ್ಷಮತೆಯನ್ನು ಹೆಚ್ಚಿಸಿ ಆತ್ಮಹತ್ಯೆಗೆ ಇನ್ನೂ ಹೆಚ್ಚಿನ ಪ್ರೇರೇಪಣೆ ಕೊಡುತ್ತದೆ. ಕಾರ್ಟಿಸೋಲ್ ಬಿಡುಗಡೆಯಾದ ಕ್ಷಣಕ್ಕೆ ಅಡ್ರಿನಾಲಿನ್ ಎಂಬ ಹಾರ್ಮೋನೂ ಬಿಡುಗಡೆಯಾಗುತ್ತದೆ. ಅಡ್ರಿನಾಲಿನ್ ಹಾರ್ಮೋನು ಹೃದಯದ ಬಡಿತ ಹೆಚ್ಚಿಸಿ ಯಾವ ಕೆಲಸವನ್ನು ಮಾಡಬೇಕೋ ಅದನ್ನು ಮಾಡಲು ದೇಹವನ್ನು ಸನ್ನದ್ಧ ಸ್ಥಿತಿಗೆ ತಂದಿಡುತ್ತದೆ. ಪ್ರತಿ ಅಪಾಯಕಾರಿ ಸನ್ನಿವೇಶಗಳಲ್ಲೂ ಈ ಅಡ್ರಿನಲಿನ್ ರಶ್ ಆಗಿಯೇ ಆಗುತ್ತದೆ. ಆದರೆ ಖಿನ್ನತೆಯಿಂದ ಬಳಲುತ್ತಿರುವ ವ್ಯಕ್ತಿಯಲ್ಲಿ “ಅಡ್ರಿನಾಲಿನ್ ರಷ್” ಅವರ ಆತ್ಮಹತ್ಯಾ ಯೋಚನೆಯನ್ನು ಉದ್ದೀಪಿಸಿ ಒಮ್ಮೆಗೆ ಕಾರ್ಯಪ್ರವೃತ್ತರಾಗಲು ಒತ್ತಡ ಉಂಟು ಮಾಡುತ್ತದೆ ಮತ್ತು ಕೇವಲ ಎರಡು ಮೂರು ಸೆಕೆಂಡಿನಲ್ಲಿ ಅತ್ಮಹತ್ಯೆಯ ನಿರ್ಧಾರವಾಗುತ್ತದೆ. ನಿರ್ಧರಿಸಿ ಪ್ರಯತ್ನಿಸಿದ ಮುಂದಿನ ಏಳೆಂಟು ಸೆಕೆಂಡ್ ಗೋಲ್ಡನ್ ಪಿರಿಯಡ್. ಈ ಗೋಲ್ಡನ್ ಪಿರಿಯಡ್‌ನಲ್ಲಿ ಯಾರಾದರೂ ನಮ್ಮವರು, ತಮ್ಮವರು ಪ್ರೀತಿ ತೋರಿಸುವರು, ಕಿವಿಗೊಡುವವರು, ಕೈ ಹಿಡಿಯುವವರು ಸಿಕ್ಕಿದರೆ ಅತ್ಮಹತ್ಯೆಯಿಂದ ಪಾರಾದಂತೆಯೇ. ಈ ಸ್ಟ್ರೆಸ್ ಹಾರ್ಮೋನ್‌ಗಳ ಜೊತೆಗೆ ನಮ್ಮ ದೇಹದಲ್ಲಿ ಹ್ಯಾಪಿ ಹಾರ್ಮೋನ್ ಎಂದೇ ಕರೆಯುವ ಡೊಪಮೈನ್ ನ ಮಟ್ಟ ಕಮ್ಮಿಯಾದಂತೆಲ್ಲ ನಿರಾಶೆ ಮತ್ತು ಅಪಾಯದ ಪರಿಕಲ್ಪನೆಗಳಿಗೆ ದಾರಿ ಮಾಡಿಕೊಡುತ್ತದೆ.

ಮನೋವಿಜ್ಞಾನ ಸುಲಭದ ವಿಷಯವಲ್ಲ. ವಿಜ್ಞಾನಿಗಳು ನಮ್ಮ ಮೆದುಳನ್ನು ಇದುವರೆಗೂ ಪೂರ್ತಿಯಾಗಿ ಅಧ್ಯಯನ ಮಾಡಲಾಗಿಲ್ಲ. ಅರ್ಥಮಾಡಿಕೊಳ್ಳಲು ಆಗಿಲ್ಲ. ನಮ್ಮ ಮನಸ್ಸು ಯಾವಾಗ ಹೇಗೆ ವರ್ತಿಸುತ್ತದೆ ಎಂದು ಅರ್ಥಮಾಡಿಕೊಳ್ಳುವುದು ಕಷ್ಟವೇ ಸರಿ. ಮನೋವ್ಯಾಕುಲತೆಗೆ ಸರಿಯಾದ ರಾಮಬಾಣದಂತಿರುವ ಔಷಧಿಗಳು ನಮಗಿನ್ನೂ ದೊರಕಿಲ್ಲ. ಈ ಹಾರ್ಮೋನುಗಳ ಕಥೆಯ ಮಧ್ಯದಲ್ಲಿ ಖಿನ್ನತೆಗೆ ದೂಡುವ ಇನ್ನು ಅನೇಕ ಅಂಶಗಳಿವೆ. ಮಾನವೀಯತೆ, ಪ್ರೀತಿ, ವಾತ್ಸಲ್ಯ, ಕಾಳಜಿಗಳನ್ನು ಕಳೆದುಕೊಂಡು ನಾವು ಹೋಗುತ್ತಿರುವ ದಾರಿ.. ನೂರಾರು ಜನರ ಮಧ್ಯದಲ್ಲಿ ಒಂಟಿತನದ ಭಾವ, ಚಿನ್ನಾರಿಮುತ್ತ ಸಿನಿಮಾದ ಹಾಡಿನಂತೆ, “ಎಷ್ಟೊಂದು ಜನ ಇಲ್ಲಿ ಯಾರು ನನ್ನೋರು? ಎಷ್ಟೋಂದ್ಮನೆ ಇಲ್ಲಿ ಯಾವುದು ನಂ ಮನೆ?” ಹೀಗೆ ಅಕ್ಕ ಪಕ್ಕದ ಮನೆಯವರ ಹೆಸರೂ ಗೊತ್ತಿಲ್ಲದೇ ಬದುಕುತ್ತಿದ್ದೇವೆ. ಜೊತೆಯಲ್ಲಿರುವವರ ಉದಾಸೀನತೆ, ಆತ್ಮೀಯ ಗೆಳೆಯರ ಬಳಗವಿಲ್ಲದಿರುವುದು, ಮಾತನಾಡಿಸಲು ಪುರುಸೊತ್ತಿಲ್ಲದಂತೆ ಒಂದೇ ಮನೆಯಲ್ಲಿ ಅಪರಿಚಿತರಂತೆ ಬದುಕುವ ಗಂಡ ಹೆಂಡತಿಯರು, ಮಕ್ಕಳಿಗೆ ಬೇಕಾದ ಅಪಾರ ಪ್ರೀತಿ ಸಿಗದೆ ದಾರಿ ತಪ್ಪುವ ಮಕ್ಕಳು, ಕಡೆಗಾಲದಲ್ಲಿ ಸಿಗಬೇಕಾದ ಪ್ರಾಮುಖ್ಯತೆ ಸಿಗದೇ, ಮನೆಯ ಮೂಲೆಯಲ್ಲಿ ಖಿನ್ನತೆಗೆ ಜಾರಿರುವ ಹಿರಿಯರು, ಇವೆಲ್ಲವೂ ಆತ್ಮಹತ್ಯೆಗೆ ದಾರಿ ಮಾಡಿಕೊಡಬಹುದು. ಮನಸ್ಸಿನ ಖಾಯಿಲೆಗೆ ವೈದ್ಯರು ಕೊಡುವ ಮೆದುಳಿನ ರಾಸಾಯನಿಕ ಸಮತೋಲನವನ್ನು ಸ್ಥಾಪಿಸುವ ಔಷಧಿಗಳು, ಮನೋವೈಜ್ಞಾನಿಕ ಚಿಕಿತ್ಸೆ, ಸಮಾಲೋಚನೆ, ಬಿಹೇವಿಯರ್ ಥೆರಪಿಗಳು ಇದೆಲ್ಲದರ ಜೊತೆಗೆ ಅತೀ ಮುಖ್ಯವಾಗಿ ಬೇಕಾಗಿರುವುದು ಒಂದು ಮುಷ್ಠಿ ಪ್ರೀತಿ, ಕಕ್ಕುಲಾತಿ ತೋರುವ ಮನ, ಬಿಡದೆ ಹಿಡಿಯುವ ಕೈಗಳು, ಸಮುದಾಯದ ಬೆಂಬಲ ಮತ್ತು ಒಂದಿಷ್ಟು ಸಮಯ. ಇವೆಲ್ಲವೂ ಸಿಕ್ಕರೆ ಒಂದು ಆರೋಗ್ಯವಂತಹ ಕುಟುಂಬದ, ಸಮಾಜದ ಸೃಷ್ಟಿ ಸಾಧ್ಯ ಅಲ್ಲವೇ?

ಡಾ|| ಸಹನಾ ಪ್ರಿಯದರ್ಶಿನಿ, ಬೆಂಗಳೂರು

6 Responses

  1. ವಾವ್..ಬಹಳ ಮಾಹಿತಿಯನ್ನು ಳ್ಳ ಲೇಖನಕೊಟ್ಟ ನಿಮಗೆ ಧನ್ಯವಾದಗಳು ಮೇಡಂ

  2. ನಯನ ಬಜಕೂಡ್ಲು says:

    ಉತ್ತಮ ಲೇಖನ. ಇಂದಿನ ಜನರ ಮನಸ್ಥಿತಿಯನ್ನು ತೆರೆದಿಡಲಾಗಿದೆ ಇಲ್ಲಿ.

  3. ಶಂಕರಿ ಶರ್ಮ says:

    ಪ್ರಸ್ತುತ ಸಮಾಜದಲ್ಲಿರುವ ಅತ್ಯಂತ ಕ್ರೂರ ಪಿಡುಗು… ಅದೇ ಆತ್ಮಹತ್ಯೆ! ವೈಜ್ಞಾನಿಕ ತಳಹದಿಯ ಮೇಲೆ, ಇದರ ಕಾರಣ ಮತ್ತು ಪರಿಹಾರವು ಅತ್ಯಂತ ವಿಸ್ತೃತವಾಗಿ ಲೇಖನದಲ್ಲಿ ಮೂಡಿಬಂದಿದೆ. ಧನ್ಯವಾದಗಳು ಮೇಡಂ.

  4. Sahana Priyadarshini says:

    Thank you so much

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: